ಹೆಣಕ್ಕೂ ಶೃಂಗರಿಸುವ ಪದ್ಧತಿ ಬಹಳ ಕಡೆ ಇದೆ . ಅದನ್ನು ಕೆಲವು ಸಂಪ್ರದಾಯಗಳಲ್ಲಿ
ಸಾಂಕೇತಿಕವಾಗಿ ಮಾಡುತ್ತಾರೆ . ಇನ್ನು ಕೆಲವರಲ್ಲಿ ವಿಶೇಷವಾಗಿ ಮಾಡುತ್ತಾರೆ . ನಮ್ಮ ಸಮಾಧಾನಕ್ಕೆ
, ಆದ್ಯಂತ ನಡೆದುಕೊಂಡು ಬಂದ ನಮ್ಮ ನಂಬಿಕೆಗೆ ಈ ರೀತಿ ಹೆಣವನ್ನು ಶೃಂಗರಿಸುತ್ತೇವೆ. ಆದರೆ ಆ ಶೃಂಗಾರದ
ವೈಭವವನ್ನು ಹೆಣ ಅರಿಯುತ್ತದೆಯೇ ?. ಇಲ್ಲ.
ನಾವು ಜನರಿಗೆ ಮಾಡುವ ಉಪಕಾರವೂ ಹಾಗೆಯೇ. ನಮ್ಮಿಂದ ಪ್ರಯೋಜನವನ್ನು ತೆಗೆದುಕೊಳ್ಳುವವರೆಗೆ
ನಮ್ಮನ್ನು ಹೊಗಳುತ್ತಾರೆ. ತಮ್ಮ ತೆವಲು ತೀರಿದ ನಂತರ ನಮ್ಮನ್ನು ಮರೆತೇಬಿಡುತ್ತಾರೆ. ಹಾಗಂತ ಇದಕ್ಕೆ
ಅಪವಾದ ಇಲ್ಲವೆಂದಲ್ಲ.
ಇದರ ಅರಿವಿದ್ದೂ ನಾವೇಕೆ ಜನರಿಗೆ, ಊರಿಗೆ, ನಮ್ಮನ್ನು ಆಶ್ರಯಿಸಿ ಬರುವವರಿಗೆ
ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ?. ಮಾಡುತ್ತೇವೆ ಏಕೆ ?.
ನಾವೂ ಒಂದು ದಿನ ಪಾರ್ಶ್ವವಾತ ಹೊಡೆದು ಮೂಲೆಯಲ್ಲಿ ಕುಳಿತುಕೊಳ್ಳಬಹುದು.
ಅಸಹಾಯಕರಾಗಿ ಮುದುಡಿಕೊಂಡು ಏಕಾಂಗಿಯಾಗಿ ಕುಳಿತುಕೊಂಡಿರಬಹುದು . ನಮ್ಮ ಸಂಬಂಧಿಕರು , ಸ್ನೇಹಿತರು
, ನೆರೆಹೊರೆಯವರು ಎಷ್ಟು ಜನ , ಎಷ್ಟು ದಿನ ನಮ್ಮನ್ನು ಮಾತನಾಡಿಸಲು ಬರಲು ಸಾಧ್ಯ .
ನಾವು ಅಸಾಹಯಕರಾಗಿ , ಏಕಾಂಗಿಯಾಗಿ ಸುಮ್ಮನೆ ಮೂಲೆಯಲ್ಲಿ ಕುಳಿತುಕೊಂಡಿರುವಾಗ
ನಮಗೆ ಯೋಚಿಸಲು, ನಮ್ಮ ಮನಸ್ಸಿನ ಬೇಜಾರು ಕಳೆದುಕೊಳ್ಳಲು ಒಂದಿಷ್ಟು ಯಾವುದಾದದೂ ಒಳ್ಳೆಯ ವಿಷಯಗಳು
ಬೇಕು. ನಮ್ಮ ಬದುಕು ಇಲ್ಲಿಯವರೆಗೆ ಸಾರ್ಥಕ ದಾರಿಯಲ್ಲಿ ಬಂದಿದೆಯೇ , ಇಲ್ಲವೇ ವ್ಯರ್ಥವಾಗಿ ಸಾಗಿ
ಬಂದಿದೆಯೇ ಎಂದು ಮಂಥನ ಮಾಡಿಕೊಳ್ಳಬೇಕೆಂದು ಮನಸ್ಸು ಹವಣಿಸುತ್ತದೆ.
ಆಗ ಸಾಗಿಬಂದ ನಮ್ಮ ಜೀವನದ ದಾರಿಯಲ್ಲಿಆಗಾಗ್ಯೆ ನಾವು ಮಾಡಿದಂಥಹ ಪರೋಪಕಾರಗಳು
, ಸಮಾಜಕ್ಕಾಗಿ ಮಾಡಿದಂಥಹ ಒಳ್ಳೆಯ ಕೆಲಸಗಳು ಮೂಲೆಯಲ್ಲಿ ಕುಳಿತು ಜಡ್ಡುಗಟ್ಟಲು ಪ್ರಾರಂಭವಾದ ನಮ್ಮ
ಮನಸ್ಸಿಗೆ ಚೇತನ ಮತ್ತು ಸಮಾಧಾನವನ್ನು ಕೊಡುತ್ತವೆ . ಅಷ್ಟಕ್ಕಾಗಿ ನಾವು ಊರಿಗೆ ಉಪಕಾರವನ್ನು ನಮ್ಮ
ಜೀವನದಲ್ಲಿ ಮಾಡಿರಬೇಕು
ಹೆಣ ಶೃಂಗಾರವನ್ನು ಅರಿಯದಿದ್ದರೂ ನಮ್ಮ ನಂಬಿಕೆಯ
ಸಮಾಧಾನಕ್ಕಾಗಿ ಅದನ್ನು ಮಾಡುತ್ತೇವೆ. ಹಾಗೆಯೇ ಊರು ಉಪಕಾರವನ್ನು ಅರಿಯದಿದ್ದರೂ ನಮ್ಮ ಮಾನಸಿಕ ಸಮಾಧಾನಕ್ಕಾಗಿ
ಅದನ್ನು ನಾವು ಮಾಡಬೇಕು. ಅಷ್ಟೇ !.
No comments:
Post a Comment
Note: only a member of this blog may post a comment.