Thursday 31 May 2018

#### ಸಂಸಾರ ####



ಸಂಸಾರವೆಂದರೆ ಗಂಡ ಹೆಂಡತಿ, ತಾಯಿ ತಂದೆ, ಅಣ್ಣ ತಮ್ಮ, ಮಕ್ಕಳು ಮರಿ, ನೆಂಟರು ಇಷ್ಟರು.ಜೊತೆಗೆ ಖಾಯಂ ಕೆಲಸದವರು ಕೂಡಾ . ಇದು ನಮ್ಮ ಪಾರಂಪರಿಕ ಅವಿಭಕ್ತ ಕುಟುಂಬ. ಅದು ಈಗ ಕೇವಲ ಗಂಡ ಹೆಂಡತಿ , ಒಂದು ಮಗು ಹೀಗೆ ಮೂವರು ಸದಸ್ಯರನ್ನೊಳಗೊಂಡ ಅಣುಕುಟುಂಬವಾಗುತ್ತಲಿದೆ [ Nuclear Family ].

ಸಂಸಾರವೇ ಸಮಾಜಕ್ಕೆ ತಳಹದಿ. ಈಗಿನ ಕಾಲದ ಆರ್ಥಿಕ ಸ್ಥಿತಿಗಳಿಂದಲೂ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿಶಯವಾದ ಪ್ರಾಶಸ್ತ ಕೊಡಲು ಪ್ರಾರಂಭಿಸಿರುವುದರಿಂದಲೂ ಸಂಸಾರದಲ್ಲಿ ವಿಶ್ವಾಸ , ವಿಧೇಯತೆ, ಒಗ್ಗಟ್ಟು,ಮುಂತಾದ ಸ್ನೇಹಗುಣಗಳು ಕಡಿಮೆ ಆಗಿವೆ. ಸ್ನೇಹ, ವಿಶ್ವಾಸ ಇಲ್ಲದ ಸಂಸಾರ ಒಂದೋ ಮರಳುಕಾಡು ಅದಿಲ್ಲದಿದ್ದರೆ ಕುರುಕ್ಷೇತ್ರ. ಅಣ್ಣ ತಮ್ಮಂದಿರ , ಅಪ್ಪ ಮಕ್ಕಳ ನಡುವೆಯ ಮಾತಿರಲಿ ಗಂಡ ಹೆಂಡತಿಯ ನಡುವೆಯೇ ಹೊಡೆದಾಟ. ಪರಿಣಾಮ ಸಂಸಾರ ಶಿಥಿಲ . ಮಕ್ಕಳು ಮೂರಾಬಟ್ಟೆ. ಅಜ್ಜ ಅಜ್ಜಿಯರಿದ್ದರೆ ನಾಯಿಪಾಡು.

ಜೊತೆಯಲ್ಲಿ ಇರಬೇಕಾದವರು ಅಹಿತವಾದರೆ ಅದು ಕಾಲಿನಲ್ಲಿ ಮುಳ್ಳು ಚುಚ್ಚಿ ಮುರಿದುಕೊಂಡಂತೆ. ತೆಗೆದರೆ ಘಾಯ., ತೆಗೆಯದಿದ್ದರೆ ನೋವು. ಸಂಸಾರದ ನಡೆ ಕುಂಟು. ಏಕೆ ?. ಇಲ್ಲಿ ನಡೆಯುವವರು , ನಡೆಸುವವರು ಹೊಂದಾಣಿಕೆಯ ಕೊರತೆಯ ಗೊಂದಲದಲ್ಲಿ ಹೆಳವರಾಗಿದ್ದಾರೆ, ಮೂಕರಾಗಿದ್ದಾರೆ, ಕಿವುಡರಾಗಿದ್ದಾರೆ. ಮುರಿದ ಮುಳ್ಳಿನ ಪರಿಣಾಮ ಸಂಸಾರದ ಯಾವ ಕೆಲಸದಲ್ಲಿಯೂ ಎಲ್ಲರಿಗೂ ನೋವಿನ ಮೇಲೆ ಜ್ಞಾನ, ಹಿಂದೇಟು.

ಈ ನೋವು ಇಲ್ಲದಿರಬೇಕಾದರೆ ಸಂಸಾರದಲ್ಲಿ ಪ್ರತಿಯೊಬ್ಬನಲ್ಲಿಯೂ ಅತಿ ಸ್ವಾತಂತ್ರ್ಯದ [ ಸ್ವೇಚ್ಚೆ ] ಮನೋಭಾವ ತಗ್ಗಬೇಕು. ಜೊತೆಗಿರುವವರ ಹಿತಕ್ಕಾಗಿ ತಮ್ಮ ಸುಖದ ಕಾಳಜಿಯನ್ನು ಸ್ವಲ್ಪ ಮಟ್ಟಿಗೆ ಪ್ರತಿಯೊಬ್ಬರೂ ಕಡಿಮೆ ಮಾಡದ ಹೊರತು ಒಟ್ಟಾರೆ ಯಾರಿಗೂ ಸುಖ ಸಿಕ್ಕದು.

ಸಂಸಾರದಲ್ಲಿ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ ಇದ್ದರೆ ಕ್ಷಮೆ, ತ್ಯಾಗ ಇವೆರಡೂ ತನ್ನಿಂದ ತಾನೇ ಬಂದು ಅಲ್ಲಿ ಸೇರಿಕೊಳ್ಳುತ್ತದೆ. ಈ ಗುಣಗಳೆಲ್ಲಾ ನಮ್ಮಲ್ಲಿ ತನ್ನಿಂದ ತಾನೇ ಹುಟ್ಟುವ ಕೇಂದ್ರವೆಂದರೆ ಮನೆ. ಅದು ಸಂಸಾರ.

[ ಆಧಾರ : ವಚನ ಭಾರತದ ಪೀಠಿಕೆಯಲ್ಲಿ ಮಾನ್ಯ ಎ. ಆರ್. ಕೃಷ್ಣಶಾಸ್ತ್ರಿಯವರ ಮಾತು ---- ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ತಮ್ಮ ಕೃತಿ ' ಸಪ್ತಪದಿ ಸಂದೇಶ ' ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದು ]


M Ganapathi Kangod

Friday 11 May 2018

ಒಂದು ವಿಶಿಷ್ಟ ಕಾರ್ಯಕ್ರಮ



ಇಂದು ಸಾಗರದ ಗೆಣಸಿನಕುಣಿ ಶ್ರೀ ನಾಗಭೂಷಣ ಹೆಗಡೆಯವರ ಮಗನ ಮದುವೆಯ ವಧೂಪ್ರವೇಶದ ಸತ್ಕಾರ ಸಂಭ್ರಮ. ಅದರಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಸುಮಾರು ನಾಲ್ಕು ಅಡಿ ಉದ್ದದ ವಿಶಿಷ್ಟವಾದ ಕೊಳಲನ್ನು ನುಡಿಸಿ ಅದರ ಸೂಕ್ಷ್ಮತೆಯ ಸೂಚನೆಯಿಂದಾಗಿ ಮತ್ತೊಬ್ಬರು ಬಚ್ಚಿಟ್ಟುಕೊಂಡ ಯಾವುದೇ ವಸ್ತುವನ್ನು ಪತ್ತೆ ಹಚ್ಚುವ ಒಂದು ಜಾನಪದ ಕಲೆ. ಕಲಾವಂತಿಕೆಯ ಚಾತುರ್ಯ. ಒಬ್ಬನ ಕಣ್ಣನ್ನು ಕಟ್ಟಿ ಅವನಿಗೆ ಗೊತ್ತಾಗದಂತೆ ಒಂದು ವಸ್ತುವನ್ನು ಮತ್ತೊಬ್ಬ ವ್ಯಕ್ತಿಯ ಹತ್ತಿರ ಬಚ್ಚಿಟ್ಟಿರುತ್ತಾರೆ. ಕಣ್ಣು ಬಿಚ್ಚಿದ ನಂತರ ಕೊಳಲಿನ ನುಡಿಯ ಸೂಚನೆ ಮೇರೆಗೆ ಅವನು ಅದನ್ನು ಪತ್ತೆ ಹಚ್ಚಿ ತರುತ್ತಾನೆ. ಆ ವಸ್ತು ಬಚ್ಚಿಟ್ಟಿರುವ ಜಾಗವನ್ನು ಕೊಳಲನ್ನು ನುಡಿಸುವವನಿಗೆ ಗೊತ್ತಾಗುವಂತೆ -- ಹುಡುಕುವವನಿಗೆ ಗೊತ್ತಾಗದಂತೆ -- ವ್ಯವಸ್ಥೆ ಮಾಡಲಾಗುತ್ತದೆ. ಏಕೆಂದರೆ ಆ ವಸ್ತು ಎಲ್ಲಿ ಇದೆ ಎಂಬುದನ್ನು ತನ್ನ ಕೊಳಲಿನ ಶ್ರುತಿಯಿಂದಲೇ ಹುಡುಕುವವನಿಗೆ ನುಡಿಸುವವನು ಸೂಚಿಸುತ್ತಾನೆ. ಇಲ್ಲಿ ವಿಶೇಷ ಎಂದರೆ ಕೊಳಲನ್ನು ನುಡಿಸುವವನು ಹುಡುಕುವವನಿಗೆ ತಿಳಿಯುವಂತೆ ಕೊಳಲಿನ ಶ್ರುತಿಯ ಸೂಚನಾ ನುಡಿಯ ಕೌಶಲ್ಯವನ್ನು ಮೆರೆಯಬೇಕು. ಹುಡುಕುವವನು ನುಡಿಸುವವನ ಸೂಚನೆಯನ್ನು ಅರ್ಥಮಾಡಿಕೊಳ್ಳುವ ಕೌಶಲ್ಯವನ್ನು ಹೊಂದಿರಬೇಕು. ತಿಮ್ಮ ನಾಗೂಗೌಡ. ಜಡ್ಡಿಗದ್ದೆ , ವಾನಳ್ಳಿ , ಶಿರಸಿ ತಾಲೂಕು ಇವರು ವಯಸ್ಸಾದ ಮುದುಕರು. ತಮ್ಮ ವಿಶಿಷ್ಟ ಕೊಳಲನ್ನು ನುಡಿಸುತ್ತಾರೆ. ಗಣಪತಿ ಗೌಡ ಎನ್ನುವವರು ಕೊಳಲ ನುಡಿಯ ಸೂಚನೆಯಂತೆ ವಸ್ತುವನ್ನು ಹುಡುಕಿ ತೆಗೆಯುತ್ತಾರೆ.

ಈ ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀ ನಾಗಭೂಷಣ ಹೆಗಡೆಯವರ ಸಂಬಂಧಿ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಶಿರಸಿ ದಂಪತಿಗಳು ಮಾಡಿರುತ್ತಾರೆ. ಅಪರೂಪದ ಜಾನಪದ ಕಲಾವಿದರನ್ನು ಸಾಗರದ ಜನತೆಗೆ ಪರಿಚಯಿಸಿದ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಮತ್ತು ಗಾಯತ್ರಿ ರಾಘವೇಂದ್ರ ಅವರಿಗೆ ಧನ್ಯವಾದಗಳು

https://www.facebook.com/mganapathi.kangod/videos/979174142250156/


ಶ್ರದ್ಧ ಮೇಧಾಮ್ ಯಶಃ ಪ್ರಜ್ಞಾಮ್.. ವಿದ್ಯಾ ಬುದ್ಧಿಮ್ ಶ್ರಿಯಂ ಬಲಂ ...


ಶ್ರದ್ಧೆ ಎಂದರೆ ಒಂದು ವಿಷಯವನ್ನು ತಿಳಿಯುವಲ್ಲಿ ಇರಬೇಕಾದ ಬದ್ಧತೆ. ಮೇಧಾ ಎಂದರೆ ತಿಳಿದುಕೊಂಡ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಿಕೆ. ಪ್ರಜ್ಞಾ ಎಂದರೆ ಅರಿತು, ಮನಸ್ಸಿನಲ್ಲಿ ಇಟ್ಟುಕೊಂಡ ವಿಷಯವನ್ನು ತಕ್ಕ ಕಾಲದಲ್ಲಿ ಸರಿಯಾಗಿ ಬಳಸುವಿಕೆ. ಆದ್ದರಿಂದ ಶೃದ್ಧಾ, ಮೇಧಾ ಮತ್ತು ಪ್ರಜ್ಞಾ ಶಕ್ತಿ ಪ್ರತಿ ಮನುಷ್ಯನಿಗೆ ಅತಿ ಅಗತ್ಯ.

ನಾವು ಪ್ರತಿದಿನ ನಿತ್ಯೆ ಪೂಜೆಯ ಕೊನೆಯಲ್ಲಿ ಪುರುಷೋತ್ತಮ ನನ್ನ (ದೇವರನ್ನು) ಪ್ರಾರ್ಥಿಸುತ್ತೇವೆ ..

" ಶ್ರದ್ಧ ಮೇಧಾಮ್ ಯಶಃ ಪ್ರಜ್ಞಾಮ್.. ವಿದ್ಯಾ ಬುದ್ಧಿಮ್ ಶ್ರಿಯಂ ಬಲಂ ... ಆಯುಷ್ಯಮ್ ತೇಜ ಆರೋಗ್ಯಮ್ ದೇಹಿ ಮೇ ಪುರುಷೋತ್ತಮ .."

ಏನಂತೀರಿ ?



ಕಂಕುಳಲ್ಲಿ ಮಗು ಇಟ್ಟುಕೊಂಡು ಬಾವಿಯಲ್ಲಿ ಮಗುವನ್ನು ಹುಡುಕಿದ್ದಳಂತೆ. ....... ಗಾದೆ.

ತನ್ನ ಸೊಂಟದ ಮೇಲೆ ಮಗುವನ್ನು ಇಟ್ಟುಕೊಂಡ ತಾಯಿ ಅದನ್ನು ಮರೆತು ಮಗುವನ್ನು ಹುಡುಕುತ್ತಾಳೆ. ಎಲ್ಲಿಯೂ ಸಿಗದೇ ಕೊನೆಗೆ ಬಾವಿಯಲ್ಲಿ ಒಮ್ಮೆ ಬಿದ್ದಿದೆಯಾ ಅಂತ ಹಣುಕುತ್ತಾಳೆ. ಬಾವಿಯ ತಿಳಿನೀರಿನಲ್ಲಿ ತನ್ನ ಸೊಂಟದ ಮೇಲೆ ಇರುವ ಮಗುವಿನ ಬಿಂಬ ಕಾಣುತ್ತದೆ. ಅದನ್ನು ಕಂಡು ಭ್ರಮೆಯಿಂದ ' ಅಯ್ಯೋ ನನ್ನ ಮಗು ಬಾವಿಯಲ್ಲಿ ಬಿದ್ದು ಬಿಟ್ಟಿದೆ ಎಂದು ಕೈಯೆತ್ತಿಬಿಡುತ್ತಾಳೆ. ಆಗ ಕಂಕುಳಲ್ಲಿ ಇದ್ದ ಮಗು ನಿಜವಾಗಿಯೂ ಬಾವಿಗೆ ಬಿದ್ದುಬಿಡುತ್ತದೆ. ಇದರ ಇಂಗಿತಾರ್ಥ ಅಂದರೆ ನಾವು ನಮ್ಮ ಆಸೆಯನ್ನು ತೀರಿಸುವ ಸಾಧನವನ್ನು ನಮ್ಮ ತೊತೆಗೆ ಇಟ್ಟುಕೊಂಡು ಮತ್ತೆಲ್ಲೋ ಅರಸಲು ಹೋಗಿ ಅದನ್ನು ಕಳೆದುಕೊಂಡು ಬಿಡುತ್ತೇವೆ.