Sunday 24 August 2014

ಹೊಸ ವರುಷ

ಹೊಸ ವರುಷ ಹಳೆ ದುಗುಡ ...

ಹೊಸ ವರುಷ ಹೊಸತಲ್ಲ ನನಗೆ .. ನನ್ನಷ್ಟೇ ಹಳತು. |
ಹಳೆದುಗುಡ ಹೊಸೆತಿರಲು ಹೊಸತೇನ ಕಾಣಲಿ ನಾನು. |
ಹೊಸತನರಸಿದೊಡೆ ಆಸೆಗಳ ಹಾಸು - ಹೊಕ್ಕು
ಸಿಕ್ಕಾಗಿ ಬದುಕಿನ ಸೊಗಡು ಜಡವಾಯಿತು. |
ಕಾಲ ಕಲಿಸುವುದೊಂದೇ ಪಾಠ.. ನಿತ್ಯದಾಟ
ಹಳಸಲ ಮನಕೆ ಕರೆದು ತುಂಬುವ ನಿತ್ಯ ಚೇತನ. |


ಸರ್ವರಿಗೂ ಹೊಸವರುಷ ಶುಭವನ್ನು ಕೊಡಲಿ ..

- ಎಂ ಗಣಪತಿ , ಕಾನುಗೋಡು .

ಅಡಿಕೆ ಬೆಲೆ ಗಗನಕ್ಕೆ

ಕೆಂಪು ಅಡಿಕೆ ಬೆಲೆ ಗಗನಕ್ಕೆ ಏರಿದೆ ಎನ್ನುವುದು ಸುಳ್ಳಲ್ಲ. ಕೆಂಪು ಅಡಿಕೆ ಬೆಳೆಗಾರನಿಗೆ ಸಿಗುವುದು ಒಂದು ಎಕರೆಯಲ್ಲಿ , ಸರಿಯಾದ ಸಮಯದಲ್ಲಿ ಕೊಯಿಲು ಮಾಡಿದರೆ, ಒಟ್ಟು ಉತ್ಪನ್ನದ ಮೂರನೆಯ ಒಂದು ಭಾಗ ಮಾತ್ರ. ಸಾಗರ ಪ್ರಾಂತ್ಯದಲ್ಲಿ ಸರಾಸರಿ ಒಂದು ಎಕೆರೆಗೆ 12 ಕ್ವಿಂಟಾಲ್ ಅಷ್ಟೇ. ಅಂದರೆ ರೈತನಿಗೆ ಒಂದು ಎಕೆರೆಯಲ್ಲಿ ಮೂರು ಕ್ವಿಂಟಾಲ್ ಕೆಂಪಡಿಕೆ ಸಿಗುತ್ತದೆ. ಅದರಲ್ಲೂ ಕೆಂಪು ಗೋಟು ಬೇರ್ಪಡೆಯಾಗುತ್ತದೆ. ಅದಕ್ಕೆ ಧಾರಣೆ ಕಡಿಮೆ. ಉಳಿದ 9 ಕ್ವಿಂಟಾಲ್ ಅಡಿಕೆಯಲ್ಲಿ ಚಾಲಿ[ಬಿಳಿ ಅಡಿಕೆ], ಬಿಳಿಗೋಟು, ಕಲ್ವಾರು. ಕೋಕ [ಅತಿ ಲಡ್ಡು ಅಡಿಕೆ]ಇವೆಲ್ಲ ಸೇರಿಕೊಳ್ಳುತ್ತದೆ. ಇವಕ್ಕೂ ಒಮ್ಮೆ ಬೆಲೆ ಬಂದರೂ ಈ ವಿವಿಧ ಬಗೆಯ ಚಾಲಿ ಬೇರ್ಪಡೆಗಳಿಗೆ ಧರ ತಾರತಮ್ಯವಿದೆ. ಕಳೆದ ಚುನಾವಣೆಯ ನಂತರ ಧಾರಣೆ ಒಳಗೆ ಬರುತ್ತದೆ ಎನ್ನುವ ಕಾರಣ ಮತ್ತು ಪಡೆದ ಸಾಲವನ್ನು ತೀರಿಸಿ ಚೊಕ್ಕವಾಗುವ ಕಾರಣಗಳಿಂದ ಬಹುತೇಕ ಬೆಳೆಗಾರರು ಚಾಲಿ ಅಡಿಕೆಯನ್ನೂ ಧಾರಣೆ ಏರುವ ಮೊದಲೇ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಕೊಳೆ ರೋಗ ಮತ್ತು ಪ್ರಾಕೃತಿಕ ಒತ್ತಡದಿಂದಾಗಿ ಈ ಉತ್ಪನ್ನ್ನದಲ್ಲೂ ಅತಿ ಕಡಿಮೆಯಾಗಿದೆ. ಸಾಗರದ ಇದೇ ಮಾದರಿ ಉಳಿದ ಎಲ್ಲಾ ಅಡಿಕೆ ಬೆಳೆಯುವ ಪ್ರದೇಶಕ್ಕೂ ಸ್ವಲ್ಪ ತಾರತಮ್ಯದಲ್ಲಿ ಹೊಂದಿಕೊಂಡಿದೆಯೇ ವಿನಃ ಬಹಳ ವ್ಯತ್ಯಾಸವಿಲ್ಲ.

ಇಷ್ಟಕ್ಕೂ ಮಲೆನಾಡಿನ ಪಾರಂಪರಿಕ ಅಡಿಕೆ ಬೆಳೆಗಾರ ಹೊಂದಿರುವ ತಲಾ ಅಡಿಕೆ ತೋಟವೆಷ್ಟು?. ಹತ್ತು ಗುಂಟೆಯಿಂದ ಒಂದು ಎಕರೆ ಕ್ಷೇತ್ರವಷ್ಟೇ. ಇದು ಸರಾಸರಿ ಹಿಡುವಳಿಯ ಮಾಹಿತಿ. ಇತ್ತೀಚೆಗೆ ಕೆಲವರು ಒಂದೂಅರ್ಧಎಕೆರೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಡಿಕೆ ಬೆಳೆಗಾರನ ಸಾಲ ಎಷ್ಟಿದೆಯೆಂದು ಅವನ ಹೆಂಡತಿಗೂ ಗೊತ್ತಿಲ್ಲ. ಹೇಳಿದರೆ ಮರ್ಯಾದೆ ಹೋಗುತ್ತದೆ. ಕಾರಣ ಅಡಿಕೆ ಧಾರಣೆ ಬಹಳ ಇದೆಯೆಂದು ಎಲ್ಲರೂ ಹೇಳುತ್ತಿದ್ದಾರೆ. ಕೃಷಿಯ, ಕೂಲಿಯ ಖರ್ಚನ್ನೂ ಯಾರೂ ಪ್ರಸ್ತಾಪ ಮಾಡುತ್ತಿಲ್ಲ.

ಇನ್ನು, ಈಗ ಏರಿದ ಕೆಂಪಡಿಕೆ ಧಾರಣೆ ಬೆಳೆಗಾರನ ನಾಲ್ಕನೇ ಒಂದು ಭಾಗದ ಬೆಳೆಗೆ ಮಾತ್ರ. ಅದೂ ಅವನ ಕೈಗೆ ಸಿಗಲಿಲ್ಲ. ಕಿವಿಯಲ್ಲಿ ಕೇಳಿದ್ದಷ್ಟೇ. ಅಡಿಕೆಯ ಬೆಲೆ ಗಗನದಲ್ಲಿ. ಬೆಳೆಗಾರನಿಗೆ ಅದು ಗಗನ ಕುಸುಮ. ಕಣ್ಣಿಗೆ ಕಾಣುತ್ತದೆ, ಕೈಗೆ ಸಿಕ್ಕಿಲ್ಲ. ಅವನ ಎಲ್ಲಾ ಬೆಳೆಯನ್ನು ಫೆಬ್ರುವರಿ ತಿಂಗಳಿನಲ್ಲಿ ಮಾರಾಟ ಮಾಡಿ ಸಾಲ ತೀರಿಸಿ ಹೊಸ ಸಾಲಕ್ಕೆ ಅರ್ಜಿ ಹಾಕಿ ಸಾಲದ ಹಣ ಬರುವುದಕ್ಕೆ ಈಗ ಹಲ್ಲುಗಿಂಜಿ ಕುಳಿತಿದ್ದಾನೆ.

ಒಟ್ಟಾರೆ ನಮ್ಮ ರೈತ " ಈಗ ಸ್ವಲ್ಪ ಕಷ್ಟದಲ್ಲಿದ್ದೇನೆ,ಇನ್ನು ನಾಲ್ಕು ವರ್ಷ ಹೋದರೆ ಸುಧಾರಿಸಿ ಕೊಳ್ಳುತ್ತೇವೆ " ಎಂದು ಹೇಳಿಕ್ಪ್ಳ್ಳುತ್ತಲೇ ಸಾಯುತ್ತಾನೆ. ಇದು ಅಜ್ಜರೈತನಿಂದ ಹಿಡಿದು ಮೊಮ್ಮಗ,ಮಿಮ್ಮಗರೈತನವರೆಗೂ ಇರುವ ಆದ್ಯಂತ ಕಥೆ.

ವೃಥಾ ಮಾಧ್ಯಮದವರು ಆಕಾಶದಲ್ಲಿ ಹಾರಾಡುವ ಪ್ಯಾರಾಚೂಟನ್ನೇ ವೈಭವೀಕರಿಸಿ ಬೇರೆಯವರಿಗೆ, ಸರ್ಕಾರಕ್ಕೆ ಅಡಿಕೆ ಬೆಳೆಗಾರನ ಮೇಲೆ ಕಣ್ಣು ದೃಷ್ಟಿ ತಾಗುವ ಹಾಗೆ ಮಾಡುತ್ತಿದ್ದಾರೆ. ಅಯ್ಯೋ ದೇವರೇ ನಾನೊಬ್ಬ ಅಡಿಕೆ ಬೆಳೆಗಾರ. "ಗಂಡ ಸತ್ತ ದುಃಖ ಬೇರೆ, ಬಡ್ಡುಗತ್ತಿಯ ಉರಿಬೇರೆ " ಎಂಬ ಗಾದೆ ಈಗ ಅಳಿಸಿಹೋದರೂ ಅದರ ವೇದನೆ ನನಗೆ ಪುನಃ ಪುನಃ ಬರುವಂತೆ ಮಾಡುತ್ತಿದ್ದಾರಲ್ಲಾ. ಈ ವರ್ಷ ಮಳೆಯೂ ಇಲ್ಲದೆ ಬರುವ ಬೆಳೆಯೂ ಆತಂಕದಲ್ಲಿದೆ. ನಮ್ಮನ್ನು ದೇವರೇ ಕಾಯಬೇಕು.

ಹುಟ್ಟಿದ ಮಗು ಗಂಡೋ ಅಥವಾ ಹೆಣ್ಣೋ ಎನ್ನುವುದಕ್ಕೆ ಶಂಖ ಮತ್ತು ಜಾಗಟೆಯ ಬಳಕೆ ..


ಗಂಡು ಹುಟ್ಟಿದರೆ ಶಂಖ. ಹೆಣ್ಣು ಹುಟ್ಟಿದರೆ ಜಾಘಂಟೆ :

ಸಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಆಗ ಹಳ್ಳಿಗಳಲ್ಲಿ ಮನೆಯಲ್ಲಿಯೇ ಗರ್ಭಿಣಿಯರು ಪ್ರಸವವಾಗುವ ಕಾಲ. ಊರಿನಲ್ಲಿರುವ ಅನುಭವಿ ಮಹಿಳೆಯರು ಹೆರಿಗೆಯನ್ನು ಮಾಡಿಸುವುದಕ್ಕೆ ಸಹಾಯವಾಗುತ್ತಿದ್ದರು.

ಗರ್ಭಿಣಿಗೆ ಪ್ರಸವ ವೇದನೆ ಪ್ರಾರಂಭವಾದ ಕೂಡಲೇ ಅದಕ್ಕೆ ಬೇಕಾದ ವ್ಯವಸ್ಥೆಗಳೊಂದಿಗೆ ಶಂಖ ಮತ್ತು ಜಾಘಂಟೆಯೂ ಮುಂಜಾಗರೂಕತೆಯಿನ್ದ ಅಲ್ಲಿ ತನ್ದಿಟ್ಟುಕೊಳ್ಳಲಾಗುತಿತ್ತು. 

ಹುಟ್ಟಿದ್ದು ಗಂಡುಮಗುವಾದರೆ ಯಾರಾದರೊಬ್ಬರು ಮನೆಯ ಹೊರಗೆ ಬಂದು ಎದುರು ಅಂಗಳದಲ್ಲಿ ನಿಂತು ಗಟ್ಟಿಯಾಗಿ ಸುತ್ತಮುತ್ತ ಊರಿಗೆಲ್ಲಾ ಕೇಳುವ ಹಾಗೆ ಶಂಖವನ್ನು ಊದುತ್ತಿದ್ದರು. ಹೆಣ್ಣುಮಗುವಾದರೆ ಹಾಗೆಯೇ ಜಾಘಂಟೆಯನ್ನು [ಜಾಗಟೆ, ಜಾವುಟೆ] ಗಟ್ಟಿಯಾಗಿ ಹೊಡೆಯುತ್ತಿದ್ದರು. ಇದು ಮಗು ಹುಟ್ಟಿದ ತಕ್ಷಣ ಮಾಡುತ್ತಿದ್ದ ಅಂದಿನ ಕ್ರಮ.

ಇಂದು, ಈಗ, ನಮ್ಮ ಮನೆಯಲ್ಲಿ ಗಂಡು ಅಥವಾ ಹೆಣ್ಣು ಮಗುವು ಜನ್ಮ ತಾಳಿತು ಎಂದು ನೆರೆಹೊರೆಗೆಲ್ಲಾ ಸಾರುವುದೇ ಈ ಪದ್ಧತಿ ಅನುಸರಣೆಯ ಉದ್ದೇಶವಾಗಿತ್ತು

ಸಾಗರ ತಾಲ್ಲೂಕಿನ ಕೆಲವು ಕಡೆ ಐವತ್ತು ವರ್ಷಗಳ ಹಿಂದೆಯೇ ಈ ಪದ್ಧತಿ ಬಿಟ್ಟು ಹೋಗಿದೆ. ಸಾಗರದ ಕೆಲವು ಕಡೆ, ಉತ್ತರಕನ್ನಡ ಮತ್ತು ದಕ್ಷಿಣಕನ್ನಡದ ಹವ್ಯಕರಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದಿನ ಆಸುಪಾಸು ಇದು ಚಾಲ್ತಿಯಲ್ಲಿ ಇತ್ತು.