ಸಂತೆಯ ದಿನ ಪೇಟೆಯ ರಸ್ತೆ ಪಕ್ಕದಲ್ಲಿ ಕುರುಡನೊಬ್ಬ ಬೇಡುತ್ತಿದ್ದ. ' ನೋಡಿ ಸರ್ .. ಕಣ್ಣಿಲ್ಲ , ಕುರುಡ , ದಯವಿಟ್ಟು ಧರ್ಮ ನೀಡಿ ಸರ್ ' ಎಂದು ವಿನೀತ ಧ್ವನಿಯಲ್ಲಿ ಬೇಡುತ್ತಲೇ ಇದ್ದ. ಒಂದೇ ಥರ ಅಲ್ಲ. ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದ. ದಾರಿಯಲ್ಲಿ ಸಾಗುವವರು ಅವನ ಕೇಳಿಕೆಗೆ ಮನಸೋತು ಎರಡು, ಐದು, ಹತ್ತು ರುಪಾಯಿ... ಹೀಗೆ.. ಹೀಗೆ ಹಾಕಿ ಹೋಗುತ್ತಿದ್ದರು. ಯಾರೋ ಒಬ್ಬ ಧಾರಾಳಿ ಐವತ್ತು ರೂಪಾಯಿನ ನೋಟೊಂದನ್ನು ಹಾಕಿ ಹೋದದ್ದು ಅಲ್ಲಿಯೇ ಸಾಗುತಿದ್ದ ನನ್ನ ಕಣ್ಣಿಗೆ ಬಿತ್ತು.
ನನಗೂ ಏಕೋ ಅವನೆಡೆಗೆ ಮನಸ್ಸು ಹೋಯಿತು. ನನ್ನಲ್ಲಿ ಚಿಲ್ಲರೆ ಇಲ್ವಲ್ಲಪ್ಪಾ ಎಂದೆ. 'ನೋಟು ಹಾಕಿ ಚಿಲ್ಲರೆ ತೆಕ್ಕೊಳ್ಳಿ ಸ್ವಾಮಿ' ಎಂದ. ನಾನು ಒಂದು ನೋಟನ್ನು ಹಾಕಿ ಚಿಲ್ಲರೆಯೆಂದು ಮತ್ತೊಂದು ನೋಟನ್ನು ತೆಗೆಯುವುದರಲ್ಲಿದ್ದೆ. ಅಷ್ಟು ಹೊತ್ತಿಗೆ ತಟ್ಟನೆ ಆತ ನನ್ನ ಕೈ ಹಿಡಿದುಕೊಂಡು ಬಿಟ್ಟ. ' ಏನ್ರೀ.... ನೋಡಲಿಕ್ಕೆ ದೊಡ್ಡ ಸಂಭಾವಿತರ ಹಾಗೆ ಸರಿಯಾಗಿ ಕಾಣುತ್ತಿದ್ದೀರಿ. ಏನೋ ಕಣ್ಣಿಲ್ಲ ಕುರುಡ ಅಂತ ಬಿಕ್ಷೆ ಬೇಡೋಕೆ ಕುಂತುಕೊಂಡರೆ ನನಗೇ ಮೋಸ ಮಾಡ್ತೀರಲ್ಲ. ಮೊದಲು ಇಡ್ರೀ ಅದನ್ನ.' ಎಂದು ನನ್ನನ್ನು ಜೋರಿನ ಧ್ವನಿಯಲ್ಲಿ ಕಣ್ಣು ಬಿಟ್ಟು ಹೆದರಿಸಿದ. ಅವನ ಗಲಾಟೆ ಕೇಳಿ ಸಂತೆಗೆ ಬಂದ ಜನ ನಮ್ಮಿಬ್ಬರನ್ನು ಕುತೂಹಲದಿಂದ ಸುತ್ತುವರಿದರು. ಗುಜು ಗುಜು ಗಲಭೆ ಶುರುವಾಯಿತು. ನಾನೂ ಮರ್ಯಾದೆ ಉಳಿಸಿಕೊಳ್ಳಬೇಕಲ್ಲ !. ' ಯಾಕಪ್ಪ.. ಧರ್ಮ ನೀಡಲಿಕ್ಕೆ ಬಂದರೆ ಹಾಗೆ ಗದರಿಸುತ್ತೀಯೆ' ಎಂದೆ.
" ಏನ್ರೀ ನೀವು ಮನುಷ್ಯರಾ... ಚಿಲ್ಲರೆಯಿಲ್ಲ ಎಂದು ಹೇಳಿ ಐದು ರುಪಾಯಿ ನೋಟು ಹಾಕಿ ಐವತ್ತು ರುಪಾಯಿ ನೋಟು ತೆಗಿತಿದ್ದೀರಲ್ಲಾ " ಎಂದು ಎಲ್ಲರೆದುರು ಕೂಗಾಡಿಬಿಟ್ಟ.
No comments:
Post a Comment
Note: only a member of this blog may post a comment.