Tuesday 18 August 2020

$$$$ ಶಿಶುವಿಗೆ ಕರ್ಣವೇಧದ [ ಕಿವಿಯನ್ನು ಚುಚ್ಚುವ ] ಕಾಲ $$$$

 

# ಶಿಶುವಿನ ಜನ್ಮ ದಿನದಿಂದ ಹತ್ತು, ಹನ್ನೆರಡು ಅಥವಾ ಹದಿನಾರನೆಯ ದಿನ ----ಬೃಹಸ್ಪತಿ

# ಶಿಶು ಹುಟ್ಟಿದ ಆರನೆಯ, ಏಳನೆಯ , ಎಂಟನೆಯ ಅಥವಾ ಹನ್ನೆರಡನೆಯ ತಿಂಗಳು ---- ಗರ್ಗ

# ಶಿಶುವು ತಾಯಿಯ ಮಡಿಲಲ್ಲಿಯೇ ಅಧಿಕ ಕಾಲವಿರುವಂತಿರುವ ಸಮಯ ಮತ್ತು ಹಲ್ಲು ಹುಟ್ಟುವ ಮುಂಚೆ --- ಶ್ರೀಪತಿ

# ಶಿಶುವಿನ ಆರನೆಯ ಅಥವಾ ಏಳನೆಯ ತಿಂಗಳು --- ಸುಶ್ರುತ

# ಶಿಶುವಿನ ಮೂರನೇ ಅಥವಾ ಐದನೆಯ ವರ್ಷ -- ಕಾತ್ಯಾಯನ ಸೂತ್ರ

# ಶಿಶುವು ಜನಿಸಿದ ಹನ್ನೆರಡು ಅಥವಾ ಹದಿನಾರನೆಯ ದಿಂದ ಹಗಲಿನಲ್ಲಿ ಮಾಡಬಹುದು. ಈ ಎರಡು ದಿನಕ್ಕೆ ತಾರಾಬಲವನ್ನು ನೋಡಬೇಕಾದುದಿಲ್ಲ. ಇದಾಗದಿದ್ದರೆ ಶಿಶುವು ಹುಟ್ಟಿದ ಆರು, ಏಳು ಅಥವಾ ಎಂಟನೆಯ ತಿಂಗಳಿನಲ್ಲಿ ಶಿಶುವಿಗೆ ತಾರಾಬಲವಿರುವ ದಿನ ಕಿವಿ ಚುಚ್ಚಬಹುದು --- ಜ್ಯೋತಿಷ್ಯಶಾಸ್ತ್ರ

ಹೀಗೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯ ಕಾಲವನ್ನು ಹೇಳಿದ್ದಾರೆ. ಒಟ್ಟಿನಲ್ಲಿ ಶಿಶುವಿನ ಕಿವಿಯು ಬಲಿಯದೆ ಎಳೆಯದಿದ್ದಾಗ ಇದ್ದಾಗ ಕಿವಿ ಚುಚ್ಚುವುದು ಬಹಳ ಸುಲಭ.

ಕಿವಿಯಲ್ಲಿ ಶಂಖುರೇಖೆ ಮತ್ತು ಶಿರೋರೇಖೆ ಎನ್ನುವ ಎರಡು ನರಗಳಿರುತ್ತವೆ. ಅವಕ್ಕೂ ಮೂತ್ರಪಿಂಡಕ್ಕೂ ಸಂಬಂಧವಿರುತ್ತದೆ. ಆ ಎರಡು ನರಗಳು ಒಂದಕ್ಕೊಂದು ತಗುಲಿಕೊಂಡರೆ ಹರ್ನಿಯಾ ಬರುತ್ತದೆ. ಆದ್ದರಿಂದ ಆ ಎರಡು ನರಗಳು ಸೇರಿಕೊಳ್ಳದ ಹಾಗೆ ಅವುಗಳನ್ನು ಗುರುತಿಸಿ ಅವುಗಳ ನಡುವೆ ಕರ್ಣವೇಧಮಾಡುವ ಸಾಮರ್ಥ್ಯವುಳ್ಳ [ ಕಿವಿ ಚುಚ್ಚಬಲ್ಲ ] ವೈದ್ಯನೇ / ವ್ಯಕ್ತಿಯೇ ಕಿವಿಯನ್ನು ಚುಚ್ಚಬೇಕು ಎಂದು ಸುಶ್ರುತರು ಹೇಳಿದ್ದಾರೆ. ಬಂಗಾರದ ಸೂಜಿಯನ್ನು ಮಾಡುವ ಅಕ್ಕಸಾಲಿಗನು ಚುಚ್ಚಬಹುದು ಎಂದು ಶ್ರೀಪತಿಯೆಂಬ ಪ್ರಯೋಗಕಾರರು ಹೇಳಿದ್ದಾರೆ

ಗ್ರಂಥಋಣ : ಸಂಸ್ಕಾರ ಮಹೋದಧಿಹಿ ~~ ಡಾ|| ಎ.ಅನಂತನರಸಿಂಹಾಚಾರ್

$$$ ದರ್ಭ ಸಂಗ್ರಹಣ ಕಾಲ $$$


# ದರ್ಭೆಯನ್ನು ಕತ್ತರಿಸಲು ಬೇರೆ ಬೇರೆ ಸಮಯವನ್ನು ಹೇಳಲಾಗಿದೆ. ಆಯಾ ಸಮಯದಲ್ಲಿ ಕತ್ತರಿಸಿದ ದರ್ಭೆಗೆ ಆಯಾ ಮಿತ ಶಕ್ತಿ ಇರುತ್ತದೆ.
# ಸಾಮಾನ್ಯವಾಗಿ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತರಬೇಕು. ಅಂದು ಕತ್ತರಿಸಿ ತಂದ ದರ್ಭೆಗೆ ಹಳತಾಗುವಿಕೆ ಎನ್ನುವುದಿಲ್ಲ. ಇಡೀ ವರ್ಷಕ್ಕೆ ಅದನ್ನು ಬಳಸಬಹುದು. ಆ ವರ್ಷದಲ್ಲಿ ಖರ್ಚಾಗದೆ ಉಳಿದರೆ ಅದನ್ನು ಮುಂದಿನ ವರ್ಷವೂ ಬಳಸಬಹುದು.
# ಮಹಾಲಯ ಅಮಾವಾಸ್ಯೆಯಂದು ದರ್ಭೆಯನ್ನು ಕತ್ತರಿಸಿ ತರಬಹುದು. ಆದರೆ ಆರು ತಿಂಗಳು ಮಾತ್ರ ಅದರ ಪಾವಿತ್ರ್ಯತೆ ಇರುತ್ತದೆ.
# ಇತರ ಅಮಾವಾಸ್ಯೆ ದಿನಗಳಲ್ಲಿಯೂ ಕತ್ತರಿಸಿ ತರಬಹುದು. ಆದರೆ ಅದರ ಶಕ್ತಿ ಒಂದು ತಿಂಗಳು ಮಾತ್ರ ಇರುತ್ತದೆ.
# ಯಾವುದೇ ಹುಣ್ಣಿಮೆಯಂದು ದರ್ಭೆಯನ್ನು ಕತ್ತರಿಸಿ ತರಬಹುದು. ಆದರೆ ಅದಕ್ಕೆ ಹದಿನೈದು ದಿನ ಶಕ್ತಿ ಇರುತ್ತದೆ.
# ಭಾನುವಾರ ತಂದರೆ ಒಂದು ವಾರ ಶಕ್ತಿ ಇರುತ್ತದೆ.
# ಉಳಿದ ದಿನಗಳಲ್ಲಿ ತಂದರೆ ಆ ದರ್ಭೆಗೆ ಒಂದು ದಿನ ಮಾತ್ರ ಶಕ್ತಿ ಇರುತ್ತದೆ.
# ಯಾವುದೇ ದಿನ ಕತ್ತರಿಸಿ ತಂದ ದರ್ಭೆಯಾದರೂ ಅದನ್ನು ಶ್ರಾವಣ ಬಹುಳ ಅಮಾವಾಸ್ಯೆಯಂದು ತಂದ ದರ್ಭೆಯೊಂದಿಗೆ ಸೇರಿಸಿದರೆ ಅದಕ್ಕೆ ಶ್ರಾವಣ ಬಹುಳ ಅಮಾವಾಸ್ಯೆಯಂದು ತಂದ ದರ್ಭೆಗೆ ಇರುವಷ್ಟೇ ಪಾವಿತ್ರ್ಯತೆ ದೊರಕುತ್ತದೆ. ಅದರ ಹಾಗೆ ಯಾವಾಗ ಬೇಕಾದರೂ ಬಳಸಬಹುದು.
~~ ಗ್ರಂಥಋಣ : ಸಂಸ್ಕಾರ ಮಹೋದಧಿ -- ಸಂ : ಡಾ| ಎ. ಅನಂತನರಸಿಂಹಾಚಾರ್

## ದರ್ಭೆಯಲ್ಲಿ ಭಿನ್ನತೆಗಳು ##


$$ ದರ್ಭೆಯಲ್ಲಿ ಏಳು ಬಗೆಗಳಿವೆ. ವಿಶ್ವಾಮಿತ್ರ, ಕುಶ, ಕಾಶ, ಭತ್ತ, ನಸ, ವಯ.ಮತ್ತು ದೂರ್ವಾ [ ಗರಿಕೆ ಹುಲ್ಲು ]. ರುದ್ರ ಸಂಬಂಧವಾದ ಮತ್ತು ಆಭಿಚಾರಕ ಕೃತ್ಯಗಳಲ್ಲಿ 'ಕಾಶ' ಎನ್ನುವ ದರ್ಭೆಯನ್ನು ಬಳಸಬೇಕು. ಬ್ರಾಹ್ಮಣ ಸಂಸ್ಕಾರಗಳಾದ ಶ್ರೌತ ಸ್ಮಾರ್ತ ಕರ್ಮಗಳಲ್ಲಿ 'ಕುಶ' ದರ್ಭೆಯನ್ನು ಬಳಸಬೇಕು. ಉಪಾಕರ್ಮವೇ ಮುಂತಾದ ಋಷಿ ಪೂಜಾ ಕಾರ್ಯಗಳಲ್ಲಿ 'ದೂರ್ವಾ' ದರ್ಭೆಯನ್ನು ಬಳಸಬೇಕು. ಸುದರ್ಶನ ಹೋಮವೇ ಮೊದಲಾದ ವೈಷ್ಣವ ಕಾರ್ಯದಲ್ಲಿ 'ವಿಶ್ವಾಮಿತ್ರ' ದರ್ಭೆಯನ್ನು ಬಳಸಬೇಕು.
ಆಯಾ ಕಾರ್ಯಗಳಿಗೆ ಹೇಳಿರುವ ನಿರ್ಧಿಷ್ಟ ದರ್ಭೆಗಳು ಸಿಗದಿದ್ದ ಅನಿವಾರ್ಯ ಸನ್ನಿವೇಶದಲ್ಲಿ ಈ ಏಳು ವಿಧ ದರ್ಭೆಗಳಲ್ಲಿ ಯಾವುದೇ ದರ್ಭೆಯನ್ನಾದರೂ ಎಲ್ಲಾ ಕಾರ್ಯಗಳಲ್ಲಿಯೂ ಬಳಸಬಹುದು.
$$ ಮೇಲೆ ಹೇಳಿದ ದರ್ಭೆಗಳಲ್ಲಿ ಲಿಂಗ ಬೇಧವಿದೆ. ದರ್ಭೆಯ ತುದಿ ಭಾಗ [ ಅಗ್ರ ಭಾಗ ] ಸ್ಥೂಲವಾಗಿದ್ದರೆ ಅವು ಸ್ತ್ರೀ ದರ್ಭೆ. ಬುಡದಿಂದ ತುದಿಯವರೆಗೂ ಸಮವಾಗಿದ್ದರೆ ಪುರುಷ ದರ್ಭೆ. ಬುಡ [ ಮೂಲ ಭಾಗ ] ದಪ್ಪನಾಗಿದ್ದರೆ ನಪುಂಸಕ ದರ್ಭೆ.

ಚೌಲ, ಉಪನಯನ, ಉಪಾಕರ್ಮ, ವ್ರತ ಸಮಾವರ್ತನಾದಿ ಪುರುಷ ಸಂಸ್ಕಾರ ಕಾರ್ಯಕ್ರಮಗಳಲ್ಲಿ, ಗಂಡು ಮಗುವಿನ ಜಾತಕರ್ಮ ಇತ್ಯಾದಿ ಪುರುಷ ಸಂಸ್ಕಾರಗಳಲ್ಲಿ ಪುರುಷ ದರ್ಭೆಯನ್ನು ಬಳಸಬೇಕು. ಗರ್ಭಾದಾನ, ಪುಂಸುವನ, ಸೀಮಂತೋನ್ನಯನ ಕರ್ಮಗಳಲ್ಲಿ, ಹೆಣ್ಣು ಶಿಶುವಿನ ಜಾತಕರ್ಮ, ನಾಮಕರಣ, ಅನ್ನಪ್ರಾಶನ ಸಂಸ್ಕಾರಗಳಲ್ಲಿ ಸ್ತ್ರೀ ದರ್ಭೆಯನ್ನು ಬಳಸಬೇಕು. ಉಭಯ ಸಂಸ್ಕಾರ ರೂಪವಾದ ವಿವಾಹದಲ್ಲಿ ಸ್ತ್ರೀ ಪುರುಷ ಈ ಎರಡು ದರ್ಭೆಯನ್ನೂ ಬಳಸಬೇಕು. ಶಾಂತಿ ಕರ್ಮಗಳಲ್ಲಿ ನಪುಂಸಕ ದರ್ಭೆಯನ್ನು ಬಳಸಬೇಕು.
ಆಯಾ ಕಾರ್ಯಕ್ರಮದಲ್ಲಿ ನಿರ್ಧಿಷ್ಟ ಲಿಂಗಬೇಧದ ದರ್ಭೆಗಳು ಸಿಗದಿದ್ದರೆ ಅನಿವಾರ್ಯದಲ್ಲಿ ಎಲ್ಲಾ ಕಾರ್ಯಕ್ರಮದಲ್ಲಿ ಯಾವ ಲಿಂಗದ ದರ್ಭೆಯನ್ನಾದರೂ ಬಳಸಬಹುದು.

[ ಸೂಚನೆ :ಈ ವಿಚಾರಗಳನ್ನು ಎಲ್ಲರೂ ಅನುಸರಿಸುತ್ತಾರೆ ಎಂದು ಭಾವಿಸಿ ನಾನು ಇದನ್ನು ಬರೆಯುತ್ತಿಲ್ಲ. ಆದರೆ ವಿಷಯ ಹೀಗೂ ಇದೆ ಎಂದು ಎಲ್ಲರಿಗೂ ಗೊತ್ತಿರಲಿ ಎಂದು ಬರೆಯುತ್ತಿದ್ದೇನೆ. ]

ಗ್ರಂಥಋಣ : ಸಂಸ್ಕಾರ ಮಹೋದಧಿ -- ಡಾ| ಎ. ಅನಂತನರಸಿಂಹಾಚಾರ್

## ಯಯಾತಿ ##


ಯಯಾತಿಯು ಚಂದ್ರವಂಶದ ರಾಜ. ನಹುಷನ ಮಗ. ಈತನಿಗೆ ಇಬ್ಬರು ಪತ್ನಿಯರು. ಹಿರಿಯ ಪತ್ನಿಯು ಶುಕ್ರಾಚಾರ್ಯರ ಮಗಳಾದ ದೇವಯಾನಿ. ಎರಡನೇ ಪತ್ನಿಯು ರಾಕ್ಷಸ ರಾಜನಾದ ವೃಷಪರ್ವನ ಮಗಳು ಶರ್ಮಿಷ್ಠೆ. ಯಯಾತಿಯು ಈ ಇಬ್ಬರು ಪತ್ನಿಯರಲ್ಲದೆ ವಿಸ್ವಾಚಿ ಎನ್ನುವ ಅಪ್ಸರ ಸ್ತ್ರೀಯನ್ನೂ ತನ್ನ ಪತ್ನಿಯಂತೆ ರಮಿಸುತ್ತಾ ಇದ್ದ.
ದೇವಯಾನಿಗೆ ಯದು ಮತ್ತು ತುರ್ವಸು ಎನ್ನುವ ಒಬ್ಬರು ಮಕ್ಕಳು. ಶರ್ಮಿಷ್ಟೆಗೆ ದ್ರುಹ್ಯು, ಅನು ಮತ್ತು ಪೂರು ಎನ್ನುವ ಮೂರು ಗಂಡುಮಕ್ಕಳು.ಮಾಧವಿ ಎನ್ನುವ ಹೆಣ್ಣುಮಗಳು.

ಶುಕ್ರಾಚಾರ್ಯರ ಮಗಳು ದೇವಯಾನಿಯೂ ರಾಕ್ಷಸರಾಜನಾದ ವೃಷಪರ್ವನ ಮಗಳು ಶರ್ಮಿಷ್ಟೆಯು ತಮ್ಮ ವಿವಾಹ ಪೂರ್ವದಲ್ಲಿಯೇ ಪರಸ್ಪರ ಪರಿಚಯದವರಾಗಿದ್ದರು. ಒಂದು ದಿನ ಅವರಿಬ್ಬರೂ ತಮ್ಮ ಸೀರೆಗಳನ್ನು ಬಿಚ್ಚಿ ಕಾಡಿನಲ್ಲಿರುವ ಕೊಳದ ದಡದಲ್ಲಿಟ್ಟು ಜಲಕ್ರೀಡೆಯಾಡುತ್ತಿರುವಾಗ ಇಂದ್ರನು ಗಾಳಿಯ ರೂಪದಿಂದ ಬಂದು ಎಲ್ಲಾ ಸೀರೆಗಳನ್ನೂ ಒಟ್ಟು ಮಾಡಿದ. ಜಲಕ್ರೀಧೆಯಾಡಿ ಮೊದಲು ಮೇಲೆ ಬಂದ ಶರ್ಮಿಷ್ಟೆಯು ತಿಳಿಯದೆ ದೇವಯಾನಿಯ ಸೀರೆಯನ್ನುಟ್ಟಳು. ಇದರಿಂದ ದೇವಯಾನಿಗೆ ಕೋಪ ಬಂದು ಶರ್ಮಿಷ್ಟೆಯನ್ನು ರಾಕ್ಷಸ ಸ್ತ್ರೀಯೆಂದು ಜರೆಯುತ್ತಾಳೆ. ಕೋಪಗೊಂಡ ಶರ್ಮಿಷ್ಟೆಯು ದೇವಯಾನಿಯನ್ನು ಅಲ್ಲೇ ಇರುವ ಒಂದು ಬಾವಿಗೆ ನೂಕಿ ಹೋಗುತ್ತಾಳೆ. ಆಗಷ್ಟೇ ಬೇಟೆಗಾಗಿ ಅಲ್ಲಿಗೆ ಬಂದ ಯಯಾತಿಯು ಅದನ್ನು ಕಂಡು ದೇವಯಾನಿಯನ್ನು ಮೇಲಕ್ಕೆತ್ತಿ ಬದುಕಿಸಿದ. ತನ್ನನ್ನು ಬದುಕಿಸಿದ ಯಯಾತಿಯೇ ತನ್ನನ್ನು ಮದುವೆಯಾಗಬೇಕೆಂದು ಅವನಲ್ಲಿ ದೇವಯಾನಿಯು ಒತ್ತಾಯಿಸಿ ಅವನ ಒಪ್ಪಿಗೆ ಪಡೆದು ಮನೆಗೆ ಬಂದಳು. ಶರ್ಮಿಷ್ಟೆಯು ತನಗೆ ಮಾಡಿದ ಅಪರಾಧವನ್ನು ತನ್ನ ತಂದೆ ಶುಕ್ರಾಚಾರ್ಯರಿಗೆ ತಿಳಿಸಿದಳು. ಅವರು ಅದನ್ನು ವೃಷಪರ್ವರಾಜನಿಗೆ ತಿಳಿಸಿದರು. ವೃಷಪರ್ವನು ದೇವಯಾನಿಯ ಅಭಿಪ್ರಾಯದಂತೆ ತನ್ನ ಮಗಳನ್ನು ಅವಳು ಮಾಡಿದ ತಪ್ಪಿಗಾಗಿ ದೇವಯಾನಿಯ ದಾಸಿಯನ್ನಾಗಿ ಮಾಡಿದ. ಮುಂದೆ ದೇವಯಾನಿ ಮತ್ತು ಯಯಾತಿಯ ವಿವಾಹವಾಯಿತು. ದಾಸಿಯಾಗಿದ್ದ ಶರ್ಮಿಷ್ಟೆಯೂ ದೇವಯಾನಿಯ ಜೊತೆಗೆ ಯಯಾತಿಯ ಅರಮನೆಗೆ ಹೋದಳು. ಮುಂದೆ ದೇವಯಾನಿಗೆ ಯಯಾತಿಯಿಂದ ಎರಡು ಮಕ್ಕಳಾದರು.
ದೇವಯಾನಿಯ ದಾಸಿಯಾದ ಶರ್ಮಿಷ್ಟೆಯೂ ದೇವಯಾನಿಗೆ ತಿಳಿಯದಂತೆ ಯಯಾತಿಯ ದೈಹಿಕ ಸಂಬಂಧವನ್ನು ಬೆಳೆಸಿದಳು. ಅಲ್ಲದೆ ದ್ರುಹು, ಅನು ಮತ್ತು ಪೂರು ಎಂಬ ಮೂರು ಗಂಡು ಮಕ್ಕಳನ್ನು ಯಯಾತಿಯಿಂದ ಪಡೆದಳು. ನಂತರ ಯಯಾತಿಯು ಶರ್ಮಿಷ್ಟೆಯನ್ನೂ ವಿವಾಹವಾದ ಎನ್ನುವ ವಿಚಾರ ಬೇರೆ.
ಯಯಾತಿಯು ತನ್ನ ದಾಸಿ ಶರ್ಮಿಷ್ಠೆಯ ಕಡೆಗೆ ಹೆಚ್ಚು ಪ್ರೀತಿ ತೋರಿದುದರಿಂದ ದೇವಯಾನಿಗೆ ಅವನ ಮೇಲೆ ಸಿಟ್ಟು ಬಂತು. ಆದ್ದರಿಂದ ತನ್ನ ತಂದೆ ಶುಕ್ರಾಚಾರ್ಯರಿಂದ ತನ್ನ ಗಂಡನಾದ ಯಯಾತಿಗೆ ಅಕಾಲ ವೃದ್ಯಾಪ್ಯವು [ ಮುದಿತನ ] ಬರುವಂತೆ ಶಾಪ ಕೊಡಿಸಿದಳು. ಯಯಾತಿಯು ಶಾಪ ವಿಮೋಚನೆಗಾಗಿ ಶುಕ್ರಾಚಾರ್ಯರನ್ನು ಪ್ರಾರ್ಥಿಸಿದ. ನಂತರ ಶುಕ್ರಾಚಾರ್ಯರು ಮುದಿತನವನ್ನು ನಿನ್ನ ಮಕ್ಕಳಿಗೆ ಕೊಟ್ಟು ಅವರಿಂದ ಯೌವನವನ್ನು ಸ್ವೀಕರಿಸು. ಮುಪ್ಪನ್ನು ಸ್ವೀಕರಿಸಿದ ಮಗನಿಗೆ ಸಿಂಹಾಸನವನ್ನು ಕೊಡು ಎಂದರು.
ಶುಕ್ರಾಚಾರ್ಯರ ಸೂಚನೆಯಂತೆ ತನ್ನ ವೃದ್ಯಾಪ್ಯವನ್ನು ಸ್ವೀಕರಿಸುವಂತೆ ಯಯಾತಿಯು ತನ್ನ ಐವರು ಗಂಡುಮಕ್ಕಳಿಗೆ ಹೇಳಿದ. ಶರ್ಮಿಷ್ಠೆಯ ಮೂರನೆಯ ಮಗನಾದ ಪೂರು ಮಾತ್ರ ತನ್ನ ತಂದೆಯ ವೃದ್ಯಾಪ್ಯವನ್ನು ಸಂತೋಷದಿಂದ ಸ್ವೀಕರಿಸಿದ. ತನ್ನ ಯೌವನವನ್ನು ತಂದೆಗೆ ಕೊಟ್ಟ. ಉಳಿದ ಮಕ್ಕಳು ತಂದೆಯ ಮಾತನ್ನು ತಿರಸ್ಕರಿಸಿದರು.ತನ್ನ ಮುದಿತನವನ್ನು ಕೈಗೊಂಡು ತಮ್ಮ ಯೌವನವನ್ನು ತನಗೆ ಕೊಡಲು ಸಮ್ಮತಿಸದ ಆ ನಾಲ್ಕು ಮಕ್ಕಳಿಗೆ ಯಯಾತಿಯು ಶಾಪ ಕೊಟ್ಟ. ಅವನ ಯೌವನವನ್ನು ತನಗೆ ಕೊಟ್ಟ ಪೂರುವಿನ ವಂಶಜರೇ ರಾಜ್ಯಭಾರ ಮಾಡುವಂತೆ ಯಯಾತಿಯು ಅನುಗ್ರಹಿಸಿದನು.ಅಲ್ಲದೆ ಅವನಿಗೆ ವರಗಳನ್ನೂ ಕೊಟ್ಟ.

ಕೆಲವು ಕಾಲದ ನಂತರ ಯಯಾತಿಗೆ ವೈರಾಗ್ಯ ಹುಟ್ಟಿತು.ವಿಷಯ ಸುಖವು ಅದರ ಸೇವನೆಯಿಂದ ಹೆಚ್ಚುತ್ತದೆಯೇ ವಿನಃ ತಗ್ಗುವುದಿಲ್ಲ ಎನ್ನುವ ಸತ್ಯವನ್ನು ಕೊನೆಯಲ್ಲಿ ಕಂಡುಕೊಂಡ.ಅದಕ್ಕಾಗಿ ಪುನಃ ಪೂರುವಿಗೆ ಅವನ ಯೌವನವನ್ನು ಹಿಂದಕ್ಕೆ ಕೊಟ್ಟು ತನ್ನ ಮುದಿತನವನ್ನೇ ಸ್ವೀಕರಿಸಿದ. ವೈರಾಗ್ಯ ತಾಳಿ ವಾನಪ್ರಸ್ಥಾಶ್ರಮವನ್ನು ಕೈಗೊಂಡು ತಪಸ್ಸಿಗಾಗಿ ಅರಣ್ಯಕ್ಕೆ ಹೋದ.

ಯಯಾತಿಯು ಸ್ವರ್ಗಕ್ಕೆ ಹೋದ ಮೇಲೆ ಅಲ್ಲಿದ್ದ ಹಿರಿಯರನ್ನೆಲ್ಲಾ ಕೀಳುದೃಷ್ಟಿಯಿಂದ ನೋಡಲು ಪ್ರಾರಂಭಿಸಿದ. ಸ್ವರ್ಗದ ಸುಖಗಳನ್ನೆಲ್ಲಾ ಅನುಭವಿಸಿ ಕ್ಷೀಣಪುಣ್ಯನಾದ. ಅದರಿಂದಾಗಿ ಮತ್ತೆ ಭೂಮಿಗೆ ಬಿದ್ದ


 ------------

 ಎಂ. ಗಣಪತಿ ಕಾನುಗೋಡು 

ತಾರೀಖು : 10 - 7 -2020

## ದೇವಯಾನಿಯ ಪ್ರೇಮ ಪ್ರಕರಣ ##


ದೇವಯಾನಿಯು ಬ್ರಾಹ್ಮಣನೂ ಅಸುರರ ಗುರುವೂ ಆದ ಶುಕ್ರಾಚಾರ್ಯನ ಮಗಳು. ತನ್ನ ತಂದೆಯಿಂದ ಮೃತಸಂಜೀವಿನಿ ಮಂತ್ರ ಕಲಿಯಲು ತಮ್ಮ ಆಶ್ರಮಕ್ಕೆ ಗುರುಕುಲ ವಾಸಕ್ಕಾಗಿ ಬಂದ ಕಚನನ್ನು ಪ್ರೇಮಿಸುತ್ತಾಳೆ. ಆದರೆ ಅದು one way love ಆಗಿತ್ತು. ಕಚನು ಯಾವ ಕಾರಣಕ್ಕೂ ಅವಳನ್ನು ಪ್ರೇಮಿಸಲು ಸಿದ್ಧನಿರಲಿಲ್ಲ. ಆ ವಿಶಿಷ್ಟ ಮಂತ್ರವನ್ನು ಕಲಿತುಕೊಂಡು ಹೋಗುವುದೊಂದೇ ಅವನ ಮುಖ್ಯ ಗುರಿಯಾಗಿತ್ತು.

ಕಚನ ತಂದೆ ದೇವಗುರು ಬೃಹಸ್ಪತಾಚಾರ್ಯರು. ' ಮೃತ ಸಂಜೀವಿನಿ ಮಂತ್ರವನ್ನು ಕಲಿತುಕೊಂಡು ಬಂದರೆ ತಾನು ಮಾಡುವ ಯಜ್ಞ ದಲ್ಲಿ ಅವನಿಗೂ ಹವಿರ್ಭಾಗ ಸಿಗುತ್ತದೆ ' ಎಂದು ಅವನಿಗೆ ಹೇಳಿದ್ದರು. ' ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಸಂತೋಷಪಡಿಸಿದರೆ ನಿನಗೆ ಆ ವಿದ್ಯೆ ಸುಲಭವಾಗಿ ಲಭಿಸುತ್ತದೆ ' ಎಂದೂ ಅವನಿಗೆ ತಿಳಿಸಿದ್ದರು. ಹೇಗೂ ಆ ವಿದ್ಯೆಯನ್ನು ಕಲಿತುಕೊಂಡೆ ಬರಬೇಕು ಎನುವುದು ಅವನ ಮನೋತರಪೇತಿಯಾಗಿತ್ತು.
ಮೃತಸಂಜೀವಿನಿ ಮಂತ್ರ ಎಂದರೆ ಸತ್ತವರನ್ನು ಬದುಕಿಸುವ ಒಂದು ವಿಶೇಷ ಮಂತ್ರ . ಶುಕ್ರಾಚಾರ್ಯರು ಒಂದು ಸಾವಿರ ವರ್ಷ ಧೂಮಪಾನ ಮಾಡುತ್ತಾ ತಲೆಕೆಳಗಾಗಿ ತಪಸ್ಸನ್ನು ( ಧೂಮವ್ರತ ತಪಸ್ಸು ) ಮಾಡಿ ಶಿವನಿಂದ ಆ ವಿದ್ಯೆಯನ್ನು ಬಹಳ ಶ್ರಮದಿಂದ ತನ್ನ ವಶಮಾಡಿಕೊಂಡಿದ್ದರು. ದೇವತೆಗಳು ರಾಕ್ಷರನ್ನು ಕೊಂದಾಗ ಅವರೆಲ್ಲರನ್ನೂ ಶುಕ್ರಾಚಾರ್ಯ ಆ ಮಂತ್ರದ ಬಲದಿಂದ ಬದುಕಿಸಿಬಿಡುತ್ತಿದ್ದ. ಆದ್ದರಿಂದ ರಾಕ್ಷಸರು ದೇವತೆಗಳನ್ನು ಧ್ವಂಸ ಮಾಡಿದಾಗಲೂ ಬಳಸಿಕೊಳ್ಳಲು ಈ ಮಂತ್ರವನ್ನು ಹೇಗಾದರೂ ಮಾಡಿ ಕಲಿತುಕೊಂಡು ಬರಲಿಕ್ಕಾಗಿ ಕಚನನ್ನು ಬ್ರಹಸ್ಪತಿಯು ಶುಕ್ರಾಚಾರ್ಯನಲ್ಲಿಗೆ ಕಳಿಸಿರುತ್ತಾನೆ.

ಈ ಎಚ್ಚರ ಕಚನಿಗೆ ಬಹಳ ಚೆನ್ನಾಗಿ ಇತ್ತು. ಆ ಕಾರಣಕ್ಕಾಗಿ ಆತ ಶುಕ್ರಾಚಾರ್ಯರಲ್ಲಿ ಬಹಳ ಭಯ ಭಕ್ತಿಯಿಂದ ವರ್ತಿಸಿಕೊಂಡಿದ್ದ. ಯಾವ ಘಳಿಗೆಯಲ್ಲಿಯೂ ಅವರ ಮುನಿಸಿಗೆ ಕಾರಣವಾಗದಂತೆ ಅವನ ವರ್ತನೆ ಇತ್ತು. ತಾನು ಅಲ್ಲಿಗೆ ಬಂದ ಉದ್ದೇಶ ಈಡೇರಿಕೆಗಾಗಿ ತನ್ನ ದಾರಿ ತಪ್ಪದಂತೆ ಜಾಗರೂಕತೆ ವಹಿಸಿದ್ದ. ಎಷ್ಟು ಹೊತ್ತಿಗೂ ದೇವಯಾನಿಯ ಪ್ರೇಮದ ಬುಟ್ಟಿಗೆ ಅವನು ಬೀಳುವ ಪ್ರಮೇಯವೇ ಇರಲಿಲ್ಲ.

ಹಾಗಂತ ಆತ ತನ್ನ ತಂದೆಯ ಮಾತಿನಂತೆ ಅವಳನ್ನು ಸಂತೋಷಪಡಿಸುವುದರಲ್ಲೇ ನಿರತನಾಗಿದ್ದ . ಶುಕ್ರಾಚಾರ್ಯರ ಸೇವೆಯ ಜೊತೆಗೆ ಅವಳು ಹೇಳಿದ ಕೆಲಸವನ್ನೂ ಪ್ರತಿದಿನ ಮಾಡಿಕೊಡುತ್ತಿದ್ದ. ಅವಳನ್ನು ಸಂತೋಷಪಡಿಸುವುದಕ್ಕಾಗಿ ಹೂಗಳನ್ನು ಕೊಯ್ದು ತರುವುದು, ಅವುಗಳನ್ನು ಕಟ್ಟುವುದು ಹೀಗೆ... ಹೀಗೆ. ಕೆಸವಿನ ಎಲೆಯ ಮೇಲಿನ ನೀರಿನಂತೆ -- ಸ್ಪರ್ಶವಿದ್ದರೂ ಆಕರ್ಷವಿರಲಿಲ್ಲ. ದೇವಯಾನಿಯೂ ಏಕಾಂತದಲ್ಲಿ ಅವನೊಡನೆ ಆಡುವುದು, ಹಾಡುವುದು ಅಲ್ಲದೆ ಅವನ ಸೇವೆಯನ್ನು ಮಾಡುತ್ತಿದ್ದಳು -- ಒಣಹುಲ್ಲನ್ನು ಬೆಂಕಿ ಆಕರ್ಷಿಸುವ ಹಾಗೆ. ಹೊರಗಿನ ವರ್ತನೆ ಇಬ್ಬರದೂ ಒಂದೇ ಆಗಿ ಕಂಡರೂ ಒಳಗಿನ ಗುರಿ ಇಬ್ಬರದೂ ಬೇರೆ ಬೇರೆಯದೇ ಆಗಿತ್ತು. ದೇವಯಾನಿಯದು ಕಚನನ್ನು ಒಳಗೆ ಹಾಕಿಕೊಳ್ಳಬೇಕೆನ್ನುವುದು . ಕಚನದು ಮೃತಸಂಜೀವಿನಿ ವಿಶೇಷ ಮಂತ್ರವನ್ನು ಅವಳ ತಂದೆಯಿಂದ ಒಳಗೆ ಹಾಕಿಕೊಳ್ಳಬೇಕೆನ್ನುವುದು. ಅದಕ್ಕಾಗಿ ಶುಕ್ರಾಚಾರ್ಯರ ಪ್ರಿಯ ಶಿಷ್ಯನಾಗಿ ಬ್ರಹ್ಮಚರ್ಯ ವ್ರತದಲ್ಲಿಯೇ ಇದ್ದ.

ಕಚನು ಶುಕ್ರಾಚಾರ್ಯರಿಂದ ಆ ಮಂತ್ರವನ್ನು ಕಲಿಯಬಾರದು, ಅದನ್ನು ಹೇಗಾದರೂ ತಪ್ಪಿಸಬೇಕು ಎಂದು ಅಸುರರೂ ಹೊಂಚು ಹಾಕುತ್ತಿದ್ದರು. ಏಕೆಂದರೆ ಆ ಮಂತ್ರವು ತಮ್ಮ ಬಚಾವಿಗಾಗಿಯೇ ಶುಕ್ರಾಚಾರ್ಯರು ಸಂಪಾದಿಸಿಕೊಂಡಿದ್ದು. ಅದು ತಮ್ಮ ವಿರುದ್ಧದ ಒಂದು ಸನ್ನಾಹ ಎಂದು ಅವರಿಗೆ ಗೊತ್ತಿರಬೇಕು. ಅದಕ್ಕಾಗಿ ಅವರು ಅವನನ್ನು ಎರಡು ಸಾರಿ ಕತ್ತರಿಸಿ ಹಾಕಿದರು. ಆಗ ದೇವಯಾನಿಯು ತನ್ನ ತಂದೆಯ ಹತ್ತಿರ ಅವನನ್ನು ಮೃತ ಸಂಜೀವಿನಿ ಮಂತ್ರದಿಂದ ಬದುಕಿಸಿ ಎಂದು ಗೋಗರೆದಳು. ಏಕೆಂದರೆ ಅವಳು ಅಷ್ಟರ ಮಟ್ಟಿಗೆ ಅವನ ಭ್ರಮೆಯಲ್ಲಿ ಮುಳುಗಿದ್ದಳು. ಮಗಳ ಮಾತಿನಂತೆ ಶುಕ್ರಾಚಾರ್ಯ ಅವನನ್ನು ಎರಡು ಸಾರಿಯೂ ಬದುಕಿಸಿದ. ಇದನ್ನು ಕಂಡುಕೊಂಡ ರಾಕ್ಷರರು ಶುಕ್ರಾಚಾರ್ಯನ ಮೇಲೆ ಸಿಟ್ಟು ಮಾಡಿಕೊಂಡು ಮೂರನೆಯ ಸಲ ಕಚನನ್ನು ಕೊಂದು ಅವನ ದೇಹವನ್ನು ಉಳಿಸದೆ ಸುಟ್ಟು ಬೂದಿ ಮಾಡಿ ಮದ್ಯದಲ್ಲಿ ಹಾಕಿ ಶುಕ್ರಾಚಾರ್ಯರಿಗೇ ಕುಡಿಸಿದರು. ಏಕೆಂದರೆ ಆ ಮಂತ್ರದಿಂದ ಅವನನ್ನು ಬದುಕಿಸಲು ಹೊರಟರೆ ಅವರ ಹೊಟ್ಟೆ ಸೀಳಿ ಅವರೇ ಸಾಯುತ್ತಾರೆ. ಅದರಿಂದ ಅವರು ಅವನನ್ನು ಇನ್ನು ಬದುಕಿಸುವುದಿಲ್ಲ ಎನ್ನುವುದು ಅವರ ಯೋಚನೆ . ಅಂದು ಸಂಜೆ ಮನೆಗೆ ಬಾರದ ಕಚನನ್ನು ಅಂದೂ ಅವನು ಮತ್ತೆ ಸತ್ತಿರಬೇಕು ಎನ್ನುವುದನ್ನು ಗ್ರಹಿಸಿ ಅವನನ್ನು ಬದುಕಿಸಿಕೊಡಬೇಕೆಂದು ದೇವಯಾನಿ ಪುನಃ ತನ್ನ ತಂದೆಯನ್ನು ಕಟುವಾಗಿ ಒತ್ತಾಯಿಸಿದಳು. ಏಕೆಂದರೆ ಒಂದು ದಿನವೂ ಅವನನ್ನು ಬಿಟ್ಟು ಇರಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಮಗಳ ಒತ್ತಾಯಕ್ಕೆ ಮಣಿದು ಶುಕ್ರಾಚಾರ್ಯರು ಕಚನು ತನ್ನ ಹೊಟ್ಟೆಯಲ್ಲಿಯೇ ಇರುವುದನ್ನು ತಿಳಿಯದೆ ಸಂಜೀವಿನಿ ಮಂತ್ರವನ್ನು ಉಚ್ಚರಿಸುತ್ತಿರುವಾಗ ಅವರ ಹೊಟ್ಟೆಯಿಂದಲೇ ಕಚನು ' ನಾನು ನಿಮ್ಮ ಹೊಟ್ಟೆಯಲ್ಲಿಯೇ ಇದ್ದೇನೆ , ಹೇಗೆ ಹೊಟ್ಟೆಯನ್ನು ಸೀಳಿಕೊಂಡು ಬರಲಿ ' ಎನ್ನುತ್ತಾನೆ. ಆಗ ಶುಕ್ರಾಚಾರ್ಯರು ಹೊಟ್ಟೆಯಲ್ಲಿದ್ದ ಕಚನಿಗೆ ಮೃತಸಂಜೀವಿನಿ ಮಂತ್ರೋಪದೇಶ ಮಾಡಿದರು. ಆಚಾರ್ಯ ದೇಹದಿಂದ ಹೊರಬಂದು ಅವರಿಂದ ತಾನು ಪಡೆದ ಮಂತ್ರದ ಬಲದಿಂದ ಮರಳಿ ಅವರನ್ನು ಬದುಕಿಸುತ್ತಾನೆ. ಅಲ್ಲಿಗೆ ಕಚನಿಗೆ ತಾನು ಅಲ್ಲಿಗೆ ಬಂದ ಉದ್ದೇಶ ನೆರವೇರುತ್ತದೆ. ತಂದೆಯ ಮಾತಿನಂತೆ ಶುಕ್ರಾಚಾರ್ಯನುಗೆ ನಿಷ್ಟನಾಗಿದ್ದುದು ಹಾಗೆಯೇ ಅವನ ಮಗಳಿಗೆ ಸಂತೋಷವಾಗುವಂತೆ ತಾನು ನಡೆದುಕೊಂಡಿದ್ದು ಸಫಲವಾಗುತ್ತದೆ. ಮಾತಿನಂತೆ ಗಳಿಸಿದ ವಿದ್ಯೆಯ ಯಶಸ್ವಿ ಪ್ರಯೋಗವೂ ಅಲ್ಲಿಯೇ ನಡೆಯುತ್ತದೆ. ಆಚಾರ್ಯರ ಒಪ್ಪಿಗೆ ಪಡೆದು ದೇವಲೋಕಕ್ಕೆ ಮರಳಲು ಅಣಿಯಾಗುತ್ತಾನೆ.

ಇಲ್ಲಿಯೇ ದೇವಯಾನಿಯ ಪ್ರೇಮ ಪಾರಮ್ಯ ಸ್ಪೋಟವಾಗುತ್ತದೆ. ಇಷ್ಟೂ ದಿನ ನಾನು ನಿನ್ನನ್ನು ಬಹಳವಾಗಿ ಪ್ರೀತಿಸಿದೆ. ನಿನ್ನೊಡನೆ ಲಾಸ್ಯವಾಡಿದೆ. ನೀನೂ ನನ್ನೊಡನೆ ಸಹಕರಿಸಿದೆ. ಮೂರು ಸಲ ರಾಕ್ಷಸರು ನಿನ್ನನ್ನು ಕಡಿದು ಕೊಚ್ಚಿ ಕೊಂದು ಹಾಕಿದರೂ ನನ್ನ ಅಪ್ಪನಿಗೆ ದುಂಬಾಲು ಬಿದ್ದು ನಿನ್ನನ್ನು ಬದುಕಿಸಿಕೊಂಡೆ. ಇಷ್ಟೆಲ್ಲಾ ಮಾಡಿದ್ದು ನೀನು ನನಗೆ ಬೇಕು ಎಂದಲ್ಲವೇ ?. ನಿನ್ನನ್ನು ನಾನು ಬಹಳವಾಗಿ ಮನಸಾ ಹಚ್ಚಿಕೊಂಡಿದ್ದೇನೆ. ನನ್ನನ್ನು ಪಾಣಿಗ್ರಹಣ ಮಾಡಿಕೊ ಎಂದು ಕಚನಿಗೆ ಜೋತು ಬೀಳುತ್ತಾಳೆ. ಎಂದೂ ಅವಳು ಅವನ ಮನಸಿನಲ್ಲಿ ಇರಲಿಲ್ಲ . ಇದ್ದುದು ಮಂತ್ರವಿದ್ಯೆಯ ಗಳಿಕೆಯೊಂದೇ. ಅದು ಪೂರೈಸಿತ್ತು.
' ನೀನು ನನಗೆ ಗುರುಪುತ್ರಿ.ನನಗೆ ಪೂಜ್ಯಳು . ನಿನ್ನನ್ನು ಮದುವೆಯಾಗಲಾರೆ' ಎಂದು ತಿರಸ್ಕರಿಸಿ ಹೊರಟುಹೋದ. ಆಗ ದೇವಯಾನಿಯು ಅಶಾಭಂಗಳಾಗುತ್ತಾಳೆ. ಭಗ್ನಪ್ರೇಮಿಯಾಗುತ್ತಾಳೆ. ಹತಾಶಳಾಗಿ ತನ್ನ ತಂದೆಯಿಂದ ಕಲಿತ ಮಂತ್ರವಿದ್ಯೆ ನಿನಗೆ ಫಲಿಸದಿರಲಿ ಎಂದು ಶಪಿಸುತ್ತಾಳೆ. 'ನನಗಲ್ಲದಿದ್ದರೂ ನನ್ನಿಂದ ಉಪದೇಶ ಪಡೆದವರಿಗೆ ಅದು ಫಲಿಸಿದರೆ ಸಾಕು' ಎಂದು ಎಂದು ಕಚ ಅಲ್ಲಿಗೂ ಸ್ಥಿತಪ್ರಜ್ಞನಾಗಿಯೇ ಇರುತ್ತಾನೆ. ಜೊತೆಗೆ , ' ನೀನು ಮಾತ್ರ ಸಂಪನ್ನನಾದ, ವಿದ್ವಾಂಸನಾದ ಬ್ರಾಹ್ಮಣಶ್ರೇಷ್ಠನ ಮಗಳಾಗಿದ್ದರೂ ಧರ್ಮವಿರುದ್ಧವಾದ ಕಾರ್ಯದಲ್ಲಿ ನನಗೆ ಇಷ್ಟವಿಲ್ಲದೆ ಇದ್ದರೂ ನನ್ನನ್ನು ಬಲಾತ್ಕರಿಸಿದೆ. ಅದಕ್ಕಾಗಿ ಯಾವ ಬ್ರಾಹ್ಮಣನೂ ನಿನ್ನನ್ನು ಮದುವೆಯಾಗದೇ ಇರಲಿ ಎಂದು ಮರುಶಾಪ ಕೊಟ್ಟು ಹೊರಟುಹೋಗುತ್ತಾನೆ. ಇದರಿಂದ ದೇವಯಾನಿ ಮತ್ತಷ್ಟು ಹತಾಶಳಾಗುತ್ತಾಳೆ.
ಅದಕ್ಕಾಗಿಯೇ ದೇವಯಾನಿ ಮತ್ತೊಂದು ದಿನ ಯಯಾತಿ ಎನ್ನುವ ಕ್ಷತ್ರಿಯನನ್ನು ಮದುವೆಯಾಗುವ ಪ್ರಸಂಗ ಬರುತ್ತದೆ. ಅದೂ ಕೂಡ ಒಂದು ರೀತಿಯಲ್ಲಿ ಪ್ರೇಮ ವಿವಾಹವೇ. ತನ್ನ ಗೆಳತಿಯಿಂದ ಬಾವಿಯಲ್ಲಿ ನೂಕಲ್ಪಟ್ಟು ಆ ಸಮಯದಲ್ಲಿ ಮೇಲೆತ್ತಿ ಬದುಕಿಸಿದ ಒಬ್ಬ ಕ್ಷತ್ರಿಯನಾದ ಯಯಾತಿಯನ್ನು ಮೆಚ್ಚಿ ತನ್ನನ್ನೇ ಮದುವೆಯಾಗಲು ಒತ್ತಾಯಿಸಿ ಮದುವೆಯಾಗುತ್ತಾಳೆ. ಆ ಮದುವೆಯ ನಂತರವೂ ತನ್ನ ದಾಸಿಯೊಡನೆ ದೈಹಿಕ ಸಂಪರ್ಕ ಹೊಂದಿದನೆಂಬ ಸಿಟ್ಟಿಗೆ ತನ್ನ ಅಪ್ಪ ಶುಕ್ರಾಚಾರ್ಯರಿಂದ ತನ್ನ ಗಂಡ ಯಯಾತಿಗೆ ಅಕಾಲ ಮುಪ್ಪು ಬರಲಿ ಎಂದು ಶಾಪವನ್ನು ಕೊಡಿಸಿ ಅವನ ಬದುಕನ್ನೂ ಹಾಳುಗೆಡುವುತ್ತಾಳೆ. ತಾನೂ ತೊಂದರೆಗೆ ಸಿಲುಕಿಕೊಳ್ಳುತ್ತಾಳೆ.
love ಎನ್ನುವುದು ಏಕಮುಖವಾಗಿದ್ದರೆ, ಅದು ವಿವೇಚನಾಪೂರಿತವಾಗದೆ ಇದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ದೇವಯಾನಿಯ ಪ್ರೇಮ ಪ್ರಕರಣವೇ ಒಂದು ಉತ್ತರವಾಗುತ್ತದೆ.


~~~~~ ಎಂ. ಗಣಪತಿ ಕಾನುಗೋಡು.
ತಾರೀಖು : 9 - 7 - 2020

## ನಮಸ್ಕಾರಗಳ ಬಗೆಗಳು ##

1. ಅಷ್ಟಾಂಗ ನಮಸ್ಕಾರ : ಎದೆ, ತಲೆ, ಕೈಗಳು, ಕಾಲುಗಳು, ಮಂಡಿಗಳು ಚೆನ್ನಾಗಿ ನೆಲದಲ್ಲಿ ತಗಲುವಂತೆ ನಮಸ್ಕಾರ ಮಾಡುವುದಲ್ಲದೆ ಮನಸ್ಸಿನಿಂದಲೂ ನಾಡಿಗಳಿಂದಲೂ ' ನಮಃ ' ಶಬ್ದಾರ್ಥವನ್ನು ಧ್ಯಾನ ಮಾಡುತ್ತಾ ' ನಮಃ ' ಎಂದು ಬಾಯಿಂದ ಹೇಳಿ ನಮಸ್ಕರಿಸುವಿಕೆಗೆ ಅಷ್ಟಾಂಗ ( ಸಾಷ್ಟಾಂಗ ) ನಮಸ್ಕಾರ ಎಂದು ಹೆಸರು. 

2. ದಂಡವತ್ ಪ್ರಣಾಮ : ಕೈಕಾಲುಗಳನ್ನು ನೀಡಿ ಬಿದ್ದಿರುವ ಕೋಲಿನಂತೆ ಭೂಮಿಯ ಮೇಲೆ ಕೆಳಮುಖವಾಗಿ ಎರಡು ಅಂಗೈಗಳನ್ನೂ ಕೂಡಿಸಿ ಅಂಜಲಿ ಮಾಡಿ ನಮಸ್ಕರಿಸುವಿಕೆಗೆ ದಂಡವತ್ ಪ್ರಣಾಮ ಎಂದು ಹೆಸರು.

3. ಪಂಚಾಗ ನಮಸ್ಕಾರ : ಕಾಲು ಬೆರಳುಗಳಿಂದಲೂ ಮಂಡಿಗಳಿಂದಲೂ, ತಲೆಯಿಂದಲೂ ಭೂಮಿಯನ್ನು ಸ್ಪರ್ಶಿಸಿ, ಬಗ್ಗಿ ನಮಸ್ಕರಿಸಿ, ತಲೆಯ ಮೇಲೆ ಎರಡು ಕೈಗಳನ್ನೂ ಸೇರಿಸಿ ಅಂಜಲಿ ಮಾಡುವಿಕೆಗೆ ಪಂಚಾಗ ನಮಸ್ಕಾರ ಎನ್ನುತ್ತಾರೆ. 4. ಮಸ್ತಿಷ್ಕ ಪ್ರಣಾಮ : ತಲೆಯಮೇಲೆ ಎರಡು ಕೈಗಳನ್ನೂ ಜೋಡಿಸಿ ಕೈ ಮುಗಿಯುವಿಕೆಗೆ ಮಸ್ತಿಷ್ಕ ಪ್ರಣಾಮ ಎಂದು ಹೆಸರು. 

5. ಸಂಪುಟ ಪ್ರಣಾಮ : ಎದೆಯ ಮೇಲೆ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುವಿಕೆಗೆ ಸಂಪುಟ ಪ್ರಣಾಮ ಎಂದು ಹೆಸರು. . 

6. ಪ್ರಹ್ವಾಂಗ ಪ್ರಣಾಮ : ಬಗ್ಗಿಸಲ್ಪಟ್ಟ ಅವಯವವುಳ್ಳವನಾಗಿ ಸಂಪುಟ ಪ್ರಣಾಮವನ್ನು ಮಾಡಿದರೆ ಅದಕ್ಕೆ ಪ್ರಹ್ವಾಂಗ ಪ್ರಣಾಮ ಎಂದು ಹೆಸರು. 

ಟಿಪ್ಪಣಿ : ಸ್ತ್ರೀಯರ ಕುಚಗಳು ಭೂಮಿಗೆ ತಗುಲಬಾರದೆಂಬ ಶಾಸ್ತ್ರವಿರುವುದರಿಂದ ಸ್ತ್ರೀಯರು ಅಷ್ಟಾಂಗ ಮತ್ತು ದಂಡವತ್ ಪ್ರಣಾಮವನ್ನು ಮಾಡಬಾರದು. 


ಗ್ರಂಥಋಣ : ಸಂಸ್ಕಾರ ಮಹೋದಧಿ -- ಮಹಾಮಹೋಪಾಧ್ಯಾಯ ಡಾ : ಎ. ಅನಂತನರಸಿಂಹಾಚಾರ್.

## ಕ್ಷತ್ರಿಯ ವಿಶ್ವರಥ --- ಬ್ರಾಹ್ಮಣ ವಿಶ್ವಾಮಿತ್ರ ##


ವಿಶ್ವಾಮಿತ್ರ ಚಂದ್ರವಂಶದ ಕುಶಿಕ ವಂಶದವನಾದ ಗಾಧಿರಾಜನ ಮಗ . ಕುಶಿಕ ವಂಶದವನಾದ್ದರಿಂದ ಕೌಶಿಕ ಎಂದೂ ಇವನನ್ನು ಕರೆದದ್ದುಂಟು. ಆದರೆ ಅದು ಅವನ ಮೂಲ ಹೆಸರಲ್ಲ. ಆತ ಮೂಲತಃ ಒಬ್ಬ ಕ್ಷತ್ರಿಯನಾಗಿ ಅರಸನಾಗಿದ್ದ.. ಆಗ ಅವನ ಹೆಸರು ' ವಿಶ್ವರಥ ' ಎಂದಾಗಿತ್ತು. ಮೊದಲು ಕ್ಷತ್ರಿಯನಾಗಿ ಜನಿಸಿ ಕೊನೆಗೆ ತನ್ನ ತಪೋಮಹಿಮೆಯಿಂದ ಬ್ರಾಹ್ಮಣನಾದ. ಅದಕ್ಕೆ ಒಂದು ಕಾರಣವಿದೆ. ಆತ ಕ್ಷತ್ರಿಯನಾಗಿದ್ದಾಗ ಜಗತ್ತಿನ ರಾಜಮಹಾರಾಜರುಗಳನ್ನೆಲ್ಲಾ ಜಯಿಸಿ ರಾಜಧಾನಿಗೆ ಮರಳುತ್ತಿದ್ದಾಗ ದಾರಿಯಲ್ಲಿದ್ದ ವಸಿಷ್ಟನ ಆಶ್ರಮದಲ್ಲಿ ಮಧ್ಯಾಹ್ನದ ಹೊತ್ತಿಗೆ ಸೈನ್ಯಸಮೇತ ತಂಗುತ್ತಾನೆ. ಅಲ್ಲಿದ್ದ ನಂದಿನೀಧೇನುವನ್ನು ಮೆಚ್ಚಿ ಬಲಾತ್ಕಾರದಿಂದ ಸೆಳೆದೊಯ್ಯುತ್ತಿದ್ದಾಗ ವಸಿಷ್ಟನಿಂದ ಪರಾಜಿತನಾಗುತ್ತಾನೆ. ಈ ರೀತಿ ಪರಾಜಿತನಾದವನು ತಾನೂ ಬ್ರಾಹ್ಮಣನಾಗಬೇಕೆಂದು ತಪಸ್ಸು ಮಾಡಿ ಬ್ರಾಹ್ಮಣನಾಗುತ್ತಾನೆ.

## ಉಪಾಕರ್ಮ ##


ಉಪಾಕರ್ಮ ಎನ್ನುವ ಶಬ್ದವು ಅಧ್ಯಯನದ ಆರಂಭ ಎಂದು ಅರ್ಥವನ್ನು ಹೊಂದಿದೆ. ಇದನ್ನು ಉಪಾಕರ್ಮ, ಅಧ್ಯಾಯೋಪಕರ್ಮ, ಉಪಾಕರಣ, ವೇದಸ್ವೀಕಾರ, ವೇದಾರಂಭಣ, ಎಂಬ ಹೆಸರುಗಳಿಂದ ಶಾಸ್ತ್ರಗಳು ಕರೆಯುತ್ತವೆ. ಉತ್ತರ ಭಾರತದಲ್ಲಿ ಇದಕ್ಕೆ ಶ್ರಾವಣದಲ್ಲಿ ಆಚರಿಸಲ್ಪದುವುದರಿಂದ 'ಶ್ರಾವಣೀ' ಎಂದು ಕರೆಯುತ್ತಾರೆ. ತಮಿಳುನಾಡಿನವರು 'ಆವಣಿ ಅವಿTTam' ಎನ್ನುತ್ತಾರೆ. ಇಂದು ಇದು ಜನಿವಾರವನ್ನು ಬದಲಾಯಿಸಿಕೊಳ್ಳುವ ಮತ್ತು ರಕ್ಷಾ ಬಂಧನದ ಹಬ್ಬವಾಗಿ ಆಚರಿಸುವುದಕ್ಕಾಗಿ 'ನೂಲು ಹುಣ್ಣಿಮೆ' ಎಂದೂ ಕರೆಯುತ್ತಾರೆ.
ಉಪಾಕರ್ಮವು ವೇದಗಳ ಒಂದು ಅಧ್ಯಯನ ವ್ರತವಾಗಿತ್ತು. ಆದರೆ ನಾವು ಅದನ್ನು ಇಂದು ಹೊಸ ಜನಿವಾರವನ್ನು ಹಾಕಿಕೊಳ್ಳುವ ಹಬ್ಬವೆಂದು ಆಚರಿಸುತ್ತಿದ್ದೇವೆ. ಹಿಂದೆ ಶಾಲೆ ಕಾಲೇಜುಗಳಿಲ್ಲದ ಕಾಲದಲ್ಲಿ, ಕೇವಲ ವೇದ, ಶಾಸ್ತ್ರಗಳ ಅಧ್ಯಯನವಿರುವ ಪ್ರಾಚೀನ ಕಾಲದಲ್ಲಿ ಗುರುಕುಲದಲ್ಲಿ ವಟುವು ತನ್ನ ಉಪನಯನದ ನಂತರ ವೇದ ವಿಧ್ಯಾಭ್ಯಾಸವನ್ನು ಸಂಸ್ಕಾರಪೂರ್ವಕವಾಗಿ ಗ್ರಹಿಸುವ ಮತ್ತು ಪ್ರಾರಂಭಿಸುವ ವ್ರತಕ್ಕೆ ಉಪಾಕರ್ಮವೆಂದು ಹೆಸರು.. ಪ್ರತಿಯೊಂದು ವ್ರತದಲ್ಲಿಯೂ ಹಿಂದೆ ಬಳಸಿದ ಮೌಂಜೀ, ದಂಡ , ವಸ್ತ್ರ ಹಾಗೆಯೇ ಜನಿವಾರ ಮತ್ತು ಕೃಷ್ಣಾಜಿನವನ್ನು ತೆಗೆದುಹಾಕಿ ಹೊಸತನ್ನು ಧರಿಸುವುದು ರೂಢಿಯಾಗಿತ್ತು. ಅದರಂತೆ ಉಪಾಕರ್ಮದಲ್ಲಿಯೂ ಈ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದ್ದರು. ಅಂದು ಉಪಾಕರ್ಮದಲ್ಲಿ ಯಜ್ನೋಪವೀತದ ಬದಲಾವಣೆಯು ಒಂದು ಗೌಣಕರ್ಮವಾಗಿತ್ತು. ಆಗ ಎಲ್ಲದರ ಜೊತೆಗೆ ಇದೂ ಒಂದಾಗಿತ್ತು. ಆದರೆ ಕಾಲಾನುಕ್ರಮದಲ್ಲಿ ಅದೊಂದು ಮಾತ್ರ ಉಳಿದುಕೊಂಡಿದೆ.

ಶ್ರಾವಣ ಪೂರ್ಣಿಮೆಯಂದು ಸಾಮಾನ್ಯವಾಗಿ ಉಪಾಕರ್ಮವನ್ನು ಅನಾದಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಗ್ರಹಣ , ಸಂಕ್ರಮಣಾದಿಗಳ ಸಂಭವವಿದ್ದರೆ ಆಷಾಢ ಪೂರ್ಣಿಮೆಯು ಪ್ರಶಸ್ತ ಎನ್ನಲಾಗಿದೆ. ಋಗ್ವೇದಿಗಳು, ಯಜುರ್ವೇದಿಗಳು ಮತ್ತು ಸಾಮವೇದಿಗಳಲ್ಲಿ ಉಪಾಕರ್ಮದ ಆಚರಣೆಯ ಕಾಲದಲ್ಲಿ ವ್ಯತ್ಯಾಸವಿದೆ.

ಗುರುಕುಲದಲ್ಲಿ ಗುರು ಶಿಷ್ಯರೆಲ್ಲಾ ಸೇರಿ ಉಪಾಕರ್ಮ ಹೋಮ ಮಾಡಿ ಇತರ ವಿಧಿವಿಧಾನಗಳನ್ನೂ ಪೂರೈಸಬೇಕಾಗಿತ್ತು. ಉಪಾಕರ್ಮದ ಕ್ರಿಯೆಗಳು ಅರ್ಥವತ್ತಾಗಿದ್ದುವು. ಇಲ್ಲಿ ಪ್ರಾಚೀನ ಸ್ಮರಣೆಗಳು ನಡೆಯುತ್ತವೆ. ದೇವತೆಗಳು , ಪಿತೃಗಳು, ಋಷಿಗಳು, ವಾನ್ಗ್ಮಯದ ಶ್ರೀಮಂತಿಗೆಗೆ ನೆರವಿತ್ತ ಹಿರಿಯರು ಮುಂತಾದವರ ನಾಮಸ್ಮರಣೆ ಮಾಡಿ ತರ್ಪಣ ಕೊಡುವುದು , ಆಹುತಿ ಕೊಡುವುದು ಮುಂತಾದ ಕ್ರಮಗಳಿವೆ. ಇದರಿಂದಾಗಿ ಅಧ್ಯಯನ ಕಾರ್ಯಕ್ಕೆ ನವೋಲ್ಲಾಸ ಬರುತ್ತದೆ ಎಂದು ಭಾವಿಸಲಾಗುತ್ತಿತ್ತು. ಇಂದಿಗೂ -- ಅದರ ಮೂಲ ಉದ್ದೇಶದಲ್ಲಿ ಬದಲಾವಣೆ ಆದರೂ -- ಅದರ ಕೆಲವೊಂದು ಕ್ರಿಯೆಗಳು ಉಪಾಕರ್ಮ ವ್ರತದ ಆಚರಣೆಯಲ್ಲಿ ಉಳಿದುಕೊಂಡಿವೆ.

ಹಿಂದಿನ ಕಾಲದಲ್ಲಿ ಅಧ್ಯಯನ ವಿಷಯಗಳು ಪ್ರಧಾನವಾಗಿ ವೇದಗಳು ಮತ್ತು ಶಾಸ್ತ್ರಗಳು ಎಂದು ಎರಡು ಭಾಗವಾಗಿದ್ದುವು. ಗುರುಕುಲದಲ್ಲಿ ಐದೂವರೆಯಿಂದ ಆರು ತಿಂಗಳುಗಳ ಕಾಲ ವೇದಾಭ್ಯಾಸವನ್ನು ಮಾಡುವ ಪರಿಪಾಠವಿತ್ತು . ಅ ಅವಧಿಯ ನಂತರ ಉತ್ಸರ್ಜನ ಅಂದರೆ ಆ ವ್ರತದ ಉದ್ವಾಸನೆ ಇತ್ತು. ಆ ಅವಧಿಯ ಕಾಲದಲ್ಲಿ ಗುರುಕುಲದ ವಿದ್ಯಾಭ್ಯಾಸಕ್ಕೆ ರಜೆಯಿತ್ತು. ಅಂದರೆ ಶ್ರಾವಣ ಪೂರ್ಣಿಮೆಯಂದು ಆರಂಭವಾದರೆ ಪುಷ್ಯ ಅಥವ ಮಾಘ ಶುದ್ಧ ಪ್ರತಿಪದೆಯಂದು ಪೂರ್ವಾಹ್ನದಲ್ಲಿಯೇ ಉತ್ಸರ್ಜನವನ್ನು ಮಾಡಲಾಗುತ್ತಿತ್ತು. ಆ ಅವಧಿಯಲ್ಲಿ ವಟುಗಳು ಶಾಸ್ತ್ರಾಭ್ಯಾಸವನ್ನು ಮಾಡುತ್ತಿದ್ದರು ಎನ್ನಲಾಗಿದೆ. ಆ ರಜೆಯ ಅವಧಿಯ ನಂತರ ಪುನಃ ಗುರುಕುಲದಲ್ಲಿ ಪ್ರತಿ ವರ್ಷ ಉಪಾಕರ್ಮದ ಮೂಲಕವೇ ವೇದಾಭ್ಯಾಸವನ್ನು ಪ್ರಾರಂಭ ಮಾಡುತ್ತಿದ್ದರು. ಆಗ ಎಂದಿನಂತೆ ವ್ರತ ನಿಯಮದ ಪ್ರಕಾರ ತಮ್ಮ ಎಲ್ಲಾ ವಸ್ತುಗಳ ಜೊತೆಗೆ ಸಾಮಾನ್ಯವೆಂಬಂತೆ ಜನಿವಾರವನ್ನೂ ಬದಲಾಯಿಸಿಕೊಳ್ಳುತ್ತಿದ್ದರು. ಅದರಂತೆ ಮತ್ತೆ ಹಸನಾಗಿ, ಹೊಸತನದಲ್ಲಿ ಮರು ಅಧ್ಯಯನಕ್ಕೆ ಸಂಭ್ರಮದಲ್ಲಿ ಅಣಿಯಾಗುತ್ತಿದ್ದರು.

ಕೇವಲ ವಟುಗಳು ಆಚರಿಸುವ ವ್ರತ , ಉಪಾಕರ್ಮದಲ್ಲಿ ಗ್ರಹಸ್ಥರು ಹೇಗೆ ಬಂದರು ಎನ್ನುವುದು ಕುತೂಹಲದ ಪ್ರಶ್ನೆ. ಆಗ ಎಲ್ಲರೂ ವೇದಾಧ್ಯಯನವನ್ನು ಮಾಡುತ್ತಿದ್ದ ಕಾಲ. ವಿದ್ಯಾಭ್ಯಾಸದ ನಂತರದಲ್ಲಿ ತಮ್ಮ ತಮ್ಮ ಉದ್ಯೋಗದಲ್ಲಿ ಜನ ನಿರತರಾಗಿರುತ್ತಿದ್ದರು. ಈಗಿನ ಕಾಲದ ಹಾಗೆ ಅವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪುಸ್ತಕಗಳಾಗಲಿ, ಪುಸ್ತಕ ಭಂಡಾರವಾಗಲಿ ಇರಲಿಲ್ಲ. ಬೇರೆ ಬೇರೆ ಉದ್ಯೋಗದಲ್ಲಿ ನಿರತರಾದ ಅಂದಿನ ವೇದ ಶಾಸ್ತ್ರ ಪಾರಂಗತರು ಅವನ್ನು ಪುನರಾವರ್ತನೆ ಮಾಡಿಕೊಳ್ಳಲು ಹೆಚ್ಚು ಕೆಲಸವಿಲ್ಲದ ಮಳೆಗಾಲದ ಅವಧಿಯನ್ನು ಅಧ್ಯಯನಕ್ಕಾಗಿ ಮೀಸಲಿಡುವುದು, ಅವರು ತಮ್ಮ ತಮ್ಮ ಮನೆಯೊಳಗಿದ್ದುಕೊಂಡೇ ವೇದಾಧ್ಯಯನವನ್ನು ಮುಂದುವರೆಸುವ ವ್ಯವಸ್ಥೆಯಾಯಿತು. ಇಂಥ ಅಧ್ಯಯನವನ್ನು ಆರಂಭಿಸುವ ಮುನ್ನ ಉಪಾಕರ್ಮದ ದಿನ ತಮ್ಮ ಮಕ್ಕಳ ಜೊತೆ ಪಾಲಕರೂ -- ಗ್ರಹಸ್ಥರು -- ಗುರುಕುಲಕ್ಕೆ ಬಂದು ಅಧ್ಯಯನ ವ್ರತವನ್ನು ಸ್ವೀಕರಿಸುವ ವ್ಯವಸ್ಥೆಯಾಯಿತು. ಹೀಗೆ ಅಂದು ಆ ವ್ರತವನ್ನು ಸ್ವೀಕರಿಸುವ ಪ್ರತಿ ಗ್ರಹಸ್ಥನೂ ಬ್ರಹ್ಮಚಾರಿಯು ಅನುಸರಿಸುವ ವ್ರತನಿಯಮಗಳಲ್ಲಿ ದಂಡ ಇತ್ಯಾದಿಗಳನ್ನು ಬಿಟ್ಟು ಜನಿವಾರ ಬದಲಾವಣೆಯೂ ಸೇರಿ ಉಳಿದವುಗಳನ್ನು ಅನುಸರಿಸಬೇಕಾಗಿತ್ತು.

ಅಂದರೆ ಉಪಾಕರ್ಮವು ಒಂದು ಕಾಲದಲ್ಲಿ ಕೇವಲ ವಟುಗಳು ತಮ್ಮ ಅಧ್ಯಯನಕ್ಕಾಗಿ ಅದರ ಪ್ರಾರಂಭದಲ್ಲಿ ತಮ್ಮ ಗುರುಕುಲದ ಗುರುಗಳ ಮನೆಯಲ್ಲಿ ಆಚರಿಸಿಕೊಳ್ಳುವ ಹಲವು ವಿಧಿ ವಿಧಾನದ ಒಂದು ವ್ರತ. ಅವನು ಗ್ರಹಸ್ಥನಾದ ನಂತರ ಅದನ್ನು ಆಚರಿಸುವ ಪ್ರಮೇಯವಿರಲಿಲ್ಲ. ಏಕೆಂದರೆ ಅದು ಕೇವಲ ಉಪನಯನದಾದ ವಟುವಿನ ವೇದಾಧ್ಯಯನದ ಪ್ರಾರಂಭದ ಒಂದು ವ್ರತವಾಗಿತ್ತಷ್ಟೇ. ಆದರೆ ಕಾಲ ಕ್ರಮೇಣ ಗ್ರಹಸ್ಥನೂ ತನ್ನ ವೇದಾಧ್ಯಯನದ ಪಾಂಡಿತ್ಯವನ್ನು ಉಳಿಸಿಕೊಳ್ಳುವ ಸಂಬಂಧ ಪ್ರತಿ ವರ್ಷದ ಒಂದು ಅವಧಿಯಲ್ಲಿ -- ಹೆಚ್ಚಾಗಿ ತನಗೆ ಪುರುಸೊತ್ತು ಇರುವ ಮಳೆಗಾಲದಲ್ಲಿ-- ಅವುಗಳನ್ನು ಮರು ಅಧ್ಯಯನ ಮಾಡುವ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಂಡ. ಆಗ ತನ್ನ ಆ ವರ್ಷದ ಮರು ಅಧ್ಯಯನದ ಪ್ರಾರಂಭಕ್ಕೆ ತಮ್ಮ ಮಕ್ಕಳ ಜೊತೆಗೆ ಅವರ ಗುರುಕುಲದಲ್ಲಿ ತಾನೂ ಉಪಾಕರ್ಮವನ್ನು ಆಚರಿಸಿದ. ಅಲ್ಲಿಗೆ ಬಹಳ ಮಂದಿ ಗ್ರಹಸ್ಥರೂ ಕೂಡಾ - ವಟುಗಳಂತೆ- ಪ್ರತಿ ವರ್ಷ ಉಪಾಕರ್ಮವನ್ನು ಆಚರಿಸುವಂತಾಯಿತು.

ಈಗಿನ ಯುವಕರು ತಮ್ಮ ಉಪನಯನವಾದ ನಂತರ ಮುಂಚಿನ ಹಾಗೆ ಗುರುಕುಲದಲ್ಲಿ ವೇದಾಭ್ಯಾಸವನ್ನು ಮಾಡುವ ಒತ್ತಡದಲ್ಲಿ ಇಲ್ಲ. ವೇದ ಅಂದರೆ ಜ್ಞಾನ. ಜ್ಞಾನದ ಅಧ್ಯಯನವು ವಿಶಾಲವಾಗಿ ಇಂದು ಬೆಳೆದಿದೆ. ಅದು ಆಧುನಿಕವಾಗಿ ಇಂಜನಿಯರಿಂಗ್, ವೈದ್ಯ , ಸಾಮಾಜಿಕ, ಆರ್ಥಿಕ ಹೀಗೆ ಇನ್ನೂ ಅನೇಕ ಶಾಖೆಗಳಾಗಿ ಮುಂದುವರೆದಿವೆ. ಆ ಕ್ಷೇತ್ರಗಳಿಗೆ ಸಹಜವಾಗಿ ಇಂದಿನ ಯುವಕರು ಹೋಗುತ್ತಿದ್ದಾರೆ. ಅಂದಿನಂತೆ ಗುರುಕುಲದ ಬದಲಿಗೆ ಕೆಲವು ವೇದಾಧ್ಯಯನದ ಕೇಂದ್ರಗಳು ಅಲ್ಲಲ್ಲಿ ಇವೆ. ಕೆಲವೇ ಮಂದಿ ಅಲ್ಲಿಗೆ ವೇದಾಧ್ಯಯನಕ್ಕೆ ಹೋದರೂ ಅಲ್ಲಿ ವಿಧ್ಯಾಭ್ಯಾಸದ ಪ್ರಾರಂಭದಲ್ಲಿ ಹಿಂದಿನ ಅರ್ಥದಲ್ಲಿ ಉಪಾಕರ್ಮ ವ್ರತವನ್ನು ಆಚರಿಸಿಕೊಳ್ಳುವ ಕ್ರಮ ಇಲ್ಲವಾಗಿದೆ.

ಆಗಿನ ಕಾಲದಲ್ಲಿ ನಡೆಯುತ್ತಿದ್ದ ಉಪಾಕರ್ಮದ ವ್ರತ ತನ್ನ ಉದ್ದೇಶ ಮತ್ತು ಆಚರಣೆಯನ್ನು ಕಳೆದುಕೊಂಡಿದೆ. ಇದು ಇಂದು ಕೇವಲ ಜನಿವಾರವನ್ನು ಬದಲಾಯಿಸಿಕೊಳ್ಳುವ ಗಂಡಸರ ಒಂದು ಹಬ್ಬವಾಗಿ ಉಳಿದುಕೊಂಡಿದೆ.


ಎಂ. ಗಣಪತಿ ಕಾನುಗೋಡು.
ಸಾಗರ. ಶಿವಮೊಗ್ಗ ಜಿಲ್ಲೆ

ತಾರೀಖು : 3 - 8 - 2020


ಗ್ರಂಥ ಋಣ : 1. ಸಂಸ್ಕಾರ ಮಹೋದಧಿ -- ಡಾ| ಅನಂತನರಸಿಂಹಾಚಾರ್
2. ಹಿಂದೂ ಸಂಸ್ಕಾರಗಳು -- ಪ್ರೊ. ಎಂ ಎ ಹೆಗಡೆ. 3. ಭಾರತೀಯರ ಹಬ್ಬ ಹರಿದಿನಗಳು -- ಶ್ರೀ ಶ್ರೀ ಶ್ರೀರಂಗಪ್ರಿಯ ಶ್ರೀ ಶ್ರೀ .

## ದಕ್ಷಿಣಾದಾನ ##


ಯಾವ ವಸ್ತುವನ್ನು ಕೊಡುವುದರಿಂದ ಯಜಮಾನನು ಅಭಿವೃದ್ಧಿಗೊಳ್ಳುತ್ತಾನೆಯೋ ಆ ವಸ್ತುವಿಗೆ ದಕ್ಷಿಣಾ ಎಂದು ಹೆಸರು. ವೃದ್ಧ್ಯರ್ಥದ 'ದಕ್ಷ' ಧಾತುವಿನ ಮೇಲೆ 'ಇನನ್' ಪ್ರತ್ಯಯವು ಬಂದು "ದಕ್ಷಿಣಾ" ಎಂಬ ಶಬ್ದವು ಉತ್ಪನ್ನವಾಗಿರುತ್ತದೆ.

ಯಜಮಾನನು ತನ್ನ ಯೋಗ್ಯತೆಗೆ ಅನುಸರಿಸಿ ಸರಿಯಾದ ರೀತಿಯಲ್ಲಿ, ಕೊಡಬೇಕಾದ ಕಾಲದಲ್ಲಿ ಸತ್ಪಾತ್ರರಿಗೆ ಕೊಟ್ಟುದುದು ಮಾತ್ರವೇ ದಕ್ಷಿಣೆಯಾಗುತ್ತದೆ. ಇಂಥಹ ದಾನವು ಮಾತ್ರ ಅನಂತವಾದ ಫಲವನ್ನು ಕೊಡುತ್ತದೆ. ಇಲ್ಲದಿದ್ದರೆ 'ಅಭಿವೃದ್ಧಿಗೊಳಿಸುವುದು' ದಕ್ಷಿಣಾ ಶಬ್ದದ ಅರ್ಥವು ಅನ್ವರ್ಥವಾಗುವುದಿಲ್ಲ.

ಗ್ರಂಥಋಣ : ಸಂಸ್ಕಾರ ಮಹೋದಧಿ -- ಡಾ | ಎ. ಅನಂತನರಸಿಂಹಾಚಾರ್ಯ.

## ದರ್ಭ ಸಂಗ್ರಹಣ ##

ದರ್ಭೆಯನ್ನು ಪ್ರತಿ ವರ್ಷ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತರಬೇಕು. ಅಂದು ಕತ್ತರಿಸಿ ತಂದ ದರ್ಭೆಯನ್ನು ಎಷ್ಟು ದಿನ ಬೇಕಾದರೂ ಬಳಸಬಹುದು. ಬಳಸಿ ಉಳಿದರೆ ತಂದ ಮರುವರ್ಷವೂ ಬಳಸಬಹುದು. ಒಮ್ಮೆ ಶ್ರಾವಣ ಬಹುಳ ಅಮಾವಾಸ್ಯೆಯಂದು ತರಲಾಗದಿದ್ದರೆ ಬೇರೆ ದಿನಗಳಲ್ಲಿಯೂ ಕತ್ತರಿಸಿ ತರಬಾರದೆಂದಿಲ್ಲ. ಆ ದಿನವಲ್ಲದೆ ಇನ್ನೂ ಕೆಲವು ನಿಯಮಿತ ದಿನಗಳಲ್ಲಿ ಕತ್ತರಿಸಿ ತರಬಹುದು. ಆದರೆ ಅದಕ್ಕೆ ಆಯಸ್ಸು, ಪಾವಿತ್ರ್ಯತೆ ಕಡಿಮೆ. ಮಹಾಲಯ ಅಮಾವಾಸ್ಯೆಯಂದು ಕತ್ತರಿಸಿ ತಂದರೆ ಆ ದರ್ಭೆಗೆ ಆರು ತಿಂಗಳು ಆಯಸ್ಸು ಇರುತ್ತದೆ. ಅಂತೆಯೇ ಇತರೆ ಅಮಾವಾಸ್ಯೆಯಂದೂ ಕತ್ತರಿಸಿ ತರಬಹುದು. ಆ ದರ್ಭೆಗೆ ಒಂದು ತಿಂಗಳು ಮಾತ್ರ ಆಯಸ್ಸು ಇರುತ್ತದೆ. ಯಾವುದೇ ಹುಣ್ಣಿಮೆಯಂದು ಕತ್ತರಿಸಿ ತಂದರೆ ಹದಿನೈದು ದಿನಗಳು, ಭಾನುವಾರ ತಂದರೆ ಒಂದು ವಾರ, ಉಳಿದ ದಿನಗಳಲ್ಲಿ ಕತ್ತರಿಸಿ ತಂದರೆ ಆ ಒಂದು ದಿನ ಮಾತ್ರ ಆಯಸ್ಸು ಇರುತ್ತದೆ. ಇದಾವುದೇ ದಿನ ಕತ್ತರಿಸಿ ತಂದ ದರ್ಭೆಯನ್ನಾದರೂ ಶ್ರಾವಣ ಬಹುಳ ಅಮಾವಾಸ್ಯೆಯಂದು ಕತ್ತರಿಸಿ ತಂದು ಉಳಿದ ದರ್ಭೆಗೆ ಸೇರಿಸಿದರೆ ಆ ದರ್ಭೆಯ ಸಂಸರ್ಗದಿಂದ ಅವುಗಳಿಗೂ ' ಯಾತಯಾಮ ' (ಹಳೆಯದಾಗುವಿಕೆಯ ದೋಷ ) ದೋಷ ನಿವೃತ್ತಿಯಾಗಿ ಎಷ್ಟು ಕಾಲ ಬೇಕಾದರೂ ಬಳಸಬಹುದು. ನಿರ್ಧಿಷ್ಟ ದಿನದಂದು ಪೂರ್ವಾಹ್ನದಲ್ಲಿ ಕೆಲವು ಶಾಸ್ತ್ರ ರೀತಿಯಲ್ಲಿ ಹೇಳಿರುವ ಕ್ರಮಗಳನ್ನು ಅನುಸರಿಸಿ ಪೂರ್ವಾಭಿಮುಖವಾಗಿ ಕುಳಿತು ಐದು ಮುಷ್ಟಿಗೆ ಕಡಿಮೆ ಇಲ್ಲದಂತೆ ಉದ್ದವಾಗಿರುವ ದರ್ಭೆಯನ್ನು ಕತ್ತರಿಸಬೇಕು. ದರ್ಭೆಯಲ್ಲಿ ಏಳು ವಿಧಗಳಿವೆ. ವಿಶ್ವಾಮಿತ್ರ, ಕುಶ, ಕಾಶ, ಭತ್ತ, ನಸ, ವಯ, ಮತ್ತು ದೂರ್ವಾ ( ಗರಿಕೆ ಹುಲ್ಲು ) ಇವು ಏಳು ವಿಧಗಳು. ರುದ್ರ ಸಂಬಂಧವಾದ ಮತ್ತು ಆಭಿಚಾರಕ ಕೃತ್ಯಗಳಲ್ಲಿ,' ಕಾಶ ' ಎಂಬ ದರ್ಭೆಯನ್ನು, ಬ್ರಾಹ್ಮ ಸಂಸ್ಕಾರಗಳಾದ shrouta ಸ್ಮಾರ್ತಕರ್ಮಗಳಲ್ಲಿ ' ಕುಶ ' ದರ್ಭೆಯನ್ನು, ಉಪಾಕರ್ಮವೇ ಮುಂತಾದ ಋಷಿ ಪೂಜಾಕಾರ್ಯಗಳಲ್ಲಿ ' ದೂರ್ವಾ ' ದರ್ಭೆಯನ್ನು, ಸುದರ್ಶನ ಹೋಮವೇ ಮುಂತಾದ ವೈಷ್ಣವ ಕಾರ್ಯದಲ್ಲಿ ' ವಿಶ್ವಾಮಿತ್ರ ' ದರ್ಭೆಯನ್ನು ಬಳಸುವುದು ಉತ್ತಮ. ನಿರ್ದಿಷ್ಟವಾದ ದರ್ಭೆಗಳು ಸಿಗದಿದ್ದರೆ 'ಕುಶ' ವನ್ನು ಎಲ್ಲಾ ಕಾರ್ಯಗಳಲ್ಲಿ ಬಳಸಬಹುದು. ಆಯಾ ಕಾರ್ಯಗಳಿಗೆ ಹೇಳಿರುವ ನಿರ್ದಿಷ್ಟವಾದ ದರ್ಭೆಗಳು ಒಮ್ಮೆ ಸಿಗದಿದ್ದರೆ ಈ ಏಳು ವಿಧ ದರ್ಭೆಯಲ್ಲಿ ಯಾವುದೇ ದರ್ಭೆಯನ್ನಾದರೂ ಎಲ್ಲಾ ಕಾರ್ಯಗಳಲ್ಲಿಯೂ ಬಳಸಬಹುದು. ದರ್ಭೆಯಲ್ಲಿಯೂ ಲಿಂಗ ಬೇಧವಿದೆ. ದರ್ಭೆಗಳ ತುದಿಯ ಭಾಗ ( ಅಗ್ರಭಾಗ ) ಸ್ಥೂಲವಾಗಿದ್ದರೆ ಅವು ಸ್ತ್ರೀ ದರ್ಭೆ. ಬುಡದ ಭಾಗವು ( ಮೂಲ ಭಾಗ ) ದಪ್ಪನಾಗಿದ್ದರೆ ನಪುಂಸಕ ದರ್ಭೆ. ಮೂಲದಿಂದ ಅಗ್ರದವರೆಗೂ ( ಬುಡದಿಂದ ತುದಿಯವರೆಗೂ ) ಸಮವಾಗಿದ್ದರೆ ಪುಂದರ್ಭೆ ಎಂದು ಹೇಳಲಾಗಿದೆ. ಚೌಲ, ಉಪನಯನ, ಉಪಾಕರ್ಮ ವ್ರತ ಸಮಾವರ್ತನಾದಿ ಪುರುಷ ಸಂಸ್ಕಾರ ಕಾರ್ಯಕ್ರಮಗಳಲ್ಲಿ ಪುಂದರ್ಭೆಯನ್ನು ಬಳಸಬೇಕು. ಗರ್ಭಾದಾನ, ಪುಂಸವನ, ಸೀಮಂತೋನ್ನಯನ ಮುಂತಾದ ಸ್ತ್ರೀ ಸಂಬಂಧ ಕಾರ್ಯಕ್ರಮಗಳಲ್ಲಿ ಸ್ತ್ರೀ ದರ್ಭೆಯನ್ನು ಬಳಸಬೇಕು. ಸ್ತ್ರೀ ಪುರುಷ ಉಭಯ ಸಂಸ್ಕಾರ ರೂಪವಾದ ವಿವಾಹದಲ್ಲಿ ಸ್ತ್ರೀ ಪುರುಷ ಎರಡೂ ದರ್ಭೆಯನ್ನು ಬಳಸಬೇಕು. ಜಾತಕರ್ಮ, ನಾಮಕರಣ, ಅನ್ನಪ್ರಾಶನಗಳಲ್ಲಿ ಸ್ತ್ರೀ ಸಂಸ್ಕಾರವಾದರೆ ಸ್ತ್ರೀ ದರ್ಭೆಯನ್ನು, ಗಂಡು ಮಗುವಿನ ಸಂಸ್ಕಾರವಾದರೆ ಪುಂದರ್ಭೆಯನ್ನು, ಶಾಂತಿ ಕರ್ಮಗಳಲ್ಲಿ ನಪುಂಸಕ ದರ್ಭೆಯನ್ನು ಬಳಸಬೇಕು. ಒಮ್ಮೆ ಯಾವುದೇ ಕರ್ಮದಲ್ಲಿ ನಿರ್ದಿಷ್ಟವಾದ ದರ್ಭೆಯು ಸಿಗದಿದ್ದ ಸನ್ನಿವೇಶದಲ್ಲಿ ಯಾವ ದರ್ಭೆಯನ್ನು ಯಾವುದೇ ಕರ್ಮದಲ್ಲಿ ಬಳಸಬಹುದು. ಸಿಕ್ಕರೆ ಉತ್ತಮ. 

ಗ್ರಂಥಋಣ : ಸಂಸ್ಕಾರ ಮಹೋದಧಿ ---- ಮಮಹೋಪಾಧ್ಯಾಯ ಡಾ ll ಎ. ಅನಂತನರಸಿಂಹಾಚಾರ್.