ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.
ಬಾಲಗ್ರಹವೂ ಒಂದು ವಿಧದ ಮೂರ್ಛೆರೋಗ. ಇದಕ್ಕೆ ಇಂಗ್ಲಿಷ್ ನಲ್ಲಿ Febrile convulsion ಎನ್ನುತ್ತಾರೆ. ಇದು ಆರು ತಿಂಗಳಿನಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣುವ ಮೂರ್ಛೆ. ಮಕ್ಕಳಿಗೆ ಆಗಲಿ ಅಥವ ದೊಡ್ಡವರಿಗೆ ಆಗಲಿ ಈ ರೋಗವು ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ವ್ಯತ್ಯಾಸದಿಂದ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳಿಂದ ಕಾಣಿಸಿಕೊಳ್ಳುತ್ತದೆ. ಈ ದೋಷದಿಂದ ಮೆದುಳಿನ ಪ್ರಕ್ರಿಯೆಯಲ್ಲಿ ಬದಲಾವಣೆಯುಂಟಾಗಿ ಮೂರ್ಛೆ ಬರುತ್ತದೆ.ಬಾಲಗ್ರಹ ಇರುವ ಮಕ್ಕಳಲ್ಲಿ ಜ್ವರ ಬಂದಾಗ ಮಾತ್ರ ಮೂರ್ಛೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಐದು, ಆರು ವರ್ಷಗಳ ನಂತರ ಇಂಥಹ ಮಕ್ಕಳಲ್ಲಿ ಈ ಕಾಯಿಲೆ ನಿಂತು ಹೋಗುತ್ತದೆ. ಜ್ವರ ಬಂದಾಗ ಸೂಕ್ತ ಆರೈಕೆ ಮಾಡುವುದರಿಂದ ಇಂಥಹ ಬಾಲಗ್ರಹ ಬಾಧೆಯನ್ನು ತಪ್ಪಿಸಬಹುದು.
ಬಾಲಗ್ರಹದ ಬಾಧೆ ಸಾಮಾನ್ಯ ಮಟ್ಟದಲ್ಲಿ ಇರುವ ಮಕ್ಕಳಿಗೆ ಸಾಂದರ್ಭಿಕ ಔಷಧ ಸೇವನೆ ಸಾಕು. ಸತತವಾದ ಔಷಧ ಸೇವನೆಯ ಅಗತ್ಯವಿರುವುದಿಲ್ಲ. ಆದರೆ ಕೆಲವು ಮಕ್ಕಳಿಗೆ ಈ ತೊಂದರೆ ತೀವ್ರ ಪ್ರಮಾಣದಲ್ಲಿ ಇರುತ್ತದೆ. ಇಂಥಹ ತೀವ್ರ ಪ್ರಮಾಣದ ಬಾಲಗ್ರಹಕ್ಕೆ ಇಂಗ್ಲಿಷ್ ನಲ್ಲಿ Complex febrile seizures ಎನ್ನುತ್ತಾರೆ. ಇಂಥಹ ರೋಗಪೀಡಿತ ಮಕ್ಕಳಿಗೆ ಮಾತ್ರ ಸತತವಾಗಿ ಎರಡು ವರ್ಷ ಔಷಧದ ಸೇವನೆಯು ಅಗತ್ಯವಾಗಿರುತ್ತದೆ. ಯಾವುದಕ್ಕೂ ಇಂಥಹ ರೋಗಬಾಧಿತ ಮಗುವನ್ನು ಕೂಡಲೆ ನರರೋಗತಜ್ಞರಿಂದ ತಪಾಸಣೆಗೊಳಿಸಬೇಕು.
ಮೂರ್ಛೆ ಬಂದಾಗ ಮಗುವಿನ ಪೋಷಕರು ಗಾಬರಿಗೊಳ್ಳದೆ ಶಾಂತಿಯಿಂದ ಇರಬೇಕು. ಇದು ಮಾರಕ ರೋಗವಲ್ಲ ಎನ್ನುವುದನ್ನು ಅರಿತಿರಬೇಕು. ಮೂರ್ಛೆ ಬಂದ ಕೂಡಲೆ ಮಗುವನ್ನು ಮಗ್ಗುಲಾಗಿ ಮಲಗಿಸಬೇಕು. ಅದು ಧರಿಸಿದ ಬಟ್ಟೆಯನ್ನು ಸಡಿಲಗೊಳಿಸಬೇಕು. ಅದಕ್ಕೆ ಚೆನ್ನಾಗಿ ಗಾಳಿ, ಬೆಳಕು ಸಿಗುವಂತೆ ನೋಡಿಕೊಳ್ಳಬೇಕು. ಅಂಥಹ ಸಂದರ್ಭದಲ್ಲಿ ಮಗುವಿನ ಶರೀರವನ್ನು ಬಾಗಿಸುವುದಾಗಲಿ, ಅದರ ಒದ್ದಾಟದ ಚಲನೆಯನ್ನು ಬಲಾತ್ಕಾರವಾಗಿ ನಿಲ್ಲಿಸುವುದಾಗಲಿ ಮಾಡಕೂಡದು. ಅದು ಹಲ್ಲು ಕಚ್ಚಿಹಿಡಿಯಬಾರದೆಂದು ಅಥವ ನಾಲಿಗೆ ಕಚ್ಚಬಾರದೆಂದು ಬಾಯಿಗೆ ಚಮಚವನ್ನೋ, ಇನ್ನಾವುದೋ ವಸ್ತುವನ್ನು ಬಾಯೊಳಗೆ ಅಡ್ಡ ಇಡಬಾರದು. ಅಂಥಹ ಸಂದರ್ಭದಲ್ಲಿ ಮಗುವಿನ ಹತ್ತಿರ ಅಪಾಯಕಾರಿ ವಸ್ತುಗಳನ್ನು ಇಡಬಾರದು. ಮಗುವಿಗೆ ಪೂರ್ಣ ಪ್ರಜ್ಞೆ ಬರುವ ತನಕ ಕುಡಿಯಲು ಅಥವ ತಿನ್ನಲು ಏನನ್ನೂ ಕೊಡಬಾರದು. ಮೂರ್ಛೆ ಬಂದಾಗ ಮುಖದ ಎದುರಿಗೆ ಚಿಟಿಕೆ ಹಾಕುವುದು, ಕೈಗೆ ಕಬ್ಬಿಣ ಹಿಡಿಸುವುದು, ಈರುಳ್ಳಿ ಅಥವ ಚಪ್ಪಲಿಯನ್ನು ಮಗುವಿನ ಮೂಗಿಗೆ ಹಿಡಿದು ಮೂಸಿಸುವ ಪ್ರಯತ್ನ ಮಾಡುವುದು ಇತ್ಯಾದಿ ಕ್ರಿಯೆಗಳಿಂದ ಮಗು ಎಚ್ಚರಗೊಳ್ಳುತ್ತದೆ ಎಂಬುದು ಮೂಢನಂಬಿಕೆಯೇ ವಿನಃ ವೈಜ್ಞಾನಿಕ ಆಧಾರಿತವಲ್ಲ.
ತಾರೀಖು : 26 - 11 - 2014
ಮಾಹಿತಿಯ ಕೃಪೆ : ಡಾ|| ಎ .ಶಿವರಾಮಕೃಷ್ಣ .ನರರೋಗತಜ್ಞರು. ಶಿವಮೊಗ್ಗ. [ಅವರ " ಮೆದುಳಿನ ಕಾಯಿಲೆಗಳು " -- ಪುಸ್ತಕದಿಂದ ].
No comments:
Post a Comment
Note: only a member of this blog may post a comment.