-ಎಂ.ಗಣಪತಿ ಕಾನುಗೋಡು
ಒಂದು ಕಾಲದಲ್ಲಿ ದಿನನಿತ್ಯದ ಊಟ, ತಿಂಡಿಗೆ ಪ್ರತಿಯೊಬ್ಬರೂ ಬಾಳೆಎಲೆಯನ್ನು ಬಳಸುತ್ತಿದ್ದರು. ಆದರೆ ಈಗ ಹಬ್ಬ-ಹರಿದಿನಗಳಲ್ಲಿ ಮಾತ್ರ ಬಾಳೆಎಲೆಗೆ ವಿಶೇಷ ಮಹತ್ವ. ಮದುವೆ ಸಮಾರಂಭಗಳಲ್ಲಿ ಸಾವಿರಗಟ್ಟಲೆ ಜನರಿಗೆ ಊಟಕ್ಕೆ ಬಾಳೆಎಲೆಯನ್ನು ಬಳಸುತ್ತಾರೆ ಅಷ್ಟೆ.
ನಗರದಲ್ಲಿ ಕೆಲವೊಂದು ಮಾಂಸಾಹಾರಿ ಊಟದ ಹೋಟೆಲ್ ಎದುರಿಗೆ ಬೋರ್ಡು ನೇತು ಹಾಕಿಕೊಂಡಿರುತ್ತದೆ. ‘ಬಾಳೆಎಲೆಯ ಮೀನು ಊಟ ದೊರೆಯುತ್ತದೆ’. ಆಹಾ ! ಮಾಂಸಾಹಾರಕ್ಕೂ ಬಾಳೆಎಲೆಗೂ ಅಷ್ಟೊಂದು ನಂಟು. ಬಾಳೆಎಲೆಯ ಮೀನು ಊಟಕ್ಕಾಗಿಯೇ ಆ ಹೋಟೆಲ್‍ಗೆ ವಿಶೇಷ ಗಿರಾಕಿಗಳು.
ಬಳಸುವ ಬಾಳೆಎಲೆಯ ಬಗ್ಗೆ ಎಷ್ಟೊಂದು ಕಾಳಜಿ. ಅದನ್ನು ಕ್ರಮವಾಗಿ ಕತ್ತರಿಸುತ್ತಾರೆ. ಹುಳ-ಹುಪ್ಪಟವಿದ್ದರೆ ಅದರ ಮೇಲೆ ನಿಲ್ಲದಂತೆ ಎಚ್ಚರ ವಹಿಸುತ್ತಾರೆ. ಗಲೀಜು ಇದ್ದರಂತೂ ಸರಿಯೇ. ಇಲ್ಲದಿದ್ದರೂ, ಅವುಗಳನ್ನು ನೀರಿನಿಂದ ಚೊಕ್ಕಟವಾಗಿ ತೊಳೆದು ಒಪ್ಪವಾಗಿ ಕಾಯ್ದಿರುತ್ತಾರೆ. ಯಾರೂ ಅದಕ್ಕೆ ಗಲೀಜು ತಾಗಿಸದಂತೆ ತಾಕೀತು ಮಾಡುತ್ತಾರೆ. ದಿನನಿತ್ಯದ ಕುಟುಂಬದೊಳಗಿನ ಆಹಾರದ ವ್ಯವಸ್ಥೆಗೆ ಇರಲಿ ಅಥವಾ ವಿಶೇಷ ಸಮಾರಂಭದಲ್ಲಿಯೇ ಇರಲಿ. ಬಾಳೆಎಲೆಯ ಬಗ್ಗೆ ಇದು ಸಾಮಾನ್ಯವಾಗಿ ಇರುವ ಮುಂಜಾಗರೂಕತೆ. ಎಷ್ಟೊಂದು ಗಮನ, ಮರ್ಯಾದೆ ಅದರ ಕಡೆಗೆ. ನಮ್ಮ ಊಟ ಪರಿಶುದ್ಧವಾಗಿರಬೇಕಲ್ಲವೇ?. ಯಾರ ಪಾದಧೂಳಿಯೂ ಬೀಳದ ತಾವಿನಲ್ಲಿ ಅದಕ್ಕೆ ಮಾನದ ಸ್ಥಾನ. ಅಬ್ಬಾ....!
ಇಷ್ಟೆಲ್ಲಾ ಗೌರವಾದರಗಳು, ಪ್ರತ್ಯೇಕ ಸ್ಥಾನಮಾನಗಳಿಂದ ಸಂಪನ್ನಗೊಂಡ ಬಾಳೆಎಲೆ ಊಟ ಮುಗಿದ ಮೇಲೆ ತಿಪ್ಪೆಗೆ ಬಿಸಾಡಲ್ಪಡುತ್ತದೆ. ಅಯ್ಯೋ ಒಂದು ಘಂಟೆ ಮುಂಚೆ ತಾರಸಿ ಮನೆಯ ಬೆಚ್ಚನೆಯ ಕೊಠಡಿಯಲ್ಲಿ ಜೋಪಾನವಾಗಿ ಕಾಯ್ದು ಇಟ್ಟಿದ್ದ ಬಾಳೆಎಲೆ ಉಂಡ ಬಾಳೆಎಲೆ ಎಂದಾದ ಮೇಲೆ ಕೊಠಡಿ ಇರಲಿ ಮನೆಯ ಯಾವ ಮೂಲೆಯಲ್ಲೂ ಅದಕ್ಕೆ ಸ್ಥಳವಿಲ್ಲ. ತಾರಸಿ ಎದುರಿನ ತಿಪ್ಪೆಯೇ ಅದಕ್ಕೆ ಗತಿ. ಇದಕ್ಕೇ ಉಂಡ ಬಾಳೆಎಲೆಯ ಪಾಡು ಎನ್ನುವುದು.
ಉಂಡ ಬಾಳೆಯನ್ನೇನು ತಿಜೋರಿಯಲ್ಲಿ ಕಾಯ್ದಿಡಲಾಗುತ್ತದೆಯೇ?. ಇದು ಸಹಜ ಪ್ರಶ್ನೆಯೆ. ಅದರ ಉಪಯೋಗ ಮುಗಿದ ಮೇಲೆ ಬಿಸಾಡಬೇಕು. ಅಲ್ಲವೇ? ಇನ್ನೇನು ಅಂಗಳದಲ್ಲಿ ಹೊಲಸು ಮಾಡಿಕೊಳ್ಳಲಾಗುತ್ತದೆಯೇ? ತಿಪ್ಪೆಯೇ ಅದಕ್ಕೆ ಒಪ್ಪು.
ಅದು ಅಲ್ಲವೆಂದಲ್ಲ. ಆದರೆ ಉಂಡ ಎಲೆಯ ಪಾಡು ಮನುಷ್ಯನಿಗೂ ಬಂದರೆ? ಇಲ್ಲಿಯೇ ಈ ಒಕ್ಕಣೆಯ ಮಹತ್ವ ಇರುವುದು. ಸಮಾಜದಲ್ಲಿ ಎಷ್ಟೋ ಜನರು ಮತ್ತೊಬ್ಬರ ಉಪಯೋಗಕ್ಕೆ ದೊರಕಿ ದೊರಕಿಸಿಕೊಂಡವರ ತೀಟೆ ತೀರಿದ ಮೇಲೆ ಉಂಡ ಬಾಳೆಎಲೆಯ ಪಾಡನ್ನು ಅನುಭವಿಸುತ್ತಾರೆ.
ಹೌದು. ಬದುಕೇ ಪರಾವಲಂಬಿ. ಒಬ್ಬರ ಉಪಯೋಗವನ್ನು ಪಡೆದುಕೊಂಡೇ ಇನ್ನೊಬ್ಬ ತನ್ನ ಬದುಕನ್ನು ಸಾಗಿಸಬೇಕು. ಇದು ವ್ಯಕ್ತಿಯ ತೀರ ವೈಯುಕ್ತಿಕ ಜೀವನದಿಂದ ಹಿಡಿದು ಸಾಮೂಹಿಕ ಜೀವನದ ವರೆಗೂ ಇರುವ ಸತ್ಯ. ಗಂಡ-ಹೆಂಡತಿ, ಪೋಷಕರು – ಮಕ್ಕಳು, ಸಹೋದರ-ಸಹೋದರಿಯರು ಹೀಗೆ ಎಲ್ಲರೂ ವೈಯುಕ್ತಿಕ ಜೀವನದಲ್ಲಿ ಪರಸ್ಪರ ಅವಲಂಬಿಗಳು. ಇಲ್ಲಿಯೂ ಹೆಚ್ಚು ಉಪಯೋಗಕ್ಕೆ ಸಿಗುವವನು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಾನೆ. ಯಾವ ಉಪಯೋಗಕ್ಕೂ ಬಾರದ ಕುಟುಂಬದ ಸದಸ್ಯನ ಪಾಡು ಪ್ರಥಮ ಹಂತದಲ್ಲಿಯೇ ಉಂಡ ಬಾಳೆಎಲೆಯ ಪಾಡು. ಉಪಯೋಗಕ್ಕೆ ಸಿಕ್ಕವನ ಪಾಡು ಕೂಡ ತದನಂತರದಲ್ಲಿ ಅದೇ ಸ್ಥಿತಿ. ಆದರೆ ಇದು ಕುಟುಂಬವಾದ್ದರಿಂದ ಇಲ್ಲಿ ಅವಲಂಬನೆ ವರ್ತುಲವಾಗಿರುತ್ತದೆ. ಯಾರ ಹಂಗು ಯಾರಿಗೂ ಇಲ್ಲಿಗೇ ಮುಗಿಯಿತು ಎಂದು ಪೂರ್ಣವಿರಾಮ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಪರಿಣಾಮದ ಲಕ್ಷಣಗಳು ಇಲ್ಲಿ ಮಾರ್ಮಿಕವಾಗಿರುತ್ತದೆ. ಮೂರ್ತ ರೂಪದಲ್ಲಿ ಪ್ರಕಟಗೊಳ್ಳುವುದಿಲ್ಲ.
ಕುಟುಂಬದ ಹೊರಗೆ ಬಂದರೆ ಸಾಮೂಹಿಕ ಜೀವನದಲ್ಲಿ ಈ ತೆರೆನ ಪಾಡು. ಮೂರ್ತ ರೂಪದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಉಪಯೋಗಕ್ಕೆ ಬೇಕೆನಿಸಿದರೆ ಮತ್ತೊಬ್ಬ ವ್ಯಕ್ತಿ ಅವನನ್ನು ಬಾಳೆಎಲೆಯ ಹಾಗೆ ಬಹಳ ಮಹತ್ವ ಕೊಟ್ಟು ಮುತುವರ್ಜಿಯಿಂದ ಕಾಯ್ದುಕೊಳ್ಳುತ್ತಾನೆ. ಎಷ್ಟು ಹೊತ್ತಿಗೂ ಅವನು ನಕರಾತ್ಮಕನಾಗದ ಹಾಗೆ ಪೋಷಿಸುತ್ತಾನೆ. ಹೊಗಳುತ್ತಿರುತ್ತಾನೆ. ಆತ ಯಾವಾಗಲೂ ತನ್ನ ಬದಿಯಲ್ಲಿ ತಾಗಿಕೊಂಡಿರಬೇಕು. ಉಪಯೋಗದ ಸಾಮಥ್ರ್ಯವನ್ನು ಅರಿತೇ ಬಾಳೆಎಲೆಯನ್ನು ರಕ್ಷಿಸಿ ಇಟ್ಟುಕೊಂಡ ಹಾಗೆ ತನಗೆ ಯಾವ ಹೊತ್ತಿಗೆ ಯಾವ ಪ್ರಯೋಜನವನ್ನು ಕೊಡುವ ಸಾಮಥ್ರ್ಯವಿದೆಯೋ ಅಂಥವರನ್ನು ಈತ ಆಯಾ ಹೊತ್ತಿಗೆ ಬಳಸಿಕೊಳ್ಳಲು ಹೊಂಚು ಹಾಕಿರುತ್ತಾನೆ. ತನಗೆ ಸಹಾಯವಾಗಲೆಂದು ಆತನನ್ನು ಮಾತಿನಿಂದ ಹಿಗ್ಗುವಂತೆ ಉಬ್ಬಿಸುತ್ತಾನೆ. ಇವನ ಲಾಭಕ್ಕಾಗಿ ಆತ ಯಾರ್ಯಾರನ್ನೋ ಬೈಯ್ದಾಡಿ ನಿಷ್ಟುರಕ್ಕೆ ಗುರಿಯಾಗುತ್ತಾನೆ. ತನ್ನ ಸ್ವಂತ ಸಂಸಾರ, ದುಡಿಮೆ ಎಲ್ಲವನ್ನೂ ಬಿಟ್ಟು ಆತ ಇವನಿಗಾಗಿ ಹೋರಾಡುತ್ತಾನೆ.
ಒಂದು ದಿನ ಈತನಿಗೆ ಅವನಿಂದ ಆಗಬೇಕಾದ ಪ್ರಯೋಜನವೆಲ್ಲವೂ ಮುಗಿಯುತ್ತದೆ. ಇನ್ನು ಮುಂದೆ ಅವನನ್ನು ತನ್ನ ಜೊತೆ ಇಟ್ಟುಕೊಂಡರೆ ತೊಂದರೆಯೇ ಸರಿ. ಅನಾವಶ್ಯಕವಾಗಿ ಆತನನ್ನು ಓಲೈಸಬೇಕು. ರಕ್ತವನ್ನು ಸಂಪೂರ್ಣವಾಗಿ ಹೀರಿಕೊಂಡ ನಂತರ “ಇಂಬಳ” (ಒಂದು ಬಗೆಯ ರಕ್ತ ಹೀರುವ ಹುಳು) ನಮ್ಮ ದೇಹದಿಂದ ಬೇರ್ಪಡುವುದು ಅದರ ಸ್ವಭಾವ. ಹಾಗೆ ಇನ್ನು ಹಿಡಿದುಕೊಂಡರೆ ಪ್ರಯೋಜನವಿಲ್ಲ ಎಂದೆನಿಸಿದ ಮರುಘಳಿಗೆಯಲ್ಲಿ ಇಂಬಳದಂತೆ ಆತನನ್ನು ಈತ ಬಿಟ್ಟುಬಿಡುತ್ತಾನೆ. ಪುನಃ ಆತ ಇವನನ್ನು ಎಷ್ಟು ಮೂಸಿ ನೋಡಿದರೂ ಅವನ ಮೂಗಿಗೆ ನಾರುವುದು ದುರ್ವಾಸನೆಯೇ ವಿನಹ ಮುಂಚಿನ ಸುವಾಸನೆಯಿಲ್ಲ. ಗುರುತೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವನ ಕುರಿತು ಈತ ನಿರ್ಲಿಪ್ತನಾಗಿರುತ್ತಾನೆ. ಸೂಕ್ಷ್ಮವಾಗಿ ಗ್ರಹಿಸಿದರಷ್ಟೇ ಸಮಾಜದಲ್ಲಿ ನಡೆಯುತ್ತಿರುವ ಇಂಥಹ ಅಹಿತರಕ ನಡವಳಿಕೆಗಳು ನಮ್ಮ ಗಮನಕ್ಕೆ ಬರುತ್ತವೆ.
ಬೇಕೆನಿಸಿದಾಗ ಹೇಗೆ ಬೇಕೋ ಹಾಗೆ ತಮ್ಮ ತೆವಲು ತೀರಿಸಿಕೊಳ್ಳಲಿಕ್ಕೆ ಸರಿಯಾಗಿ ಮತ್ತೊಬ್ಬರನ್ನು ಬಳಸಿಕೊಂಡ ಜನ ತೆವಲು ತೀರಿದ ನಂತರ ಅವರ ಸ್ಥಿತಿಯನ್ನು ಉಂಡ ಬಾಳೆಎಲೆಯ ಪಾಡನ್ನಾಗಿ ಮಾಡಿಬಿಡುತ್ತಾರೆ.
ದಿನಾಂಕ: 05.12.2013
ಎಂ. ಗಣಪತಿ, ಕಾನುಗೋಡು
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771
No comments:
Post a Comment
Note: only a member of this blog may post a comment.