Tuesday, 16 September 2014

ಹಾವು ಕಚ್ಚಿದ ಬಗ್ಯೆ ಮಾಹಿತಿ :


ತಾರೀಖು:೨೪-೬-೨೦೧೪

ಮಾಹಿತಿಯ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಗೆಣಸಿನಕುಣಿ. ಸಾಗರ.ಶಿವಮೊಗ್ಗ ಜಿಲ್ಲೆ. ಸರ್ಪವಿಷ ಪರಿಹಾರಕರು ಹಾಗೂ ನಾಟಿ ವೈದ್ಯರು.

ಒಂದನೇ ಕಂತು :

ಸರ್ಪ ವಿಷವನ್ನು ಸಿದ್ಧಿಸಿದ ಮಂತ್ರದಿಂದಲೂ, ಬೇರೆ ಹಾವಿನ ವಿಷವನ್ನು ಗಿಡಮೂಲಿಕೆ,ವನಸ್ಪತಿಗಳಿಂದ ಚಿಕಿತ್ಸೆ ಮಾಡಲಾಗುತ್ತದೆ. ಕಚ್ಚಬಹುದಾದ ಹಾವುಗಳಲ್ಲಿ ಸಾಮಾನ್ಯ ಹಾವುಗಳು, ನಾಗರ ಹಾವುಗಳು ಮತ್ತು ಮಂಡಲದ ಹಾವುಗಳು ಎಂದು ಮೂರು ರೀತಿಯಾಗಿ ವಿಂಗಡಿಸಬಹುದು.

ಸಾಮಾನ್ಯ ಹಾವು ಕಚ್ಚಿದಾಗ ಕಾಣುವ ಗುರುತುಗಳು :
೧. ಎರಡು ಹಲ್ಲುಗಳ ಗುರುತು ಕಂಡು ಬರುತ್ತವೆ.
೨. ಅರ್ಧ ಇಂಚು ಅಥವಾ ಮುಕ್ಕಾಲು ಇಂಚು ಅಂತರದಲ್ಲಿ ಸೂಜಿ ಚುಚ್ಚಿದಂತೆ ಎರಡೂ ಕಡೆ ರಕ್ತ ಬರುತ್ತಿರುತ್ತದೆ.
೩. ಕಚ್ಚಿದ ಸ್ಥಳದಲ್ಲಿ ಸುತ್ತ ಬಣ್ಣ ಬದಲಾಗುತ್ತದೆ.
೪. ಹಾವಿನ ವಿಷ ಮನುಷ್ಯನ ದೇಹಕ್ಕೆ ಸೇರಿದಾಗ ನರಮಂಡಲದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
೫. ರಕ್ತ ಕೆಡುತ್ತದೆ ಮತ್ತು ಹೆಪ್ಪುಗಟ್ಟುತ್ತದೆ.
೫. ಹೃದಯಕ್ರಿಯೆ ಮಂದವಾಗುತ್ತದೆ.

ನಾಗರ ಹಾವು ಕಚ್ಚಿದಾಗ ಕಂಡು ಬರುವ ಲಕ್ಷಣಗಳು. :

೧. ಕಚ್ಚಿದ ಸ್ಥಳದಲ್ಲಿ ನೋವು ಅಥವಾ ಉರಿ ಕಾಣಿಸಿಕೊಳ್ಳುತ್ತದೆ.
೨. ಕಚ್ಚಿದ ಸ್ಥಳದಲ್ಲಿ ಬಣ್ಣ ಬದಲಾಗುತ್ತದೆ.
೩. ಮೈ ಜಡವಾಗುತ್ತದೆ.
೪. ಮೈ ಬೆವರುತ್ತದೆ.
೫. ನೋಟ ಮಸುಕಾಗುತ್ತದೆ ಅಥವಾ ಮಂಜಾಗುತ್ತದೆ.
೬. ನಾಲಿಗೆಯು ರುಚಿಯನ್ನು ಕಳೆದುಕೊಳ್ಳುತ್ತದೆ, ದಪ್ಪವಾಗುತ್ತದೆ.
೭. ಬಾಯಾರಿಕೆ ಉಂಟಾಗುತ್ತದೆ.
೮. ಬಾಯಲ್ಲಿ ನೊರೆ ಬರುತ್ತದೆ.
೯.ಜ್ಞಾನ ತಪ್ಪುತ್ತದೆ.
೧೦. ಕೊನೆಯಲ್ಲಿ ಮರಣ ಸಂಭವಿಸುತ್ತದೆ.

ಈ ಮೇಲಿನ ಲಕ್ಷಣಗಳು ಹಂತ ಹಂತವಾಗಿ ಕಂಡು ಬರುತ್ತವೆ. ನಾಗರ ಹಾವು ಕಚ್ಚಿದ ತೀಕ್ಷ್ಣತೆ, ಕಚ್ಚಿದ ಸ್ಥಳ,ಹಾವು ಬಿಡುವ ವಿಷದ ಪ್ರಮಾಣವನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ಮೇಲಿನ ಪರಿಣಾಮಗಳು ತೀವ್ರತೆಯನ್ನು ಪಡೆಯುತ್ತವೆ.

ಮಂಡಲದ ಹಾವು ಕಚ್ಚಿದಾಗ ಕಂಡು ಬರುವ ಲಕ್ಷಣಗಳು. :

೧. ಕಚ್ಚಿದ ಸ್ಥಳದಲ್ಲಿ ಒಂದೇ ಸಮನೆ ಉರಿಯಲು ಪ್ರಾರಂಭಿಸುತ್ತದೆ.
೨. ಕಚ್ಚಿದ ಸ್ಥಳದಲ್ಲಿ ಊದಿಕೊಳ್ಳಲು ಪ್ರಾರಂಭವಾಗುತ್ತದೆ.
೩. ಕಚ್ಚಿದ ಜಾಗದಲ್ಲಿ ರಕ್ತ ಮತ್ತು ಕೀವು ಬರುತ್ತದೆ.
೪. ಕಚ್ಚಿದ ಸ್ಥಳದಲ್ಲಿ ಗುಳ್ಳೆಗಳು ಎದ್ದು ಒಡೆಯುತ್ತದೆ.
೫. ಕೆಲವು ವೇಳೆ ಮಲ,ಮೂತ್ರದಲ್ಲಿ ರಕ್ತ ಬರುತ್ತದೆ.

ಈ ಮೇಲಿನ ಲಕ್ಷಣಗಳು ಹಂತ ಹಂತವಾಗಿ ಕಂಡು ಬರುತ್ತವೆ. ಈ ರೀತಿಯ ಮಂಡಲದ ಹಾವು ಕಚ್ಚಿದ ವ್ಯಕ್ತಿಗೆ ಒಂದು ದಿನದಿಂದ ಇಪತ್ತು ದಿನಗಳೊಳಗೆ ಸಾವು ಸಂಭವಿಸುವ ಸಾಧ್ಯತೆ ಇದೆ.

[ ಮುಂದಿನ ಕಂತಿನಲ್ಲಿ ಹಾವು ಕಚ್ಚಿದವರಿಗೆ ಪ್ರಥಮ ಚಿಕಿತ್ಸೆಯ ಮಾಹಿತಿಯನ್ನು ಓದಿ ]
-===============================================================================

ಹಾವು ಕಚ್ಚಿದ ಬಗ್ಯೆ ಮಾಹಿತಿ :

ತಾರೀಖು : ೨೫ - ೬ - ೨೦೧೪

ಮಾಹಿತಿ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಅಂಚೆ ಮತ್ತು ಊರು :ಗೆಣಸಿನಕುಣಿ. -೫೭೭೪೫೩. ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ. ಸರ್ಪವಿಷ ಪರಿಹಾರಕರು ಹಾಗೂ ನಾಟಿ ವೈದ್ಯರು.

ಎರಡನೆಯ ಕಂತು :

ಹಾವು ಕಚ್ಚಿದವರಿಗೆ ಪ್ರಥಮ ಚಿಕಿತ್ಸೆ :

೧. ಹಾವು ಕಚ್ಚಿದ ವ್ಯಕ್ತಿಗೆ ಧೈರ್ಯದ ಮಾತುಗಳನ್ನು ಹೇಳಬೇಕು. ಆತನ ಸುತ್ತಲಿರುವ ಜನ ಆತಂಕ, ಗಾಬರಿಯ ಮಾತುಗಳನ್ನಾಡುವುದು, ಹತ್ತಿರದ ಸಂಬಂಧಿಗಳು ಅಳುವುದು ಮುಂತಾದುವು ನಡೆಯದಂತೆ ನೋಡಿಕೊಳ್ಳಬೇಕು. ಆಪ್ತರಾದ ಒಬ್ಬಿಬ್ಬರನ್ನು ಹೊರತುಪಡಿಸಿ ಉಳಿದವರನ್ನು ದೂರ ಕಳುಹಿಸಬೇಕು. ಕಚ್ಚಿದ ಹಾವು ವಿಷದ ಹಾವಲ್ಲ, ಒಮ್ಮೆ ಹೌದಾದರೂ ಅದಕ್ಕೆ ಚಿಕಿತ್ಸೆಯಿದೆಯೆಂದು ಅವನಿಗೆ ಧೈರ್ಯವನ್ನು ತುಂಬಬೇಕು.ನೂರಕ್ಕೆ ಐವತ್ತು ಮಂದಿ ಹೆದರಿಕೊಂಡೇ ಹೃದಯ ಕ್ರಿಯೆ ನಿಂತು ಸಾಯುವ ಸಂದರ್ಭವೇ ಹೆಚ್ಚು. ಆದ್ದರಿಂದ ಸಮಯಕ್ಕೆ ಸರಿಯಾಗಿ ಸರಿಯಾದ ವೈಜ್ಞಾನಿಕ ತಿಳಿವಳಿಕೆ ಮತ್ತು ಸಮಾಧಾನದ ಮಾತುಗಳನ್ನಾಡಿ ಆ ವ್ಯಕ್ತಿಯು ಶಾಂತಚಿತ್ತನಾಗಿರುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

೨. ಹಾವು ಕಚ್ಚಿದ ವ್ಯಕ್ತಿಗೆ ಕೂಡಲೇ ಕಚ್ಚಿದ ಘಾಯದ ಮೇಲು ಭಾಗದಲ್ಲಿ ಸುಮಾರು ಒಂದು ಅಡಿ ಅಂತರದಲ್ಲಿ ಕಟ್ಟನ್ನು ಸಾಧ್ಯವಾದಷ್ಟು ಮಟ್ಟಿಗೆ ಅತಿ ಗಟ್ಟಿಯಾಗಿ ಹಾಕಬೇಕು. ತಕ್ಷಣ ಚುರುಕಾಗಿ ಬಟ್ಟೆಯನ್ನು ಉದ್ದವಾಗಿ ಹರಿದು ಸಣ್ಣದಾದ ಉದ್ದನೆಯ, ಗಟ್ಟಿಯಾದ ಹುರಿ [ ಹಗ್ಗ ] ಯನ್ನು ತಯಾರು ಮಾಡಿಕೊಳ್ಳಬೇಕು. ಈ ಹಗ್ಗದ ಸಹಾಯದಿಂದ ಕಟ್ಟನ್ನು ಹಾಕಬೇಕು. ಹಾವು ಕಚ್ಚಿದ ಘಾಯದಿಂದ ಮೇಲ್ಭಾಗಕ್ಕೆ ರಕ್ತವು ಸಂಚರಿಸಿ ಅದು ಮೆದುಳನ್ನು ಸೇರಬಾರದು. ಹಾಗೆ ಸೇರದಂತೆ ಕಟ್ಟನ್ನು ಹಾಕಬೇಕು. ಹೀಗೆ ಸುತ್ತಿ ಕಟ್ಟನ್ನು ಹಾಕುವಾಗ ಹಾಕುತ್ತಿರುವ ಸುತ್ತು ಸಡಿಲವಾಯಿತೆಂದು ನಮಗೆನ್ನಿಸಿದರೆ ಆ ಸುತ್ತನ್ನು ಖಂಡಿತಾ ಹಿಂದೆ ತೆಗೆಯಬಾರದು. ಹಾಗೆಯೇ ಸುತ್ತಿಬಿಡಬೇಕು. ಒಮ್ಮೆ ಹಾಗೆ ತೆಗೆದರೆ ತಕ್ಷಣ ರಕ್ತವು ಘಾಯದಿಂದ ವಿಷವನ್ನು ತೆಗೆದುಕೊಂಡು ರಭಸದಿಂದ ಮೆದುಳನ್ನು ಸೇರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಂಥಹ ಸಮಯದಲ್ಲಿ ಮೊದಲು ಹಾಕಿದ ಕಟ್ಟಿನ ಪಕ್ಕದಲ್ಲಿ, ಅದರ ಮೇಲ್ಭಾಗದಲ್ಲಿ ಮತ್ತೊಂದು, ಅಗತ್ಯ ಬಿದ್ದರೆ ಮಗದೊಂದು ಕಟ್ಟನ್ನು ಅತಿ ಬಿಗುವಾಗಿ ಹಾಕಬೇಕು. ಯಾವ ಕಾರಣಕ್ಕೂ ಘಾಯದ ಕೆಳಭಾಗಕ್ಕೆ ಕಟ್ಟನ್ನು ಹಾಕಲೇಬಾರದು. ಏಕೆಂದರೆ ರಕ್ತವು ಮದುಳಿನತ್ತ ಹೋಗುವುದು ಮೇಲ್ಭಾಗಕ್ಕೆ ಸರಿ. ರಕ್ತವು ಹಾವಿನ ವಿಷವನ್ನು ತೆಗೆದುಕೊಂಡು ಮೆದುಳನ್ನು ಸೇರಬಾರದು. ಈ ಕಾರಣಕ್ಕಾಗಿಯೇ ಘಾಯದ ಮೇಲ್ಭಾಗಕ್ಕೇ ಕಟ್ಟನ್ನು ಹಾಕಬೇಕಾದುದು ಮುಖ್ಯ. ಈ ಕಟ್ಟನ್ನು ಹಾಕುವ ಪ್ರಕ್ರಿಯೆ ಅತ್ಯಂತ ಅಗತ್ಯವಾದ ಪ್ರಥಮ ಚಿಕಿತ್ಸೆ.

೩. ಹಾವು ಕಚ್ಚಿದ ಘಾಯದ ಮೇಲೆ [ ಘಾಯಕ್ಕೆ ] ' x 'ಗುರುತಿನ ರೀತಿಯಲ್ಲಿ ಹರಿತವಾದ ಚಾಕುವಿನಿಂದ ಅಥವಾ ಹೊಸ ಶೇವಿಂಗ್ ಬ್ಲೇಡಿನ ಸಹಾಯದಿಂದ ಗೀರಿ ಧಾರಾಳವಾಗಿ ರಕ್ತವು ಸೋರಿ ಹೋಗುವಂತೆ ಮಾಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಘಾಯವನ್ನು ಚೆನ್ನಾಗಿ ತೊಳೆಯಬೇಕು.

೪. ಕೋಳಿಗೆ ಹಾವಿನ ವಿಷವನ್ನು ಹೀರುವ ಶಕ್ತಿ ಇದೆ. ಆದರೆ ಬಾಯಿಯಿಂದ ಅಲ್ಲ, ಅದರ ಪೃಷ್ಠದಿಂದ ಮಾತ್ರ. ಹಳ್ಳಿಯ [ ಗಾವಟಿ ] ಕೋಳಿಯು ಒಳ್ಳೆಯದು. ಹಳ್ಳಿಯ ಕಪ್ಪು ಕೋಳಿಯಾಗಬೇಕು. ಅದಕ್ಕೆ ಹಾವಿನ ವಿಷವನ್ನು ಹೀರುವ ಶಕ್ತಿ ಹೆಚ್ಚು ಇರುತ್ತದೆ. ಇಂಥಹ ಕೋಳಿಯ ಪೃಷ್ಠಭಾಗವನ್ನು ಹಾವು ಕಚ್ಚಿದ ಘಾಯದ ಮೇಲೆ ಒತ್ತಿ ಹಿಡಿಯಬೇಕು. ಹೀಗೆ ಹಿಡಿದಾಗ ವಿಷವು ಕೋಳಿಯಿಂದ ಹೀರಲ್ಪಟ್ಟು ಕೋಳಿಯು ಸಾಯುತ್ತದೆ. ಹೀಗೆಯೇ ೫ - ೬ ಕೋಳಿಗಳನ್ನು ಪ್ರಯೋಗಿಸಬೇಕು. ಎಲ್ಲಿಗೆ ಕೋಳಿ ಸಾಯುವುದು ನಿಲ್ಲುತ್ತದೆಯೋ ಅಲ್ಲಿಯವರೆಗೂ ಈ ಕೋಳಿ ಚಿಕಿತ್ಸೆಯನ್ನು ಮುಂದುವರೆಸಬೇಕು. ಈ ತೆರನಾದ ಪ್ರಥಮ ಚಿಕಿತ್ಸೆಗೆ ಸಾಮಾನ್ಯವಾಗಿ ಮೂರು ಕೋಳಿಯಿಂದ ಎಂಟು ಕೋಳಿಯವರೆಗೂ ಬೇಕಾಗುತ್ತದೆ. ಈ ಸಂಖ್ಯೆ ಮನುಷ್ಯನ ದೇಹದೊಳಕ್ಕೆ ಸೇರಿದ ಹಾವಿನ ವಿಷದ ಪ್ರಮಾಣವನ್ನು ಅನುಸರಿಸಿ ಇರುತ್ತದೆ. ಒಂದು ವಿಚಾರ. ಇದು ಒಂದು ಪ್ರಥಮ ಚಿಕಿತ್ಸೆಯೇ ವಿನಃ ಪ್ರಾಕೃತ ಚಿಕಿತ್ಸೆಯಲ್ಲ.

೫. ಹಾವು ಕಚ್ಚಿದ ಘಾಯದ ಮೇಲೆ ಗರುಡಪಚ್ಚೆ ಮಣಿಯನ್ನು ಇಡಬಹುದು ಅಥವಾ ಘೇಂಡಾಮೃಗದ ಕೋಡನ್ನು ನೀರಿನಲ್ಲಿ ಸ್ವಲ್ಪ ತೇಯ್ದು ಕುಡಿಸಬಹುದು. ಇದೂ ಒಂದು ಪ್ರಥಮ ಚಿಕಿತ್ಸೆ.

೬. ಹಾವು ಕಚ್ಚಿದ ವ್ಯಕ್ತಿ ನಡೆದಾಡಕೂಡದು ಅಥವಾ ಕಚ್ಚಿಸಿಕೊಂಡ ಅಂಗ ಚಲಿಸದಂತೆ ನೋಡಿಕೊಳ್ಳಬೇಕು. ಹಾಗೆ ಮಾಡಿದರೆ ರಕ್ತಸಂಚಾರಕ್ಕೆ ಅವಕಾಶವಾಗಿ ವಿಷವು ಬೇಗ ಮೆದುಳಿಗೆ ಸೇರುವ ಸಾಧ್ಯತೆ ಹೆಚ್ಚು.

೭. ಹಾವು ಕಚ್ಚಿದ ವ್ಯಕ್ತಿಗೆ ಟೀ, ಕಾಫೀ, ಹಾಲು ವಗೈರೆ ಪಾನೀಯಗಳನ್ನು ಕೊಡಬಾರದು. ಊಟ ಮತ್ತು ಆಹಾರಗಳನ್ನು ಖಂಡಿತ ಕೊಡಕೂಡದು. ತೀರಾ ಅಗತ್ಯ ಬಿದ್ದಲ್ಲಿ ಒಂದು ಗುಟುಕು ನೀರನ್ನು ಕೊಡಬಹುದು.

೮. ಹಾವು ಕಡಿದವರು ನಿದ್ರೆ ಮಾಡದಂತೆ ಕಟ್ಟು ನಿಟ್ಟಾಗಿ ನೋಡಿಕೊಳ್ಳಬೇಕು. ಹಾವು ಕಡಿದವರಿಗೆ ನಿದ್ರೆ ಹೆಚ್ಚು ಬರುವ ಸಾಧ್ಯತೆ ಇದೆ. ಇದು ಅತ್ಯಂತ ಮಹತ್ವದ ಸೂಚನೆ.

ಈ ಮೇಲ್ಕಂಡ ಎಲ್ಲಾ ಪ್ರಥಮ ಚಿಕಿತ್ಸೆಗಳಲ್ಲಿ ಒಂದು, ಎರಡು, ಏಳು ಮತ್ತು ಎಂಟನೆಯದು ಅತಿ ಮುಖ್ಯವಾಗಿ ಮಾಡಲೇಬೇಕಾದಂಥಹ ಪ್ರಥಮ ಚಿಕಿತ್ಸೆಗಳು.

ಇಲ್ಲಿಗೆ ಹಾವು ಕಚ್ಚಿದ ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಮಾಹಿತಿ ಮುಗಿಯಿತು. ಮುಂದಿನ ಚಿಕಿತ್ಸೆಯ ಮಾಹಿತಿಗಾಗಿ ಮೂರನೆಯ ಕಂತನ್ನು ಓದಿ.

==================================================================================

ಹಾವು ಕಚ್ಚಿದ ಬಗ್ಯೆ ಮಾಹಿತಿ :

ಮೂರನೆಯ ಕಂತು :

ತಾರೀಖು :೨೭ -೬ -೨೦೧೪.

ಮಾಹಿತಿಯ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಅಂಚೆ ಮತ್ತು ಊರು : ಗೆಣಸಿನಕುಣಿ. - ೫೭೭೪೫೩ ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ. ಸರ್ಪ ವಿಷ ಪರಿಹಾರಕರು ಮತ್ತು ನಾಟಿ ವೈದ್ಯರು.

ಶ್ರೀ ಕೇಶವ ಹೆಗಡೆಯವರು ಹಾವು ಕಚ್ಚಿದ್ದಕ್ಕೆ ಮಾಡುವ ಚಿಕಿತ್ಸೆ ಮತ್ತು ಹಾವು ಕಚ್ಚುವುದರ ಕುರಿತು ಅವರು ನೀಡುವ ವಿವರಣೆ :

ವಿವರಣೆ :

ಹಾವು ಎಂದ ಮಾತ್ರಕ್ಕೆ ಎಲ್ಲಾ ಹಾವುಗಳೂ ವಿಷದ ಹಾವುಗಳು ಎಂದು ತಿಳಿಯಬಾರದು. ವಿಷದ ಹಾವುಗಳು ಸಹಿತ ಕಚ್ಚಿದ ಎಲ್ಲಾ ಸಂದರ್ಭಗಳಲ್ಲಿ ಒಂದೇ ಪ್ರಮಾಣದಲ್ಲಿ ವಿಷವನ್ನು ನಮ್ಮ ದೇಹಕ್ಕೆ ಬಿಟ್ಟಿರುವುದಿಲ್ಲ. ನಾಗರ ಹಾವು ,ಮಂಡಲದ ಹಾವು ಮತ್ತು ಇನ್ನಿತರೆ ಬೇರೆ ರೀತಿಯ ಹಾವುಗಳು ಈ ಮೂರು ನಮೂನೆ ಹಾವುಗಳ ಕಚ್ಚುವಿಕೆಯ ಪರಿಣಾಮ ಬೇರೆ ಬೇರೆ ಇದೆ. ಈ ರೀತಿಯಲ್ಲಿ ಬೇರೆ ಬೇರೆ ಹಾವುಗಳು ಕಚ್ಚಿದಾಗ ಬೇರೆ ಬೇರೆ ಔಷಧ ಮತ್ತು ಬೇರೆ ಬೇರೆ ಚಿಕಿತ್ಸೆಯಿದೆ.

ಹಾವು ಕಚ್ಚಿದವರೆಲ್ಲ ಸಾಯುತ್ತಾರೆ ಎಂಬ ಭ್ರಮೆಯನ್ನು ಜನ ಬಿಡಬೇಕು. ಹಾವು ಕಚ್ಚಿದ ಕೂಡಲೆ ಹೆದರಿಕೆಯಿಂದಲೇ ಕೆಲವರು ಹೃದಯಾಘಾತದಿಂದ ಸಾಯುವವರಿದ್ದಾರೆ. ಇದು ಆಗಬಾರದು. ಅದಕ್ಕೆ ವರ್ತಮಾನದ ಕಾಲದಲ್ಲಿ ಅನೇಕ ರೀತಿಯ ಚಿಕಿತ್ಸೆಯಿದೆ. ಅದರಂತೆಯೇ ನಾನು ಕೂಡಾ ನನ್ನದೇ ಕ್ರಮದಲ್ಲ್ಲಿ ನನ್ನಲ್ಲಿ ಕೇಳಿ ಬಂದವರಿಗೆ ಚಿಕಿತ್ಸೆಯನ್ನು ಮಾಡುತ್ತೇನೆ. ಇದು ನನ್ನ ದುಡಿಮೆಯ ಉದ್ಯೋಗವಲ್ಲ. ನಿರಾಪೇಕ್ಷೆಯಿಂದ ಸಮಾಜಕ್ಕೆ ಸಲ್ಲಿಸುವ ಕೇವಲ ಸೇವೆ ಅಷ್ಟೇ. ನಾನು ನೀಡಿದ ಚಿಕಿತ್ಸೆಗಾಗಿ ಯಾರಿಂದಲೂ ಹಣವನ್ನಾಗಲಿ ಅಥವಾ ಇನ್ನಿತರೆ ಯಾವುದೇ ಪ್ರತಿಫಲವನ್ನಾಗಲೀ ತೆಗೆದುಕೊಳ್ಳುವುದಿಲ್ಲ. ಹಾಗೆಂದು ಮೂವತ್ತನಾಲ್ಕು ವರ್ಷಗಳಿಂದ ,ಅಂದರೆ ೧೯೮೦ನೇ ಇಸವಿಯಿಂದ ಇಂದಿನವರೆಗೆ ಸುಮಾರು ಹನ್ನೊಂದು ಸಾವಿರ ಮಂದಿ ಹಾವು ಕಚ್ಚಿಸಿಕೊಂಡು ಬಂದವರಿಗೆ ಸಮಯೋಚಿತವಾಗಿ ಕೇವಲ ಉಚಿತವಾಗಿ ಚಿಕಿತ್ಸೆ ಮತ್ತು ಔಷಧವನ್ನು ಕೊಟ್ಟಿರುತ್ತೇನೆ. ಅಲ್ಲದೆ ಅದರಲ್ಲಿ ಯಶಸ್ವಿಯಾಗಿದ್ದೇನೆ. ಇದರಲ್ಲಿ ನಾನು ಕಂಡುಕೊಂಡ ಯಶಸ್ಸು ಜನರು ತಾವಾಗಿಯೇ ನನ್ನನ್ನು ಹುಡುಕಿಕೊಂಡು ಬರುವಂತೆ ಆಗಿದೆ ಎಂದು ಭಾವಿಸುತ್ತೇನೆ.

ನಮ್ಮ ಭಾಗದಲ್ಲಿ ಬಹಳ ಹಿಂದೆ ಶ್ರೀ ಶ್ರೀಪಾದ ಆಚಾರ್ ಎನ್ನುವವರು ಸರ್ಕಾರಿ ಅರೋಗ್ಯ ತಪಾಸಕರಾಗಿ ನೇಮಕಗೊಂಡಿದ್ದರು. ಅವರು ನಮ್ಮ ಪೂಜ್ಯ ತಂದೆಯವರಾದ ಶ್ರೀ ಜಿ.ಡಿ.ತಿಮ್ಮಪ್ಪ ಹೆಗಡೆಯವರಿಗೆ ೧೯೪೦ನೆ ಇಸವಿಯಲ್ಲಿ ಸರ್ಪ ಕಚ್ಚಿದ ಚಿಕಿತ್ಸೆಗೆ ಮಂತ್ರೋಪದೇಶವನ್ನು ನೀಡಿದರು. ಅಲ್ಲದೆ ನಾನು ಹಿಂದೆ ತಿಳಿಸಿದಂತೆ ಬೇರೆ ಹಾವು ಕಚ್ಚಿದರೆ ಅದಕ್ಕೆ ಆಯುರ್ವೇದ ಮತ್ತು ಗಿಡಮೂಲಿಕೆ ಔಷಧಗಳ ಮಾಹಿತಿಯನ್ನು ಅವರಿಗೆ ಕಲಿಸಿಕೊಟ್ಟರು. ಜೊತೆಗೆ ಪ್ರತಿಫಲಾಪೇಕ್ಷೆಯಿಲ್ಲದೆ ಅಗತ್ಯ ಜನರಿಗೆ ಈ ಕೆಲಸವನ್ನು ಸೇವಾಮನೋಭಾವದಿಂದ ಮಾಡಬೇಕೆಂದು ಸೂಚಿಸಿದರು. ಅದರಂತೆಯೇ ನಮ್ಮ ತಂದೆಯವರು ೧೯೪೦ನೆ ಇಸವಿಯಿಂದ ೧೯೮೦ನೆ ಇಸವಿಯವರೆಗೆ ನಲವತ್ತು ವರ್ಷಗಳ ದೀರ್ಘ ಕಾಲ ಈ ಮಂತ್ರ ಚಿಕಿತ್ಸೆ ಮತ್ತು ಔಷಧ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ೧೯೪೭ನೆ ಇಸವಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ರೀ ಕ್ಷೇತ್ರ ವರದಪುರದ ಭಗವಾನ್ ಶ್ರೀ ಶ್ರೀಧರ ಸ್ವಾಮಿಯವರು ನನ್ನ ತಂದೆಯವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಅವರು ಉಪದೇಶ ಪಡೆದುಕೊಂಡ ಸರ್ಪ ವಿಷ ನಿವಾರಣಾ ಮಂತ್ರಕ್ಕೆ ಹೆಚ್ಚಿನ ಶಕ್ತಿಯನ್ನು ಅನುಗೃಹಿಸಿದರು. ಇವೆಲ್ಲವೂ ನಂಬಿಕೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ್ದೇ ವಿನಃ ತರ್ಕಕ್ಕೆ ಸಿಗುವಂಥಹುದಲ್ಲ. ಈ ಮಂತ್ರೋಪದೇಶ ಮತ್ತು ಔಷಧದ ಮಾಹಿತಿಯನ್ನು ನನ್ನ ತಂದೆಯವರು ನಮಗೆ ನೀಡಿದರು. ನಿರಾಪೇಕ್ಷೆಯಿಂದ ಈ ಸೇವೆಯನ್ನು ಮುಂದುವರೆಸಲು ಸೂಚಿಸಿದರು. ಅದರಂತೆಯೇ ೧೯೮೦ನೆ ಇಸವಿಯಿಂದ ಇಲ್ಲಿಯವರೆಗೆ ನಾನು ಇದನ್ನು ಪ್ರಾಮಾಣಿಕವಾಗಿ ಸೇವಾಮನೋಭಾವದಿಂದ ಮುಂದುವರೆಸಿಕೊಂಡು ಬಂದಿದ್ದೇನೆ. ದೇವರ ಸ್ಮರಣೆಯಲ್ಲಿಯೆ ನಡೆಯುವ ಮಂತ್ರ ಚಿಕಿತ್ಸೆಗೆ ದೇವರು ಆ ಮಂತ್ರದಲ್ಲಿ ವೈಜ್ಞಾನಿಕ ಶಕ್ತಿಯನ್ನು ಇರಿಸಿದ್ದಾನೆ ಎಂದು ನನ್ನ ಭಾವನೆ. ಏಕೆಂದರೆ ಸರ್ಪದಿಂದ ಕಚ್ಚಿಸಿಕೊಂಡು ಬಂದ ಹಲವು ಸಾವಿರ ಮಂದಿ ನಾನು ಮಾಡುವ ಮಂತ್ರ ಚಿಕಿತ್ಸೆಯಿಂದಲೇ
ಗುಣಮುಖವಾಗಿದ್ದಾರೆ.

ಚಿಕಿತ್ಸೆಯ ಕ್ರಮಗಳು : ೧. ಸರ್ಪ ಕಚ್ಚಿದವರಿಗೆ ಈಗಾಗಲೇ ತಿಳಿಸಿದಂತೆ ಸಿದ್ಧಿಸಿದ ಮಂತ್ರದಿಂದ ಚಿಕಿತ್ಸೆ ಮಾಡಲಾಗುತ್ತದೆ. ಮಂತ್ರ ಚಿಕಿತ್ಸೆ ನೀಡಿದ ನಂತರ ಹಾವು ಕಚ್ಚಿದ ಘಾಯದ ಮೇಲ್ಭಾಗದಲ್ಲಿ ಕಚ್ಚಿದ ಕೂಡಲೆ ವ್ಯಕ್ತಿಯು ಹಾಕಿಕೊಂಡ ಕಟ್ಟನ್ನು ಬಿಚ್ಚಲಾಗುವುದು. ೨. ಮಂಡಲ ಹಾವು ಮತ್ತು ಇತರೆ ಬೇರೆ ಹಾವು ಕಚ್ಚಿದವರಿಗೆ ಆಯುರ್ವೇದ ಅಥವಾ ಗಿಡಮೂಲಿಕೆ ಔಷಧ. ಹಾವು ಕಚ್ಚಿದ ಕ್ರಮವನ್ನು ಪರೀಕ್ಷಿಸಿ ಅದು ಕಚ್ಚಿದ ವಿಧಾನ ಮತ್ತು ಕಚ್ಚಿದ ನಂತರ ಆಗುವ ಪರಿಣಾಮಗಳನ್ನು ಪರಾಮರ್ಶಿಸಿ ಇಂಥಹುದೇ ಹಾವು ಕಚ್ಚಿದೆಯೆಂದು ನಿರ್ಣಯಿಸಲಾಗುವುದು ಮತ್ತು ಅದರಂತೆ ಚಿಕಿತ್ಸೆ ಮಾಡಲಾಗುತ್ತದೆ. ದಿನದ ಯಾವುದೇ ಸಮಯದಲ್ಲಿ ಬಂದವರಿಗೂ ಘಟನೆಯ ಔಚಿತ್ಯಕ್ಕನುಸರಿಸಿ ಚಿಕಿತ್ಸೆಯನ್ನು ನೀಡಲಾಗುವುದು. ಯಾವುದೇ ಪ್ರತಿಫಲವನ್ನು ಸ್ವೀಕರಿಸಲಾಗುವುದಿಲ್ಲ.

ಈ ಮೇಲಿನ ಚಿಕಿತ್ಸೆಗಳಲ್ಲದೆ ಸರ್ಪಸುತ್ತಿಗೆ ಕೂಡ ಗಿಡಮೂಲಿಕೆಗಳಿನ್ದ ಗುಣಪಡಿಸಲಾಗುತ್ತದೆ.

No comments:

Post a Comment

Note: only a member of this blog may post a comment.