Thursday, 5 February 2015

ಅಜ್ಜಿಯ ಗಂಟು

ಮಧ್ಯಮ ದರ್ಜೆಯ ಅವಿಭಕ್ತ ಕುಟುಂಬ. ಅದರಲ್ಲಿ ಒಬ್ಬಳು 90 ವರ್ಷದ ಅಜ್ಜಿ. ಅಜ್ಜಿಗೆ ತನ್ನದೇ ಆದ ಒಂದು ಟ್ರಂಕು. ಆ ಟ್ರಂಕಿನ ಹತ್ತಿರ ಮನೆಯವರಲ್ಲಿ ಯಾರೂ ಸುಳಿಯುವ ಹಾಗಿರಲಿಲ್ಲ. ಯಾರಾದರೂ ಅದರ ಸನಿಹಕ್ಕೆ ಹೋದರೆ ಮೈಮೇಲೆ ಎರಗುತ್ತಿದ್ದಳು.
ಅದರ ಬಾಗಿಲನ್ನು ಯಾರ ಎದುರು ಯಾವಾಗಲೂ ತೆರೆದಿರಲಿಲ್ಲ. ತೆರೆದಾಗ ಒಮ್ಮೆ ಯಾರಾದರೂ ಎದುರಿಗೆ ಬಂದರೆ ಸಟ್ಟನೆ ಟ್ರಂಕಿನ ಬಾಗಿಲನ್ನು ಹಾಕಿಬಿಡುತ್ತಿದ್ದಳು.

ಅಜ್ಜಿ, ಪಾಪ, ಬಹಳ ಕಾಲದಿಂದ ಟ್ರಂಕನ್ನು ಜೋಪಾನ ಮಾಡಿಕೊಂಡಿದ್ದಾಳೆ, ಏನೋ ಒಂದಿಷ್ಟು ಬಂಗಾರ, ಹಣವನ್ನು ಕೂಡಿಟ್ಟುಕೊಂಡಿದ್ದಾಳೆ. ಕಷ್ಟಪಟ್ಟು ಗಂಟು ಮಾಡಿಕೊಂಡಿದ್ದಾಳೆ. ಅಜ್ಜಿಯ ಕಾಲಾನಂತರ ಹೇಗೂ ನಮಗೆಲ್ಲರಿಗೂ ಪಾಲು ದೊರೆಯುತ್ತದೆಯಲ್ಲ ಎಂದು ಯಾರೂ ಅವಳಿಗೆ ತೊಂದರೆ ಕೊಟ್ಟಿರಲಿಲ್ಲ. ಅವಳು ಹೇಳಿದ ಹಾಗೆಯೇ ಕೇಳುತ್ತಿದ್ದರು. ತುಂಬಾ ಗೌರವವನ್ನು ಕೊಡುತ್ತಿದ್ದರು.

ಅಜ್ಜಿ ಕಾಯಿಲೆಗೆ ಬಿದ್ದಳು. ಎಲ್ಲರೂ ಅವಳ ಬಗ್ಯೆ ಬಹಳ ನಿಗಾ ವಹಿಸಿದರು. ಕೊನೆಯ ಕಾಲ ಸಮೀಪಿಸಿದರೂ ಅಜ್ಜಿಯು ಟ್ರಂಕಿನ ಮೋಹವನ್ನು ಬಿಡಲಿಲ್ಲ. ಅದಕ್ಕೆ ಒಂದು ಹುರಿಯನ್ನು ಕಟ್ಟಿಸಿ ತನ್ನ ಕೈಗೆ ಸಿಕ್ಕಿಸಿಕೊಂಡಿದ್ದಳು. ಅದನ್ನು ಯಾರೂ ಮುಟ್ಟಬಾರದೆಂದು ಮಧ್ಯೆ ಮಧ್ಯೆ ಎಚ್ಚರಿಕೆ ಕೊಡುತ್ತಿದ್ದಳು. ಅಜ್ಜಿ ಹಾಗೆ ಹೇಳಿದ ಹಾಗೆಲ್ಲಾ ಅವಳಮೇಲೆ ಮನೆಯವರ ಕಾಳಜಿಯೂ ಹೆಚ್ಚಾಗತೊಡಗಿತು. ಅಜ್ಜಿ ನಮ್ಮ ಮನೆಯ ದೇವರು ಎನ್ನುತ್ತಾ ಕೈಗೆ ಒಬ್ಬರು, ಕಾಲಿಗೆ ಒಬ್ಬರು ಎನ್ನುವಂತೆ ಅವಳ ಸೇವೆಯನ್ನು ಮಾಡಿದರು. ಹಾಗೆ ಸೇವೆ ಮಾಡಿದವರಲ್ಲಿ ಒಬ್ಬರು ಹೆಸರಾಂತ ವಕೀಲರು ಪ್ರಸ್ತುತದಲ್ಲಿ ಕರ್ನಾಟಕ ವಿದಾನ ಪರಿಷತ್ತಿನ ಸದಸ್ಯರಾಗಿದ್ದಾರೆ.

ಅಜ್ಜಿ ವಯೋಮಾನದ ಕಾಯಿಲೆಯಿಂದ ಸತ್ತಳು. ಮನೆಯ ಎಲ್ಲ ಸದಸ್ಯರ ಗಮನ ಅಜ್ಜಿಯ ಹೆಣದ ಮೇಲೆಗಿಂತ ಅವಳ ಟ್ರಂಕಿನ ಮೇಲೆಯೇ ಇತ್ತು. ಅಷ್ಟೊತ್ತಿಗೆ ಅಜ್ಜಿಯ ಕೊರಳಿನಲ್ಲಿ ದಪ್ಪನೆಯ ದಾರದಲ್ಲಿ ಇದ್ದ ಅವಳ ಟ್ರಂಕಿನ ಕೀಲಿಯನ್ನು ಯಾರೋ ಹೊಡೆದುಬಿಟ್ಟಿದ್ದರು. ಅಜ್ಜಿಯ ಮರಣವಿಧಿಯ 14 ನೇ ದಿನ ಅದನ್ನು ಎಲ್ಲರ ಎದುರಿಗೆ ಒಡೆಯಬೇಕು. ಅಲ್ಲಿಯವರೆಗೆ ಅದು ಅವರೆಲ್ಲರ ಸೋದರಮಾವನ ಸ್ವಾಧೀನದಲ್ಲಿ ಒಂದು ಕೊಟಡಿಯಲ್ಲಿ ಇರಬೇಕು ಎಂದು ಎಲ್ಲರೂ ತೀರ್ಮಾನ ಮಾಡಿದರು. ಅದಕ್ಕಾಗಿಯೇ ಒಂದು ಹೊಸ ಗೋಡ್ರೆಜ್ ಬೀಗವನ್ನು ಖರೀದಿಸಿ ಟ್ರಂಕನ್ನಿರಿಸಿದ ರೂಮಿನ ಬಾಗಿಲಿಗೆ ಎಲ್ಲರ ಸಮಕ್ಷಮ ಹಾಕಿ ಸೋದರಮಾವನ ಕೈಗೆ ಕೊಟ್ಟದ್ದೂ ಆಯಿತು.

ಸರಿ. ಹದಿನಾಲ್ಕನೇ ದಿನ ಅವಳ ಮರಣಕರ್ಮಗಳು ಪೂರೈಸಿತು. ನೆಂಟರೆಲ್ಲಾ ಮನೆಗೆ ಹೋದಮೇಲೆ ರಾತ್ರಿ ಸೋದರಮಾವ ಆ ಟ್ರಂಕಿನ ಬೀಗವನ್ನು ಎಲ್ಲರನ್ನೂ ಕೂರಿಸಿಕೊಂಡು ಸಮಕ್ಷಮ ಒಡೆದ. ಎಲ್ಲರೂ ಅಜ್ಜಿಯ ಬಹಳ ಕಾಲದ ಜೋಪಾನದ ಟ್ರಂಕಿನಲ್ಲಿ ಏನಿಲ್ಲ ಎಂದರೂ ಒಂದು ಕೆ. ಜಿ. ಬಂಗಾರ, ಹಲವು ಸಾವಿರ ರುಪಾಯಿ ಹಣವನ್ನು ನಿರೀಕ್ಷೆ ಮಾಡಿದ್ದರು.
ಒಡೆದು ನೋಡಿದರೆ ಅದರಲ್ಲಿ ಇದ್ದದ್ದು ಕೆಲಸಕ್ಕೆ ಬಾರದ ಒಂದಿಷ್ಟು ಹಳೆಯ ಬಟ್ಟೆ.
ಅದರಲ್ಲಿ ಏನೋ ಮಹಾ ಇದೆಯೆಂದು ಸೋಗು ಹಾಕಿ ತಮ್ಮಂತಹ ವಿದ್ಯಾವಂತರು, ಬುದ್ದಿವಂತರನ್ನೆಲ್ಲಾ ಮಂಕು ಮಾಡಿ ತಮ್ಮೆಲ್ಲರಿಂದ ಬೇಕುಬೇಕಾದ ಹಾಗೆ ಸೇವೆಮಾಡಿಸಿಕೊಂಡ ಅಜ್ಜಿ ಮಹಾ ಬುದ್ದಿವಂತೆಯೋ ಬುದ್ದಿವಂತೆ ಎಂದು ಎಲ್ಲರೂ ತಮ್ಮ ದಡ್ಡತನಕ್ಕೆ ನಕ್ಕೂ ನಕ್ಕೂ ಸತ್ತರು.

No comments:

Post a Comment

Note: only a member of this blog may post a comment.