.
~~~~~~ ಎಂ. ಗಣಪತಿ. ಕಾನುಗೋಡು.
ನನಗೆ ಈಗಾಗಲೇ ಮದುವೆಯಾಗಿ ಐವತ್ತು ವರ್ಷಗಳಾಗಿವೆ. ಹತ್ತು ಮಕ್ಕಳು. ನಾಲ್ಕು ಹೆಣ್ಣು ಮಕ್ಕಳು. ಮದುವೆಯಾಗಿ ಮೊಮ್ಮಕ್ಕಳನ್ನು ಕಾಣಲಿದ್ದಾರೆ. ಆರು ಗಂಡುಮಕ್ಕಳು. ಎಲ್ಲರಿಗೂ ಮದುವೆಯಾಗಿದೆ. ಉಳಿದ ವಿಚಾರಗಳೆಲ್ಲಾ ಸುಖವೇ.
ಒಂದು ಸಮಸ್ಯೆ ದಿನಾ ನನ್ನನ್ನು ಪೀಡಿಸುತ್ತಿದೆ. ಸಾಕಷ್ಟು ಆಸ್ತಿ ಇದ್ದುದರಿಂದ ಗಂಡುಮಕ್ಕಳೆಲ್ಲ ಮನೆಯಲ್ಲೇ ಇದ್ದಾರೆ.
ಅದೇ ನನಗೆ ಬಂದ ಸಮಸ್ಯೆ. ನನ್ನ ಹೆಂಡತಿ ಗಂಡುಮಕ್ಕಳು, ಸೊಸೆಯಂದಿರನ್ನು ಕೂಡಿಕೊಂಡು ಕೆಲವು ವರ್ಷಗಳಿಂದ ನನ್ನನ್ನು ಬಹಳ ಹೀನಾಯವಾಗಿ ಪರಿಗಣಿಸುತ್ತಿದ್ದಾಳೆ. ತಾನೊಂದೇ ಅಲ್ಲ, ನನ್ನ ಮಕ್ಕಳು, ನನ್ನ ಸೊಸೆಯಂದಿರು ನನ್ನ ಮೇಲೆ ಎರಗುವಂತೆ ಆಗಾಗ್ಯೆ ಷಡ್ಯಂತ್ರವನ್ನು ಹುನ್ನಾರ ಹಾಕುತ್ತಾಳೆ.
ನನ್ನ ಚಿಕ್ಕ ವಯಸ್ಸಿನಿಂದ ಸಾಕಷ್ಟು ಆಸ್ತಿ ಮಾಡಿದೆ. ಒಳ್ಳೆಯ ಟೆರೇಸ್ ಮನೆಯನ್ನು ಕಟ್ಟಿದೆ. ಇವೆಲ್ಲವೂ ನನ್ನಿಂದಲೇ ಆಗಿದ್ದು. ಇದರ ಒಳಗೆ ಮತ್ತು ಮೇಲೆ ಹತ್ತು ಮಕ್ಕಳು. ಇದು ನನ್ನಿಂದಲೇ ಆಗಿದೆ ಎಂದು ನಾನು ಅಹಂಕಾರ ಪಡುವುದಿಲ್ಲ. ಅವು ಭಗವಂತ ಕೊಟ್ಟಿದ್ದು. ಆ ಹೊತ್ತಿನ ನನ್ನಾಕೆಯ ಹತ್ತು ಬಸಿರು, ಬಾಣಂತನ ಎಲ್ಲಾ ಕೆಲಸ, ಖರ್ಚುಗಳನ್ನು ನಾನೇ ನಿಭಾಯಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ ನನ್ನ ಮಾವನ ಮನೆಯವರು ಕಡುಬಡವರು. ಕೆಲವೊಮ್ಮೆ ಅವಳ ಅಪ್ಪನ ಮನೆಗೆ ನಾನು ದುಡಿದು ತಂದ ಅಕ್ಕಿಯನ್ನೇ ನನ್ನಾಕೆ ಕದ್ದು ಕಳಿಸಿದ್ದು ನನಗೆ ಗೊತ್ತಾಗದೆ ಇರಲಿಲ್ಲ. ಕೇಳಿದ್ದರೆ ನಾನೇ ಅವರ ಮನೆ ಹೊತ್ತೊಯ್ದು ಕೊಟ್ಟು ಬರಿತ್ತಿದ್ದೆ. ಏಕೆಂದರೆ ನನ್ನ ಮಾವ ನನಗೆ ಒಂದು ಹೆಣ್ಣನ್ನು ಕೊಟ್ಟಿರದಿದ್ದರೆ ನನಗೆ ಮನೆಯಲ್ಲಿ ಮಕ್ಕಳೇ ಆಗುತ್ತಿರಲಿಲ್ಲ.
ನಾನು ಆಸ್ತಿ, ಮನೆ, ಮಕ್ಕಳು ಮತ್ತು ಅವರ ನಿಗಾ ಮಾಡುವಾಗ, ದೊಡ್ಡ ಮಾಡುವಾಗಲೆಲ್ಲಾ ನನ್ನವಳು ನನ್ನನ್ನು ಅತಿ ಪ್ರೀತಿಯಿಂದ ನೋಡುತ್ತಿದ್ದಳು. ನನಗೆ ಮನೆಯಲ್ಲಿ ಬಹಳ ಗೌರವ ಇತ್ತು. ಆಗ ನಮ್ಮಿಬ್ಬರ ಪ್ರಾಯವೂ ಹಾಗಿತ್ತು. ಯಾರನ್ನು ಕಂಡರೂ ಹಲ್ಲು ಕಿರಿಯುವ ಕಾಲ.
ಮಕ್ಕಳು ದೊಡ್ಡ ಆದದ್ದೇ ನನಗೆ ಮುಳುವಾಯಿತು. ನನ್ನವಳು ಮಕ್ಕಳೆದುರು ನನ್ನನ್ನು ಹಿಯಾಳಿಸಲು ಪ್ರಾರಂಭಿಸಿದಳು. ನನ್ನ ಹೆಣ್ಣು ಮಕ್ಕಳು ನನ್ನ ಪರವಾಗಿಯೇ ಇದ್ದರು. ಏನು ಮಾಡುವುದು ಅವರು ಇರುವುದು ಅವರ ಗಂಡನ ಮನೆಯಲ್ಲಿ . ಅಯ್ಯೋ .. ನನ್ನ ಗ್ರಹಚಾರವೇ !. ಇಷ್ಟು ಹೊತ್ತಿಗೆ ನಮ್ಮ ದಾಂಪತ್ಯಕ್ಕೆ ಮೂವತ್ತರ ಮುಪ್ಪು ಬಂದು ಹೋಗಿತ್ತು.
ಯಾರೋ ನನ್ನ ಗೆಳೆಯರು ಹೇಳಿದರು. " ಮಕ್ಕಳು ಮಾಡುತ್ತಾರೆ ಸುಮ್ಮನೆ ಮೂಲೆಯಲ್ಲಿ ಕುಕ್ಕರಿಸಿ ಎಂದು ಈಗ ನಿನ್ನ ಹೆಂಡತಿ ಹೇಳುತ್ತಾಳೆ. ಗಂಡುಮಕ್ಕಳಿಗೆ ಮದುವೆ ಮಾಡಿಬಿಟ್ಟರೆ ಹೇಗೂ ಆರು ತಿಂಗಳಲ್ಲಿ ಅತ್ತೆ - ಸೊಸೆ ಕದನ ಪ್ರಾರಂಭವಾಗುತ್ತದೆ. ಆಗ ನಿನ್ನ ಗಂಡುಮಕ್ಕಳು ಅವರ ಹೆಂಡತಿಯ ಜೊತೆಗೆ ಸೇರಿಕೊಳ್ಳುತ್ತಾರೆ. ತಾಯಿಯ ಪಡೆಯನ್ನು ಬಿಡುತ್ತಾರೆ. ಆಗ, ಮಕ್ಕಳು ಮಾಡುತ್ತಾರೆ, ಮೂಲೆಯಲ್ಲಿ ಕುಕ್ಕರಿಸಿ ಎಂದು ಹೇಳಿದ ನಿನ್ನ ಹೆಂಡತಿ ಅದೇ ನಾಲಿಗೆಯಿಂದಲೇ ' ಸಾಕು... ಸಾಕು........ ಅವರು ಮಾಡಿದಷ್ಟನ್ನು ಉಳಿಸಿಕೊಂಡು ಹೋಗಿ ಸಾಕು ' ಎಂದು ಮಕ್ಕಳ ವಿರುದ್ಧ ಮಾತನಾಡುತ್ತಾಳೆ. ನಿನ್ನ ಮಗ್ಗುಲಿಗೆ ಬರುತ್ತಾಳೆ." ಎಂದು ಸಲಹೆ ಕೊಟ್ಟರು.
ಓಹೋ .. ಇದು ಮಕ್ಕಳಿಗೆ ಬೆಚ್ಚಗೆ ಮಾಡುವುದಲ್ಲ. ನನಗೆ ಬೆಚ್ಚಗಿರುವುದಕ್ಕೆ ಹೇಳಿದ ಉಪಾಯ ಎಂದು ಖುಷಿಪಟ್ಟೆ. ಹಾಗೆಯೇ ಮೂರೇ ವರ್ಷಗಳಲ್ಲಿ ನನ್ನ ಆರೂ ಗಂಡುಮಕ್ಕಳಿಗೆ ಕಸರತ್ತಿನಿಂದ ಮದುವೆ ಮಾಡಿದೆ. ಇಲ್ಲಿಗೆ ನನ್ನ ದಾಂಪತ್ಯಕ್ಕೆ ನಲವತ್ತರ ಹಳತು. ಇನ್ನು ಅದು ' ನಲವತ್ತರ ಹರೆಯ ' ಎಂದು ಭಾವಿಸಿಕೊಂಡೆ. ನಾನೂ ನನ್ನ ಹಣ್ಣು ಕೂದಲಿಗೆ hair - dye ಮಾಡಿಸಿಕೊಂಡೆ. ನನ್ನ ಹೆಂಡತಿಯ ತಲೆಕೂದಲಿಗೂ -- ಆಕೆ ಬೇಡವೆಂದರೂ -- ನಾನೇ hair - dye ಮಾಡಿದೆ. ಮತ್ತೆ ಹರೆಯ ಬಂತು ಎಂದ ಮೇಲೆ ಇಬ್ಬರೂ ಟಾಕುಟೀಕು ಇರಬೇಕಲ್ಲಾ.
ಅಯ್ಯೋ... ದೇವರೇ.... ಕೊನೆಗೆ ನಡೆದದ್ದೇ ಬೇರೆ. ನನ್ನ ಸ್ನೇಹಿತರು ಹೇಳಿದ ಹಾಗೆ ನಮ್ಮ ಮನೆಯಲ್ಲಿ ಅತ್ತೆ - ಸೊಸೆಯಂದಿರಿಗೆ ಜಗಳ ಬೀಳಲೇ ಇಲ್ಲ. ನನ್ನ ಹೆಂಡತಿಗೆ ನನ್ನನ್ನು ಮೂಲೆಗೆ ತಳ್ಳಬೇಕು, ತಾನು ಮನೆಯಲ್ಲಿ ಆಡಳಿತ ನಡೆಸಬೇಕು, ತಾನೊಬ್ಬಳೇ ಮೆರೆಯಬೇಕು ಎನ್ನುವುದೇ ಅವಳ ಘಟ್ಟಿ ನಿರ್ಧಾರ. ಈ ಅಮಲಿನಲ್ಲಿ ಸೊಸೆಯಂದಿರ ಮೇಲೆ ಹರಿಹಾಯುವ ಸನ್ನಿವೇಶ [ ನಾನೂ ಅದನ್ನೇ ಕಾಯುತ್ತಿದ್ದೆ ] ಬಹಳಷ್ಟು ಸಾರಿ ಬಂದರೂ ಅದನ್ನೆಲ್ಲಾ ಅದುಮಿಟ್ಟುಕೊಂಡು ನನ್ನನ್ನೇ ಮೆಟ್ಟುವ ಪ್ರಯತ್ನ ಮಾಡುತ್ತಿದ್ದಾಳೆ. ಇದು ಹತ್ತು ವರ್ಷಗಳಿಂದ ದಿನನಿತ್ಯದ ಧಾರಾವಾಹಿ. ನನ್ನ ಹೆಂಡತಿ, ಗಂಡುಮಕ್ಕಳು, ಸೊಸೆಯಂದಿರು, ಮಾತನಾಡಲು ಕಲಿತ ಮನೆಯ ಮೊಮ್ಮಕ್ಕಳು ಎಲ್ಲರೂ ಒಂದು ಕಡೆ. ನಾನೊಬ್ಬನೇ ಒಂದು ಕಡೆ.
ಮುಂಚಿನ ನನ್ನ ಪ್ರಯತ್ನ, ಅಂದು ಮನೆಯಲ್ಲಿ ನನಗಿದ್ದ ಗೌರವಗಳನ್ನು ಕಣ್ಣಾರೆ ಕಂಡಿದ್ದ ನನ್ನ ಹಳೆಯ ಗೆಳೆಯನೊಬ್ಬ ಮೊನ್ನೆ ತಾನೇ ನಮ್ಮ ಮನೆಗೆ ಬಂದಿದ್ದ. ನನ್ನ ಈ ಹತಾಶ ಸ್ತಿತಿಯನ್ನು ಕಂಡ. ಆಗ ನನಗೊಂದು ಸಲಹೆಯನ್ನು ಕೊಟ್ಟು ಹೋದ. ಬಹಳ ಒಳ್ಳೆಯ ಸಲಹೆ. ಸಂಸಾರವನ್ನು ಕಟ್ಟಿ ಬೆಳೆಸಿಕೊಳ್ಳುವ ಸಲಹೆ.
ಅವನ ಸಲಹೆ ಪ್ರಕಾರ ನಾನು ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದೇನೆ. ನನಗೀಗ ಎಪ್ಪತ್ತು ವರ್ಷ. ಮೊದಲನೆ ಮದುವೆ ನನ್ನ ಇಪ್ಪತ್ತನೇ ವಯಸ್ಸಿನಲ್ಲಾಗಿತ್ತು. ಆಸ್ತಿ - ಭವ್ಯ ಕಟ್ಟಡದ ವಾಸದ ಮನೆಯನ್ನು ನನ್ನ ಹೆಂಡತಿ, ಅವಳ ಮಾತಿನಂತೆ ಕುಣಿಯುವ ಗಂಡುಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ನನಗೆ ಕೊಡುವುದಿಲ್ಲ. ನನಗೆ ಗೊತ್ತು. ಆದರೆ ನಾನು ಆ ಮನೆಯನ್ನು ಬಿಟ್ಟು ಅತ್ತಿತ್ತ ಹಂದಾಡುವುದಿಲ್ಲ. ಬರುವ ಹೆಂಡತಿಯು ಅದೇ ಮನೆಯಲ್ಲಿ ವಾಸವಾಗಿರಬೇಕು. ಮನೆಯಲ್ಲಿ ಎಲ್ಲಿ, ಹೇಗೆ ಎಂಬುದನ್ನು ಮದುವೆಯಾದ ಮೇಲೆ ಆಕೆಗೆ ತಿಳಿಸುತ್ತೇನೆ. ಆಕೆ ಭಯಪಡಬೇಕಾಗಿಲ್ಲ. ಏಕೆಂದರೆ ನಾನು ಹಲವು ಲಕ್ಷ ರುಪಾಯಿಗಳನ್ನು ಕೂಡಿಟ್ಟುಕೊಂಡಿದ್ದೇನೆ. ನಾನು ಮುದುಕನಾದರೇನಂತೆ. ನಾನು ಸತ್ತಮೇಲೆ ನನ್ನ ಹಣಕ್ಕೆ [ ಹುಷಾರ್..... ಹೆಣಕ್ಕೆ ಅಲ್ಲ. ] ಭಾರತದಲ್ಲಿ ಎಲ್ಲಿ ಹೋದರೂ ಬೆಲೆ ಇದೆ. ನನ್ನ ಬರುವ ಹೆಂಡತಿ ನಾನು ಕೂಡಿಟ್ಟ ಧನದೊಂದಿಗೆ ಬಿಂದಾಸ್ [ ಐಷಾರಾಮ ] ಇರಬಹುದು. ಅವಳಿಗೂ ಭಗವಂತ ಮಕ್ಕಳನ್ನು ಕೊಟ್ಟಾನು. ಏಕೆಂದರೆ ನಾನು ದೇವರನ್ನು ನಂಬಿದವ. ಹಾಗಂತ ' ಹರೇ ರಾಮ ' ಎಂದು ಮೂಗುಮುಚ್ಚಿ ಕೈ ಮುಗಿದುಕೊಂಡು ಕೂರುವ ಕಾಲ ನನ್ನದು ಎಂದು ಭಾವಿಸುವ ಜಡಭರತತ್ವ ನನ್ನದಲ್ಲ.
ನನಗೊಂದು ಹೆಣ್ಣು ಹುಡುಕಿ ಕೊಡಿ. ಕನ್ಯಾ ಹೇಗಿರಬೇಕು ಕೇಳಿ. ನನ್ನ ಹೆಂಡತಿಗೆ ವರುಷ 68 . ಅವಳಿಗಿಂತ ಕನಿಷ್ಠ ಮೂರು ವರ್ಷ ಚಿಕ್ಕವಳಿರಬೇಕು. ಸುಂದರಿಯಾಗಿರಬೇಕು ಎಂದೇನೂ ಇಲ್ಲ. ಯಾರೂ ಮದುವೆ ಆಗಲು ಇಚ್ಚಿಸದೆ ಕೈ ಬಿಟ್ಟ, ಮೂಗು ಹರುಕ, ತುಟಿಹರುಕ, ತಲೆಯ ಕೂದಲು ಪೂರ್ತಿ ಉದುರಿದ ..... ಹೀಗೆ ಈ ರೀತಿ ಯಾವುದೇ ಊನ ಇರಬಹುದಾದ ' ಹುಡುಗಿಯಾದರೂ 'ಸರಿಯೇ. ಮೈ ತುಂಬಾ ಬಂಗಾರ ಹಾಕುತ್ತೇನೆ. ನಿಜ ಬಂಗಾರ. one - gram gold ಅಲ್ಲ. ಬಹಳ ವರ್ಷಗಳಿಂದ ನನ್ನ ಹೆಂಡತಿ ಮಕ್ಕಳಿಗೆ ಗೊತ್ತಾಗದಂತೆ ಚಿನ್ನವನ್ನು ಕೂಡಿಟ್ಟು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದೇನೆ. ನಿಜ ಹೇಳಬೇಕೋ........ ನನ್ನನ್ನು ಈ ವಯಸ್ಸಿನಲ್ಲಿ ಮದುವೆಯಾಗ ಬರುವವಳು ಅಧ್ರುಷ್ಟವಂತೆ. ನನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ನನ್ನ ಮೊದಲನೇ ಹೆಂಡತಿಗೆ ಕೊಡಲು ನನ್ನಲ್ಲಿ ಇದ್ದಿರದ ಹಣ ಮತ್ತು ಬಂಗಾರ ನನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ಇದೆ. ನನಗೆ ಈ ಇಳಿವಯಸ್ಸಿನಲ್ಲಿ ಬೇರೆ ಯಾವುದೇ ವಾಂಛೆ, ಕಾಮ ನೆ ಇಲ್ಲ.
ಇರುವುದು ಒಂದೇ ಗುರಿ. " ನನ್ನ ಮೊದಲನೇ ಹೆಂಡತಿಯನ್ನು ಹೆದರಿಸಲಿಕ್ಕೆ ಒಂದು ಎರಡನೆಯ ಹೆಂಡತಿ. ಅಷ್ಟೆ. ".
ತಾರೀಖು : 24 - 4 -2015 .
************************************************************************************************************
ಈ ಕಥೆಯಲ್ಲಿ ನಾನು ತಂದ ವಿಷಯಗಳು ಇಷ್ಟು. + ಮದುವೆಯಾದ ಪ್ರಥಮ ವರ್ಷಗಳಲ್ಲಿ ದಾಂಪತ್ಯ ಹೇಗಿರುತ್ತದೆ ಮತ್ತು ದ್ವಿತಿಯಾರ್ಧದಲ್ಲಿ ಹೇಗಿರುತ್ತದೆ?. + ಸಾಮಾನ್ಯವಾಗಿ [ ಎಲ್ಲ ಕುಟುಂಬದಲ್ಲೂ ಅಲ್ಲ.] ಕುಟುಂಬದ ಯಜಮಾನನ ಸ್ಥಿತಿ ಒಂದು ಹಂತದಲ್ಲಿ ಯಾವ ಮಟ್ಟಕ್ಕೆ ಕನಿಷ್ಟವಾಗುತ್ತದೆ ?. + ಕುಟುಂಬದಲ್ಲಿ ಗಂಡ ಹೆಂಡತಿಯ ನಡುವೆ ಶೀತಲ ಸಮರ ಹೇಗಿರುತ್ತದೆ ?. ಗಂಡ ಹೆಂಡತಿಯನ್ನು ಮಟ್ಟಲು ಹಾಗೂ ಹೆಂಡತಿಯು ಗಂಡನನ್ನು ಮೆಟ್ಟಲು ಕುಟುಂಬದಲ್ಲಿ ಆಗಾಗ್ಯೆ ನಡೆಸುವ ಪ್ರಯತ್ನಗಳೇನು ?. + ನಮ್ಮ ಸಂಸಾರದಲ್ಲಿ ಬಿರುಕು ತಂದುಕೊಂಡು ನಾವು ಹಗುರವಾದರೆ ನಮಗೆ ಪುಕ್ಕಟ್ಟೆ ಸಲಹೆ ಕೊಟ್ಟು ಚೆಂದ ನೋಡುವವರಿರುತ್ತಾರೆ. + ವ್ಯಕ್ತಿಯೊಬ್ಬ ತನ್ನ ಹಣ ಮತ್ತು ಬಂಗಾರ ಮುಂತಾದ ಕೇವಲ ಆರ್ಥಿಕ ಶಕ್ತಿಯಿಂದ ಏನನ್ನಾದರೂ ಮಾಡಬಹುದು ಎಂದು ಯೋಚಿಸುವ ಭ್ರಮೆ. + ವಿರೂಪವಾದ ಮಾತ್ರಕ್ಕೆ ಹೆಣ್ಣೊಂದು ಹೇಗೂ ಹಗುರವಾಗಿರುತ್ತಾಳೆ ಎನ್ನುವ ತಪ್ಪು ಕಲ್ಪನೆ. + ತನ್ನ ಹೆಂಡತಿಯನ್ನು ಹದ್ದುಬಸ್ತಿನಲ್ಲಿ ಇಡಲು ಗಂಡನೊಬ್ಬ ಮಾಡುವ ಕೆಟ್ಟ ಯೋಚನೆ . ಹಾಗೆಯೇ ಹೆಂಡತಿಯೂ ಕೂಡಾ.
*********************************************************************************************************
No comments:
Post a Comment
Note: only a member of this blog may post a comment.