~ ~ ನಡೆದ ಒಂದು ಘಟನೆ.
~~~~~~~ ಎಂ. ಗಣಪತಿ ಕಾನುಗೋಡು.
ನಮ್ಮ ಸಾಗರದಲ್ಲಿ ಖಾಸಗಿ ಬಸ್ಸಿನವರ ದರ್ಭಾರೂ ಇದೆ. ಅವರಲ್ಲೊಂದು ಕ್ರಮ. ನಿಲ್ದಾಣಕ್ಕೆ ಬಸ್ಸು ಬರುವ ಮುಂಚೆಯೇ ಆ ಬಸ್ಸಿಗೆ ಪ್ರಯಾಣಕರನ್ನು ಕೂಡಿಸುವುದಕ್ಕಾಗಿಯೇ ಒಬ್ಬ ಏಜಂಟ ಇರುತ್ತಾನೆ. ಬಸ್ಸು ಬಂದ ಕೂಡಲೇ ಅವರನ್ನು ಒಳಗೆ ಹತ್ತಿಸಿ ಪ್ರತಿಯೊಬ್ಬರನ್ನೂ ವಿಚಾರಿಸಿ ತಾನೇ ಟಿಕೆಟ್ ಕೊಡುತ್ತಾನೆ. ನಂತರ ಬಸ್ಸಿನಿಂದ ಕೆಳಗೆ ಇಳಿದು ತನ್ನ ಟಿಕೆಟ್ ಬುಕ್ಕನ್ನು ಪರಿಶೀಲಿಸಿ ಒಟ್ಟು ಎಷ್ಟು ಸೀಟು [ ಪ್ರಯಾಣಿಕರ ಸಂಖ್ಯೆ ] ಆಯಿತೆಂದು ಲೆಕ್ಕ ಮಾಡಿಕೊಳ್ಳುತ್ತಾನೆ. ನಂತರ ಅದನ್ನು ಚೆಕ್ ಅಪ್ ಮಾಡಿಕೊಳ್ಳಲಿಕ್ಕಾಗಿ ಬಸ್ಸಿನಲ್ಲಿರುವ ಜನರನ್ನು ಲೆಕ್ಕ ಮಾಡಲು ಕಂಡಕ್ಟರನಿಗೆ ಹೇಳುತ್ತಾನೆ.
ಆ ದಿನ ಸಾಗರದಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು. ಅಂದೂ ಅವ ಹಾಗೆಯೇ ಮಾಡಿದ. ಆದರೆ ತನ್ನ ಟಿಕೆಟ್ಟಿನ ಲೆಕ್ಕ 42 . ಕಂಡಕ್ಟರನ ಜನರ ಲೆಕ್ಕ 43 . ಒಂದು ಸೀಟು ವ್ಯತ್ಯಾಸ. ಇನ್ನೆರಡು ಸಾರಿ ತನ್ನ ಟಿಕೆಟ್ ಸಂಖ್ಯೆಯನ್ನೇ ಲೆಕ್ಕ ಮಾಡಿಕೊಂಡ. ತನ್ನ ಲೆಕ್ಕ ಸರಿ ಇದೆ. ನಿನ್ನ ಜನರ ಲೆಕ್ಕ ಸರಿಯಾಗಿಲ್ಲವೆಂದು ಕಂಡಕ್ಟರನಿಗೆ ಬೆದರಿಸಿ ಪುನಃ ಲೆಕ್ಕ ಮಾಡಲು ಹೇಳಿದ. ಕಂಡಕ್ಟರನೂ ತಿರುಗಾ ಮುರುಗಾ ಎರಡೆರಡು ಸಾರಿ ಲೆಕ್ಕ ಮಾಡಿದ. ತನ ಲೆಕ್ಕ ಸರಿ ಇದೆ, ನಿನ್ನ ಲೆಕ್ಕ ಸರಿ ಇಲ್ಲವೆಂದು ಏಜಂಟನಿಗೆ ಗದರಿಸಿದ. ಅವನದು ಸರಿ ಇಲ್ಲ ಎಂದು ಅವನು, ಇವನದು ಸರಿ ಇಲ್ಲ ಎಂದು ಅವನು , ಹೀಗೆ ಒಬ್ಬರಿಗೊಬ್ಬರು ಅರ್ಧ ಗಂಟೆ ಪರಸ್ಪರ ತರಾಟೆಗೆ ತೆಗೆದುಕೊಂಡರು.
ಸರಿ, ಇಬ್ಬರೂ ಸೇರಿ ಪ್ರಯಾಣಿಕರನ್ನೇ ಕೇಳೋಣವೆಂದು ' ಯಾರಿಗೆ ಟಿಕೆಟ್ ಆಗಲಿಲ್ಲಾರೀ... ' ಎಂದು ಇಬ್ಬರೂ ಹತ್ತಾರು ಸಾರಿ ದೊಡ್ಡದಾಗಿ ಕಿರುಚಿದರು. ಯಾರೂ ಮಾತನಾಡಲಿಲ್ಲ. ಅಂದಾಗ ಎಲ್ಲರೂ ಟಿಕೆಟ್ ಪಡೆದುಕೊಂಡಿದ್ದಾರೆ ಎಂದಂತಾಯಿತು. ತಮ್ಮದು ಸರಿ ಇದೆ ಈ ಜನರೇ ಸರಿ ಇಲ್ಲ, ಬಾಯಿ ಇದ್ದರೂ ಸುಳ್ಳು ಬೊಗಳುತ್ತಾರೆ ಎಂದು ತಮ್ಮೊಳಗೆ ಬೈದುಕೊಳ್ಳುತ್ತಾ ಪ್ರಯಾಣಿಕರ ಟಿಕೆಟ್ಟನ್ನು ಒಂದು ಕಡೆಯಿಂದ ಪರಿಶೀಲಿಸುತ್ತಾ ಬಂದರು. ಅರರೆ... ಇಲ್ಲಿಯವರೆಗೆ ಎಲ್ಲರೂ ಟಿಕೆಟ್ ಪಡೆದುಕೊಂಡಿದ್ದಾರಲ್ಲಾ ಎಂದು ಗಿಜಿರಾದುಕೊಳ್ಳುತ್ತಾ ಮುಂದೆ ಸಾಗಿದರು. ಕೊನೆಯಲ್ಲಿ ಡ್ರೈವರನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನ ಎದುರು ಹೋದರು. ಶಿವಮೊಗಕ್ಕೆ ಹೋಗಲು ತಕ್ಕನಾಗಿ ಹಣವನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ಟಿಕೆಟ್ಟಿಗಾಗಿಯೇ ಕಾದು ಕುಳಿತಿದ್ದ ಆ ಪ್ರಯಾಣಿಕ ಅವರು ತನ್ನ ಎದುರು ಬಂದ ಕೂಡಲೇ ತನ್ನನ್ನು ಕೇಳುವುದರೊಳಗಾಗಿ ಹಣವನ್ನು ಕೊಟ್ಟು ತನಗೆ ಶಿವಮೊಗ್ಗಕ್ಕೆ ಟಿಕೆಟ್ ಕೊಡಿರೆಂದು ಸನ್ನೆ ಮಾಡಿದ.
ಅವನಿಗೆ ಬಾಯಿಯೂ ಬರುವುದಿಲ್ಲ. ಕಿವಿಯೂ ಕೇಳುವುದಿಲ್ಲ. ಪ್ರಮಾದವೆಂದರೆ ಏಜಂಟನು ಮೊದಲು ಟಿಕೆಟ್ ಕೊಡುವಾಗ ಅವನನ್ನು ಗಮನಿಸದೆ ದಾಟಿಕೊಂಡು ಹೋಗಿದ್ದ. ಅವ ಮರಳಿ ಬರುತ್ತಾನೆ ಎಂದು ಆ ಪ್ರಯಾಣಿಕ ಭಾವಿಸಿಕೊಂಡಿದ್ದ. ಸಮಯ ಬಂದಾಗ ಮೂಕ ತನ್ನ ಭಾಷೆಯಲ್ಲಿ ಸರಿಯಾಗಿ ಮಾತನಾಡಿದ. ಮಾತುಬಲ್ಲವ ತಾನು ಮಾಡಿದ ತಪ್ಪಿಗಾಗಿ ಅವನೆದುರು ಮೂಕನಾದ.
No comments:
Post a Comment
Note: only a member of this blog may post a comment.