-ಎಂ. ಗಣಪತಿ ಕಾನುಗೋಡು
ವಿವಾಹ ವಿಚ್ಛೇದನ ಹೊಸತಲ್ಲ. ಹಿಂದಿನ ಕಾಲದಲ್ಲಿ ವಿಚ್ಛೇದನ ಹೆಚ್ಚಾಗಿ ಪುರುಷ ಮೂಲವಾಗಿತ್ತು. ಪ್ರಸ್ತುತ ಮುಂದುವರೆದ ಸನ್ನಿವೇಶದಲ್ಲಿ ಪತಿಯರಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಪತ್ನಿಯರೇ ವಿಚ್ಛೇದನ ಬಯಸುವುದು ಕಂಡುಬರುತ್ತಿದೆ. ನವವಿವಾಹಿತರಲ್ಲಿ ವಿವಾಹವಾದ ಒಂದು ತಿಂಗಳು, ವರ್ಷದೊಳಗೆ ಭಿನ್ನಾಭಿಪ್ರಾಯ ಹುಟ್ಟಿಕÉೂಂಡಿರುತ್ತದೆ. ಇದಕ್ಕೆ ಕಾರಣಗಳು ಹಲವಾರು.
ಯುವಕ ಯುವತಿಯರಿಬ್ಬರು ಪರಸ್ಪರ ನಿರೀಕ್ಷೆಗಳ ಭ್ರಮೆಯಲ್ಲಿ ವಿವಾಹವಾಗಿರುತ್ತಾರೆ. ಅವುಗಳ ತುಲನೆ ವಿವಾಹದ ಮೊದಲನೆ ದಿನದಿಂದಲೇ ಇಬ್ಬರಿಂದಲೂ ಪರಸ್ಪರ ನಡೆಯುವುದಕ್ಕೆ ಪ್ರಾರಂಭವಾಗುತ್ತದೆ. ಯಾರ ನಿರೀಕ್ಷೆಗೆ ಯಾರೂ ನಿಲುಕುವುದಿಲ್ಲ. ಪರಸ್ಪರ ಭಿನ್ನಾಭಿಪ್ರಾಯಕ್ಕೆ ಇದೇ ಮೊದಲ ಮೆಟ್ಟಿಲು.
ಹೆಣ್ಣುಮಕ್ಕಳಿಗೆ ಈ ವಿಷಯದಲ್ಲಿ ಕಾನೂನಿನ ಸವಲತ್ತು ಹಿಂದಿನಿಗಿಂತ ಈಗ ಹೆಚ್ಚಾಗಿದೆ. ವಿರಸಕ್ಕೆ ಕಾರಣವೇನಿದ್ದರೂ ವರದಕ್ಷಿಣೆಯ ಕಾನೂನು ವರದಕ್ಷಿಣೆಯ ವಿಚಾರವನ್ನೇ ಹುಟ್ಟುಹಾಕಿ ಪತಿಯ ಮತ್ತು ಅವರ ಪೋಷಕರ ಮಗ್ಗಲು ಮುರಿಯುವಲ್ಲಿ ಬಳಕೆಯಾಗುತ್ತಿದೆ. ದುರುಪಯೋಗವಾಗುತ್ತಿದೆ ಕೂಡಾ. ತಂದೆಯ ಮನೆಯ ಆಸ್ತಿಯಲ್ಲಿ ಸಮಹಕ್ಕನ್ನು ಪಡೆದ ನಂತರವೂ ಗಂಡ ಬೇಡವೆಂದೆನಿಸಿದರೂ ಅವನ ಆಸ್ತಿ ಮತ್ತು ಸಂಪತ್ತು ಬೇಡವೆನಿಸುವುದಿಲ್ಲ. ಅದರಲ್ಲಿ ಪಾಲು ಕೇಳುವಷ್ಟು ಕಾನೂನಿನ ಬೆಂಬಲ ಅವಳಿಗಿದೆ. ಮಕ್ಕಳಿದ್ದರೆ ಮಕ್ಕಳ ಪೋಷಣೆ ತನ್ನ ಬದುಕಿನ ರಕ್ಷಣೆಗೆಂದು ಗಂಡನಿಂದ ಹಲವು ಲಕ್ಷ ರೂಪಾಯಿಗಳನ್ನು ದೋಚುವ ಸ್ಥಿತಿಯಲ್ಲಿ ಅವಳಿದ್ದಾಳೆ. ಇದು ವಿಚ್ಛೇದನದತ್ತ ಮುನ್ನುಗ್ಗುವಲ್ಲಿ ಮಹಿಳೆಗೆ ಇರುವ ಕಾನೂನಿನ ಬೆಂಬಲ.
ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸರಿಸಮಾನಾಗಿ ಶಿಕ್ಷಣವನ್ನು ಹೊಂದಿ ಹೆಚ್ಚು ಸಂಪಾದಿಸುತ್ತಿದ್ದಾರೆ. ಕೂಡಿ ನಡೆಯುವಲ್ಲಿ ಅಗತ್ಯವಾದ ಶ್ರೇಷ್ಠತೆ ಮತ್ತು ಅಧೀನತೆಯ ನಡವಳಿಕೆ ಇಲ್ಲಿ ಶೂನ್ಯ. ಯಾರಿಗೆ ಯಾರೂ ಸೋತು ಸರಿಯುವುದಿಲ್ಲ. ಅಂತಿಮ ಪರಿಣಾಮ ವಿಚ್ಛೇದನ.
ವಿವಾಹದ ಹೊಸತರಲ್ಲಿ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ವಾಸ್ತವಿಕ ಆತ್ಮೀಯತೆ ಬೆಳೆದಿರುವುದಿಲ್ಲ. ದುಡಿಮೆಗಾಗಿ ದಿನದ ಬಹಳ ಕಾಲ ಗಂಡ ಮತ್ತು ಹೆಂಡತಿ ದೂರವಿರುವುದರಿಂದ ಪರಸ್ಪರ ಚಾರಿತ್ರಿಕವಾಗಿ ಒಮ್ಮೊಮ್ಮೆ ಸಂಶಯ ಪಡುವ ಸಂದರ್ಭವೂ ಇದೆ. ಈ ಬಿರುಕಿನ ಅಂತಿಮ ಘಟನೆ ವಿಚ್ಛೇದನ.
ಸಂಪಾದನೆಯ ಅಮಲಿನಲ್ಲಿ ಕೆಲವು ಯುವಕರು ನಗರದಲ್ಲಿ ಡ್ರಗ್ ಅಡಿಕ್ಷನ್, ಕುಡಿತ ಮುಂತಾದ ದುಶ್ಚಟಗಳಿಗೆ ದಾಸರಾಗಿದ್ದಾರೆ. ಇವರನ್ನು ತಿದ್ದಲಾಗದೆ, ಕೊನೆಗೆ ಸಹಿಸಲಾಗದೆ ಅವರ ಪತ್ನಿಯರು ಹತಾಶರಾಗುತ್ತಾರೆ. ಈ ಬೇಗುದಿಯ ಅಂತ್ಯವೇ ವಿಚ್ಛೇದನ.
ಇಂದಿನ ಕುಟುಂಬಗಳಲ್ಲಿ ಮಕ್ಕಳಿಗೆ ಸಹಬಾಳ್ವೆಯ ಮನೋಭಾವವನ್ನು ಕಲಿಸುವ ಅವಕಾಶ ಕಡಿಮೆ. ಶಿಕ್ಷಣದ ಕಾರಣದಿಂದ ಅವರ ಬುದ್ಧಿ ಬೆಳವಣಿಗೆಯ ಪ್ರಾರಂಭದಿಂದ ಕುಟುಂಬದ ಹೊರಗೆ ಬೆಳೆದು ವಿವಾಹದ ಹಂತಕ್ಕೆ ಬಂದಿರುತ್ತಾರೆ. ಕುಟುಂಬದ ಹಿರಿಯರು-ಕಿರಿಯರು, ಹುಟ್ಟಿನ ನೆರೆಹೊರೆಯವರು, ಸಂಬಂಧಿಕರು ಎನ್ನುವ ಸಾಮಾಜಿಕ ಜೀವನದ ಪ್ರಾಥಮಿಕ ಸಂಘಗಳ ಒಡನಾಟವೇ ಇಂದಿನ ಯುವಜನತೆಗೆ ದೊರಕುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಅವರಿಗೆ ದೊರಕುವುದು ವಿಷಯಗಳ ಜ್ಞಾನವಷ್ಟೇ. ಬದುಕಿನ ಅರಿವಲ್ಲ. ಕೂಡಿ ಬದುಕುವ ಬುದ್ಧಿ ಬರುವಷ್ಟರ ಹೊತ್ತಿಗೆ ವಿವಾಹ ವಿಚ್ಛೇದನದಂತಹ ಆಗಬಾರದ ಪ್ರಮಾದವೆಲ್ಲ ಆಗಿ ಯುವಜನರು ಮುದುಕರಾಗಿರುತ್ತಾರೆ.
ಈಗ ಕೇವಲ ಎರಡು ಅಥವಾ ಒಂದೇ ಮಗುವಾದ್ದರಿಂದ ತಾಯಿ ತಂದೆಯರು ಅವರನ್ನು ಅತೀ ಮುದ್ದಿನಿಂದ ಸಾಕಿರುತ್ತಾರೆ. ಮುದ್ದಿನ ಸಂವೇದನೆಯಲ್ಲಿ ಬದುಕಿನ ಕಲೆಯ ನೆಲೆ ಕಮರಿ ಹೋಗಿದೆ. ಗಂಡು-ಹೆಣ್ಣು ಮಕ್ಕಳು ದಾಂಪತ್ಯದಲ್ಲಿ ಹೊಂದಿಕೊಳ್ಳದೆ ಸಿಡಿದು ಹೋಗಲು ಇದು ಪ್ರಮುಖ ಕಾರಣ.
ಇಂದಿನ ದಂಪತಿಗಳು ಯೋಚಿಸಬೇಕಾದದ್ದಿಷ್ಟೇ. ಇದ್ದಲ್ಲಿಯೇ ಕಾಡಿ ಕೂಡಿ ಬಾಳ್ವೆ ನಡೆಸಬೇಕು. ಹೊಂದಿಕೊಳ್ಳುವ ಮನೋಭಾವ ಇಲ್ಲದವರು ಯಾರನ್ನ ಬಿಟ್ಟು ಯಾರನ್ನ ಕೂಡಿಕೊಂಡರೂ ಇದೇ ಪಾಡು. ಹೊಂದಿಕೊಂಡು ಮುನ್ನಡೆಯಬೇಕೆಂದಿದ್ದರೆ ಒಬ್ಬರಿಗೆ ಒಬ್ಬರು ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಗ್ಗಿ ನಡೆಯಬೇಕಾದದ್ದು ಅಗತ್ಯ. ಪರಸ್ಪರ ವಿಶ್ವಾಸ ಮುಖ್ಯ. ಸುಖಕ್ಕಾಗಿ ಪರದಾಡಿ ಮುದುಕರಾಗುವ ಮುಂಚೆ ಇದ್ದಲ್ಲಿಯೇ ಸಾವರಿಸಿಕೊಂಡು ನೆಮ್ಮದಿಯಿಂದ ಇರುವುದು ಲೇಸು. ಸುಖ ಎನ್ನುವುದು ಅವರವರ ಮನೋಗತಿಗೆ ಬಿಟ್ಟ ವಿಚಾರ.
ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771
No comments:
Post a Comment
Note: only a member of this blog may post a comment.