------ಎಂ ಗಣಪತಿ ಕಾನುಗೋಡು.
1 . ಕೆಟ್ಟದ್ದನ್ನು ಮಾಡಲು ಮನಸ್ಸಿದ್ದು ಶಕ್ತಿಯಿಲ್ಲದೇ ಒಳ್ಳೆಯವರು ಎಂದೆನಿಸಿಕೊಂಡವರು.
1 . ಕೆಟ್ಟದ್ದನ್ನು ಮಾಡಲು ಮನಸ್ಸಿದ್ದು ಶಕ್ತಿಯಿಲ್ಲದೇ ಒಳ್ಳೆಯವರು ಎಂದೆನಿಸಿಕೊಂಡವರು.
2 ಕೆಟ್ಟದ್ದನ್ನು ಮಾಡಲು ಮನಸ್ಸು ಮತ್ತು ಶಕ್ತಿ ಇದ್ದು ವಿರೋಧಿಸಿ ನಷ್ಟ ಮತ್ತು ಅನಿಷ್ಟವನ್ನು ಅನುಭವಿಸಲು ಇಚ್ಛಿಸದೇ ಒಳ್ಳೆಯವರು ಎನ್ನಿಸಿಕೊಂಡವರು.
3 ಕೆಟ್ಟದ್ದನ್ನು ಮಾಡಲು ಮನಸ್ಸು ಮತ್ತು ಶಕ್ತಿ ಇದ್ದರೂ ಯಾವುದೊ ಗುರಿ ಸಾಧನೆಗಾಗಿ ಹೊಂಚು ಹಾಕುತ್ತಾ ಮೌನವಾಗಿದ್ದು ಒಳ್ಳೆಯವರು ಎನ್ನಿಸಿಕೊಂಡವರು.
4 ಕೆಟ್ಟದ್ದನ್ನು ಮಾಡಲು ಮನಸ್ಸು, ಶಕ್ತಿ ಮತ್ತು ಅವಕಾಶಗಳು ಇದ್ದರೂ ಸಜ್ಜನಿಕೆಯಿಂದ ಸಹಿಸಿಕೊಂಡು ಒಳ್ಳೆಯವರು ಎನ್ನಿಸಿಕೊಂಡವರು.
ಸಮಾಜದಲ್ಲಿ ನಾವು ಜನರನ್ನು ಒಳ್ಳೆಯವರು, ಕೆಟ್ಟವರು ಎಂದು ಬೇರೆ ಬೇರೆ ವರ್ಗಕ್ಕೆ ಸೇರಿಸುತ್ತೇವೆ . ಆದರೆ ಬಹಳಷ್ಟು ಸಾರಿ ಯಾರನ್ನೂ ಹತ್ತಿರದಿಂದ ಅಭ್ಯಾಸ ಮಾಡದೆ , ಧೀರ್ಘ ಪರಿಶೀಲನೆ ಮಾಡದೆ ಹೀಗೆ ಶೀಘ್ರ ನಿರ್ಣಯಕ್ಕೆ ಬರುತ್ತೇವೆ .
ಮನುಷ್ಯರ ಸ್ವಭಾವ, ನಡವಳಿಕೆಗಳು ಒಬ್ಬೊಬ್ಬರದು ಒನ್ನೊಂದು ರೀತಿ ಇರುತ್ತವೆ . ಬಹಳಷ್ಟು ಜನರ ಆಂತರಿಕ ಮನೋಭಾವ ಮತ್ತು ಬಾಹ್ಯ ನಡವಳಿಕೆ ವಿರೋಧಾಭಾಸದಿಂದ ಕೂಡಿರುತ್ತದೆ. ಬಹಳಷ್ಟು ಜನ ಒಳ್ಳೆಯವರಂತೆ ಕಂಡರೂ ಅವರು ವಾಸ್ತವವಾಗಿ ಹಾಗೆ ಇರುವುದಿಲ್ಲ . ನಿಜವಾಗಿಯೂ ಅವರು ನಯವಂಚಕರಾಗಿರುತ್ತಾರೆ.
ಒಳ್ಳೆಯವರೆಂದು ಭಾವಿಸಲ್ಪಡುವವರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು .
ಒಂದನೇ ವರ್ಗ :- ಕೆಟ್ಟದ್ದನ್ನು ಮಾಡಲು ಶಕ್ತಿ ಇಲ್ಲದೇ ಒಳ್ಳೆಯವರೆನಿಸಿಕೊಂಡವರು .ಇಂತಹವರಿಗೆ ಕೆಟ್ಟದ್ದನ್ನು ಮಾಡುವ ಮನಸ್ಸು ಇರುತ್ತದೆ . ಧ್ವೇಷ ಪ್ರತೀಕಾರದ ಮನೋಭಾವ ಚೆನ್ನಾಗಿಯೇ ಇರುತ್ತದೆ. ಆದರೆ ಮತ್ತೊಬ್ಬರು ತಮ್ಮನ್ನು ಹಿಯಾಳಿಸಿದರೋ, ಕೇಡನ್ನು ಮಾಡಿದರೂ ಸುಮ್ಮನಿರುತ್ತಾರೆ. ಅಬ್ಭಾ!... ಎಷ್ಟು ಸಮಾಧಾನಿ , ಒಳ್ಳೆಯವ .. ತನ್ನ ವಿರೋಧಿಗೆ ಪ್ರತಿಯಾಗಿ ಏನನ್ನೂ ಹೇಳಲಿಲ್ಲ , ಮಾಡಲಿಲ್ಲ ಎಂದು ಕೆಲವರ ಶ್ಲಾಘನೆಗೆ ಪಾತ್ರರಾಗುತ್ತಾರೆ. ಅದೇ ತನ್ನ ವಿರೋಧಿಗೆ ಮತ್ತೊಬ್ಬ ಪ್ರತಿಭಟಿಸಿದಾಗ ಹಲ್ಲೆ ನಡೆಸಿದಾಗ ಗುಟ್ಟಾಗಿ ಹೋಗಿ ಹಸ್ತದಿಂದ ಹಿಡಿದು ಕಂಕುಳದ ವರೆಗೂ shake hand ಕೊಟ್ಟು ಕೃತಜ್ಞತೆ ಸಲ್ಲಿಸುತ್ತಾನೆ. ಬಹಳ ಸರಿಯಾದ ಕೆಲಸ ಮಾಡಿದೆ, ಅವನಿಗೆ ಬಹಳ ಧಿಮಾಕು ಇತ್ತು ಎಂದು ಹೊಗಳುತ್ತಾನೆ. ಅಂದಾಗ ತನಗೆ ತೊಂದರೆ ಕೊಟ್ಟವರನ್ನು ಪ್ರತಿಭಟಿಸುವ ಮನಸ್ಸು ಇಂತಹವರಿಗೆ ಇರುತ್ತದೆ ಅಂದಾಯಿತು. ಹಾಗಾದರೆ ಇವರು ಸುಮ್ಮನೆ ಕುಳಿತದ್ದು ಏಕೆ? ಸ್ವತಹ ಪ್ರತಿಭಟಿಸುವ ಶಕ್ತಿ ಇಲ್ಲ. ಇಂತಹವರೂ ಸಮಾಜದ ಕಣ್ಣಿಗೆ ಒಳ್ಳೆಯವರೆಂದೇ ಕಾಣಿಸಿಕೊಳ್ಳುತ್ತಾರೆ.
ಎರಡನೆಯ ವರ್ಗ : - ಕೆಟ್ಟದ್ದನ್ನು ಮಾಡಲು ಶಕ್ತಿ ಇರುತ್ತದೆ . ಆದರೆ ಇವರಿಗೆ ಮನಸ್ಸು ಇರುವುದಿಲ್ಲ . ಇರುವುದಿಲ್ಲ ಎನ್ನುವದಕ್ಕಿಂತ ಮನಸ್ಸು ಮಾಡುವುದಿಲ್ಲ . ಯಾರಾದರೂ ತಮಗೆ ಕಿರುಕುಳ ಕೊಟ್ಟರೆ ಅವರನ್ನು ಪ್ರತಿಭಟಿಸಲು ತೊಂದರೆ ತೆಗೆದುಕೊಳ್ಳಬೇಕಾಗುತ್ತದೆ . ಸಂದರ್ಭದಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆ. ಒಮ್ಮೆ ಇವರು ಪ್ರತೀಕಾರ ಮಾಡಿದರೆ ಮರಳಿ ಬರುವ ಪ್ರತಿರೋಧ ಇನ್ನೂ ಉಗ್ರವಾಗಿರುತ್ತದೆ. ಅದನ್ನು ಪುನಃ ಎದುರಿಸಲು ಮೊದಲಿನ ದುಪ್ಪಟ್ಟು ತರಾಸು ಮತ್ತು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂತಹವರಿಗೆ risk ತೆಗೆದುಕೊಳ್ಳುವ, ಹಣಕಾಸಿನ ನಷ್ಟವನ್ನು ಅನುಭವಿಸುವ ಮನಸ್ಸು ಇರುವುದಿಲ್ಲ . ಹಾಗಾಗಿಯೇ ಯಾರನ್ನೂ ಇವರು ವಿರೋಧಿಸುವ ಗೋಜಿಗೆ ಹೋಗುವುದಿಲ್ಲ. ತಮ್ಮ ಶತ್ರುಗಳ ವಿರುದ್ದ ಬೇರೆ ಯಾರಾದರೂ ಎರಗಿದರೆ ಅವರಿಗೆ ಇವರು ಮೊದಲನೆಯ ವರ್ಗದವರಂತೆ ಗುಟ್ಟಾಗಿ ಭೇಷ್ ಎನ್ನುತ್ತಾರೆ . ಬೆನ್ನು ತಟ್ಟುತ್ತಾರೆ. ಇಂತಹವರೂ ಸಮಾಜದ ಕಣ್ಣಿಗೆ ಒಳ್ಳೆಯವರು ಎನ್ನಿಸಿಕೊಳ್ಳುತ್ತಾರೆ.
ಮೂರನೆಯ ವರ್ಗ :- ಇದು ಅತ್ಯಂತ ಅಪಾಯದ ವರ್ಗ . ಇವರಿಗೆ ಮತ್ತೊಬ್ಬರನ್ನು ಪ್ರತಿಭಟಿಸುವ ಶಕ್ತಿ ಮತ್ತು ಮನಸ್ಸು ಎರಡೋ ಸಾಕಷ್ಟು ಇರುತ್ತವೆ . ಆದರೂ ಒಂದು ಹಂತದಲ್ಲಿ ಸುಮ್ಮನಿದ್ದು ಸಭ್ಯರೆನಿಸಿಕೊಳ್ಳುತ್ತಾರೆ . ಯಾವುದೋ ಒಂದು ಉದ್ದೇಶದ ಸಾಧನೆಗಾಗಿ ಹೊಂಚು ಹಾಕುವದು ಇವರ ಸ್ವಭಾವ. ತಮ್ಮ ಒಳಗಿನ ಗುರಿಯನ್ನು ಸಾಧಿಸಿಕೊಳ್ಳಲಿಕ್ಕಾಗಿ ಮತ್ತೊಬ್ಬರಿಂದ ಎಷ್ಟು ತೊಂದರೆ ಕಿರುಕುಳ ಬಂದರೂ ತನ್ನ ಸಾಮರ್ಥ್ಯವನ್ನು ಹೊರಗೆ ತೋಚುವುದಿಲ್ಲ . ಇಂತಹವರು ಇನ್ನೊಬ್ಬರಿಗೆ ಹೆದರಿರುವುದೂ ಇಲ್ಲ ಹಾಗೆಂದು ವಿರೋಧಿಸುವುದೂ ಇಲ್ಲ. ಹೆದರಿದಂತೆ ಸೋಗು ಹಾಕುತ್ತಾರೆ. ಸಮಾಜದ ಕಣ್ಣಿಗೆ ಒಳ್ಳೇಯವರೆನಿಸಿಕೊಳ್ಳುತ್ತಾರೆ. ಮತ್ತೊಬ್ಬನಿಂದ ಸಿಗಬೇಕಾದ ಲಾಭ ದೊರೆಕಿತೋ ಆ ಘಳಿಗೆಯಿಂದಲೇ ಅದೇ ವ್ಯಕ್ತಿಯ ವಿರುದ್ದ ಹರಿ ಹಾಯುತ್ತಾರೆ . ಏನೆಲ್ಲಾ ಸೇಡು ತೀರಿಸಿಕೊಳ್ಳಲು ಮನಸ್ಸು ಮತ್ತು ಸಕಲ ಶಕ್ತಿಯನ್ನು ವಿನಿಯೋಗಿಸುತ್ತಾರೆ. ತನಗೆ ಕಿರುಕುಳ ಕೊಟ್ಟವರಿಗೆ ಮೊದಲು ಎಷ್ಟು ಸೌಮ್ಯವಾಗಿ ಇರುತ್ತಾರೋ ಕೊನೆಗೆ ಅಷ್ಟೇ ಉಗ್ರರಾಗುತ್ತಾರೆ. ಆದ್ದರಿಂದ ಇಂತಹ ಒಳ್ಳೆಯ ಜನರ ಬಗ್ಗೆ ಬಹಳ ಜಾಗರೂಕರಾಗಿ ಇರಬೇಕಾಗುತ್ತದೆ. ಇವರನ್ನು ಜೊತೆಗೆ ಸೇರಿಸಿಕೊಂಡಿರುವುದೆಂದರೆ ಸುಮ್ಮನಿದೆ ಎಂದು ಹಾವನ್ನು ಮಗ್ಗುಲಲ್ಲಿ ಇಟ್ಟುಕೊಂಡಷ್ಟೇ ಅಪಾಯ. ಯಾವ ಸಮಯಕ್ಕೆ ಕುಟುಕುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ.
ನಾಲ್ಕನೆಯ ವರ್ಗ : - ಇವರಿಗೆ ಪ್ರತಿಭಟಿಸುವ , ಇನ್ನೊಬ್ಬರಿಗೆ ತೊಂದರೆ ಕೊಡುವ ಶಕ್ತಿ, ಮನಸ್ಸು ಮತ್ತು ಅವಕಾಶಗಳು ಇರುತ್ತವೆ. ಆದರೂ ಸಹೃದಯತನದಿಂದ ತಮಗೆ ಯಾರೇ ತೊಂದರೆ ಕೊಟ್ಟರೂ ಅವರ ವಿರುದ್ಧ ಹರಿ ಹಾಯುವುದಿಲ್ಲ. ಮನುಷ್ಯನಲ್ಲಿಯೂ ಕೇಡು ಬಯಸುವುದಿಲ್ಲ. ಸಮಾಧಾನ ತೆಗೆದುಕೊಳ್ಳುತ್ತಾರೆ. ಇತರರಿಂದ ತಮಗೆ ಒದಗಬಹುದಾದ ನೋವನ್ನು ಸಹಿಸಿಕೊಳ್ಳುತ್ತಾರೆ. ಇವರು ವಾಸ್ತವಿಕವಾಗಿ ಒಳ್ಳೆಯವರು. ಆದರೆ ಇಂತಹ ಸಜ್ಜನರ ಸಂಖ್ಯೆ ಸಮಾಜದಲ್ಲಿ ದೊರಕುವುದು ಅತೀ ಕಡಿಮೆ.
ಇನ್ನೂ ತೀರಾ ಸೂಕ್ಷ್ಮವಾಗಿ ಅವಲೋಕಿಸಿದಾಗ ಹೆಚ್ಚಿನ ಜನ ಮೊದಲ ಮೂರು ವರ್ಗಗಳಿಗೆ ಪದೇ ಪದೇ ವರ್ಗಾವಣೆಯಾಗಿರುತ್ತಿರುತ್ತಾರೆ. ಎಲ್ಲರೂ ನಿರಂತರವಾಗಿ ಒಂದೇ ರೀತಿಯ ಕೆಟ್ಟ ಜನರಾಗಿ , ಒಂದೇ ವರ್ಗದಲ್ಲಿ ಉಳಿಯುವುದಿಲ್ಲ. ಅಪರೂಪಕ್ಕೆ ಇವರು ನಾಲ್ಕನೆಯ ವರ್ಗದಲ್ಲಿ ಒಮ್ಮೆ ಸುಳಿದಾಡಿ ಹೋದರೂ ಅನಿರೀಕ್ಷಿತವಲ್ಲ.
" ಸಾಮಾನ್ಯ ಜನರ ಈ ತೆರನ ಪ್ರವೃತ್ತಿಗೆ ಈ ಲೇಖಕನೂ ಹೊರತಲ್ಲ "
ಈಗ ಹೇಳಿ. ಯಾರು ಒಳ್ಳೆಯವರು ಈ ನಾಲ್ವರೊಳಗೆ?
No comments:
Post a Comment
Note: only a member of this blog may post a comment.