Monday 18 December 2017

#### ಖಾಂಡವವನ ದಹನವಾದದ್ದು ಏಕೆ ? ####



ಖಾಂಡವವನ ಇಂದ್ರನ ಒಡೆತನದ ಒಂದು ಉದ್ಯಾನವನ. ಅದು ಅಗ್ನಿಯಿಂದ ಸುಟ್ಟು ಬೂದಿಯಾಯಿತು. ಒಮ್ಮೆ ವರುಣಲೋಕದಲ್ಲಿ ಹನ್ನೆರಡು ವರ್ಷಗಳ ಕಾಲ ಒಂದು ಯಜ್ಞ ನಡೆಯಿತು. ಅಷ್ಟೊಂದು ದೀರ್ಘಕಾಲ ನಿರಂತರವಾಗಿ ಅಗ್ನಿಗೆ ಹವಿಸ್ಸನ್ನು ನೀಡಲಾಯಿತು. ಇದರಿಂದಾಗಿ ಅಗ್ನಿಗೆ ಜೀರ್ಣ ಶಕ್ತಿಯು ಕುಗ್ಗಿ ಅಜೀರ್ಣವಾಯಿತು.
ಅಶ್ವಿನೀದೇವತೆಗಳು ದೇವತೆಗಳಿಗೆ ಫ್ಯಾಮಿಲಿ ಡಾಕ್ಟರು. ಸರಿ, ಅಗ್ನಿದೇವನು ತನ್ನ indigestion ಬಗ್ಯೆ ಅವರಲ್ಲಿ ಸಲಹೆಯನ್ನು ಕೇಳಿದ. ಆಗ ಅಶ್ವಿನೀದೇವತೆಗಳು ಖಾಂಡವವನದಲ್ಲಿ ಅಜೀರ್ಣವನ್ನು ಹೋಗಲಾಡಿಸುವಂಥಹ ಉತ್ತಮ ಗಿಡಮೂಲಿಕೆಗಳಿವೆ, ಅವುಗಳನ್ನು ಸೇವಿಸಿದರೆ ಅಗ್ನಿಮಾಂದ್ಯ ಕಡಿಮೆಯಾಗುತ್ತದೆ ಎಂದು ತಮ್ಮ ವೈದ್ಯಕೀಯ ಸಲಹೆ ಕೊಟ್ಟರು.
ಖಾಂಡವವನವನ್ನು ಪ್ರವೇಶಿಸುವುದು ಅಷ್ಟು ಸುಲಭದ ಕೆಲಸ ಅಲ್ಲ. ಅದು ಶಕ್ತಿವಂತನಾದ ಇಂದ್ರನ ಹಕ್ಕುದಾರಿಕೆಯಲ್ಲಿ ಇರುವಂಥಹದ್ದು. ಅದಕ್ಕಾಗಿ ಅಗ್ನಿಯು ಸಹಾಯ ಬೇಡಲು ಕೃಷ್ಣಾರ್ಜುನರಲ್ಲಿಗೆ ಹೋದ. ಬೆಂಕಿಯ ರೂಪದಲ್ಲಿಯೇ ಹೋದರೆ ಅವರು ತನ್ನ ದಗೆಯ ಎದುರು ನಿಲ್ಲಲು ಸಾಧ್ಯವಾಗುವುದಿಲ್ಲವಲ್ಲ. ಅದಕ್ಕಾಗಿ ಬ್ರಾಹ್ಮಣ ವೇಷದಿಂದ ಅವರಲ್ಲಿಗೆ ಹೋದ. ತಾನು ಬೆಂಕಿಯ ರೂಪದಲ್ಲಿ ಖಾಂಡವವನದಲ್ಲಿರುವ ಗಿಡಮೂಲಿಕೆಗಳನ್ನು ಸೇವಿಸುವಾಗ ಇಂದ್ರನು ಆತಂಕಪಡಿಸಿದರೆ ತನಗೆ ರಕ್ಷಣೆ ಕೊಡಬೇಕೆಂದು ಅವರಲ್ಲಿ ನಿವೇದಿಸಿ ಸಮ್ಮತಿ ಪಡೆದುಕೊಂಡ.
ಅದರಂತೆ ಅಗ್ನಿದೇವನು ಖಾಂಡವವನದಲ್ಲಿರುವ ತನ್ನ ಅಜೀರ್ಣ ನಿವಾರಕ ಗಿಡಮೂಲಿಕೆಗಳನ್ನು ಭುಂಜಿಸಲು ಶುರುಮಾಡಿದಾಗ ಸಹಜವಾಗಿ ಆ ವನ ಸುಡುವಂತಾಯಿತು. ಹೀಗೆ ಹದಿನೈದು ದಿನಗಳ ಕಾಲ [ ಒಂದು ಅಭಿಪ್ರಾಯ ] , ಇಪ್ಪತ್ತೊಂದು ದಿನಗಳ ಕಾಲ [ ಮತ್ತೊಂದು ಅಭಿಪ್ರಾಯ ] ಆ ವನವನ್ನು ಅಗ್ನಿಯು ದಹಿಸಿದ.
ಆಗ ಸಿಟ್ಟಿಗೆದ್ದ ಇಂದ್ರ ಅಗ್ನಿಯ ಮೇಲೆ ಯುದ್ಧಕ್ಕೆ ಬಂದ. ಅಗ್ನಿಯ ರಕ್ಷಣೆಗಾಗಿ ಮಾತುಕೊಟ್ಟಿದ್ದ ಅರ್ಜುನ ಇಂದ್ರನನ್ನು ಪ್ರತಿ ಯುದ್ಧ ಕೊಟ್ಟು ಸೋಲಿಸಿಬಿಟ್ಟ. ಬೆಂಕಿಯನ್ನು ನಂದಿಸುವುದಕ್ಕಾಗಿ ಇಂದ್ರನು ಮಳೆಯನ್ನೂ ಸುರಿಸಿದ. ಆಗ ಅರ್ಜುನನು ಶರಪಂಜರದಿಂದ ಆ ಮಳೆಯು ಅಗ್ನಿಯ ಮೇಲೆ ಬೀಳದಂತೆ ಮಾಡಿದ .
ಈ ಸನ್ನಿವೇಶದಲ್ಲಿ ಮಧ್ಯೆ ಬರುವ ಬೇರೆ ಒಂದೆರಡು ವಿಚಾರಗಳು ಇಲ್ಲಿ ಅನಗತ್ಯ.
ಅಂತೂ ಕೊನೆಗೆ ಇಂದ್ರನು ಕೃಷ್ಣಾರ್ಜುನರಲ್ಲಿಗೆ ಬಂದು ರಾಜಿ ಮಾಡಿಕೊಂಡು ಹೋದ. ಖಾಂಡವವನದಲ್ಲಿರುವ ಗಿಡಮೂಲಿಕೆಗಳನ್ನು ಯಶಸ್ವಿಯಾಗಿ ಸೇವಿಸಿ ಅಗ್ನಿದೇವನು ತನ್ನ ಅಜೀರ್ಣದ ಜಾಡ್ಯವನ್ನು ನಿವಾರಿಸಿಕೊಂಡ. ಇದು ಇಂದ್ರನ ಖಾಂಡವವನ ದಹನ -- ಅಗ್ನಿದೇವನ ಅಗ್ನಿಮಾಂದ್ಯ ಹರಣ.

~~~~~ ಎಂ. ಗಣಪತಿ ಕಾನುಗೋಡು.
ತಾರೀಖು : 16 -- 12 --2017.