Monday, 30 March 2015

%%%%%% ಕುರಿಗೆ ಶೃಂಗಾರ ವೈಭವ %%%%%%


~~~~~~ ಎಂ. ಗಣಪತಿ. ಕಾನುಗೋಡು.
ಕುರಿಯೆಂದರೆ ಎಲ್ಲರ ಭಾವನೆಯಲ್ಲಿ ಕನಿಷ್ಠ. ಆದರೆ ಅದಕ್ಕೂ ಅದರ ಭಾವನೆಯಲ್ಲಿ ಸಂದರ್ಭದಲ್ಲಿ ತಾನು ಗರಿಷ್ಟ ಎನ್ನುವುದಿದೆ. ವಿಷಯ ತಿಳಿದರೆ ಹಾಗೆಂದು ಅದು ತಪ್ಪೂ ಅಲ್ಲ.
ಕುರಿಗೆ ಬೆಲೆ ಬರಬೇಕಾದರೆ ಅದಕ್ಕೆ ಚೆನ್ನಾಗಿ ಹೊಟ್ಟೆಗೆ ಹಾಕಿ ಬೆಳೆಸುತ್ತಾರೆ, ಸಾಕುತ್ತಾರೆ. ಅದನ್ನು ಖರೀದಿಸಿದವ ಅದರ ಮೈಯನ್ನು ನೋಡಿಯೇ ಅಷ್ಟೊಂದು ಹಣವನ್ನು ಕೊಡುತ್ತಾನೆ. ಬಹಳ ಖುಷಿಯಿಂದಲೇ ಅದನ್ನು ಮನೆಗೆ ತರುತ್ತಾನೆ. ನೋಡಿ, ಅದಕ್ಕೆ ಇದ್ದಲ್ಲಿಯೂ ಗೌರವ, ಕೊಟ್ಟಲ್ಲಿಯೂ ಗೌರವದ ಹೆಮ್ಮೆ.
ಖರೀದಿಸಿ ತಂದವ ಅದನ್ನು ಮನೆಯವರಿಗೆ ಮತ್ತು ಸುತ್ತಲಿನವರಿಗೆ ತೋರಿಸಿ ಹೆಮ್ಮೆಪಡುತ್ತಾನೆ. ಮನೆಗೆ ತಂದವನು ಅದಕ್ಕೆ ಸ್ನಾನ ಮಾಡಿಸುತ್ತಾನೆ.ಸಂತೋಷದಿಂದ ಹಣೆಗೆ ಕುಂಕುಮವನ್ನು ಹಚ್ಚುತ್ತಾನೆ. ಕೆಂಪು ದಾಸವಾಳ ಹೂವಿನ ಮಾಲೆಯನ್ನು ಅದರ ಕೊರಳಿಗೆ ಹಾಕುತ್ತಾನೆ. ಹಣೆಗೂ ಹೂವಿನ ದಂಡೆಯನ್ನು ಕಟ್ಟುತ್ತಾನೆ. ಹೇಗೆ ಬೇಕೋ ಹಾಗೆ ಮನಸೋ ಇಚ್ಛೆ ಅದನ್ನು ಶೃಂಗರಿಸುತ್ತಾನೆ. ಭಕ್ತಿಯಿಂದ ಅದಕ್ಕೆ ಪೂಜೆ ಮಾಡುತ್ತಾನೆ. ಕರ್ಪೂರದ ಆರತಿ ಎತ್ತುತ್ತಾನೆ. ಎಷ್ಟೊಂದು ವೈಭವ ಅದಕ್ಕೆ.
ಇಷ್ಟೆಲ್ಲಾ ಸಂಭ್ರಮವನ್ನು ಮಾಡಿದ ಮೇಲೆ ಆ ಕುರಿಗೂ ಸಂತೋಷವಾಗಿರಬೇಕು. ಸಂಭ್ರಮಿತ ಆ ಕುರಿಯನ್ನು ಮನೆಯ ಜನರು, ನೆರೆಹೊರೆಯ ಜನರು, ಕುರಿಯ ಒಡೆಕಾರನ ಮನೆಯ ಹತ್ತಿರದ ನೆಂಟರು ಒಡಗೊಂಡು ಊರಿನುದ್ದಕ್ಕೂ ಜಾಘಂಟೆ, ತಾಳಗಳ ಢಮ,ಢಮದೊಂದಿಗೆ ಮೆರವಣಿಗೆ ಒಯ್ಯುತ್ತಾರೆ. ಕುರಿಯು ಖುಷಿಯಿಂದ ಕುಣಿದು ಕುಪ್ಪಳಿಸುತ್ತಲೇ ನಡೆಯುತ್ತಿರುತ್ತದೆ.
ಊರ ತುದಿಯಲ್ಲಿರುವ ಭೂತಪ್ಪನ ಗುಡಿಯೆದುರು ಮೆರವಣಿಗೆ ಬಂದು ನಿಲ್ಲುತ್ತದೆ. ತಮ್ಮಲ್ಲೆರ ಜೊತೆಗೆ ಭೂತಪ್ಪ ದೇವರ ದರ್ಶನವನ್ನು ತನಗೂ ತನ್ನ ಒಡೆಕಾರನು ಮಾಡಿಸಲು ವ್ಯವಸ್ಥೆ ಮಾಡಿದ್ದಾನೆಂದು ಕುರಿ ಭಾವಿಸಿರಬೇಕು.
ಸರಿ. ಭೂತಪ್ಪ ದೇವರಿಗೆ ಪೂಜೆ , ಮಹಾಮಂಗಳಾರತಿಯನ್ನು ಯಜಮಾನನು [ ಒಡೆಕಾರ ]ನಡೆಸುತ್ತಾನೆ. ಕುರಿಗೂ ಆ ಮಹಾಮಂಗಳಾರತಿಯನ್ನು ದೇವರ ಆರತಿಯೆಂದು ತೋರಿಸಿ ಎತ್ತುತ್ತಾನೆ.
ಒಡೆಕಾರ ತನ್ನ ಹೆಗಲ ಮೇಲಿನ ಉದ್ದನೆಯ ಪಂಚೆಯನ್ನು ಕುರಿಯ ಕೊರಳಿಗೆ ಹಾಕುತ್ತಾನೆ. ಓಹೋ .. ಯಜಮಾನ ತನ್ನ ಪಂಚೆಯನ್ನೇ ತನಗೆ ಉಡುಗೊರೆ ಹೊಚ್ಚಿದನೆಂದು ಕುರಿ ಸಂತೋಷಗೊಂಡಿರಬೇಕು. ಹಾಕಿದ ಪಂಚೆಯಿಂದ ಕುರಿಯ ಕೊರಳನ್ನು ಒಂದೆಡೆ ಯಜಮಾನ ಘಟ್ಟಿಯಾಗಿ ಎಳೆದು ಹಿಡಿದುಕೊಂಡ. ಅಷ್ಟೊತ್ತಿಗೆ ಅದರ ಸೊಂಟವನ್ನು ಯಾರೋ ಘಟ್ಟಿಯಾಗಿ ಎಳೆದು ಹಿಡಿದುಕೊಂಡಿದ್ದರು. ಅಹಹ ....... ತನ್ನ ಯಜಮಾನ ಮತ್ತು ಅವನ ಕಡೆಯವರು ತನ್ನ ಕೊರಳು ಮೈಯನ್ನು ಹಿಡಿದುಕೊಂಡು ಮುದ್ದಾಡುತ್ತಿದ್ದಾರೆಂದು ಶೃಂಗಾರ ವೈಭವದಿಂದ ಸಂಭ್ರಮಿತವಾದ ಕುರಿಯು ಭಾವಿಸಿರಬೇಕು.
ಕಣ್ಣು ರೆಪ್ಪೆ ಮಿಡುಕಿಸುವುದರಲ್ಲಿ ತನ್ನ ಕುತ್ತಿಗೆಯನ್ನು ಕತ್ತರಿಸಿ ಭೂತಪ್ಪ ದೇವರಿಗೆ ತನ್ನನ್ನು ಬಲಿಕೊಟ್ಟಿದ್ದು ಕುರಿಗೆ ಕೊನೆಗೂ ಗೊತ್ತಾಗಲೇ ಇಲ್ಲ.
" ಬದುಕಿನಲ್ಲಿ ನಮ್ಮ ಪಾಡೂ ಹಲವು ಬಾರಿ ಈ ಸಂಭ್ರಮಿತ ಕುರಿಯ ಪಾಡಿನಂತೆಯೇ ಆಗುತ್ತದೆ ".
ತಾರೀಖು : 29 - 3 - 2015

No comments:

Post a Comment

Note: only a member of this blog may post a comment.