~~~~~~ ಎಂ. ಗಣಪತಿ. ಕಾನುಗೋಡು.
ರೈತನ ಸಾಲದ ಉಭ್ರಮೆ ಎಷ್ಟಿದೆಯೆಂದರೆ ತನ್ನ ಮೂಲ ಕಸುಬಿನಿಂದ ಹೊರಟು ಬೇರೆ ಉದ್ಯೋಗವನ್ನು ಹಿಡಿಯಲು ಅವನಲ್ಲಿ ಅದಕ್ಕೆ ಬೇಕಾದ ಪರಿಣಿತಿ, ಕಾಸು, ವಾತಾವರಣದ ಅನುಕೂಲತೆ ಯಾವುದೂ ಆತನಲ್ಲಿ ಇಲ್ಲ. ಅಲ್ಲದೆ ಈಗಾಗಲೇ ಅವನು ತನ್ನ ಆರ್ಥಿಕ ಅಧೋಗತಿಯಿಂದಾಗಿ ಬಸವಳಿದಿದ್ದಾನೆ, ಯಾವುದಕ್ಕೂ ಧೈರ್ಯ ಕುಂದಿದೆ. ಇನ್ನು ಸಂಘಟಿತನಾಗಿ ಸರ್ಕಾರದ ನೆರವನ್ನು ಕೋರಬೇಕು. ತನ್ನ ವೈಯುಕ್ತಿಕ ಬದುಕಿನ ಹತೋಟಿಯೇ ಅವನಲ್ಲಿರದಿರುವಾಗ ಅವನು ಇನ್ನು ಸಾಂಘಿಕ ನೆಲೆಗೆ ಸಾಗುವುದು ಹೇಗೆ ?.
ಈಗಾಗಲೇ ರೈತ ಸಂಘಟನೆಗಳಿವೆ. ಆದರೆ ಅವೂ ರಾಜಕೀಯಪ್ರೇರಿತ. ಯಾವುದೊ ಕೆಲವು ಮಂದಿಯ ತೆವಲಿಗೆ ರೈತರ ಹೆಸರಿನಲ್ಲಿ ಮಾಡಿಕೊಂಡ ರೈತ ಸಂಘಗಳವು. ಮತ್ತೆ ಆ ಸಂಘಟನೆಗಳಲ್ಲೇ ಒಡಕುಂಟಾಗಿ ಬೇರೆ ಬೇರೆ ಬಣಗಳಾಗಿವೆ. ತಮ್ಮ ಘಾಯವನ್ನೇ ಮಾಗಿಸಿಕೊಳ್ಳಲು ಅವರಿಗಾಗದಾದಾಗ ಇನ್ನು ನಿಜವಾಗಿ ರೈತರ ಘಾಯವನ್ನು ವಾಸಿಮಾಡುವ ಅವರ ಘೋಷಣೆ ಕೇವಲ ಗಾಳಿಯ ಮೇಲಿನ ಗುದ್ದಷ್ಟೇ.
ರೈತ ತಿಳಿವಳಿಕೆ ಇಲ್ಲದವನೇನೂ ಅಲ್ಲ. ತಾನು ಶೂನ್ಯ ಬಿಂದುವಿನವರೆಗೆ ಬರುವವರೆಗೂ ಯಾವುದಾದರೂ ಒಂದು ಮಾರ್ಗದಲ್ಲಿ ಬದುಕಲು ಸಾಧ್ಯವೇನೋ ಎಂದು ಪ್ರಯತ್ನಿಸ ಹಣುಕಿದವನು. ಸರ್ಕಾರ ಕೂಲಿಕಾರರಿಗೆ ಬೇಕಾಬಿಟ್ಟಿ ಪುಕ್ಕಟ್ಟೆ ಸವಲತ್ತನ್ನು ಹೇರಳವಾಗಿ ಕೊಟ್ಟು ಅವರನ್ನು ಇನ್ನೂ ಸೋಮಾರಿಗಳಾಗಿ ಮಾಡಿ ಅವರ ದುಡಿಯುವ ಶಕ್ತಿಯನ್ನು ಉಡುಗಿಸುವುದಕ್ಕಿಂತ ದುಡಿದು ದೇಶಕ್ಕೆ ಅನ್ನ ಕೊಡುವ ರೈತನಿಗೆ ಅವನು ಬದುಕಿ ಉಳಿಯುವ ಹಾಗೆ ವಾಸ್ತವಿಕ ಸವಲತ್ತುಗಳನ್ನುಕೊಡಬೇಕು. ಹಾಗೆಂದು ಸರ್ಕಾರ ಈಗ ಮಾಡುತ್ತಿರುವಂತೆ ರೈತ ತೆಗೆದುಕೊಂಡ ಸಾಲದಲ್ಲಿ 25 % ಅಸಲಿನ ಹಣವನ್ನು ವಿನಾಯಿತಿ ಮಾಡುವುದು ಸಲ್ಲದು. ಅದರ ಬದಲಿಗೆ ಆತನಿಗೆ ಕೃಷಿ ಸಂಬಂಧಿತ ಕೈಗಾರಿಕೆ, ಗ್ರಾಮೀಣ ಕೈಗಾರಿಕೆ, ಕೃಷಿಯನ್ನೇ ಇನ್ನೂ ಅಭಿವೃದ್ಧಿ ಪಡಿಸುವಿಕೆ ಮುಂತಾದ ಉದ್ದೇಶಗಳಿಗೆ ಬಡ್ಡಿರಹಿತವಾಗಿ , ಅತಿ ಸುಲಭವಾಗಿ, ಹೇರಳವಾಗಿ ಸಾಲವನ್ನು ಕೊಡಬೇಕು. ಅವನು ಬೆಳೆದ ಬೆಳೆಗಳಿಗೆ ಸಹಾಯಧನವನ್ನು ಕೊಡಬೇಕು. ಅಂದರೆ ಒಂದು ಕ್ವಿಂಟಾಲ್ ಬತ್ತಕ್ಕೆ ನಿಜವಾಗಿ ಹೇಳಬೇಕೆಂದರೆ ಪ್ರಸ್ತುತದಲ್ಲಿ ಒಂದು ಸಾವಿರದ ಐದು ನೂರು ರುಪಾಯಿ ಖರ್ಚಾಗುತ್ತದೆ. ಅದರಮೇಲೆ ರೈತನಿಗೆ ಲಾಭ ಉಳಿಯಬೇಕೆಂದಿದ್ದರೆ ಅವನು ಅದನ್ನು ಒಂದು ಕ್ವಿಂಟಲಿಗೆ ಕನಿಷ್ಠ ಎರಡು ಸಾವಿರ ರೂಪಾಯಿಗಳಿಗೆ ಮಾರಬೇಕು. ಆದರೆ ಆ ಧಾರಣೆ ಈಗ ಮಾರುಕಟ್ಟೆಯಲ್ಲಿ ದೊರಕುತ್ತಿಲ್ಲ. ಅಥವ ಹಾಗೆ ಮಾಡಿದರೆ ಅಕ್ಕಿಯನ್ನು ಬಳಕೆಮಾಡುವ ಗ್ರಾಹಕನಿಗೆ ತೊಂದರೆಯಾಗುತ್ತದೆ. ಅದೂ ಒಂದು ಕಷ್ಟವೇ. ಜನಸಾಮಾನ್ಯ ಗ್ರಾಹಕರಿಗೆ ಖಂಡಿತಾ ತೊಂದರೆ ಆಗಬಾರದು. ಆದ್ದರಿಂದ ಆ ವ್ಯತ್ಯಾಸದ ಮೊಬಲಗನ್ನು ಸರ್ಕಾರ ರೈತನಿಗೆ ಭರಿಸಬೇಕು. ಆಗ ಮಾತ್ರ ರೈತ ತನ್ನ ಉದ್ಯೋಗದಲ್ಲಿ ಉಳಿಯಲು ಸಾದ್ಯ. ಇಲ್ಲದಿದ್ದರೆ ಅವನೂ ತನ್ನ ಜೀವನೋಪಾಯಕ್ಕೆ ಬೇರೆ ದಾರಿಯನ್ನು ಅರಸಿ ನಗರವನ್ನು ಸೇರಬೇಕಾಗುತ್ತದೆ. ಹೀಗೆ ಗ್ರಾಮ ಭಾರತದ ಜನರೆಲ್ಲಾ ಶಹರವನ್ನು ಸೇರಿದರೆ ಆಗ ನಗರ ಭಾರತದ ಜನಜೀವನ ಒತ್ತಡವನ್ನು, ಅನೇಕ ಸಮಸ್ಯೆಗಳನ್ನು ನಿರ್ಮಾಣ ಮಾಡಿದತಾಗುತ್ತದೆ. ಈಗ ಆಗುತ್ತಿರುವುದು ಇದೇ. ಈಗ ಮಾಡುತ್ತಿರುವಂತೆ ಸಹಾಯಧನದಲ್ಲಿ ಕೃಷಿ ಯಂತ್ರಗಳು, ಗೊಬ್ಬರಗಳು, ಕೃಷಿ ಉಪಕರಣಗಳು ಇತ್ಯಾದಿ ಸವಲತ್ತುಗಳು ಸರ್ಕಾರದಿಂದ ಪೂರೈಕೆಯಾಗುತ್ತಿರುವ ಕ್ರಮ ಸರಿ ಇಲ್ಲ. ಏಕೆಂದರೆ ಹಾಗೆ ಪೂರೈಕೆಯಾಗುತ್ತಿರುವ ವಸ್ತುಗಳು ನಿಜವಾಗಿ ರೈತನಿಗೆ ಸಹಾಯಧನದಲ್ಲಿ ದೊರಕುತ್ತಿಲ್ಲ. ಹಾಗೆ ಮಾಡುವಲ್ಲಿ ಸರ್ಕಾರ ಅವುಗಳ ಮೂಲ ಬೆಲೆಯನ್ನೇ ಏರಿಸಿ ರೈತನಿಗೆ ಸಹಾಯಧನ ಕೊಟ್ಟ ಕುಹಕವನ್ನು ಮಾಡುತ್ತಿದೆ. ಅಂದರೆ ಆ ವಸ್ತುಗಳ ತಯಾರಕರಿಗೆ ಕಡಿಮೆ ಬೆಲೆಯನ್ನು ಕೊಟ್ಟು ಅವರಿಂದ ಹೆಚ್ಚು ಬೆಲೆಯನ್ನು ಅವುಗಳಿಗೆ ಕಟ್ಟಿಸಿದಂತೆ ದಾಖಲೆಯನ್ನು ಸಿದ್ಧಗೊಳಿಸಿಕೊಂಡಿರುತ್ತದೆ. ಆ ಬೆಲೆಯ ಮೊಬಲಗಿನ ವ್ಯತ್ಯಾಸವನ್ನು ಸರ್ಕಾರ ರೈತನಿಗೆ ಸಹಾಯಧನವೆಂದು ಘೋಷಿಸುತ್ತದೆ. ಆ ವಸ್ತುವಿನ ಹೆಚ್ಹಿಸಿದ ಬೆಲೆಯ ಮೊಬಲಗನ್ನು ಯಾರು ಯಾರೋ ತಿನ್ನುತ್ತಾರೆ. ಆದರೆ ಸಹಾಯಧನದ ಮೊಬಲಗನ್ನು ಸರ್ಕಾರದ ಖಜಾನೆಯಿಂದ ಭರಿಸಲಾಗುತ್ತದೆ. ಇದು ಸರ್ಕಾರದಿಂದ ರೈತರಿಗೆ ಆಗುತ್ತಿರುವ ಒಂದು ವಂಚನೆ. ಇಂಥಹ ಪ್ರಾಯೋಗಿಕ ಸವಲತ್ತುಗಳನ್ನು ಕೊಡುವುದನ್ನು ಬಿಟ್ಟು ಸರ್ಕಾರ ಕೇವಲ ಬಾಯೋಪಚಾರ ಮಾಡುತ್ತಿದೆ.
ರೈತ ಎಲ್ಲವೂ ನಿಷ್ಫಲವಾದಾಗ ಆತ ಉದ್ಯೋಗವನ್ನು ಅರಸಿ ಅನಿವಾರ್ಯವಾಗಿ ನಗರಕ್ಕೆ ಗುಳೇ ಹೋಗಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಾಗ ಅವನು ಅಸಹಾಯಕನಾಗಿ ಅವನ ಧೃಷ್ಟಿಯಲ್ಲಿ ಅರಸಲೇ ಬೇಕಾದ ಅತಿ ಕೊನೆಯ ದಾರಿ ಆತ್ಮಹತ್ಯೆ.
No comments:
Post a Comment
Note: only a member of this blog may post a comment.