Monday, 15 December 2014

ಕಳ್ಳನನ್ನು ಕಂಡುಹಿಡಿದ ಕುರುಡ


ಸಂತೆಯ ದಿನ ಪೇಟೆಯ ರಸ್ತೆ ಪಕ್ಕದಲ್ಲಿ ಕುರುಡನೊಬ್ಬ ಬೇಡುತ್ತಿದ್ದ. ' ನೋಡಿ ಸರ್ .. ಕಣ್ಣಿಲ್ಲ , ಕುರುಡ , ದಯವಿಟ್ಟು ಧರ್ಮ ನೀಡಿ ಸರ್ ' ಎಂದು ವಿನೀತ ಧ್ವನಿಯಲ್ಲಿ ಬೇಡುತ್ತಲೇ ಇದ್ದ. ಒಂದೇ ಥರ ಅಲ್ಲ. ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದ. ದಾರಿಯಲ್ಲಿ ಸಾಗುವವರು ಅವನ ಕೇಳಿಕೆಗೆ ಮನಸೋತು ಎರಡು, ಐದು, ಹತ್ತು ರುಪಾಯಿ... ಹೀಗೆ.. ಹೀಗೆ ಹಾಕಿ ಹೋಗುತ್ತಿದ್ದರು. ಯಾರೋ ಒಬ್ಬ ಧಾರಾಳಿ ಐವತ್ತು ರೂಪಾಯಿನ ನೋಟೊಂದನ್ನು ಹಾಕಿ ಹೋದದ್ದು ಅಲ್ಲಿಯೇ ಸಾಗುತಿದ್ದ ನನ್ನ ಕಣ್ಣಿಗೆ ಬಿತ್ತು.
ನನಗೂ ಏಕೋ ಅವನೆಡೆಗೆ ಮನಸ್ಸು ಹೋಯಿತು. ನನ್ನಲ್ಲಿ ಚಿಲ್ಲರೆ ಇಲ್ವಲ್ಲಪ್ಪಾ ಎಂದೆ. 'ನೋಟು ಹಾಕಿ ಚಿಲ್ಲರೆ ತೆಕ್ಕೊಳ್ಳಿ ಸ್ವಾಮಿ' ಎಂದ. ನಾನು ಒಂದು ನೋಟನ್ನು ಹಾಕಿ ಚಿಲ್ಲರೆಯೆಂದು ಮತ್ತೊಂದು ನೋಟನ್ನು ತೆಗೆಯುವುದರಲ್ಲಿದ್ದೆ. ಅಷ್ಟು ಹೊತ್ತಿಗೆ ತಟ್ಟನೆ ಆತ ನನ್ನ ಕೈ ಹಿಡಿದುಕೊಂಡು ಬಿಟ್ಟ. ' ಏನ್ರೀ.... ನೋಡಲಿಕ್ಕೆ ದೊಡ್ಡ ಸಂಭಾವಿತರ ಹಾಗೆ ಸರಿಯಾಗಿ ಕಾಣುತ್ತಿದ್ದೀರಿ. ಏನೋ ಕಣ್ಣಿಲ್ಲ ಕುರುಡ ಅಂತ ಬಿಕ್ಷೆ ಬೇಡೋಕೆ ಕುಂತುಕೊಂಡರೆ ನನಗೇ ಮೋಸ ಮಾಡ್ತೀರಲ್ಲ. ಮೊದಲು ಇಡ್ರೀ ಅದನ್ನ.' ಎಂದು ನನ್ನನ್ನು ಜೋರಿನ ಧ್ವನಿಯಲ್ಲಿ ಕಣ್ಣು ಬಿಟ್ಟು ಹೆದರಿಸಿದ. ಅವನ ಗಲಾಟೆ ಕೇಳಿ ಸಂತೆಗೆ ಬಂದ ಜನ ನಮ್ಮಿಬ್ಬರನ್ನು ಕುತೂಹಲದಿಂದ ಸುತ್ತುವರಿದರು. ಗುಜು ಗುಜು ಗಲಭೆ ಶುರುವಾಯಿತು. ನಾನೂ ಮರ್ಯಾದೆ ಉಳಿಸಿಕೊಳ್ಳಬೇಕಲ್ಲ !. ' ಯಾಕಪ್ಪ.. ಧರ್ಮ ನೀಡಲಿಕ್ಕೆ ಬಂದರೆ ಹಾಗೆ ಗದರಿಸುತ್ತೀಯೆ' ಎಂದೆ.
" ಏನ್ರೀ ನೀವು ಮನುಷ್ಯರಾ... ಚಿಲ್ಲರೆಯಿಲ್ಲ ಎಂದು ಹೇಳಿ ಐದು ರುಪಾಯಿ ನೋಟು ಹಾಕಿ ಐವತ್ತು ರುಪಾಯಿ ನೋಟು ತೆಗಿತಿದ್ದೀರಲ್ಲಾ " ಎಂದು ಎಲ್ಲರೆದುರು ಕೂಗಾಡಿಬಿಟ್ಟ.

Friday, 5 December 2014

ನಮ್ಮ ವಿವಾಹ ಸಂಸ್ಕಾರದ ವಿಧಿ - ವಿಧಾನಗಳು


ಪ್ರಸ್ತುತಿ : ಎಂ.ಗಣಪತಿ ಕಾನುಗೋಡು.


ವಿವಾಹ ಸಂಸ್ಕಾರವೂ ಬ್ರಾಹ್ಮಣನಿಗೆ ಆಗಬೇಕಾದ ಹದಿನಾರು ಸಂಸ್ಕಾರಗಳಲ್ಲಿ ಹದಿನೈದನೆಯದು. ನಮ್ಮ ವಿವಾಹ ಸಂಸ್ಕಾರದಲ್ಲಿ ಇಪ್ಪತ್ತೊಂದು ವಿಧಿ - ವಿಧಾನಗಳಿವೆ. ಅವುಗಳ ಹೆಸರನ್ನು ಮಾತ್ರ ಇಲ್ಲಿ ಪ್ರಸ್ಥಾಪಿಸಲಾಗಿದೆ. ಇದರ ಜೊತೆಜೊತೆಯಾಗಿ, ಇದಕ್ಕೆ ಪೂರಕವಾಗಿ ಸುಮಂಗಲೆಯರು ನಡೆಸುವ ಪದ್ಧತಿಗಳೂ ಅನೇಕ ಇವೆ. ಅವುಗಳನ್ನು ಈಗ ಪ್ರಸ್ಥಾಪಿಸಲಾಗುತ್ತಿಲ್ಲ.
1 . ವರಾಗಮನ. 2 . ವಾಗ್ದಾನ 3 . ಮಧುಪರ್ಕ 4 . ನಿರೀಕ್ಷೆ 5 . ಕನ್ಯಾದಾನ 6 . ಅಕ್ಷತಾರೋಹಣ ಮತ್ತು ಮಾಂಗಲ್ಯಧಾರಣೆ 7 . ಪಾಣಿಗ್ರಹಣ 8 . ಸಪ್ತಪದಿ 9 . ವಿವಾಹ ಹೋಮ 10 . ಅಶ್ಮಾರೋಹಣ [ ವಧುವು ಅರಳನ್ನು ಸಮರ್ಪಿಸುತ್ತ ಹೋಮಕುಂಡವನ್ನು ಪ್ರದಕ್ಷಿಣೆ ಮಾಡುವುದು.] 11 . ವ್ರತಗ್ರಹಣ ಹೋಮ 12 . ಔಪಾಸನ ಹೋಮ 13 . ಆರುಂಧತೀ [ಅರುಂಧತೀ ಎನ್ನುವುದು ವಾಡಿಕೆಯಲ್ಲಿದೆ] ಮತ್ತು ಧ್ರುವನಕ್ಷತ್ರದರ್ಶನ 14 . ಚತುರ್ಥೀ [ ಪಕ್ವ] ಹೋಮ 15 . ವ್ರತವಿಸರ್ಜನ ಹೋಮ 16 . ಉಪಸಂವೇಶನ 17 ಸ್ಥಾಲೀಪಾಕ ಹೋಮ 18 . ಓಕುಳಿ 19 . ಸಮಾರೋಪಣ 20 .ವಧೂಪ್ರವೇಶ 21 . ಗೃಹಸ್ಥಾಶ್ರಮ ವಿಧಿ
ತಾರೀಖು : 04 - 12 -2014
ಮಾಹಿತಿಯ ಕೃಪೆ : ವಿದ್ವಾನ್ ಹೇರಂಭ. ಆರ್. ಭಟ್ಟ ಅಗ್ಗೆರೆ. [ಅವರ ' ಸನಾತನ ಸಂಸ್ಕಾರಗಳು ' ಪುಸ್ತಕದಿಂದ]

ಒಂದು ಚಿಂತನೆ :


ಎಡ ವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಳ್ಳುವುದು ಗಂಡಸಿಗೆ ಬಹಳ ಕಷ್ಟ.
ಕಾರಣ :
+ ಅವನು ತನ್ನ ಜೀವನದಲ್ಲಿ ಪ್ರತಿಯೊಂದಕ್ಕೂ ಹೆಂಡತಿಯನ್ನೇ ಅವಲಂಬಿಸಿರುತ್ತಾನೆ. ಹೆಂಡತಿ ಹಾಗಲ್ಲ. ತನ್ನ ದಿನನಿತ್ಯದ ಬೇಕುಗಳಿಗೆಲ್ಲಾ ತನ್ನನ್ನೇ ಅವಲಂಬಿಸಿರುತ್ತಾಳೆ.
+ ಹೆಂಡತಿ ತನ್ನ ಗಂಡನನ್ನು ಆಶಿಸಿ ಸಲಹಿದ ಹಾಗೆ ಮಕ್ಕಳು ತಂದೆಯನ್ನು ಅಷ್ಟೊಂದು ಆಶೆಪಡುವುದಿಲ್ಲ. ತಾಯಿಯ ವಿಚಾರದಲ್ಲಿ ಹಾಗಲ್ಲ. ಮಕ್ಕಳು ಅವಳನ್ನು ತಂದೆಗಿಂತ ಹೆಚ್ಚಿನ ಪ್ರೀತಿಯಿಂದ ನೋಡುತ್ತಾರೆ.
+ ಗಂಡಸು ಸಂಸಾರದೊಳಗಿನ ಕೆಲಸಗಳಲ್ಲಿ ಭಾಗಿಯಾಗುವುದು ಕಡಿಮೆ. ಹೆಂಗಸು ಹಾಗಲ್ಲ. ಅವಳು ಮಗ,ಸೊಸೆ, ಮೊಮ್ಮಕ್ಕಳ ಮೇಲೆ ಮೈಮುಟ್ಟಿ ಕಾಳಜಿ ವಹಿಸುತ್ತಾಳೆ. ಹಾಗಾಗಿಯೇ ಅವಳನ್ನು ಕುಟುಂಬದ ಸದಸ್ಯರು ಅಶೆಪಡುತ್ತಾರೆ. ಗಂಡಸಿನ ಚಹರೆ ಹಾಗಲ್ಲ.
+ ಹಣ ಕಾಸಿನ ನೆರವನ್ನು ಜೀವಂತ ಇದ್ದಾಗ ಗಂಡ ಹೆಂಗಸಿಗೆ ನೀಡಿರುತ್ತಾನೆ. ನಂತರ ಮಕ್ಕಳು ಅವಳಿಗೆ ಆ ನೆರವನ್ನು ನೀಡುತ್ತಾರೆ.[ ಈಗಿನ ಸ್ತ್ರೀ ದುಡಿಮೆಯ ಸನ್ನಿವೇಶ ಒಂದು ಅಪವಾದ]. ಈ ಮೂಲಭೂತ ವ್ಯವಸ್ಥೆಯಿಂದಾಗಿ ಹೆಂಗಸು ' ಪಡೆದುಕೊಳ್ಳುವ ' ಸ್ವಭಾವವನ್ನು ರೂಡಿಸಿಕೊಂಡಿರುತ್ತಾಳೆ. ಗಂಡಸು ವಯಸ್ಸಾಗುತ್ತಾ ಬಂದಂತೆಲ್ಲಾ ಎಲ್ಲದಕ್ಕೂ ಕುಟುಂಬದ ಇತರ ಸದಸ್ಯರನ್ನು ಅವಲಂಬಿಸುವುದು ಅನಿವಾರ್ಯ. ಆಗ ಅವನಿಗೆ ಅನಾಥ ಪ್ರಜ್ಞೆ ಮೂಡುತ್ತದೆ. ಹೆಂಗಸಿಗೆ ಹಾಗಾಗುವುದಿಲ್ಲ. ಏಕೆಂದರೆ ಅವಳು ಆ ಸ್ವಭಾವವನ್ನು ತನ್ನ ಜೀವನದ ಪ್ರಾರಂಭದಿಂದಲೇ ರೂಢಿಸಿಕೊಂಡಿರುತ್ತಾಳೆ.
+ ಒಮ್ಮೆ ಗಂಡಸಿಗೆ ಕುಟುಂಬದ ಇತರ ಸದಸ್ಯರಿಂದ ಒಳ್ಳೆಯ ಸ್ಪಂದನ ಸಿಕ್ಕರೂ ಕೂಡ ಅವು ಯಾವುದೂ ತನ್ನ ಹೆಂಡತಿಯಿಂದ ದೊರಕಿದಷ್ಟು ಮನಸ್ಸಿಗೆ ಸಮಾಧಾನವಾಗುವುದಿಲ್ಲ.


ತೀರ್ಮಾನ :
ಹಾಗಾಗಿ ಗಂಡನಾದವನು ಹೆಂಡತಿಗೆ " ದೀರ್ಘ ಸುಮಂಗಲೀ ಭವ " ಎಂದು ಹಾರೈಸುವುದು ಅನಿವಾರ್ಯ. 


krupe : M Ganapathi Kangod
5/Dec/2014