Tuesday, 25 June 2013

ವಿವಾಹ ವಿಚ್ಛೇದನ ; ನವ ದಂಪತಿಗಳ ಸೀಳು ಜೀವನ


                                                                                         -ಎಂ. ಗಣಪತಿ ಕಾನುಗೋಡು
ವಿವಾಹ ವಿಚ್ಛೇದನ ಹೊಸತಲ್ಲ. ಹಿಂದಿನ ಕಾಲದಲ್ಲಿ ವಿಚ್ಛೇದನ ಹೆಚ್ಚಾಗಿ ಪುರುಷ ಮೂಲವಾಗಿತ್ತು. ಪ್ರಸ್ತುತ ಮುಂದುವರೆದ ಸನ್ನಿವೇಶದಲ್ಲಿ ಪತಿಯರಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಪತ್ನಿಯರೇ ವಿಚ್ಛೇದನ ಬಯಸುವುದು ಕಂಡುಬರುತ್ತಿದೆ. 
ಇದಕ್ಕೆ ಕಾರಣ ಹಲವಾರು. ಹೆಣ್ಣುಮಕ್ಕಳಿಗೆ ಈ ವಿಷಯದಲ್ಲಿ ಕಾನೂನಿನ ಸವಲತ್ತು ಹಿಂದಿನಿಗಿಂತ ಈಗ ಹೆಚ್ಚಾಗಿದೆ. ವಿವಾಹವಾಗಿ ಮೂರು ವರ್ಷದೊಳಗೆ ದಾಂಪತ್ಯದಲ್ಲಿ ವಿರಸ ಬಂದರೆ ಪತ್ನಿಯಾದವಳು ತನ್ನ ಗಂಡ, ಅತ್ತೆ ಮಾವಂದಿರನ್ನು ಜೈಲಿನಲ್ಲಿ ಇರಿಸುತ್ತಾಳೆ. ವಿರಸಕ್ಕೆ ಕಾರಣವೇನಿದ್ದರೂ ವರದಕ್ಷಿಣೆಯ ಕಾನೂನು. ವರದಕ್ಷಿಣೆಯ ವಿಚಾರವನ್ನೇ ಹುಟ್ಟುಹಾಕಿ ಪತಿಯ ಮತ್ತು ಅವರ ಪೋಷಕರ ಮಗ್ಗಲು ಮುರಿಯುವಲ್ಲಿ ಬಳಕೆಯಾಗುತ್ತಿದೆ. ದುರುಪಯೋಗವಾಗುತ್ತಿದೆ ಕೂಡಾ. ತಂದೆಯ ಮನೆಯ ಆಸ್ತಿಯಲ್ಲಿ ಸಮಹಕ್ಕನ್ನು ಪಡೆದ ನಂತರವೂ ಗಂಡ ಬೇಡವೆಂದೆನಿಸಿದರೂ ಅವನ ಆಸ್ತಿ ಮತ್ತು ಸಂಪತ್ತು ಬೇಡವೆನಿಸುವುದಿಲ್ಲ. ಅದರಲ್ಲಿ ಪಾಲು ಕೇಳುವಷ್ಟು ಕಾನೂನಿನ ಬೆಂಬಲ ಅವಳಿಗಿದೆ. ಮಕ್ಕಳಿದ್ದರೆ ಮಕ್ಕಳ ಪೋಷಣೆ ತನ್ನ ಬದುಕಿನ ರಕ್ಷಣೆಗೆಂದು ಗಂಡನನ್ನ ದೋಚುವ ಸ್ಥಿತಿಯಲ್ಲಿ ಅವಳಿದ್ದಾಳೆ. ಇದು ವಿಚ್ಛೇದನದತ್ತ ಮುನ್ನುಗ್ಗುವಲ್ಲಿ ಮಹಿಳೆಗೆ ಇರುವ ಕಾನೂನಿನ ಬೆಂಬಲ. 
ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸರಿಸಮಾನಾಗಿ ಶಿಕ್ಷಣವನ್ನು ಹೊಂದಿದ್ದಾರೆ. ಅವರಂತೆಯೇ ದೊಡ್ಡ ಹುದ್ದೆಯನ್ನೇರಿ ಹೆಚ್ಚು ಸಂಪಾದಿಸುತ್ತಿದ್ದಾರೆ. ಇಲ್ಲಿ ಯಾರಿಗೆ ಯಾರೂ ಕಡಿಮೆಯಿಲ್ಲ. ಕೂಡಿ ನಡೆಯುವಲ್ಲಿ ಅಗತ್ಯವಾದ ಶ್ರೇಷ್ಠತೆ ಮತ್ತು ಅಧೀನತೆಯ ನಡವಳಿಕೆ ಇಲ್ಲಿ ಶೂನ್ಯ. ಯಾರಿಗೆ ಯಾರೂ ಸೋತು ಸರಿಯುವುದಿಲ್ಲ. ಎರಡು ಮೇರು ಒಂದೇ ಬಿಂದುವಿನಲ್ಲಿ ಘರ್ಷಣೆಯೇ ಝಣಝಣವಾಗುತ್ತದೆ. ವಿರಸಕ್ಕೆ ವಿಷಯ ದೊಡ್ಡದು ಬೇಕಿಲ್ಲ. ಎಲ್ಲರ ಗಡಿಯಾರವೂ ಕೆಲವೇ ಸೆಕೆಂಡುಗಳಲ್ಲಿ ಅಂತರದಲ್ಲಿ ಒಂದೇ ಸಮಯವನ್ನು ತೋರಿಸುತ್ತದೆ. ದಾಂಪತ್ಯ ಒಂದೇ ಆದರೂ ಅಭಿಪ್ರಾಯಗಳ ಅಂತರ ಗಡಿಯಾರದ ಸೆಕೆಂಡುಗಳ ಅಂತರದಷ್ಟೇ. ಅಂತಿಮ ಪರಿಣಾಮ ವಿಚ್ಛೇದನ. ಇಬ್ಬರಿಗೂ ಇರುವ ಸಂಪಾದನೆಯೇ ಇದಕ್ಕೆ ಕಾರಣ. 
ಇಂದಿನ ಕುಟುಂಬಗಳಲ್ಲಿ ಮಕ್ಕಳಿಗೆ ಸಹಬಾಳ್ವೆಯ ಮನೋಭಾವವನ್ನು ಕಲಿಸುವ ಅವಕಾಶ ಕಡಿಮೆ. ಶಿಕ್ಷಣದ ಕಾರಣದಿಂದ ಅವರ ಬುದ್ಧಿ ಬೆಳವಣಿಗೆಯ ಪ್ರಾರಂಭದಿಂದ ಕುಟುಂಬದ ಹೊರಗೆ ಬೆಳೆದು ವಿವಾಹದ ಹಂತಕ್ಕೆ ಬಂದಿರುತ್ತಾರೆ. ಕುಟುಂಬದ ಹಿರಿಯರು-ಕಿರಿಯರು, ಹುಟ್ಟಿನ ನೆರೆಹೊರೆಯವರು, ಸಂಬಂಧಿಕರು ಎನ್ನುವ ಸಾಮಾಜಿಕ ಜೀವನದ ಪ್ರಾಥಮಿಕ ಸಂಘಗಳ ಒಡನಾಟವೇ ಇಂದಿನ ಯುವಜನತೆಗೆ ದೊರಕುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಅವರಿಗೆ ದೊರಕುವುದು ವಿಷಯಗಳ ಜ್ಞಾನವಷ್ಟೇ. ಬದುಕಿನ ಅರಿವಲ್ಲ. ಸಹಬಾಳ್ವೆ, ಬದುಕಿನ ನೀತಿಯನ್ನು ಅವರಿಗೆ ತಿಳಿಯುವ ಅವಕಾಶ ಕಡಿಮೆ. ಕೂಡಿ ಬದುಕುವ ಬುದ್ಧಿ ಬರುವಷ್ಟರ ಹೊತ್ತಿಗೆ ಆಗುವ ಪ್ರಮಾದವೆಲ್ಲ ಆಗಿ ಯುವಜನರು ಮುದುಕರಾಗಿರುತ್ತಾರೆ. 
ಈಗ ಕೇವಲ ಎರಡು ಅಥವಾ ಒಂದೇ ಮಗುವಾದ್ದರಿಂದ ತಾಯಿ ತಂದೆಯರು ಅವರನ್ನು ಅತೀ ಮುದ್ದಿನಿಂದ ಸಾಕಿರುತ್ತಾರೆ. ಮುದ್ದಿನ ಅಮಲಿನಲ್ಲಿ ಬದುಕಿನ ಕಲೆಯ ನೆಲೆ ಕಮರಿ ಹೋಗಿದೆ. ಗಂಡು-ಹೆಣ್ಣು ಮಕ್ಕಳು ದಾಂಪತ್ಯದಲ್ಲಿ ಹೊಂದಿಕೊಳ್ಳದೆ ಸಿಡಿದು ಹೋಗಲು ಇದು ಪ್ರಮುಖ ಕಾರಣ. 
ಗಂಡ ಹೆಂಡತಿಯರಿಬ್ಬರೂ ಮನೆಯ ಹೊರಗೆ ಪ್ರತ್ಯೇಕ ಪ್ರತ್ಯೇಕವಾಗಿ ದುಡಿಮೆಗಾಗಿ ಹೊರಗಿರುವ ಸಂದರ್ಭದಲ್ಲಿ ಕೆಲವೊಮ್ಮೆ ಚಾರಿತ್ರಿಕವಾಗಿ ಒಬ್ಬರನ್ನೊಬ್ಬರು ಸಂಶಯ ದೃಷ್ಟಿಯಿಂದ ನೋಡುವುದೂ ಉಂಟು. ಸ್ವಯಂ ಉದ್ಯೋಗಿಗಳಾಗಿದ್ದರಿಂದ ಕುಟುಂಬದ ಹಿರಿಯರಿಂದ ಸಹಜವಾಗಿ ದೂರವಿದ್ದು ಪತಿ ಪತ್ನಿಯರಿಬ್ಬರೇ ಪುಟ್ಟ ಕುಟುಂಬ ಮಾಡಿಕೊಂಡಿರುತ್ತಾರೆ. ಇಬ್ಬರಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ತಕ್ಷಣ ಸರಿಮಾಡಲು ಅಲ್ಲಿ ಯಾರೂ ಇರುವುದಿಲ್ಲ. ಪರಿಣಾಮ ಲಗಾಮಿಲ್ಲದೆ ಕುದುರೆಯಂತೆ ದಾಂಪತ್ಯ ವಿಘಟನೆಯಾಗುತ್ತದೆ. 
ಇಂದಿನ ದಂಪತಿಗಳು ಯೋಚಿಸಬೇಕಾದದ್ದಿಷ್ಟೇ. ಇದ್ದಲ್ಲಿಯೇ ಕಾಡಿ ಕೂಡಿ ಬಾಳ್ವೆ ನಡೆಸಬೇಕು. ಹೊಂದಿಕೊಳ್ಳುವ ಮನೋಭಾವ ಇಲ್ಲದವರು ಯಾರನ್ನ ಬಿಟ್ಟು ಯಾರನ್ನ ಕೂಡಿಕೊಂಡರೂ ಇದೇ ಪಾಡು. ಹೊಂದಿಕೊಂಡು ಮುನ್ನಡೆಯಬೇಕೆಂದಿದ್ದರೆ ಒಬ್ಬರಿಗೆ ಒಬ್ಬರು ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಗ್ಗಿ ನಡೆಯಬೇಕಾದದ್ದು ಅಗತ್ಯ. ಸುಖಕ್ಕಾಗಿ ಪರದಾಡಿ ಮುದುಕರಾಗುವ ಮುಂಚೆ ಇದ್ದಲ್ಲಿಯೇ ಸಾವರಿಸಿಕೊಂಡು ನೆಮ್ಮದಿಯಿಂದ ಇರುವುದು ಲೇಸು. ಸುಖ ಎನ್ನುವುದು ಅವರವರ ಮನೋಗತಿಗೆ ಬಿಟ್ಟ ವಿಚಾರ.


 ಎಂ. ಗಣಪತಿ M.A.. ಕಾನುಗೋಡು 
 ಅಂಚೆ : ಬಿ.ಮಂಚಾಲೆ-577431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ.: 9481968771
 E-mail: mgkangod.blogspot.com

Tuesday, 18 June 2013

ಯುವತಿಯರ ನಗರ ವಲಸೆ ; ಗ್ರಾಮೀಣ ಯುವಕರ ಮದುವೆ ನಿರಾಸೆ


                                                                                   -ಎಂ. ಗಣಪತಿ ಕಾನುಗೋಡು

ಯುವತಿಯರು ಓದಿನಲ್ಲಿ ಯುವಕರಿಗಿಂತ ಬಹಳ ಚುರುಕು. ಆದರೆ ಹಿಂದಿನ ಕಾಲದಲ್ಲಿ ಎಸ್‍ಎಸ್‍ಎಲ್‍ಸಿಕ್ಕಿಂತ ಮುಂದೆ ಅವರಿಗೆ ವಿದ್ಯಾಭ್ಯಾಸ ಮಾಡಿಸುತ್ತಿರಲಿಲ್ಲ. ಮದುವೆ ಮಾಡಿ ಕೈತೊಳೆದು ಕೊಳ್ಳುವುದು ಇತ್ತೀಚಿನ ವರ್ಷಗಳವರೆಗೂ ಪೋಷಕರ ವಾಡಿಕೆಯಾಗಿತ್ತು. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿನ ಯುವತಿಯರ ಸ್ಥಿತಿಯಾಗಿತ್ತು. 
ಇಂದು ಹಾಗಲ್ಲ. ಹಳ್ಳಿ ಯುವತಿಯರು ವಿದ್ಯಾಭ್ಯಾಸದಲ್ಲಿ ಬಹಳ ಮುಂದೆ ಹೋಗಿದ್ದಾರೆ. ಶಿಕ್ಷಣ ಕ್ಷೇತ್ರ, ಸ್ಪಾಟ್‍ವೇರ್ ಇಂಜಿನೀಯರಿಂಗ್ ಕ್ಷೇತ್ರವನ್ನೂ ಒಳಗೊಂಡು ಅನೇಕ ಕ್ಷೇತ್ರಗಳಲ್ಲಿ ನೌಕರಿ ಗಿಟ್ಟಿಸಿ ಸಂಪಾದಿಸುವಷ್ಟು ಪದವಿಗಳನ್ನು ಗಳಿಸಿ ಮುನ್ನುಗಿದ್ದಾರೆ. ಒಂದು ಹಂತದ ವಿದ್ಯಾಭ್ಯಾಸ ಮುಗಿದರೂ ಮದುವೆಯಾಗಿ ಸಂಸಾರ ನಡೆಸಬೇಕೆಂಬ ಅಪಹಪಿಕೆಯಲ್ಲಿ ಅವರು ಇಲ್ಲ. ನೌಕರಿ ಮಾಡಿ ತಾನೂ ಹಣ ಸಂಪಾದಿಸಬೇಕು ಎಂಬ ಧೋರಣೆ ಅವರದ್ದು. ವರ್ಷ 25 ದಾಟುತ್ತಿದೆ, ಮೊದಲು ಮದುವೆಯಾಗು, ತಡವಾದರೆ ಸರಿಯಾದ ವರ ಸಿಗುವುದಿಲ್ಲ ಎಂದು ತಾಯಿ ತಂದೆಯರು ಒತ್ತಾಯಿಸುತ್ತಾರೆ. ಆದರೆ ಅದಕ್ಕೆ ಸಿದ್ಧರಿಲ್ಲ. ಒಮ್ಮೆ ಮದುವೆಯಾಗದಿದ್ದರೂ ಚಿಂತೆಯಿಲ್ಲ. ಸಂಪಾದನೆಯನ್ನು ಬಿಡುವುದಿಲ್ಲ ಎಂಬ ಗಟ್ಟಿ ನಿರ್ಧಾರವನ್ನು ತಳದಿದ್ದಾರೆ. ಒಮ್ಮೆ ವಿವಾಹವಾಗುವಾದರೂ ತನ್ನ ನೌಕರಿಯನ್ನು ಒಪ್ಪಿಕೊಳ್ಳುವ, ತನಗಿಂತ ಮೇಲು ಹುದ್ದೆಯ ಹುಡುಗನೇ ಬೇಕೆನ್ನುತ್ತಾರೆ. ಅವರ ದೃಷ್ಟಿಯಿಂದ ಅದು ಸರಿಯೇ. 
ಹಳ್ಳಿಯಲ್ಲಿ ವಾಸಿಸುವ ಹಿರಿಯರ ಭಾವನೆ ಬೇರೆಯಿದೆ. ಪಾರಂಪರಿಕವಾಗಿ ಬಂದ ಕೃಷಿ ಭೂಮಿ, ಮನೆಯನ್ನು ಬಿಟ್ಟು ಹೋಗಬಾರದು ಅದನ್ನು ಕಳೆಯ ಬಾರದು ಎನ್ನುವ ಬಲವಾದ ನಂಬಿಕೆ ಅವರದು. ಅದಕ್ಕಾಗಿ ಗಂಡು ಮಗನನ್ನು ಹಳ್ಳಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ಆದರೆ ಅದನ್ನು ಧಿಕ್ಕರಿಸಿ ನಗರಕ್ಕೆ ಹಾರಿದವನು ಬಚಾವು. ತಾಯಿತಂದೆಗಳ ಒತ್ತಡಕ್ಕೆ ಅಲ್ಲಲ್ಲಿ ಹಳ್ಳಿಯಲ್ಲಿಯೇ ಉಳಿದ ಗ್ರಾಮೀಣ ಯುವಕರ ಸ್ಥಿತಿ ಇಂದು ಬಹಳ ಪೇಚಿಗೆ ಸಿಕ್ಕಿದೆ. ಎಷ್ಟೇ ಸಂಪತ್ತು ಇದ್ದರೂ ಅವನನ್ನು ಮದುವೆಯಾಗಲು ಹೆಣ್ಣುಮಕ್ಕಳು ಮುಂದೆ ಬರುವುದಿಲ್ಲ. ಶಿಕ್ಷಣ ಕಡಿಮೆ ಇರುವ ಹೆಚ್ಚು ಮಕ್ಕಳು ಕೂಡಾ ನಗರವಾಸಿ ನೌಕರಿ ಹೊಂದಿದ ವರನೇ ಬೇಕೆನ್ನುತ್ತಾರೆ. ವರ್ಷ ನಲವತ್ತಾದರೂ ಹೆಣ್ಣಿನ ಅಭಾವದಿಂದಾಗಿ ಗ್ರಾಮೀಣ ಯುವಕ ಇಂದು ಮದುವೆ ಇಲ್ಲದೆ ನಿರಾಸೆಯಾಗಿದ್ದಾನೆ. 
ಈ ತೆರನ ಸಂದಿಗ್ಧ ಪರಿಸ್ಥಿತಿ ಮುಂದುವರೆದವರೆನಿಸಿಕೊಂಡ ಬ್ರಾಹ್ಮಣ, ವೀರಶೈವ ಮುಂತಾದ ಇನ್ನೂ ಅನೇಕ ಸಮುದಾಯಗಳಲ್ಲಿ ಈಗ ಉಲ್ಬಣವಾಗಿದೆ. ಇದರ ಹೊರತಾದ ಇನ್ನಿತರ ಸಮುದಾಯಗಳಲ್ಲೂ ಯುವತಿಯರು ಶೈಕ್ಷಣಿಕವಾಗಿ ದೂರದೂರ ಸಾಗುತ್ತಿದ್ದಾರೆ. ಭಾವನಾತ್ಮಕವಾಗಿ ಕೃಷಿಯನ್ನೇ ಅವಲಂಬಿಸುವ ಎಲ್ಲ ಸಮುದಾಯದ ಗ್ರಾಮೀಣ ಯುವಕರು ಒಂದು ದಿನ ಇದೇ ಸಂದಿಗ್ಧತೆಯನ್ನು ಅನುಭವಿಸಬೇಕಾಗುತ್ತದೆ. 
ಈಗ ಗ್ರಾಮೀಣ ಯುವಕನ ಮುಂದೆ ಕಾಡುತ್ತಿರುವುದು ಒಂದೇ ಪ್ರಶ್ನೆ. ಭೂಮಿ ಕೃಷಿಯನ್ನು ಹಾಳುಗೆಡವಿ ನಗರದ ಸಂಪಾದನೆಗೆ ತಾನು ಹೋಗಬೇಕೋ ಇಲ್ಲವೆ ಮದುವೆ, ಮಕ್ಕಳು, ಸಂಸಾರ ಯಾವುದೂ ಇಲ್ಲದೆ ಮಣ್ಣಿನಲ್ಲಿಯೇ ಮಣ್ಣಾಗಬೇಕೋ?

ಎಂ. ಗಣಪತಿ M.A.. ಕಾನುಗೋಡು
 ಅಂಚೆ : ಬಿ.ಮಂಚಾಲೆ-577431
 ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
 ಮೊ.: 9481968771
 E-mail: mgkangod.blogspot.com

Monday, 10 June 2013

ಮಾಯವಾದ ಕಟ್ಟೆ ಪಂಚಾಯಿತಿ


                                                                                                   -ಎಂ. ಗಣಪತಿ ಕಾನುಗೋಡು
ಒಂದು ಕಾಲದಲ್ಲಿ ಕಟ್ಟೆ ಪಂಚಾಯಿತಿ ಎಂದರೆ ಹಳ್ಳಿಗಳಲ್ಲಿ ಒಂದು ಜನ ಸಂಪರ್ಕ ಕೇಂದ್ರ. ಪ್ರತಿ ಊರಿನಲ್ಲಿ ದಿನನಿತ್ಯ ಯಾರದ್ದಾದರೊಂದು ಮನೆಯ ಜಗುಲಿಯ ಮೇಲೆ ಅಥವಾ ಅಂದು ಇರುತ್ತಿದ್ದ ಹೆಬ್ಬಾಗಿಲ ಅಗಲ-ಉದ್ದನೆಯ ಕಟ್ಟೆಯ ಮೇಲೆ ಊರಿನ ಕೆಲವು ಜನ ಸೇರಿ ಮಾತನಾಡಿಕೊಳ್ಳುವುದೇ ಕಟ್ಟೆ ಪಂಚಾಯಿತಿ. 
ಪ್ರತಿನಿತ್ಯ ಸಂಜೆ ಕೇರಿ ಮನೆಯ ಹಲವಾರು ಜನ ಯಾರದ್ದಾದರೊಂದು ಮನೆಯ ಕಟ್ಟೆಯ ಮೇಲೆ ಜಮಾಯಿಸುತ್ತಿದ್ದರು. ಪ್ರತಿನಿತ್ಯ ಇಂಥವರ ಮನೆಯ ಕಟ್ಟೆಯೇ ಎನ್ನುವಂತಿಲ್ಲ. ಸಂಜೆ ತನಕ ಕೃಷಿ ಕೆಲಸ. ನಂತರ ವಿಶ್ರಾಂತಿಯಲ್ಲಿ ಅಲ್ಲಲ್ಲಿ ಕೆಲವು ಜನರ ಸೇರ್ಪಡೆ. ಇದರಲ್ಲಿ ವಯಸ್ಕರದ್ದು, ಯುವಕರದ್ದು, ಹೆಂಗಸರದ್ದು (ಇವರದ್ದು ಯಾರದ್ದಾದರೊಂದು ಮನೆಯೊಳಗೆ) ಹೀಗೆ ಬೇರೆ ಬೇರೆ ಕಟ್ಟೆ ಪಂಚಾಯಿತಿಗಳು ಇರುತ್ತಿದ್ದವು. 
ಇದು ಬಹಳ ಹಿಂದಿನ ಕತೆಯಲ್ಲ. ಸುಮಾರು 25 ವರ್ಷಗಳ ಹಿಂದಿನ ಕಾಲದ ಪ್ರಸ್ತಾಪ ಅಷ್ಟೆ. ಆಗ ಹಳ್ಳಿಗಳಲ್ಲಿ ಇಷ್ಟೊಂದು ಟಿವಿಯ ಅಬ್ಬರವಿರುವುದಿಲ್ಲ. ಸ್ಥಿರ, ಚರ ದೂರವಾಣಿಗಳಿರಲಿಲ್ಲ. ಹಾಗಂತ ನ್ಯೂಸ್ ಬರುವ ಸಮಯವಾಗಿದ್ದರೆ ಟ್ರಾನ್ಸಿಸ್ಟರ್ ಕೂಡಾ ಕಟ್ಟೆಗೆ ಬರುತ್ತಿತ್ತು – ದೇಶದ ಸುದ್ಧಿ ಆಲಿಸಲಿಕ್ಕೆ. ಈಗಿನಂತೆ ದಿನಕ್ಕೆ ಒಂದೆರಡು ಸಾರಿ ಪೇಟೆಗೆ ಹೋಗುವ ಅಭ್ಯಾಸವಿರುವುದಿಲ್ಲ. ತಾಲ್ಲೂಕು ಮುಖ್ಯ ಕೇಂದ್ರದಲ್ಲಿ ನಡೆಯುವ ಸಂತೆ ದಿನವಷ್ಟೆ ಕೆಲವರು ಪೇಟೆಗೆ ಹೋಗುತ್ತಿದ್ದರು. ಒಟ್ಟಾರೆ ಹೊರಗಿನ ಸಂಪರ್ಕ ಹಳ್ಳಿಯ ಜನರಿಗೆ ಬಹಳ ಸಿಮೀತವಾಗಿತ್ತು. 
ಅಂತಹ ಕಾಲದಲ್ಲಿ ಕಟ್ಟೆ ಪಂಚಾಯಿತಿ ಒಂದು ಸಾರ್ವಜನಿಕ ಸಂಪರ್ಕ ವಾಹಿನಿಯಂತೆ ಪಾತ್ರ ವಹಿಸುತ್ತಿತ್ತು. ಊರಿನಲ್ಲಿ, ತಾಲ್ಲೂಕಿನಲ್ಲಿ ದೇಶದಲ್ಲಿ ನಡೆಯುತ್ತಿದ್ದ ಆಗು ಹೋಗುಗಳ ಪ್ರಸ್ತಾಪ, ಚರ್ಚೆ, ಹೊಸ ವಿಚಾರಗಳ ಬಗ್ಗೆ ಪರಸ್ಪರ ವಿನಿಮಯ, ವಧೂವರರ ಮಾಹಿತಿ, ಕೃಷಿ ಮಾರುಕಟ್ಟೆಗಳ ಧಾರಣೆಯ ಮಾಹಿತಿ, ಅನೇಕ ವಿಷಯಗಳ ರಂಜನೆ, ಬೇರೆ ಬೇರೆ ಮಾಹಿತಿಗಳ ಮಂಡನೆ, ಅವುಗಳ ಮನವರಿಕೆ ಇವೆಲ್ಲ ಅಲ್ಲಿ ನಡೆಯುತ್ತಿದ್ದವು. ಊರ ಹೊರಗೆ ಹೋಗಿ ಬಂದವರು ಹೊರಗಿನ ಸಮಾಚಾರವನ್ನು ಊರಿನ ಜನರಿಗೆ ತಿಳಿಸುವುದು ಊರಿನ ಜನರ ಸ್ನೇಹ ವರ್ಧನೆ ಒಬ್ಬರಿಗೊಬ್ಬರ ಮೇಲೆ ಇರುವ ಸಣ್ಣಪುಟ್ಟ ದ್ವೇಷಗಳನ್ನು ಅಲ್ಲಿ ಹೇಳುವುದು, ಅದಕ್ಕೆ ಅಲ್ಲಿ ಕುಳಿತಿರುವ ಯಾರಾದರೂ ಹಿರಿಯರಿಂದ ಅದರ ಚಿಕಿತ್ಸೆ ಇವೆಲ್ಲಾ ಅಲ್ಲಿ ನಡೆಯುತ್ತಿದ್ದವು. 
ಆದರೆ ಇಂದು ಹಳ್ಳಿಗಳ ಪರಿಸ್ಥಿತಿ ಹಾಗಿಲ್ಲ. ತಮ್ಮ ವಿಶ್ರಾಂತಿ ವೇಳೆಯಲ್ಲಿ ಎಲ್ಲರೂ ಟಿವಿ ಮುಂದೆ ಕುಳಿತಿರುತ್ತಾರೆ. ದೂರವಾಣಿಗಳಿಂದ ಹೊರ ಪ್ರಪಂಚದ ಸಂಪರ್ಕದಲ್ಲಿರುತ್ತಾರೆ. ಮನೆ ಮನೆಗೆ ಬೈಕು, ಅಲ್ಲಲ್ಲಿ ಕಾರುಗಳಿರುವುದರಿಂದ ದಿನನಿತ್ಯ ಪೇಟೆ ಓಡಾಟ. ಹಳ್ಳಿಯ ಜನರ ಬದುಕು ಕೂಡಾ ಹಾಗೆಯೇ ಆಗಿದೆ. 25 ವರ್ಷಗಳ ಹಿಂದಿನಷ್ಟು ಸರಳ, ಸೀಮಿತವಾಗಿಲ್ಲ. ಜಂಜಾಟ ಹೆಚ್ಚಿದೆ. ಯಾರಿಗೂ ಊರಿನಲ್ಲಿ ಪ್ರತಿನಿತ್ಯ ಇರಲಿ ತಿಂಗಳಿಗೊಮ್ಮೆಯೂ ಒಬ್ಬರೊನ್ನಬ್ಬರು ಭೇಟಿಯಾಗಲು ಪುರಸೊತ್ತಿಲ್ಲ. ಟಿವಿ, ಫೋನ್ ಮುಂತಾದ ಆಧುನಿಕ ಉಪಕರಣಗಳು, ಜನರ ಸಂಕೀರ್ಣ ಜೀವನ ಹಳ್ಳಿಗಳ ಕಟ್ಟೆ ಪಂಚಾಯಿತಿಯನ್ನು ಇಲ್ಲವಾಗಿಸಿವೆ. ಅಲ್ಲಿನ ಜನರ ಪ್ರಾಥಮಿಕ ಸಂಬಂಧಗಳು ಮರೆಯಾಗುತ್ತಿವೆ. ನಗರಗಳಲ್ಲಿ ಒಂದೇ ಮನೆಯ ಎರಡು ಪೋರ್ಷನ್‍ಗಳಲ್ಲಿ ಜನ ವಾಸಿಸುತ್ತಾರೆ. ಆದರೆ ಒಬ್ಬರ ಸಂಪರ್ಕ ಮತ್ತೊಬ್ಬರಿಗೆ ಇರುವುದಿಲ್ಲ. ಹಳ್ಳಿಗಳಲ್ಲಿಯೂ ಈಗ ಹೆಚ್ಚುಕಡಿಮೆ ಇದೇ ಪಾಡು. 
ಮಲೆನಾಡಿನಲ್ಲಿ 10-20 ಮನೆಗಳಿದ್ದ ಊರಿನ ಜನ, ಬಯಲು ನಾಡಿನಲ್ಲಿ 100-200 ಮನೆಗಳಿದ್ದ ಒಂದು ಊರಿನ ಜನ ಅನೇಕ ವಿಚಾರಗಳಲ್ಲಿ ಒಂದೇ ಮನೆಯವರಾಗಿರುತ್ತಿದ್ದರು. ಕಟ್ಟೆ ಪಂಚಾಯಿತಿಯ ಮಹತ್ವ ಇದ್ದದ್ದೇ ಅಲ್ಲಿ. ಈಗ ಮುಂದುವರೆದ ಜೀವನ ಕ್ರಮದಲ್ಲಿ ಒಂದೇ ಮನೆಯಲ್ಲಿ ಹಲವು ಮನಸ್ಸುಗಳಿವೆ. ಅಷ್ಟೇ ಏಕೆ ಒಂದೇ ವ್ಯಕ್ತಿಯ ಮನಸ್ಸು ಹಲವು ಕಡೆ ಓಡುತ್ತಿದೆ. ಅದಕ್ಕೆ ಲಗಾಮು ಹಾಕಲು ಕಟ್ಟೆ ಪಂಚಾಯಿತಿಯ ಹಿರಿಯರು, ತಿಳಿದವರು ಈಗ ಇಲ್ಲ. 

ಎಂ. ಗಣಪತಿ M.A.. ಕಾನುಗೋಡು
 ಅಂಚೆ : ಬಿ.ಮಂಚಾಲೆ-577431
 ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
 ಮೊ.: 9481968771
 E-mail: mgkangod.blogspot.com

Monday, 3 June 2013

ಅತ್ತೆ ಸೊಸೆಯರ ಜಗಳ


                                                                                              -ಎಂ. ಗಣಪತಿ ಕಾನುಗೋಡು
ಅತ್ತೆ ಸೊಸೆಯರ ಜಗಳ ಹೊಸತಲ್ಲ. ಸಂಯುಕ್ತ ಕುಟುಂಬದಲ್ಲಿ ಇದು ದಿನನಿತ್ಯದ ಭಜನೆ. ನಗರಗಳಲ್ಲಿ ಕೇವಲ ಗಂಡ ಹೆಂಡತಿಯರ ಪುಟ್ಟ ಕುಟುಂಬಗಳೇ ಹೆಚ್ಚು. ಅಂತಹ ಕುಟುಂಬಗಳಲ್ಲಿ ಅತ್ತೆ ಸೊಸೆಯರ ಜಗಳಕ್ಕೆ ಸ್ಥಳವಿಲ್ಲ. ಅದು ಏನಿದ್ದರೂ ಗಂಡ ಹೆಂಡತಿಯರ ನಡುವೆ ಸೀಮಿತ. ಒಮ್ಮೆ ಅತ್ತೆ ಮಾವಂದಿರಿದ್ದರೂ ಮಗ ಸೊಸೆ ಇಬ್ಬರು ಸಂಪಾದನೆಗೆ ಹೋಗುತ್ತಾರೆ. ಗೃಹ ಕೃತ್ಯದ ಕೆಲಸಕ್ಕೆ ಅತ್ತೆ ಮಾವಂದಿರು ಅತಿ ಸುಲಭಕ್ಕೆ ದೊರಕುವವರಿರುತ್ತಾರೆ. ಅಲ್ಲಿ ಸೊಸೆ ಅತ್ತೆಯೊಂದಿಗೆ ಜಗಳವಾಡುವ ದಡ್ಡತನವನ್ನು ತೋರುವುದಿಲ್ಲ. ಅತ್ತೆಗೂ ಹಾಗೆಯೇ. ಜಗಳ ಮಾಡಲು ಸೊಸೆ ಮನೆಯಲ್ಲಿ ಸಿಗುವುದಿಲ್ಲ. ಒಟ್ಟಾರೆ ಅಲ್ಲಿ ಅತ್ತೆ ಸೊಸೆಯರಿಬ್ಬರಿಗೂ ಜಗಳಕ್ಕೆ ಪುರಸೊತ್ತೇ ಇರುವುದಿಲ್ಲ. 
ಹಳ್ಳಿಗಳಲ್ಲಿ ವಾಸಿಸುತ್ತಿರುವ ಅತ್ತೆ ಸೊಸೆಯರ ಕಥೆ ಹಾಗಲ್ಲ. ಹಗಲೆಲ್ಲಾ ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಾರೆ. ಗೃಹಕೃತ್ಯವೇ ಇಬ್ಬರ ಕೆಲಸ. ದಿನದ ಬಹಳ ಹೊತ್ತು ಒಟ್ಟಿಗೆ ಇರುವುದರಿಂದ ತಮ್ಮ ಕೆಲಸದ ಜೊತೆಗೇ ಜಗಳಕ್ಕೆ ಅವರಿಬ್ಬರಿಗೆ ಸಾಕಷ್ಟು ಪುರಸೊತ್ತು ಸಿಗುತ್ತದೆ. 
ಅತ್ತೆ ಸೊಸೆಯರ ಜಗಳಕ್ಕೆ ವಿಶೇಷ ಕಾರಣ ಬೇಕೆಂದಿಲ್ಲ. ಅದಕ್ಕಾಗಿ ಸಣ್ಣ ನೆವವೊಂದನ್ನು ಇಬ್ಬರೂ ತಡಕಾಡುತ್ತಲೇ ಇರುತ್ತಾರೆ. ಇಬ್ಬರ ಮಾತಿನ ರಭಸದಲ್ಲಿ ಯಾರ ಪ್ರಶ್ನೆಗೆ ಯಾರದ್ದೂ ಸ್ಪಷ್ಟ ಉತ್ತರವಿಲ್ಲ. ಹಾಗಂತ ಉತ್ತರ ಪಡೆಯುವಂತಹ ಸ್ಪಷ್ಟ ಪ್ರಶ್ನೆಯೂ ಇಬ್ಬರಲ್ಲಿ ಇರುವುದಿಲ್ಲ. ಅಂತಹ ಸ್ಪಷ್ಟತೆಯನ್ನು ಕಂಡುಕೊಳ್ಳುವ ಗೋಜು ಇಬ್ಬರಿಗೂ ಬೇಕಿಲ್ಲ. ಒಟ್ಟಾರೆ ಮಾತಿಗೆ ಮಾತು ಕುಟ್ಟಿಗಾಣಿಸುವುದೇ ಇಬ್ಬರ ಉದ್ದೇಶ. ಯಾರೂ ಸೋಲಲಿಕ್ಕೆ ಇಷ್ಟಪಡುವುದಿಲ್ಲ. ಇಲ್ಲಿ ಸೋಲುವುದು, ಪೇಚಿಗೆ ಸಿಕ್ಕುವುದು ಅತ್ತೆಯ ಗಂಡ ಮತ್ತು ಸೊಸೆಯ ಗಂಡ ಇಬ್ಬರೇ. ಅವರೇ ಅಪ್ಪ ಮತ್ತು ಮಗ. ಇವರಿಬ್ಬರೂ ಈ ಅತ್ತೆ ಸೊಸೆಯ ಜಗಳಕ್ಕೆ ಬಲಿಯಾಗಬೇಕು. ಯಾರನ್ನು ಓಲೈಸಿದರೂ ಕುತ್ತಿಗೆಗೆ ಬರುತ್ತದೆ. 
ಅತ್ತೆ ಸೊಸೆಯರ ಜಗಳಕ್ಕೆ ಕಾರಣ ಇಷ್ಟೆ. ಅತ್ತೆಯಾದವಳು ತನ್ನ ಹೆಣ್ಣು ಮಕ್ಕಳನ್ನು ಪ್ರೀತಿಸಿದ ಹಾಗೆ ಸೊಸೆಯನ್ನು ಪ್ರೀತಿಸುವುದಿಲ್ಲ. ಸೊಸೆಯಾದವಳು ತನ್ನ ತಾಯಿಯನ್ನು ಪ್ರೀತಿಸಿದಂತೆ ಅತ್ತೆಯನ್ನು ಪ್ರೀತಿಸುವುದಿಲ್ಲ. ಅತ್ತೆಯಾದವಳು ಕುಟುಂಬದಲ್ಲಿ ತನ್ನ ಹಿರಿಯತನವನ್ನು ಬಿಟ್ಟುಕೊಡಲು ಇಷ್ಟಪಡುವುದಿಲ್ಲ. ಸೊಸೆಯಾದವಳು ಅಧೀನಳಾಗಿ ಬದುಕಲು ಒಪ್ಪುವುದಿಲ್ಲ. 
ಇಂದು ಅತ್ತೆಯಾಗಿ ಸೊಸೆಗೆ ತಾಗಿಕೊಂಡವಳು ಹಿಂದೊಂದು ದಿನ ಸೊಸೆಯಾಗಿದ್ದವಳು. ಅತ್ತೆಯ ಯಾತನೆಯನ್ನು ಅನುಭವಿಸಿದವಳು. ಇಂದು ಸೊಸೆಯಾಗಿದ್ದವಳು ನಾಳೆ ಒಂದು ದಿನ ಅತ್ತೆಯಾಗಿ ಸೊಸೆಗೆ ತಾಗಿಕೊಳ್ಳುವವಳು. ಹಾಗಂತ ಅವಳು ಸೊಸೆಯಾಗಿ ಇಂದು ಅತ್ತೆಯಿಂದ ಕುಟ್ಟಿಸಿಕೊಳುತ್ತಿದ್ದವಳು. ಆದರೆ ಒಂದು ಮಜಾ ಅಂದರೆ ಸೊಸೆಗೆ ಸೊಸೆ ಬಂದಾಗ ಅತ್ತೆಯ (ದೀರ್ಘಾಯುಷಿಯಾಗಿದ್ದರೆ) ಒಳ ಹೊಡೆತ ಇನ್ನೂ ಹೆಚ್ಚು. ಒಳಗೊಳಗೆ ಮೊಮ್ಮಗನ ಹೆಂಡತಿಗೆ ಕೀಲಿಕೊಟ್ಟು ತನ್ನ ಸೊಸೆಯನ್ನು ಸೋಸಿ ನೋಡುವ ಮೋಜು ಅವಳದ್ದು. ಸೊಸೆಗೂ ಮುಂದೆ ಒಂದು ದಿನ ಈ ಪಾಳಿ ಸಿಕ್ಕರೆ ಹೆಚ್ಚಲ್ಲ. 
ಇಲ್ಲಿ ವಿವೇಚನೆ ಮಾಡಬೇಕಾದದ್ದು ಇಷ್ಟೇ. ಭಾವನಾತ್ಮಕ ಜೀವನದಲ್ಲಿ ಮಾತಿನಲ್ಲಿ ಸರಿದು, ಸೋತು ಗೆಲ್ಲಬೇಕು. ಒಬ್ಬರಿಗೊಬ್ಬರು ಸೆಣಸಿ ಗೆಲ್ಲಲು ಸಾಧ್ಯವಿಲ್ಲ. 
                       ಎಂ. ಗಣಪತಿ M.A.. ಕಾನುಗೋಡು                 ಅಂಚೆ : ಬಿ.ಮಂಚಾಲೆ-577431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ.: 9481968771
       E-mail: mgkangod.blogspot.com