~~~ ಎಂ.ಗಣಪತಿ. ಕಾನುಗೋಡು.
ತಾರೀಖು : 25 - 1 - 2015 .
ಬ್ರಿಟಿಷರ ಆಡಳಿತ, ನಂತರದಲ್ಲಿ ಸ್ವದೇಶೀ ರಾಜರ ಆಡಳಿತವನ್ನು ತೊಲಗಿಸಿ ನಮ್ಮ ಅಂದಿನ ರಾಜಕೀಯ ನೇತಾರರು ಭಾರತಕ್ಕೆ ಪ್ರಜಾಪ್ರಭುತ್ವ ಆಡಳಿತವನ್ನು ಒದಗಿಸಿದರು. ಅದಕ್ಕೆ ಅಗತ್ಯವಾದ ಸಂವಿಧಾನವನ್ನು ರೂಪಿಸಿಕೊಟ್ಟರು.
ಈ ಸಂಭ್ರಮವನ್ನು ಗಣರಾಜ್ಯೋತ್ಸವ ಎಂದು ನಾವಿಂದು ಆಚರಿಸುತ್ತಿದ್ದೇವೆ. ಗಣ ಎಂದರೆ ಸಮೂಹ ಎಂದು ಅರ್ಥ ಒಂದೆಡೆಯಿದ್ದರೂ ಇಲ್ಲಿ ಪ್ರಜೆ ಎಂಬ ಅರ್ಥದಲ್ಲಿ ಈ ಶಬ್ದವನ್ನು ಗೃಹಿಸಲಾಗಿದೆ. ಅಂದರೆ ಜನರ, ಜನರಿಂದ,ಜನರಿಗಾಗಿ ಈ ಆಡಳಿತ ಎಂದು ವರ್ಣಿಸಲಾಗಿದೆ.
ಒಂದು ಸರ್ಕಾರವನ್ನು ಜನರೇ ಸ್ಥಾಪಿಸುತ್ತಾರೆ ಎಂದರೆ ಆ ಜನರಿಗೆ ಅಂಥಹ ಅರ್ಹತೆ ಇರಬೇಕಾದದ್ದು ಅವಶ್ಯಕ. ಅವರಿಗೆ ತಮ್ಮ ಹಕ್ಕು, ಅಷ್ಟೇ ಸರಿಸಮನಾಗಿ ಕರ್ತವ್ಯದ ಬಗ್ಯೆ ಅರಿವು ಇದ್ದರೆ ಮಾತ್ರ ಇಂಥಹ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯ.
ನಮ್ಮದು ಪರೋಕ್ಷ ಪ್ರಜಾಪ್ರಭುತ್ವ ಪದ್ಧತಿ. ನಮ್ಮ ಕರ್ನಾಟಕ ರಾಜ್ಯದ ಆರೇಳು ಕೋಟಿ ಜನರನ್ನು ಆಡಳಿತ ಮಾಡಲು ಈ ಜನರು ತಾವು 224 ಮಂದಿಯನ್ನು ಚುನಾಯಿಸಬೇಕು. ನಮ್ಮ ರಾಷ್ಟದ ಸ್ವಲ್ಪ ಹೆಚ್ಚುಕಡಿಮೆ 120 ಕೋಟಿ ಜನರನ್ನು ಆಡಳಿತ ಮಾಡಲು ಈ ಜನರು ತಾವು 542 ಮಂದಿಯನ್ನು ಚುನಾಯಿಸಬೇಕು.
ಚುನಾವಣೆಯಲ್ಲಿ ಸ್ಪರ್ಧಿಸಿದವನು ಮತ ಯಾಚಿಸುವ ಅರಾಜಕತೆ ಪ್ರಜ್ಞಾವಂತ ಮತದಾರನಿಗೆ ಒಂದು ಅವಹೇಳನವಾಗಬೇಕು. ಚುನಾಯಿತನಾಗುವ ಉಮೇದುವಾರ ಜನರ, ಜನರಿಂದ, ಜನರಿಗಾಗಿ ಎಂಬ ಪರಿಕಲ್ಪನೆಯಿದ್ದರೆ ಮತದಾರನೇ ಸ್ವತಃ ಅವನನ್ನು ಗುರುತಿಸಿ ಚುನಾಯಿಸುವಂತಾಗಬೇಕು. ಅಂಥಹ ಮನೋಗತಿ ಮತ್ತು ಹೊಣೆಗಾರಿಕೆಯನ್ನು ಮತದಾರ ಹೊಂದಿರಬೇಕು. ನಾನು ಇಂಥಹವನು, ನನಗೆ ಮತ ಕೊಡಿ ಎಂದು ಪ್ರಜಾಪ್ರತಿನಿಧಿಯಾಗುವವನು ಮತದಾರನಿಗೆ ಸೂಚಿಸುವ ಪ್ರಕ್ರಿಯೆ ಈ ರಾಷ್ಟ್ರದ ಪ್ರಜಾಪ್ರಭುವಿಗೆ ಅವಮಾನದ ಸಂಗತಿಯಾಗಬೇಕು. ಹಾಗೆ ತನ್ನ ಸನಿಹ ಬಂದವನನ್ನು ದೂರ ತಳ್ಳಿ ತಾನು ಯಾರನ್ನು ತನ್ನ ಆಡಳಿತೆಗೆ ಆಯ್ಕೆ ಮಾಡಿಕೊಳ್ಳಬೇಕೆಂಬ ಚುನಾವಣಾ ಪ್ರಕ್ರಿಯೆಯನ್ನು ತನ್ನ ಸ್ವಂತ ಯೋಗ್ಯತೆ ಮತ್ತು ನಿರ್ಣಯಕ್ಕೆ ಹೊಂದಿಸಿಕೊಳ್ಳಬೇಕು. ಇದು ನಿಜವಾದ ಪ್ರಜಾಪ್ರಭುತ್ವದ ಸರ್ಕಾರದ ವಾಸ್ತವ ರೂಪ.
ಇಂದು ಹಾಗಲ್ಲ. ನಿಜವಾದ ಯೋಗ್ಯತೆ ಇದ್ದವನು ಆಯ್ಕೆಯಾಗಲು ಸಾಧ್ಯವಾಗುತ್ತಿಲ್ಲ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗರಂಥವರು ಚುನಾವಣೆಯಲ್ಲಿ ಸೋಲಬೇಕಾಯಿತು. ಎಲ್ಲಿ ನೋಡಿದರೂ ಹಣ, ಹಣ, ಹಣ . ಕೋಟಿಗಟ್ಟಲೆ ಹಣವನ್ನು ತೂರುವವನು ಮಾತ್ರ ಶಾಸಕನಾಗುವ ಪರಿಸ್ಥಿತಿ ಇಂದು ಇದೆ. ಹಾಗೆ ಆಯ್ಕೆ ಆದವನು ತನ್ನ ಸಂದ ಚುನಾವಣಾ ವೆಚ್ಚದ ಹಣ ಭರಿಸಿಕೊಳ್ಳಲಿಕ್ಕೆ, ನಂತರ ಮತ್ತೆ ಆಗಾಗ್ಯೆ ಮತ್ತು ಅಲ್ಲಲ್ಲಿ ಹಣ ಯಾಚಿಸುವ ಮತದಾರನಿಗೆ ತೂರಲಿಕ್ಕೆ ಮತ್ತು ಪುನಃ ಮುಂದಿನ ತನ್ನ ಚುನಾವಣಾ ಸ್ಪರ್ಧೆಗೆ ತಗಲುವ ವೆಚ್ಚಕ್ಕೆ ಹಣಕೂಡಿಕೊಳ್ಳಲಿಕ್ಕೆ ರಾಷ್ಟ್ರದ ಹಣವನ್ನು ಲೂಟಿಹೊಡೆಯಬೇಕು. ಅಂದರೆ ಮತದಾರ ಸರ್ಕಾರಕ್ಕೆ ಜಮೆ ಮಾಡಿದ ಪ್ರತ್ಯಕ್ಷ್ಯ ಮತ್ತು ಪರೋಕ್ಷ್ಯ ತೆರಿಗೆಯನ್ನು ದೋಚಬೇಕು. ಇದು " ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ " ಎನ್ನುವ ದಾಸರ ವಾಣಿಯ ದುರುಪಯೋಗ. ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯೊಬ್ಬನ ಯಾವುದೇ ಯೋಗ್ಯತೆ ಮತ್ತು ಅನುಭವ ಇಂದು ಪರಿಗಣನೆಯಾಗುತ್ತಿಲ್ಲ.
ಇದಕ್ಕೆ ಹೊಣೆ ಯಾರು ?. ಇಂದು ಮತದಾರಲ್ಲಿ ಅನಕ್ಷರಸ್ಥರಿರಬಹುದೇ ಅಪ್ರಜ್ನಾವಂತರು ಯಾರೂ ಇಲ್ಲ. ಅಕ್ಷರತೆಯೇ ಬೇರೆ. ಪ್ರಜ್ನಾವಂತಿಕೆಯೇ ಬೇರೆ. ಯಾರಿಂದ, ಹೇಗೆ, ಎಲ್ಲಿ, ಯಾವಾವುದಕ್ಕೆ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವ ಬುದ್ಧಿವಂತಿಕೆ, ಸ್ವಾರ್ಥ ಪ್ರತಿ ಮತದಾರನಲ್ಲೂ ಇಂದು ಇದೆ. ಮತದಾರನ ಇದೇ ಮನೋಭಾವವನ್ನು ಅಥವಾ ಈ ಕೊರತೆಯನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದುವಾರ ನಮ್ಮ ರಾಷ್ಟದಲ್ಲಿ ಚೆನ್ನಾಗಿ ನಗದು ಮಾಡಿಕೊಳ್ಳುತ್ತಿದ್ದಾನೆ. ಆದ್ದರಿಂದ ಇಂದು ನಮ್ಮ ರಾಷ್ಟ್ರ ಗಣರಾಜ್ಯವಾಗಿ ಉಳಿದಿಲ್ಲ. ಬದಲಿಗೆ ' ಹಣರಾಜ್ಯ ' ವಾಗಿದೆ. ಇಂಥಹ ಸನ್ನಿವೇಶವನ್ನು ಉಂಟುಮಾಡಿದ ಹೊಣೆಗೇಡಿ ಯಾರು ?.
ರಾಜಕಾರಣಿಯೋ ? ರಾಜಕೀಯ ಸ್ವಾತಂತ್ರ್ಯ ಬಂದು ಅರತ್ತೇಳು ವರ್ಷಗಳ ಸ್ವಾಯತ್ತತೆಯ ಅನುಭವದ
ಮತದಾರನೋ ?.
No comments:
Post a Comment
Note: only a member of this blog may post a comment.