ಸಂಗ್ರಹ : ಎಂ. ಗಣಪತಿ. ಕಾನುಗೋಡು.
ಮೈಗ್ರೇನ್ [ Mygraine ] ಎನ್ನುವುದು ತಲೆನೋವಿನ ಒಂದು ಪ್ರಾಕಾರ. ಇದು ಇರುವವರಿಗೆ ತಲೆನೋವು ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಆಯಾಸದ ಸಂದರ್ಭಗಳಲ್ಲಿ ಕಂಡುಬರುತ್ತದೆ.
ಹಾಗೆಂದು ಎಲ್ಲಾ ತಲೆನೋವುಗಳೂ ಮೈಗ್ರೇನ್ ಅಲ್ಲ. ದೃಷ್ಟಿದೋಷ, ನೆಗಡಿಗೆ ಸಂಬಂಧಿಸಿದ ತೊಂದರೆಗಳು, ಜ್ವರ ಇತ್ಯಾದಿ ಕಾರಣಗಳಿಂದಲೂ ತಲೆನೋವು ಬರುತ್ತದೆ. ಆದರೆ ಅದು ಮೈಗ್ರೇನ್ ಅಲ್ಲ. ಆದರೆ ಮೈಗ್ರೇನ್ ತಲೆನೋವು ಅತ್ಯಂತ ಸಾಮಾನ್ಯವಾದದ್ದು.
ಮೈಗ್ರೇನ್ ಎಂದರೇನು ?.
ಕೆಲವು ಕಾರಣಗಳಿಂದ ಒಂದು ವ್ಯಕ್ತಿಯ ತಲೆಯೊಳಗಿನ ರಕ್ತನಾಳಗಳ ಗಾತ್ರದಲ್ಲಿ ಅಸ್ತಿರತೆಯುಂಟಾಗಿ, ಅವು ಮೊದಲು ಸಂಕುಚಿತವಾಗಿ ನಂತರ ವಿಕಸಿತವಾಗುತ್ತದೆ.ಆಗ ರಕ್ತನಾಳಗಳಿಗೆ ಸಂಬಂಧಿಸಿದ ಸೂಕ್ಷ್ಮ ನರಗಳು ಉದ್ರೇಕಗೊಂಡು ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದೇ ಮೈಗ್ರೇನ್.
ಇದರ ಲಕ್ಷಣಗಳು :-
ಈ ತರಹೆಯ ನೋವು ತಲೆಯ ಯಾವ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು ಹಾಗೂ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೇವಲ ಕಣ್ಣಿನ ಸುತ್ತ ಮಾತ್ರವೇ ಕಾಣಿಸಿಕೊಳ್ಳಬಹುದು. ಕೆಲವರಿಗೆ ಹಿಂಭಾಗದಲ್ಲಿ ಕುತ್ತಿಗೆಯವರೆಗೂ ನೋವು ಕಾಣಿಸಿಕೊಳ್ಳಬಹುದು. ಹೆಚ್ಚಾಗಿ, ತೀವ್ರವಾದ ತಲೆನೋವು ತಲೆಯ ಎಡ ಅಥವಾ ಬಲ ಭಾಗದಲ್ಲಿ ಇರುತ್ತದೆ.
ಈ ಮೇಲಿನ ಲಕ್ಷಣಗಳಲ್ಲದೆ ವಾಂತಿ, ಹೊಟ್ಟೆ ತೊಳಸಿದಂತೆ ಆಗುವುದು, ತಲೆ ಸುತ್ತಿದಂತೆ ಆಗುವುದು, ಕೆಲವರಿಗೆ ಹೆಚ್ಚು ಶಬ್ದ, ವಾಸನೆ, ಬೆಳಕುಗಳಿಂದ ಅಸಹನೆ ಹೆಚ್ಚಾಗಬಹುದು, ಮಾತನಾಡಲು ಕಷ್ಟವಾಗಬಹುದು, ಕೈ ಅಥವಾ ಕಾಲು ಮರಗಟ್ಟಿದ / ಬಿಗಿಯಾದ ಅನುಭವವಾಗಬಹುದು. Classic Migraine ಎಂಬ ರೀತಿಯಲ್ಲಿ ತಲೆನೋವು ಬರುವ ಮುನ್ನ ದೃಷ್ಟಿ ಮಂಜಾದಂತೆ, ಮಿಂಚಿದಂತೆ ಅಥವಾ ಬಣ್ಣ ಬಣ್ಣದ ಅಲೆಗಳು ಕಾಣಿಸಿದಂತೆ ಸಹ ಆಗಬಹುದು.
ಇದಕ್ಕೆ ನಿರ್ಧಿಷ್ಟ ಕಾರಣವನ್ನು ಹೇಳಲಾಗದಿದ್ದರೂ ಈ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಬಹುದು.
1 ಹೆಚ್ಚು ಕೆಲಸದಿಂದಾಗಿ ಮಾನಸಿಕ ಒತ್ತಡ ಇರುವ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇದು ಸಾಮಾನ್ಯ. ಅವರಿಗೆ ದಿನದ ಹೆಚ್ಚುಕಾಲ ಒತ್ತಡದ ಕೆಲಸ ಮತ್ತು ನಿದ್ರೆ ಕಡಿಮೆ, ಅನಿಯಮಿತ ಆಹಾರದ ಸೇವನೆ ಇರುತ್ತದೆ.
2 . ಮಾನಸಿಕ ಒತ್ತಡಗಳಾದ ಕೋಪ,ಚಿಂತೆ, ಖಿನ್ನತೆ,ಗಾಬರಿಗಳಿಂದ ತಲೆನೋವು ಉದ್ರೇಕವಾಗಬಹುದು.
3 .ಆಹಾರ ಸೇವನೆಯಿಂದ ವ್ಯತ್ಯಾಸವಾದ ಹಸಿವೆ, ಮದ್ಯ ಸೇವನೆ, ಕಡಿಮೆ ನೀರು ಕುಡಿಯುವುದರಿನ್ದಲೂ ತಲೆನೋವು ಉದ್ರೇಕವಾಗುತ್ತದೆ.
4 . ನಿದ್ರೆ ಮಾತ್ರೆ ಸೇವನೆ, ಬಿ. ಪಿ., ಹಲ್ಲು ನೋವು, ಕಣ್ಣಿನ ತೊಂದರೆ, ತಂಬಾಕು ಅಥವಾ ಸಿಗರೇಟು ಸೇವನೆ, ಗರ್ಭನಿರೋಧಕ ಮಾತ್ರೆ, ಮೂಗಿನ ಉಸಿರಾಟದ ತೊಂದರೆ, ಸಂಸ್ಕರಿಸದ ಆಹಾರ ಸೇವನೆ, ಅತಿ ಮುಖ್ಯವಾಗಿ ನಿದ್ರಾಹೀನತೆ ಮುಂತಾದುವುಗಳಿಂದ ಸಹ ತಲೆನೋವು ಉದ್ರೇಕಗೊಳ್ಳಬಹುದು.
5 . ಹೆಚ್ಚು ಕಾಲ ಬಿಸಿಲಿನಲ್ಲಿ ಇರುವುದು, ದೀರ್ಘಕಾಲ ಪ್ರಯಾಣ ಮಾಡುವುದು, ಮದುವೆ ಅಥವಾ ಇತರೆ ಗಲಾಟೆ ಇರುವ ಸಮಾರಂಭದಲ್ಲಿ ಹೆಚ್ಚು ಹೊತ್ತು ಭಾಗವಹಿಸುವುದು, ಕೆಲವರಿಗೆ ಹೆಚ್ಚಾಗಿ ಓದುವುದು, ಹೆಚ್ಚು ಕಾಲ ಸಿನೆಮಾ / ಟಿ. ವಿ, ನೋಡುವುದು ಇವುಗಳಿಂದ ತಲೆನೋವು ಉದ್ರೇಕಗೊಳಬಹುದು.
6 . ಕೆಲವು ಸ್ತ್ರೀಯರಿಗೆ ಋತುಚಕ್ರದ ಏರುಪೇರುಗಳಿಂದ ತಲೆನೋವು ಉದ್ರೇಕಗೊಳ್ಳಬಹುದು.
ಒಟ್ಟಿನಲ್ಲಿ ಈ ಕಾರಣಗಳು ಒಬ್ಬರಿಗಿಂತ ಮತ್ತೊಬ್ಬರಿಗೆ ವ್ಯತ್ಯಾಸವಾಗುತ್ತವೆ.
ಮೈಗ್ರೇನ್ ನ ನಿವಾರಣೆ :-
1 . ಮೈಗ್ರೇನ್ ತಲೆನೋವು ಬಂದಾಗ ಕೆಲವರಿಗೆ ಯಾವುದಾದರೂ ನೋವು ನಿವಾರಕ ಮಾತ್ರೆಯನ್ನು [ Pain killer ] ತೆಗೆದುಕೊಂಡರೆ ಸ್ವಲ್ಪ ಸಮಯದ ನಂತರ ನೋವು ಕಡಿಮೆಯಾಗುತ್ತದೆ.
2 . ಇನ್ನು ಕೆಲವರಿಗೆ ಏನನ್ನೂ ಉಪಯೋಗಿಸದೆ ನಿಷ್ಯಬ್ದವಾದ ಕೊಠಡಿಯಲ್ಲಿ ಕೆಲವು ಕಾಲ ವಿಶ್ರಾಂತಿ ತೆಗೆದುಕೊಳ್ಳುವುದರಿಂದಲೇ ತಲೆನೋವು ಕಡಿಮೆಯಾಗುತ್ತದೆ.
3 . ಇದಲ್ಲದೆ ಜೀವನ ಶೈಲಿಯನ್ನ್ನು ಬದಲಾಯಿಸಿಕೊಳ್ಳುವುದರಿಂದ ಈ ತೆರನ ತಲೆನೋವನ್ನು ನಿಯಂತ್ರಿಸಿಕೊಳ್ಳಬಹುದು. ಅ ) ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು. ಬ ) ನಿತ್ಯ ವ್ಯಾಯಾಮ. ಕ ) ಸರಿಯಾದ ಊಟದ ಕ್ರಮ. ಪೌಷ್ಟಿಕ ಆಹಾರದ ಸೇವನೆ. ಡ ) ತಂಬಾಕು, ಮದ್ಯ ಸೇವನೆಯಿಂದ ದೂರ ಇರುವುದು. ಕಾಫಿ ಕುಡಿಯುವುದನ್ನು ಕಡಿಮೆ ಮಾಡುವುದು. ಇ ) ಜೀವನದ ಬಗ್ಯೆ ಸಕಾರಾತ್ಮಕ ಮನೋಭಾವ.
ಮೈಗ್ರೇನ್ ತಲೆನೋವಿಗೆ ಹೆಚ್ಚಿನ ಚಿಕಿತ್ಸೆ :-
--- ಮೈಗ್ರೇನ್ ತಲೆನೋವಿಗೆ ಶಾಶ್ವತ ಪರಿಹಾರ ಇಲ್ಲ. ಆದರೆ ಈ ತರಹೆಯ ತಲೆನೋವನ್ನು ಅದಕ್ಕೆ ಸಂಬಂಧಿಸಿದ ಔಷಧಗಳನ್ನು ಉಪಯೋಗಿಸುವುದರಿಂದ ಸಾಕಷ್ಟು ನಿಯಂತ್ರಿಸಬಹುದು.
--- ಮೈಗ್ರೇನ್ ನಿವಾರಣ ಔಷಧಗಳಲ್ಲಿ ಎರಡು ತರಹೆಗಳಿರುತ್ತವೆ. ಒಂದು ನೋವು ಬಂದಾಗ ಮಾತ್ರ ಉಪಯೋಗಿಸುವ ಔಷಧಗಳು. ಮೈಗ್ರೇನ್ ತಲೆನೋವು ತಿಂಗಳಿಗೆ 4 - 6 ಕ್ಕಿಂತ ಕಡಿಮೆ ಸಾರಿ ಬರುತ್ತಿದ್ದರೆ ಆ ದಿನಗಳಲ್ಲಿ ಮಾತ್ರ ನೋವು ನಿವಾರಕ ಮಾತ್ರೆ ಉಪಯೋಗಿಸುತ್ತಿದ್ದರೆ ಸಾಕು.
--- ಆದರೆ ಅದು ತಿಂಗಳಲ್ಲಿ ನಾಲ್ಕಾರು ಭಾರಿಗಿಂತಲೂ ಹೆಚ್ಚು ಬರುತ್ತಿದ್ದರೆ ಅದನ್ನು ತಡೆಗಟ್ಟುವ ಔಷಧವನ್ನು ನಿತ್ಯವೂ ಕೆಲವು ವಾರಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ.ಇದರಿಂದ ತಲೆನೋವು ಬರುವ ಶೀಘ್ರತೆ ಹಾಗೂ ತೀವ್ರತೆ ಕಡಿಮೆಯಾಗುತ್ತದೆ.
ಹೆಚ್ಚುವರಿ ಪರೀಕ್ಷೆಗಳು :-
ಮೈಗ್ರೇನ್ ತಲೆನೋವನ್ನು ಖಚಿತಪಡಿಸುವ ಪರೀಕ್ಸ್ಶೆಗಳಿಲ್ಲ ಎನ್ನುವ ಅಭಿಪ್ರಾಯವೂ ಇದೆ. ಆದರೆ ಇಂಥಹ ತೊಂದರೆಗಳಿಗೆ C . T .scan , ಕ್ಷ ಕಿರಣ , ರಕ್ತ ಪರೀಕ್ಷೆ ಮುಂತಾದುವುಗಳನ್ನು ಮಾಡಿಸಬೇಕಾಗುತ್ತದೆ.ಈ ಬಗ್ಗ್ಯೆ ವೈದ್ಯರು ತಲೆನೋವಿನ ವಿವರ ಹಾಗೂ ಸಂಪೂರ್ಣ ಪರೀಕ್ಷೆಗಳನ್ನು ಮಾಡಿದ ನಂತರ ಸಲಹೆ ಮತ್ತು ಚಿಕಿತ್ಸೆಯಯನ್ನು ನೀಡುತ್ತಾರೆ. ಆದರೆ ಕನ್ನಡಕ ಉಪಯೋಗಿಸುವುದರಿಂದ ಈ ರೀತಿಯ ತಲೆನೋವು ಹೋಗುವುದಿಲ್ಲ.
~~~~~ ಸಂಗ್ರಹಿಸಿ ಪ್ರಸ್ತುತಪಡಿಸಿದವರು : ಎಂ.ಗಣಪತಿ. ಕಾನುಗೋಡು.
ತಾರೀಖು : 23 - 10 - 2014
ಮಾಹಿತಿಯ ಕೃಪೆ : ' ಆರೋಗ್ಯದತ್ತ ನಮ್ಮ ಪಯಣ ' ಪುಸ್ತಕ. ಸಂಗ್ರಹ : ಹುಲಿಕಲ್ ನಟರಾಜ್
ಸೂಚನೆ : ಇದು ಸಾಮಾನ್ಯ ತಿಳಿವಳಿಕೆಗಾಗಿ ಮಾತ್ರ. ಕರಾರುವಾಕ್ಕು ಮಾಹಿತಿಗೆ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸತಕ್ಕದ್ದು.
No comments:
Post a Comment
Note: only a member of this blog may post a comment.