Wednesday, 15 June 2016

ಕದಿಯುವಿಕೆ ---- ಒಂದು ಮಾನಸಿಕ ರೋಗ

                                                                          
                                                                                            ~~~~~ ಎಂ. ಗಣಪತಿ ಕಾನುಗೋಡು.

ಕದಿಯುವುದು, ಸುಳ್ಳು ಹೇಳುವುದು, ಹಚ್ಚುಗುಳಿ ಮಾಡುವುದು, ತಾನು ಏನಿಲ್ಲ ಎಂದು ಕೊರಗುವುದು ಇವೆಲ್ಲವೂ ಒಂದು ಮಾನಸಿಕ ರೋಗ. ಈ ಪ್ರಪಂಚದಲ್ಲಿ ಎಲ್ಲರೂ ಹುಚ್ಚರು. ಎಲ್ಲರಿಗೂ ಒಂದೊಂದು ಥರದ ಹುಚ್ಚು. ಕೆಲವರದ್ದು ಸಹ್ಯವಾದ ಹುಚ್ಚು. ಇನ್ನು ಕೆಲವರದ್ದು ಅಸಹ್ಯವಾದ ಹುಚ್ಚು. ಈ ತೆರನ ರೋಗವೂ ಈ ಹುಚ್ಚುಗಳಲ್ಲಿಯೇ ಅಡಕವಾದದ್ದು.

ಕದಿಯುವುದು ಕೆಲವರಿಗೆ ಒಂದು ಅಭ್ಯಾಸವೆಂದರೂ ಸರಿಯೇ, ಹವ್ಯಾಸವೆಂದರೂ ಸರಿಯೇ. ವಿದ್ಯೆ, ಸಾಕಷ್ಟು ಸಂಬಳ ತರುವ ದೊಡ್ಡ ಉದ್ಯೋಗ, ಸಾಕಷ್ಟು ಆದಾಯ ತರುವ ಉದ್ದಿಮೆ, ಬೇಕಾದಷ್ಟು ಬಂಗಾರ ಬೆಳ್ಳಿ,ಹಣದಿಂದ ಕೂಡಿದ ಸಂಪತ್ತು, ಭೂಮಿ, ಸೈಟುಗಳಿಂದ ಕೂಡಿದ ಹೇರಳ ಆಸ್ತಿ ಇದ್ದರೂ ಕೂಡ ಇಂಥವರು ಸಣ್ಣ ಸಣ್ಣ ಕಳ್ಳತನವನ್ನು ಮಾಡುತ್ತಾರೆ. ದೊಡ್ಡ ಕಳ್ಳತನವನ್ನು ಅವರು ಮಾಡುವುದಿಲ್ಲ. ಅದಕ್ಕೆ ಹೆಚ್ಚು ತ್ರಾಸು ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಂದು ಅದರ ಅಗತ್ಯವೂ ಅವರಿಗೆ ಇಲ್ಲ. ಅಂಥವರಿಗೆ ಬೇರೆ ಯಾವುದರಿಂದಲೂ ಸಮರ್ಪಕ ಮನಃಶಾಂತಿ ದೊರೆಯುವುದಿಲ್ಲ. ತಿಂದ ಅನ್ನ ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ. ಹೀಗೆ ಕದಿಯುವುದರಿಂದ ಮಾತ್ರ ಅವರ ಚಿತ್ತಸ್ವಾಸ್ತವ ಉಳಿದುಕೊಳ್ಳುತ್ತದೆ. ಅದಕ್ಕಾಗಿಯಷ್ಟೇ ಅವರು ಕದಿಯುತ್ತಾರೆ. ಕದಿಯಲ್ಪಟ್ಟ ವಸ್ತು ನಿಮಗೆ ದೊಡ್ಡದಿರಬಹುದು. ಅವರಿಗೆ ಅದು ಯಕಶ್ಚಿತ.

ಇದು ಒಂದು ರೀತಿಯ ಕಾಯಿಲೆ. ಇದಕ್ಕೆ ಮನೋವೈದ್ಯಕೀಯ ಶಾಸ್ತ್ರದಲ್ಲಿ ' ಕ್ಲೆಪ್ಟೋಮೇನಿಯಾ ' ಎನ್ನುತ್ತಾರೆ. ಇಂಥಹ ರೋಗ ಇದ್ದವರಲ್ಲಿ ಮೂರನೆಯ ಎರಡು ಭಾಗ ಹೆಂಗಸರು ಎನ್ನುವುದು ವಿಶೇಷ. ಈ ರೋಗಕ್ಕೆ ಗುರಿಯಾದವರಲ್ಲಿ ಆತಂಕ, ಉನ್ಮಾದ, ವ್ಯಕ್ತಿತ್ವದೋಷ ಮತ್ತು ದುಶ್ಚಟಗಳು ಕಂಡುಬರುತ್ತವೆ. ಅಪಘಾತದಿಂದ ಮೆದುಳಿಗೆ ಪೆಟ್ಟು ಬಿದ್ದವರು ಈ ಕಾಯಿಲೆಗೆ ಗುರಿಯಾಗುವ ಸಾಧ್ಯತೆ ಇದೆ.

ಕೃತಿಚೌರ್ಯವೂ ಒಂದು ಈ ತೆರನ ಕಳ್ಳತನ. ತಮಗೂ ಒಂದು ಯೋಗ್ಯತೆಯನ್ನು ದೇವರು ಕೊಟ್ಟಿದ್ದಾನೆ, ಅದನ್ನು ತಾವು ಸರಿಯಾಗಿ ಉಪಯೋಗಿಸಿಕೊಂಡು ಅದಕ್ಕೆ ತುಕ್ಕು [ ರಷ್ಟು ] ಹಿಡಿಯದಂತೆ ಕಾಪಾಡಿಕೊಳ್ಳಬೇಕು ಎನ್ನುವ ವಾಸ್ತವ ಜ್ಞಾನ ಅವರಿಗೆ ಇರುವುದಿಲ್ಲ. ತನ್ನ ಒಳಗಿನ ಯೋಗ್ಯತೆ ಗ್ರಾಹ್ಯವಾದುದೋ ಅಲ್ಲವೋ ಎನ್ನುವುದನ್ನು ಮತ್ತೊಬ್ಬರ ಎದುರಿಗೆ ಮಂಡಿಸಿ ತಾನು ಪಕ್ಕಾ ಮಾಡಿಕೊಳ್ಳಬೇಕು ಎನ್ನುವ ಪ್ರಜ್ಞೆ ಅವರಿಗೆ ಇದ್ದಂತೆ ಕಾಣುವುದಿಲ್ಲ. ಆದ್ದರಿಂದ ನಮ್ಮ ಕೃತಿಯನ್ನು ಯಾರಾದರೂ ಚೌರ್ಯ ಮಾಡಿದರೆ ಅದು ಅವರಿಗಿರುವ ಒಂದು ರೋಗವೆಂದು ನಾವು ಅವರ ಬಗ್ಯೆ ಕನಿಕರವನ್ನು ವ್ಯಕ್ತಪಡಿಸಬೇಕು. ಯಾರಾದರೊಬ್ಬ ವೈದ್ಯ ಅಂಥವರನ್ನು, ಅಂಥವರ ರೋಗವನ್ನು ಯಾವುದಾದರೂ ಒಂದು ಸಲ ಪತ್ತೆಹಚ್ಚಿ ಹಿಡಿದು ರೋಗಕ್ಕೆ ಮದ್ದನ್ನಿಟ್ಟು ಅಂತಹ ರೋಗಿಯನ್ನು ಸಮ [ ನೆಲಸಮ ! ] ಮಾಡುತ್ತಾನೆ. ಅಲ್ಲಿಯವರೆಗೂ ಕಾಯಬೇಕಷ್ಟೆ.

ಸುಳ್ಳು ಹೇಳುವುದು, ಹಚ್ಛುಗುಳಿ ಮಾಡುವುದೂ ಇಂಥಹುದೇ ಒಂದು ರೋಗ. ಅನಾವಶ್ಯಕವಾಗಿ ಸುಳ್ಳು ಹೇಳಿ ಕೆಲವರು, ವೃಥಾ ಒಬ್ಬರಿಂದೊಬ್ಬರಿಗೆ ಜಗಳ, ವೈಮನಸ್ಸು ಹಚ್ಚಿಹಾಕಿ ಇನ್ನು ಕೆಲವರು ಮನೋರಂಜನೆಯನ್ನು ಪುಕ್ಕಟ್ಟೆಯಾಗಿ ಪಡೆಯುವುದು, ಅಂಥಹವರಿಗೂ ಅದು ಒಂದು ರೋಗವೇ.

ನಮ್ಮ ಯೋಗ ಕನಿಷ್ಠವಾದಷ್ಟೂ ಅಂಥವರ ರೋಗ ಬಲಿಷ್ಟವಾಗುತ್ತದೆ. ಕದಿಸಿಕೊಳ್ಳುವವರು ನಾವಿದ್ದರೆ ಅವರು ಕದಿಯುತ್ತಾರೆ. ಕೇಳಿಸಿಕೊಳ್ಳುವವರು ನಾವಿದ್ದರೆ ಹೇಳುವವರು ಅವರಾಗುತ್ತಾರೆ.

No comments:

Post a Comment

Note: only a member of this blog may post a comment.