ಹವ್ಯಕರ ಮದುವೆ ಮನೆಯಲ್ಲಿ ಗಂಡಿನ ಕಡೆಯ ನೆಂಟರನ್ನು ಊಟಕ್ಕೆ ಕರೆಯುವುದರಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಸಂಪ್ರದಾಯವಿತ್ತು. ನೆಂಟರಿಗೆನ್ದೇ ಒಂದು ಬಿಡಾರದ ಮನೆಯೆಂದು ಊರಿನಲ್ಲಿ ಒಂದು ಮನೆಯನ್ನು ಹೆಣ್ಣಿನಕಡೆಯವರು ವ್ಯವಸ್ಥೆ ಮಾಡುತ್ತಿದ್ದರು. ಅದು ಹೆಚ್ಚಾಗಿ ಮದುವೆ ಮನೆಯ ಮೊದಲೇ ಇರುತ್ತಿತ್ತು. ಏಕೆಂದರೆ ಗಂಡಿನಕಡೆಯವರು ಮದುವೆಗೆ ಮುಂಚೆ ಮದುವೆಮನೆಯನ್ನು ದಾಟಿ ಹೋಗುವ ಪದ್ಧತಿಯಿರಲಿಲ್ಲ. ಅಲ್ಲಿ ಅವರು ಕೈಕಾಲು,ಮುಖತೊಳೆದುಕೊಳ್ಳಲಿಕ್ಕೆ,ಬಟ್ಟೆ ಬದಲಾಯಿಸಿಕೊಳ್ಳುವುದಕ್ಕೆ, ತಾತ್ಕಾಲಿಕ ವಿಶ್ರಾಂತಿ ತೆಗೆದುಕೊಳ್ಳಲಿಕ್ಕೆ,ಲಘು ಪಾನೀಯಕ್ಕೆ ಅನುಕೂಲತೆ ಕಲ್ಪಿಸಲಾಗುತ್ತಿತ್ತು. ಅಂದು ಎಲ್ಲರಿಗೂ ಸಾಕೆನ್ನುವಷ್ಟು ಪುರುಸೊತ್ತು ಇದ್ದ ಕಾಲ.
ಮದುವೆ ಕಾರ್ಯಕ್ರಮ ಮುಗಿದಕೂಡಲೆ ನೆಂಟರು ಬಿಡಾರದ ಮನೆಗೆ ತಮ್ಮ ಅನುಕೂಲತೆಗಾಗಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಇಲ್ಲಿ ಹೆಣ್ಣಿನ ಮನೆಯಲ್ಲಿ ಊಟಕ್ಕೆ ತಯಾರಾದ ಕೂಡಲೆ ಮನೆಯ ಯಜಮಾನ ಪುರೋಹಿತರೊಡಗೂಡಿ ನೆಂಟರ ಬಿಡಾರದ ಮನೆಗೆ ಬರುತ್ತಿದ್ದ.ಹಾಗೆ ಬರುವಾಗ ಮಂಗಲಾಕ್ಷತೆ,ಒಂದು ಮಡಿ ಮತ್ತು ಒಂದು ಚೊಂಬು ನೀರು ಅವನ ಸಹಾಯಕರೊಂದಿಗೆ ತರುತ್ತಿದ್ದ. ಆ ನೀರಿನ ಚೊಂಬು ಮತ್ತು ಮಡಿಯನ್ನು ಮುಖ್ಯ ಬೀಗರೆದುರು ಇಡುತ್ತಿದ್ದ.ಕೈಕಾಲು,ಮುಖ ತೊಳೆದು ಮಡಿಯುಟ್ಟು ಊಟಕ್ಕೆ ಬರಬೇಕೆಂದು ಭಿನ್ನವಿಸಿಕೊಳ್ಳುತ್ತಿದ್ದ. ಅದಕ್ಕಾಗಿಯೆ ಆ ಮಡಿ ಮತ್ತು ನೀರು [ಸಾಂಕೇತಿಕವಾಗಿ]. ಪುರೋಹಿತರು ಅವರನ್ನು ಊಟಕ್ಕೆ ಆಹ್ವಾನಿಸುವ ಮಂತ್ರವೊಂದನ್ನು ಹೇಳುತ್ತಿದ್ದರು.ಅಷ್ಟಾದ ನಂತರ ಸರ್ವರೂ ಊಟಕ್ಕೆ ಆಗಮಿಸಬೇಕೆಂದು ಯಜಮಾನ ಬೀಗರು,ನೆಂಟರೆದುರಿಗೆ ಕೈ ಮುಗಿದು ಆಹ್ವಾನಿಸುತ್ತಿದ್ದ. ಅದಕ್ಕಾಗಿ ಬೀಗರು,ನೆಂಟರೆಲ್ಲರಿಗೆ ಅಕ್ಷತೆಯನ್ನು ಕೊಡುತ್ತಿದ್ದ. ಅಷ್ಟರಲ್ಲಿಯೇ ನೆಂಟರು ಆಗಿನ ಪದ್ಧತಿಯಂತೆ ಅಂಗಿ,ಬನಿಯನ್ ತೆಗೆದು ಶಲ್ಯ ಹೊದೆದುಕೊಂಡು ಊಟದ ಕರೆಗಾಗಿ ಅಣಿಯಾಗಿರುತ್ತಿದ್ದರು. ಆಗಿನ ಕಾಲದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಗಂಡಸರೆಲ್ಲರೂ ಪಂಚೆಯುಟ್ಟು ಬರುತ್ತಿದ್ದರು. ಈ ರೀತಿ ಆಹ್ವಾನ ಬಂದ ನಂತರ ಬೀಗರು,ಅವರ ಹಿಂದೆ ಆಯಾ ಮಟ್ಟದ ಜೇಷ್ಟತೆಯ ಮೇಲೆ ಮದುವೆ ಮನೆಗೆ ಔತಣಕ್ಕೆ ಎಲ್ಲರೂ ಹೊರಡುತ್ತಿದ್ದರು. ಇಲ್ಲಿ ಇನ್ನೊಂದು ವಿಶೇಷವೆಂದರೆ ನೆಂಟರನ್ನು ಊಟಕ್ಕೆ ಕರೆತರಲು ಓಲಗದವರು ಓಲಗ ವನ್ನು ನೆಂಟರ ಮುಂದೆ ಊದುತ್ತ ಬರುತ್ತಿದ್ದರು. ನೆಂಟರು ನಿಧಾನ ನಡಿಗೆಯಲ್ಲಿ ಓಲಗದವರು,ಮನೆಯ ಯಜಮಾನನನ್ನು ಹಿಂಬಾಲಿಸುತ್ತಿದ್ದರು. ಹೀಗೆ ಮದುವೆಮನೆಗೆ ಬಂದು ನೆಂಟರು ಔತಣವನ್ನು ಸ್ವೀಕರಿಸುವ ಸಂಪ್ರದಾಯವಿತ್ತು.
ನೆಂಟರಿಗೆ ಊಟವಾದ ಹೊರತು ಹೆಣ್ಣಿನ ಕಡೆಯವರು ಊಟ ಮಾಡುವ ಹಾಗಿರಲಿಲ್ಲ.ನೆಂಟರ ಪಂಕ್ತಿ ಎಂತಲೇ ಪ್ರತ್ಯೇಕ ವ್ಯವಸ್ತೆ ಮಾಡಲಾಗುತ್ತಿತ್ತು. ಇದು ಸುಮಾರು ನಲವತ್ತು ವರ್ಷದ ಹಿಂದಿನ ಮಾತು.
Waiting for more such writings!
ReplyDelete