Wednesday, 23 January 2013

ಭಾರತೀಯ ಸಮಾಜದಲ್ಲಿ ಮಹಿಳೆ , ಸ್ವಾತಂತ್ರ್ಯ ಮತ್ತು ಕುಟುಂಬ


                                                                                         -------ಎಂ ಗಣಪತಿ ಕಾನುಗೋಡು.
( ಈ ಲೇಖನದ ವಿಚಾರಗಳನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು)

    ಭಾರತೀಯ ಸಮಾಜದಲ್ಲಿ ಮಹಿಳೆ ಮತ್ತು ಅವಳ ಸ್ವಾತಂತ್ರ್ಯವನ್ನು ಚರ್ಚೆ ಮಾಡುವ ಮೊದಲು ಭಾರತೀಯ ಸಮಾಜದ ನೆಲಗಟ್ಟಿನ ಬಗ್ಗೆ ಸ್ವಲ್ಪ ಯೋಚಿಸಬೇಕಾಗುತ್ತದೆ.  ಕೌಟುಂಬಿಕ ಪರಿಸರ ಮತ್ತು ಮನೋಭಾವಗಳಲ್ಲಿ ನಮ್ಮ ಸಮಾಜ ಪಾಶ್ಚಿಮಾತ್ಯ ಸಮಾಜದ ಕೌಟುಂಬಿಕ ನೆಲೆಗಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಒಂದು ಕುಟುಂಬ ಮೂರು ತಲೆಮಾರುಗಳನ್ನು ಹೊಂದಿರುತ್ತದೆ. 1) ಅಜ್ಜ-ಅಜ್ಜಿ  2) ಅಪ್ಪ - ಅಮ್ಮ 3 ) ಮೊಮ್ಮಕ್ಕಳು ಅಥವಾ ಮಕ್ಕಳು . ಈ ಸ್ಥರಗಳು ಪ್ರಪಂಚದಾದ್ಯಂತ ಒಂದೇ.  ಇನ್ನು ಮುತ್ತಜ್ಜ - ಮುತ್ತಜ್ಜಿ , ಮತ್ತು ಮರಿಮಕ್ಕಳು ಎನ್ನುವ ವಿಶೇಷ ಸ್ಥರಗಳು ಇಂದಿನ ವಿಭಕ್ತ ಕುಟುಂಬದ ವ್ಯವಸ್ಥೆಯಲ್ಲಿ ಬಹಳ ಅಪರೂಪ. ಬಹಳ ಕುಟುಂಬಗಳಲ್ಲಿ ಅಪ್ಪ - ಅಮ್ಮ ಮತ್ತು ಮಕ್ಕಳು ಹೀಗೆ ಎರಡೇ ಸ್ಥರಗಳನ್ನು ನೋಡುತ್ತೇವೆ .
 ಪಾಶ್ಚಿಮಾತ್ಯ ಸಮಾಜದಲ್ಲಿ ಅಜ್ಜ - ಅಜ್ಜಿ ಅಂತೆಯೇ ವಯಸ್ಸಾಗಿದ್ದರೆ ಅಪ್ಪ - ಅಮ್ಮ ಈ ಎರಡೂ ತಲೆಮಾರುಗಳನ್ನು ನಿಗಾ ವಹಿಸಲು , ಸಾಕಲು ಬೇರೆ ಸಾಂಸ್ಥಿಕ ವ್ಯವಸ್ಥೆಗಳೇ ಇರುತ್ತವೆ. ಹಾಗೆಯೇ ಮಕ್ಕಳನ್ನು ನೋಡಿಕೊಳ್ಳಲು, ವಿಧ್ಯಾಭ್ಯಾಸ  ಮಾಡಿಸಿಕೊಡಲು 'ಡೇ  ಕೇರ್' ನಂತಹ ಸಾಸ್ಥಿಕ ವ್ಯವಸ್ಥೆಗಳು ಇರುತ್ತವೆ . ಹಾಗೆಂದು ಇವು  ಅನಾಥಾಶ್ರಮವೆಂದು ಭಾವಿಸಬೇಕಾಗಿಲ್ಲ. ವ್ಯವಸ್ಥಿತವಾದ ಒಂದು ಸುಶ್ರಮ.  ಇದಕ್ಕೆ ಅಲ್ಲಿಯ ಜನರ ವ್ಯೆಯುಕ್ತಿಕ   ಸಮ್ಮತಿಯೊಂದೇ ಅಲ್ಲ ಸಾಮಾಜಿಕ ಸಮ್ಮತಿಯೂ ಇರುತ್ತದೆ.  ಅದಕ್ಕೆ ತಗಲಬಹುದಾದ ವೆಚ್ಚವನ್ನು ಸಂಭಂಧಪಟ್ಟವರು ಭರಿಸುತ್ತಾರೆ. ದುಡಿಮೆಯ ನಡುವೆ ಕಾಲಾವಕಾಶವಿದ್ದಾಗ ತಮ್ಮ ಹಿರಿಯರನ್ನು ಅಗತ್ಯವಾಗಿ ಭೇಟಿಯಾಗಿ ಯೋಗಕ್ಷ್ಯೇಮ ವಿಚಾರಿಸುತ್ತಾರೆ. ಅಲ್ಲದೇ ನಿತ್ಯ ಸಂಪರ್ಕದಲ್ಲಿರುತ್ತಾರೆ. ಕಿರಿಯರ ವಿಚಾರದಲ್ಲೂ ಇದೇ ವ್ಯವಸ್ಥೆ. ಆದರೆ ಸಂಸರ್ಗ ಮತ್ತು ಸಂಪರ್ಕ ವಿಚಾರದಲ್ಲಿ ಬೇರೆ ಬೇರೆ ಕ್ರಮ ಅಷ್ಟೇ.
 ಆದರೆ ಭಾರತೀಯ ಸಮಾಜದಲ್ಲಿ ಪಾರಂಪರಾನುಗತವಾಗಿ ಹಾಗಿಲ್ಲ. ಪ್ರಸಕ್ತ ಪರಿಸ್ಥಿತಿಯಲ್ಲಿ ದೊಡ್ಡ ಶಹರಗಳಲ್ಲಿ ವೃದ್ದರು ಮತ್ತು ಸಣ್ಣ ಮಕ್ಕಳ ವ್ಯವಸ್ಥೆಗೆ ಪಾಶ್ಚಿಮಾತ್ಯ ಮನೋಭೂಮಿಕೆಯಂತೆ ಅಲ್ಲಲ್ಲಿ ಸಂಸ್ಥೆಗಳು ಹುಟ್ಟಿಕೊಂಡದ್ದು ಹೌದು. ಆದರೆ ನಮ್ಮ ಮನೋಗತಿ ಅದಕ್ಕೆ ಇನ್ನೂ ಹೊಂದಿಕೊಂಡಿಲ್ಲ. ವೃದ್ಧರ ಮತ್ತು ಮಕ್ಕಳ ಪ್ರಾಥಮಿಕ ಸಂಭಂಧ ಇನ್ನೂ ತೀರ ವ್ಯೆಯುಕ್ತಿಕವಾಗಿಯೇ ಉಳಿದುಕೊಂಡು ಬಂದಿದೆ . ತಾಯಿಯು ಮಕ್ಕಳಿಗೆ ಹಾಲು, ಅನ್ನ ಉಣಿಸುವಷ್ಟು ಸಮಾಧಾನ , ಮಕ್ಕಳಿಗೆ ಸಂಸ್ಕೃತಿಯನ್ನು ಪರಿಪಾಠಿಸುವಲ್ಲಿ ಇರುವ ಸಂತೋಷ 'ಡೇ ಕೇರ್'  ನಂತಹ ಸಂಸ್ಥೆಯಲ್ಲಿನ ಕಾರ್ಯ ವಿಧಾನಗಳಿಂದ ನಮ್ಮ ಸಮಾಜದ ತಂದೆ ತಾಯಿಗಳಿಗೆ ಒಗ್ಗುವುದಿಲ್ಲ. ವೃದ್ಧ ತಂದೆ ತಾಯಿಗಳನ್ನು ಪೋಷಣೆ ಮಾಡದಿದ್ದರೆ ಅವರ ಮಕ್ಕಳಿಗೆ ಅಪರಾಧ ಪ್ರಜ್ಞೆ ಮೂಡುತ್ತದೆ.
 ನಮ್ಮ ಸಮಾಜದ ಈ ತೆರನ ಮನೋಭೂಮಿಕೆಯ ವೇದಿಕೆಯಲ್ಲಿ ಮಹಿಳೆ, ಅವಳ ಸ್ವಾತಂತ್ರ್ಯ ಮತ್ತು ಕುಟುಂಬ ಎನ್ನುವ ವಿಚಾರವನ್ನು ಚಿಂತನೆ ಮಾಡಬೇಕಾಗುತ್ತದೆ.
 ಇಲ್ಲಿ ಗಮನಿಸಬೇಕಾದ ಅತೀ ಮುಖ್ಯ ಅಂಶವೆಂದರೆ ಸಂಪೂರ್ಣ ಸ್ವಾತಂತ್ರ್ಯ ಯಾರಿಗೂ ಇಲ್ಲ. ಮಹಿಳೆ ಮತ್ತು ಪುರುಷ ಅಂತಲ್ಲ. ಪ್ರಪಂಚದ ಯಾವುದೇ ಪ್ರಾಣಿ,  ಮನುಷ್ಯನನ್ನು ಒಳಗೊಂಡು ಯಾರಿಗೂ ಸಂಪೂರ್ಣ ಸ್ವಾತಂತ್ರ್ಯವನ್ನು ದೇವರು ಕೊಟ್ಟಿಲ್ಲ. ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯವನ್ನು ಸಾಧಿಸುತ್ತಿದ್ದಾನೆ ಎಂದರೆ ಮತ್ತೊಬ್ಬನ ಸ್ವಾತಂತ್ರ್ಯವನ್ನು ಅವನು ಕಸಿದುಕೊಳ್ಳುತ್ತಿದ್ದಾನೆ ಎಂದೇ ಭಾವಿಸಬೇಕು. ಹಾಗೆಂದು ಸಂಪೂರ್ಣ ಸ್ವಾತಂತ್ರ್ಯ ಹೊಂದಿರಲು ತಕ್ಕನಾಗಿ ಯಾವ ವ್ಯಕ್ತಿಯೂ ಸಮಗ್ರವಾಗಿ ಸ್ವಾವಲಂಬಿಯಲ್ಲ. ಅವನು ನಿರ್ವಹಿಸುವ ಬದುಕಿನ ಅನೇಕ ಪ್ರತ್ಯೇಕ ಪಾತ್ರಗಳಲ್ಲಿ ಮತ್ತು ಹರಿದಾಡುವ ಹಲವಾರು ಕ್ಷೇತ್ರಗಳಲ್ಲಿ  ಪರಾವಲಂಬಿಯೇ ಆಗಿದ್ದಾನೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಸ್ತುತ ವಿಷಯವನ್ನು ವಿಶ್ಲೇಷಿಸಬೇಕಾಗುತ್ತದೆ.
 ಇಷ್ಟೆಲ್ಲಾ ಪೂರ್ವ ಪೀಠಿಕೆಯನ್ನು ಅಭ್ಯಾಸ ಮಾಡಿಕೊಂಡು ಈಗ ಮಹಿಳೆ, ಸ್ವಾತಂತ್ರ್ಯ ಮತ್ತು ಕುಟುಂಬ ಎಂಬ ಪರಿಕಲ್ಪನೆಯ ವಿಮರ್ಶೆಗೆ ಬರೋಣ.
 ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ  ನೋಡಬೇಕಾಗುತ್ತದೆ. ಒಂದು ಗ್ರಾಮೀಣ ಮಹಿಳೆ. ಇನ್ನೊಂದು ನಗರ ಪ್ರದೇಶದ ಮಹಿಳೆ. ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರ, ಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತು ಅನುಭವಿಸಲು ಇಚ್ಚಿಸುವ ಮನೋಭಾವದಲ್ಲಿ ಇಬ್ಬರಿಗೂ ವ್ಯತ್ಯಾಸವಿದೆ.
  ಗ್ರಾಮೀಣ ಭಾರತ ಹೆಚ್ಚಾಗಿ ಕೃಷಿ ಮತ್ತು ಕೃಷಿ ಅವಲಂಬಿತ ಉದ್ಯೋಗವನ್ನು ಹೊಂದಿದೆ.ಗ್ರಾಮೀಣ ಮಹಿಳೆ ಹೆಚ್ಚೆಂದರೆ ಸಾಮಾನ್ಯ ಶೈಕ್ಷಣಿಕ ಪದವಿಯನ್ನು ಹೊಂದಿರುವಳು. ತಾಂತ್ರಿಕ ಶೈಕ್ಷಣಿಕ ಪದವಿಯನ್ನು ಹೊಂದಿರುವುದಿಲ್ಲ. ಈಕೆ ಸ್ವಯಂ ಉದ್ಯೋಗದ ಹಪ ಹಪಿಕೆಯನ್ನು ಒಮ್ಮೆ ಹೊಂದಿದ್ದರೂ ಅದಕ್ಕೆ ಬೇಕಾದ ಶಿಕ್ಷಣ, ತರಬೇತಿ ಮತ್ತು ವಾತಾವರಣ ಇರುವುದಿಲ್ಲ. ಕೃಷಿ ಪ್ರಧಾನ ಜೀವನದಲ್ಲಿ ಕೇವಲ ಗೃಹಿಣಿಯಾಗಿ ತನ್ನ ಬದುಕನ್ನು ನಡೆಸುತ್ತಾಳೆ. ಪುರುಷರ ದುಡಿಮೆಗೆ ಕೈ ಜೋಡಿಸುತ್ತಾಳೆ. ಇಲ್ಲವೇ ಹಿನ್ನೆಲೆಯಲ್ಲಿ ಸಹಕರಿಸುತ್ತಾಳೆ. ಕೃಷಿ ಕುಟುಂಬದಲ್ಲಿ ಮನೆಯಲ್ಲಿಯೇ ಪುರುಸೊತ್ತಿಲ್ಲದಷ್ಟು ಕೆಲಸ ಅವಳಿಗಿರುತ್ತದೆ. ಹಾಗೆಂದು ಪುರುಷರಿಗಿರುವಷ್ಟು ಗೌರವ ಕೆಲವು ಕುಟುಂಬಗಳಲ್ಲಿ ಮಾತ್ರ  ಅವಳಿಗೂ ಇರುತ್ತದೆ. ಗ್ರಾಮೀಣ ಮಹಿಳೆಯರಿಗೆ ವಯೋವೃದ್ದರ ಪೋಷಣೆ, ದಿನದ ಮಧ್ಯೆ ಮಧ್ಯೆ ಕೃಷಿ ಕಾರ್ಮಿಕರಿಗೆ ಚಹಾ, ತಿಂಡಿ ಮತ್ತು  ಊಟ ಮಾಡಿ ಎಳೆಯುವುದು. ಕೃಷಿ ಜೀವನಕ್ಕೆ ಅಗತ್ಯವಾದ ನಾಯಿ, ಬೆಕ್ಕು, ಕೋಳಿಗಳ ಆರೈಕೆ ಮಾಡುವದು. ಎಮ್ಮೆ ಹಸುಗಳ ನಿಗಾ, ಹಾಲು ಹಿಂಡುವದು, ಅವುಗಳ  ಸಗಣಿ ಬಾಚುವುದು ಗ್ರಾಮೀಣ ಮಹಿಳೆಗೆ ಅಂಟಿದ ಕಟ್ಟಳೆ. ಮುಂಜಾನೆ ಆರು ಘಂಟೆಯಿಂದ ರಾತ್ರಿ ಹತ್ತು-ಹನ್ನೊಂದು ಘಂಟೆಯವರೆಗೂ ಯಂತ್ರದಂತೆ ಕೆಲಸಮಾಡುತ್ತಿರುವುದು ಅವಳ ದಿನಚರಿ. ಕೃಷಿ ಭೂಮಿ ಹೊಂದಿದ ಮಹಿಳೆಯಾದರೆ ಪುರುಷನಿಗೆ ಸರಿಸಮನಾಗಿ ಪತಿಗೆ ಹೇಗೆ ಸಂಬಳವಿಲ್ಲದೆ ಒಟ್ಟು ಉತ್ಪನ್ನದ ದುಡಿಮೆಯೋ ಹಾಗೆಯೇ ಅವಳಿಗೂ ಸಂಬಳವಿಲ್ಲದ ದುಡಿಮೆ. ಇನ್ನು, ಕೂಲಿಕಾರ ಕುಟುಂಬದ ಗ್ರಾಮೀಣ ಮಹಿಳೆಯಾದರೆ  ಸಂಸಾರ ನಿರ್ವಹಣೆ ಜೊತೆಗೆ ಕನಿಷ್ಠ ಸಂಬಳದ ದಿನಗೂಲಿ ಇರುತ್ತದೆ. 
  ಮಹಿಳೆಗೆ ಸಿಗುವ ಗೌರವ ಮತ್ತು ಸ್ವಾತಂತ್ರ್ಯದ ಇನ್ನೊಂದು ಮುಖವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಒಂದೇ ಕುಟುಂಬದ ಮೂರು ಗಂಡುಮಕ್ಕಳಲ್ಲಿ ಒಬ್ಬನು ಹುಟ್ಟಿದ ಮನೆಯ ಆಸ್ತಿ ಮತ್ತು ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಹಳ್ಳಿಯಲ್ಲಿಯೇ ಉಳಿದುಕೊಳ್ಳುತ್ತಾನೆ.  ಸಹಜವಾಗಿ ಆತನ ಹೆಂಡತಿ ಗೃಹಿಣಿಯಾಗಿ ಆತನೊಡನೆ ಉಳಿಯಬೇಕಾಗುತ್ತದೆ. ಇನ್ನಿಬ್ಬರು ಮಕ್ಕಳು ಯಾವುದಾದರೂ ಉದ್ಯಮವನ್ನು ಅಥವಾ ನೌಕರಿಯನ್ನು ಹಿಡಿದು ನಗರವನ್ನು ಸೇರುತ್ತಾರೆ.  ಅವರ ಹೆಂಡತಿಯರು ಸಹಜವಾಗಿ ಅವರೊಡನೆ ಶಹರದ ಬಾಳ್ವೆಯನ್ನು ನಡೆಸುತ್ತಾರೆ. ಇಂತಹ ಘಟನೆಗಳಲ್ಲಿ ಶಹರವಾಸಿ ಈ ಮಹಿಳೆಯರು ವರ್ಷದಲ್ಲಿ ಅಪರೂಪಕ್ಕೆ ಹಳ್ಳಿಯ ಮನೆಗೆ ಬರುತ್ತಾರೆ. ಕೆಲವೇ ದಿನಗಳ ಮಟ್ಟಿಗೆ ಅವರಿಗೆ ಹಳ್ಳಿಯಲ್ಲಿರಲು ಅವಕಾಶವಿರುತ್ತದೆ. ಈ ಹತ್ತಾರು ದಿನಗಳಲ್ಲಿ ತನ್ನ ಮನೆ, ತವರುಮನೆ , ಅಕ್ಕ ತಂಗಿಯರ ಮನೆ ಮತ್ತು ಇತರ ನೆಂಟರಿಷ್ಟರ ಮನೆಗಳನ್ನು ಓಡಾಡಿಕೊಂಡು ಹೋಗಬೇಕಾಗುವುದು ಸಹಜ. ಇಂತಹ ಸನ್ನಿವೇಶಗಳಲ್ಲಿ ಹಳ್ಳಿಯ ಮನೆಗೆ ಮದುವೆಯಾಗಿ ಸೇರಿದರೂ ಶಹರವಾಸಿಯಾಗಿರುವ ಈ ಮಹಿಳೆಯರು ತಮ್ಮ ಗಂಡನ ಹಳ್ಳಿಯ ಮನೆಯಲ್ಲಿ ಇರಬಹುದಾದದ್ದು ಎಷ್ಟು ದಿನ ?  ಇಂತಹ ಮಹಿಳೆಯರು ಒಮ್ಮೆ ಶಹರದಲ್ಲಿ ದುಡಿಯುವ ಮಹಿಳೆಯೂ ಆಗಿರಬಹುದು ಅಥವಾ ಗಂಡನ ದುಡಿಮೆಯನ್ನು ಅನುಭವಿಸುತ್ತಾ ಶಹರದ ಗೃಹಿಣಿಯೂ ಆಗಿರಬಹುದು.  ಹೀಗಿರುವಾಗ ಗಂಡನ ಹಳ್ಳಿಯ ಮನೆಯಲ್ಲಿ ತಂಗುವ ಕಡಿಮೆ  ದಿನಗಳ ಅವಧಿಯಲ್ಲಿ ಯಾವ ಕೆಲಸವೂ ಅವರಿಗೆ ತೋಚುವುದಿಲ್ಲ. ಒಮ್ಮೆ ತೋಚಿದರೂ ಮಾಡಲಿಕ್ಕೆ ಪುರುಸೊತ್ತಿಲ್ಲ. ಅದಂತೂ ಇರಲಿ ತನ್ನ ಕೆಲಸವನ್ನು ಮಾಡಿಕೊಳ್ಳಲೂ ಅವಳಿಗೆ ಸಮಯವಿರುವುದಿಲ್ಲ. ಮನೆಯಲ್ಲಿ ಗೃಹಿಣಿಯಾಗಿ ಹಗಲು ಇರುಳು ಮತ್ತು ಆಯುಷ್ಯ ಪೂರ್ತಿ ಕೃಷಿ ಮತ್ತು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಹಳ್ಳಿ ಮನೆಯ ಗೃಹಿಣಿಯಾಗಿ ಇರುವವಳೇ ತನ್ನ  ಇಂತಹ ಓರೆಗಿತ್ತಿಯರ ಕೆಲಸವನ್ನು ಮಾಡಿಕೊಡಬೇಕಾಗುತ್ತದೆ. ಬಚ್ಚಲ ಮನೆಯಲ್ಲಿ ಸ್ನಾನ ಮಾಡುವಾಗ ಬಿಚ್ಚಿಟ್ಟ ಬಟ್ಟೆಯನ್ನು ತೊಳೆದುಕೊಳ್ಳಲು ಶಹರದ ಓರೆಗಿತ್ತಿ ಮಹಿಳೆಯರಿಗೆ ಪುರುಸೊತ್ತಿಲ್ಲ , urgent ಆಗಿ ಮತ್ತೆಲ್ಲಿಗೋ ಓಡಾಟಕ್ಕೆ ಹೋಗಬೇಕು. ಅವರ ಆ ಬಟ್ಟೆಯನ್ನೂ ಹಳ್ಳಿಯಲ್ಲಿ ವಾಸಿಸುವ ಓರೆಗಿತ್ತಿ ಮಹಿಳೆಯು ತೊಳೆದು ಒಣಗಿಸಿ ಕೊಡಬೇಕು. ಅದರಂತೆ ಶಹರದ ಪ್ರಭುಗಳಾದ ಬಾವ ಮೈದುನರಿಗೂ ಹಳ್ಳಿ ಮನೆಗೆ ಬಂದಾಗ ಈ ಹಳ್ಳಿ ಗೃಹಿಣಿಯೂ ಚಾಮರ ಬೀಸಿ ಬಹುಪರಾಕು ಎಂದು ಹೇಳಬೇಕು.  ಶಹರದ ವಾಸಿಗಳಾದ ಇಂತಹ ಮಹಿಳೆಯರು ಹಳ್ಳಿಯ ತಮ್ಮ ಮನೆಗೆ ಬಂದಾಗ ಮನೆಯಲ್ಲಿರುವ  ಹಳ್ಳಿ ಓರೆಗಿತ್ತಿ ಗೃಹಿಣಿಗೆ ತಾವು ಮನೆಗೆ ಬಂದ ಕೆಲವು ದಿನಗಳಮಟ್ಟಿಗಾದರೂ ವಿಶ್ರಾಂತಿ ಕೊಟ್ಟು ಆ      ಕುಟುಂಬದ ಕೆಲಸ ನಿರ್ವಹಿಸುವುದು ಗಗನಕುಸುಮವೇ ಸರಿ. ಹಾಗಂತ ಅವರ ಮಾತುಗಳೆಲ್ಲಾ ಜೇನುತುಪ್ಪ ಸುರಿಸುವ ಕುಸುಮಗಳ ಪುಂಜ ಹೌದು. ಹಾಗೆಂದು ನಗರ ಜೀವನದ ಸುಖವನ್ನರಸಿ ಹೊರಟ ಕುಟುಂಬದ ಸದಸ್ಯರು ಯಾರೂ ತಮ್ಮ ಮೂಲ ಕುಟುಂಬದ ಆಸ್ತಿಯ ಹಕ್ಕು ಮತ್ತು ಸವಲತ್ತುಗಳನ್ನು ತ್ಯಜಿಸುವುದಿಲ್ಲ. ಕೆಲವು ಉದಾಹರಣೆಗಳಲ್ಲಿ ಅವುಗಳನ್ನು ತ್ಯಜಿಸಿ ಹಳ್ಳಿಯ  ಮೂಲ ಕುಟುಂಬವನ್ನು ರಕ್ಷಿಸಿಕೊಂಡು ಬಂದ ಸೋದರ ದಂಪತಿಗಳಿಗೆ ನೆರವಾಗಿದ್ದೂ ಸುಳ್ಳಲ್ಲ.  ಒಬ್ಬ ವ್ಯಕ್ತಿಯು ತನ್ನ ಆನುವಂಶಿಕ ಮೂಲ ಆಸ್ತಿಯ ನಿಹ್ವಳ ಆದಾಯಕ್ಕಿಂತ ಹೆಚ್ಚಾಗಿ ಕೃಷಿಯೇತರ ಹೊರಗಿನ ಮೂಲದಿಂದ ಒಂದು ನಿರ್ಧಿಷ್ಟ ಮಿತಿಗಿಂತ ಆದಾಯವನ್ನು ಪಡೆಯುತ್ತಿದ್ದಾನೆ. ಆಗ  ಅವನಿಗೆ ಆನುವಂಶಿಕ ಆಸ್ತಿಯಲ್ಲಿ ಹಕ್ಕು ಮತ್ತು  ಸವಲತ್ತುಗಳು ಬರುವುದಿಲ್ಲ ಎಂದು ಸರ್ಕಾರದ ಕಾನೂನು ಹೇಳುತ್ತದೆ. ಹೀಗಿದ್ದರೂ ಹಳ್ಳಿಯ ಮೂಲ ಕುಟುಂಬದಲ್ಲಿ ವಾಸಿಸುವ  ಸದಸ್ಯನು ಕುಟುಂಬದ ಹೊರಗಿರುವ ತನ್ನ ಸೋದರ ದಂಪತಿಗಳ ಹಿತವನ್ನು ಅಲ್ಲಗಳೆಯಬಾರದು. ಆದರೆ ಈ  ಹೊಂದಾಣಿಕೆಯ  ಪ್ರಜ್ಞೆಯಲ್ಲಿ ಮೂಲ ಕುಟುಂಬದ ಸದಸ್ಯನು ಹೊರಗಿರುವ ಸೋದರ ದಂಪತಿಗಳ ಮಟ್ಟದಲ್ಲಿಯೇ ಸುಖವನ್ನು ಅನುಭವಿಸುತ್ತಿದ್ದಾನೋ ಇಲ್ಲವೋ ಎಂದು ಗಮನಿಸುವುದು ಮುಖ್ಯ. ಅಪರೂಪಕ್ಕೆ ಮನೆಗೆ ಬಂದವರು ಎಂದು ಈ ಶಹರ ವಾಸಿ ಮಹಿಳೆಯರಿಗೆ, ಅವರ ಗಂಡ ಮತ್ತು ಮಕ್ಕಳಿಗೆ  ಸುತ್ತಮುತ್ತಲಿನವರ ಆದಿಯಾಗಿ ಮನೆಯವರೆಲ್ಲಾ ವಿಶೇಷ ಗೌರವಾದರಗಳನ್ನು ಕೊಡುವುದು ಹೆಚ್ಚು.ಒಂಟುಗಾಲಲ್ಲಿ ನಿಂತು ಗೋಡೆಗೆ ಬೆನ್ನನ್ನು ಚಾಚಿ ಆಧರಿಸಿಕೊಂಡು ಸಾವರಿಸಿಕೊಳ್ಳುತ್ತಾ ಹಳ್ಳಿಯ ಗೃಹಿಣಿಯಾಗಿರುವ ಮಹಿಳೆಯು  ಇದನ್ನೆಲ್ಲಾ  ನೋಡಿಕೊಳ್ಳುತ್ತ  ತಾನೂ ತನ್ನ ಮನೆಯವರ ಚಪ್ಪಾಳೆಗೆ ಕೈ ಸೇರಿಸಿ ಮನಸ್ಸಿನಲ್ಲಿಯೇ ಮರುಗಬೇಕಾಗುತ್ತದೆ. ಅಯ್ಯೋ!..  ತಾನೂ ಅವರಂತೆಯೇ ಶಹರವಾಸಿಯಾಗಿದ್ದರೆ ಈ ಸುಖವನ್ನು ಅನುಭವಿಸಬಹುದಿತ್ತಲ್ಲ ಎಂದು ಕನವರಿಸಿದರೆ ಅನಿರೀಕ್ಷಿತವಲ್ಲ!! ಈ ಕಾರಣದಿಂದಲೇ ಬಹಳ ಜನ ಹೆಣ್ಣುಮಕ್ಕಳು ಹಳ್ಳಿಯಲ್ಲಿರುವ ಹುಡುಗರನ್ನು ಮದುವೆಯಾಗಲು ಇಷ್ಟ ಪಡುವುದಿಲ್ಲ . ತನ್ನ ಯೋಗ್ಯತೆಯ ಮಿತಿ ಯಾವುದೇ ಇದ್ದರೂ ಸರಿ.  ಶಹರದಲ್ಲಿ ವಾಸಿಸುವ ಹುಡುಗರನ್ನೇ ಮದುವೆಯಾಗಲಿಕ್ಕೆ ಇಷ್ಟಪಡುತ್ತಿದ್ದಾರೆ. ಎಷ್ಟೇ ಆಧುನಿಕ ಸವಲತ್ತುಗಳು ಹಳ್ಳಿಯ ಕುಟುಂಬಗಳಲ್ಲಿ ಇದ್ದರೂ ಕೂಡ ಶಹರ ಜೀವನದ ಸುಖ ಮತ್ತು ಗಂಡ ಹೆಂಡತಿ ಇಬ್ಬರೇ  ಇರುವ ಪುಟ್ಟ  ಕುಟುಂಬದ ಮೋಜು ಹಳ್ಳಿಯ ಕುಟುಂಬಗಳಲ್ಲಿ ಅವರಿಗೆ ದೊರಕುವುದಿಲ್ಲ ಎಂಬುದು ಅವರ ಭಾವನೆ. ಆಲೋಚಿಸಿ ನೋಡಿದರೆ ಸತ್ಯ ಎನ್ನಿಸುತ್ತದೆ  ಕೂಡ .
   ಎರಡನೆಯ ವರ್ಗವಾದ ನಗರ ಪ್ರದೇಶದ ಮಹಿಳೆ ಹಾಗಲ್ಲ . ಸಾಮಾನ್ಯ ಶಿಕ್ಷಣ ಪಡೆದವರೂ ಇದ್ದಾರೆ ಅಷ್ಟೇ ತಾಂತ್ರಿಕ ಶಿಕ್ಷಣ ಪಡೆದವರೂ ಇದ್ದಾರೆ. ಆಕೆಯ ಪತಿ ನೌಕರಿಯೋ ಅಥವಾ ಬೇರಾವುದೋ ಉದ್ಯೋಗದಲ್ಲಿಯೇ ನಿರತನಾಗಿರುತ್ತಾನೆ. ಇಲ್ಲಿಯ ಮಹಿಳೆಗೆ ಕುಟುಂಬದ ಕೆಲಸ ಮತ್ತು ಜವಾಬ್ದಾರಿಗಳು ಗ್ರಾಮೀಣ ಮಹಿಳೆಗಿಂತ ಕಡಿಮೆ. ಇಂತಹ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಲ ಕುಟುಂಬದಿಂದ ಬೇರ್ಪಟ್ಟು ದುಡಿಮೆಗಾಗಿ ಪ್ರತ್ಯೇಕವಾಗಿ ದೂರ ಬಂದವುಗಳಾಗಿರುತ್ತಾರೆ. ನಗರ ಪ್ರದೇಶದ ಮಹಿಳೆ ತಾನು ,  ತನ್ನ ಗಂಡ ಮತ್ತು ಮಗು ಈ ಮೂವರದ್ದೇ ಸಂಸಾರ. ಅಪರೂಪಕ್ಕೆ ತಂದೆ ತಾಯಿಗಳು ಇವರ ಜೊತೆ ಇರುತ್ತಾರೆ. ಆದರೆ ಈ ರೀತಿಯ ಬಹಳ ಕುಟುಂಬಗಳಲ್ಲಿ  ಮಗ - ಸೊಸೆ ಮತ್ತು ಮೊಮ್ಮಕ್ಕಳ ಉಸ್ತುವಾರಿಯೇ ಅವರ ಕೆಲಸವಾಗಿರುತ್ತದೆ. ಇಂತಹ ಕುಟುಂಬಗಳಿಗೆ ಕೃಷಿ ಚಟುವಟಿಕೆಗಳ ಗೊಂದಲ, ಕೃಷಿ ಕಾರ್ಮಿಕರು, ನೆರೆ ಹೊರೆಯವರ ಜಂಜಾಟವಿಲ್ಲ.ನೆಂಟರು ಸ್ನೇಹಿತರು ಇವರಿಗೆ ಪುರುಸೊತ್ತಿದೆಯೆಂದರೆ  ಕೇಳಿಕೊಂಡು ಕೆಲವೇ ಘಂಟೆಗಳ ಅವಧಿಗೆ ಮನೆಗೆ ಬರುತ್ತಾರೆ . ಹಾಗಾಗಿ ನಗರದ ಮಹಿಳೆಗೆ ಕುಟುಂಬದಲ್ಲಿ ಗ್ರಾಮೀಣ ಮಹಿಳೆಗೆ ಹೋಲಿಸಿದರೆ ಕೆಲಸ ಅತಿ ಕಡಿಮೆ. ಗ್ರಾಮೀಣ ಮಹಿಳೆಯರ ಕಣ್ಣಿಗೆ ನಗರ ಪ್ರದೇಶದ ಮಹಿಳೆಯರದು  ವಿಶ್ರಾಂತ ಮತ್ತು ಐಷಾರಾಮಿ ಜೀವನ. ಸಮಾಜವೂ ಕೂಡ ಈ ಹಿಂದೆ ಹೇಳಿದಂತೆ ಬಹಳಷ್ಟು ಭಾರಿ ಸ್ವಂತ ಉದ್ಯೋಗಸ್ಥ ಮಹಿಳೆಗೆ ಕೊಟ್ಟಷ್ಟು ಗೌರವವನ್ನು ಗೃಹಿಣಿಯಾಗಿ ಕುಟುಂಬವನ್ನು ಮುನ್ನಡೆಸುವ ಮಹಿಳೆಗೆ ಕೊಡುವುದಿಲ್ಲ.
    ಪ್ರಸ್ತುತ ಸನ್ನಿವೇಶದಲ್ಲಿ ಗಂಡು ಮಕ್ಕಳಂತೆ ಹಳ್ಳಿಯ ಬಹಳಷ್ಟು ಹೆಣ್ಣು ಮಕ್ಕಳು ತಾಂತ್ರಿಕ ಶಿಕ್ಷಣವನ್ನು ಪಡೆದಿದ್ದಾರೆ . ಅಂತಹ ಹೆಣ್ಣುಮಕ್ಕಳು ನೌಕರಿಗೆ ಸೇರಿ ನಗರವಾಸಿಗಳಾಗಿದ್ದಾರೆ. ಸಾಮಾನ್ಯ ಶಿಕ್ಷಣ ಪಡೆದ ಹೆಣ್ಣುಮಕ್ಕಳು ಕೂಡ ತಾಂತ್ರಿಕ ಶಿಕ್ಷಣ ಪಡೆದ ಗಂಡನ್ನೇ ಮದುವೆಯಾಗುತ್ತಿದ್ದಾರೆ. ಗಂಡನಿಗೆ ಸರಿಸಮನಾಗಿ ತಾನು ಸಮಾಜದಲ್ಲಿ ಇರಬೇಕು ಎಂದು ಬಯಸುತ್ತಿದ್ದಾರೆ. ಪುರುಷನಿಗಿರುವ ಬಾಹ್ಯ ಸ್ವಾತಂತ್ರ್ಯವನ್ನು ಅವರೂ ಬಯಸುತ್ತಿದ್ದಾರೆ. ಗಂಡನಂತೆಯೇ ನೌಕರಿಗೆ ಹೋಗುವುದು ಇಲ್ಲವೇ ಇನ್ನಾವುದೋ ಉದ್ಯೋಗ ಮಾಡಿ ದುಡಿಯುವುದು , ಹಣ ಗಳಿಸುವುದು, ತನ್ನ ಇಚ್ಚೆಯಂತೆ ಖರ್ಚು ಮಾಡುವುದು , ಐಷಾರಾಮಿ ಜೀವನ ನಡೆಸುವುದು ಇವೇ ತನ್ನ 'ಸ್ವಾತಂತ್ರ್ಯ' ಎಂದು ಆಧುನಿಕ ಮಹಿಳೆ ಯೋಚಿಸುತ್ತಿದ್ದಾಳೆ . ಕುಟುಂಬಕ್ಕಾಗಿ ದುಡಿದು ಬರುವ ಪತಿಯ ಜೀವನದ ಬಗ್ಗೆ ನಿಗಾ ವಹಿಸುವುದು, ತನ್ನ ಮಗುವಿನ  ಲಾಲನೆ ಪಾಲನೆ ಅವಳಿಗೆ secondary . ಊಟ, ತಿಂಡಿಗೆ ಹೋಟೆಲ್ ಇರುವಾಗ  ಮನೆಯಲ್ಲಿ ಅಡುಗೆ  ಮಾಡಲೇ ಬೇಕಾದ ಅಗತ್ಯವೇನು ಎಂಬ ಭಾವನೆ ಅವಳಲ್ಲಿ ಮೂಡುತ್ತಿದೆ. ಅಷ್ಟರ ಮಟ್ಟಿನ ಸ್ವಾತಂತ್ರ್ಯವನ್ನು ಆಕೆ ಸಾಧಿಸುತ್ತಿದ್ದಾಳೆ.   ಮಕ್ಕಳ ಪಾಲನೆ ರಕ್ಷಣೆಗೆ ಡೇ ಕೇರ್ ಸೆಂಟರ್ ಗಳು ಇರುವಾಗ ತನಗೆ ಆಬಗ್ಗೆ ಚಿಂತಿಸಬೇಕಾದುದೇನು ಎಂಬ ಪ್ರಶ್ನೆ ಅವಳಲ್ಲಿ ಹುಟ್ಟುತ್ತಿದೆ. ಮನೆಯ ಒಪ್ಪ  ಓರಣ ಮಾಡಲು  ತಾನೇನು ಈ ಕುಟುಂಬಕ್ಕೆ ಕೂಲಿಗೆ ಬಂದಿಲ್ಲ  ಆ ಕೆಲಸಕ್ಕೆ ಕೆಲಸದಾಳನ್ನು ಇಟ್ಟುಕೊಂಡರಾಯಿತು ತಾನೇ? ಎಂಬ ಗ್ರಹಿಕೆ ಅವಳಲ್ಲಿ ಮೂಡಿದೆ. ನಗರ ಪ್ರದೇಶದ  ಮಹಿಳೆಯೊಬ್ಬಳು  ಅಪ್ಪಿ ತಪ್ಪಿ ಗೃಹಿಣಿಯಾಗಿಯೇ ಉಳಿದುಕೊಂಡರೆ ಉದ್ಯೋಗದಲ್ಲಿರುವ ಮಹಿಳೆಯನ್ನು ನೋಡಿ ತನ್ನ ಮೈ ಪರಚಿಕೊಳ್ಳುತ್ತಾಳೆ . ಉದ್ಯೋಗಸ್ಥ ಮಹಿಳೆಯ ಸ್ಥಿತಿ ಏನಾಗಿದೆ ? ಅವಳ ಒತ್ತಡಗಳೇನು ? ಎಂಬುದನ್ನು ಆಕೆಯಿಂದ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ.   
   ನಗರ ಪ್ರದೇಶದ ಕೆಲವು ಮಹಿಳೆಯರು ಗರ್ಭಿಣಿಯಾಗುವ , ಹೆರುವ,  ಮಕ್ಕಳನ್ನು ಸಾಕುವ ತೊಂದರೆಯನ್ನು ತೆಗೆದುಕೊಳ್ಳಲು ಇಷ್ಟವಿಲ್ಲ . ಮಗುವನ್ನು ಹೊತ್ತು, ಹೆತ್ತು ಒಂದು ಹಂತದವರೆಗೆ ಸಾಕಿ ದತ್ತುಕೊಡುವ  ' ಬಾಡಿಗೆ ತಾಯಂದಿರನ್ನು ' (surrogate mother) ಬಯಸುತ್ತಿದ್ದಾರೆ . ಇದಕ್ಕಾಗಿ ಆ ಬಾಡಿಗೆ ತಾಯಂದಿರಿಗೆ ಲಕ್ಷಗಟ್ಟಲೆ ಹಣವನ್ನು ತೆರಲು ಸಿದ್ಧರಿದ್ದಾರೆ. ಆದರೆ ಇಂತಹವರ ಸಂಖ್ಯೆ ಪ್ರಸ್ತುತದಲ್ಲಿ ಬಹಳ   ಕಡಿಮೆ ಸಂಖ್ಯೆಯಲ್ಲಿದೆ. ಆದರೆ ಮಹಿಳೆಯರ  ಇಂತಹ ಸ್ವಾತಂತ್ರ್ಯ ಮನೋಭಾವ ಎಲ್ಲಿಗೆ ಮುಂದುವರೆಯುತ್ತದೆ ಎಂಬುದನ್ನು ಸಮಾಜ ಶಾಸ್ತ್ರಜ್ಞರು ಪರಿಶೀಲಿಸಬೇಕು. ಇದರ ಲಾಭ ಪಡೆಯುವ ಬಾಡಿಗೆ ತಾಯಂದಿರು ಇದನ್ನೇ ಒಂದು ದುಡಿಮೆಯ ಮೊಲವನ್ನಾಗಿ ಅರಸಿಕೊಂಡಿದ್ದಾರೆ. ಇವರೂ ಕೂಡ ತಮ್ಮದೇ ಸ್ವಾತಂತ್ರ್ಯವನ್ನು ಕಂಡುಕೊಂಡ ನಗರದ ಮಹಿಳೆಯಾಗಿದ್ದಾರೆ. 
   ನಗರದ ಮಹಿಳೆಯ ಸ್ವಾತಂತ್ರ್ಯ ಮತ್ತು ಕುಟುಂಬದ ಮನೋಭೂಮಿಕೆ ಎಷ್ಟರ ಮಟ್ಟಿಗೆ ಮುಂದೆ ಹೋಗಿದೆ ಎಂಬುದನ್ನು  ಅಭ್ಯಾಸ ಮಾಡಿದರೆ ಆಶ್ಚರ್ಯವಾದೀತು. ಅದೆಂದರೆ ಈಗಿನ ' Living  together relationship ' ಎಂಬ ಹೊಸ ಪರಿಕಲ್ಪನೆ. ಇದು ಭಾರತೀಯ ಸಮಾಜಕ್ಕೆ ಹೊಸ ಅನುಸರಣೆ. ಪಾಶ್ಚಿಮಾತ್ಯ ದೇಶಗಳಲ್ಲಿ 'Arranged Marriage'  ಎನ್ನುವ ಪರಿಕಲ್ಪನೆ  ಹಿಂದಿನಿಂದಲೂ ಇತ್ತು .     ' Living  together relationship ' ಎಂಬ ಪರಿಕಲ್ಪನೆಯಲ್ಲಿ ಒಂದು ಮಹಿಳೆ ಮತ್ತು ಪುರುಷ ಮದುವೆಯಾಗದೆ ಒಟ್ಟಿಗೆ ಸಂಸಾರ ನಡೆಸುತ್ತಾರೆ. ಮದುವೆಯಾದ ಸತಿಪತಿಗಳಂತೆ ಕುಟುಂಬದ ಮತ್ತು ವೈಯುಕ್ತಿಕ ಎಲ್ಲ ಕಾರ್ಯ ವಿಧಾನಗಳನ್ನು ನಡೆಸಿಕೊಳ್ಳುತ್ತಾರೆ. ಮೂರು ನಾಲ್ಕು  ವರ್ಷ ಹೀಗೆಯೇ ಮುಂದುವರೆಯುತ್ತಾರೆ. ಆದರೆ ಮಕ್ಕಳನ್ನು ಮಾತ್ರ ಪಡೆಯುವುದಿಲ್ಲ . ಇವೆಲ್ಲ ಅವರಿಬ್ಬರ ಪರಸ್ಪರ ಒಪ್ಪಿಗೆಯಿಂದಲೇ ನಡೆಯುತ್ತದೆ. ಒಬ್ಬ ಪರ ಪುರುಷ ಆಕಸ್ಮಿಕವಾಗಿ ಗೊತ್ತಾಗದೆ ತನ್ನ ಮೈ ಮುಟ್ಟಿದನೆಂದರೆ ಚಾರಿತ್ರ್ಯ ಹೀನತೆಯೆಂದು  ಭಾವಿಸುವ ಭಾರತೀಯ ಮಹಿಳೆ ಇಂದು ನಗರದ ಮಹಿಳೆಯಾಗಿ ಪರಪುರುಷನ ಜೊತೆಗೆ ವಿವಾಹವಿಲ್ಲದೇ ಬಹಿರಂಗವಾಗಿ ಬದುಕು ನಡೆಸುವ ಸ್ವಾತಂತ್ರ್ಯವನ್ನು ಹೊಂದಿದ್ದಾಳೆ ಎಂಬುದು ಗಮನಾರ್ಹ.  ಒಮ್ಮೆ ಮೊರು-ನಾಲ್ಕು ವರ್ಷದ ಕೂಡುದಾಂಪತ್ಯದಲ್ಲಿ  ಬಿನ್ನಾಭಿಪ್ರಾಯ ಉಂಟಾದರೆ ಪರಸ್ಪರರನ್ನು ತೊರೆಯುವ ಸ್ವಾತಂತ್ರ್ಯವನ್ನು ಇವರು ಹೊಂದಿದ್ದಾರೆ. ಇದಕ್ಕೆ ಪುರುಷ ಎನ್ನುವ ವ್ಯಕ್ತಿ ಸೇರಿಕೊಂಡಿದ್ದರೂ ಕೂಡ ಮಹಿಳೆಯೊಬ್ಬಳು ಭಾರತೀಯ ಸಮಾಜದಲ್ಲಿ ಬೇಕಾದವನೊಂದಿಗೆ ಕೂಡಿಕೊಳ್ಳುವ ಬೇಡವೆಂದಾಗ ಅವನನ್ನು ಬಿಟ್ಟು ಹೊಡೆಯುವ ಮತ್ತು ಕುಟುಂಬವನ್ನು ವಿಸರ್ಜಿಸುವ ಸ್ವಾತಂತ್ರ್ಯವನ್ನು ಸಾಧಿಸುತ್ತಿದ್ದಾಳೆ ಎನ್ನುವುದು ವಿಶೇಷ. 
    ವಿವಾಹ ವಿಛ್ಚೇಧನ  ಭಾರತೀಯ ಮಹಿಳೆಗೆ ತನ್ನ ಕುಟುಂಬ ಜೀವನದ ದಾರಿಯಲ್ಲಿ ಇರುವ ಮತ್ತೊಂದು ಸ್ವಾತಂತ್ರ್ಯ. ಭಾರತದ ಕಾನೂನು ಈ ವಿಚಾರದಲ್ಲಿ ಪುರುಷನಿಗಿಂತ ಮಹಿಳೆಗೆ ಹೆಚ್ಚಿನ ರಕ್ಷಣೆಯನ್ನು ಕೊಟ್ಟಿದೆ. ಆದರೆ ಈ ವಿಛ್ಚೇಧನ ಈ  ಹಿಂದೆ ಪ್ರಸ್ತಾಪಿಸಿದ 'Live  together relationship ' ಪರಿಕಲ್ಪನೆಗಿಂತ ಭಿನ್ನವಾದದ್ದು. ಇಲ್ಲಿ ಮೊಲತಃ ಒಬ್ಬರಿಗೊಬ್ಬರು ಕೂಡಿ ಬಾಳ್ವೆಯನ್ನು ನಡೆಸಿ ಕುಟುಂಬವನ್ನು ನಿರ್ಮಿಸಬೇಕು ಎಂಬ ಮಹತ್ತರ ಉದ್ದೇಶದಿಂದ ವಿವಾಹವಾಗುತ್ತಾರೆ. ಆದರೆ ಇಂದಿನ ಆಧುನಿಕ ಸ್ವಾತಂತ್ರ್ಯದ ಕಲ್ಪನೆಯ ಬಿರುಗಾಳಿಯಲ್ಲಿ ವಿವಾಹ ಬಂಧನ ಮುರಿದು ಬಿದ್ದು ವಿಛ್ಚೇಧನದ ಅಂಚಿಗೆ ಹೋಗುತ್ತದೆ. ಈ ಸ್ಥಿತಿಗೆ ಕಾರಣ ಮಹಿಳೆಯು ತಾನು ಪುರುಷನಷ್ಟೇ ಸರಿ ಸಮಾನಳು , ಸ್ವಾತಂತ್ರವನ್ನು ಹೊಂದಿದವಳು ಎಂಬ ಮನೋಭೂಮಿಕೆ. ಈ ಕಾರಣದಿಂದ ಕುಟುಂಬದ  ಯಾವುದೇ ವಿಷಯದಲ್ಲಿ ಬಿನ್ನಾಭಿಪ್ರಾಯ ಬಂದಾಗ ಯಾರೊಬ್ಬರೂ ಹಿಂದೆ ಸರಿದು ಹೊಂದಿಕೊಳ್ಳಲು ಇಚ್ಚಿಸುವುದಿಲ್ಲ. ಇದೇ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮಹಿಳೆ ವಿವಾಹ ವಿಛ್ಚೇಧನ ಪಡೆದು ತಾನು ಮದುವೆಯಾದ ಗಂಡನಿಂದ ಬೇರ್ಪಡುವ ಸ್ವಾತಂತ್ರ್ಯವನ್ನು ಹೊಂದಿದ್ದಾಳೆ. ಆಧುನಿಕ 'software ' ವಾಯುವೇಗದ ಬದುಕಿನಲ್ಲಿ ಮಹಿಳೆ ಪುರುಷನ ಅಡಿಯಾಳಾಗಿ ಇರಲು ಇಷ್ಟ ಪಡುತ್ತಿಲ್ಲ. ನಮ್ಮ ಸಮಾಜದ ಮೂಲ ಲಕ್ಷಣದ  ಚರ್ಯೆಯ ಪ್ರಕಾರ ಪುರುಷ ಹೇಗೂ ಮಹಿಳೆಯ ಅಡಿಯಾಳಾಗಿರಲು ಇಷ್ಟ ಪಡುವುದಿಲ್ಲ. ಯಾವುದೇ ಅಭಿಪ್ರಾಯದಲ್ಲೂ ತಾನು ಹೇಳಿದ್ದೇ ಸರಿ ಎನ್ನುವ ಶಟoನಲ್ಲಿಯೇ   ಇಬ್ಬರೂ ಇರುತ್ತಾರೆ. ಎಲ್ಲರ ಕೈಯಲ್ಲೂ ವಾಚು ಇರುತ್ತದೆ . ಒಬ್ಬೊಬ್ಬರ ವಾಚು ನಿಮಿಷಗಳ ವ್ಯತ್ಯಾಸದಲ್ಲಿ ಒನ್ನೊಂದು ಸಮಯವನ್ನು ತೋರಿಸುತ್ತದೆ ತಾನೇ ? . ಆದರೆ ಪ್ರತಿಯೊಬ್ಬರೂ ತನ್ನ ವಾಚಿನ ಸಮಯವೇ ಸರಿ ಎಂದು ಹೇಳುತ್ತಾರೆ.  ಮಹಿಳೆ ಮತ್ತು ಪುರುಷರ ಅಭಿಪ್ರಾಯ ಭಿನ್ನತೆಯ ಕಥೆಯೂ ಇಷ್ಟೇ . ಸ್ವಲ್ಪದರಲ್ಲಿಯೇ ಸಾಲದಷ್ಟು ಬಿರುಕು ಮನಸ್ತಾಪ ಉಂಟಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ  ತಾರ್ಕಿಕ ಜೀವನದಲ್ಲಿ ಮಾತಿನಲ್ಲಿ ಗೆಲ್ಲುವುದೇ ಮುಖ್ಯ . ಆದರೆ  ಭಾವನಾತ್ಮಕ ಜೀವನದಲ್ಲಿ  ಮಾತಿನಲ್ಲಿ ಒಬ್ಬರಿಗೊಬ್ಬರು ಹಿಂದೆ ಸರಿದು ಗೆಲ್ಲಬೇಕಾದದ್ದು ಅಗತ್ಯ. ಹೀಗೆ ಆದಾಗ ದಾಂಪತ್ಯದ ಸಾಂಗತ್ಯ ಚೆನ್ನಾಗಿ ಮುಂದುವರೆಯಬಹುದು. 
ಮಹಿಳೆಗೆ ಇರುವ ವಿವಾಹ ವಿಚ್ಚೇಧನದ ಸ್ವಾತಂತ್ರದ ಅಂತಿಮ ಪರಿಣಾಮವೆಂದರೆ ಕುಟುಂಬದ ಶೈಥಿಲ್ಯ. ಶಿಥಿಲಗೊಂಡ ಕುಟುಂಬಗಳೇ ಮುಂದುವರೆದ ಇಂದಿನ ನಮ್ಮ ಸಮಾಜದಲ್ಲಿ ಹೆಚ್ಚಾಗಿ ಕಂಡರೆ ಆಶ್ಚರ್ಯವಿಲ್ಲ. ಹಾಗಾದರೆ ಪುರುಷ ಮತ್ತು ಮಹಿಳೆಯ ಆತ್ಮೀಯ ಸಂಬಂಧದ ಗತಿಯೇನು?. ಮಕ್ಕಳು ಹುಟ್ಟಬೇಕಾದುದು ಎಲ್ಲಿ? ಯಾರಿಗೆ? ಯಾರಿಂದ?. ಹುಟ್ಟಿದ ಮಕ್ಕಳ ಭವಿಷ್ಯವೇನು? ಇವರೆಲ್ಲರನ್ನೂ ಆಶ್ರಯಿಸಿ ಕುಳಿತ ವೃದ್ಧ ತಂದೆ ತಾಯಿಗಳ ಪಾಡೇನು? ಹೀಗೆಯೇ ಮುಂದುವರೆದರೆ ಒಟ್ಟಾರೆ ಸಮಾಜ ಯಾವ ಸ್ಥಿತಿಗೆ ಹೋಗುತ್ತದೆ? ಸಂಪೂರ್ಣ ಸ್ವಾತಂತ್ರವನ್ನು ಬಯಸುವ ಮಹಿಳೆ ಇದರ ಬಗ್ಗೆ ಪರಾಮರ್ಶಿಸಬೇಕು. ಹಾಗೆಯೇ ಇದಕ್ಕೆ ಪುರುಷನೂ ಹೊರತಲ್ಲ. ಬದುಕನ್ನು ಕೆಡಿಸಿಕೊಂಡು ಸ್ವಾತಂತ್ರವನ್ನು ಅರಸುವುದು ಕೇವಲ ವ್ಯರ್ಥ ಪ್ರಯತ್ನ. ಸಾಮಾನ್ಯ ಸ್ಥಿತಿಯಲ್ಲಿ ಪರಸ್ಪರ ಹೊಂದಿಕೊಂಡು ಬದುಕಲಾರದವರು --- ಪುರುಷನೇ ಇರಲಿ ಅಥವಾ ಮಹಿಳೆಯೇ ಇರಲಿ ---  ಬೇರೆ ಯಾರೊಡನೆಯೋ ತಾಳಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ವಿಶೇಷ ಪರಿಸ್ಥಿತಿಗಳ ಪರಮಾವಧಿಯಲ್ಲಿ ವಿಘಟನೆ ಅನಿವಾರ್ಯವಲ್ಲವೆಂದಲ್ಲ. ಸುಖವೆಂಬುದು ಅವರವರ ಮನೋಗತಿಗೆ ಸಂಬಂಧಪಟ್ಟ ವಿಚಾರ. ಅದನ್ನು ವ್ಯಕ್ತಿಯು ತಾನು ಸ್ವತಃ ಕಂಡುಕೊಳ್ಳಬೇಕೇ ವಿನಃ ತಾನಾಗಿ ಅದೆಂದೂ ನಮಗೆ ದೊರೆಯುವುದಿಲ್ಲ. 'ಬಯಸಿದವರಿಗೆ ಮರಣವೂ ಸುಖ' ಎಂಬ ಗಾದೆಯ ಮಾತು ಇದೆ. ಹಾಗೆಂದು ಯಾರೂ ಸಾಯಬೇಕಿಲ್ಲ. ಒಬ್ಬರಿಗೊಬ್ಬರು ಸಹಕರಿಸಿಕೊಂಡು, ಸರಿದುಕೊಂಡು ಬದುಕಿ ಬಾಳ್ವೆಯನ್ನು ನಡೆಸುವುದು ಮುಖ್ಯ. ಇದನ್ನು ಸಾಮಾನ್ಯವಾಗಿ ಸಣ್ಣ ವಿಚಾರಕ್ಕೂ ತಲೆಕೆಡಿಸಿಕೊಳ್ಳುವ ಮಹಿಳೆ ಅರಿತುಕೊಳ್ಳಬೇಕು. ಹೊಂದಿಕೊಳ್ಳುವ ಮನೋಭಾವವಿಲ್ಲದ ಮನಸ್ಸಿನವರು ಎಲ್ಲಿ ಹೋದರೂ ಜಂಜಾಟದ ದುರಂತವನ್ನೇ ಅನುಭವಿಸಬೇಕಾಗುತ್ತದೆ.
      ನಗರದ ಜೀವನ ವೆಚ್ಚ ಹಳ್ಳಿಯ ಜೀವನ ವೆಚ್ಚಕ್ಕಿಂತ ಹೆಚ್ಚು . ಆದ್ದರಿಂದ ಪತಿಯ ಆದಾಯ ಕಡಿಮೆಯಿದ್ದು ಜೀವನ ನಿರ್ವಹಣೆ ಕಷ್ಟವಾದಾಗ ಪತ್ನಿಯೂ ದುಡಿಯಬೇಕಾದದ್ದು ನಗರ ಜೀವನದ ಅನಿವಾರ್ಯತೆಯೂ ಹೌದು. ಅದಲ್ಲದೆ ಪತಿಯ ಗಳಿಕೆ ಸೊಂಪಾಗಿದ್ದು ಪತ್ನಿಯು ಜೋಕಾಲಿಯಾಡುತ್ತ ಕುಳಿತುಕೊಳ್ಳುವ ಸನ್ನಿವೇಶವಿದ್ದರೂ ಕುಟುಂಬ ನಿರ್ವಹಣೆಯನ್ನು ಬಿಟ್ಟು ದುಡಿಮೆಗೆ ಹೋಗುವುದು ಐಷಾರಾಮಿ  ಮನೋಭಾವದ ಕಾರ್ಯಾನುಷ್ಟಾನವಷ್ಟೇ. 
     ಇನ್ನು, ಅನೇಕ ಕುಟುಂಬಗಳು ನಗರದಲ್ಲಿಯೇ ಹುಟ್ಟಿಬೆಳೆದಿವೆ. ಇನ್ನು ಕೆಲವು ಕುಟುಂಬಗಳು ಸಾಮಾನ್ಯವಾಗಿ ಐವತ್ತು ವರ್ಷಗಳ ಈಚೆಗೆ ಅಂದರೆ ಹಿಂದಿನ ತಲೆಮಾರಿನಲ್ಲಿಯೇ ನಗರವನ್ನು ಸೇರಿ ವಾಸಿಸುತ್ತಿರುವುದೂ ಇದೆ. ಇಂತಹ ಕುಟುಂಬಗಳಲ್ಲಿ ಮಹಿಳೆಯೂ ದುಡಿಮೆಗೆ ಮನೆಯಿಂದ ಹೊರ ಹೋಗಲು ಅವಕಾಶವಿದೆ . ಏಕೆಂದರೆ ನೌಕರಿ ಅಥವಾ ಉದ್ದಿಮೆಗಳಿಂದ ನಿವೃತ್ತರಾದ ಹಿರಿಯರು ಮನೆಯಲ್ಲಿ ಇರುತ್ತಾರೆ. ಕುಟುಂಬದ ನಿರ್ವಹಣೆ ಮಕ್ಕಳ ರಕ್ಷಣೆ ಪಾಲನೆಯನ್ನು ಅವರು ಮಾಡುತ್ತಾರೆ. ತಾನೂ ದುಡಿಯಬೇಕೆಂಬ ಹಂಬಲ, ಸ್ವತಂತ್ರವಾಗಿ ವ್ಯವಹರಿಸುವ ಹಪ ಹಪಿಕೆ ಖರ್ಚು ವೆಚ್ಚಕ್ಕೆ ತನ್ನ ವೈಯುಕ್ತಿಕ ಗಳಿಕೆ ಇವನ್ನೆಲ್ಲ ಹೊಂದುವ ಕೌಟುಂಬಿಕ ಪರಿಸ್ಥಿತಿ ಮತ್ತು ಅನುಕೂಲತೆ ಇಂತಹ ಕುಟುಂಬದ ಮಹಿಳೆಗೆ ಪುರುಷನಷ್ಟೇ ಇರುತ್ತದೆ. ತನ್ನ ಪತಿಯ ದುಡಿಮೆಯಲ್ಲಿ ಪರೋಕ್ಷವಾಗಿ ತನ್ನ ಪಾಲೂ ಇದೆ ಎನ್ನುವ ಪ್ರಜ್ಞೆಯನ್ನು ಇಂತಹ ಮಹಿಳೆಯರು ಇಟ್ಟುಕೊಳ್ಳಬೇಕಾಗಿಲ್ಲ. ಹಾಗೆಂದು ಇಬ್ಬರ ಗಳಿಕೆ ಒಟ್ಟಾರೆ ಕುಟುಂಬದ್ದು ಎಂದು ಭಾವಿಸಿ ಮುನ್ನಡೆದರೆ ಒಳ್ಳೆಯದಲ್ಲವೆಂದಲ್ಲ. ಏಕೆಂದರೆ ಪತಿ ಮತ್ತು ಪತ್ನಿ ಇಬ್ಬರೂ ಗಳಿಕೆಗೆ ಮನೆಯಿಂದ ಹೊರಗೆ ಹೊರಟಿದ್ದಾರೆ ಎಂದರೆ ಮನೆಯೊಳಗಿನ ಒಗೆತಾನಕ್ಕೆ ಹಿರಿಯರ ಕೊಡುಗೆ ಇದೆ ಎಂದೇ  ಅರ್ಥ. ಪುರುಷನಂತೆ ಇಂತಹ ಮಹಿಳೆಗೂ ಆ ಸ್ವಾತಂತ್ರ್ಯವನ್ನು ಅವರು ದೊರಕಿಸಿಕೊಟ್ಟಿದ್ದಾರೆಂದರೆ ಇವರ ಗಳಿಕೆಯಲ್ಲಿ ಆ ಹಿರಿಯರ ಪಾಲೂ ಇದೆ. ಇವರ ಸ್ವಾತಂತ್ರ್ಯಕ್ಕೆ ಅವರ ಕೊಡುಗೆಯೂ ಇದೆ. ಅಲ್ಲವೇ? 
    ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ದೇವರ ಸೃಷ್ಟಿಯೇ ಹಾಗೆ . ಮಹಿಳೆ ಗರ್ಭವತಿಯಾಗಿ ಪ್ರಸವಿಸಬೇಕೇ ವಿನಃ ಪುರುಷನಿಗೆ ಅದು ಸಾಧ್ಯವಿಲ್ಲ. ಎಳೆಗೂಸನ್ನು ಜೋಪಾನವಾಗಿ ಮಹಿಳೆ ನೋಡಿಕೊಳ್ಳುವಷ್ಟು ಬದ್ಧತೆ, ತಾಳ್ಮೆ ಮತ್ತು ವಿಶಿಷ್ಟ ಕಲೆ ಪುರುಷನಿಗೆ ಇಲ್ಲ. ಮಗುವಿಗೆ ಹಾಲುಣಿಸಬೇಕಾದವಳು ಮಹಿಳೆಯೇ ವಿನಃ ಪುರುಷನದರಲ್ಲಿ ಹಾಲು ಬರುವುದಿಲ್ಲ. ಭಾರತೀಯ ಸಮಾಜದಲ್ಲಿ ಪುರುಷ ನಿರಾತಂಕವಾಗಿ ಬದುಕನ್ನು ನಡೆಸಿದ ಹಾಗೆ ಮಹಿಳೆ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಅವಳು ಸಂಸಾರವನ್ನು ನಿರ್ಮಿಸುವವಳು, ಮಾಡಬೇಕಾದವಳು, ಮುನ್ನೆಡೆಸಬೇಕಾದವಳು. ನಮ್ಮ ಸಮಾಜದ ಪಾರಂಪರಿಕ ಸ್ಥಿತಿಯೇ ಹಾಗೆ. ಒಬ್ಬ ಪುರುಷ ಕೆಟ್ಟರೆ ಸಂಸಾರ ಸ್ವಲ್ಪ ಕುಂಠಿತವಾಗಬಹುದು ಆದರೆ ಒಬ್ಬಳು ಮಹಿಳೆ ಕೆಟ್ಟರೆ ಇಡೀ ಸಂಸಾರವೇ ಸರ್ವನಾಶವಾಗುತ್ತದೆ ಅಷ್ಟರ ಮಟ್ಟಿಗೆ  ನಮ್ಮ ಸಮಾಜದ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರವಿದೆ, ವಿಶೇಷ ಸ್ಥಾನವಿದೆ. ಕುಟುಂಬದ ಸ್ವಾಸ್ಥ್ಯವು ಅವಳ ಮೇಲೆಯೇ ನಿಂತಿದೆ. ಸಂಸಾರ ನಡೆಸುವುದೂ ಒಂದು ಉದ್ಯೋಗ . ಈ ಕಲ್ಪನೆ ನಮ್ಮ ಮುಂದುವರೆದ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಇಲ್ಲ . ಭಾರತದಲ್ಲಿ ಕುಟುಂಬ ಸಮಾಜದ ಒಂದು ಪ್ರಾಥಮಿಕ ಹಂತ. ಕುಟುಂಬಗಳ ಸಮಗ್ರತೆಯೇ ಸಮಾಜ. ಇದು ಇಡಿಯ ಜಗತ್ತಿಗೆ ಅನ್ವಯಿಸುವ ತತ್ವ. ಪಾಶ್ಚಿಮಾತ್ಯರಲ್ಲಿ ಕುಟುಂಬ ಎನ್ನುವ ಸಂಸ್ಥೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ನಮ್ಮಲ್ಲಿ ಹಾಗಲ್ಲ. ಸ್ವಾಸ್ಥ ಕುಟುಂಬದ ವ್ಯವಸ್ಥೆಯ ಮೇಲೆ ಸಮಾಜ ನಿಂತಿದೆ. ಇಂತಹ ಕುಟುಂಬದ ನಿರ್ವಹಣೆ ಮಹಿಳೆಯ ಪಾಲಿಗೆ ಇದೆ. ಕುಟುಂಬಕ್ಕೆ ಸಾಕಾಗುವಷ್ಟು ದುಡಿಯಬೇಕಾದವನು ಪುರುಷ. ಆತ ದುಡಿದು ತಂದದ್ದನ್ನು ಹೊಂದಿಸಿ ಕುಟುಂಬವನ್ನು ನೀಗಿಸಬೇಕಾದವಳು ಮಹಿಳೆ. ದುಡಿಯುವವ ಪುರುಷ . ಅದನ್ನು ಖರ್ಚು ಮಾಡಬೇಕಾದವಳು ಮಹಿಳೆ. ಮಹಿಳೆಗೆ ಸ್ವಾತಂತ್ರ್ಯ ಹೆಚ್ಚೋ ಅಥವಾ ಪುರುಷನಿಗೆ ಸ್ವಾತಂತ್ರ್ಯ ಹೆಚ್ಚೋ?.
    ಮಹಿಳೆಯ ಕಾಮನೆಗೆ, ಸುಖಕ್ಕೆ ಯಾವತ್ತೂ ಧಕ್ಕೆ ಬರದ ಹಾಗೆ ನೋಡಿಕೊಂಡರೆ ಮಾತ್ರ ಪುರುಷ ಸುಖವನ್ನು ಕಾಣಲು ಸಾಧ್ಯ. ಮಹಿಳೆಯ ವಿಷಯವೂ ಹಾಗೆಯೇ. ಹೆಂಡತಿಯಿಲ್ಲದ ಗಂಡನನ್ನು ಸಮಾಜ ಅನುಮಾನಾಸ್ಪದವಾಗಿಯೇ ನೋಡುತ್ತದೆ . ಹಾಗೆಯೇ ಗಂಡಿನ ರಕ್ಷಣೆಯಿಲ್ಲದ ಮಹಿಳೆಯನ್ನು ಜನ ಓರೆಗಣ್ಣಿನಿಂದ ನೋಡುತ್ತಾರೆ  . ಗಂಡಸಿನ ಹಂಗೇ ಬೇಡ. ತಾನು ಸ್ವತಂತ್ರವಾಗಿ ಇರುತ್ತೇನೆ ಎಂಬ ಮಹಿಳೆ ಅಪೂರ್ಣ ಸನ್ಯಾಸಿನಿಯಂತೆ ಇರಬೇಕಾಗುತ್ತದೆ. ಮಕ್ಕಳ ತಾಯಿಯಾಗಬೇಕು , ವಾಸ್ತವಿಕ ಸುಖಗಳನ್ನು ಕಾಣಬೇಕು ಅಂತಿದ್ದರೆ ಆಕೆಗೆ ಒಬ್ಬ ಗಂಡಸು ಬೇಕೇ ಬೇಕು. ಇಷ್ಟೇ ಉತ್ತರ  ಪುರುಷನಿಗೂ ಕೂಡ. ಇದಕ್ಕೆ ಅಪವಾದವಿಲ್ಲವೆಂದಲ್ಲ. ಇಲ್ಲಿ  ಹಕ್ಕು ಮತ್ತು ಸ್ವಾತಂತ್ರ ಎಂಬುದು ಮಹಿಳೆಗೂ ಅಷ್ಟೇ ಸರಿಸಮನಾಗಿ ಇದೆ ಎಂಬುದು ಸತ್ಯ . ಅಷ್ಟೇ,  ಜವಾಬ್ದಾರಿ ನಿರ್ವಹಣೆಯಲ್ಲಿಯೂ ಇಬ್ಬರಿಗೂ ಒಂದೇ ತೆರನಾದ ಹೊಣೆಗಾರಿಕೆ  ಇದೆ. 
   ಭಾರತ ಪುರುಷ ಪ್ರಧಾನ ಸಮಾಜ ಎಂಬ ಆರೋಪ ಬಂದದ್ದರ ಕಾರಣ ಎಲ್ಲದಕ್ಕೂ ಎದುರಿಗೆ ಕಾಣಸಿಗುವುದು ಪುರುಷ. ಮಹಿಳೆಗೆ ಅವನಂತೆ ಪೂರ್ಣ ಏಕಾಂಗಿಯಾಗಿ ಎದುರು ಬಂದು ನಿಲ್ಲಲು ಸಾಧ್ಯವಿಲ್ಲ. ಪ್ರಕೃತಿ ಅವಳಿಗೆ ವಿಶೇಷ  ಅರ್ಹತೆ (ಅಸಹಾಯಕತೆ ಅಲ್ಲ ) ಯನ್ನು ಕೊಟ್ಟು ಪುರುಷನ ಹಿಂದೆ ನಿಲ್ಲಿಸಿದೆ. ಈ ಅರ್ಥದಲ್ಲಿಯೇ ಮನು ಮಹರ್ಷಿ ಹೇಳಿದ್ದು. " ಪಿತಾ ರಕ್ಷ್ಯತಿ ಕೌಮಾರೆ ಭರ್ತಾ ರಕ್ಷ್ಯತಿ ಯೌವ್ವನೆ | ಪುತ್ರಸ್ತು ಸ್ಥವಿರೇ ತಸ್ಮಾತ್ ನ ಸ್ತ್ರೀ ಸ್ವಾತಂತ್ರ್ಯಮರ್ಹಸಿ ||  (9.3)" . ಮಹಿಳೆಗೆ ಪುರುಷನು (ವ್ಯಕ್ತಿ ಬೇರೆ ಬೇರೆ ಇರಬಹುದು) ತನ್ನ ಪಾತ್ರ ಪ್ರತ್ಯೇಕತೆಯಲ್ಲಿ (Role  Differentiation )  ರಕ್ಷಣೆ ಕೊಡಬೇಕು. ಆಕೆ ಪ್ರಾಕೃತಿಕವಾಗಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅನರ್ಹಳು ಎಂಬ ಅರ್ಥದಲ್ಲಿ ಮನು ಹೇಳಿರಬೇಕು. 

ಸಮರ್ಥವಾದ ಮಹಿಳೆಯ ಸಹಾಯವಿಲ್ಲದೆ ಒಬ್ಬ ಪುರುಷ ತನ್ನ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ.


Date : 23 Jan 2013                                                                                                                                                  

ಎಂ ಗಣಪತಿ M.A
ಕಾನುಗೋಡು
P.O : ಮಂಚಾಲೆ - 577431
ತಾ : ಸಾಗರ  ಜಿಲ್ಲೆ : ಶಿವಮೊಗ್ಗ
Mob : 9481968771

No comments:

Post a Comment

Note: only a member of this blog may post a comment.