-ಎಂ. ಗಣಪತಿ ಕಾನುಗೋಡು
ಹೌದು. ಹೊಗೆ ಕಾಣಿಸಿಕೊಂಡಿದೆ ಎಂದರೆ ಅದರ ಹಿಂದೆ ಬೆಂಕಿ ಇದೆ ಎಂಬುದು ವಾಸ್ತವಿಕ. ಇದು ಕೇವಲ ಒಂದು ಒಕ್ಕಣೆಯಾಗಿ ಉಳಿದಿಲ್ಲ. ಗಾದೆಯಾಗಿದೆ. ಗಾದೆ ಎಂದ ಮೇಲೆ ಅದು ಶಬ್ದಾರ್ಥಕ್ಕಷ್ಟೇ ಸೀಮಿತವಾಗದೆ ಅದರ ಇಂಗಿತಾರ್ಥಗಳು ಬಹಳ. ಅದರಂತೆ ಈ ಮಾತಿಗೆ ಬೇರೆ ಬೇರೆ ಅರ್ಥ ವಿಸ್ತಾರವಿದೆ.
ಯಾವುದೇ ವ್ಯಕ್ತಿಯ ಜೀವನದಲ್ಲಿ ಒಂದು ಸುದ್ದಿ ಹೊರಟಾಗ ಅಥವಾ ಇನ್ನಾವುದೇ ಸಂದರ್ಭಗಳಲ್ಲಿ ಬೇರೆ ಬೇರೆ ಘಟನೆಗಳು ಘಟಿಸಿದಾಗ ಜನ ಆಡಿಕೊಳ್ಳುವುದು ಒಂದೇ ಪ್ರಶ್ನೆ. ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ ?.
ಒಂದು ವ್ಯಕ್ತಿಯ ಬಗ್ಗೆ ಯಾವುದೇ ಸುದ್ಧಿ ಪ್ರಚಾರ ಗೊಂಡರೆ, ಅದಕ್ಕೆ ಸರಿಯಾದ ಕಾರಣ ಯಾರಿಗೂ ತಕ್ಷಣ ಗೊತ್ತಾಗುವುದಿಲ್ಲ. ಹಾಗೆಂದು ಒಂದು ಕಾರ್ಯಕ್ಕೆ ಸಂಬಂಸಿದಿರಬಹುದಾದ ವಾಸ್ತವಿಕ ಕಾರಣವನ್ನು ತಿಳಿದುಕೊಳ್ಳುವ ಗೋಜಿಗೂ ಜನ ಹೋಗುವುದಿಲ್ಲ. ಒಂದು ಸುದ್ದಿ ಅಥವಾ ಘಟನೆ ಪ್ರಚಲಿತಕ್ಕೆ ಬಂದರೆ ಆ ಹೊತ್ತಿಗೆ ತಮ್ಮ ಬುದ್ದಿಯ ಮಿತಿಯೊಳಗೆ ಯಾವ ಯಾವ ಕಾರಣಗಳು ಗೋಚರಿಸುತ್ತವೆಯೋ ಅವನ್ನೆಲ್ಲಾ ಆ ಪರಿಣಾಮಕ್ಕೆ ತಳಿಕೆ ಹಾಕುತ್ತಾರೆ. ಹೊಗೆಯಾಡಲು ಅದರ ಹಿಂದೆ ಇರುವಂತಹ ನಿಜವಾದ ಬೆಂಕಿ ಯಾವುದು ಎಂಬುದನ್ನು ಯಾರೂ ತಿಳಿದಿರುವುದಿಲ್ಲ. ಹಾಗೆಂದು ತಮ್ಮಷ್ಟಕ್ಕೆ ತಾವು ಯಾರೂ ಸುಮ್ಮನೆ ಕೂರುವುದಿಲ್ಲ.
ಪ್ರಚಾರಕ್ಕೆ ಬಿದ್ದಿರುವ ಸುದ್ದಿ ಅಥವಾ ಸಂಭವಿಸಿದ ಘಟನೆ ಕೆಲವು ಸಾರಿ ಕೆಲವೊಂದು ಜನರ ನಾಲಿಗೆಯ ತುರಿಕೆಯಿಂದ ಆಗಿರುತ್ತದೆ. ಇದಕ್ಕೆ ಕಾರಣರಾದ ವ್ಯಕ್ತಿಗಳಿಗೆ ಯಾವ ಲಾಭವೂ ಇಲ್ಲ. ಸಿಗಬಹುದಾದ ಪುಕ್ಕಟ್ಟೆ ಮನರಂeನೆಯೊಂದೇ ಅವರಿಗೆ ಲಾಭ. ಇಂತಹ ಸಂದರ್ಭಗಳಲ್ಲಿ ಹೊಗೆಯ ಹಿಂದೆ ಇರುವ ಬೆಂಕಿಯೆಂದರೆ ನಿಷ್ಪ್ರಪ್ರಯೋಜಕ ವ್ಯಕ್ತಿಗಳಿಗೆ ಇರುವ ಬಾಯಿ ಚಪಲ ಅಷ್ಟೆ. ನಿಜ ಹೇಳಬೇಕೆಂದರೆ ಇದು ಬೆಂಕಿಯೇ ಅಲ್ಲ. ಕೇವಲ ಗಾಳಿ ಅಷ್ಟೇ. ದುರಂತವೆಂದರೆ ನಿಜಾಂಶ ಸಮಾಜಕ್ಕೆ ಗೊತ್ತಾಗುವುದರೊಳಗೆ ಈ ಗಾಳಿ ಮಾತ್ರಕ್ಕೆ ಸಿಲುಕಿದ ವ್ಯಕ್ತಿ ಸುಟ್ಟು ಕರಕಲಾಗುತ್ತಾನೆ.
ಆಡುವ ಹೊಗೆಗೆ ಇನ್ನೊಂದು ಹಿನ್ನೆಲೆಯೂ ಇದೆ. ಕೆಲವು ವ್ಯಕ್ತಿಗಳಿಗೆ ಒಬ್ಬ ವ್ಯಕ್ತಿಯ ಮೇಲೆ ದ್ವೇಷವಿದೆ. ಹಾಗೆಯೇ ಒಂದು ಸಂಘಟನೆ ಇನ್ನೊಂದು ಸಂಘಟನೆ ಮೇಲೆ ಭಿನ್ನಾಭಿಪ್ರಾಯವಿರುತ್ತದೆ. ಅಂತಹ ಸನ್ನಿವೇಶಗಳಲ್ಲಿ ಆ ವ್ಯಕ್ತಿಗಳು ತಮ್ಮ ಗುರಿಯ ವ್ಯಕ್ತಿಯ ವಿರುದ್ದ, ಆ ಸಂಘಟನೆಯು ತನ್ನ ಗುರಿಯ ಸಂಘಟನೆ ವಿರುದ್ದ ಉದ್ದೇಶಪಟ್ಟು ಅಪಪ್ರಚಾರದ ವದಂತಿಗಳನ್ನು ಹರಿಯ ಬಿಡುತ್ತಾರೆ. ಇದು ಕೇವಲ ಬಾಯಿ ಚಪಲ ಅಲ್ಲ. ಗಹನವಾದ ದುರುದ್ದೇಶ. ಈ ಸುಳಿಗೆ ಸಿಕ್ಕ ಆ ವ್ಯಕ್ತಿ ಅಥವಾ ಸಂಘಟನೆ ತತ್ತರಿಸಿ ಹೋಗಬೇಕು. ಆ ರೀತಿಯಲ್ಲಿ ಸಂಚು ನೇಯ್ಗೆಯಾಗಿರುತ್ತದೆ. ವಾಸ್ತವಾಂಶ ಬೇರೆಯೇ ಇದೆ ಎಂದು ಈ ಸುಳಿತಕ್ಕೆ ಸಿಕ್ಕು ಹಣ್ಣಾದ ವ್ಯಕ್ತಿ ಅಥವಾ ಸಂಘಟನೆ ಎಷ್ಟು ಪರಿಯಲ್ಲಿ ತಿಳಿ ಹೇಳಿದರೂ ಜನ ನಂಬುವುದೇ ಇಲ್ಲ. ಏನೋ ಕೊಳಕು ಇದೆ. ಸುಮ್ಮನೆ ದುರ್ವಾಸನೆ ನಾರುತ್ತದೆಯೇ ? ಸುಮ್ಮನೆ ಹೊಗೆಯಾಡುತ್ತದೆಯೇ? ಎಂದು ಜನ ಆಡಿಕೊಳ್ಳುತ್ತಾರೆ. ಮೂಲವನ್ನು ತಿಳಿದುಕೊಳ್ಳುವ ಪ್ರಯತ್ನ ಮತ್ತು ತೊಂದರೆ ಯಾರಿಗೆ ಬೇಕು. ಪುಕ್ಕಟ್ಟೆ ಸಿಕ್ಕರೆ ಕರ್ಣಾನಂದ ಯಾರಿಗೆ ಬೇಡ. ಮನಸ್ಸಿಗೆ ಸಂತೋಷ ಒಂದೆ ಅಲ್ಲ. ಇವರ ಬಾಯಿ ಕೊಳೆಯೂ ಅದರಲ್ಲೇ ತೊಳೆದು ಹೋಗುತ್ತದೆಯಲ್ಲಾ.
ಸಮಾಜ ಸೇವಕರು, ವಕೀಲರು, ಹೆಚ್ಚಾಗಿ ವೈದ್ಯರು, ಉಪನ್ಯಾಸಕರು, ಉದ್ಯಮಿಗಳು, ಉದ್ಯೋಗಿಗಳು ಹೀಗೆ ಇಂತಹುದೇ ಅನೇಕ ವ್ಯಕ್ತಿಗಳು ಒಳ್ಳೆಯ ಹೆಸರನ್ನು ಹೊಂದಿದ್ದರೆ, ಅವರಿಗೆ ಇದರ ಜ್ವಾಲೆ ತಪ್ಪಿದ್ದಲ್ಲ. ಮಠಾಪತಿಗಳು, ಊರು ಕೇರಿಯ ಗೌರವಾನ್ವಿತ ಹೆಣ್ಣು ಮಕ್ಕಳಿಗೂ ಇದು ಬಿಟ್ಟಿದ್ದಲ್ಲ. ಹೆಚ್ಚಾಗಿ ಗಂಡು ಹೆಣ್ಣಿನ ಅಕ್ರಮ ಸಂಪರ್ಕ ತಾಗಿಸಿಯೇ ಬೆಂಕಿಯನ್ನು ಹಚ್ಚಿದ ಸಾದೃಷ್ಟಗಳು ಅನೇಕ ಇವೆ.
ಸಮಾಜದಲ್ಲಿ ಜವಾಬ್ದಾರಿಯಿಲ್ಲದ ಜನರು, ವದಂತಿಕೋರಪ್ರವೃತ್ತಿಯನ್ನೇ ಚಟವನ್ನಾಗಿರಿಸಿಕೊಂಡವರು. ಉದ್ಯೋಗದಲ್ಲಿ ಸೋತು ಹತಾಶರಾದರೂ `ಅಹಂ` ನ್ನು ಬಿಡಲಾರದವರು ಹೀಗೆ.. ಹೀಗೆ.. ಮುಂತಾದವರು ಬಹಳ ಮಂದಿ ಇದ್ದಾರೆ. ಅವರಿಗೆ ಇದೇ ಕೆಲಸ. ಅವರು ನಿದ್ರೆ ಬರಲಿಕ್ಕೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದಿಲ್ಲ. ತಾವು ಸುಖ ನಿದ್ರೆ ಮಾಡಲಿಕ್ಕೆ ಕಂಡು ಕೊಂಡ ಅತ್ಯಂತ ಸುಲಭದ ದಾರಿ ಇದು. ಯಾರ ನಿದ್ರೆ ಹಾಳಾದರೇನಂತೆ ?
ಎಂ. ಗಣಪತಿ, ಕಾನುಗೋಡು
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email
: m.ganapathi.kanagod@gmail.com
Mob : 9481968771
Date
: 08.11.2013
No comments:
Post a Comment
Note: only a member of this blog may post a comment.