Wednesday, 29 October 2014

@ ಮನೆ ಮದ್ದು : ಬಾಳೆಹಣ್ಣು ಉಪಯೋಗ

~~~~~~~~ ಸಂಗ್ರಹ : ಎಂ.ಗಣಪತಿ.ಕಾನುಗೋಡು.
ಸುಲಭ ಬೆಲೆಯಲ್ಲಿ ಎಲ್ಲರ ಕೈಗೂ ದೊರಕುವ ಫಲ ಬಾಳೆಹಣ್ಣು. ಇದರ ಸಿಪ್ಪೆಗೆ ಕ್ರಿಮಿ, ಕೀಟಗಳ ನಿರೋಧಕ ಶಕ್ತಿ ಇದೆ. ಆದ್ದರಿಂದ ಕ್ರಿಮಿ ಈ ಹಣ್ಣನ್ನು ಭೇದಿಸಿ ಒಳಹೋಗಲಾರದು. ಒಮ್ಮೆ ಒಳಕ್ಕೆ ಹೋದರೂ ಬಾಳೆಹಣ್ಣಿನ ತಿರುಳು ಕ್ರಿಮಿನಾಶಕ ಶಕ್ತಿಯನ್ನು ಪಡೆದಿದೆ. ಯಾವುದೇ ಕಾರಣಕ್ಕೂ ಇದನ್ನು ಫ್ರಿಜ್ ನಲ್ಲಿ ಇಡಬಾರದು.
ಉಪಯೋಗ :
+ ಬಾಳೆಹಣ್ಣು ಎ, ಬಿ, ಸಿ ಮತ್ತು ಬಿ 6 ಜೀವಸತ್ವದಿಂದ ಸಮೃದ್ಧವಾಗಿದೆ.
+ ಬಾಳೆಹಣ್ಣಿನಲ್ಲಿ ಡೆಕ್ಸ್ ಟ್ರಿನ್ ಇದೆ. ಇದು ಜೀರ್ಣಶಕ್ತಿಗೆ ನೆರವಾಗುತ್ತದೆ. ದೇಹದ ತೂಕವೂ ಹೆಚ್ಚಾಗುತ್ತದೆ. ಆದ್ದರಿಂದ ಇದು ಉತ್ತಮ ಆಹಾರ.
+ ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ಸಣ್ಣ ಮಕ್ಕಳ ಒಂದು ದಿನದ ಪರಿಪೂರ್ಣ ಆಹಾರವಾಗುತ್ತದೆ.
+ ಹಾಲು ಮತ್ತು ಜೇನುತುಪ್ಪದೊಡನೆ ಬಾಳೆಹಣ್ಣನ್ನು ಎಳೆಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ರಕ್ತ ಪುಷ್ಟಿಯಾಗುತ್ತದೆ.
+ ಎಲುಬು ರೋಗಗಳಿಂದ ನರಳುತ್ತಿರುವ ಮಕ್ಕಳಿಗೆ ಬಾಳೆಹಣ್ಣು ಉತ್ತಮ ಆಹಾರ.
+ ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬಾಳೆಹಣ್ಣನ್ನು ಸೇವಿಸಿದರೆ ಎದೆನೋವು ಮತ್ತು ಕೆಮ್ಮು ಕಡಿಮೆಯಾಗುತ್ತದೆ. ಆದರೆ ಉಷ್ಣ ಪ್ರಕೃತಿಯವರು ಒಣಕೆಮ್ಮು ಇದ್ದರೆ ಸ್ವಲ್ಪ ಪ್ರಯೋಗಿಸಿ ತಿನ್ನುವುದು ಅನುಕೂಲ. ಏಕೆಂದರೆ ಜೇನುತುಪ್ಪ ಉಷ್ಣಪ್ರೇರಿತವಾದದ್ದು. ಸಕ್ಕರೆಯೂ ಸ್ವಲ್ಪ ಉಷ್ಣವೇ. ಜೋನಿ ಬೆಲ್ಲ ತಂಪು. ಆದರೆ ಅಚ್ಚಿನ ಬೆಲ್ಲ ಉಷ್ಣ.
+ ಊಟದ ನಂತರ ಪ್ರತಿದಿನ ರಾತ್ರಿ ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸಿದರೆ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಗಂಧಕ ಮತ್ತು ಕಬ್ಬಿಣದ ಅಂಶವಿರುವುದರಿಂದ ಬಲವರ್ಧಕವೂ ಮತ್ತು ವೀರ್ಯವರ್ಧಕವೂ ಆಗಿದೆ.
+ ಗರ್ಭಿಣಿಯರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ರಕ್ತಪುಷ್ಟಿ ಹೆಚ್ಚಾಗುತ್ತದೆ. ಅಲ್ಲದೆ ಹೆರಿಗೆಯೂ ಬಹುಸುಲಭವಾಗಿ ಆಗುತ್ತದೆ.
+ ಪ್ರತಿದಿನವೂ ಕ್ರಮವಾಗಿ ಬಾಳೆಹಣ್ಣನ್ನು ತಿನ್ನುವುದರಿಂದ ಮೈಯಲ್ಲಿನ ಮಾಂಸ ವೃದ್ಧಿಯಾಗುತ್ತದೆ. ಹೀಗೆ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರಲ್ಲಿರುವ ನಾರಿನ ಅಂಶವು ಮಲಬದ್ಧತೆಯ ನಿವಾರಣೆಗೆ ಸಹಕಾರಿ.
+ ಬಾಳೆಹಣ್ಣಿನ ತಿರುಳನ್ನು ಹಸುವಿನ ಹಾಲಿನಲ್ಲಿ ಚೆನ್ನಾಗಿ ಅರೆದು [ಮೆದ್ದು] ಅದಕ್ಕೆ ಬಾಳೆಹೂವಿನ ರಸ ಸೇರಿಸಿ ಸುಮಾರು ಐವತ್ತು ದಿನಗಳ ಕಾಲ ಪ್ರತಿದಿನ ಒಂದು ಚಮಚ ಸೇವಿಸಿದರೆ ಶರೀರದ ತೂಕ ಇಳಿಯುತ್ತದೆ. ಸ್ಥೂಲಕಾಯರು ತೆಳ್ಳಗಾಗುತ್ತಾರೆ.
+ ಬಾಳೆಹಣ್ಣನ್ನು ಮೊಸರಿನಲ್ಲಿ ಕಿವಿಚಿಕೊಂಡು ತಿಂದರೆ ಕಣ್ಣು ಉರಿ, ಅಂಗಾಲು ಉರಿ ಶಾಂತವಾಗುವುದು.ಮತ್ತು ಮಲಬದ್ಧತೆಯು ನಿವಾರಣೆಯಾಗುವುದು. ಕರುಳಿನ ತೊಂದರೆಗಳು ನಿವಾರಣೆಯಾಗುತ್ತವೆ.
+ ಗಾಂಜಾ, ಆಫೀಮು ಸೇವಿಸಿ ಉಂಟಾಗಿರುವ ಹಾನಿಯನ್ನು ನಿವಾರಿಸಲು ಬಾಳೆದಿಂಡಿನ ರಸವನ್ನು ಸೇವಿಸಬೇಕು. [ ಬಂಗೀಪಾನಕದ ಅಮಲನ್ನು ಇಳಿಸಲು ಇದು ಅನುಕೂಲ ]
+ ಬಾಳೆ ಎಳೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಭಿಕ್ಕಳಿಕೆ ದೂರವಾಗುತ್ತದೆ.
+ ಮೈನೆರೆದ ಹುಡುಗಿಯರಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ಬಾಳೆಹೂವಿನ ರಸವನ್ನು ಮೊಸರಿನಲ್ಲಿ ಕೊಡುವುದರಿಂದ ಬಹುಬೇಗ ಗುಣವಾಗುತ್ತದೆ.
+ ಬಾಳೆಕಾಯಿಯನ್ನು ಬಿಸಿಬೂದಿಯಲ್ಲಿ ಸುಟ್ಟು ತಿನ್ನುವುದರಿಂದ ರಕ್ತಭೇದಿ ತಕ್ಷಣ ನಿಲ್ಲುತ್ತದೆ
+ ಉಪವಾಸವಿದ್ದು ದೇಹವು ದಣಿದಿದ್ದರೆ ಒಂದು ಬಾಳೆಹಣ್ಣು ತಿಂದರೆ ಸಾಕು. ಅದರಲ್ಲಿರುವ ಗ್ಲೂಕೋಸ್, ಸಕ್ಕರೆ ಅಂಶವು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.
+ ಅನಿಮೀಯಾದಿಂದ ನರಳುತ್ತಿರುವವರಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುವಂತೆ ಮತ್ತು ಬೆಳಗ್ಯಿನ ಸುಸ್ತನ್ನು ಕಡಿಮೆ ಮಾಡಲು ಇದು ಸಹಕಾರಿ.
+ ಮಾನಸಿಕ ಒತ್ತಡದಿಂದ ನರಳುತ್ತಿದ್ದರೂ ಸಹ ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ಮನಸ್ಸಿಗೆ ರಿಲ್ಯಾಕ್ಸ್ ದೊರೆಯುತ್ತದೆ. ಬಾಳೆಹಣ್ಣಿನಲ್ಲಿರುವ ಬಿ 6 ಜೀವಸತ್ವವು ನಮ್ಮ ಮನಸ್ಸು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.
+ ಸೊಳ್ಳೆ ಕಚ್ಚಿದ ಭಾಗಕ್ಕೆ ಬಾಳೆಹಣ್ಣನ್ನು ಉಜ್ಜಿದರೆ ನವೆ ಮತ್ತು ಉರಿ ಕಡಿಮೆಯಾಗುತ್ತದೆ.
ತಾರೀಖು : 29 - 10 - 2014
ಮಾಹಿತಿಯ ಕೃಪೆ : ನುರಿತ ನಾಟಿ ವೈದ್ಯರು.

Thursday, 23 October 2014

ಮೈಗ್ರೇನ್ ತಲೆನೋವು ಎಂದರೆ ಏನು ? ಹೇಗೆ ? ಏಕೆ ?.

                                                       

                                                           ಸಂಗ್ರಹ : ಎಂ. ಗಣಪತಿ. ಕಾನುಗೋಡು.


ಮೈಗ್ರೇನ್  [ Mygraine ] ಎನ್ನುವುದು ತಲೆನೋವಿನ ಒಂದು ಪ್ರಾಕಾರ. ಇದು ಇರುವವರಿಗೆ ತಲೆನೋವು ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಆಯಾಸದ ಸಂದರ್ಭಗಳಲ್ಲಿ ಕಂಡುಬರುತ್ತದೆ.

ಹಾಗೆಂದು ಎಲ್ಲಾ ತಲೆನೋವುಗಳೂ ಮೈಗ್ರೇನ್ ಅಲ್ಲ. ದೃಷ್ಟಿದೋಷ, ನೆಗಡಿಗೆ ಸಂಬಂಧಿಸಿದ ತೊಂದರೆಗಳು, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಆದರೆ ಅದು ಮೈಗ್ರೇನ್ ಅಲ್ಲ. ಆದರೆ ಮೈಗ್ರೇನ್ ತಲೆನೋವು ಅತ್ಯಂತ ಸಾಮಾನ್ಯವಾದದ್ದು.

ಮೈಗ್ರೇನ್ ಎಂದರೇನು ?.

ಕೆಲವು ಕಾರಣಗಳಿಂದ ಒಂದು ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ತಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ.ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದೇ ಮೈಗ್ರೇನ್.

ಇದರ ಲಕ್ಷಣಗಳು :-

ಈ ತರಹೆಯ ನೋವು ತಲೆಯ ಯಾವ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು  ಹಾಗೂ  ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೇವಲ ಕಣ್ಣಿನ ಸುತ್ತ ಮಾತ್ರವೇ ಕಾಣಿಸಿಕೊಳ್ಳಬಹುದು. ಕೆಲವರಿಗೆ ಹಿಂಭಾಗದಲ್ಲಿ ಕುತ್ತಿಗೆಯವರೆಗೂ ನೋವು ಕಾಣಿಸಿಕೊಳ್ಳಬಹುದು. ಹೆಚ್ಚಾಗಿ, ತೀವ್ರವಾದ ತಲೆನೋವು ತಲೆಯ ಎಡ ಅಥವಾ ಬಲ ಭಾಗದಲ್ಲಿ ಇರುತ್ತದೆ.

ಈ ಮೇಲಿನ ಲಕ್ಷಣಗಳಲ್ಲದೆ ವಾಂತಿ, ಹೊಟ್ಟೆ ತೊಳಸಿದಂತೆ ಆಗುವುದು, ತಲೆ ಸುತ್ತಿದಂತೆ ಆಗುವುದು,  ಕೆಲವರಿಗೆ  ಹೆಚ್ಚು ಶಬ್ದ, ವಾಸನೆ, ಬೆಳಕುಗಳಿಂದ ಅಸಹನೆ ಹೆಚ್ಚಾಗಬಹುದು, ಮಾತನಾಡಲು ಕಷ್ಟವಾಗಬಹುದು, ಕೈ ಅಥವಾ ಕಾಲು ಮರಗಟ್ಟಿದ / ಬಿಗಿಯಾದ ಅನುಭವವಾಗಬಹುದು. Classic Migraine ಎಂಬ ರೀತಿಯಲ್ಲಿ  ತಲೆನೋವು ಬರುವ ಮುನ್ನ ದೃಷ್ಟಿ ಮಂಜಾದಂತೆ, ಮಿಂಚಿದಂತೆ ಅಥವಾ ಬಣ್ಣ ಬಣ್ಣದ ಅಲೆಗಳು ಕಾಣಿಸಿದಂತೆ ಸಹ ಆಗಬಹುದು.

ಇದಕ್ಕೆ ನಿರ್ಧಿಷ್ಟ ಕಾರಣವನ್ನು ಹೇಳಲಾಗದಿದ್ದರೂ ಈ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಬಹುದು.

1  ಹೆಚ್ಚು ಕೆಲಸದಿಂದಾಗಿ ಮಾನಸಿಕ ಒತ್ತಡ ಇರುವ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇದು ಸಾಮಾನ್ಯ. ಅವರಿಗೆ ದಿನದ ಹೆಚ್ಚುಕಾಲ  ಒತ್ತಡದ ಕೆಲಸ ಮತ್ತು ನಿದ್ರೆ ಕಡಿಮೆ, ಅನಿಯಮಿತ ಆಹಾರದ ಸೇವನೆ ಇರುತ್ತದೆ.

2 . ಮಾನಸಿಕ ಒತ್ತಡಗಳಾದ ಕೋಪ,ಚಿಂತೆ, ಖಿನ್ನತೆ,ಗಾಬರಿಗಳಿಂದ ತಲೆನೋವು ಉದ್ರೇಕವಾಗಬಹುದು.

3 .ಆಹಾರ ಸೇವನೆಯಿಂದ ವ್ಯತ್ಯಾಸವಾದ ಹಸಿವೆ, ಮದ್ಯ ಸೇವನೆ, ಕಡಿಮೆ ನೀರು ಕುಡಿಯುವುದರಿನ್ದಲೂ ತಲೆನೋವು ಉದ್ರೇಕವಾಗುತ್ತದೆ.

4 . ನಿದ್ರೆ ಮಾತ್ರೆ ಸೇವನೆ,  ಬಿ. ಪಿ.,  ಹಲ್ಲು ನೋವು, ಕಣ್ಣಿನ ತೊಂದರೆ, ತಂಬಾಕು ಅಥವಾ ಸಿಗರೇಟು ಸೇವನೆ, ಗರ್ಭನಿರೋಧಕ ಮಾತ್ರೆ, ಮೂಗಿನ ಉಸಿರಾಟದ ತೊಂದರೆ, ಸಂಸ್ಕರಿಸದ ಆಹಾರ ಸೇವನೆ, ಅತಿ ಮುಖ್ಯವಾಗಿ ನಿದ್ರಾಹೀನತೆ ಮುಂತಾದುವುಗಳಿಂದ ಸಹ ತಲೆನೋವು ಉದ್ರೇಕಗೊಳ್ಳಬಹುದು.

5 . ಹೆಚ್ಚು ಕಾಲ ಬಿಸಿಲಿನಲ್ಲಿ ಇರುವುದು, ದೀರ್ಘಕಾಲ ಪ್ರಯಾಣ ಮಾಡುವುದು, ಮದುವೆ ಅಥವಾ ಇತರೆ ಗಲಾಟೆ ಇರುವ ಸಮಾರಂಭದಲ್ಲಿ ಹೆಚ್ಚು ಹೊತ್ತು ಭಾಗವಹಿಸುವುದು, ಕೆಲವರಿಗೆ  ಹೆಚ್ಚಾಗಿ ಓದುವುದು, ಹೆಚ್ಚು ಕಾಲ ಸಿನೆಮಾ / ಟಿ. ವಿ, ನೋಡುವುದು ಇವುಗಳಿಂದ ತಲೆನೋವು ಉದ್ರೇಕಗೊಳಬಹುದು.

6 . ಕೆಲವು ಸ್ತ್ರೀಯರಿಗೆ ಋತುಚಕ್ರದ ಏರುಪೇರುಗಳಿಂದ ತಲೆನೋವು ಉದ್ರೇಕಗೊಳ್ಳಬಹುದು.

ಒಟ್ಟಿನಲ್ಲಿ ಈ ಕಾರಣಗಳು ಒಬ್ಬರಿಗಿಂತ ಮತ್ತೊಬ್ಬರಿಗೆ ವ್ಯತ್ಯಾಸವಾಗುತ್ತವೆ.

ಮೈಗ್ರೇನ್ ನ ನಿವಾರಣೆ :-

1 . ಮೈಗ್ರೇನ್ ತಲೆನೋವು ಬಂದಾಗ ಕೆಲವರಿಗೆ ಯಾವುದಾದರೂ ನೋವು ನಿವಾರಕ ಮಾತ್ರೆಯನ್ನು [ Pain killer ] ತೆಗೆದುಕೊಂಡರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗುತ್ತದೆ.

2 . ಇನ್ನು ಕೆಲವರಿಗೆ ಏನನ್ನೂ ಉಪಯೋಗಿಸದೆ ನಿಷ್ಯಬ್ದವಾದ ಕೊಠಡಿಯಲ್ಲಿ ಕೆಲವು ಕಾಲ ವಿಶ್ರಾಂತಿ ತೆಗೆದುಕೊಳ್ಳುವುದರಿಂದಲೇ ತಲೆನೋವು ಕಡಿಮೆಯಾಗುತ್ತದೆ.

3 . ಇದಲ್ಲದೆ ಜೀವನ ಶೈಲಿಯನ್ನ್ನು ಬದಲಾಯಿಸಿಕೊಳ್ಳುವುದರಿಂದ ಈ ತೆರನ ತಲೆನೋವನ್ನು ನಿಯಂತ್ರಿಸಿಕೊಳ್ಳಬಹುದು. ಅ ) ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು. ಬ ) ನಿತ್ಯ ವ್ಯಾಯಾಮ. ಕ ) ಸರಿಯಾದ ಊಟದ ಕ್ರಮ. ಪೌಷ್ಟಿಕ ಆಹಾರದ ಸೇವನೆ. ಡ ) ತಂಬಾಕು, ಮದ್ಯ ಸೇವನೆಯಿಂದ ದೂರ ಇರುವುದು. ಕಾಫಿ ಕುಡಿಯುವುದನ್ನು ಕಡಿಮೆ ಮಾಡುವುದು. ಇ ) ಜೀವನದ ಬಗ್ಯೆ ಸಕಾರಾತ್ಮಕ ಮನೋಭಾವ.


ಮೈಗ್ರೇನ್ ತಲೆನೋವಿಗೆ ಹೆಚ್ಚಿನ ಚಿಕಿತ್ಸೆ :-

---  ಮೈಗ್ರೇನ್ ತಲೆನೋವಿಗೆ ಶಾಶ್ವತ ಪರಿಹಾರ ಇಲ್ಲ. ಆದರೆ ಈ ತರಹೆಯ ತಲೆನೋವನ್ನು ಅದಕ್ಕೆ ಸಂಬಂಧಿಸಿದ ಔಷಧಗಳನ್ನು ಉಪಯೋಗಿಸುವುದರಿಂದ ಸಾಕಷ್ಟು ನಿಯಂತ್ರಿಸಬಹುದು.

---  ಮೈಗ್ರೇನ್ ನಿವಾರಣ ಔಷಧಗಳಲ್ಲಿ ಎರಡು ತರಹೆಗಳಿರುತ್ತವೆ. ಒಂದು ನೋವು ಬಂದಾಗ ಮಾತ್ರ ಉಪಯೋಗಿಸುವ ಔಷಧಗಳು. ಮೈಗ್ರೇನ್ ತಲೆನೋವು ತಿಂಗಳಿಗೆ 4 - 6 ಕ್ಕಿಂತ ಕಡಿಮೆ ಸಾರಿ ಬರುತ್ತಿದ್ದರೆ ಆ ದಿನಗಳಲ್ಲಿ ಮಾತ್ರ ನೋವು ನಿವಾರಕ ಮಾತ್ರೆ ಉಪಯೋಗಿಸುತ್ತಿದ್ದರೆ ಸಾಕು.

---  ಆದರೆ ಅದು ತಿಂಗಳಲ್ಲಿ ನಾಲ್ಕಾರು ಭಾರಿಗಿಂತಲೂ ಹೆಚ್ಚು ಬರುತ್ತಿದ್ದರೆ ಅದನ್ನು ತಡೆಗಟ್ಟುವ ಔಷಧವನ್ನು ನಿತ್ಯವೂ ಕೆಲವು ವಾರಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ.ಇದರಿಂದ ತಲೆನೋವು ಬರುವ ಶೀಘ್ರತೆ ಹಾಗೂ ತೀವ್ರತೆ ಕಡಿಮೆಯಾಗುತ್ತದೆ.

ಹೆಚ್ಚುವರಿ ಪರೀಕ್ಷೆಗಳು :-

ಮೈಗ್ರೇನ್ ತಲೆನೋವನ್ನು ಖಚಿತಪಡಿಸುವ ಪರೀಕ್ಸ್ಶೆಗಳಿಲ್ಲ ಎನ್ನುವ ಅಭಿಪ್ರಾಯವೂ ಇದೆ. ಆದರೆ ಇಂಥಹ ತೊಂದರೆಗಳಿಗೆ C . T .scan , ಕ್ಷ ಕಿರಣ , ರಕ್ತ ಪರೀಕ್ಷೆ ಮುಂತಾದುವುಗಳನ್ನು ಮಾಡಿಸಬೇಕಾಗುತ್ತದೆ.ಈ ಬಗ್ಗ್ಯೆ ವೈದ್ಯರು ತಲೆನೋವಿನ ವಿವರ ಹಾಗೂ ಸಂಪೂರ್ಣ ಪರೀಕ್ಷೆಗಳನ್ನು ಮಾಡಿದ ನಂತರ ಸಲಹೆ ಮತ್ತು ಚಿಕಿತ್ಸೆಯಯನ್ನು ನೀಡುತ್ತಾರೆ. ಆದರೆ ಕನ್ನಡಕ ಉಪಯೋಗಿಸುವುದರಿಂದ ಈ ರೀತಿಯ ತಲೆನೋವು ಹೋಗುವುದಿಲ್ಲ.

~~~~~ ಸಂಗ್ರಹಿಸಿ ಪ್ರಸ್ತುತಪಡಿಸಿದವರು : ಎಂ.ಗಣಪತಿ. ಕಾನುಗೋಡು.
                                                 
                                                   ತಾರೀಖು : 23 - 10 - 2014

ಮಾಹಿತಿಯ ಕೃಪೆ : ' ಆರೋಗ್ಯದತ್ತ ನಮ್ಮ ಪಯಣ ' ಪುಸ್ತಕ. ಸಂಗ್ರಹ : ಹುಲಿಕಲ್ ನಟರಾಜ್

ಸೂಚನೆ : ಇದು ಸಾಮಾನ್ಯ ತಿಳಿವಳಿಕೆಗಾಗಿ ಮಾತ್ರ. ಕರಾರುವಾಕ್ಕು ಮಾಹಿತಿಗೆ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸತಕ್ಕದ್ದು.

Wednesday, 22 October 2014

ಮಾಹಿತಿಗಳು :-

ಮಾಹಿತಿಗಳು :-
@ ಭಾರತದ ಅತ್ಯಂತ ಹಳೆ ಎಂಜಿನಿಯರಿಂಗ್ ಕಂಪನಿ 1788 ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪನೆಗೊಂಡ ಜೆಸೋಫ಼್ ಅಂಡ್ ಕಂಪನಿ ಲಿಮಿಟೆಡ್.
@ ಕೆಂಪಿರುವೆ ಒಂದು ಗೂಡಿನಲ್ಲಿ ಸುಮಾರು 5 ,00 ,000 ಗಳಷ್ಟು ಇರುವೆಗಳಿರುತ್ತವೆ.
@ ಗೂಬೆಗಳ ಸಮೂಹಕ್ಕೆ ಪಾರ್ಲಿಮೆಂಟ್ ಎಂದು ಹೇಳುತ್ತಾರೆ.
@ ಮನುಷ್ಯನ ಹೃದಯ ಪ್ರತಿ ವರ್ಷ 1 . 5 ಮಿಲಿಯನ್ ಲೀಟರ್ ರಕ್ತವನ್ನು ಹೊರಹಾಕುತ್ತದೆ.
@ " India " ಎಂಬುದು ಭಾರತಕ್ಕೆ ಗ್ರೀಕ್ ಮೂಲದಿಂದ ಬಂದ ಹೆಸರು.
@ ಭಾರತವನ್ನು ಹಿಂದೂಸ್ತಾನ ಎಂದು ಕರೆದವರು ಮಹಮ್ಮದೀಯರು.
@ ಬಿರುಗಾಳಿಯ ಒಟ್ಟು ಶಕ್ತಿಯು 1000 ಅಣುಬಾಂಬುಗಳಿಗೆ ಸಮ.
@ ಹಕ್ಕಿಗಳಿಗೆ ಬೆವರಿನ ಗ್ರಂಥಿ ಇರುವುದಿಲ್ಲ.
@ ವಿಶ್ವದ ಅತ್ಯಂತ ಹಳೆಯ ಗ್ರಂಥ ಋಗ್ವೇದ.
@ಜಿರಳೆಗಳು ಆಹಾರವಿಲ್ಲದೆ ಒಂದು ತಿಂಗಳು ಇರಬಲ್ಲುದು.

ಮನೆ ಮದ್ದು :-() ನಿಂಬೆ ಹಣ್ಣಿನ ಉಪಯೋಗ :-


* ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದರೆ ಒಂದು ಲೋಟ ಬಿಸಿನೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಪೂರ್ತಿ ಹಿಂಡಿ ಅರ್ಧ ಟೀ ಚಮಚ ಅಡಿಗೆ ಸೋಡಾ ಸೇರಿಸಿ ಸೇವಿಸಿದರೆ ಶೀಘ್ರವೇ ಗುಣವಾಗುತ್ತದೆ.
* ನಿಂಬೆ ಹಣ್ಣಿನ ರಸದಲ್ಲಿ ಸಕ್ಕರೆ ಕಲಸಿ ಸ್ವಲ್ಪ ಸ್ವಲ್ಪವೇ ಕುಡಿಯುತ್ತಿದ್ದರೆ ವಾಂತಿ ನಿಲ್ಲುವುದು.
* ಸ್ವಲ್ಪ ಉಪ್ಪು ಬೆರೆಸಿದ ನೀರಿಗೆ ನಿಂಬೆ ಹಣ್ಣಿನ ರಸವನ್ನು ಮಿಶ್ರಮಾಡಿ ದಿನಕ್ಕೆ ಮೂರು ಭಾರಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
*ಮಧ್ಯಮ ಗಾತ್ರದ ನಿಂಬೆ ಹಣ್ಣಿನ ರಸವನ್ನು ಸೇವಿಸುವುದರಿಂದ ಹುಳಿತೇಗು ಕಡಿಮೆಯಾಗುವುದು.
* ಒಂದು ನಿಂಬೆ ಹಣ್ಣಿನ ರಸ ತೆಗೆದು ಅದಕ್ಕೆ ರಸದ ಅರ್ಧ ಭಾಗದಷ್ಟು ಹರಳೆಣ್ಣೆಯನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆ ನುಲುಯುವಿಕೆ ಮತ್ತು ಸಂಕಟ ನಿವಾರಣೆಯಾಗುತ್ತದೆ.
* ಆಗತಾನೆ ಹಿಂಡಿದ ಒಂದು ಲೋಟ ಹಸುವಿನ ನೊರೆಹಾಲಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ತಕ್ಷಣ ಕುಡಿಯಬೇಕು. ಹೀಗೆ ಒಂದು ಹತ್ತು ದಿನಗಳವರೆಗೆ ಸೇವಿಸಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.
* ರಸಭರಿತವಾದ 30 ನಿಂಬೆ ಹಣ್ಣುಗಳನ್ನು ಎರಡು ಭಾಗವಾಗಿ ಕತ್ತರಿಸಿ ಅದಕ್ಕೆ ಅಡಿಗೆ ಉಪ್ಪನ್ನು ತುಂಬಿ 15 ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಈ ಹೋಳುಗಳನ್ನು ಚೆನ್ನಾಗಿ ಕುಟ್ಟಿ ಚೂರ್ಣ ತಯಾರಿಸಿ ಪ್ರತಿದಿನ ಬೆಳಿಗ್ಯೆ ಹಸಿದ ಹೊಟ್ಟೆಯಲ್ಲಿ ಒಂದು ಚಮಚ ಚೂರ್ಣವನ್ನು ಸೇವಿಸಬೇಕು.ಈ ಕ್ರಮವನ್ನು ಒಂದು ತಿಂಗಳು ಕಾಲ ನಡೆಸಿದರೆ ರಕ್ತದ ಒತ್ತಡ ನಿವಾರಣೆಯಾಗುತ್ತದೆ.
* ಒಂದು ದೊಡ್ಡ ಲೋಟ ತಣ್ಣೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ದಿನಕ್ಕೆ ಒಂದು ಸಾರಿಯಂತೆ ಒಂದು ವಾರ ಸೇವಿಸಿದರೆ ಎದೆ ಉರಿ ಸಂಪೂರ್ಣ ಕಡಿಮೆಯಾಗುತ್ತದೆ.
* ಕಬ್ಬಿನ ಹಾಲಿಗೆ ಎಳನೀರು,ಶುಂಠಿ ರಸ, ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಮೂತ್ರ ವಿಸರ್ಜನೆ ಚೆನ್ನಾಗಿ ಆಗುತ್ತದೆ.
~~~~~~~ ಮಾಹಿತಿ ಕೃಪೆ.----- ಒಬ್ಬ ಪ್ರಸಿದ್ಧ ಗಿಡಮೂಲಿಕೆ ಔಷಧ ಪಂಡಿತರು.

ನಿತ್ಯದ ಮದ್ದು :-ಜೇನುತುಪ್ಪ :


ಜೇನುತುಪ್ಪ ಅಂಗಡಿಗಳಲ್ಲಿ ದೊರಕುವುದು ಸಾಮಾನ್ಯವಾಗಿ ಶುದ್ಧ ಜೇನುತುಪ್ಪ ಅಲ್ಲ. ಕೆಲವು ನಿದರ್ಶನಗಳಲ್ಲಿ ಅವು ಜೇನುತುಪ್ಪವೇ ಅಲ್ಲ. ಎಸ್ಸೆನ್ಸ್ ಮಿಶ್ರಿತ ಸಕ್ಕರೆ ಪಾಕ. ಶುದ್ಧ ಜೇನುತುಪ್ಪವಾದರೆ ಒಂದು ಲೀಟರ್ ಬಾಟಲಿಗೆ 1400 ಗ್ರಾಂಸ್ ತುಪ್ಪ ಇರಬೇಕು [ ಕನಿಷ್ಠ ].ಅಂದರೆ 1 : 1 .4 . ಈಗ ಹಳ್ಳಿಗಳಲ್ಲಿ [ ನಮ್ಮ ನೆಂಟರ ಮನೆಯದಾದರೂ ] ಪೆಟ್ಟಿಗೆ ಜೇನು ಒಂದು ಕೆ.ಜಿ.ಗೆ 325 ರು.ನಿಂದ 350 ರು.ವರೆಗೂ ಧರ ಇದೆ. ಪೇಟೆಯಲ್ಲಿ ಒಂದು ಲೀಟರ್ ಬಾಟಲಿಯಲ್ಲಿ ಒಂದು ಕೆ.ಜಿ.ಎಂದು ಜೇನುತುಪ್ಪ ಮಾರುತ್ತಾರೆ. ಅದೂ ನೂರೈವತ್ತು ರುಪಾಯಿಯಿಂದ ಇನ್ನೂರರ ಧಾರಣೆಯಲ್ಲಿ ಒಂದು ಕೆ.ಜಿ.ಗೆ !. ಹೇಗೆ ? ನಾವು ಖರೀದಿಸುವ ಮುನ್ನ ಯೋಚಿಸಿಕೊಳ್ಳಬೇಕು. ಅಂಟುವಾಳ ಹೂವಿನ ಸೀಸನ್ ನಲ್ಲಿ ತಯಾರಾದ ಜೇನುತುಪ್ಪ ಔಷಧದ ದೃಷ್ಟಿಯಿಂದ ಒಳ್ಳೆಯದು. ರುಚಿಯಲ್ಲಿ ಸ್ವಲ್ಪ ಕಿರುಕಹಿ ಇರುತ್ತದೆ.
ಬಳಕೆ :
@ . ಸುಟ್ಟ ಘಾಯಕ್ಕೆ ತಕ್ಷಣ ಜೇನುತುಪ್ಪ ಸವರುವುದರಿಂದ ಉರಿ ಶಾಂತವಾಗುತ್ತದೆ ಮತ್ತು ಘಾಯ ಶೀಘ್ರವೇ ಮಾಯಲು ಅನುಕೂಲವಾಗುತ್ತದೆ. ಆದರೆ ಸುಟ್ಟ ತಕ್ಷಣ ಆ ಜಾಗಕ್ಕೆ ಖಂಡಿತ ತಣ್ಣೀರನ್ನು ಮುಟ್ಟಿಸಬಾರದು. ಒಮ್ಮೆ ಕೊಬ್ಬರಿ ಎಣ್ಣೆ ಸವರಿದರೂ ಒಳ್ಳೆಯದೇ.
@ ಹುಳುಕಡ್ಡಿ ,ಇಸುಬು ಮುಂತಾದ ಚರ್ಮರೋಗಗಳಿಗೆ ಜೇನುತುಪ್ಪ ಸವರುವುದರಿಂದ ಗುಣಮುಖವಾಗುತ್ತದೆ.
@ ಬಾಯಿಯ ಹುಣ್ಣು ನಿವಾರಿಸಲು ದಿನಕ್ಕೆ ನಾಲ್ಕು ಭಾರಿ ಜೇನುತುಪ್ಪವನ್ನು ಹಚ್ಚಬೇಕು.
@ ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಭೋಗಶಕ್ತಿಯಲ್ಲಿ ವೃದ್ಧಿಯಾಗುತ್ತದೆ. ಸ್ವಪ್ನ ಸ್ಖಲನವಾಗುವ ಸಾಧ್ಯತೆ ಇರುವುದಿಲ್ಲ.
@ ವಸಡುಗಳು ಊದಿಕೊಂಡು ಹಲ್ಲು ನೋವು ಉಂಟಾದರೆ ಜೇನುತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ದಿನಾ ನಾಲ್ಕಾರು ಭಾರಿ ಇಟ್ಟುಕೊಂಡರೆ ಹಲ್ಲು ನೋವು ಮತ್ತು ಒಸಡಿನ ಊತ ಕಡಿಮೆಯಾಗುತ್ತದೆ.
@ ಜೇನುತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.
@ ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಕೊಟ್ಟರೆ ರೋಗನಿರೋಧಕ ಶಕ್ತಿ ಬರುತ್ತದೆ.
@ ದಢೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನುತುಪ್ಪವನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ಶಾರೀರಿಕ ತೂಕವು ಕಡಿಮೆಯಾಗಿ ನರಗಳು ಚೇತರಿಸಿಕೊಳ್ಳುತ್ತವೆ.
@ ಮೂರು ಟೀ ಚಮಚ ಜೇನುತುಪ್ಪವನ್ನು ರಾತ್ರಿ ಊಟವಾದ ನಂತರ ಮಲಗುವ ಮುಂಚೆ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗ ನಿವಾರಣೆಯಾಗುತ್ತದೆ
@ ಮಧುಮೇಹ ರೋಗಿಗಳು ಮತ್ತು ಕ್ಷಯರೋಗಿಗಳು ಜೇನುತುಪ್ಪ ಸೇವಿಸುವುದರಿಂದ ಆರೋಗ್ಯದ ಸುಧಾರಣೆಯಾಗುತ್ತದೆ.
@ ಎಳೆಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ಹನಿ ಜೇನುತುಪ್ಪವನ್ನು ಬೆರಸಿ ಕುಡಿಸಬೇಕು. ದಿನಕ್ಕೆ ಎರಡು ಭಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಗಮನಾರ್ಹ ಬೆಳವಣಿಗೆಯಾಗಿ ಗುಣಮುಖವಾಗುವುದು.
@ ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಎರಡು ಟೀ ಚಮಚ [ 10 ಮಿಲಿ ] ಜೇನುತುಪ್ಪ ಮತ್ತು ಕಾಲು ಲೋಟ ಉಗುರು ಬೆಚ್ಚಗಿನ ನೀರನ್ನು ಸೇರಿಸಿ ಅದಕ್ಕೆ ಐದು ಹನಿ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯಬೇಕು. ಇದರಿಂದ ಕೊಲೆಸ್ಟರಾಲ್ ಮತ್ತು ದೇಹದ ತೂಕ ಕಡಿಮೆಯಾಗುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಆಯಾಸ ಕಡಿಮೆಯಾಗುತ್ತದೆ.ದೈಹಿಕ ಶಕ್ತಿ ಹೆಚ್ಚುತ್ತದೆ. ಆದರೆ ಜೇನುತುಪ್ಪ ಬಹಳ ಉಷ್ಣ ವಸ್ತು. ಉಷ್ಣ ಪ್ರಕೃತಿಯವರು ಇದನ್ನು ಸೇವಿಸುತ್ತಿರುವಾಗ ಆದಷ್ಟು ಶರೀರಕ್ಕೆ ತಂಪು ಕೊಡುವ ಪದಾರ್ಥವನ್ನು ಸತತವಾಗಿ ಸೇವಿಸುತ್ತಿರಬೇಕು.
~~~~~~~~~ ಮಾಹಿತಿ ಕೃಪೆ : ಪ್ರಸಿದ್ಧ ನಾಟಿ ವೈದ್ಯರು.

*^*^*^* ಬಹುಮತಕ್ಕೆ ಅರ್ಥ ಬರುವುದು ಯಾವಾಗ ? ಹೇಗೆ ? ^*^*^*^*

ಬಹುಮತದ ಪರಿಕಲ್ಪನೆ ನಮಗಿರುವುದು ರಾಜಕಾರಣದಲ್ಲಿ ಇಲ್ಲವೇ ಹೆಚ್ಚೆಂದರೆ ಸಂಘ ಸಂಸ್ಥೆಗಳಲ್ಲಿ. ಆದರೆ ಬಹುಮತದ ಕಲ್ಪನೆ ಒಂದು ಸಂಸಾರದಿಂದ ಪ್ರಾರಂಭವಾಗಿ ವಿಶ್ವಸಂಸ್ಥೆಯವರೆಗಿನ ಎಲ್ಲಾ ಹಂತದ ಸಮೂಹಕ್ಕೂ ಅನ್ವಯಿಸುತ್ತದೆ.
ಯಾವುದೇ ನಿರ್ಣಯ ಇಂದು ಪ್ರಾತಿನಿಧಿಕ ವ್ಯವಸ್ಥೆಯಲ್ಲಿ ಬಹುಮತದ ಆಧಾರವನ್ನು ಅವಲಂಬಿಸಿದೆ. ಯಾವುದೇ ವಿಚಾರಕ್ಕೆ ನಿರ್ಣಯಕ್ಕೆ ಬರುವಾಗ ಆ ಸಮೂಹದ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಕೇಳಲಾಗುತ್ತದೆ. ಮಂಡಿಸಿದ ವಿಚಾರದ ಕುರಿತು ಬಂದ ಹೆಚ್ಚು ಸದಸ್ಯ ಬಣದ ಅಭಿಪ್ರಾಯಕ್ಕೆ ಮನ್ನಣೆ ಕೊಡಲಾಗುತ್ತದೆ. ಅಂದರೆ ಒಂದು ಸಮೂಹದಲ್ಲಿ ಹೆಚ್ಚು ಮಂದಿ ಹೇಳಿದ್ದು ಸರಿಯಾಗಿರುತ್ತದೆ ಎನ್ನುವುದು ಈ ವಿಷಯದ ಹಿನ್ನಲೆಯಲ್ಲಿ ಇರುವ ಭಾವನೆ.
ಹೀಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಬಹುಮತ ಬಣದ ಪ್ರತಿ ವ್ಯಕ್ತಿಯು ತನ್ನ ಸ್ವಂತ ಬುದ್ಧಿ, ತರ್ಕ, ವಿವೇಚನೆ , ಅನುಭವ, ಮಂಡಿಸಿದ ವಿಚಾರದ ಅಂತ್ಯ-ಅಪಾರ ಹಾಗೂ ಅದರ ಹಾಸು ಹೊಕ್ಕು ಇವುಗಳ ಜಿಜ್ಞಾಸೆ ..... ಹೀಗೆ ಇಂತಹ ಅಭಿಪ್ರಾಯವನ್ನು ಪ್ರಚುರಪಡಿಸುವಲ್ಲಿ ಬಳಸಿಕೊಳ್ಳಬೇಕಾದ ಅಂಶಗಳನ್ನು ಎಷ್ಟರ ಮಟ್ಟಿಗೆ ಪ್ರಯೋಗಿಸಿದ್ದಾನೆ ಎನ್ನುವುದು ಮುಖ್ಯ. ಆದರೆ ಇಂದು ಎಲ್ಲ ಪ್ರಕರಣಗಳಲ್ಲೂ ಪ್ರತಿ ವ್ಯಕ್ತಿಯು ಇಂಥಹ ಯಾವುದೇ ಪ್ರಕ್ರಿಯೆಯನ್ನು ಪ್ರಾಕೃತಗೊಳಿಸದೆ ತನ್ನ ನಿರ್ಲಿಪ್ತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಸಭೆಯಲ್ಲಿ ಪಡೆಯುವಂಥಹ ನಿರ್ಣಯವಂತೂ ಕೇವಲ ಚಪ್ಪಾಳೆ ಅಥವಾ ಧ್ವನಿಮತವನ್ನು ಆಧರಿಸಿರುತ್ತದೆ. ಇಲ್ಲಿ ' ಸಮೂಹ ಸನ್ನಿ ' ಬಹಳಷ್ಟು ತನ್ನ ಪ್ರಭಾವವನ್ನು ಬೀರುತ್ತದೆ.
ಯಾವುದೇ ವ್ಯಕ್ತಿಯು ತನ್ನ ಅಭಿಪ್ರಾಯ ಮಂಡನೆಯಲ್ಲಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಬದಲಿಗೆ ತನಗಿಂತ ಮೊದಲು ಅಥವ ತನ್ನ ಜೊತೆಗೆ ಹೆಚ್ಚು ಮಂದಿ ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೊ ಅದಕ್ಕೆ ಸ್ವರಗೂಡಿಸುತ್ತಾನೆ. ಸರ್ಕಾರ ಕೆಲವೊಮ್ಮೆ ಕಾಯಿದೆಯನ್ನು ಮಾಡುವ ಮುನ್ನ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಆಗ ಎಷ್ಟು ಮಂದಿ ಹೀಗೆ ಸ್ವತಂತ್ರ, ವಿವೇಚನಾಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ?. ಶಾಸನ ಸಭೆಯಲ್ಲಿ ಎಷ್ಟು ಮಂದಿ ಹೀಗೆ ನಡೆದುಕೊಳ್ಳುತ್ತಾರೆ?.ಸಂಘ,ಸಂಸ್ಥೆಯಲ್ಲಿ ಎಷ್ಟು ಮಂದಿ ಈ ಪರಿಧಿಯನ್ನು ಅನುಸರಿಸುತ್ತಾ
ಯಾವಾಗ ಒಂದು ಸಮೂಹದ ಸದಸ್ಯರು ಕ್ರಮವಾಗಿ ತಮ್ಮ ಮತವನ್ನು ಚಲಾಯಿಸುವುದಿಲ್ಲವೋ ಆಗ ಅದು ಒಂದು ಪ್ರಾತಿನಿಧಿಕ ಪ್ರಸಿದ್ಧವಾಗುವುದಿಲ್ಲ. ಇಂದು ಎಲ್ಲಾ ಬಹುಮತಗಳು ಜವಾಬ್ದಾರಿ ರಹಿತವಾದದ್ದು ಮತ್ತು 'ಸಮೂಹಸನ್ನಿ' ಯಿಂದ, ಅನೇಕ ರೀತಿಯ ಆಮಿಷಗಳು, ಒತ್ತಡಗಳ ಪ್ರಭಾವಗಳಿಂದ ಆವರಿಸಲ್ಪಟ್ಟಿದ್ದು . ಇಂತಹ ಬಹುಮತದ ಆಧಾರಿತ ನಿರ್ಣಯಗಳೂ ಅಷ್ಟೇ ಅರ್ಥರಹಿತವಾದದ್ದು. ಹಾಗೆಯೇ ಅಪಾಯಕರವೂ ಹೌದು.
~~~~~~~ ಎಂ. ಗಣಪತಿ. ಕಾನುಗೋಡು.

ತಾರೀಖು : 20 . 10 .2014

Tuesday, 21 October 2014

ಹಬ್ಬದ ಹಾಡು / ಬಿಂಗಿ ಪದ್ಯ / ಅಂಟಿಕೆ ಪಂಟಿಕೆ . :-

35 minutes ago

ಹಬ್ಬದ ಹಾಡು / ಬಿಂಗಿ ಪದ್ಯ / ಅಂಟಿಕೆ ಪಂಟಿಕೆ . :-

ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೋ....... ಹೊಯ್ .......... ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೋ ........ ಹೊಯ್ ........


ಬಲೀಂದ್ರನ ಹಾಡು.

ಬಲ್ಲೇಳು ಬಲೀಂದ್ರನು ರಾಜಾ ಬಂದನು ತನ್ನ ರಾಜ್ಯಕೆ ತಾ ||ಪ ||

ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಡನೆ ಮಳೆಯೇ ಕರೆದಾವೋ |

ಬಲ್ಲೇಳು ಬಲೀಂದ್ರ ಕರೆದಾವೋ ಈ ಊರ ಹುಲ್ಲ ಗುಡ್ಡೆಲ್ಲ ಚಿಗುರ್ಯಾವೋ |

ಬರಡು ಗುಡ್ದೆಲ್ಲಾ ಚಿಗುರ್ಯಾವೋ ಈ ಊರ ಬರಡು ಬೆಟ್ಟೆಲ್ಲಾ ಹಯನಾವೋ | [ಎರಡು ಸಾರಿ ]

ಹಂಡೆ ಹಂಡೆಯನೂರು ಹಂಡೆಯ ಕರೇದೂರು ಹಂಡೆಕಾಯುವರಾಂಗಾಯನೂರು |

ಹಂಡೆ ಕಾಯುವರೊಂದು ಮೇಲೂರು ನಮ್ಮಮ್ಮ ಹಂಡೆಯ ತೆಗೆದೊಂದು ಹೊರಗಿಡೆ | [ಎರಡು ಸಾರಿ ]

ಕವುಲೆ ಕವುಲೆನೂರು ಕವುಲೆಯ ಕರೆದೋರು ಕವುಲೆಯ ಕಾಯುವರಾ ಒಂದಯನೂರು |

ಕವುಲೆಯ ಕಾಯುವರಾ ಒಂದೈನೂರು ನಮ್ಮಮ್ಮ ಕೌಳಿಗೆ ತೆಗೆದೊಂದ್ ಹೊರಗಿಡೇ|

ಕೌಳಿಗೆ ತೆಗೆದೊಂದ್ ಹೊರಗಿಡೆ ನಮ್ಮಮ್ಮ ಕೌಳಿಗೆ ತುಂಬಾ ಹಾಲ ಕರೆದೊಯ್ಯೋ |

ಹಾಲ ಕರೆದು ಪಾಯಸ ಮಾಡಿ ಬಲ್ಲಾಳ ಬಲೀಂದ್ರಗೆ ಸೊಗಸೂಟೊ | [ಸೊಗಸಾದ ಊಟ ಎಂದು ಅರ್ಥ]

ಬಲ್ಲೇಳು ಬಲೀಂದ್ರನು ರಾಜ ಬಂದನು ತನ್ನ ರಾಜ್ಯಕೆ ತಾ ||

[ ಇಲ್ಲಿ ಪ್ರತಿ ಸಾಲಿನ ಹಾಡಿನ ನಂತರ " ಬಲ್ಲೇಳು ...................ತನ್ನ ರಾಜ್ಯಕೆ ತಾ " ಎನ್ನುವ ಪಲ್ಲವಿಯ chorus ನ್ನು ಹೇಳಿಕೊಳ್ಳಬೇಕು. ]

ಅರಿಕೆ:- ಜನಪದರಲ್ಲಿ ಕಣೋಪಕರಣವಾಗಿ ಬಂದ ಈ ಜಾನಪದ ಹಾಡುಗಳಲ್ಲಿ ಶಬ್ದವ್ಯತ್ಯಯಗಳಿರುವುದು ಸಹಜ. ಸಾಧ್ಯವಿದ್ದಷ್ಟನ್ನು ಸರಿಪಡಿಸಿದ್ದೇನೆ. ಉಳಿದಿದ್ದನ್ನು ಬಲ್ಲವರು ಸರಿಪಡಿಸಿಕೊಳ್ಳಬೇಕು. ಇನ್ನು ಇದರಲ್ಲಿ ಪ್ರಾದೇಶಿಕ ಭಿನ್ನತೆ ಇದ್ದುದನ್ನು ಗಮನಿಸಬೇಕು. ಕೆಲವು ಕಡೆ " ಬಲ್ಲಾಳ" ಎನ್ನುತ್ತಾರೆ. " ಡ್ವಮ್ಸಾಲ್ ಹೊಡಿರಣ್ಣ " ಎನ್ನುತ್ತಾರೆ.

~~~~~~~~ ಸಂಗ್ರಹಿಸಿ ಪ್ರಸ್ತುತಪಡಿಸಿದವರು : ಎಂ.ಗಣಪತಿ. ಕಾನುಗೋಡು .
ತಾರೀಖು : 21 -10 -2014