Tuesday, 16 September 2014

ಹಾವು ಕಚ್ಚಿದ ಬಗ್ಯೆ ಮಾಹಿತಿ :


ತಾರೀಖು:೨೪-೬-೨೦೧೪

ಮಾಹಿತಿಯ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಗೆಣಸಿನಕುಣಿ. ಸಾಗರ.ಶಿವಮೊಗ್ಗ ಜಿಲ್ಲೆ. ಸರ್ಪವಿಷ ಪರಿಹಾರಕರು ಹಾಗೂ ನಾಟಿ ವೈದ್ಯರು.

ಒಂದನೇ ಕಂತು :

ಸರ್ಪ ವಿಷವನ್ನು ಸಿದ್ಧಿಸಿದ ಮಂತ್ರದಿಂದಲೂ, ಬೇರೆ ಹಾವಿನ ವಿಷವನ್ನು ಗಿಡಮೂಲಿಕೆ,ವನಸ್ಪತಿಗಳಿಂದ ಚಿಕಿತ್ಸೆ ಮಾಡಲಾಗುತ್ತದೆ. ಕಚ್ಚಬಹುದಾದ ಹಾವುಗಳಲ್ಲಿ ಸಾಮಾನ್ಯ ಹಾವುಗಳು, ನಾಗರ ಹಾವುಗಳು ಮತ್ತು ಮಂಡಲದ ಹಾವುಗಳು ಎಂದು ಮೂರು ರೀತಿಯಾಗಿ ವಿಂಗಡಿಸಬಹುದು.

ಸಾಮಾನ್ಯ ಹಾವು ಕಚ್ಚಿದಾಗ ಕಾಣುವ ಗುರುತುಗಳು :
೧. ಎರಡು ಹಲ್ಲುಗಳ ಗುರುತು ಕಂಡು ಬರುತ್ತವೆ.
೨. ಅರ್ಧ ಇಂಚು ಅಥವಾ ಮುಕ್ಕಾಲು ಇಂಚು ಅಂತರದಲ್ಲಿ ಸೂಜಿ ಚುಚ್ಚಿದಂತೆ ಎರಡೂ ಕಡೆ ರಕ್ತ ಬರುತ್ತಿರುತ್ತದೆ.
೩. ಕಚ್ಚಿದ ಸ್ಥಳದಲ್ಲಿ ಸುತ್ತ ಬಣ್ಣ ಬದಲಾಗುತ್ತದೆ.
೪. ಹಾವಿನ ವಿಷ ಮನುಷ್ಯನ ದೇಹಕ್ಕೆ ಸೇರಿದಾಗ ನರಮಂಡಲದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.
೫. ರಕ್ತ ಕೆಡುತ್ತದೆ ಮತ್ತು ಹೆಪ್ಪುಗಟ್ಟುತ್ತದೆ.
೫. ಹೃದಯಕ್ರಿಯೆ ಮಂದವಾಗುತ್ತದೆ.

ನಾಗರ ಹಾವು ಕಚ್ಚಿದಾಗ ಕಂಡು ಬರುವ ಲಕ್ಷಣಗಳು. :

೧. ಕಚ್ಚಿದ ಸ್ಥಳದಲ್ಲಿ ನೋವು ಅಥವಾ ಉರಿ ಕಾಣಿಸಿಕೊಳ್ಳುತ್ತದೆ.
೨. ಕಚ್ಚಿದ ಸ್ಥಳದಲ್ಲಿ ಬಣ್ಣ ಬದಲಾಗುತ್ತದೆ.
೩. ಮೈ ಜಡವಾಗುತ್ತದೆ.
೪. ಮೈ ಬೆವರುತ್ತದೆ.
೫. ನೋಟ ಮಸುಕಾಗುತ್ತದೆ ಅಥವಾ ಮಂಜಾಗುತ್ತದೆ.
೬. ನಾಲಿಗೆಯು ರುಚಿಯನ್ನು ಕಳೆದುಕೊಳ್ಳುತ್ತದೆ, ದಪ್ಪವಾಗುತ್ತದೆ.
೭. ಬಾಯಾರಿಕೆ ಉಂಟಾಗುತ್ತದೆ.
೮. ಬಾಯಲ್ಲಿ ನೊರೆ ಬರುತ್ತದೆ.
೯.ಜ್ಞಾನ ತಪ್ಪುತ್ತದೆ.
೧೦. ಕೊನೆಯಲ್ಲಿ ಮರಣ ಸಂಭವಿಸುತ್ತದೆ.

ಈ ಮೇಲಿನ ಲಕ್ಷಣಗಳು ಹಂತ ಹಂತವಾಗಿ ಕಂಡು ಬರುತ್ತವೆ. ನಾಗರ ಹಾವು ಕಚ್ಚಿದ ತೀಕ್ಷ್ಣತೆ, ಕಚ್ಚಿದ ಸ್ಥಳ,ಹಾವು ಬಿಡುವ ವಿಷದ ಪ್ರಮಾಣವನ್ನು ಅವಲಂಬಿಸಿ ಅದಕ್ಕೆ ತಕ್ಕಂತೆ ಮೇಲಿನ ಪರಿಣಾಮಗಳು ತೀವ್ರತೆಯನ್ನು ಪಡೆಯುತ್ತವೆ.

ಮಂಡಲದ ಹಾವು ಕಚ್ಚಿದಾಗ ಕಂಡು ಬರುವ ಲಕ್ಷಣಗಳು. :

೧. ಕಚ್ಚಿದ ಸ್ಥಳದಲ್ಲಿ ಒಂದೇ ಸಮನೆ ಉರಿಯಲು ಪ್ರಾರಂಭಿಸುತ್ತದೆ.
೨. ಕಚ್ಚಿದ ಸ್ಥಳದಲ್ಲಿ ಊದಿಕೊಳ್ಳಲು ಪ್ರಾರಂಭವಾಗುತ್ತದೆ.
೩. ಕಚ್ಚಿದ ಜಾಗದಲ್ಲಿ ರಕ್ತ ಮತ್ತು ಕೀವು ಬರುತ್ತದೆ.
೪. ಕಚ್ಚಿದ ಸ್ಥಳದಲ್ಲಿ ಗುಳ್ಳೆಗಳು ಎದ್ದು ಒಡೆಯುತ್ತದೆ.
೫. ಕೆಲವು ವೇಳೆ ಮಲ,ಮೂತ್ರದಲ್ಲಿ ರಕ್ತ ಬರುತ್ತದೆ.

ಈ ಮೇಲಿನ ಲಕ್ಷಣಗಳು ಹಂತ ಹಂತವಾಗಿ ಕಂಡು ಬರುತ್ತವೆ. ಈ ರೀತಿಯ ಮಂಡಲದ ಹಾವು ಕಚ್ಚಿದ ವ್ಯಕ್ತಿಗೆ ಒಂದು ದಿನದಿಂದ ಇಪತ್ತು ದಿನಗಳೊಳಗೆ ಸಾವು ಸಂಭವಿಸುವ ಸಾಧ್ಯತೆ ಇದೆ.

[ ಮುಂದಿನ ಕಂತಿನಲ್ಲಿ ಹಾವು ಕಚ್ಚಿದವರಿಗೆ ಪ್ರಥಮ ಚಿಕಿತ್ಸೆಯ ಮಾಹಿತಿಯನ್ನು ಓದಿ ]
-===============================================================================

ಹಾವು ಕಚ್ಚಿದ ಬಗ್ಯೆ ಮಾಹಿತಿ :

ತಾರೀಖು : ೨೫ - ೬ - ೨೦೧೪

ಮಾಹಿತಿ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಅಂಚೆ ಮತ್ತು ಊರು :ಗೆಣಸಿನಕುಣಿ. -೫೭೭೪೫೩. ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ. ಸರ್ಪವಿಷ ಪರಿಹಾರಕರು ಹಾಗೂ ನಾಟಿ ವೈದ್ಯರು.

ಎರಡನೆಯ ಕಂತು :

ಹಾವು ಕಚ್ಚಿದವರಿಗೆ ಪ್ರಥಮ ಚಿಕಿತ್ಸೆ :

೧. ಹಾವು ಕಚ್ಚಿದ ವ್ಯಕ್ತಿಗೆ ಧೈರ್ಯದ ಮಾತುಗಳನ್ನು ಹೇಳಬೇಕು. ಆತನ ಸುತ್ತಲಿರುವ ಜನ ಆತಂಕ, ಗಾಬರಿಯ ಮಾತುಗಳನ್ನಾಡುವುದು, ಹತ್ತಿರದ ಸಂಬಂಧಿಗಳು ಅಳುವುದು ಮುಂತಾದುವು ನಡೆಯದಂತೆ ನೋಡಿಕೊಳ್ಳಬೇಕು. ಆಪ್ತರಾದ ಒಬ್ಬಿಬ್ಬರನ್ನು ಹೊರತುಪಡಿಸಿ ಉಳಿದವರನ್ನು ದೂರ ಕಳುಹಿಸಬೇಕು. ಕಚ್ಚಿದ ಹಾವು ವಿಷದ ಹಾವಲ್ಲ, ಒಮ್ಮೆ ಹೌದಾದರೂ ಅದಕ್ಕೆ ಚಿಕಿತ್ಸೆಯಿದೆಯೆಂದು ಅವನಿಗೆ ಧೈರ್ಯವನ್ನು ತುಂಬಬೇಕು.ನೂರಕ್ಕೆ ಐವತ್ತು ಮಂದಿ ಹೆದರಿಕೊಂಡೇ ಹೃದಯ ಕ್ರಿಯೆ ನಿಂತು ಸಾಯುವ ಸಂದರ್ಭವೇ ಹೆಚ್ಚು. ಆದ್ದರಿಂದ ಸಮಯಕ್ಕೆ ಸರಿಯಾಗಿ ಸರಿಯಾದ ವೈಜ್ಞಾನಿಕ ತಿಳಿವಳಿಕೆ ಮತ್ತು ಸಮಾಧಾನದ ಮಾತುಗಳನ್ನಾಡಿ ಆ ವ್ಯಕ್ತಿಯು ಶಾಂತಚಿತ್ತನಾಗಿರುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

೨. ಹಾವು ಕಚ್ಚಿದ ವ್ಯಕ್ತಿಗೆ ಕೂಡಲೇ ಕಚ್ಚಿದ ಘಾಯದ ಮೇಲು ಭಾಗದಲ್ಲಿ ಸುಮಾರು ಒಂದು ಅಡಿ ಅಂತರದಲ್ಲಿ ಕಟ್ಟನ್ನು ಸಾಧ್ಯವಾದಷ್ಟು ಮಟ್ಟಿಗೆ ಅತಿ ಗಟ್ಟಿಯಾಗಿ ಹಾಕಬೇಕು. ತಕ್ಷಣ ಚುರುಕಾಗಿ ಬಟ್ಟೆಯನ್ನು ಉದ್ದವಾಗಿ ಹರಿದು ಸಣ್ಣದಾದ ಉದ್ದನೆಯ, ಗಟ್ಟಿಯಾದ ಹುರಿ [ ಹಗ್ಗ ] ಯನ್ನು ತಯಾರು ಮಾಡಿಕೊಳ್ಳಬೇಕು. ಈ ಹಗ್ಗದ ಸಹಾಯದಿಂದ ಕಟ್ಟನ್ನು ಹಾಕಬೇಕು. ಹಾವು ಕಚ್ಚಿದ ಘಾಯದಿಂದ ಮೇಲ್ಭಾಗಕ್ಕೆ ರಕ್ತವು ಸಂಚರಿಸಿ ಅದು ಮೆದುಳನ್ನು ಸೇರಬಾರದು. ಹಾಗೆ ಸೇರದಂತೆ ಕಟ್ಟನ್ನು ಹಾಕಬೇಕು. ಹೀಗೆ ಸುತ್ತಿ ಕಟ್ಟನ್ನು ಹಾಕುವಾಗ ಹಾಕುತ್ತಿರುವ ಸುತ್ತು ಸಡಿಲವಾಯಿತೆಂದು ನಮಗೆನ್ನಿಸಿದರೆ ಆ ಸುತ್ತನ್ನು ಖಂಡಿತಾ ಹಿಂದೆ ತೆಗೆಯಬಾರದು. ಹಾಗೆಯೇ ಸುತ್ತಿಬಿಡಬೇಕು. ಒಮ್ಮೆ ಹಾಗೆ ತೆಗೆದರೆ ತಕ್ಷಣ ರಕ್ತವು ಘಾಯದಿಂದ ವಿಷವನ್ನು ತೆಗೆದುಕೊಂಡು ರಭಸದಿಂದ ಮೆದುಳನ್ನು ಸೇರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಂಥಹ ಸಮಯದಲ್ಲಿ ಮೊದಲು ಹಾಕಿದ ಕಟ್ಟಿನ ಪಕ್ಕದಲ್ಲಿ, ಅದರ ಮೇಲ್ಭಾಗದಲ್ಲಿ ಮತ್ತೊಂದು, ಅಗತ್ಯ ಬಿದ್ದರೆ ಮಗದೊಂದು ಕಟ್ಟನ್ನು ಅತಿ ಬಿಗುವಾಗಿ ಹಾಕಬೇಕು. ಯಾವ ಕಾರಣಕ್ಕೂ ಘಾಯದ ಕೆಳಭಾಗಕ್ಕೆ ಕಟ್ಟನ್ನು ಹಾಕಲೇಬಾರದು. ಏಕೆಂದರೆ ರಕ್ತವು ಮದುಳಿನತ್ತ ಹೋಗುವುದು ಮೇಲ್ಭಾಗಕ್ಕೆ ಸರಿ. ರಕ್ತವು ಹಾವಿನ ವಿಷವನ್ನು ತೆಗೆದುಕೊಂಡು ಮೆದುಳನ್ನು ಸೇರಬಾರದು. ಈ ಕಾರಣಕ್ಕಾಗಿಯೇ ಘಾಯದ ಮೇಲ್ಭಾಗಕ್ಕೇ ಕಟ್ಟನ್ನು ಹಾಕಬೇಕಾದುದು ಮುಖ್ಯ. ಈ ಕಟ್ಟನ್ನು ಹಾಕುವ ಪ್ರಕ್ರಿಯೆ ಅತ್ಯಂತ ಅಗತ್ಯವಾದ ಪ್ರಥಮ ಚಿಕಿತ್ಸೆ.

೩. ಹಾವು ಕಚ್ಚಿದ ಘಾಯದ ಮೇಲೆ [ ಘಾಯಕ್ಕೆ ] ' x 'ಗುರುತಿನ ರೀತಿಯಲ್ಲಿ ಹರಿತವಾದ ಚಾಕುವಿನಿಂದ ಅಥವಾ ಹೊಸ ಶೇವಿಂಗ್ ಬ್ಲೇಡಿನ ಸಹಾಯದಿಂದ ಗೀರಿ ಧಾರಾಳವಾಗಿ ರಕ್ತವು ಸೋರಿ ಹೋಗುವಂತೆ ಮಾಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಘಾಯವನ್ನು ಚೆನ್ನಾಗಿ ತೊಳೆಯಬೇಕು.

೪. ಕೋಳಿಗೆ ಹಾವಿನ ವಿಷವನ್ನು ಹೀರುವ ಶಕ್ತಿ ಇದೆ. ಆದರೆ ಬಾಯಿಯಿಂದ ಅಲ್ಲ, ಅದರ ಪೃಷ್ಠದಿಂದ ಮಾತ್ರ. ಹಳ್ಳಿಯ [ ಗಾವಟಿ ] ಕೋಳಿಯು ಒಳ್ಳೆಯದು. ಹಳ್ಳಿಯ ಕಪ್ಪು ಕೋಳಿಯಾಗಬೇಕು. ಅದಕ್ಕೆ ಹಾವಿನ ವಿಷವನ್ನು ಹೀರುವ ಶಕ್ತಿ ಹೆಚ್ಚು ಇರುತ್ತದೆ. ಇಂಥಹ ಕೋಳಿಯ ಪೃಷ್ಠಭಾಗವನ್ನು ಹಾವು ಕಚ್ಚಿದ ಘಾಯದ ಮೇಲೆ ಒತ್ತಿ ಹಿಡಿಯಬೇಕು. ಹೀಗೆ ಹಿಡಿದಾಗ ವಿಷವು ಕೋಳಿಯಿಂದ ಹೀರಲ್ಪಟ್ಟು ಕೋಳಿಯು ಸಾಯುತ್ತದೆ. ಹೀಗೆಯೇ ೫ - ೬ ಕೋಳಿಗಳನ್ನು ಪ್ರಯೋಗಿಸಬೇಕು. ಎಲ್ಲಿಗೆ ಕೋಳಿ ಸಾಯುವುದು ನಿಲ್ಲುತ್ತದೆಯೋ ಅಲ್ಲಿಯವರೆಗೂ ಈ ಕೋಳಿ ಚಿಕಿತ್ಸೆಯನ್ನು ಮುಂದುವರೆಸಬೇಕು. ಈ ತೆರನಾದ ಪ್ರಥಮ ಚಿಕಿತ್ಸೆಗೆ ಸಾಮಾನ್ಯವಾಗಿ ಮೂರು ಕೋಳಿಯಿಂದ ಎಂಟು ಕೋಳಿಯವರೆಗೂ ಬೇಕಾಗುತ್ತದೆ. ಈ ಸಂಖ್ಯೆ ಮನುಷ್ಯನ ದೇಹದೊಳಕ್ಕೆ ಸೇರಿದ ಹಾವಿನ ವಿಷದ ಪ್ರಮಾಣವನ್ನು ಅನುಸರಿಸಿ ಇರುತ್ತದೆ. ಒಂದು ವಿಚಾರ. ಇದು ಒಂದು ಪ್ರಥಮ ಚಿಕಿತ್ಸೆಯೇ ವಿನಃ ಪ್ರಾಕೃತ ಚಿಕಿತ್ಸೆಯಲ್ಲ.

೫. ಹಾವು ಕಚ್ಚಿದ ಘಾಯದ ಮೇಲೆ ಗರುಡಪಚ್ಚೆ ಮಣಿಯನ್ನು ಇಡಬಹುದು ಅಥವಾ ಘೇಂಡಾಮೃಗದ ಕೋಡನ್ನು ನೀರಿನಲ್ಲಿ ಸ್ವಲ್ಪ ತೇಯ್ದು ಕುಡಿಸಬಹುದು. ಇದೂ ಒಂದು ಪ್ರಥಮ ಚಿಕಿತ್ಸೆ.

೬. ಹಾವು ಕಚ್ಚಿದ ವ್ಯಕ್ತಿ ನಡೆದಾಡಕೂಡದು ಅಥವಾ ಕಚ್ಚಿಸಿಕೊಂಡ ಅಂಗ ಚಲಿಸದಂತೆ ನೋಡಿಕೊಳ್ಳಬೇಕು. ಹಾಗೆ ಮಾಡಿದರೆ ರಕ್ತಸಂಚಾರಕ್ಕೆ ಅವಕಾಶವಾಗಿ ವಿಷವು ಬೇಗ ಮೆದುಳಿಗೆ ಸೇರುವ ಸಾಧ್ಯತೆ ಹೆಚ್ಚು.

೭. ಹಾವು ಕಚ್ಚಿದ ವ್ಯಕ್ತಿಗೆ ಟೀ, ಕಾಫೀ, ಹಾಲು ವಗೈರೆ ಪಾನೀಯಗಳನ್ನು ಕೊಡಬಾರದು. ಊಟ ಮತ್ತು ಆಹಾರಗಳನ್ನು ಖಂಡಿತ ಕೊಡಕೂಡದು. ತೀರಾ ಅಗತ್ಯ ಬಿದ್ದಲ್ಲಿ ಒಂದು ಗುಟುಕು ನೀರನ್ನು ಕೊಡಬಹುದು.

೮. ಹಾವು ಕಡಿದವರು ನಿದ್ರೆ ಮಾಡದಂತೆ ಕಟ್ಟು ನಿಟ್ಟಾಗಿ ನೋಡಿಕೊಳ್ಳಬೇಕು. ಹಾವು ಕಡಿದವರಿಗೆ ನಿದ್ರೆ ಹೆಚ್ಚು ಬರುವ ಸಾಧ್ಯತೆ ಇದೆ. ಇದು ಅತ್ಯಂತ ಮಹತ್ವದ ಸೂಚನೆ.

ಈ ಮೇಲ್ಕಂಡ ಎಲ್ಲಾ ಪ್ರಥಮ ಚಿಕಿತ್ಸೆಗಳಲ್ಲಿ ಒಂದು, ಎರಡು, ಏಳು ಮತ್ತು ಎಂಟನೆಯದು ಅತಿ ಮುಖ್ಯವಾಗಿ ಮಾಡಲೇಬೇಕಾದಂಥಹ ಪ್ರಥಮ ಚಿಕಿತ್ಸೆಗಳು.

ಇಲ್ಲಿಗೆ ಹಾವು ಕಚ್ಚಿದ ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಮಾಹಿತಿ ಮುಗಿಯಿತು. ಮುಂದಿನ ಚಿಕಿತ್ಸೆಯ ಮಾಹಿತಿಗಾಗಿ ಮೂರನೆಯ ಕಂತನ್ನು ಓದಿ.

==================================================================================

ಹಾವು ಕಚ್ಚಿದ ಬಗ್ಯೆ ಮಾಹಿತಿ :

ಮೂರನೆಯ ಕಂತು :

ತಾರೀಖು :೨೭ -೬ -೨೦೧೪.

ಮಾಹಿತಿಯ ಕೃಪೆ : ಶ್ರೀ ಜಿ. ಡಿ. ಕೇಶವ ಹೆಗಡೆ. ಅಂಚೆ ಮತ್ತು ಊರು : ಗೆಣಸಿನಕುಣಿ. - ೫೭೭೪೫೩ ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ. ಸರ್ಪ ವಿಷ ಪರಿಹಾರಕರು ಮತ್ತು ನಾಟಿ ವೈದ್ಯರು.

ಶ್ರೀ ಕೇಶವ ಹೆಗಡೆಯವರು ಹಾವು ಕಚ್ಚಿದ್ದಕ್ಕೆ ಮಾಡುವ ಚಿಕಿತ್ಸೆ ಮತ್ತು ಹಾವು ಕಚ್ಚುವುದರ ಕುರಿತು ಅವರು ನೀಡುವ ವಿವರಣೆ :

ವಿವರಣೆ :

ಹಾವು ಎಂದ ಮಾತ್ರಕ್ಕೆ ಎಲ್ಲಾ ಹಾವುಗಳೂ ವಿಷದ ಹಾವುಗಳು ಎಂದು ತಿಳಿಯಬಾರದು. ವಿಷದ ಹಾವುಗಳು ಸಹಿತ ಕಚ್ಚಿದ ಎಲ್ಲಾ ಸಂದರ್ಭಗಳಲ್ಲಿ ಒಂದೇ ಪ್ರಮಾಣದಲ್ಲಿ ವಿಷವನ್ನು ನಮ್ಮ ದೇಹಕ್ಕೆ ಬಿಟ್ಟಿರುವುದಿಲ್ಲ. ನಾಗರ ಹಾವು ,ಮಂಡಲದ ಹಾವು ಮತ್ತು ಇನ್ನಿತರೆ ಬೇರೆ ರೀತಿಯ ಹಾವುಗಳು ಈ ಮೂರು ನಮೂನೆ ಹಾವುಗಳ ಕಚ್ಚುವಿಕೆಯ ಪರಿಣಾಮ ಬೇರೆ ಬೇರೆ ಇದೆ. ಈ ರೀತಿಯಲ್ಲಿ ಬೇರೆ ಬೇರೆ ಹಾವುಗಳು ಕಚ್ಚಿದಾಗ ಬೇರೆ ಬೇರೆ ಔಷಧ ಮತ್ತು ಬೇರೆ ಬೇರೆ ಚಿಕಿತ್ಸೆಯಿದೆ.

ಹಾವು ಕಚ್ಚಿದವರೆಲ್ಲ ಸಾಯುತ್ತಾರೆ ಎಂಬ ಭ್ರಮೆಯನ್ನು ಜನ ಬಿಡಬೇಕು. ಹಾವು ಕಚ್ಚಿದ ಕೂಡಲೆ ಹೆದರಿಕೆಯಿಂದಲೇ ಕೆಲವರು ಹೃದಯಾಘಾತದಿಂದ ಸಾಯುವವರಿದ್ದಾರೆ. ಇದು ಆಗಬಾರದು. ಅದಕ್ಕೆ ವರ್ತಮಾನದ ಕಾಲದಲ್ಲಿ ಅನೇಕ ರೀತಿಯ ಚಿಕಿತ್ಸೆಯಿದೆ. ಅದರಂತೆಯೇ ನಾನು ಕೂಡಾ ನನ್ನದೇ ಕ್ರಮದಲ್ಲ್ಲಿ ನನ್ನಲ್ಲಿ ಕೇಳಿ ಬಂದವರಿಗೆ ಚಿಕಿತ್ಸೆಯನ್ನು ಮಾಡುತ್ತೇನೆ. ಇದು ನನ್ನ ದುಡಿಮೆಯ ಉದ್ಯೋಗವಲ್ಲ. ನಿರಾಪೇಕ್ಷೆಯಿಂದ ಸಮಾಜಕ್ಕೆ ಸಲ್ಲಿಸುವ ಕೇವಲ ಸೇವೆ ಅಷ್ಟೇ. ನಾನು ನೀಡಿದ ಚಿಕಿತ್ಸೆಗಾಗಿ ಯಾರಿಂದಲೂ ಹಣವನ್ನಾಗಲಿ ಅಥವಾ ಇನ್ನಿತರೆ ಯಾವುದೇ ಪ್ರತಿಫಲವನ್ನಾಗಲೀ ತೆಗೆದುಕೊಳ್ಳುವುದಿಲ್ಲ. ಹಾಗೆಂದು ಮೂವತ್ತನಾಲ್ಕು ವರ್ಷಗಳಿಂದ ,ಅಂದರೆ ೧೯೮೦ನೇ ಇಸವಿಯಿಂದ ಇಂದಿನವರೆಗೆ ಸುಮಾರು ಹನ್ನೊಂದು ಸಾವಿರ ಮಂದಿ ಹಾವು ಕಚ್ಚಿಸಿಕೊಂಡು ಬಂದವರಿಗೆ ಸಮಯೋಚಿತವಾಗಿ ಕೇವಲ ಉಚಿತವಾಗಿ ಚಿಕಿತ್ಸೆ ಮತ್ತು ಔಷಧವನ್ನು ಕೊಟ್ಟಿರುತ್ತೇನೆ. ಅಲ್ಲದೆ ಅದರಲ್ಲಿ ಯಶಸ್ವಿಯಾಗಿದ್ದೇನೆ. ಇದರಲ್ಲಿ ನಾನು ಕಂಡುಕೊಂಡ ಯಶಸ್ಸು ಜನರು ತಾವಾಗಿಯೇ ನನ್ನನ್ನು ಹುಡುಕಿಕೊಂಡು ಬರುವಂತೆ ಆಗಿದೆ ಎಂದು ಭಾವಿಸುತ್ತೇನೆ.

ನಮ್ಮ ಭಾಗದಲ್ಲಿ ಬಹಳ ಹಿಂದೆ ಶ್ರೀ ಶ್ರೀಪಾದ ಆಚಾರ್ ಎನ್ನುವವರು ಸರ್ಕಾರಿ ಅರೋಗ್ಯ ತಪಾಸಕರಾಗಿ ನೇಮಕಗೊಂಡಿದ್ದರು. ಅವರು ನಮ್ಮ ಪೂಜ್ಯ ತಂದೆಯವರಾದ ಶ್ರೀ ಜಿ.ಡಿ.ತಿಮ್ಮಪ್ಪ ಹೆಗಡೆಯವರಿಗೆ ೧೯೪೦ನೆ ಇಸವಿಯಲ್ಲಿ ಸರ್ಪ ಕಚ್ಚಿದ ಚಿಕಿತ್ಸೆಗೆ ಮಂತ್ರೋಪದೇಶವನ್ನು ನೀಡಿದರು. ಅಲ್ಲದೆ ನಾನು ಹಿಂದೆ ತಿಳಿಸಿದಂತೆ ಬೇರೆ ಹಾವು ಕಚ್ಚಿದರೆ ಅದಕ್ಕೆ ಆಯುರ್ವೇದ ಮತ್ತು ಗಿಡಮೂಲಿಕೆ ಔಷಧಗಳ ಮಾಹಿತಿಯನ್ನು ಅವರಿಗೆ ಕಲಿಸಿಕೊಟ್ಟರು. ಜೊತೆಗೆ ಪ್ರತಿಫಲಾಪೇಕ್ಷೆಯಿಲ್ಲದೆ ಅಗತ್ಯ ಜನರಿಗೆ ಈ ಕೆಲಸವನ್ನು ಸೇವಾಮನೋಭಾವದಿಂದ ಮಾಡಬೇಕೆಂದು ಸೂಚಿಸಿದರು. ಅದರಂತೆಯೇ ನಮ್ಮ ತಂದೆಯವರು ೧೯೪೦ನೆ ಇಸವಿಯಿಂದ ೧೯೮೦ನೆ ಇಸವಿಯವರೆಗೆ ನಲವತ್ತು ವರ್ಷಗಳ ದೀರ್ಘ ಕಾಲ ಈ ಮಂತ್ರ ಚಿಕಿತ್ಸೆ ಮತ್ತು ಔಷಧ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ೧೯೪೭ನೆ ಇಸವಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶ್ರೀ ಕ್ಷೇತ್ರ ವರದಪುರದ ಭಗವಾನ್ ಶ್ರೀ ಶ್ರೀಧರ ಸ್ವಾಮಿಯವರು ನನ್ನ ತಂದೆಯವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಅವರು ಉಪದೇಶ ಪಡೆದುಕೊಂಡ ಸರ್ಪ ವಿಷ ನಿವಾರಣಾ ಮಂತ್ರಕ್ಕೆ ಹೆಚ್ಚಿನ ಶಕ್ತಿಯನ್ನು ಅನುಗೃಹಿಸಿದರು. ಇವೆಲ್ಲವೂ ನಂಬಿಕೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ್ದೇ ವಿನಃ ತರ್ಕಕ್ಕೆ ಸಿಗುವಂಥಹುದಲ್ಲ. ಈ ಮಂತ್ರೋಪದೇಶ ಮತ್ತು ಔಷಧದ ಮಾಹಿತಿಯನ್ನು ನನ್ನ ತಂದೆಯವರು ನಮಗೆ ನೀಡಿದರು. ನಿರಾಪೇಕ್ಷೆಯಿಂದ ಈ ಸೇವೆಯನ್ನು ಮುಂದುವರೆಸಲು ಸೂಚಿಸಿದರು. ಅದರಂತೆಯೇ ೧೯೮೦ನೆ ಇಸವಿಯಿಂದ ಇಲ್ಲಿಯವರೆಗೆ ನಾನು ಇದನ್ನು ಪ್ರಾಮಾಣಿಕವಾಗಿ ಸೇವಾಮನೋಭಾವದಿಂದ ಮುಂದುವರೆಸಿಕೊಂಡು ಬಂದಿದ್ದೇನೆ. ದೇವರ ಸ್ಮರಣೆಯಲ್ಲಿಯೆ ನಡೆಯುವ ಮಂತ್ರ ಚಿಕಿತ್ಸೆಗೆ ದೇವರು ಆ ಮಂತ್ರದಲ್ಲಿ ವೈಜ್ಞಾನಿಕ ಶಕ್ತಿಯನ್ನು ಇರಿಸಿದ್ದಾನೆ ಎಂದು ನನ್ನ ಭಾವನೆ. ಏಕೆಂದರೆ ಸರ್ಪದಿಂದ ಕಚ್ಚಿಸಿಕೊಂಡು ಬಂದ ಹಲವು ಸಾವಿರ ಮಂದಿ ನಾನು ಮಾಡುವ ಮಂತ್ರ ಚಿಕಿತ್ಸೆಯಿಂದಲೇ
ಗುಣಮುಖವಾಗಿದ್ದಾರೆ.

ಚಿಕಿತ್ಸೆಯ ಕ್ರಮಗಳು : ೧. ಸರ್ಪ ಕಚ್ಚಿದವರಿಗೆ ಈಗಾಗಲೇ ತಿಳಿಸಿದಂತೆ ಸಿದ್ಧಿಸಿದ ಮಂತ್ರದಿಂದ ಚಿಕಿತ್ಸೆ ಮಾಡಲಾಗುತ್ತದೆ. ಮಂತ್ರ ಚಿಕಿತ್ಸೆ ನೀಡಿದ ನಂತರ ಹಾವು ಕಚ್ಚಿದ ಘಾಯದ ಮೇಲ್ಭಾಗದಲ್ಲಿ ಕಚ್ಚಿದ ಕೂಡಲೆ ವ್ಯಕ್ತಿಯು ಹಾಕಿಕೊಂಡ ಕಟ್ಟನ್ನು ಬಿಚ್ಚಲಾಗುವುದು. ೨. ಮಂಡಲ ಹಾವು ಮತ್ತು ಇತರೆ ಬೇರೆ ಹಾವು ಕಚ್ಚಿದವರಿಗೆ ಆಯುರ್ವೇದ ಅಥವಾ ಗಿಡಮೂಲಿಕೆ ಔಷಧ. ಹಾವು ಕಚ್ಚಿದ ಕ್ರಮವನ್ನು ಪರೀಕ್ಷಿಸಿ ಅದು ಕಚ್ಚಿದ ವಿಧಾನ ಮತ್ತು ಕಚ್ಚಿದ ನಂತರ ಆಗುವ ಪರಿಣಾಮಗಳನ್ನು ಪರಾಮರ್ಶಿಸಿ ಇಂಥಹುದೇ ಹಾವು ಕಚ್ಚಿದೆಯೆಂದು ನಿರ್ಣಯಿಸಲಾಗುವುದು ಮತ್ತು ಅದರಂತೆ ಚಿಕಿತ್ಸೆ ಮಾಡಲಾಗುತ್ತದೆ. ದಿನದ ಯಾವುದೇ ಸಮಯದಲ್ಲಿ ಬಂದವರಿಗೂ ಘಟನೆಯ ಔಚಿತ್ಯಕ್ಕನುಸರಿಸಿ ಚಿಕಿತ್ಸೆಯನ್ನು ನೀಡಲಾಗುವುದು. ಯಾವುದೇ ಪ್ರತಿಫಲವನ್ನು ಸ್ವೀಕರಿಸಲಾಗುವುದಿಲ್ಲ.

ಈ ಮೇಲಿನ ಚಿಕಿತ್ಸೆಗಳಲ್ಲದೆ ಸರ್ಪಸುತ್ತಿಗೆ ಕೂಡ ಗಿಡಮೂಲಿಕೆಗಳಿನ್ದ ಗುಣಪಡಿಸಲಾಗುತ್ತದೆ.

******* ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ ?, *******

- ಎಂ ಗಣಪತಿ , ಕಾನುಗೋಡು .

ಹೌದು. ಹೊಗೆ ಕಾಣಿಸಿಕೊಂಡಿದೆ ಎಂದರೆ ಅದರ ಹಿಂದೆ ಬೆಂಕಿ ಇದೆ ಎಂಬುದು ವಾಸ್ತವಿಕ. ಆದರೆ ಆ ಬೆಂಕಿ ಯಾವುದು ಎಂಬುದು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾದ ವಿಚಾರ.

ಒಂದು ವ್ಯಕ್ತಿ ಅಥವಾ ಸಂಸ್ಥೆಯ ಬಗ್ಯೆ ಯಾವುದೇ ಸುದ್ಧಿ ಪ್ರಚಾರಗೊಂಡರೆ ಅದಕ್ಕೆ ಸರಿಯಾದ ಕಾರಣ ತಕ್ಷಣ ಯಾರಿಗೂ ಗೊತ್ತಾಗುವುದಿಲ್ಲ. ಹಾಗೆಂದು ಒಂದು ಪರಿಣಾಮಕ್ಕೆ ಸಂಬಂಧಿಸಿರಬಹುದಾದ ವಾಸ್ತವಿಕ ಕಾರಣವನ್ನು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಒಂದು ಸುದ್ದಿ ಅಥವಾ ಘಟನೆ ಪ್ರಚಲಿತಕ್ಕೆ ಬಂದಾಗ ಆ ಹೊತ್ತಿಗೆ ತಮ್ಮ ಬುದ್ಧಿಯ ಮಿತಿಯೊಳಗೆ ಯಾವ ಯಾವ ಕಾರಣಗಳು ಗೋಚರಿಸುತ್ತವೆಯೋ ಅವನೆಲ್ಲ ಆ ಪರಿಣಾಮಕ್ಕೆ ತಳಿಕೆ ಹಾಕುತ್ತಾರೆ.ಆಡುತ್ತಿರುವ ಹೊಗೆಯ ಹಿಂದೆ ಇರುವಂತಹ ನಿಜವಾದ ಬೆಂಕಿ ಯಾವುದು ಎಂಬುದನ್ನು ಯಾರೂ ತಿಳಿದಿರುವುದಿಲ್ಲ. ಹಾಗೆಂದು ತಮ್ಮಷ್ಟಕ್ಕೆ ತಾವು ಯಾರೂ ಸುಮ್ಮನೆ ಕೂರುವುದಿಲ್ಲ.

ಎಷ್ಟೋ ಭಾರಿ ಆಡುವ ಹೊಗೆಗೂ ಅಡಗಿರುವ ಬೆಂಕಿಗೂ ಕಾರ್ಯ ಕಾರಣ ಸಂಬಂಧವೇ ಇರುವುದಿಲ್ಲ.

ಸಮಾಜದಲ್ಲಿ ಜವಾಬ್ದಾರಿಯಿಲ್ಲದ ಜನರು, ನಾಲಿಗೆ ತುರಿಕೆ ಇರುವ ಜನರು, ಪುಕ್ಕಟೆ ಕರ್ಣಾನಂದವನ್ನು ಬಯಸುವ ಜನರು, ವದಂತಿಕೋರ ಪ್ರವೃತ್ತಿಯನ್ನೇ ಚಟವನ್ನಾಗಿರಿಸಿಕೊಂಡವರು, ಉದ್ಯೋಗದಲ್ಲಿ ಸೋತು ಹತಾಶರಾದರೂ 'ಅಹಂ' ನ್ನು ಬಿಡಲಾರದವರು, ತಮ್ಮಲ್ಲಿರುವ ದ್ವೇಷವನ್ನು ಸಾಧಿಸಲು ಸಮಯಕ್ಕೆ ಹೊಂಚು ಹಾಕುತ್ತಿರುವವರು ಹೀಗೆ.....ಹೀಗೆ......... ಬಹಳ ಮಂದಿ ಇದ್ದಾರೆ. ಅವರಿಗೆ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವದಂತಿಯನ್ನು ಹಬ್ಬಿಸುವುದೇ ಕೆಲಸ. ಅವರು ನಿದ್ರೆ ಬರಲಿಕ್ಕೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದಿಲ್ಲ.ತಾವು ಸುಖನಿದ್ರೆ ಮಾಡಲಿಕ್ಕೆ ಕಂಡುಕೊಂಡ ಅತ್ಯಂತ ಸುಲಭದ ದಾರಿ ಇದು.

ಯಾರ ನಿದ್ರೆ ಹಾಳಾದರೇನಂತೆ ?.

ದಾಂಪತ್ಯ ಮುರಿಯುವಲ್ಲಿ ಇರಬಹುದಾದ ಮರೆ

- ಎಂ ಗಣಪತಿ , ಕಾನುಗೋಡು .
[ ಈ ಲೇಖನವನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು ]
ಒಂದು ದಾಂಪತ್ಯ ಮುರಿದು ಬೀಳಬೇಕಾದರೆ ಗಂಡನ ಪಾತ್ರ ಹೆಚ್ಚಿರಬಹುದು, ಹೆಂಡತಿಯ ಪಾತ್ರ ಹೆಚ್ಚಿರಬಹುದು ಇಲ್ಲವೇ ಗಂಡ ಮತ್ತು ಹೆಂಡತಿಯ ಸಮಪಾತ್ರವಿರಬಹುದು, ಗಂಡನ ತಂದೆ ತಾಯಿಯ ಪಾತ್ರ ಇರಬಹುದು, ಹೆಂಡತಿಯ ತಂದೆ ತಾಯಿಯ ಪಾತ್ರ ಇರಬಹುದು, ಗಂಡನ ಅಥವಾ ಹೆಂಡತಿಯ ಅಕ್ಕ ತಂಗಿಯರದ್ದಿರಬಹುದು ಅಥವಾ ಅಪರೂಪಕ್ಕೆ ನೆರೆಹೊರೆಯವರದ್ದೂ ಇರಬಹುದು. ಒಬ್ಬ ಗಂಡಿನ ಅಥವಾ ಹೆಣ್ಣಿನ ಉಭ್ರಮೆಗೆ ಕಾಲಾವಕಾಶವಿರುವುದು ಕೇವಲ ಹತ್ತೆಂಟು ವರುಷ ಅಷ್ಟೆ. ವ್ಯಕ್ತಿಯೊಬ್ಬ ಹೇಗೆ ಬಾಳಬೇಕೊ ಹಾಗೆ ಬಾಳದೆ ಇದ್ದರೆ ಕಾಲ ಮೀರಿದ ಮೇಲೆ ಬದುಕೇ ಶೂನ್ಯವಾಗುತ್ತದೆ. ಸಮಾಜವು ಅಂಥವರನ್ನು ನೋಡುವ ದೃಷ್ಟಿಯೇ ಬೇರೆ. ಆದ್ದರಿಂದ ಸಾಕಷ್ಟು ವಿವೇಚನೆ ದಂಪತಿಗಳಿಗೆ ಬದುಕಿನ ಪ್ರಾರಂಭದಲ್ಲಿ ಅಗತ್ಯ.
ಯಾವುದೇ ಬೆಸುಗೆ ಭದ್ರವಾಗಿ ಮುಂದುವರಿಯಬೇಕೆಂದರೆ ಆ ಕೂಟದಲ್ಲಿ ಬರುವ ವ್ಯಕ್ತಿಗಳು ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಮಾತಿನಲ್ಲಿ, ಹಠದಲ್ಲಿ ಗೆದ್ದೇತೀರಬೇಕೆನ್ನುವುದರ ಪರಿಣಾಮ ವಿರಸ,ವಿಘಟನೆ. . ದಾಂಪತ್ಯದ ವಿರಸ ಅದು ಕೇವಲ ಗಂಡ-ಹೆಂಡತಿಗೊಂದೆ ಅಲ್ಲ, ಮಕ್ಕಳನ್ನೊಳಗೊಂಡ ತಮ್ಮ ಕುಟುಂಬವೊಂದೇ ಅಲ್ಲ, ಗಂಡನ ಮನೆಯ ಕುಟುಂಬ ಮತ್ತು ಹೆಂಡತಿಯ ಮನೆಯ ಕುಟುಂಬಗಳನ್ನೂ ಬಲಿ ತೆಗೆದುಕೊಳ್ಳುತ್ತದೆ.
ಯಾರೂ ತನಗೆ ಅನಿವಾರ್ಯವಲ್ಲವೆಂದು ಗಂಡ ಮತ್ತು ಹೆಂಡತಿ ಪರಸ್ಪರ ಭಾವಿಸಿದರೆ ಪರಿಣಾಮ ವಿಘಟನೆ.ಈ ಭಾವನೆಯನ್ನು ತೊಡೆದು ಹಾಕದಿದ್ದರೆ ಯಾರನ್ನು ಬಿಟ್ಟು ಯಾರನ್ನು ಯಾರನ್ನು ಪುನಃ ಮದುವೆಯಾದರೂ ಅಲ್ಲಿಯೂ ಇದೇ ಪಾಡು. ಒಬ್ಬರಿಗೊಬ್ಬರು ಹೊಂದಿಕೊಂಡು ಸಾಗಿ ಅಹಮಿಕೆಯನ್ನು ಬಿಟ್ಟರೆ ಯಾರನ್ನು ಯಾರೂ ಬಿಡಬೇಕಾದದ್ದಿಲ್ಲ. ಒಟ್ಟಾರೆ ಇದೇ ಪರಿಕ್ರಮದಲ್ಲಿ ಗಂಡನಿಗೆ ವಯಸ್ಸು ಹೋಗುತ್ತದೆ. ಹೆಂಡತಿಗೆ ಮುಟ್ಟು ಸಾರಿಸಿ ಹೋಗುತ್ತದೆ. ಆಕೆಗೆ ವಯಸ್ಸು ಆಗುವುದೇ ಇಲ್ಲ. ಏಕೆಂದರೆ ಈಗಾಗಲೇ ಎರಡು ಜನರನ್ನು ಬಿಟ್ಟು ಬಂದವಳು ಅವಳು ಎಂದಾದರೆ ಇನ್ನೂ ನಾಲ್ಕಾರು ಗಂಡಸರು ಆಕೆಗೆ ಬಂದಾರು !. ಹೆಣ್ಣಿನ ವಯಸ್ಸನ್ನು ಕೇಳಬಾರದೆಂದು ಮೊದಲೇ ಗಾದೆ ಇದೆ. ಅಷ್ಟರಮಟ್ಟಿಗೆ ಹೆಣ್ಣಿನ ಬಗ್ಯೆ ನಮ್ಮ ಸಮಾಜದಲ್ಲಿ ವಿಶೇಷತೆಯ ಅಪಭ್ರಾಂತಿಯನ್ನು ಹುಟ್ಟಿಸಿಬಿಟ್ಟಿದ್ದಾರೆ.
ಈ ತೆರನಾದ ಬಿರುಕಿಗೆ ಕಾರಣ ಹಲವಾರು.
 1 . ತಮ್ಮ ಆದಾಯಕ್ಕಿಂತ ಮಿಗಿಲಾದ ಬಯಕೆಗಳು.
2 .ಮತ್ತೊಬ್ಬರ ಬದುಕಿಗೆ ತಮ್ಮ ಜೀವನವನ್ನು ಹೋಲಿಸಿಕೊಂಡು ಕರುಬಿಕೊಳ್ಳುವುದು.
3 . ತಮ್ಮ ಸ್ಥಿತಿ ಮತ್ತು ಮಿತಿಯನ್ನು [ಭಗವಂತ ಕರುಣಿಸಿದ ಪಾಡು] ಮೀರಿ ಆಕಾಶವನ್ನು ನೋಡುವುದು. [ಇದು ಒಂದನೇ ಅಂಶಕ್ಕಿಂತ ಸ್ವಲ್ಪ ಭಿನ್ನ.]
 4 .ಗಂಡ-ಹೆಂಡತಿಯರಿಂದ ಪರಸ್ಪರ ಅತಿಯಾದ ನಿರೀಕ್ಷೆ.
5 . ಸಣ್ಣ ಪುಟ್ಟ ಸಂಗತಿಗಳಿಗೂ ಮಾತಿಗೆ ಮಾತು, ಜಗಳ.
6 . ಸಂಸಾರದಲ್ಲಿನ ಸಣ್ಣ ಪುಟ್ಟ ವಿಚಾರಕ್ಕೂ ಪರಸ್ಪರ ವಿಪರೀತ ಅವಲಂಬನೆ. ದೇವಸ್ಥಾನಕ್ಕೆ ಹೋಗಿಬರಲು ಗಂಡನು ಜೊತೆಯಲ್ಲಿಯೇ ಇರಬೇಕೆಂದು ಹೆಂಡತಿ ಬಯಸುವುದು. ಸ್ನಾನಕ್ಕೆ ನೀರು ಕಾಯಿಸಿಕೊಡಲು ಹೆಂಡತಿಯೇ ಬೇಕು ಎಂದು ಗಂಡ ಬಯಸುವುದು ...ಹೀಗೆ.
7 .ಯಾರೂ ತನಗೆ ಮುಖ್ಯ ಅಲ್ಲ ಎಂದು ಪರಸ್ಪರ ಸ್ವಪ್ರತಿಷ್ಠೆ ಮಾಡುವುದು.
 8 .ಒಬ್ಬರು ಮತ್ತೊಬ್ಬರಿಗೆ ಪಾಠ ಕಲಿಸುತ್ತೇನೆಂದು ಪರಸ್ಪರ ದಿನಗಟ್ಟಲೆ ಮಾತನಾಡದೆ ಸುಮ್ಮನೆ ಇರುವುದು.
9 . ಪದೇ ಪದೇ ಒಬ್ಬರ ತಪ್ಪನ್ನು ಮತ್ತೊಬ್ಬರು ಎತ್ತಿಯಾಡಿಸುವುದು. ತಮ್ಮ ತಪ್ಪಿಗೆ ಯಾವುದಾದರೂ ಒಂದು ಸಬೂಬನ್ನು ಹೇಳಿ ಜಾರಿಕೊಳ್ಳುವುದು.
 10 .ಒಬ್ಬರ ಒಳ್ಳೆಯ ಪ್ರಯತ್ನವನ್ನು ಮತ್ತೊಬ್ಬರು ಮೆಚ್ಚಿಕೊಳ್ಳದೆ ಇರುವುದು. ತಾನು ಮಾಡಿದ ಪ್ರಯತ್ನ ಸಂಸಾರದ ಒಳಿತಿಗೆ ವಿರುದ್ಧವಾಗಿದ್ದನ್ನು ಗಮನಿಸಿ ಮತ್ತೊಬ್ಬರು ಮತ್ತೊಂದು ದಿನ ವಿರೋಧಿಸಿದರು ಎನ್ನುವ ಕಾರಣಕ್ಕಾಗಿಯೇ ಅವರ ಸೂಕ್ತ ಪ್ರಯತ್ನವನ್ನು ವ್ಯರ್ಥವಾಗಿ ಕಡೆಗಣಿಸುವುದು.
11 . ಯಾವಾವುದೋ ಮನಸ್ತಾಪದಿಂದ ಹಾಸಿಗೆಯಲ್ಲಿ ದೂರ ಇರುವುದು. ಪ್ರತಿಭಾರಿ ಹತ್ತಿರ ಬಂದಾಗ ಏನಾದರೊಂದು ನೆವ ಹೇಳಿ ಸಂಪರ್ಕದಿಂದ ತಪ್ಪಿಸಿಕೊಳ್ಳುವುದು.
 12 . ಗಂಡ - ಹೆಂಡತಿಯರ ನಡುವೆ ಚಾರಿತ್ರಿಕವಾಗಿ ಪರಸ್ಪರ ಸಂಶಯ ಪಡುವುದು. ಯಾರು ಮತ್ತೊಬ್ಬರೊಡನೆ ಸಲಿಗೆಯಿಂದ ವರ್ತಿಸಿದರೂ ಅವರೊಡನೆ ಇನ್ನೊಬ್ಬರು ಸಂದೇಹದಿಂದ ನೋಡುವುದು. ಆದರೆ ಈ ತೆರನಾದ ಸಂಶಯದ ಬಿರುಕು ಈಗಿನ ದಂಪತಿಗಳಲ್ಲಿ ಬಹಳ, ಬಹಳ ಅಪರೂಪ.
September 14

Sunday, 24 August 2014

ಹೊಸ ವರುಷ

ಹೊಸ ವರುಷ ಹಳೆ ದುಗುಡ ...

ಹೊಸ ವರುಷ ಹೊಸತಲ್ಲ ನನಗೆ .. ನನ್ನಷ್ಟೇ ಹಳತು. |
ಹಳೆದುಗುಡ ಹೊಸೆತಿರಲು ಹೊಸತೇನ ಕಾಣಲಿ ನಾನು. |
ಹೊಸತನರಸಿದೊಡೆ ಆಸೆಗಳ ಹಾಸು - ಹೊಕ್ಕು
ಸಿಕ್ಕಾಗಿ ಬದುಕಿನ ಸೊಗಡು ಜಡವಾಯಿತು. |
ಕಾಲ ಕಲಿಸುವುದೊಂದೇ ಪಾಠ.. ನಿತ್ಯದಾಟ
ಹಳಸಲ ಮನಕೆ ಕರೆದು ತುಂಬುವ ನಿತ್ಯ ಚೇತನ. |


ಸರ್ವರಿಗೂ ಹೊಸವರುಷ ಶುಭವನ್ನು ಕೊಡಲಿ ..

- ಎಂ ಗಣಪತಿ , ಕಾನುಗೋಡು .

ಅಡಿಕೆ ಬೆಲೆ ಗಗನಕ್ಕೆ

ಕೆಂಪು ಅಡಿಕೆ ಬೆಲೆ ಗಗನಕ್ಕೆ ಏರಿದೆ ಎನ್ನುವುದು ಸುಳ್ಳಲ್ಲ. ಕೆಂಪು ಅಡಿಕೆ ಬೆಳೆಗಾರನಿಗೆ ಸಿಗುವುದು ಒಂದು ಎಕರೆಯಲ್ಲಿ , ಸರಿಯಾದ ಸಮಯದಲ್ಲಿ ಕೊಯಿಲು ಮಾಡಿದರೆ, ಒಟ್ಟು ಉತ್ಪನ್ನದ ಮೂರನೆಯ ಒಂದು ಭಾಗ ಮಾತ್ರ. ಸಾಗರ ಪ್ರಾಂತ್ಯದಲ್ಲಿ ಸರಾಸರಿ ಒಂದು ಎಕೆರೆಗೆ 12 ಕ್ವಿಂಟಾಲ್ ಅಷ್ಟೇ. ಅಂದರೆ ರೈತನಿಗೆ ಒಂದು ಎಕೆರೆಯಲ್ಲಿ ಮೂರು ಕ್ವಿಂಟಾಲ್ ಕೆಂಪಡಿಕೆ ಸಿಗುತ್ತದೆ. ಅದರಲ್ಲೂ ಕೆಂಪು ಗೋಟು ಬೇರ್ಪಡೆಯಾಗುತ್ತದೆ. ಅದಕ್ಕೆ ಧಾರಣೆ ಕಡಿಮೆ. ಉಳಿದ 9 ಕ್ವಿಂಟಾಲ್ ಅಡಿಕೆಯಲ್ಲಿ ಚಾಲಿ[ಬಿಳಿ ಅಡಿಕೆ], ಬಿಳಿಗೋಟು, ಕಲ್ವಾರು. ಕೋಕ [ಅತಿ ಲಡ್ಡು ಅಡಿಕೆ]ಇವೆಲ್ಲ ಸೇರಿಕೊಳ್ಳುತ್ತದೆ. ಇವಕ್ಕೂ ಒಮ್ಮೆ ಬೆಲೆ ಬಂದರೂ ಈ ವಿವಿಧ ಬಗೆಯ ಚಾಲಿ ಬೇರ್ಪಡೆಗಳಿಗೆ ಧರ ತಾರತಮ್ಯವಿದೆ. ಕಳೆದ ಚುನಾವಣೆಯ ನಂತರ ಧಾರಣೆ ಒಳಗೆ ಬರುತ್ತದೆ ಎನ್ನುವ ಕಾರಣ ಮತ್ತು ಪಡೆದ ಸಾಲವನ್ನು ತೀರಿಸಿ ಚೊಕ್ಕವಾಗುವ ಕಾರಣಗಳಿಂದ ಬಹುತೇಕ ಬೆಳೆಗಾರರು ಚಾಲಿ ಅಡಿಕೆಯನ್ನೂ ಧಾರಣೆ ಏರುವ ಮೊದಲೇ ಮಾರಾಟ ಮಾಡಿದ್ದಾರೆ. ಕಳೆದ ವರ್ಷ ಕೊಳೆ ರೋಗ ಮತ್ತು ಪ್ರಾಕೃತಿಕ ಒತ್ತಡದಿಂದಾಗಿ ಈ ಉತ್ಪನ್ನ್ನದಲ್ಲೂ ಅತಿ ಕಡಿಮೆಯಾಗಿದೆ. ಸಾಗರದ ಇದೇ ಮಾದರಿ ಉಳಿದ ಎಲ್ಲಾ ಅಡಿಕೆ ಬೆಳೆಯುವ ಪ್ರದೇಶಕ್ಕೂ ಸ್ವಲ್ಪ ತಾರತಮ್ಯದಲ್ಲಿ ಹೊಂದಿಕೊಂಡಿದೆಯೇ ವಿನಃ ಬಹಳ ವ್ಯತ್ಯಾಸವಿಲ್ಲ.

ಇಷ್ಟಕ್ಕೂ ಮಲೆನಾಡಿನ ಪಾರಂಪರಿಕ ಅಡಿಕೆ ಬೆಳೆಗಾರ ಹೊಂದಿರುವ ತಲಾ ಅಡಿಕೆ ತೋಟವೆಷ್ಟು?. ಹತ್ತು ಗುಂಟೆಯಿಂದ ಒಂದು ಎಕರೆ ಕ್ಷೇತ್ರವಷ್ಟೇ. ಇದು ಸರಾಸರಿ ಹಿಡುವಳಿಯ ಮಾಹಿತಿ. ಇತ್ತೀಚೆಗೆ ಕೆಲವರು ಒಂದೂಅರ್ಧಎಕೆರೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಡಿಕೆ ಬೆಳೆಗಾರನ ಸಾಲ ಎಷ್ಟಿದೆಯೆಂದು ಅವನ ಹೆಂಡತಿಗೂ ಗೊತ್ತಿಲ್ಲ. ಹೇಳಿದರೆ ಮರ್ಯಾದೆ ಹೋಗುತ್ತದೆ. ಕಾರಣ ಅಡಿಕೆ ಧಾರಣೆ ಬಹಳ ಇದೆಯೆಂದು ಎಲ್ಲರೂ ಹೇಳುತ್ತಿದ್ದಾರೆ. ಕೃಷಿಯ, ಕೂಲಿಯ ಖರ್ಚನ್ನೂ ಯಾರೂ ಪ್ರಸ್ತಾಪ ಮಾಡುತ್ತಿಲ್ಲ.

ಇನ್ನು, ಈಗ ಏರಿದ ಕೆಂಪಡಿಕೆ ಧಾರಣೆ ಬೆಳೆಗಾರನ ನಾಲ್ಕನೇ ಒಂದು ಭಾಗದ ಬೆಳೆಗೆ ಮಾತ್ರ. ಅದೂ ಅವನ ಕೈಗೆ ಸಿಗಲಿಲ್ಲ. ಕಿವಿಯಲ್ಲಿ ಕೇಳಿದ್ದಷ್ಟೇ. ಅಡಿಕೆಯ ಬೆಲೆ ಗಗನದಲ್ಲಿ. ಬೆಳೆಗಾರನಿಗೆ ಅದು ಗಗನ ಕುಸುಮ. ಕಣ್ಣಿಗೆ ಕಾಣುತ್ತದೆ, ಕೈಗೆ ಸಿಕ್ಕಿಲ್ಲ. ಅವನ ಎಲ್ಲಾ ಬೆಳೆಯನ್ನು ಫೆಬ್ರುವರಿ ತಿಂಗಳಿನಲ್ಲಿ ಮಾರಾಟ ಮಾಡಿ ಸಾಲ ತೀರಿಸಿ ಹೊಸ ಸಾಲಕ್ಕೆ ಅರ್ಜಿ ಹಾಕಿ ಸಾಲದ ಹಣ ಬರುವುದಕ್ಕೆ ಈಗ ಹಲ್ಲುಗಿಂಜಿ ಕುಳಿತಿದ್ದಾನೆ.

ಒಟ್ಟಾರೆ ನಮ್ಮ ರೈತ " ಈಗ ಸ್ವಲ್ಪ ಕಷ್ಟದಲ್ಲಿದ್ದೇನೆ,ಇನ್ನು ನಾಲ್ಕು ವರ್ಷ ಹೋದರೆ ಸುಧಾರಿಸಿ ಕೊಳ್ಳುತ್ತೇವೆ " ಎಂದು ಹೇಳಿಕ್ಪ್ಳ್ಳುತ್ತಲೇ ಸಾಯುತ್ತಾನೆ. ಇದು ಅಜ್ಜರೈತನಿಂದ ಹಿಡಿದು ಮೊಮ್ಮಗ,ಮಿಮ್ಮಗರೈತನವರೆಗೂ ಇರುವ ಆದ್ಯಂತ ಕಥೆ.

ವೃಥಾ ಮಾಧ್ಯಮದವರು ಆಕಾಶದಲ್ಲಿ ಹಾರಾಡುವ ಪ್ಯಾರಾಚೂಟನ್ನೇ ವೈಭವೀಕರಿಸಿ ಬೇರೆಯವರಿಗೆ, ಸರ್ಕಾರಕ್ಕೆ ಅಡಿಕೆ ಬೆಳೆಗಾರನ ಮೇಲೆ ಕಣ್ಣು ದೃಷ್ಟಿ ತಾಗುವ ಹಾಗೆ ಮಾಡುತ್ತಿದ್ದಾರೆ. ಅಯ್ಯೋ ದೇವರೇ ನಾನೊಬ್ಬ ಅಡಿಕೆ ಬೆಳೆಗಾರ. "ಗಂಡ ಸತ್ತ ದುಃಖ ಬೇರೆ, ಬಡ್ಡುಗತ್ತಿಯ ಉರಿಬೇರೆ " ಎಂಬ ಗಾದೆ ಈಗ ಅಳಿಸಿಹೋದರೂ ಅದರ ವೇದನೆ ನನಗೆ ಪುನಃ ಪುನಃ ಬರುವಂತೆ ಮಾಡುತ್ತಿದ್ದಾರಲ್ಲಾ. ಈ ವರ್ಷ ಮಳೆಯೂ ಇಲ್ಲದೆ ಬರುವ ಬೆಳೆಯೂ ಆತಂಕದಲ್ಲಿದೆ. ನಮ್ಮನ್ನು ದೇವರೇ ಕಾಯಬೇಕು.

ಹುಟ್ಟಿದ ಮಗು ಗಂಡೋ ಅಥವಾ ಹೆಣ್ಣೋ ಎನ್ನುವುದಕ್ಕೆ ಶಂಖ ಮತ್ತು ಜಾಗಟೆಯ ಬಳಕೆ ..


ಗಂಡು ಹುಟ್ಟಿದರೆ ಶಂಖ. ಹೆಣ್ಣು ಹುಟ್ಟಿದರೆ ಜಾಘಂಟೆ :

ಸಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಆಗ ಹಳ್ಳಿಗಳಲ್ಲಿ ಮನೆಯಲ್ಲಿಯೇ ಗರ್ಭಿಣಿಯರು ಪ್ರಸವವಾಗುವ ಕಾಲ. ಊರಿನಲ್ಲಿರುವ ಅನುಭವಿ ಮಹಿಳೆಯರು ಹೆರಿಗೆಯನ್ನು ಮಾಡಿಸುವುದಕ್ಕೆ ಸಹಾಯವಾಗುತ್ತಿದ್ದರು.

ಗರ್ಭಿಣಿಗೆ ಪ್ರಸವ ವೇದನೆ ಪ್ರಾರಂಭವಾದ ಕೂಡಲೇ ಅದಕ್ಕೆ ಬೇಕಾದ ವ್ಯವಸ್ಥೆಗಳೊಂದಿಗೆ ಶಂಖ ಮತ್ತು ಜಾಘಂಟೆಯೂ ಮುಂಜಾಗರೂಕತೆಯಿನ್ದ ಅಲ್ಲಿ ತನ್ದಿಟ್ಟುಕೊಳ್ಳಲಾಗುತಿತ್ತು. 

ಹುಟ್ಟಿದ್ದು ಗಂಡುಮಗುವಾದರೆ ಯಾರಾದರೊಬ್ಬರು ಮನೆಯ ಹೊರಗೆ ಬಂದು ಎದುರು ಅಂಗಳದಲ್ಲಿ ನಿಂತು ಗಟ್ಟಿಯಾಗಿ ಸುತ್ತಮುತ್ತ ಊರಿಗೆಲ್ಲಾ ಕೇಳುವ ಹಾಗೆ ಶಂಖವನ್ನು ಊದುತ್ತಿದ್ದರು. ಹೆಣ್ಣುಮಗುವಾದರೆ ಹಾಗೆಯೇ ಜಾಘಂಟೆಯನ್ನು [ಜಾಗಟೆ, ಜಾವುಟೆ] ಗಟ್ಟಿಯಾಗಿ ಹೊಡೆಯುತ್ತಿದ್ದರು. ಇದು ಮಗು ಹುಟ್ಟಿದ ತಕ್ಷಣ ಮಾಡುತ್ತಿದ್ದ ಅಂದಿನ ಕ್ರಮ.

ಇಂದು, ಈಗ, ನಮ್ಮ ಮನೆಯಲ್ಲಿ ಗಂಡು ಅಥವಾ ಹೆಣ್ಣು ಮಗುವು ಜನ್ಮ ತಾಳಿತು ಎಂದು ನೆರೆಹೊರೆಗೆಲ್ಲಾ ಸಾರುವುದೇ ಈ ಪದ್ಧತಿ ಅನುಸರಣೆಯ ಉದ್ದೇಶವಾಗಿತ್ತು

ಸಾಗರ ತಾಲ್ಲೂಕಿನ ಕೆಲವು ಕಡೆ ಐವತ್ತು ವರ್ಷಗಳ ಹಿಂದೆಯೇ ಈ ಪದ್ಧತಿ ಬಿಟ್ಟು ಹೋಗಿದೆ. ಸಾಗರದ ಕೆಲವು ಕಡೆ, ಉತ್ತರಕನ್ನಡ ಮತ್ತು ದಕ್ಷಿಣಕನ್ನಡದ ಹವ್ಯಕರಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದಿನ ಆಸುಪಾಸು ಇದು ಚಾಲ್ತಿಯಲ್ಲಿ ಇತ್ತು.

Monday, 28 July 2014

ಜರೆದ ಹಾಡು :


ಏನ್ ಮರುಳಾದೆ ದಗಡಿ ಪೀಪಿ ಊದ್ದವಂಗೆ |
ಒಣಗಿದ ಮರಕೆ ತಮಟೆ ಕಟ್ಕೊಂಡ್ ಡಾಮ್ ಡೂಮ್ ಎಂದವಂಗೆ || ಪ ||
ಸಾಲಿಸೀರೆ ಉಟ್ಟುಕೊಂಡು ಬಟ್ ಮುತ್ ಕೊರಳಿಗೆ ಕಟ್ಟಿಕೊಂಡು |
ಕೃಷ್ಣಭಟ್ಟನ ಕೂಡಿಕೊಂಡು ಅಗಳ ಬಿದ್ದು ಓಡ್ದಾಂಗಲ್ಲಾ |೧|
ಏನ್ ಮರುಳಾದೆ ............
ಇದು ಒಂದು ಜರೆದ ಹಾಡಿನ ಒಂದು ತುಣುಕು. ಹವ್ಯಕರಲ್ಲಿ ಸುಮಾರು 50 ವರ್ಷಗಳ ಹಿಂದೆ ಈ ತೆರನ ಜರೆದ ಹಾಡುಗಳು ಪ್ರಚಲಿತದಲ್ಲಿದ್ದುವು.ಈ ಮೇಲೆ ಬರೆದ ಹಾಡು ಮದುವೆ ಮನೆಯಲ್ಲಿ ಗಂಡಿನ ಕಡೆಯವರು ಮದುವಣಗಿತ್ತಿಯನ್ನು ಜರೆಯುವ ಹಾಡು. ಇದಕ್ಕೆ ಉತ್ತರವಾಗಿ ವಧುವಿನ ಕಡೆಯವರು ಮದುಮಗನನ್ನು ಜರೆದು ಒಂದು ಹಾಡನ್ನು ಹೇಳುತ್ತಿದ್ದರು. ಸಮಾಜ ಶಾಸ್ತ್ರಜ್ಞರು ಇದನ್ನು ' joking relationship ' ಎನ್ನುತ್ತಾರೆ. ಊಟಕ್ಕೆ ಕುಳಿತಾಗ ಒಂದು ಕಡೆಯವರು [ವಧುವಿನ ಮನೆಯಲ್ಲಾಗಲಿ ವರನ ಮನೆಯಲ್ಲಾಗಲಿ ಊಟಕ್ಕೆ ಕುಳಿತವರು] ಮೊದಲು ಹೀಗೆ ಒಂದು ಜರೆದ ಹಾಡನ್ನು ಪ್ರಾರಂಭಿಸುತ್ತಿದ್ದರು. " ಚೂರು ಹೋಳಿಗೆ ಬಡಿಸಿದಳೆ ಭೀಗಿತಿ ಸೂಜಿಲಿ ತುಪ್ಪವ ತೂರಾಡಿದಳೆ............... " ಎಂದು ಒಗ್ಗರಿಸುತ್ತಿದ್ದರು. ಇದನ್ನು ಸ್ವಲ್ಪ ಹೊತ್ತು ತನ್ನ ಜೊತೆಯವರೊಡನೆ ಆಲಿಸಿದ ಎದುರು ಕಡೆಯ ಭೀಗಿತಿ ತಕ್ಷಣ ಒಳಗಿನಿಂದ ಹರಿವಾಣ ಹೋಳಿಗೆಯನ್ನು ತಂದು ಹಾಡು ಹೇಳಿದವರಿಗೆ ತಲಾ ಎರಡೆರಡು ಹೋಳಿಗೆಯನ್ನು ಬಡಬಡನೆ ಬೇಡ ಬೇಡವೆಂದರೂ ಹಾಕುತ್ತಿದ್ದಳು. ಅದರ ಮೇಲೆ ಸೌಟಿನಲ್ಲಿ ತುಪ್ಪವನ್ನು ಸುರುವುತ್ತಿದ್ದಳು. ಆಗ ನಗೆಯ ಹೊಯಿಲು ಎರಡೂ ಕಡೆಯವರಿಂದ ತೇಲುತ್ತಿದ್ದವು. ಅಲ್ಲದೆ ಅದಕ್ಕೆ ಉತ್ತರವಾಗಿ [ಅದಕ್ಕಾಗಿಯೆ ಮೊದಲು ಜರೆದವರು ಕಾಯುತ್ತಿದ್ದವರು] ಎದುರು ಕಡೆಯವರು ಮತ್ತೊಂದು ಜರೆದ ಹಾಡನ್ನು ಝಡಾಯಿಸುತ್ತಿದ್ದರು. " ಹಡಗಿನ ಹೊಟ್ಟೆಗೆ ಹೆಡಿಗೆ ಹೋಳಿಗೆ ಹೊಳೆಗೆ ಉಪ್ಪ ಕರಡಿದ ಹಾಗೆ ಆಯ್ತಲ್ಲೇ ಭೀಗಿತಿ.......... " ಎಂದು ಕೊಟ್ಟ ಉತ್ತರಕ್ಕೆ ಮತ್ತೆ ಎರಡೂ ಕಡೆಯವರಿಂದ 'ಹೋ' ಎಂದು
ನಗೆಯ ಹೊಯಿಲು. ಅಂದಿನ ಮದುವೆ ಸಮಾರಂಭದಲ್ಲಿ ಹಾಡು ಹೇಳುವವರೆ ಒಂದು ತಂಡವಾಗಿ ಕುಳಿತುಕೊಳ್ಳುತ್ತಿದ್ದರು. ಅಂದು ಈಗಿನ ಹಾಗಲ್ಲ. ಪ್ರತಿಯೊಬ್ಬ ಹೆಣ್ಣುಮಗಳೂ ಹಾಡುಗಳನ್ನು ಕಲಿತುಕೊಳ್ಳಬೇಕೆಮ್ಬ ಸಾಮಾಜಿಕ ನಿಯಮ ಹವ್ಯಕರಲ್ಲಿ ಇತ್ತು. ಚೌಲ, ಉಪನಯನ, ಮದುವೆಗಳ ಹಾಡುಗಳು, ಇಂತಹ ಮದುವೆ ಮನೆಯ ಜರೆದ ಹಾಡುಗಳು, ದೇವರ ಮೇಲಿನ ಹಾಡುಗಳು, ಹಬ್ಬಹರಿದಿನಗಳ ಹಾಡುಗಳು, ಜೋಗುಳದ ಹಾಡುಗಳು, ಹೀಗೆ ಇನ್ನೂ ಅನೇಕ ನೂರಾರು ಹಾಡುಗಳು ಅಂದಿನ ಹೆಂಗಸರಿಗೆ ಕರಗತವಾಗಿದ್ದುವು. ಹಾಡನ್ನು ಕಲಿಯದ ಹೆಣ್ಣುಮಕ್ಕಳನ್ನು ಕುರಿತು ಅಂದಿನ ಅಜ್ಜಿಯರು " ಹಾಡು ಬರೋದಿಲ್ಲ,ಸೇಡಿ ಬರೋದಿಲ್ಲ ನಾವೈದೇವಕ್ಕ ದುರ್ದುಂಡೇರು " ಎಂದು ಮೂದಲಿಸುತ್ತಿದ್ದರು. ಅನಕ್ಷರತೆಯ ಅಂದಿನ ಕಾಲದಲ್ಲಿ ಕಿವಿಯಿಂದ ಕಿವಿಗೆ ಹಾಡುಗಳು transfer ಆಗುತ್ತಿದ್ದುವು. ತಾಯಿ ಮಗಳಿಗೆ ಚಿಕ್ಕಂದಿನಿಂದಲೇ ಅವುಗಳನ್ನು ಕಲಿಸುತ್ತಿದ್ದಳು. ಅಷ್ಟರ ಮಟ್ಟಿಗೆ ತಾಯಿಯೂ ಪರಿಣಿತರಿಳುತ್ತಿದ್ದಳು.
ಹೀಗೆ ವಧುವಿನ ಮನೆಯಲ್ಲಿ ಹೆಚ್ಹಾಗಿ ಗಂಡಿನ ಕಡೆಯವರು ಜರೆದ ಹಾಡನ್ನು ಪ್ರಾರಂಭಿಸುತ್ತಿದ್ದರು. ಅದಕ್ಕಾಗಿಯೆ ಪೂರ್ವ ತಯಾರಿಯೂ ನಡೆದಿರುತಿತ್ತು. ಇದಕ್ಕೆ ಸಾಕಷ್ಟು ಇಲ್ಲಿ ವಧುವಿನ ಕಡೆಯವರು ಉತ್ತರವನ್ನು ಕುಟ್ಟಿಯೂ ಆಗುತಿತ್ತು. ಇದಕ್ಕೆ ಸಾಲದೆಂಬಂತೆ ಮರುದಿನ ವರನ ಮನೆಯಲ್ಲಿ ವರನ ಕಡೆಯವರಿಗೆ ಇನ್ನಷ್ಟು ಕುಟ್ಟಿಗಾಣಿಸಬೇಕೆನ್ದು ವಧುವಿನ ಕಡೆಯವರು ಇನ್ನಷ್ಟು ತಯಾರಿ ನಡೆಸುತ್ತಿದ್ದರು. ಸೊಂಟ ಉಳಿಕಿದೆಯೆಂದು ಅಂದು ಊರಿನ ತಮ್ಮ ಮನೆ ಮದುವೆ ಬರದಿದ್ದ ಆ ಊರಿನ ಹಾಡಿನ expert ಮೇಲಿನಮನೆ ಗಂಗಕ್ಕನನ್ನೂ ಗಾಳಿ ಹೊಡೆದು ಮರುದಿನದ ತಮ್ಮ ಮನೆಯ ದಿಬ್ಬಣಕ್ಕೆ ready ಮಾಡುತ್ತಿದ್ದರು.
ಹೀಗೆ ಮರುದಿನ ವರನ ಮನೆಯ ವಧು ಗೃಹಪ್ರವೇಶದ ಸಮಾರಂಭದಲ್ಲಿ ವಧುವಿನ ಕಡೆಯವರಿಂದ ಮೊದಲು ಅನುಕ್ರಮವಾಗಿ ಮನೆದುಂಬಿಸಿದ ಹಾಡು, ಮಡಿಲಕ್ಕಿ ತೂರಿದ ಹಾಡು, ಚೆಟ್ಟು ಹೊಯ್ದ ಹಾಡು ಹೀಗೆ ಸರಣಿ ಹಾಡುಗಳು ಮೆರೆಯುತ್ತಿದ್ದವು. ನಂತರ ಜರೆದ ಹಾಡಿನ ಅಬ್ಬರ. ನಿನ್ನೆ ಮೊದಲು ಗಂಡಿನ ಕಡೆಯವರು ತಮ್ಮ ಮನೆಯಲ್ಲಿ ಜರಿಯಲು ಶುರುಮಾಡಿದ ಹಾಗೆ ಇಂದು ಗಂಡಿನ ಮನೆಯಲ್ಲಿ ಹೆಣ್ಣಿನ ಕಡೆಯವರದ್ದೇ ಮೊದಲ ಪಾಳಿ. ವರನನ್ನು ಜರೆಯುವುದು, ಭೀಗಿತಿ ಅಥವಾ ಭೀಗರು ,ಗಂಡಿನ ಕಡೆಯ ನೆಂಟರು ಹೀಗೆ ಎಲ್ಲರನ್ನು ಜರೆದು ಹಾಡನ್ನು ಹೇಳಿ ಮೋಜಿನ ವಾತಾವರಣವನ್ನು ನಿರ್ಮಾಣವನ್ನು ಮಾಡುವುದು. ಅದಕ್ಕೆ ಉತ್ತರವಾಗಿ ಗಂಡಿನ ಕಡೆಯವರು ಝಡಾಯಿಸುವುದು. ಯಾರು ಯಾರನ್ನು ಜರೆದರೂ ಅದೇ ಒಂದು ಮೋಜು ಆಗುತಿತ್ತು. ಎರಡೂ ಕಡೆಯವರು 'ಹುಯ್ಯೋ' ಎಂದು ಅತ್ಯಂತ ಖುಷಿಯಿಂದ ನಗೆಯಾಡುತ್ತಿದ್ದರು. ಅತಿ ಕೊನೆಗೆ ಇಲ್ಲಿಯವರೆಗೆ ಬೀಗರನ್ನು ಜರೆಯದೆ ಇದ್ದರೆ [ ಈ ಹೊಗಳುವ ಸಲುವಾಗಿಯೇ ಯಾರಾದರೊಬ್ಬ ಮುಖ್ಯಸ್ತರನ್ನು ಮೊದಲು ಜರೆಯುತ್ತಿರಲಿಲ್ಲ] ಈಗ ಭೀಗರನ್ನು ಹೊಗಳಿ ಹಾಡನ್ನು ಹೇಳಿ ಇಷ್ಟು ಹೊತ್ತಿನವರೆಗೆ ಯಾರಿಗಾದರೂ ಒಮ್ಮೆ ಬೇಸರವಾಗಿದ್ದರೆ ಅದನ್ನು compensete ಮಾಡುವುದು. ಇದು ಎರಡೂ ಕಡೆಯವರಿಂದ ನಡೆಯುವ ಓಲೈಕೆಯ ತಂತ್ರ. ಕೆಲವೊಮ್ಮೆ ಈ ರೀತಿಯ ಜರೆವ ಹಾಡಿನ ಪ್ರಕ್ರಿಯೆ ಜಡಕಿಗೆ ಸಿಕ್ಕು [ ಜರೆಯುವುದರಲ್ಲಿ ಒಂದು ಕಡೆಯವರು weak ಇದ್ದಾಗ ] ಎರಡು ಸಂಬಂಧಗಳ ನಡುವೆ ಜಗಳ ಆಗಿದ್ದು ಉಂಟು.
ಒಟ್ಟಾರೆ ಅಂದಿನ ಕಾಲದಲ್ಲಿ ಶುಭಾಸಮಾರಂಭದಲ್ಲಿ ಧಾರ್ಮಿಕವಿಧಿಗಳನ್ನು ಪ್ರಸ್ತುತಪಡಿಸುವ ಮಂತ್ರಗಳ ಜೊತೆಗೆ ಅದೇ ಧಾರ್ಮಿಕ ವಿಧಿಗಳ ಝಾಡನ್ನು ಬಿಂಬಿಸುವ ಹಾಡುಗಳೂ ಇರುತ್ತಿದ್ದುವು. ಜೊತೆಗೆ ಸಂಬಂಧಗಳನ್ನು ಬೆಸೆಯುವಂಥಹ ತಮಾಷೆಯ ಜರೆಯುವ ಹಾಡುಗಳೂ ಇರುತ್ತಿದ್ದುವು. ವಿಧ್ಯುಕ್ತವಾದ ಧಾರ್ಮಿಕ ವಿಧಿಗಳ ಮದುವೆ ಕಾರ್ಯಕ್ರಮದಲ್ಲಿ ಅಂದಿನ ಸಣ್ಣ ವಯಸ್ಸಿನ [ ಗಂಡು ಹದಿನಾರರಿಂದ ಇಪ್ಪತ್ತು ವರ್ಷಗಳು.ಹೆಣ್ಣು ಎಂಟರಿಂದ ಹದಿನೈದು ವರ್ಷಗಳು] ವಧು ಮತ್ತು ವರರ ನಡುವೆ ಸುಲಭ ಸಾಂಗತ್ಯವನ್ನು ಏರ್ಪಡಿಸುವುದಕ್ಕಾಗಿ ಓಕುಳಿಯಾಡುವುದು, ನೀರಿನಲ್ಲಿ ಹಾಕಿದ ಉಂಗುರವನ್ನು ಹುಡುಕಿ ತೆಗೆಯುವುದು [ಅದನ್ನು ಹುಡುಕಿ ತೆಗದವರಿಗೆ ಆ ಉಂಗುರ], ಅಲ್ಲೇ ಮದುವೆ ಮನೆಯಲ್ಲಿ ವಧು,ವರರು ಮೀನು ಹಿಡಿಯುವ ಆಟವನ್ನುಆಡುವುದು ಮುಂತಾದ ಪ್ರಕ್ರಿಯೆಗಳು ಜರೆದ ಹಾಡುಗಳನ್ತಾದ್ದೆ ಮತ್ತೊಂದು ರೂಪ.ಸ್ಸಕಸ್ಃಟು ಪುರುಸೊತ್ತು ಇದ್ದ ಅಂದಿನ ಜೀವನ ಕ್ರಮದಲ್ಲಿ ನವ ವಧು ಮತ್ತು ವರ ಹಾಗೂ ಹೊಸ ಎರಡು ಸಂಬಂಧಗಳನ್ನು ಚೆನ್ನಾಗಿ ಬೆಸೆಯುವಂತಹ ಹವ್ಯಕರ ಸಾಮಾಜಿಕ ಪ್ರಕ್ರಿಯೆ ಇವುಗಳಾಗಿದ್ದುವು.

Sunday, 13 July 2014

===== ಹವ್ಯಕರ ಮದುವೆಯಲ್ಲಿ ಅಂದಿನ ಸಂಪ್ರದಾಯ. =====



ಹವ್ಯಕರ ಮದುವೆ ಮನೆಯಲ್ಲಿ ಗಂಡಿನ ಕಡೆಯ ನೆಂಟರನ್ನು ಊಟಕ್ಕೆ ಕರೆಯುವುದರಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಸಂಪ್ರದಾಯವಿತ್ತು. ನೆಂಟರಿಗೆನ್ದೇ ಒಂದು ಬಿಡಾರದ ಮನೆಯೆಂದು ಊರಿನಲ್ಲಿ ಒಂದು ಮನೆಯನ್ನು ಹೆಣ್ಣಿನಕಡೆಯವರು ವ್ಯವಸ್ಥೆ ಮಾಡುತ್ತಿದ್ದರು. ಅದು ಹೆಚ್ಚಾಗಿ ಮದುವೆ ಮನೆಯ ಮೊದಲೇ ಇರುತ್ತಿತ್ತು. ಏಕೆಂದರೆ ಗಂಡಿನಕಡೆಯವರು ಮದುವೆಗೆ ಮುಂಚೆ ಮದುವೆಮನೆಯನ್ನು ದಾಟಿ ಹೋಗುವ ಪದ್ಧತಿಯಿರಲಿಲ್ಲ. ಅಲ್ಲಿ ಅವರು ಕೈಕಾಲು,ಮುಖತೊಳೆದುಕೊಳ್ಳಲಿಕ್ಕೆ,ಬಟ್ಟೆ ಬದಲಾಯಿಸಿಕೊಳ್ಳುವುದಕ್ಕೆ, ತಾತ್ಕಾಲಿಕ ವಿಶ್ರಾಂತಿ ತೆಗೆದುಕೊಳ್ಳಲಿಕ್ಕೆ,ಲಘು ಪಾನೀಯಕ್ಕೆ ಅನುಕೂಲತೆ ಕಲ್ಪಿಸಲಾಗುತ್ತಿತ್ತು. ಅಂದು ಎಲ್ಲರಿಗೂ ಸಾಕೆನ್ನುವಷ್ಟು ಪುರುಸೊತ್ತು ಇದ್ದ ಕಾಲ.

ಮದುವೆ ಕಾರ್ಯಕ್ರಮ ಮುಗಿದಕೂಡಲೆ ನೆಂಟರು ಬಿಡಾರದ ಮನೆಗೆ ತಮ್ಮ ಅನುಕೂಲತೆಗಾಗಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಇಲ್ಲಿ ಹೆಣ್ಣಿನ ಮನೆಯಲ್ಲಿ ಊಟಕ್ಕೆ ತಯಾರಾದ ಕೂಡಲೆ ಮನೆಯ ಯಜಮಾನ ಪುರೋಹಿತರೊಡಗೂಡಿ ನೆಂಟರ ಬಿಡಾರದ ಮನೆಗೆ ಬರುತ್ತಿದ್ದ.ಹಾಗೆ ಬರುವಾಗ ಮಂಗಲಾಕ್ಷತೆ,ಒಂದು ಮಡಿ ಮತ್ತು ಒಂದು ಚೊಂಬು ನೀರು ಅವನ ಸಹಾಯಕರೊಂದಿಗೆ ತರುತ್ತಿದ್ದ. ಆ ನೀರಿನ ಚೊಂಬು ಮತ್ತು ಮಡಿಯನ್ನು ಮುಖ್ಯ ಬೀಗರೆದುರು ಇಡುತ್ತಿದ್ದ.ಕೈಕಾಲು,ಮುಖ ತೊಳೆದು ಮಡಿಯುಟ್ಟು ಊಟಕ್ಕೆ ಬರಬೇಕೆಂದು ಭಿನ್ನವಿಸಿಕೊಳ್ಳುತ್ತಿದ್ದ. ಅದಕ್ಕಾಗಿಯೆ ಆ ಮಡಿ ಮತ್ತು ನೀರು [ಸಾಂಕೇತಿಕವಾಗಿ]. ಪುರೋಹಿತರು ಅವರನ್ನು ಊಟಕ್ಕೆ ಆಹ್ವಾನಿಸುವ ಮಂತ್ರವೊಂದನ್ನು ಹೇಳುತ್ತಿದ್ದರು.ಅಷ್ಟಾದ ನಂತರ ಸರ್ವರೂ ಊಟಕ್ಕೆ ಆಗಮಿಸಬೇಕೆಂದು ಯಜಮಾನ ಬೀಗರು,ನೆಂಟರೆದುರಿಗೆ ಕೈ ಮುಗಿದು ಆಹ್ವಾನಿಸುತ್ತಿದ್ದ. ಅದಕ್ಕಾಗಿ ಬೀಗರು,ನೆಂಟರೆಲ್ಲರಿಗೆ ಅಕ್ಷತೆಯನ್ನು ಕೊಡುತ್ತಿದ್ದ. ಅಷ್ಟರಲ್ಲಿಯೇ ನೆಂಟರು ಆಗಿನ ಪದ್ಧತಿಯಂತೆ ಅಂಗಿ,ಬನಿಯನ್ ತೆಗೆದು ಶಲ್ಯ ಹೊದೆದುಕೊಂಡು ಊಟದ ಕರೆಗಾಗಿ ಅಣಿಯಾಗಿರುತ್ತಿದ್ದರು. ಆಗಿನ ಕಾಲದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಗಂಡಸರೆಲ್ಲರೂ ಪಂಚೆಯುಟ್ಟು ಬರುತ್ತಿದ್ದರು. ಈ ರೀತಿ ಆಹ್ವಾನ ಬಂದ ನಂತರ ಬೀಗರು,ಅವರ ಹಿಂದೆ ಆಯಾ ಮಟ್ಟದ ಜೇಷ್ಟತೆಯ ಮೇಲೆ ಮದುವೆ ಮನೆಗೆ ಔತಣಕ್ಕೆ ಎಲ್ಲರೂ ಹೊರಡುತ್ತಿದ್ದರು. ಇಲ್ಲಿ ಇನ್ನೊಂದು ವಿಶೇಷವೆಂದರೆ ನೆಂಟರನ್ನು ಊಟಕ್ಕೆ ಕರೆತರಲು ಓಲಗದವರು ಓಲಗ ವನ್ನು ನೆಂಟರ ಮುಂದೆ ಊದುತ್ತ ಬರುತ್ತಿದ್ದರು. ನೆಂಟರು ನಿಧಾನ ನಡಿಗೆಯಲ್ಲಿ ಓಲಗದವರು,ಮನೆಯ ಯಜಮಾನನನ್ನು ಹಿಂಬಾಲಿಸುತ್ತಿದ್ದರು. ಹೀಗೆ ಮದುವೆಮನೆಗೆ ಬಂದು ನೆಂಟರು ಔತಣವನ್ನು ಸ್ವೀಕರಿಸುವ ಸಂಪ್ರದಾಯವಿತ್ತು.
ನೆಂಟರಿಗೆ ಊಟವಾದ ಹೊರತು ಹೆಣ್ಣಿನ ಕಡೆಯವರು ಊಟ ಮಾಡುವ ಹಾಗಿರಲಿಲ್ಲ.ನೆಂಟರ ಪಂಕ್ತಿ ಎಂತಲೇ ಪ್ರತ್ಯೇಕ ವ್ಯವಸ್ತೆ ಮಾಡಲಾಗುತ್ತಿತ್ತು. ಇದು ಸುಮಾರು ನಲವತ್ತು ವರ್ಷದ ಹಿಂದಿನ ಮಾತು.

Monday, 7 April 2014

ಹಬ್ಬದ ಹಾಡು -ದಿನದ ಮಾತು


ದಿನದ ಮಾತು :

ಒಂದನೆಯ ಕಂತು :
ಹಬ್ಬದ ಹಾಡು.ಇದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಸುವಂತಹ ಒಂದು ಸಾಂಪ್ರದಾಯಿಕ ಪದ್ಧತಿ.ಇದಕ್ಕೆ ಬಿಂಗಿಪದ್ಯ, ಅಂಟಿಕೆಪಂಟಿಕೆ ಎಂತಲೂ ಕರೆಯುತ್ತಾರೆ.ಹಳ್ಳಿಗಳಲ್ಲಿ, ಹೆಚ್ಚಾಗಿ ಮಲೆನಾಡಿನಲ್ಲಿ ಮಾತ್ರ ಇದರ ಆಚರಣೆಯನ್ನು ಕಾಣುತ್ತೇವೆ. ಇದರ ಆಚರಣೆಯ ಕ್ರಮ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಈ ರೀತಿ ದೀಪ ಹಚ್ಚುವ ಸಮುದಾಯಗಳಲ್ಲೂ ಅದರ ಆಚರಣೆಯ ಆಸಕ್ತಿ ಕಡಿಮೆಯಾಗಿದೆ.

ಈ ಪದ್ಧತಿಯು ಧಾರ್ಮಿಕ ಮತ್ತು ಸಾಂಸ್ಕ್ರತಿಕ ನೆಲೆಯನ್ನು ಹೊಂದಿದೆ. ಗ್ರಾಮಾಧಿದೇವತೆಯ ದೀಪವನ್ನು ಊರಿನ ಮತ್ತು ನೆರೆ ಊರಿನ ಮನೆಗಳಿಗೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಕೊಡುವುದು ಈ ಸಂಪ್ರದಾಯದ ಮುಖ್ಯ ಉದ್ದೇಶ. ಒಂದು ಊರಿನ ಜನ ಕನಿಷ್ಠ 8 - 10 ಮಂದಿಯ ಒಂದು ತಂಡವಾಗಿ ಮನೆ ಮನೆಗೆ ಹೋಗುತ್ತಾರೆ.ಪುರಾಣದ ಕತೆಗಳನ್ನೊಳಗೊಂಡ ಹಾಡುಗಳನ್ನು ಜನಪದ ಶೈಲಿಯಲ್ಲಿ ಹಾಡುತ್ತ ಹೋಗುತ್ತಾರೆ. ಹಸಲರು,ಮಡಿವಾಳರು, ಒಕ್ಕಲಿಗರು,ದೀವರು [ನಾಯ್ಕರು].... ಹೀಗೆ ಜನಪದರು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದಾರೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಊರಿಗೆ ಒಂದೇ ತಂಡ ದೇವರ ದೀಪವನ್ನುಹಚ್ಚಬೇಕು ಎನ್ನುವ ರಿವಾಜು ಇದೆ. ಆ ದೀಪವನ್ನು ಎಲ್ಲರೂ ಹಿಡಿಯುವಂತಿಲ್ಲ. ಅದಕೆಂದೇ ಊರಿನಲ್ಲಿ ಲಾಗಾಯ್ತಿನಿಂದ ಒಂದು ಕುಟುಂಬವನ್ನು ಗ್ರಾಮದ ನಿಯಮದಂತೆ ಹೆಸರಿಸಲಾಗಿರುತ್ತದೆ.ಆ ಕುಟುಂಬದ ಯಜಮಾನನೆ ದೀಪವನ್ನು ಹಿಡಿಯಬೇಕಾದದ್ದು ಸಂಪ್ರದಾಯ. ಒಮ್ಮೆ ಆ ಯಜಮಾನನಿಗೆ ಅಶೌಚ [ಸತ್ತ ಸೂತಿಕ ಅಥವಾ ಹುಟ್ಟಿದ ಅಮೆ] ಬಂದರೆ ಆ ವರ್ಷವೊಂದೆ ಅಲ್ಲ . ಆ ವರ್ಷವೂ ಸೇರಿ ಒಟ್ಟು ಮುಂದಿನ ಮೂರು ವರ್ಷಗಳು ದೀಪ ಹಚ್ಚುವ ಹಾಗಿಲ್ಲ.

-------- ಇದು ಬಹಳ ದೀರ್ಘವಾದ ಮತ್ತು ಆಸಕ್ತಿಯುತ ವಿಚಾರ. ಮುಂದಿನ ಮಾಹಿತಿ ಎರಡನೆಯ ಕಂತಿನಲ್ಲಿ ನೋಡಿ.


ದಿನದ ಮಾತು :

ಹಬ್ಬದ ಹಾಡು : ಎರಡನೆಯ ಕಂತು .

ದೇವರ ದೀಪ ಹಚ್ಚಲಿಕ್ಕೆಂದೇ ಒಂದು ವ್ಯವಸ್ತೆ ಇರುತ್ತದೆ.ದೀಪ ಹಚ್ಚುವ ಪಾತ್ರೆ ಸುಮಾರು ೩೦ ಸೆಂಟಿಮೀಟರು ಅಗಲಕ್ಕಿದ್ದು ಅಂದಾಜು ೩ ಲೀಟರು ದೀಪದ ಎಣ್ಣೆ ಹಿಡಿಯುವಷ್ಟು ದೊಡ್ಡದಿರುತ್ತದೆ. ಇದು ಮಣ್ಣಿನ ಗಡಿಗೆಯದು.ಇದಕ್ಕೆ ಹಬ್ಬದ ದೀಪದ ಹಣತೆ ಎನ್ನುತ್ತಾರೆ.ದೀಪ ಹಿಡಿಯುವ ಯಜಮಾನನ ಅಜ್ಜ,ಮುತ್ತಜ್ಜನ ಕಾಲದಿಂದ ಬಾಳಿಸಿ ಕಾಯ್ದು ಇಟ್ಟುಕೊಂಡು ಬಂದಿದ್ದು ಇದು.ನೂರಾರು ವರುಷಗಳಷ್ಟು ಹಿಂದಿನದು.ಇದನ್ನು ಆ ಯಜಮಾನನ ಮನೆಯಲ್ಲಿಯೇ ಜಾಗರೂಕತೆಯಿನ್ದ ಕಾಯ್ದಿಡಲಾಗುತ್ತದೆ.ದೀಪ ಹಚ್ಚುವ ಹಬ್ಬದ ಸಂದರ್ಭದಲ್ಲಿ ಮಾತ್ರ ಅದನ್ನು ಹೊರತೆಗೆಯಲಾಗುತ್ತದೆ. ಆ ದೀಪ ಉರಿಯಲಿಕ್ಕೆ ಬೇಕಾಗುವಂತಹ ಹತ್ತಿಯ ಉದ್ದನೆಯ ಮತ್ತು ದೀಪ ಸುಲಭದಲ್ಲಿ ಆರಿಹೋಗದ ಹಾಗೆ ದಪ್ಪನೆಯ ಬತ್ತಿ [ಓರತಿ] ಹಾಗೂ ಇದಕ್ಕೆ ಪೂರಕವಾದ ಇನ್ನಿತರೆ ಸರಂಜಾಮುಗಳಿರುತ್ತವೆ.ಈ ವಸ್ತುಗಳೆಲ್ಲ ದೀಪ ಹಿಡಿಯುವ ಯಜಮಾನನ ಮನೆಯಲ್ಲಿಯೇ ಕಾಯಿದಿಡಲಾಗುತ್ತದೆ.

ದೀಪಾವಳಿಯ ದಿನ ಸಂಜೆ .ಹಾಡು ಹೇಳುವ ತಂಡದವರು ಸೇರಿ ಆ ಊರಿನ ಗ್ರಾಮಾಧಿದೇವತೆಯ ದೇವಸ್ಥಾನದಲ್ಲಿ ದೇವರಿಗೆ ಪೂಜೆ, ಮಂಗಳಾರತಿ ಮಾಡಿಸಿ ತಮ್ಮ ದೀಪದ ಪಾತ್ರೆಗೆ ಆ ದೇವರ ದೀಪವನ್ನು ಹೊತ್ತಿಸಿಕೊಳ್ಳುತ್ತಾರೆ. ನಂತರ ಆ ದೇವ ಎದುರಿಗೆ ಹಬ್ಬದ ಹಾಡುಗಳನ್ನು ಹಾಡುತ್ತಾರೆ. ಅದು ಒಂದು ಪವಿತ್ರವಾದ ಜ್ಯೋತಿಯೆಂದು ಪರಿಗಣಿಸಲಾಗುತ್ತದೆ. ದೀಪಾವಳಿ ಹಬ್ಬದ ದಿನದಿಂದ ಸತತ ಮೂರು ರಾತ್ರಿಯವರೆಗೆ ದೀಪ ಒಯ್ಯಲಾಗುತ್ತದೆ.ಮೂರು ರಾತ್ರಿ ಕಳೆದು ನಾಲ್ಕನೆಯ ದಿನದ ಬೆಳಿಗ್ಯೆ ಮುಂಜಾನೆ ಯಾವ ದೇವಸ್ಥಾನದ ದೇವರಿಂದ ದೀಪ ತೆಗೆದುಕೊಂಡು ಹಚ್ಚಿಕೊಳ್ಳಲಾಗಿತ್ತೊ ಅದೇ ದೇವರ ದೀಪಕ್ಕೆ ಮರಳಿ ಆ ದೀಪವನ್ನು ಸೇರಿಸಬೇಕಾದದ್ದು ಗ್ರಾಮದ ಕಟ್ಟಳೆ. ದೀಪವನ್ನು ಸೇರಿಸುವ ಮೊದಲು ದೇವರ ಎದುರಿಗೆ ಹಾಡಲಾಗುತ್ತದೆ. ದೀಪ ಕೊಡುವ ಸಂದರ್ಭದಲ್ಲಿ ಒಟ್ಟಾದ ಹಣ,ಎಣ್ಣೆ, ಇತರೆ ವಸ್ತುಗಳನ್ನು ಆ ದೇವರಿಗೆ ವಿನಿಯೋಗಿಸಲಾಗುತ್ತದೆ..ಅದೇ ಸಮ್ಪನ್ಮೂಲವನ್ನು ಬಳಸಿ ಆ ದೇವರಿಗೆ ಅದೇ ಕಾರ್ತಿಕ ಮಾಸದಲ್ಲಿ ಒಂದು ದಿನ ಕಾರ್ತಿಕೋತ್ಸವವನ್ನು ಮಾಡಲಾಗುತ್ತದೆ ಆ ಮೂರು ದಿನದ ಅವಧಿಯಲ್ಲಿ ದೀಪ ಹಗಲು - ರಾತ್ರಿ ಆರುವ ಹಾಗಿಲ್ಲ. ಹಾಗೆ ಆರಿದರೆ ದೀಪ ಹಚ್ಚಿದ ಇಡೀ ಊರಿಗೆ ಕೇಡು ಬರುತ್ತದೆಯೆಂದು ನಂಬಲಾಗಿದೆ.ಹೀಗೆ ಹಬ್ಬದ ದಿನ ಸಂಜೆ ದೇವರ ದೀಪ ದೇವಸ್ಥಾನದಿಂದ ಹೊರಗೆ ಹೊರಡುತ್ತದೆ.ಅಲ್ಲಿಂದ ಹೊರಟಿದ್ದು ಮೊದಲು ತಮ್ಮ ಊರಿನ ಎಲ್ಲ ಮನೆಗಳಿಗೆ ಹೋಗುತ್ತದೆ.ಪ್ರತಿ ಮನೆಯನ್ನು ಬಾಗಿಲು ತೆಗಸಿ ಆ ಮನೆಯವರಿಗೆ ದೇವರ ದೀಪವನ್ನು ಕೊಡಲಾಗುತ್ತದೆ.ಬಹಳ ಮನೆಗಳಿದ್ದರೆ ಒಂದು ಊರಿಗೆ ಒಂದು ರಾತ್ರಿ ಕಳೆಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾತ್ರಿ ಮಾತ್ರ ದೀಪವನ್ನು ಒಯ್ಯಲಾಗುತ್ತದೆ. ಬೆಳಗಾದ ಕೂಡಲೆ ದೀಪ ಕೊಡುವುದನ್ನು ನಿಲ್ಲಿಸುತ್ತಾರೆ.ನಂತರ ಅಂದು ದೀಪ ಪುನಃ ದೀಪ ಹಿಡಿದ ಯಜಮಾನನ ಮನೆಗೆ ಬರಬೇಕು.ಮತ್ತೆ ಸಂಜೆಯಾಗುವವರೆಗೂ ಅದು ಆರದ ಹಾಗೆ ಯಜಮಾನನ ಮನೆಯವರು ಆಗಾಗ್ಯೆ ಓರತಿಯನ್ನು ಮುಂದೆ ಹಾಕುತ್ತ ,ಪಾತ್ರೆಗೆ ಎಣ್ಣೆ ಹಾಕುತ್ತಾ ಜಾಗರೂಕತೆ ವಹಿಸುತ್ತಾರೆ.ಗಾಳಿಯಿಂದ ಆರದ ಹಾಗೆ ಮರೆ ಮಾಡಿರುತ್ತಾರೆ. ಇದು ಹಿಂದಿನ ಪದ್ಧತಿ.ಆದರೆ ಆ ಸಮುದಾಯದ ಇಂದಿನ ಯುವಕರು ಅಂತಹ ತೊಂದರೆಯನ್ನು ತೆಗೆದುಕೊಳ್ಳಲಿಕ್ಕೆ ಇಷ್ಟಪಡುವುದಿಲ್ಲ.ಆದ್ದರಿಂದ ಬೆಳಿಗ್ಯೆ ಯಜಮಾನನ ಮನೆಗೆ ದೀಪ ಮರಳಿ ಬಂದಕೂಡಲೆ ಮನೆಯೊಳಗೆ ಒಂದು ಕಡೆ ದಪ್ಪ ಕಟ್ಟಿಗೆಗಳನ್ನಿಟ್ಟು ಅದಕ್ಕೆ ಆ ದೀಪವನ್ನು ಹೊತ್ತಿಸುತ್ತಾರೆ.ಹೀಗೆ ಹಗಲು ಸಮಯದಲ್ಲಿ ಮೂರುದಿನ ದೀಪವನ್ನು ಬೆಂಕಿಯಾಗಿ ಪರಿವರ್ತಿಸುತ್ತಾರೆ.ಆದರೆ ಆ ಬೆಂಕಿ ಎಷ್ಟೊತ್ತಿಗೂ ಆರದ ಹಾಗೆ ನಿಗಾ ವಹಿಸುತ್ತಾರೆ.ಇಲ್ಲಿ ಅವರು ಅನುಸರಿಸುವ ಸಂಪ್ರದಾಯವೆಂದರೆ ಆ ಬೆಂಕಿಯನ್ನು ಬಾಯಿಯ ಉಸುರಿನಿಂದ ಊದಿ ಉರಿಯುವ ಹಾಗೆ ಮಾಡುವ ಹಾಗಿಲ್ಲ.ಅದಕ್ಕೆ ಅಡಿಕೆ ಹಾಳೆಯ ಅಥವಾ ರೊಟ್ಟಿನ ಬೀಸಣಿಗೆಯನ್ನು ಬೀಸಿ ಉರಿಯನ್ನು ಆರದ ಹಾಗೆ ಬೆಳಿಗ್ಯೆಯಿಂದ ಸಂಜೆಯವರೆಗೂ ಒಬ್ಬೊಬ್ಬರು ಪಾಳಿಯಂತೆ ಗಮನ ಹರಿಸುತ್ತಿರುತ್ತಾರೆ.

-------- ಮುಂದಿನ ವಿಷಯ ಮೂರನೆಯ ಕಂತಿನಲ್ಲಿ.-------

ದಿನದ ಮಾತು :

ಹಬ್ಬದ ಹಾಡು : ಮೂರನೆಯ ಕಂತು.:

ದೀಪಾವಳಿ ಹಬ್ಬದ ದಿನದಿಂದ ಮುಂದಿನ ಮೂರು ದಿನಗಳಲ್ಲಿ ಪ್ರತಿದಿನ ಸಂಜೆ ಕಪ್ಪಾದ ನಂತರ ಹಬ್ಬ ಹಾಡುವವರ ದೀಪದ ತಂಡ ಹೊರಡುತ್ತದೆ.ಮೊದಲು ತಮ್ಮ ಊರಿಗೆ ದೀಪ ಕೊಟ್ಟು ನಂತರ ಆ ಮೂರು ದಿನಗಳ ಅವಧಿಯಲ್ಲಿ ಎಷ್ಟು ಆಗುತ್ತದೆಯೋ ಅಷ್ಟು ಪಕ್ಕದ ಊರುಗಳಿಗೆ ದೀಪ ಕೊಡಲು ಹೋಗುತ್ತಾರೆ.ಹೀಗೆ ಸಾಗುವಾಗ ಕೆಲವು ನಿರ್ಬಂಧಗಳಿವೆ. ಈ ಮೊದಲೇ ತಿಳಿಸಿದಂತೆ ದೀಪ ಹಿಡಿಯುವ ಯಜಮಾನನಿಗೆ ಅಶೌಚ ಬಂದರೆ ಅದನ್ನು ಹಚ್ಚುವ ಪ್ರಸಂಗವೇ ಇಲ್ಲ. ಆದರೆ ತಂಡದಲ್ಲಿ ಪಾಲ್ಗೊಳ್ಳುವ ಯಾವುದೇ ವ್ಯಕ್ತಿಗೆ ಅಶೌಚ ಬಂದಿರಬಾರದು. ಹಾಗೆ ಬಂದಿದ್ದರೆ ಅಂಥವನು ತಂಡಕ್ಕೆ ಸೇರಿಕೊಳ್ಳುವ ಹಾಗಿಲ್ಲ.ಇದನ್ನುಳಿದು ಊರಿನ ಆ ಸಮುದಾಯದ ಪ್ರತಿ ಕುಟುಂಬದ ಸದಸ್ಯನೂ ತಂಡದಲ್ಲಿ ಭಾಗವಹಿಸಬೇಕೆಂಬ ನಿಯಮವಿದೆ.ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಕೆಲವರಿಗೆ ವಿನಾಯಿತಿ ಇರುತ್ತದೆ.ಎರಡನೆಯ ನಿರ್ಬಂಧವೆಂದರೆ ಎದುರು ದೀಪ ಬರುವ ಹಾಗಿಲ್ಲ. ಅಂದರೆ ಇವರಂತೆಯೇ ಇವರ ಪಕ್ಕದ ಊರಿನವರು ಅಥವಾ ದೂರದ ಬೇರೆ ಊರಿನವರು ಇದೇರೀತಿ ದೀಪ ಹಚ್ಚಿ ಬರುವ ಸಂಪ್ರದಾಯವನ್ನು ಇಟ್ಟುಕೊಂಡಿರುತ್ತಾರೆ. ಇವರು ತಮ್ಮ ಗ್ರಾಮದ ದೇವರ ದೀಪವನ್ನು ಒಯ್ಯುತ್ತಿರುವಾಗ ದಾರಿಯ ಮಧ್ಯದಲ್ಲಿ ಮತ್ತೊಂದು ತಂಡದವರ ದೇವರ ದೀಪ ಎದುರಾಗಿ ಬರಬಾರದು. ಇಲ್ಲವೇ ಇವರ ದೀಪ ಅವರ ದೀಪಕ್ಕೆ ಎದುರಾಗಬಾರದು.ಇದು ವಿರೋದಾಭಾಸದ ಲಕ್ಷಣ ಎಂದು ಭಾವಿಸಲಾಗುತ್ತದೆ.ಹೀಗೆ ಎದುರು ದೀಪವಾದರೆ ಎರಡೂ ತಂಡದ ಇಡಿಯ ಊರಿಗೆ ಕೇಡು ಬರುತ್ತದೆಯೆಂದು ನಂಬಲಾಗಿದೆ. ಅದಕ್ಕಾಗಿಯೇ ದಾರಿಯಲ್ಲಿ ಸಾಗುವಾಗ ದಾರಿಯುದ್ದಕ್ಕೂ ಯಾವುದೇ ತಂಡದವರು ಒಂದು ಕ್ರಮದಲ್ಲಿ ಕೂಗು ಹಾಕುತ್ತಾ ಹೋಗುತ್ತಾರೆ.ತಂಡದ ಮುಖ್ಯ ಹಾಡುಗಾರನು "ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೋ " ಅಥವಾ ಕೆಲವು ಕಡೆ " ಡ್ವಮ್ಸಾಲ್ ಹೊಡಿರಣ್ಣ ಡಮ್ಸಾಲ್ ಹೊಡಿರೊ " ಎಂದು ದೊಡ್ಡದಾಗಿ ರಾಗವಾಗಿ ಹೇಳುತ್ತಾನೆ . ತಂಡದ ಇತರರು ಬಹಳ ದೊಡ್ಡದಾಗಿ ಬಲು ದೂರ ಕೇಳುವ ಹಾಗೆ "ಹುಯ್ಯೋ " ಎನ್ನುತ್ತಾರೆ.ಇದರಿಂದಾಗಿ ಸನಿಹದಲ್ಲೇ ದೀಪದ ತಂಡವೊಂದು ತಮ್ಮ ದಾರಿಯೆದುರಿನಿಂದ ಬರುತ್ತಿದೆಯೆಂದು ಮತ್ತೊಂದು ತಂಡಕ್ಕೆ ದೂರದಲ್ಲಿಯೆ ಅರಿವಾಗುತ್ತದೆ. ಆಗ ಯಾವುದಾದರೊಂದು ತಂಡ ಮತ್ತೊಂದು ದಾರಿಯತ್ತ ಹೀಗೆಯೆ ಕೂಗುತ್ತ ಮುಂದೆ ಸಾಗುತ್ತದೆ.ಮತ್ತೊಂದು ತಂಡ ಬೇರೆ ದಾರಿಯಲ್ಲಿ ಹೋಗಿದ್ದನ್ನು ಗಮನಿಸಿ ಈ ತಂಡ ತನ್ನ ದಾರಿಯಲ್ಲಿ ಮುಂದೆ ಸಾಗುತ್ತದೆ .ಇದರಿಂದಾಗಿ ಎದುರು ದೀಪವಾಗುವುದನ್ನು ಎರಡೂ ತಂಡದವರು ಪರಸ್ಪರ ತಪ್ಪಿಸಿಕೊಳ್ಳುತ್ತಾರೆ.

      ಒಂದು ಊರು ಉದ್ದನೆಯ ಸಾಲುಗೇರಿಯಾಗಿರುತ್ತದೆ.ಆ ಊರಿಗೆ ಒಂದು ತಂಡ ಊರಿನ ಒಂದು ತುದಿಯಿಂದ ಪ್ರವೇಶ ಮಾಡಿರುತ್ತದೆ. ಮತ್ತೊಂದು ತಂಡ ಮತ್ತೊಂದು ತುದಿಯಿಂದ ಅದೇ ಊರಿಗೆ ಪ್ರವೇಶ ಮಾಡುತ್ತದೆ. ಒಂದು ತಂಡ ಆ ಊರಿಗೆ ಪ್ರವೇಶ ಮಾಡಿದ್ದು ಮತ್ತೊಂದು ತಂಡಕ್ಕೆ ಗೊತ್ತಿರುವುದಿಲ್ಲ. ಆದರೆ ಎರಡೂ ತಂಡದವರು ಸನಿಹ,ಸನಿಹ ಬಂದ ಕೂಡಲೆ ಮತ್ತೊಂದು ತಂಡ ಹಾಡು ಹಾಡುತ್ತಿರುವುದು ಇನ್ನೊಂದು ತಂಡಕ್ಕೆ ಕೇಳುತ್ತದೆ.ಹೀಗೆಯೆ ಮುಂದುವರೆದರೆ ಎದುರುದೀಪವಾಗುತ್ತದೆ. ಆದ್ದರಿಂದ ಅದರಲ್ಲಿ ಯಾವುದಾದರೊಂದು ತಂಡದವರು ಆ ಊರಿನ ಒಂದು ಮನೆಯೊಳಗೆ ಕುಳಿತುಕೊಂಡು ಆ ಮನೆಯ ಬಾಗಿಲು ಮುಚ್ಚಿಸಿಕೊಳ್ಳುತ್ತಾರೆ. ಆ ಮನೆಯೊಂದನ್ನು ಬಿಟ್ಟು ಮುಂದೆ ದಾಟಿ ಹೋಗುವಂತೆ ಮತ್ತೊಂದು ತಂಡಕ್ಕೆ ಸೂಚನೆಯನ್ನು ಕಳಿಸುತ್ತಾರೆ. ಆ ತಂಡದವರು ಹಾಗೆಯೇ ಮಾಡುತ್ತಾರೆ.ಆ ನಂತರದಲ್ಲಿ ಈ ತಂಡದವರು ತಮ್ಮ ಮುಂದಿನ ಮನೆಗೆ ದಾಟುತ್ತಾರೆ.ಅಂತೆಯೇ ಮುಂದೆ ಸಾಗುತ್ತಾರೆ.ನಂತರ ಮನೆಯೊಂದನ್ನು ಬಿಟ್ಟು ದಾಟಿ ಈಚೆ ಮುಂದೆ ಸಾಗಿದ ತಂಡ ಮರಳಿ ಬಂದು ಬಿಟ್ಟ ಮನೆಯನ್ನು ಪ್ರವೇಶಿಸಿ ದೇವರ ದೀಪವನ್ನು ಕ್ರಮದಂತೆ ಅವರಿಗೆ ಕೊಟ್ಟು ತನ್ನ ದಾರಿಯಲ್ಲಿ ಪುನಃ ಸಾಗುತ್ತದೆ.ಈ ಕ್ರಮದಲ್ಲಿ ಎದುರುದೀಪವಾಗುವುದನ್ನು ಇಲ್ಲಿ ತಪ್ಪಿಸಲಾಗುತ್ತದೆ.

======ಮುಂದಿನ ವಿಷಯ ನಾಲ್ಕನೆಯ ಕಂತಿನಲ್ಲಿ.======

ದಿನದ ಮಾತು :

ಹಬ್ಬದ ಹಾಡು :ನಾಲ್ಕನೆಯ ಕಂತು :

ದೀಪಾವಳಿಯ ದೀಪವನ್ನು ಮನೆಮನೆಗೆ ಕೊಡುವಾಗ ಕೆಲವು ರಿವಾಜುಗಳಿವೆ.ಅಶೌಚ [ ಜನ್ಮಾಶೌಚ ಮತ್ತು ಮರಣಾಶೌಚಗಳೆರಡು ] ಇರುವ ಮನೆಗಳಿಗೆ ದೀಪ ಕೊಡುವ ಹಾಗಿಲ್ಲ.ತಂಡದವರ ಸ್ವಂತ ಊರಿನಲ್ಲಿಯಾದರೆ ಯಾರಯಾರ ಮನೆಗೆ ಅಶೌಚ ಬಂದಿದೆಯೆಂದು ಮೊದಲೇ ಗೊತ್ತಿರುತ್ತದೆ. ಅಂಥವರ ಮನೆ ಮಧ್ಯೆ ಸಿಕ್ಕಿದರೂ ಆ ಮನೆಯನ್ನು ಬಿಟ್ಟು ಮುಂದಿನ ಮನೆಗೆ ಅವರು ಸಾಗುತ್ತಾರೆ. ಯಾರದ್ದೇ ಮನೆಯನ್ನು ಪ್ರವೇಶಿಸುವ ಮೊದಲು ಆ ಮನೆಗೆ ಮಾವಿನ ಎಲೆಯ ತೋರಣ ಕಟ್ಟಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸುತ್ತಾರೆ. ಹಬ್ಬದ ದಿನ ಹಿನ್ದೂಗಳ ಮನೆಗಳಲ್ಲಿ ಈ ರೀತಿಯ ತೋರಣಗಳನ್ನು ಕಟ್ಟುವುದು ಸಂಪ್ರದಾಯ ತಾನೆ.ಕಟ್ಟಲಿಲ್ಲವೆನ್ದಾದರೆ ಮನೆಗೆ ಬೀಗ ಹಾಕಲಾಗಿದೆಯೋ ಎಂಬುದನ್ನು ಗಮನಿಸುತ್ತಾರೆ.ಬೀಗವನ್ನು ಹಾಕಲಿಲ್ಲ, ತೋರಣವನ್ನು ಕಟ್ಟಲಿಲ್ಲವೆಂದಾದರೆ ಆ ಮನೆಗೆ ಅಶೌಚ ಬಂದಿದೆ ಎಂತಲೇ ಅರ್ಥ. ತೋರಣ ಕಟ್ಟದೆ ಬೀಗ ಹಾಕಿದ್ದರೆ ಆ ಮನೆಯವರು ಊರಲ್ಲಿಲ್ಲವೆನ್ದು ಭಾವಿಸಿ ಅವರ ಮನೆ ಬಾಗಿಲಮೇಲೆ ಹತ್ತಿಯ ಓರತಿಯಿಂದ ಹಚ್ಚಿದ ದೀಪವನ್ನು ಇಟ್ಟು ಮುಂದೆ ಸಾಗುತ್ತಾರೆ.ಅಶೌಚ ಬಂದು ಒಮ್ಮೆ ಅವರು ದೂರ ಹೋಗಿದ್ದರೆ ದೋಷ ತಮಗೆ ತಟ್ಟುವುದಿಲ್ಲವೆಂಬುದು ತಂಡದವರ ಭಾವನೆ. ಏಕೆಂದರೆ ಅಶೌಚವಿಲ್ಲದ ಮನೆಗೆ ದೀಪ ಕೊಡದೆ ಮುಂದೆ ಹೋಗುವುದು ಅಪರಾಧವಾಗುತ್ತದೆ. ದಾರಿಯ ಮಧ್ಯದಲ್ಲಿ ಯಾವುದಾದರು ಅಹಿಂದುವಿನ ಮನೆ ಸಿಕ್ಕರೆ ಆ ಮನೆಯವರು ದೀಪವನ್ನು ಬಯಸಿದರೆ,ಅಂಥವರು ತಮ್ಮ ರಿವಾಜಿನೊಳಗೆ ಇದ್ದರೆ ಅವರಿಗೂ ತಮ್ಮ ಕ್ರಮದಂತೆ ದೀಪವನ್ನು ಕೊಡುತ್ತಾರೆ.ಹಳ್ಳಿಯ ಸಾಮುದಾಯಿಕ ಜೀವನದಲ್ಲಿ ಅನೇಕ ಹಿಂದೂ ಮನೆಗಳ ಮಧ್ಯದಲ್ಲಿ ಒಂದೆರಡು ಅಹಿಂದು ಮನೆಗಳಿದ್ದರೆ ಅವರೂ ತಮ್ಮ ಬಾಹ್ಯ ಜೀವನದಲ್ಲಿ ಹಿಂದೂಗಳಿಗೆ ಹೊಂದಿಕೊಂಡೇ ಇರಬೇಕಾಗುತ್ತದೆ.ಈ ಮಾತು ಎಲ್ಲಾ ಜನಾಂಗಕ್ಕೂ ಅನ್ವಯಿಸುತ್ತದೆ. ಹೀಗೆ ಪಕ್ಕದ ಊರಿನ ಮೊದಲ ಮನೆಯಾಗಿ ಒಮ್ಮೆ ತೋರಣ ಕಟ್ಟದಿರುವುದನ್ನು ಗಮನಿಸದೆ ತಂಡದವರು ಒಳಪ್ರವೇಶಿಸುದನ್ನು ಕಂಡಕೂಡಲೆ ತಮಗೆ ಅಶೌಚವಿದೆ ಮುಂದೆ ಸಾಗಿ ಎಂದು ಆ ಮನೆಯವರು ಹೇಳಬೇಕು. ಆ ಊರಿನಲ್ಲಿ ಮುಂದೆ ಯಾರಯಾರ ಮನೆಗಳಲ್ಲಿ ಅಶೌಚವಿದೆಯೆಂದು ಆ ಮನೆಯಿಂದಲೇ ತಂಡದವರು ತಿಳಿದುಕೊಳ್ಳುತ್ತಾರೆ.ಅಂಥವರ ಮನೆಗೆ ಮುದ್ದಾಂ ದೀಪವನ್ನು ಕೊಡುವುದಿಲ್ಲ. ಇದೊಂದು ವಿಚಾರವನ್ನು ಹೊರತುಪಡಿಸಿ ತಾವು ಪ್ರಾರಂಭಿಸಿದ ಊರಿನಲ್ಲಿ ಯಾವುದೇ ಮನೆಗೆ ದೀಪ ಕೊಡದೆ ಮುಂದೆ ಹೋಗುವ ಹಾಗಿಲ್ಲ. ಪರಿಧಿಯಲ್ಲಿ ಸಿಗುವ ಯಾವುದಾದರು ಮನೆಗೆ ಬೀಗ ಹಾಕಿದ್ದಲ್ಲಿ ಆ ಮನೆಯ ಎದುರು ಬಾಗಿಲ ಹೊಸ್ತಿಲ ಮೇಲೆ ದೀಪವನ್ನಿಟ್ಟು ಮುಂದೆ ಸಾಗಬೇಕು. ಅಸ್ಪ್ರಶ್ಯತೆಯ ಮನೋಭಾವ ಯಾರಿಗೂ ಬಿಟ್ಟಿದ್ದಲ್ಲ. ಆ ಅವಹೇಳನಕ್ಕೆ ಗುರಿಯಾದದ್ದು ಕೇವಲ ಬ್ರಾಹ್ಮಣರಷ್ಟೇ. ಎಲ್ಲ ಜಾತಿಯವರೂ ತಮಗಿಂತ ಅತ್ತ್ಯಂತ ಕೆಳಗಿನ ಜಾತಿಯವರನ್ನು ಅಸ್ಪರ್ಶರೆಂದೆ ಪರಿಗಣಿಸುತ್ತಾರೆ.ಹೀಗೆ ದೀಪ ಹಿಡಿದು ಹೊರಟ ತಂಡದರಿಗೆ ಅಸ್ಪರ್ಶ್ಯರಾದ ಯಾವುದಾದರು ಮನೆಗಳು ತಮ್ಮ ದಾರಿಯ ಮಧ್ಯೆ ಸಿಕ್ಕರೆ ಅವರನ್ನು ಬಿಟ್ಟು ಮುಂದೆ ಸಾಗುವ ಹಾಗಿಲ್ಲ. ಹಾಗೆ ಸಾಗಿದರೆ ಆ ಮನೆಯವರು ದೇವರ ದೀಪ ತಮಗೆ ಸಿಗದಿದ್ದುದು ಅವಲಕ್ಷಣ ಎಂದು ಭಾವಿಸುತ್ತಾರೆ. ಆ ತಂಡದವರು ಮುಂದೆ ಸಾಗದಂತೆ ತಡೆ ಹಾಕುತ್ತಾರೆ.ಆದ್ದರಿಂದ ಅನಿವಾರ್ಯವಾಗಿ ಆ ತಂಡದವರುತಮ್ಮ ಜಾತಿಯ ಪದ್ಧತಿಯಂತೆ ಅವರ ಮನೆಯ ಒಳಗೆ ಹೋಗದಿದ್ದರೂ ಅವರ ಮನೆಯ ಎದುರು ಬಾಗಲ ಹೊಸ್ತಿಲ ಮೇಲೆ ದೀಪವನ್ನು ಇಟ್ಟು ಹೋಗಲೇಬೇಕು. ದಾರಿಯ ಮಧ್ಯೆ ಅಂಥಹವರದ್ದೆ ಸಾಲುಮನೆಗಳು ಸಿಕ್ಕಿದರೆ ಆ ಕೇರಿಯ ಮುಂದೆ ದಾರಿಯಲ್ಲಿ ತಂಡವು ನಿಧಾನವಾಗಿ ಹಾಡು ಹೇಳುತ್ತ ಮುಂದೆ ಸಾಗುತ್ತಿರುತ್ತದೆ.ಆಗ ಎದುರಿಗೆ ಸಿಕ್ಕುವ ಆಯಾ ಮನೆಯವರು ತಂಡದವರ ಸನಿಹಕ್ಕೇ ಬಂದು ಅವರ ಮನಸ್ಸಿಗೆ ತೋಚಿದಷ್ಟು ಕಾಣಿಕೆಯನ್ನು ಕೊಟ್ಟು ಅವರವರ ಮನೆಗಳಿಗೆ ದೇವರ ದೀಪವನ್ನು ಒಯ್ಯುವುದು ವಾಡಿಕೆ. ಇಲ್ಲಿ ಜಾತೀಯತೆ,ವೈಯುಕ್ತಿಕ ವೈಷಮ್ಯ ಇವಾವುದರ ಸಾಧನೆಯನ್ನು ಮಾಡುವಂತಿಲ್ಲ.ದೀಪಾವಳಿಯ ದೀಪ ಸಕಲರಿಗೂ ಸಲ್ಲಬೇಕೆಂಬುದು ಈ ಸಂಪ್ರದಾಯದ ಘನ ಉದ್ದೇಶ.

====== ಮುಂದಿನ ವಿಷಯ ಐದನೆಯ ಕಂತಿನಲ್ಲಿ ======.


ದಿನದ ಮಾತು :

ಹಬ್ಬದ ಹಾಡು : ಐದನೆಯ ಕಂತು :

ದೀಪಾವಳಿಯ ಹಬ್ಬದ ಹಾಡು ಹಾಡುವ ತಂಡದಲ್ಲಿ ಕನಿಷ್ಠ 8 ರಿಂದ 10 ಮಂದಿ ಇರುತ್ತಾರೆ. ದೀಪವನ್ನು ಹಿಡಿಯುವವನೆ ಈ ತಂಡಕ್ಕೆ ಯಜಮಾನ. ಇವನು ಪಟ್ಟಗಚ್ಚೆ ಹಾಕಿ ಪಂಚೆಯುಟ್ಟಿರುತ್ತಾನೆ.ಕೋಟು,ಪೇಟ ಧರಿಸಿರುತ್ತಾನೆ.ಒಂದು ಕೈಯಲ್ಲಿ ದೀಪ ಮತ್ತೊಂದು ಕೈಯಲ್ಲಿ ರೊಟ್ಟಿನ ಅಥವಾ ಅಡಿಕೆ ಹಾಳೆಯ ಅಗಲನೆಯ ಬೀಸಣಿಗೆಯನ್ನು ಹಿಡಿದಿರುತ್ತಾನೆ.ಗಾಳಿಯಿಂದ ರಕ್ಷಿಸಲು ಸಂದರ್ಭ ಬಂದಾಗ ದೀಪಕ್ಕೆ ಅಡ್ಡವಾಗಿ ಆ ಬೀಸಣಿಗೆಯನ್ನು ಹಿಡಿಯುತ್ತಾನೆ.ಹೆಚ್ಚಾಗಿ ಇವನು ವಯಸ್ಸಿನಲ್ಲಿ ತಂಡದ ಇತರರಿಗಿಂತ ಹಿರಿಯವನಿರುತ್ತಾನೆ.ಕೆಲವು ವರ್ಷಗಳ ಹಿಂದೆ ತಂಡದ ಪ್ರತಿಯೊಬ್ಬರೂ ಕಂಬಳಿಕೊಪ್ಪೆಯನ್ನು ಸೂಡಿಕೊಂಡು ಬರುತ್ತಿದ್ದರು.ಈ ಸಮುದಾಯದ ಹಿಂದಿನ ಜನರು ಈ ಸಂಪ್ರದಾಯದ ಕಟ್ಟಳೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರು.ಈಗಿನ ಯುವಕರಿಗೆ ಅನೇಕ ನಿಯಮಗಳ ಅರಿವೇ ಇಲ್ಲ. ಇದ್ದಷ್ಟನ್ನು ಸರಿಯಾಗಿ ಪಾಲಿಸುವುದಿಲ್ಲ.

ಈ ತಂಡದ ಜನರಲ್ಲಿ ಒಳ್ಳೆಯ ಧ್ವನಿ ಇರುವ ಹಾಗೂ ಹಬ್ಬದ ಹಾಡುಗಳನ್ನು ಬಲ್ಲವ ಒಬ್ಬ ಪ್ರಧಾನ ಹಾಡುಗಾರನಿರುತ್ತಾನೆ ಅವನೊಂದಿಗೆ ಸಾಮಾನ್ಯವಾಗಿ ಅವನಿಗೆ ಹೊಂದಿಕೊಂಡು ಹೇಳುವಂತಹ ಮತ್ತೊಬ್ಬ ಸಹ ಹಾಡುಗಾರನಿರುತ್ತಾನೆ.ಇವರಿಬ್ಬರು ಸೇರಿಯೇ ಹಾಡುತ್ತಾರೆ.ತಂಡದ ಉಳಿದವರು ಅವರು ಹೇಳಿದ ಹಾಡಿನ ಪಲ್ಲವಿಯನ್ನು ಅಥವಾ ಆ ಹಾಡಿನ ಉತ್ತರಾರ್ಧದ ತುದಿಯನ್ನು ಆಯಾ ಹಾಡಿನ ಕ್ರಮಕ್ಕೆ ಅನುಸರಿಸಿ ಹಾಡುತ್ತಾರೆ. ಆದರೆ ಪ್ರಧಾನ ಹಾಡುಗಾರರ ಜೊತೆಗೆ ಅಲ್ಲ.ಅವರು ಹಾಡಿ ಬಿಡುವ ತುಸು ಅರೆಕ್ಷಣದ ಮೊದಲಿಗೆ ಇವರು ಈ ಮೊದಲು ತಿಳಿಸಿದಂತೆ ಹಾಡನ್ನು ಧ್ವನಿಗೂಡಿಸುತ್ತಾರೆ.ಇದಕ್ಕೆ ಸ್ವರಗುಟ್ಟುವುದು ಎನ್ನುತ್ತಾರೆ . ಉದಾಹರಣೆಗೆ, ಪ್ರಧಾನ ಹಾಡುಗಾರರು "ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಳಗೆ ಮಳೆಯೇ ಕರೆದಾವೋ " ಎಂಬ ಸೊಲ್ಲನ್ನು ಹೇಳಿ ಮುಗಿಸಿದರೋ ಇಲ್ಲವೋ ಎನ್ನುವ ಕ್ಷಣದಲ್ಲೇ ಹಿಂದಿನ ಹಾಡುಗಾರರು " ಬರಲೇಳು ಬಲೀನ್ದ್ರನು ರಾಜಾ ಬಂದನು ತನ್ನ ರಾಜ್ಯಕೆ ತಾ " ಎನ್ನುವ ಆ ಹಾಡಿನ ಪಲ್ಲವಿಯನ್ನು ಧ್ವನಿಗೂಡಿಸುತ್ತಾ ಇರುತ್ತಾರೆ.ಈ ಹಾಡಿನ ಪ್ರಥಮದಲ್ಲಿ ಪ್ರಧಾನ ಹಾಡುಗಾರರು ಈ ಪಲ್ಲವಿಯಿಂದಲೇ ಪ್ರಾರಂಭಿಸಿರುತ್ತಾರೆ ಈ ಹಾಡುಗಳಲ್ಲಿ ಜಾನಪದ ಸೊಗಡು ಮತ್ತು ಅದರದೇ ಆದ ವೈಶಿಷ್ಟತೆಯಿರುತ್ತದೆ.ಇಂಪು ಇರುತ್ತದೆ. ಪೌರಾಣಿಕ ಕಥೆಗಳು ಅದರಲ್ಲಿರುತ್ತವೆ.ಸಾಂದರ್ಭಿಕ ಅರ್ಥಗಳಿರುತ್ತವೆ.ಜೀವನದ ಸಂದೇಶಗಳಿರುತ್ತವೆ. ದೇವರ ದೀಪವೊಂದು ತಮ್ಮ ಮನೆ ಬಾಗಿಲಿಗೆ ಬಂದ ಸಾರ್ಥಕ್ಯ ಮನೋಭಾವವನ್ನು ಈ ಹಾಡುಗಳು ಜನರ ಮನಸ್ಸಿನಲ್ಲಿ ಮೂಡಿಸುತ್ತವೆ.[ಈ ಹಾಡುಗಳ ಸಮಯೌಚಿತ್ಯ ಮತ್ತು ಭಾವಗಳನ್ನು ಮುಂದಿನ ಕಂತಿನಲ್ಲಿ ತಿಳಿಸಲಾಗುತ್ತದೆ].

ಹೀಗೆ ದೀಪ ಕೊಡಲು ಹೋದ ಮನೆಗಳಲ್ಲೆಲ್ಲ ಈ ತಂಡದವರಿಗೆ ದೀಪಾವಳಿ ಹಬ್ಬದ ಕಜ್ಜಾಯ,ಅಂದು ತಮ್ಮ ಮನೆಯ ದೇವರಿಗೆ ಒಡೆದ ತೆಂಗಿನಕಾಯಿ, ಹಣ್ಣು, ಹೂವಿನಪ್ರಸಾದ, ವೀಳ್ಯದೆಲೆ ಅಡಿಕೆ, ಕನಿಷ್ಠ ಒಂದು ಕೆಜಿ ಅಕ್ಕಿ, ದೀಪದ ಪಾತ್ರೆಗೆ [ಸುಮಾರು 30 ಸೆ.ಮಿ.ಅಗಲದ,ಅಂದಾಜು 3 ಲೀ ಎಣ್ಣೆ ಹಿಡಿಯುವ ಮಣ್ಣಿನ ಸುಟ್ಟಗಡಿಗೆಯನ್ತಹ ಪಾತ್ರೆ. ಇದಕ್ಕೆ ಹಣತೆ ಎನ್ನುತ್ತಾರೆ.ಇದನ್ನು ಅಂಥವರ ಮನೆಯಲ್ಲಿ ಸುಮಾರು ನೂರು ವರ್ಷಗಳಿಂದ, ಅಜ್ಜ,ಮುತ್ತಜ್ಜನ ಕಾಲದಿಂದ ಕಾಯ್ದಿರಿಸಿಕೊಂಡು ಬರಲಾಗಿದೆ].ಹಾಕಿ ಹೆಚ್ಚಾದದ್ದನ್ನು ಅವರ ಪ್ಲಾಸ್ತಿಕ್ಕ್ ಕ್ಯಾನಿಗೆ ಶೇಂಗ ಅಥವಾ ಎಳ್ಳೆಣ್ಣೆ, ಸಮಾಧಾನವೆನಿವಸ್ಟು ಹಣ ಹೀಗೆ... ಹೀಗೆ.... ಎಲ್ಲವನ್ನು ದೀಪ ತಂದವರ ಗೌರವಾರ್ಥ ಕೊಡಲಾಗುತ್ತದೆ. ಒಳ ಹೊಕ್ಕವರ ಮನೆಯಲ್ಲಿ ಹೊಸದಾಗಿ ಮದುವೆಯಾದ ಅಳಿಯ-ಮಗಳು ಬಂದಿದ್ದರೆ ಅವರು ನಿದ್ರೆಯಿಂದ ಎದ್ದು ಹೊರಗೆ ಬರುವ ಹಾಗೆ ಮತ್ತೆ ಮತ್ತೆ ಹಾಡುಗಳನ್ನು ಹಾಡಿ ಪೀಡಿಸಿ ಅವರನ್ನು ಸಂತೋಷಪಡಿಸಿ ಅವರಿಂದಲೂ ಖುಷಿಯಿಂದ ಹಣವನ್ನು ತಂಡದವರು ಕೀಳುತ್ತಾರೆ.


======ಮುಂದಿನ ವಿಷಯ ಆರನೆಯ ಕಂತಿನಲ್ಲಿ.======



ದಿನದ ಮಾತು :

ಹಬ್ಬದ ಹಾಡು : ಆರನೆಯ ಕಂತು.:

ದೀಪಾವಳಿಯ ದೇವರ ದೀಪದ ಕುರಿತು ಹಳ್ಳಿಯ ಜನರಲ್ಲಿ ಗೌರವ,ಪೂಜ್ಯ ಭಾವನೆ ಇದೆ.ಮಧ್ಯ ರಾತ್ರಿಯಾಗಿರಲಿ.ಮಕ್ಕಳು,ಮುದುಕರು,ಕಾಯಿಲೆಯವರ ನಿದ್ರೆಗೆ ಬಾಧಕವಾಗುತ್ತದೆಯೆಂದು ಅವರು ಭಾವಿಸುವುದಿಲ್ಲ.ರಾತ್ರಿ ಯಾವುದೋ ಸಮಯಕ್ಕೆ ದೀಪದ ತಂಡದವರು ಬರುತ್ತಾರೆ. ಮನೆಯ ಬಾಗಿಲಲ್ಲಿ ನಿಂತು ಅವರ ಪದ್ಧತಿಯಂತೆ " ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೊ " ಎನ್ನುತ್ತಾರೆ.ಅದಕ್ಕೆ ಎದುರಾಗಿ ಅವರ ಹಿಮ್ಮೇಳದವರು " ಹುಯ್ಯೋ " ಎಂದು ಕೂಗುತ್ತಾರೆ.ಇದನ್ನು ಕೇಳಿದ ಮನೆಯವರು ಎಚ್ಚರಾಗಿ ಬಾಗಿಲನ್ನು ತೆಗೆಯುತ್ತಾರೆ.ಆಗ ದೀಪವನ್ನು ಮುಂದಿಟ್ಟುಕೊಂಡು ತಂಡ ಮನೆಯೊಳಗೆ ಬರುತ್ತದೆ.[ಈ ಸಂದರ್ಭಕ್ಕೆ ಬೇರೆಬೇರೆ ಹಾಡುಗಳಿವೆ.ಅವುಗಳನ್ನು ಮುಂದಿನ ಕಂತಿನಲ್ಲಿ ವಿವರಿಸಲಾಗುತ್ತದೆ.] ದೀಪಕ್ಕೆ ಮನೆಯೊಡತಿ ಮಣೆಯನ್ನು ಕೊಡುತ್ತಾಳೆ.ಅದರ ಮೇಲೆಯೇ ದೀಪವನ್ನು ಇಡಬೇಕಾದದ್ದು ಕಡ್ಡಾಯ. ನಂತರ ಸಂಪ್ರದಾಯದಂತೆ ಯಾವಯಾವ ಹಾಡುಗಳನ್ನು ಹಾಡಬೇಕೊ ಅವುಗಳನ್ನು ಅನುಕ್ರಮವಾಗಿ ಹಾಡಲಾಗುತ್ತದೆ. ಈ ಅವಧಿಯಲ್ಲಿ ಮನೆಯವರು ಕೆಲವು ಕ್ರಮಗಳನ್ನು ಅನುಸರಿಸುವುದು ವಾಡಿಕೆ. ಮೊದಲನೆಯದಾಗಿ ದೀಪವನ್ನು ಮಣೆಯ ಮೇಲೆ ಇಟ್ಟಕೂಡಲೆ ಮನೆಯೊಡತಿ ತಮ್ಮ ಮನೆಯ ಹತ್ತಿಯ ಓರತಿಯಿಂದ [ಬತ್ತಿ ] ಆ ದೇವರ ದೀಪದಿಂದ ದೀಪವನ್ನು ತೆಗೆದುಕೊಂಡು ತಮ್ಮ ಮನೆಯ ದೇವರ ದೀಪಕ್ಕೆ ಸೇರಿಸುತ್ತಾಳೆ. ಮತ್ತೊಂದು ಓರತಿಯಿಂದ ತಮ್ಮ ಮನೆಯ ದೇವರ ದೀಪದಿಂದ ದೀಪವನ್ನು ತೆಗೆದುಕೊಂಡು ತಂಡದವರ ದೀಪಕ್ಕೆ ಸೇರಿಸುತ್ತಾಳೆ.ಇದೇ ರೀತಿ ಪ್ರತಿಯೊಬ್ಬರ ಮನೆಯಲ್ಲೂ ನಡೆಯಬೇಕೆಂಬುದು ನಿರೀಕ್ಷೆ. ಹೀಗೆ ಅದೊಂದು ಗ್ರಾಮಾಧಿದೇವತೆಯ ದೀಪವೊಂದೇ ಅಲ್ಲ.ಎಲ್ಲರ ಮನೆಯ ದೀಪವೂ ಸೇರಿ ಅದು ಶಕ್ತಿ ದೀಪವಾಗುತ್ತದೆ. ಎರಡನೆಯದಾಗಿ ಆ ದೀಪದ ಹಣೆತೆಗೆ ಶೇಂಗ ಅಥವಾ ಎಳ್ಳೆಣ್ಣೆಯನ್ನು ಸುರುವುತ್ತಾಳೆ.ಆ ದೀಪ ಸಣ್ಣದಾಗದಿರಲಿ ಎಂದು ಅದಕ್ಕೆ ಮತ್ತಷ್ಟು ಓರತಿಯನ್ನು ಸೇರಿಸುತ್ತಾಳೆ. ಮೂರನೆಯದಾಗಿ ಮತ್ತೊಂದು ಸಂಪ್ರದಾಯವಿದೆ.ಆ ದೀಪದ ಹಣತೆಯಲ್ಲಿರುವ ಎಣ್ಣೆಯಲ್ಲಿ ಮುಖವನ್ನು ನೋಡಿದರೆ ಸಕಲ ಸಂಕಷ್ಟಗಳೂ ನಿವಾರಣೆಯಾಗುತ್ತದೆಯೆನ್ದು ಜನರ ನಂಬಿಕೆ.ಆದ್ದರಿಂದ ಮನೆಯ ಜನೆರೆಲ್ಲರು ಆ ಎಣ್ಣೆಗೆ ನಾಣ್ಯದ ಕಾಣಿಕೆಯನ್ನು ಹಾಕಿ ತಮ್ಮ ಮುಖವನ್ನು ನೋಡಿ ದೀಪಕ್ಕೆ ಕೈ ಮುಗಿಯುತ್ತಾರೆ. ಇವಿಷ್ಟು ಕ್ರಮಗಳು ಆದ ನಂತರ ಸಾಮಾನ್ಯವಾಗಿ ಮನೆಯೊಡತಿ ಒಂದು ಮೊರದಲ್ಲಿ ತಮ್ಮ ಮನೆಯ ದೇವರಿಗೆ ಹಬ್ಬದಲ್ಲಿ ಒಡೆದ ತೆಂಗಿನಕಾಯಿ,ಹಣ್ಣು ಹೂವಿನ ಪ್ರಸಾದ,ಹಬ್ಬದ ಕಜ್ಜಾಯ,ವೀಳ್ಯದೆಲೆ ಅಡಿಕೆ,ಅಂದಾಜು ಒಂದು ಕೆಜಿ ಅಕ್ಕಿಮತ್ತು ಅವರಿಗೆ ಸಮಾಧಾನವೆನಿಸುವಷ್ಟು ಹಣ ಈ ಎಲ್ಲವನ್ನು ತಂದು ಅವರಿಗೆ ಕೊಡುತ್ತಾಳೆ. ಇಷ್ಟು ಹೊತ್ತಿಗೆ ತಂಡದವರ ಅನುಕ್ರಮವಾಗಿ ಹಾಡುವ ಹಾಡುಗಳನ್ನು ಪೂರೈಸಿರುತ್ತಾರೆ.ಆಸಕ್ತಿ ಇದ್ದವರು ಇನ್ನೂ ಹೆಚ್ಚಿನ ಬಗೆಬಗೆಯ ಹಾಡುಗಳನ್ನು ಹೇಳಿಸಿ ಕೇಳಿ ಖುಷಿ ಪಡೆಯುತ್ತಾರೆ.ನಂತರ ಕೊನೆಯಲ್ಲಿ ಮಂಗಳ ಪದ್ಯವನ್ನು ಹಾಡಿ ತಂಡದವರು ಮುಂದಿನ ಮನೆಗೆ ತೆರಳುತ್ತಾರೆ.

====== ಮುಂದಿನ ವಿಷಯ ಏಳನೆಯ ಕಂತಿನಲ್ಲಿ ======


ದಿನದ ಮಾತು :

ಹಬ್ಬದ ಹಾಡು : ಏಳನೆಯ ಕಂತು : [ಕೊನೆಯ ಕಂತು]

ದೀಪಾವಳಿಯ ಹಬ್ಬದ ಹಾಡಿನ ಸಂಪ್ರದಾಯದಲ್ಲಿ ಬೇರೆ ಬೇರೆ ನಿಯಮಗಳಂತೆ ಹಾಡುಗಳನ್ನು ಹಾಡಲಿಕ್ಕೂ ಕೆಲವು ನಿಯಮಗಳಿವೆ.ಒಟ್ಟಾರೆ ತಮಗೆ ಬಾಯಿಗೆ ಬಂದದ್ದನ್ನು ಉಗುಳುವುದಲ್ಲ.ಒಂದು ಮನೆಯ ಎದುರು ಹೋದ ಕೂಡಲೆ ಮೊದಲು ಬಾಗಿಲನ್ನು ತೆರೆಸುವ ಹಾಡನ್ನು ಹಾಡಬೇಕು. "ಆ ಮನೆ ಬಾಗಿಲು ಚಂದಾ ಈ ಮನೆ ಬಾಗಿಲು ಚಂದಾ ಬಾಗಿಲ ಮೇಲೊನ್ದೇನೈತೊ ಶಿವ ಶಿವಾ || ಬಾಗಿಲ ಮೇಲೇನೆನ್ದು ಬರೆದಾರೋ ಹಸಿರ ಪಾಲಣದ ನವಿಲಿಂಡು ಶಿವ ಶಿವಾ |.............ಹೀಗೆ ಅವರದ್ದೇ ಆದ ಜಾನಪದ ಧಾಟಿಯಲ್ಲಿ ತಾವು ಒಳ ಹೋಗುವ ಮನೆಯವರ ಬಾಗಿಲನ್ನು ಹೊಗಳಿ ಹಾಡುತ್ತಾರೆ. ಮನೆಯವರು ಬಾಗಿಲನ್ನು ತೆಗೆದ ನಂತರ ದೇವರ ದೀಪವನ್ನು ಮುಂದೆ ಮಾಡಿಕೊಂಡು ಒಳ ಹೋಗುವಾಗ "ಇಲ್ಲಿಗೆ ಹರ ಹರಾ ಇಲ್ಲಿಗೆ ಶಿವ ಶಿವಾ ಇಲ್ಲಿಗೆ ಸಂದೇ ಪದ ಮುಂದೇ | ಇಲ್ಲಿಗೆ ಸಂದೇ ಪದ ಮುಂದೆ ಕಾರಣ ಗ್ರಾಮದ ದೀಪಾ ನಡೆಮುಂದೆ ಗ್ರಾಮದ ದೀಪಾ ನಡೆ ಮುಂದೆ ||............. ಹೀಗೆ ದೀಪ ಮನೆಯೊಳಗೆ ಹೋಗುವ ಹಾಡನ್ನು ಹಾಡುತ್ತಾರೆ. ದೀಪ ಒಳಗೆ ಹೋದ ನಂತರ ಮನೆಯೊಡತಿ ಅದಕ್ಕೆ ಮಣೆ ಕೊಟ್ಟ ನಂತರ ಆ ದೀಪಕ್ಕೆ ಎಣ್ಣೆ ಎರಸುವ ಹಾಡನ್ನು ಹೇಳುತ್ತಾರೆ.ಇದಕ್ಕೆ ಅವರು ಎಣ್ಣೆ ಎರೆಯುವ ಹಾಡು ಎನ್ನುತ್ತಾರೆ.ಈ ಹಾಡಿನಲ್ಲಿ ಆ ಮನೆಯನ್ನು ಮತ್ತು ಮನೆಯೊಡತಿಯನ್ನು ಹೊಗಳುವ ಸಾಹಿತ್ಯವಿರುತ್ತದೆ. "ಸಾಕೆಂಬಾ ಹಾಲಿಗೆ ಬೇಕೆಮ್ಬಾ ಕಡೆಗೋಲೂ ವಜ್ರ ಮಾಣಿಕ್ಯದ ಉರಿನೇಣೂ ".ಅಂದರೆ ಆ ಮನೆಯಲ್ಲಿ ಸಾಕೆಂಬಷ್ಟು ಹಾಲು ಮೊಸರು ಇರಲಿ. ಅದನ್ನು ಕಡೆಯುವ ಕಡೆಗೋಲಿಗೆ ವಜ್ರ ಮತ್ತು ಮಾಣಿಕ್ಯದ ದಪ್ಪನೆಯ ಎಳೆಯುವ ದಾರ [ಉಗಿನೇಣು ] ವಿರಲಿ ಎಂದು ಹೊಗಳುತ್ತಾರೆ. 'ಓಲೆಯ ಬೆಳಕಲ್ಲಿ ಮಗನ ಜೋಗುಳ ಪಾಡಿ ನಿದ್ರೆ ಬರಿಸುವ ಒಡತಿ ಎಣ್ಣೆ ಎರಿ [ಹಣತೆಗೆ ಎಣ್ಣೆ ಹಾಕು ಅಥವಾ ಎರಸು ಎಂಬರ್ಥದಲ್ಲಿ ] ಬಾರೆ ' ......... ಹೀಗೆ ತಮ್ಮ ದೀಪದ ಹಣೆತೆಗೆ ಮನೆಯೊಡತಿ ಎಣ್ಣೆಯನ್ನು ಹಾಕುವಂತೆ ಪ್ರೇರೇಪಿಸುವ ಹಾಡನ್ನು ಹಾಡುತ್ತಾರೆ.ನಂತರದಲ್ಲಿ ಹಬ್ಬದ ಸಂದರ್ಭದ ಅತಿ ಮುಖ್ಯವಾದ ಹಾಡು. ಬಲೀನ್ದ್ರನನ್ನು ಸ್ತುತಿಸುವ,ಹೊಗಳುವ ಹಾಡು. 'ಬಲ್ಲೇಳು ಬಲೀನ್ದ್ರನು ರಾಜ ಬಂದನು ತನ್ನ ರಾಜ್ಯಕೆ ತಾ | ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಡನೆ ಮಳೆಯೇ ಕರೆದಾವೋ |............. ಹೀಗೆ ಬಲಿ ಚಕ್ರವರ್ತಿಯನ್ನು ಕುರಿತು ಹಾಡುತ್ತಾರೆ. ಆದರೆ ಈ ಹಾಡನ್ನು ಅವರ ಮೂರು ದಿನಗಳ ಅವಧಿಯಲ್ಲಿ ಮೊದಲ ಎರಡು ದಿನ ಮಾತ್ರ ಹಾಡುತ್ತಾರೆ.ಮೂರನೆಯ ದಿನ ಅದು ಇಲ್ಲ. ಏಕೆಂದರೆ ಅವರು ತರುವ ಬಲೀನ್ದ್ರನನ್ನು ಹಬ್ಬದ ಮುನ್ನಾದಿನ ತಂದು ಹಬ್ಬದ ಮರುದಿನ ಬಿಟ್ಟುಬಿಡುತ್ತಾರೆ.ಮೂರನೆಯೆ ದಿನ ಬಲೀಂದ್ರ ಇರುವುದಿಲ್ಲ.ಆ ಕಾರಣದಿಂದ ಬಲೀನ್ದ್ರನ ಹಾಡನ್ನು ಮೂರನೆಯ ದಿನ ಹೇಳುವುದಿಲ್ಲ.ಇವಿಷ್ಟು ಒಂದು ಮನೆಯೊಳಗೆ ದೀಪ ಒಯ್ದಾಗ ಕಡ್ಡಾಯವಾಗಿ ಹಾಡಬೇಕಾದ ಹಾಡುಗಳು. ನಂತರದಲ್ಲಿ ಮನೆಯವರು ಬಯಸಿದರೆ ಇನ್ನು ಕೆಲವು ಐಚ್ಚಿಕ ಹಾಡುಗಳನ್ನು ಹಾಡುತ್ತಾರೆ. ತಮಗೆ ಸಲ್ಲಬೇಕಾದ ಗೌರವಗಳನ್ನು ವಸ್ತುಗಳು,ಹಣದ ರೂಪದಲ್ಲಿ ಮನೆಯವರು ಕೊಟ್ಟ ಮೇಲೆ ಅಂತಿಮವಾಗಿ ಮಂಗಳಪದ್ಯವನ್ನು ಹಾಡಿ ಅಲ್ಲಿಂದ ಮುಂದಿನ ಮನೆಗೆ ತೆರಳುತ್ತಾರೆ.ಮಂಗಳ ಪದ್ಯ ಈ ರೀತಿ ಇರುತ್ತದೆ."ಎತ್ತಿರಾರತಿಯಾ ಸಖಿಯರೇ ಎತ್ತಿರಾರತಿಯಾ |...............
ಥರ ಥರ ಮೂರುತಿ ಪವನ ಜ್ಯೋತಿಗೆ ಎತ್ತಿರಾರತಿಯಾ || " ಇವಿಷ್ಟು ಹಬ್ಬದ ಹಾಡುಗಳನ್ನು ಹಾಡುವಲ್ಲಿ ತಂಡದವರು ಅನುಸರಿಸುವ ನಿಯಮಗಳು.


[ ಈ ಹಾಡಿನ ಸಂಪ್ರದಾಯದ ಕುರಿತು ಮಾಹಿತಿ ಕೊಟ್ಟವರು.: ಶ್ರೀಯುತರುಗಳಾದ ಕ್ರಷ್ಣಪ್ಪನವರ ಮಗನಾದ ಹುಚ್ಚಪ್ಪ ಮತ್ತು ಅವನ ಮಕ್ಕಳು ಸುರೇಶ ,ಬಾಲಚಂದ್ರ [ಮಡಿವಾಳ ಸಮುದಾಯದವರು].ಪುರ್ಲೆಮಕ್ಕಿ.ಸಾಗರ ತಾಲೂಕು. ಹಾಗೂ ಮಾರ್ಯಪ್ಪ,ಮರಿಯಪ್ಪ,ದ್ಯಾವಪ್ಪ,[ಹಸಲರ ಸಮುದಾಯದವರು] ಬನದಕೊಪ್ಪ.ಸಾಗರ ತಾಲೂಕು.]

======ಇಲ್ಲಿಗೆ ಹಬ್ಬದ ಹಾಡಿನ ಸಂಪ್ರದಾಯದ ವಿವರಣೆ ಮುಗಿಯಿತು. ======

Monday, 30 December 2013

ಹೊಸ ವರುಷ ಹಳೆ ದುಗುಡ



ಹೊಸ ವರುಷ ಹೊಸತಲ್ಲ ನನಗೆ .. ನನ್ನಷ್ಟೇ ಹಳತು. |
ಹಳೆದುಗುಡ ಹೊಸೆತಿರಲು ಹೊಸತೇನ  ಕಾಣಲಿ ನಾನು. |
ಹೊಸತನರಸಿದೊಡೆ ಆಸೆಗಳ ಹಾಸು - ಹೊಕ್ಕು
ಸಿಕ್ಕಾಗಿ ಬದುಕಿನ ಸೊಗಡು ಜಡವಾಯಿತು. |
ಕಾಲ ಕಲಿಸುವುದೊಂದೇ ಪಾಠ.. ನಿತ್ಯದಾಟ
ಹಳಸಲ ಮನಕೆ ಕರೆದು ತುಂಬುವ ನಿತ್ಯ ಚೇತನ. |


ಸರ್ವರಿಗೂ ಹೊಸವರುಷ ಶುಭವನ್ನು ಕೊಡಲಿ ..

                         - ಎಂ ಗಣಪತಿ , ಕಾನುಗೋಡು .

Saturday, 7 December 2013

ಹೌದೇ... ಎಲ್ಲಾ ನಿನ್ನ ಗಂಡನ್ದೇಯಾ !!.. ..



-- ಎಂ. ಗಣಪತಿ, ಕಾನುಗೋಡು


ಪದ್ಮಜ್ಜಿ ಮತ್ತು ಲಕ್ಷ್ಮಜ್ಜಿ  ಇಬ್ಬರೂ ಓರೆಗಿತ್ತಿಯರು.  ಇಬ್ಬರ ಗಂಡಂದಿರೂ ತೀರಿ ಹೋಗಿದ್ದಾರೆ . ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿಯೇ ತಾಗಿಕೊಂಡಿದೆ.  ಇಬ್ಬರೂ ಹಲ್ಲು ಬಿದ್ದ ಬೋಡು ಬಾಯಿಯ ಮುದುಕಿಯರಾಗಿದ್ದಾರೆ. ಇವರಿಬ್ಬರ ಯಜಮಾನರಲ್ಲಿ ಅಣ್ಣ ಬುದ್ದಿವಂತ. ಆಸ್ತಿ ಮನೆ ವಿಸ್ತರಿಸಿ ತಮ್ಮನಿಗೆ  ಆಸ್ತಿಯಲ್ಲಿ ನ್ಯಾಯವಾಗಿ ಪಾಲು ಕೊಟ್ಟು ಮನೆಯನ್ನೂ ಕಟ್ಟಿಸಿಕೊಟ್ಟಿದ್ದಾನೆ.

 ವಯಸ್ಸು ಹೋದರೇನು ? ಓರೆಗಿತ್ತಿಯರ ನಂಜೇನೂ ಹೋಗಲಿಲ್ಲವಲ್ಲ...   ಒಂದು ದಿನ ಸಂಜೆ ಅಕ್ಕಪಕ್ಕದ ಅವರವರ ಮನೆಯ ಕಟ್ಟೆಯಮೇಲೆ ಕುಳಿತಿದ್ದರು. ಹೇಗೋ ಜಗಳಕ್ಕೆ ಶುರುವಾಯಿತು. ಇದು ಹಿಂದಿನಿಂದಲೂ ಇದ್ದದ್ದೇ. ಸುಮಾರು ಅರ್ಧ ಗಂಟೆ ವಾದಾಟವಾದ ನಂತರ ಹೇಳಿದಳು ಅಕ್ಕ ಅಜ್ಜಿ ...

 " ನಿಂಗಳದ್ದು ಎಂತಾ ಇದ್ದೇ ? ಯಲ್ಲಾ ಯಮ್ಮನೇರು ಮಾಡಿಟ್ಟಿದ್ದನ್ನೇ ನಿಂಗ ತಿಂಬೋದು  ಸೈಯಲ್ಲೇ ? !!" ..

ತಂಗಿ ಅಜ್ಜಿಗೆ ಸಿಟ್ಟು ನೆತ್ತಿಗೇರಿತು. ಅಕ್ಕನ ಒಂದು ಮಾತಿಗೆ ನಾಲ್ಕು ಮಾತು ಕುಟ್ಟಿಗಾಣಿಸಬೇಕು ಎಂಬುದೇ ಅವಳ ಆತುರ .. ಉಭ್ರಮೆಯಲ್ಲಿಯೇ ಹೇಳಿಬಿಟ್ಟಳು ..

" ಹೌದೇ.... ಎಲ್ಲಾ ನಿನ್ನ ಗಂಡನ್ದೇಯಾ .. ಈ ಮನೆಯೂ ನಿನ್ನ ಗಂಡನ್ದೇಯಾ ... ಈ ಅಡಿಕೆ ತೋಟವೂ  ನಿನ್ನ ಗಂಡನ್ದೇಯಾ .. ನಮ್ಮನೆ ಸೋಮ,  ಚಂದ್ರನೂ  ನಿನ್ನ ಗಂಡನ್ದೇಯಾ.. .. (ಸೋಮ ಚಂದ್ರ ಇವಳ ಮಕ್ಕಳು :) )  "


ಈ ತೆರನ ಸಂದರ್ಭಕ್ಕೇ ಕಾಯುತ್ತಿದ್ದ ಅಕ್ಕ ಅಜ್ಜಿ ಮುಡುಗಿದ ಸೊಂಟದಲ್ಲಿಯೇ ತಂಗಿ ಅಜ್ಜಿಯ ಕಡೆಗೆ ದೌಡಾಯಿಸಿ ಹೇಳಿದಳು ....



" ಹೌದೋ ... ಏನೋ ...... ಯಾರಿಗೆ ಗೊತ್ತು..... ? . ..!!  "





ಎಂ. ಗಣಪತಿ, ಕಾನುಗೋಡು   
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771

Friday, 6 December 2013

ಉಂಡ ಬಾಳೆಎಲೆಯ ಪಾಡು



-ಎಂ.ಗಣಪತಿ ಕಾನುಗೋಡು


ಒಂದು ಕಾಲದಲ್ಲಿ ದಿನನಿತ್ಯದ ಊಟ, ತಿಂಡಿಗೆ ಪ್ರತಿಯೊಬ್ಬರೂ ಬಾಳೆಎಲೆಯನ್ನು ಬಳಸುತ್ತಿದ್ದರು. ಆದರೆ ಈಗ ಹಬ್ಬ-ಹರಿದಿನಗಳಲ್ಲಿ ಮಾತ್ರ ಬಾಳೆಎಲೆಗೆ ವಿಶೇಷ ಮಹತ್ವ. ಮದುವೆ ಸಮಾರಂಭಗಳಲ್ಲಿ ಸಾವಿರಗಟ್ಟಲೆ ಜನರಿಗೆ ಊಟಕ್ಕೆ ಬಾಳೆಎಲೆಯನ್ನು ಬಳಸುತ್ತಾರೆ ಅಷ್ಟೆ.
ನಗರದಲ್ಲಿ ಕೆಲವೊಂದು ಮಾಂಸಾಹಾರಿ ಊಟದ ಹೋಟೆಲ್ ಎದುರಿಗೆ ಬೋರ್ಡು ನೇತು ಹಾಕಿಕೊಂಡಿರುತ್ತದೆ. ‘ಬಾಳೆಎಲೆಯ ಮೀನು ಊಟ ದೊರೆಯುತ್ತದೆ’. ಆಹಾ ! ಮಾಂಸಾಹಾರಕ್ಕೂ ಬಾಳೆಎಲೆಗೂ ಅಷ್ಟೊಂದು ನಂಟು. ಬಾಳೆಎಲೆಯ ಮೀನು ಊಟಕ್ಕಾಗಿಯೇ ಆ ಹೋಟೆಲ್‍ಗೆ ವಿಶೇಷ ಗಿರಾಕಿಗಳು.
ಬಳಸುವ ಬಾಳೆಎಲೆಯ ಬಗ್ಗೆ ಎಷ್ಟೊಂದು ಕಾಳಜಿ. ಅದನ್ನು ಕ್ರಮವಾಗಿ ಕತ್ತರಿಸುತ್ತಾರೆ. ಹುಳ-ಹುಪ್ಪಟವಿದ್ದರೆ ಅದರ ಮೇಲೆ ನಿಲ್ಲದಂತೆ ಎಚ್ಚರ ವಹಿಸುತ್ತಾರೆ. ಗಲೀಜು ಇದ್ದರಂತೂ ಸರಿಯೇ. ಇಲ್ಲದಿದ್ದರೂ, ಅವುಗಳನ್ನು ನೀರಿನಿಂದ ಚೊಕ್ಕಟವಾಗಿ ತೊಳೆದು ಒಪ್ಪವಾಗಿ ಕಾಯ್ದಿರುತ್ತಾರೆ. ಯಾರೂ ಅದಕ್ಕೆ ಗಲೀಜು ತಾಗಿಸದಂತೆ ತಾಕೀತು ಮಾಡುತ್ತಾರೆ. ದಿನನಿತ್ಯದ ಕುಟುಂಬದೊಳಗಿನ ಆಹಾರದ ವ್ಯವಸ್ಥೆಗೆ ಇರಲಿ ಅಥವಾ ವಿಶೇಷ ಸಮಾರಂಭದಲ್ಲಿಯೇ ಇರಲಿ. ಬಾಳೆಎಲೆಯ ಬಗ್ಗೆ ಇದು ಸಾಮಾನ್ಯವಾಗಿ ಇರುವ ಮುಂಜಾಗರೂಕತೆ. ಎಷ್ಟೊಂದು ಗಮನ, ಮರ್ಯಾದೆ ಅದರ ಕಡೆಗೆ. ನಮ್ಮ ಊಟ ಪರಿಶುದ್ಧವಾಗಿರಬೇಕಲ್ಲವೇ?. ಯಾರ ಪಾದಧೂಳಿಯೂ ಬೀಳದ ತಾವಿನಲ್ಲಿ ಅದಕ್ಕೆ ಮಾನದ ಸ್ಥಾನ. ಅಬ್ಬಾ....!
ಇಷ್ಟೆಲ್ಲಾ ಗೌರವಾದರಗಳು, ಪ್ರತ್ಯೇಕ ಸ್ಥಾನಮಾನಗಳಿಂದ ಸಂಪನ್ನಗೊಂಡ ಬಾಳೆಎಲೆ ಊಟ ಮುಗಿದ ಮೇಲೆ ತಿಪ್ಪೆಗೆ ಬಿಸಾಡಲ್ಪಡುತ್ತದೆ. ಅಯ್ಯೋ ಒಂದು ಘಂಟೆ ಮುಂಚೆ ತಾರಸಿ ಮನೆಯ ಬೆಚ್ಚನೆಯ ಕೊಠಡಿಯಲ್ಲಿ ಜೋಪಾನವಾಗಿ ಕಾಯ್ದು ಇಟ್ಟಿದ್ದ ಬಾಳೆಎಲೆ ಉಂಡ ಬಾಳೆಎಲೆ ಎಂದಾದ ಮೇಲೆ ಕೊಠಡಿ ಇರಲಿ ಮನೆಯ ಯಾವ ಮೂಲೆಯಲ್ಲೂ ಅದಕ್ಕೆ ಸ್ಥಳವಿಲ್ಲ. ತಾರಸಿ ಎದುರಿನ ತಿಪ್ಪೆಯೇ ಅದಕ್ಕೆ ಗತಿ. ಇದಕ್ಕೇ ಉಂಡ ಬಾಳೆಎಲೆಯ ಪಾಡು ಎನ್ನುವುದು.
ಉಂಡ ಬಾಳೆಯನ್ನೇನು ತಿಜೋರಿಯಲ್ಲಿ ಕಾಯ್ದಿಡಲಾಗುತ್ತದೆಯೇ?. ಇದು ಸಹಜ ಪ್ರಶ್ನೆಯೆ. ಅದರ ಉಪಯೋಗ ಮುಗಿದ ಮೇಲೆ ಬಿಸಾಡಬೇಕು. ಅಲ್ಲವೇ? ಇನ್ನೇನು ಅಂಗಳದಲ್ಲಿ ಹೊಲಸು ಮಾಡಿಕೊಳ್ಳಲಾಗುತ್ತದೆಯೇ? ತಿಪ್ಪೆಯೇ ಅದಕ್ಕೆ ಒಪ್ಪು.
ಅದು ಅಲ್ಲವೆಂದಲ್ಲ. ಆದರೆ ಉಂಡ ಎಲೆಯ ಪಾಡು ಮನುಷ್ಯನಿಗೂ ಬಂದರೆ? ಇಲ್ಲಿಯೇ ಈ ಒಕ್ಕಣೆಯ ಮಹತ್ವ ಇರುವುದು. ಸಮಾಜದಲ್ಲಿ ಎಷ್ಟೋ ಜನರು ಮತ್ತೊಬ್ಬರ ಉಪಯೋಗಕ್ಕೆ ದೊರಕಿ ದೊರಕಿಸಿಕೊಂಡವರ ತೀಟೆ ತೀರಿದ ಮೇಲೆ ಉಂಡ ಬಾಳೆಎಲೆಯ ಪಾಡನ್ನು ಅನುಭವಿಸುತ್ತಾರೆ.
ಹೌದು. ಬದುಕೇ ಪರಾವಲಂಬಿ. ಒಬ್ಬರ ಉಪಯೋಗವನ್ನು ಪಡೆದುಕೊಂಡೇ ಇನ್ನೊಬ್ಬ ತನ್ನ ಬದುಕನ್ನು ಸಾಗಿಸಬೇಕು. ಇದು ವ್ಯಕ್ತಿಯ ತೀರ ವೈಯುಕ್ತಿಕ ಜೀವನದಿಂದ ಹಿಡಿದು ಸಾಮೂಹಿಕ ಜೀವನದ ವರೆಗೂ ಇರುವ ಸತ್ಯ. ಗಂಡ-ಹೆಂಡತಿ, ಪೋಷಕರು – ಮಕ್ಕಳು, ಸಹೋದರ-ಸಹೋದರಿಯರು ಹೀಗೆ ಎಲ್ಲರೂ ವೈಯುಕ್ತಿಕ ಜೀವನದಲ್ಲಿ ಪರಸ್ಪರ ಅವಲಂಬಿಗಳು. ಇಲ್ಲಿಯೂ ಹೆಚ್ಚು ಉಪಯೋಗಕ್ಕೆ ಸಿಗುವವನು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಾನೆ. ಯಾವ ಉಪಯೋಗಕ್ಕೂ ಬಾರದ ಕುಟುಂಬದ ಸದಸ್ಯನ ಪಾಡು ಪ್ರಥಮ ಹಂತದಲ್ಲಿಯೇ ಉಂಡ ಬಾಳೆಎಲೆಯ ಪಾಡು.  ಉಪಯೋಗಕ್ಕೆ ಸಿಕ್ಕವನ ಪಾಡು ಕೂಡ ತದನಂತರದಲ್ಲಿ ಅದೇ ಸ್ಥಿತಿ. ಆದರೆ ಇದು ಕುಟುಂಬವಾದ್ದರಿಂದ ಇಲ್ಲಿ ಅವಲಂಬನೆ ವರ್ತುಲವಾಗಿರುತ್ತದೆ. ಯಾರ  ಹಂಗು ಯಾರಿಗೂ ಇಲ್ಲಿಗೇ ಮುಗಿಯಿತು ಎಂದು ಪೂರ್ಣವಿರಾಮ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಪರಿಣಾಮದ ಲಕ್ಷಣಗಳು ಇಲ್ಲಿ ಮಾರ್ಮಿಕವಾಗಿರುತ್ತದೆ. ಮೂರ್ತ ರೂಪದಲ್ಲಿ ಪ್ರಕಟಗೊಳ್ಳುವುದಿಲ್ಲ.
ಕುಟುಂಬದ ಹೊರಗೆ ಬಂದರೆ ಸಾಮೂಹಿಕ ಜೀವನದಲ್ಲಿ ಈ ತೆರೆನ ಪಾಡು. ಮೂರ್ತ ರೂಪದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಉಪಯೋಗಕ್ಕೆ ಬೇಕೆನಿಸಿದರೆ ಮತ್ತೊಬ್ಬ ವ್ಯಕ್ತಿ ಅವನನ್ನು ಬಾಳೆಎಲೆಯ ಹಾಗೆ ಬಹಳ ಮಹತ್ವ ಕೊಟ್ಟು ಮುತುವರ್ಜಿಯಿಂದ ಕಾಯ್ದುಕೊಳ್ಳುತ್ತಾನೆ. ಎಷ್ಟು ಹೊತ್ತಿಗೂ ಅವನು ನಕರಾತ್ಮಕನಾಗದ ಹಾಗೆ ಪೋಷಿಸುತ್ತಾನೆ. ಹೊಗಳುತ್ತಿರುತ್ತಾನೆ. ಆತ ಯಾವಾಗಲೂ ತನ್ನ ಬದಿಯಲ್ಲಿ ತಾಗಿಕೊಂಡಿರಬೇಕು. ಉಪಯೋಗದ ಸಾಮಥ್ರ್ಯವನ್ನು ಅರಿತೇ ಬಾಳೆಎಲೆಯನ್ನು ರಕ್ಷಿಸಿ ಇಟ್ಟುಕೊಂಡ ಹಾಗೆ ತನಗೆ ಯಾವ ಹೊತ್ತಿಗೆ ಯಾವ ಪ್ರಯೋಜನವನ್ನು ಕೊಡುವ ಸಾಮಥ್ರ್ಯವಿದೆಯೋ ಅಂಥವರನ್ನು ಈತ ಆಯಾ ಹೊತ್ತಿಗೆ ಬಳಸಿಕೊಳ್ಳಲು ಹೊಂಚು ಹಾಕಿರುತ್ತಾನೆ. ತನಗೆ ಸಹಾಯವಾಗಲೆಂದು ಆತನನ್ನು ಮಾತಿನಿಂದ ಹಿಗ್ಗುವಂತೆ ಉಬ್ಬಿಸುತ್ತಾನೆ. ಇವನ ಲಾಭಕ್ಕಾಗಿ ಆತ ಯಾರ್ಯಾರನ್ನೋ ಬೈಯ್ದಾಡಿ ನಿಷ್ಟುರಕ್ಕೆ ಗುರಿಯಾಗುತ್ತಾನೆ. ತನ್ನ ಸ್ವಂತ ಸಂಸಾರ, ದುಡಿಮೆ ಎಲ್ಲವನ್ನೂ ಬಿಟ್ಟು ಆತ ಇವನಿಗಾಗಿ ಹೋರಾಡುತ್ತಾನೆ.
ಒಂದು ದಿನ ಈತನಿಗೆ ಅವನಿಂದ ಆಗಬೇಕಾದ ಪ್ರಯೋಜನವೆಲ್ಲವೂ ಮುಗಿಯುತ್ತದೆ. ಇನ್ನು ಮುಂದೆ ಅವನನ್ನು ತನ್ನ ಜೊತೆ ಇಟ್ಟುಕೊಂಡರೆ ತೊಂದರೆಯೇ ಸರಿ. ಅನಾವಶ್ಯಕವಾಗಿ ಆತನನ್ನು ಓಲೈಸಬೇಕು. ರಕ್ತವನ್ನು ಸಂಪೂರ್ಣವಾಗಿ ಹೀರಿಕೊಂಡ ನಂತರ “ಇಂಬಳ” (ಒಂದು ಬಗೆಯ ರಕ್ತ ಹೀರುವ ಹುಳು) ನಮ್ಮ ದೇಹದಿಂದ ಬೇರ್ಪಡುವುದು ಅದರ ಸ್ವಭಾವ. ಹಾಗೆ ಇನ್ನು ಹಿಡಿದುಕೊಂಡರೆ ಪ್ರಯೋಜನವಿಲ್ಲ ಎಂದೆನಿಸಿದ ಮರುಘಳಿಗೆಯಲ್ಲಿ ಇಂಬಳದಂತೆ ಆತನನ್ನು ಈತ ಬಿಟ್ಟುಬಿಡುತ್ತಾನೆ. ಪುನಃ ಆತ ಇವನನ್ನು ಎಷ್ಟು ಮೂಸಿ ನೋಡಿದರೂ ಅವನ ಮೂಗಿಗೆ ನಾರುವುದು ದುರ್ವಾಸನೆಯೇ ವಿನಹ ಮುಂಚಿನ ಸುವಾಸನೆಯಿಲ್ಲ. ಗುರುತೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವನ ಕುರಿತು ಈತ ನಿರ್ಲಿಪ್ತನಾಗಿರುತ್ತಾನೆ. ಸೂಕ್ಷ್ಮವಾಗಿ ಗ್ರಹಿಸಿದರಷ್ಟೇ ಸಮಾಜದಲ್ಲಿ ನಡೆಯುತ್ತಿರುವ ಇಂಥಹ ಅಹಿತರಕ ನಡವಳಿಕೆಗಳು ನಮ್ಮ ಗಮನಕ್ಕೆ ಬರುತ್ತವೆ.
ಬೇಕೆನಿಸಿದಾಗ ಹೇಗೆ ಬೇಕೋ ಹಾಗೆ ತಮ್ಮ ತೆವಲು ತೀರಿಸಿಕೊಳ್ಳಲಿಕ್ಕೆ ಸರಿಯಾಗಿ ಮತ್ತೊಬ್ಬರನ್ನು ಬಳಸಿಕೊಂಡ ಜನ ತೆವಲು ತೀರಿದ ನಂತರ ಅವರ ಸ್ಥಿತಿಯನ್ನು ಉಂಡ ಬಾಳೆಎಲೆಯ ಪಾಡನ್ನಾಗಿ ಮಾಡಿಬಿಡುತ್ತಾರೆ.


ದಿನಾಂಕ: 05.12.2013          

ಎಂ. ಗಣಪತಿ, ಕಾನುಗೋಡು     
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771

Tuesday, 3 December 2013

ಔತಣದಲ್ಲಿ ಹಲ್ಲು ಸೆಟ್ಟು ....?



(ಒಂದು  ಹಾಸ್ಯ ಲೇಖನ)

-ಎಂ.ಗಣಪತಿ ಕಾನುಗೋಡು

ಇದು ನಗಲಿಕ್ಕಾಗಿ ಕಟ್ಟಿದ ಕಥೆಯಲ್ಲ. ವಾಸ್ತವಿಕ ಸಂಗತಿ. ಮನೆಯ ಯಜಮಾನಿ ಸ್ವಲ್ಪ ವಯಸ್ಸಾದವಳು. ಮೇಲ್ಭಾಗದ ಮುಂದಿನ ಎರಡು ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದಳು. ಪ್ರತಿದಿನ ಬೆಳಿಗ್ಗೆ ಅದನ್ನು ಬಾಯಿಗೆ ಜೋಡಿಸಿಕೊಳ್ಳುವುದು, ರಾತ್ರಿ ತೆಗೆದಿಡುವುದು ಎಂದಿನ ರೂಢಿ. 
ಮಗನ ಮದುವೆಯಾದ ವರ್ಷ. ದೀಪಾವಳಿಯ ಹೊಸ ಹಬ್ಬಕ್ಕೆ ಕರೆಯಲು ಸೊಸೆಯ ಮನೆಯ ಬೀಗರು ಬಂದಿದ್ದಾರೆ. ಹೊಸ ಬೀಗರಿಗೆ ಔತಣ ಎಂದ ಮೇಲೆ ತಯಾರಿ ಭರ್ಝರಿಯಾಗಿಯೇ ನಡೆದಿತ್ತು. 
ಬೆಳಿಗ್ಗೆಯಿಂದ ಮಧ್ಯಾಹ್ನದ ಊಟದ ಹೊತ್ತಿನ ವರೆಗೂ ಪುರುಸೊತ್ತಿಲ್ಲದಷ್ಟು ಕೆಲಸ ಯಜಮಾನಿಗೆ. ಬೀಗರನ್ನು ಇನ್ನೇನು ಊಟಕ್ಕೆ ಒಳಗೆ ಕರೆಯಬೇಕು ಅನ್ನುವಷ್ಟರಲ್ಲಿ ಯಜಮಾನಿ ಮುಖ ತೊಳೆದು ಒಮ್ಮೆ ತಲೆ ಬಾಚಲಿಕ್ಕಾಗಿ ಕನ್ನಡಿ ನೋಡಿದ್ದಾಳೆ. ಬಾಯಿಯೊಳಗಿನ ಎರಡು ಹಲ್ಲಿನ ಸೆಟ್ ಎಲ್ಲಿಯೋ ಬಿದ್ದು ಹೋಗಿದೆ. ಅಯ್ಯೋ ದೇವರೇ ....!?
ಬಿದ್ದು ಹೋಗಿದ್ದು ಪರವಾಗಿಲ್ಲ. ಕೆಡುವುದೇನು? ಅತ್ತೆಯ ಚಂದ ನೋಡಿ ಬೀಗರೇನು ಅವರನ್ನು ಮೆಚ್ಚಿಕೊಳ್ಳಬೇಕಾಗಿಲ್ಲವಲ್ಲ ! ಆದರೆ ಅದು ಎಲ್ಲಿ ಬಿತ್ತು ಅಂತ ಬೇಕಲ್ಲ. ಹೊರಗಡೆ ಎಲ್ಲಾದರೂ ಬಿತ್ತೋ ಅಥವಾ ಅಡುಗೆಯ ಐಟಂಗಳಲ್ಲಿ ಯಾವುದಾದರಲ್ಲೂ ಬಿದ್ದು ಹೋಗಿದೆಯೋ?. ಅದು ಬೀಗರ ಊಟದ ಪ್ಲೇಟಿಗೆ ಬಂದರೆ ಏನು ಗತಿ? ಶಿವ.....ಶಿವಾ.....
ವಿಷಯವನ್ನು ಮಗನಿಗೆ ಮತ್ತು ಗಂಡನಿಗೆ ತಿಳಿಸಿದ್ದು ಆಯಿತು. ಸೊಸೆಗೂ ಗುಟ್ಟಾಗಿ ಪಿಸುಗುಟ್ಟಿದ್ದಾಯಿತು. ಆಕೆಗೆ ತಿಳಿಸಿದರೆ ಅಪ್ಪನಿಗೆ ಹೇಳಿಬಿಟ್ಟಾಳು ಎಂದು ಮುಚ್ಚಿಟ್ಟರೆ ಮುಂದಿನ ಪ್ರಸಂಗದಿಂದ ಅದು ಅವಳಿಗೆ ತಿಳಿಯದೇ ಇರುತ್ತದೆಯೇ? ಆಗಲೇ ಗಂಟೆ ಮಧ್ಯಾಹ್ನ 1.30 ಆಗಿದೆ. ಬೀಗರು 3.00 ಗಂಟೆ ಬಸ್ಸಿಗೆ ಊರಿಗೆ ಮರಳಬೇಕು ಎಂದು ಬಂದ ಕೂಡಲೇ ಹೇಳಿದ್ದು ಬೇರೆ. ಅಯ್ಯೋ....ದೇವರೇ....!
ಮಗ ತಡಮಾಡಲಿಲ್ಲ. ಶೆಲ್ಪ್‍ನಲ್ಲಿದ್ದ ಹರಿವಾಣಗಳನ್ನಷ್ಟೇ ಅಲ್ಲ ಮಹಡಿಯ ರೂಮ್‍ನಲ್ಲಿದ್ದ ಹತ್ತಾರು ಹರಿವಾಣಗಳನ್ನು ತೊಳೆದು ತಂದು ಅಡುಗೆಮನೆಯ ಉದ್ದಗಲಕ್ಕೆ ಹರಡಿದ. ಅನ್ನದಿಂದ ಹಿಡಿದು ಸಾರು, ಸಾಂಬಾರು, ಹುಣಸೆಹಣ್ಣಿನ ಮಂದನೆಯ ಗೊಜ್ಜು, ಪಲ್ಯ, ಕೋಸುಂಬರಿ, ಪಾಯಸ, ಬಾಣಲೆತುಂಬಾ ಸಣ್ಣಕ್ಕಿ ಕೇಸರಿಬಾತು, ಚಿತ್ರಾನ್ನ ಒಂದೇ.. ಎರಡೇ.. ಹೀಗೆ.. ಹೀಗೆ.. ಎಲ್ಲವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹರಿವಾಣಕ್ಕೆ ಸುರವಿ ಸೌಟಿನಲ್ಲಿ ಹರವಿ ಹರವಿ ನೋಡಿದ್ದಾಯ್ತು. ಇದರಿಂದ ಪದಾರ್ಥಗಳು ಆರಿ ಹೋಯಿತೇ ವಿನಃ ಹಲ್ಲುಸೆಟ್ಟು ಸಿಗಲಿಲ್ಲ. ಒಬ್ಬೊಬ್ಬರು ಒಂದೊಂದನ್ನು ಜಾಲಾಡಿದರು. ಸೆಟ್ಟು ಸಿಕ್ಕದಿದ್ದಕ್ಕಾಗಿ ಸಿಡಿಮಿಡಿಗೊಂಡು ಅವನು ಸರಿಯಾಗಿ ನೋಡಲಿಲ್ಲವೇನೋ ಎಂದು ಇವನು ಇವನು ಸರಿಯಾಗಿ ನೋಡಿಲಿಲ್ಲವೇನೋ ಎಂದು ಅವನು ಹೀಗೆ ಒಬ್ಬರಿಗೊಬ್ಬರು ಗಾಬರಿಯಲ್ಲಿ ಬೈಯ್ದಾಡಿಕೊಂಡಿದ್ದೂ ಆಯಿತು. ಪಾತ್ರೆಯ ಶಬ್ದ, ಮಾತಿನ ಗೊಣಗಾಟದಲ್ಲಿ ಗಂಟೆ ಎರಡೂವರೆಯೂ ಆಯಿತು. 
ಜಗುಲಿಯ ಮೇಲೆ ಕುಳಿತಿದ್ದ ಬೀಗರಿಬ್ಬರು ಮನೆಯ ಯಜಮಾನನ್ನು ಹೊರಗೆ ಕರೆದರು. ಇನ್ನು ಅರ್ಧಗಂಟೆಯಲ್ಲಿ ತಾವು ಊರಿಗೆ ಹೊರಡಬೇಕು ಎಂದರು. ಅದು ಹಳ್ಳಿ ಬೇರೆ. ಬಿಟ್ಟರೆ ಮರುದಿನವೇ ಗತಿ. ಏನು ಬೀಗರೆ ಬಹಳ ವಿಶೇಷ ಔತಣ ಮಾಡಿಬಿಟ್ಟಿದ್ದೀರಿ ಅಂತ ಕಾಣುತ್ತೆ. ನಾವು ನಮ್ಮ ಹಲ್ಲಿನಲ್ಲಿ ಅಗಿದು ತಿಂದು ಜೀರ್ಣಿಸಿಕೊಳ್ಳಲಿಕ್ಕೆ ಆಗುತ್ತೋ ಇಲ್ಲವೋ, ಏನು ಮಹಾರಾಯರೆ ಎಂದು ತಮ್ಮ ಮಗಳ ಮಾವನನ್ನು ಕೇಳಿದರು. ಮಾವನ ಗತಿಯೋ ? ಅವನು ಬಾಯಿ ಬಿಟ್ಟರೆ ಕೆಟ್ಟ.! 
ಜಗುಲಿಯಲ್ಲಿ ಬೀಗರು ಅರ್ಜೆಂಟ್ ಮಾಡಿದ್ದನ್ನು ಯಜಮಾನ ಒಳಗೆ ಬಂದು ಹೇಳಿದ. ಅನಿವಾರ್ಯ. ಸಿದ್ದತೆ ಮಾಡಿದರು. ನೆಂಟರು ಅವಸರ ಅವಸರದಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದೂ ಆಯಿತು.
ದೇವರು ದೊಡ್ಡವ ಅಂತೂ ಬೀಗರ ಬಾಯಿಗೆ ನನ್ನ ಹಲ್ಲು ಸೆಟ್ಟು ಬಂದು ಕೂರಲಿಲ್ಲವಲ್ಲ. ಭಗವಂತ ನಮಸ್ಕಾರ. ಯಜಮಾನಿಯಿಂದ ದೇವರಿಗೆ ಥ್ಯಾಂಕ್ಸ್. 
ನೆಂಟರನ್ನು ಕಳುಹಿಸಿ ಮನೆಯವರೆಲ್ಲಾ ಪ್ರಕರಣದಲ್ಲಿ ದಣಿದು ಊಟ ಮುಗಿಸುವ ಹೊತ್ತಿಗೆ ಸಂಜೆ 5.00 ಗಂಟೆಯಾಗಿತ್ತು. ಅಡುಗೆ ಮನೆಯನ್ನು ಸೇರಿಸುವ ಕೆಲಸವನ್ನು ಸೊಸೆಗೆ ವಹಿಸಿ ಅತ್ತೆ ಮನಸ್ಸಿನ ಬೇಸರದಿಂದ ಸ್ವಲ್ಪ ವಿಶ್ರಾಂತಿಗೆ ಹೋದಳು.
ಕಸ ಮುಸುರೆ ಮುಗಿಸಿ ಬಂದ ಸೊಸೆ ಅತ್ತೆಯ ಮಂಚದ ಎದುರಿಗೆ ಬಂದು ನಿಂತಳು. ಅತ್ತೆ ಇಲ್ಲಿ ಸಿಕ್ಕಿತು ನಿಮ್ಮ ಹಲ್ಲು ಸೆಟ್ಟು ಎಂದಳು. ಅಯ್ಯೋ ಎಲ್ಲಿತ್ತೆ ಪುಣ್ಯಾತ್ಗಿತ್ತೀ ಎಂದು ಹೌಹಾರಿದಳು ಅತ್ತೆ. ಸೊಸೆ ಹೇಳಿದಳು. ಅದು ಅಡುಗೆ ಮನೆಯ ಅಕ್ಕಿ ತೊಳೆದ ನೀರಿನ ಬಕೆಟಿನಲ್ಲಿತ್ತು.

ದಿನಾಂಕ: 03.12.2013    

 ಎಂ. ಗಣಪತಿ, ಕಾನುಗೋಡು    
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kanagod@gmail.com
Blog : mgkangod.blogspot.com
Mob : 9481968771

Monday, 25 November 2013

ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ ?

-ಎಂ. ಗಣಪತಿ ಕಾನುಗೋಡು 

ಹೌದು. ಹೊಗೆ ಕಾಣಿಸಿಕೊಂಡಿದೆ ಎಂದರೆ ಅದರ ಹಿಂದೆ ಬೆಂಕಿ ಇದೆ ಎಂಬುದು ವಾಸ್ತವಿಕ. ಇದು ಕೇವಲ ಒಂದು ಒಕ್ಕಣೆಯಾಗಿ ಉಳಿದಿಲ್ಲ. ಗಾದೆಯಾಗಿದೆ. ಗಾದೆ ಎಂದ ಮೇಲೆ ಅದು ಶಬ್ದಾರ್ಥಕ್ಕಷ್ಟೇ ಸೀಮಿತವಾಗದೆ ಅದರ ಇಂಗಿತಾರ್ಥಗಳು ಬಹಳ. ಅದರಂತೆ ಈ ಮಾತಿಗೆ ಬೇರೆ ಬೇರೆ ಅರ್ಥ ವಿಸ್ತಾರವಿದೆ. 

ಯಾವುದೇ ವ್ಯಕ್ತಿಯ ಜೀವನದಲ್ಲಿ ಒಂದು ಸುದ್ದಿ ಹೊರಟಾಗ ಅಥವಾ ಇನ್ನಾವುದೇ ಸಂದರ್ಭಗಳಲ್ಲಿ ಬೇರೆ ಬೇರೆ ಘಟನೆಗಳು ಘಟಿಸಿದಾಗ ಜನ ಆಡಿಕೊಳ್ಳುವುದು ಒಂದೇ ಪ್ರಶ್ನೆ. ಬೆಂಕಿಯಿಲ್ಲದೆ ಹೊಗೆಯಾಡಲು  ಸಾಧ್ಯವೇ ?. 

ಒಂದು ವ್ಯಕ್ತಿಯ ಬಗ್ಗೆ ಯಾವುದೇ ಸುದ್ಧಿ ಪ್ರಚಾರ ಗೊಂಡರೆ, ಅದಕ್ಕೆ ಸರಿಯಾದ ಕಾರಣ ಯಾರಿಗೂ ತಕ್ಷಣ ಗೊತ್ತಾಗುವುದಿಲ್ಲ. ಹಾಗೆಂದು ಒಂದು ಕಾರ್ಯಕ್ಕೆ   ಸಂಬಂಸಿದಿರಬಹುದಾದ  ವಾಸ್ತವಿಕ ಕಾರಣವನ್ನು ತಿಳಿದುಕೊಳ್ಳುವ ಗೋಜಿಗೂ ಜನ ಹೋಗುವುದಿಲ್ಲ. ಒಂದು ಸುದ್ದಿ ಅಥವಾ ಘಟನೆ ಪ್ರಚಲಿತಕ್ಕೆ ಬಂದರೆ ಆ ಹೊತ್ತಿಗೆ ತಮ್ಮ ಬುದ್ದಿಯ ಮಿತಿಯೊಳಗೆ ಯಾವ ಯಾವ  ಕಾರಣಗಳು  ಗೋಚರಿಸುತ್ತವೆಯೋ ಅವನ್ನೆಲ್ಲಾ ಆ ಪರಿಣಾಮಕ್ಕೆ  ತಳಿಕೆ ಹಾಕುತ್ತಾರೆ. ಹೊಗೆಯಾಡಲು ಅದರ ಹಿಂದೆ ಇರುವಂತಹ ನಿಜವಾದ ಬೆಂಕಿ ಯಾವುದು  ಎಂಬುದನ್ನು ಯಾರೂ ತಿಳಿದಿರುವುದಿಲ್ಲ. ಹಾಗೆಂದು ತಮ್ಮಷ್ಟಕ್ಕೆ ತಾವು ಯಾರೂ ಸುಮ್ಮನೆ ಕೂರುವುದಿಲ್ಲ. 

ಪ್ರಚಾರಕ್ಕೆ ಬಿದ್ದಿರುವ ಸುದ್ದಿ ಅಥವಾ ಸಂಭವಿಸಿದ ಘಟನೆ ಕೆಲವು ಸಾರಿ ಕೆಲವೊಂದು ಜನರ ನಾಲಿಗೆಯ ತುರಿಕೆಯಿಂದ ಆಗಿರುತ್ತದೆ.  ಇದಕ್ಕೆ ಕಾರಣರಾದ ವ್ಯಕ್ತಿಗಳಿಗೆ ಯಾವ  ಲಾಭವೂ ಇಲ್ಲ.  ಸಿಗಬಹುದಾದ ಪುಕ್ಕಟ್ಟೆ  ಮನರಂeನೆಯೊಂದೇ ಅವರಿಗೆ  ಲಾಭ. ಇಂತಹ ಸಂದರ್ಭಗಳಲ್ಲಿ ಹೊಗೆಯ ಹಿಂದೆ ಇರುವ ಬೆಂಕಿಯೆಂದರೆ ನಿಷ್ಪ್ರಪ್ರಯೋಜಕ  ವ್ಯಕ್ತಿಗಳಿಗೆ ಇರುವ ಬಾಯಿ ಚಪಲ ಅಷ್ಟೆ. ನಿಜ ಹೇಳಬೇಕೆಂದರೆ ಇದು ಬೆಂಕಿಯೇ ಅಲ್ಲ.  ಕೇವಲ ಗಾಳಿ ಅಷ್ಟೇ.  ದುರಂತವೆಂದರೆ  ನಿಜಾಂಶ ಸಮಾಜಕ್ಕೆ  ಗೊತ್ತಾಗುವುದರೊಳಗೆ ಈ ಗಾಳಿ ಮಾತ್ರಕ್ಕೆ  ಸಿಲುಕಿದ ವ್ಯಕ್ತಿ ಸುಟ್ಟು ಕರಕಲಾಗುತ್ತಾನೆ.  

ಆಡುವ ಹೊಗೆಗೆ ಇನ್ನೊಂದು ಹಿನ್ನೆಲೆಯೂ ಇದೆ. ಕೆಲವು ವ್ಯಕ್ತಿಗಳಿಗೆ ಒಬ್ಬ ವ್ಯಕ್ತಿಯ ಮೇಲೆ ದ್ವೇಷವಿದೆ. ಹಾಗೆಯೇ ಒಂದು ಸಂಘಟನೆ ಇನ್ನೊಂದು ಸಂಘಟನೆ ಮೇಲೆ ಭಿನ್ನಾಭಿಪ್ರಾಯವಿರುತ್ತದೆ. ಅಂತಹ ಸನ್ನಿವೇಶಗಳಲ್ಲಿ  ಆ ವ್ಯಕ್ತಿಗಳು ತಮ್ಮ ಗುರಿಯ ವ್ಯಕ್ತಿಯ ವಿರುದ್ದ, ಆ ಸಂಘಟನೆಯು ತನ್ನ ಗುರಿಯ  ಸಂಘಟನೆ ವಿರುದ್ದ ಉದ್ದೇಶಪಟ್ಟು ಅಪಪ್ರಚಾರದ ವದಂತಿಗಳನ್ನು ಹರಿಯ ಬಿಡುತ್ತಾರೆ. ಇದು ಕೇವಲ ಬಾಯಿ ಚಪಲ ಅಲ್ಲ. ಗಹನವಾದ ದುರುದ್ದೇಶ. ಈ ಸುಳಿಗೆ ಸಿಕ್ಕ  ಆ ವ್ಯಕ್ತಿ ಅಥವಾ ಸಂಘಟನೆ  ತತ್ತರಿಸಿ ಹೋಗಬೇಕು. ಆ ರೀತಿಯಲ್ಲಿ ಸಂಚು ನೇಯ್ಗೆಯಾಗಿರುತ್ತದೆ. ವಾಸ್ತವಾಂಶ ಬೇರೆಯೇ ಇದೆ ಎಂದು ಈ   ಸುಳಿತಕ್ಕೆ ಸಿಕ್ಕು ಹಣ್ಣಾದ ವ್ಯಕ್ತಿ ಅಥವಾ ಸಂಘಟನೆ ಎಷ್ಟು ಪರಿಯಲ್ಲಿ ತಿಳಿ ಹೇಳಿದರೂ ಜನ ನಂಬುವುದೇ ಇಲ್ಲ. ಏನೋ ಕೊಳಕು ಇದೆ. ಸುಮ್ಮನೆ ದುರ್ವಾಸನೆ ನಾರುತ್ತದೆಯೇ ? ಸುಮ್ಮನೆ ಹೊಗೆಯಾಡುತ್ತದೆಯೇ? ಎಂದು ಜನ ಆಡಿಕೊಳ್ಳುತ್ತಾರೆ. ಮೂಲವನ್ನು ತಿಳಿದುಕೊಳ್ಳುವ ಪ್ರಯತ್ನ ಮತ್ತು ತೊಂದರೆ ಯಾರಿಗೆ ಬೇಕು. ಪುಕ್ಕಟ್ಟೆ ಸಿಕ್ಕರೆ ಕರ್ಣಾನಂದ ಯಾರಿಗೆ ಬೇಡ. ಮನಸ್ಸಿಗೆ ಸಂತೋಷ ಒಂದೆ ಅಲ್ಲ. ಇವರ ಬಾಯಿ ಕೊಳೆಯೂ ಅದರಲ್ಲೇ ತೊಳೆದು ಹೋಗುತ್ತದೆಯಲ್ಲಾ. 

ಸಮಾಜ ಸೇವಕರು, ವಕೀಲರು, ಹೆಚ್ಚಾಗಿ ವೈದ್ಯರು, ಉಪನ್ಯಾಸಕರು, ಉದ್ಯಮಿಗಳು, ಉದ್ಯೋಗಿಗಳು ಹೀಗೆ ಇಂತಹುದೇ ಅನೇಕ ವ್ಯಕ್ತಿಗಳು ಒಳ್ಳೆಯ ಹೆಸರನ್ನು ಹೊಂದಿದ್ದರೆ, ಅವರಿಗೆ ಇದರ ಜ್ವಾಲೆ ತಪ್ಪಿದ್ದಲ್ಲ. ಮಠಾಪತಿಗಳು, ಊರು ಕೇರಿಯ ಗೌರವಾನ್ವಿತ ಹೆಣ್ಣು ಮಕ್ಕಳಿಗೂ ಇದು ಬಿಟ್ಟಿದ್ದಲ್ಲ. ಹೆಚ್ಚಾಗಿ ಗಂಡು ಹೆಣ್ಣಿನ ಅಕ್ರಮ ಸಂಪರ್ಕ ತಾಗಿಸಿಯೇ ಬೆಂಕಿಯನ್ನು ಹಚ್ಚಿದ ಸಾದೃಷ್ಟಗಳು ಅನೇಕ ಇವೆ. 

ಸಮಾಜದಲ್ಲಿ ಜವಾಬ್ದಾರಿಯಿಲ್ಲದ ಜನರು, ವದಂತಿಕೋರಪ್ರವೃತ್ತಿಯನ್ನೇ ಚಟವನ್ನಾಗಿರಿಸಿಕೊಂಡವರು. ಉದ್ಯೋಗದಲ್ಲಿ ಸೋತು ಹತಾಶರಾದರೂ `ಅಹಂ` ನ್ನು ಬಿಡಲಾರದವರು ಹೀಗೆ.. ಹೀಗೆ.. ಮುಂತಾದವರು ಬಹಳ  ಮಂದಿ ಇದ್ದಾರೆ. ಅವರಿಗೆ ಇದೇ ಕೆಲಸ. ಅವರು ನಿದ್ರೆ ಬರಲಿಕ್ಕೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದಿಲ್ಲ. ತಾವು ಸುಖ ನಿದ್ರೆ ಮಾಡಲಿಕ್ಕೆ ಕಂಡು ಕೊಂಡ ಅತ್ಯಂತ ಸುಲಭದ ದಾರಿ ಇದು. ಯಾರ ನಿದ್ರೆ ಹಾಳಾದರೇನಂತೆ ? 

ಎಂ. ಗಣಪತಿ, ಕಾನುಗೋಡು
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kanagod@gmail.com
Mob : 9481968771                 
                                                                                                                       Date : 08.11.2013

Wednesday, 20 November 2013

ಸುದ್ದಿ ಪತ್ರಿಕೆಯ ಸ್ಥಳದಲ್ಲಿ ಸರ್ಪ !



                                                                                              --ಎಂ. ಗಣಪತಿ ಕಾನುಗೋಡು
   ಹೆಚ್ಚಾಗಿ ಮಲೆನಾಡಿನಲ್ಲಿ ಮನೆ ಮುಂದಿನ ಗೇಟಿಗೆ ಒಂದು ಕಡೆ ಮುಚ್ಚಳ ಹಾಕಿದ 2 ಅಡಿ ಉದ್ದದ ಪಿ.ವಿ.ಸಿ ಪೈಪ್‍ನ್ನು ಕಟ್ಟಿರುತ್ತಾರೆ. ನೆನೆಯದಿರಲೆಂದು ಮಳೆಗಾಲದಲ್ಲಿ ಸುದ್ಧಿ ಪತ್ರಿಕೆಯ ರಕ್ಷಣೆಗಾಗಿ ಪ್ರತಿ ಮನೆಯಲ್ಲಿ ಮಾಡಿರುವ ವ್ಯವಸ್ಥೆ ಇದು. ಪತ್ರಿಕೆಯನ್ನು ತಂದ ಹುಡುಗ ಅದರೊಳಗೆ ಅದನ್ನು ಪ್ರತಿದಿನ ತುರುಕಿ ಹೋಗುತ್ತಾನೆ. 
    ಒಂದು ದಿನ ಬೆಳಿಗ್ಗೆ ಮನೆಯ ಯಜಮಾನರೊಬ್ಬರು ಪ್ರತಿಕೆನ್ನು ತೆಗೆಯಲಿಕ್ಕಾಗಿ ಆ ಪೈಪ್‍ನೊಳಗೆ ಬೆರಳನ್ನು ಓಡಿಸಿದ್ದಾರೆ. ಪ್ರತಿಕೆ ಅದರಲ್ಲಿ ಇರಲಿಲ್ಲ. ಹುಡುಗ ಬರುವುದು ತಡವಾಗಿತ್ತು. ಯಜಮಾನರ ಕೈಗೆ ಸ್ಪರ್ಶವಾಗಿದ್ದೇ ಬೇರೆ. ಪುನಃ ಕೈಯಾಡಿಸಿ ನೋಡ ಲಾರದ ಮಟ್ಟಕ್ಕೆ ಅವರ ಎದೆ ಝಲ್ ಎಂದಿತ್ತು. ತಕ್ಷಣ ಟಾರ್ಚ್‍ನ್ನು ಬಳಸಿ ಒಳಗೆ ನೋಡಿದ್ದಾರೆ. ಒಂದು ಸಣ್ಣ ಸರ್ಪ ಅದರೊಳಗೆ ಮಳೆಯಿಂದ ರಕ್ಷಣೆಯನ್ನು ಪಡೆದಿದೆ. ಯಜಮಾನರ ಅದೃಷ್ಟಕ್ಕೆ ಅವರ ಕೈಗೆ ತಾಗಿದ್ದು ಸರ್ಪದ ಬಾಲ ಅಷ್ಟೇ. 
    ಹುಡುಗಾಟಿಕೆಯ ಹುಡುಗ ಬಂದು ಇಂದು ಏಕೋ ಪೇಪರ್ ಸರಿಯಾಗಿ ಒಳಗೆ ಹೋಗುತ್ತಿಲ್ಲಾ ಎಂದುಕೊಳ್ಳುತ್ತಿದ್ದ  ಅದನ್ನು ಹಿಂದೆ-ಮುಂದೆ ಸರಿಸಾಡಿ ತನ್ನ ಬೆರಳು ಸಹಿತ ಮುಂದೂಡುವ ಪ್ರಯತ್ನ ಮಾಡುತ್ತಿದ್ದ. ಸರ್ಪ ಹೊರಗೆ ಹೊರಡುವ ಭರದಲ್ಲಿ ಅವನ ಹಸ್ತವನ್ನು ಕುಟುಕಿದರೂ ಆಶ್ಚರ್ಯವಿರಲಿಲ್ಲ. 
    ಅಂದು ಹುಡುಗ ತಡವಾಗಿ ಬಂದದ್ದು, ಯಜಮಾನರು ಮುಂಚೆಯೇ ಕೈ ಹಾಕಿ ಜಾಗ್ರತೆ ವಹಿಸಿದ್ದು ಇವೆರಡೂ ಸರ್ಪ ಕಡಿತದಿಂದ ಜೀವವೊಂದು ಪಾರಾಗಲು ಸಹಾಯವಾಯಿತು.
     ಅಲ್ಲ. ಒಂದು ಪ್ರಶ್ನೆ. ನಾವು ಕೈಗೊಳ್ಳುವ ರಕ್ಷಣಾ ಕಾರ್ಯವು ಕೂಡಾ ಒಮ್ಮೆಮ್ಮೆ ನಮಗೆ ವಿಷವಾಗಿ ತಿರುಗಬಹುದಲ್ಲವೇ? ಜೋಕೆ...... ಜೋಕೆ.....!

ದಿನಾಂಕ: 18-11-2013        ಎಂ. ಗಣಪತಿ M.A.
ಕಾನುಗೋಡು
ಅಂಚೆ : ಬಿ.ಮಂಚಾಲೆ-577431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ ಮೊ.: 9481968771
Blog : mgkangod.blogspot.com

Tuesday, 3 September 2013

ಮಡಿವಂತಿಕೆ ಇಲ್ಲದ ಶ್ರೀ ಗಣೇಶ



                                                                                                 ಎಂ. ಗಣಪತಿ. ಕಾನುಗೋಡು

ಕಿ.ಶ. 2ನೇ ಶತಮಾನದಿಂದ  ಗಣೇಶನ ಪೂಜೆಯು ರೂಡಿಗೆ ಬಂದಿತೆಂದು ಹೇಳಲಾಗುತ್ತಿದೆ. ಕಿ.ಶ. 8ನೇ ಶತಮಾನದಿಂದ ಈಚೆಗೆ   ಈಗಿನಂತೆ  ಎಲ್ಲಾ ಕಾರ್ಯಗಳ ಪ್ರಾರಂಭದಲ್ಲಿ ಗಣಪತಿಯನ್ನು  ಪೂಜಿಸುವ ಸಂಪ್ರದಾಯ ಬಂದಿತೆಂದು ಹೇಳುತ್ತಾರೆ. 
ಗಣೇಶನ ಹಬ್ಬದ ಕ್ರಮದಲ್ಲಿ  ಎರಡು ನೆಲೆಗಳಿವೆ,   ಒಂದು,  ಕುಟುಂಬದ ವ್ರತವಾಗಿ ಜನರು ಅವರವರ ಮನೆಯಲ್ಲಿ ಅಚರಿಸುವುದು.  ಇನ್ನೊಂದು  ಸಂಘಸಂಸ್ಥೆಗಳು, ಶಾಲೆಗಳು, ಸರ್ಕಾರಿ ಕಛೇರಿಗಳು ಅದಕ್ಕಾಗಿ ಹುಟ್ಟಿಕೊಂಡ ಸಮಿತಿಗಳಿಂದ ಸಾರ್ವಜನಿಕವಾಗಿ  ಉತ್ಸವವಾಗಿ ಆಚರಿಸುವುದು.  
ಗಣಪತಿಯ ಹುಟ್ಟಿನ  ಬಗ್ಗೆ  ಎರಡು ಅಬಿsಪ್ರಾಯಗಳಿವೆ. ದೇವತೆಗಳೆಲ್ಲಾ  ಸೇರಿ ತಮ್ಮ ಕಾರ್ಯ ನಿರ್ವಿಘ್ನವಾಗಿ ನೆರವೇರುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು   ಶಿವನನ್ನು ಪ್ರಾರ್ಥಿಸಿದರು. ಆಗ ಅವರ ಇಷ್ಟದಂತೆ  ಪಾರ್ವತಿಯಲ್ಲಿ ಗಣೇಶನು ಹುಟ್ಟುವಂತೆ  ಶಿವ ಅನುಗ್ರಹಿಸಿದ. ಹೀಗೆ ಹುಟ್ಟಿದ ಗಣೇಶನಿಗೆ ಗಣಾದಿಪಥ್ಯವನ್ನು  ಕೊಟ್ಟು ಕಾರ್ಯವನ್ನು ನಿರ್ವಿಘ್ನವಾಗಿ  ನೆರವೇರಿಸಿಕೊಡುವ  ಶಕ್ತಿಯನ್ನು  ಕೊಟ್ಟ. ಅವನು  ಹೀಗೆ ಹುಟ್ಟಿದ್ದು ಭಾದ್ರಪದ ಶುಕ್ಲ ಚತುರ್ಥಿಯ ದಿನ ಚಂದ್ರೋದಯಕಾಲ. ಈ ಕಾರಣಕ್ಕಾಗಿ  ಆಂದಿನ  ದಿನ  ಗಣಪತಿಯ  ವ್ರತವನ್ನು  ನಡೆಸುವಂತೆ  ಶಿವ  ಅನುಗ್ರಹಿಸಿದ ಎನ್ನುವುದು ಒಂದು ಅಬಿsಪ್ರಾಯ. 
ಪಾರ್ವತಿಯು ತನಗಾಗಿ  ತನ್ನ ಅಂಗರಾಗದಿಂದ  ಗಣೇಶನನ್ನು ಸೃಷ್ಠಿಸಿ  ಅವನಿಗೆ ಜೀವಕಳೆಯನ್ನು ಕೊಟ್ಟಳು.  ಅವನು ಜೀವಪಡೆದ ಕೆಲವೇ ಸಮಯದಲ್ಲಿ  ಶಿವನಿಂದ ಶಿರಚ್ಛೇದನಕ್ಕೆ ಗುರಿಯಾದ. ಪುನಃ ಪಾರ್ವತಿಯ ಪ್ರಾರ್ಥನೆಯಂತೆ  ಆನೆಯ ತಲೆಯನ್ನು ಹೊಂದಿದವನಾಗಿ  ತಂದೆಯಿಂದ  ಜೀವಪಡೆದ. ಪಾರ್ವತಿಗೆ ತಾನು ಸೃಷ್ಠಿಸಿದ ಮಗನಮೇಲೆ ಬಹಳ  ಪ್ರೇಮ. ಹುಟ್ಟಿದ ಕೂಡಲೇ ಕಷ್ಟವನ್ನು ಅನುಭವಿಸಿದಕ್ಕಾಗಿ ಎಲ್ಲರೂ ನಿನ್ನನೇ ಮೊದಲು ಪೂಜಿಸಬೇಕು  ಎಂದು    ಆಶೀರ್ವದಿಸಿದಳು. ಅದಕ್ಕೆ ಶಿವನೂ  ಅನುಗ್ರಹಿಸಿದ ಎನ್ನುವುದು ಇನ್ನೊಂದು   ಅಬಿಪ್ರಾಯ.  
ಗಣೇಶನ ಶಾಪಕ್ಕೆ  ಗುರಿಯಾದ  ಚಂದ್ರ ತನ್ನ ಶಾಪ ವಿಮೋಚನೆಗಾಗಿ ಅವನನ್ನೇ ಮೊರೆಹೊಕ್ಕ. ಭಾದ್ರಪ್ರದ ಶುದ್ಧ ಚತುರ್ಥಿಯ ದಿನ ತನ್ನ ವ್ರತವನ್ನು ಕೈ ಗೊಂಡವರಿಗೆ   `ಅಪವಾದ` ಶಾಂತಿಯಾಗಲೆಂದು ಗಣಪತಿಯು ಚಂದ್ರನಿಗೆ ಅನುಗ್ರಹಿಸಿದ. ಒಮ್ಮೆ  ಶ್ರೀ ಕೃಷ್ಣ  ಶಮಂತಕ  ಮಣಿಯನ್ನು ಕದ್ದನೆಂಬ ಅಪವಾದಕ್ಕೆ ಸಿಲುಕಿದ.  ಆಗ ಇದರಂತೆ ಗಣಪತಿಯ ವ್ರತವನ್ನು ಕೈಗೊಂಡು ಆ ಶಾಪವನ್ನು ಪರಿಹರಿಸಿಕಕೊoಡ ಎಂದು ಹೇಳಲಾಗಿದೆ. 
ಮೇಲಿನ ಎಲ್ಲಾ ವಿಚಾರಗಳು ಜನರು ವೈಯಕ್ತಿಕವಾಗಿ ಗಣೇಶನ ಪೂಜೆ ಅಥವಾ ವ್ರತವನ್ನು ನಡೆಸುವುದಕ್ಕೆ ಪೂರಕವಾದ ಅಂಶಗಳು .
ಇನ್ನು,   ಸಾರ್ವತ್ರಿಕವಾಗಿ ಗಣೇಶನ  ಉತ್ಸವವನ್ನು ನಡೆಸುವ ವಿಚಾರ.  ಹಲವು ಜಾತಿಗಳು, ಸಂಪ್ರದಾಯಗಳು, ಸುಮಾರು  ಆರು ನೂರು ರಾಜ ಸಂಸ್ಥಾನಗಳ ಶಿಷ್ಟತೆಯಿಂದ ಕೂಡಿದ ಭಾರತ ರಾಷ್ಟ್ರದಲ್ಲಿ ಭಾವೈಕ್ಯತೆಯನ್ನು ತರುವುದು ಹಿಂದೆ ಒಂದು ಕಾಲದ ರಾಷ್ಟ್ರ ನೇತಾರರ ಉದ್ದೇಶವಾಗಿತ್ತು.  ಈ  ಉದ್ದೇಶ ಸಾಧನೆಗಾಗಿ ಸನ್ಮಾನ್ಯ ಬಾಲಗಂಗಾಧರ ತಿಲಕರು ಪ್ರಥಮವಾಗಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಣೆಗೆ  ತಂದರು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹವನ್ನು ಇಟ್ಟು ವಾರಗಟ್ಟಲೆ   ಉತ್ಸವವನ್ನು ನಡೆಸುವ  ಪದ್ಧತಿ ಅಂದಿನಿಂದ ರೂಡಿsಗೆ ಬಂದಿತು. ಎಲ್ಲಾ ಜಾತಿಗಳ, ವರ್ಗಗಳ, ಸಂಪ್ರದಾಯಗಳ ಜನರು ಗಣೇಶÉೂೀತ್ಸವದ ಸಂಭ್ರಮದಲ್ಲಿ  ಮಿಲನಗೊಳ್ಳುವಂತಾಯಿತು. ಇಲ್ಲಿ ಶ್ರೀ ಗಣೇಶ  ಜಾತ್ಯತೀತ , ಮಡಿವಂತಿಕೆ ಇಲ್ಲದ ದೇವರು. 
ಆದರೆ  ದುರಂತದ ಸಂಗತಿಯೆಂದರೆ ಇತ್ತೀಚೆಗೆ ಸಾರ್ವಜನಿಕ ಗಣೇಶೋತ್ಸವ  ತನ್ನ ಮೂಲ ಉದ್ದೇಶದ ಪಾವಿತ್ರತೆಯನ್ನು  ಕಳೆದುಕೊಳ್ಳುತ್ತಿದೆ. ಕ್ರಿಕೆಟ್ ಟೂರ್ನ್‍ಮೆಂಟ್ ಮಟ್ಟಕ್ಕೆ  ಅದು ಕುಸಿದಿದೆ. ಒಂದೊಂದು  ಜಾತಿಯವರದ್ದೇ ಒಂದೊಂದು  ಸಾರ್ವಜನಿಕ ಗಣೇಶ, ಒಂದು ಗುಂಪಿನವರದ್ದರ  ವಿರುದ್ಧ ದುರುದ್ದೇಶವಾಗಿ ಇನ್ನೊಂದು  ಸಾರ್ವಜನಿಕ ಗಣೇಶ.  ಈ  ತೆರೆನ ಬೆಳವಣಿಗೆ  ಸಮಾಜದ  ಸಂಘಟನೆಗೆ , ರಾಷ್ಟ್ರೀಯ ಭಾವೈಕ್ಯತೆಗೆ  ಮಾರಕವಾಗುತ್ತಿದೆ. ಕೆಲವರು ಹಣಮಾಡುವುದು, ಕೇವಲ ಅಮಲಿನ ರಂಜನೆಯ ಉದ್ದೇಶಕ್ಕಾಗಿಯೇ  ಗಣೇಶೋತ್ಸವವನ್ನು  ನಡೆಸುತ್ತಿರುವುದು  ಅಲ್ಲಲ್ಲಿ ಕಂಡುಬರುತ್ತಿದೆ. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊಬ :9481968771
BLOG: mgkangod.blogspot.com

Monday, 2 September 2013

ಪುರುಸೊತ್ತಿಲ್ಲ . ಆಧುನಿಕ ಜಗತ್ತಿನಲ್ಲಿ ಒಂದು ಆತಂಕ


                                                                                                    ಎಂ.ಗಣಪತಿ. ಕಾನುಗೋಡು

ಪುರುಸಸೊತ್ತಿಲ್ಲ _ ಎನ್ನುವ ಪರಿಕಲ್ಪನೆ ಒಬ್ಬ ದೊಡ್ಡ ಉದ್ಯಮಿಯಿಂದ ಹಿಡಿದು ಬಿಕ್ಷುಕನವರೆಗು ತನ್ನ ಹರವಾನ್ನು  ಕಂಡುಕಕೊಂಡಿದೆ . ಇಂದು ಯಾರನ್ನು ಕೇಳಿದರೂ ಪುರುಸೊತ್ತಿಲ್ಲ ಎನ್ನುವ ಸೊಲ್ಲು ಸಾಮಾನ್ಯ. 
ಆಧುನಿಕ ಯಾಂತ್ರಿಕ  ಬದುಕಿನಲ್ಲಿ ಇದು ಅನಿರೀಕ್ಷಿ  ತವೇನಲ್ಲ. ಆದರೆ  ಪುರುಸೊತ್ತು ಎನ್ನುವುದು  ತಾನಾಗಿಯೇ  ಸಿಗುವಂತವುದೇ ಅಥವಾ ನಾವು ಕಂಡುಕೊಳ್ಳಬೇಕಾದುದ್ದೇ ಎಂಬುದನ್ನು ನಾವೇ ಆಲೋಚಿಸಬೇಕು. 
 ಒಂದು ನಿರ್ದಿಷ್ಟ ಉದ್ಯೋಗದ ಜನರಿಗೆ _ ಕೃಷಿಕ, ನೌಕರ, ವ್ಯಾಪಾರಿ ಹೀಗೆ  ಯಾವುದೇ ಒಂದು ಕಸುಬಿನಲ್ಲಿ  ನಿರಂತರ ನಿರತರಾಗಿರುವವರಿಗೆ   ಬಿಡುವು ಇರುವುದಿಲ್ಲ.  ಹಾಗೆಂದು  ಅವರು ತಮ್ಮ ದೈನಂದಿನ  ಮೂಲಭೂತ ಅಗತ್ಯಗಳು  _ ಊಟ, ಸ್ನಾನ, ನಿದ್ರೆ ಹೀಗೆ ಮುಂತಾದವುಗಳನ್ನು ಬಿಡಲು ಸಾಧ್ಯವಿಲ್ಲ. ಅದಕ್ಕೆಲ್ಲ ದಿನನಿತ್ಯದ ಕಸುಬಿನಲ್ಲಿ ಎಷ್ಟೇ ಒತ್ತಡವಿದ್ದರೂ ಪುರುಸೊತ್ತನ್ನು ಕಂಡುಕೊಳ್ಳೂತ್ತಾರೆ . ಅದು ಸಹಜ  ಕೂಡ. ಇವರಿಗೆ ತಾವಾಯ್ತು , ತಮ್ಮ ಕೆಲಸವಾಯ್ತು ಅಷ್ಟೇ . ಇದು ಒಂದು ವರ್ಗ. 
ಇನ್ನೊಂದು ವರ್ಗದ ಜನರಿದ್ದಾರೆ.  ಇವರಿಗೆ ಯಾವುದೇ ನಿರ್ದಿಷ್ಟ ಉದ್ಯೋಗ ಇರುವುದಿಲ್ಲವೆಂದಲ್ಲ.  ಅದನ್ನೇ ಹಿಡಿದು  ಮುನ್ನೆಡೆಸುವ ಪದ್ದತಿ ಇರುವುದಿಲ್ಲ. ಹಾಗೂ ಹೀಗೂ  ಮೂರುಹೊತ್ತಿನ ಅನ್ನಕ್ಕೆ ಬೇಕಾಗುವಷ್ಟು ದುಡಿಮೆ ಅವರದ್ದು. ಹಾಗೆಂದು ಅವರಿಗೂ ಪುರುಸೋತ್ತಿಲ್ಲ .  ತಮ್ಮ ಮಿತ ದುಡಿಮೆಯ ಶೂನ್ಯವೇಳೆಯಲ್ಲಿ ಅವರು ತಮ್ಮದರಕ್ಕಿಂತ   ಬೇರೆಯವರ ಬಗ್ಗೆ  ಕಾಳಜಿ ವಹಿಸುವುದು ಹೆಚ್ಚು. ತಮ್ಮ ಸುತ್ತಮುತ್ತಲಿನವರ  ಉಸಾಬರಿಗೆ ಅನಾವಶ್ಯಕ  ಮೂಗು ತೂರಿಸುತ್ತಾರೆ. ಪರಪೀಡನೆಯಿದ ಮನೋರಂಜನೆಯನ್ನು ಪಡೆಯುತ್ತಾರೆ. ಇವರು ಒಬ್ಬರಿಗೊಬ್ಬರಿಗೆ ಬೆಂಕಿಹಚ್ಚಿ ಕೊನೆಗೆ ತಾವೇ ಪಂಚಾಯಿತಿ ಮಾಡಿ  ಬಾಸ್ ಆಗುವ  ಚಟದ ಜನ.  ತನ್ನದು ಸಾವಿರ ಹೋದರೂ ಮತ್ತೊಬ್ಬನ ನೂರನ್ನು ವೆಚ್ಚಮಾಡಿಸುತ್ತೇನೆ ಎನ್ನುವ ಜನ. ಆಯುಷ್ಯವಿಡೀ  ಕೋರ್ಟು _ಕಟ್ಲೆ ನಡೆಸುವ ಜನ  ಹೀಗೆ  ಇನ್ನು ಅನೇಕ  ಸಲ್ಲದ ಕೆಲಸಗಳಲ್ಲಿಯೇ   ದಿನದ ತಮ್ಮ ವೇಳೆಯನ್ನು ವ್ಯಯಮಾಡುವ ಜನರಿದ್ದಾರೆ. ಇವರು ತಮ್ಮ ಸೀಮಿತ ಉದ್ಯೋಗಕ್ಕೆ ಧಕ್ಕೆ ತಂದುಕೊಳ್ಳದೆ ಸ್ವಂತ ರಂಜನೆಗಾಗಿ ಇನ್ನೊಬ್ಬರಿಗೆ ತೊಂದರೆಯನ್ನು ಕೊಡುವುದರಲ್ಲಿ ತಮ್ಮ ಜೀವಿತಾವದಿsಯನ್ನು  ತೊಡಗಿಸಿಕೊ0ಡಿರುತ್ತಾರೆ,  ಇವರಿಗೂ ಪುರುಸೊತ್ತೇ  ಇಲ್ಲ. 
ಹಲವು ಜನರಿಗೆ  ತಮ್ಮ ಜೀವನೋಪಾಯಕ್ಕಾಗಿ ಯಾವ ಉದ್ಯೋಗವೂ ಇರುವುದಿಲ್ಲ. ಸ್ವಂತ ದುಡಿಯುವುದಕ್ಕಷ್ಟೇ ಸೋಮಾರಿಗಳು. ಸ್ವಾಬಿಮಾನ ವಿಲ್ಲದವರು.  ಕುಟುಂಬದಲ್ಲಿ ಯಾರಾದರೂ ದುಡಿಯುವರಿದ್ದರೆ ತಿಂದುಕೊಂಡು ಅಡ್ಡನಾಡಿಯಾದವರು. ಹಾಗಂತ ಇವರಿಗೂ ಪುರುಸೊತ್ತಿಲ್ಲ.  ಇವರು ದಿನದ ಹೆಚ್ಚಿನ ಸಮಯ ಮಲಗಿರುತ್ತಾರೆ. ನಿದ್ದೆ ಬಂದಿಲ್ಲವೇ, ಹಾಯಾಗಿ ಕುಳಿತಿರುತ್ತಾರೆ.  ಎದ್ದುಹೊರಟರೋ, ಯಾರಿಗಾದರೂ   ಟೋಪಿಹಾಕಿ ಹಣ ಲಪಟಾಯಿಸುತ್ತಾರೆ.  ಇವರು ಸೋಮಾರಿಗಳೇ ವಿನಃ ದಡ್ಡರಲ್ಲ. ವಿಕೃತ ಮತ್ತು ಕ್ರಿಮಿನಲ್ ಮನೋಭಾವದವರು. ವಾಸ್ತವಿಕ ದುಡಿಮೆಗಾರರ ಮನಸ್ಸು  ಒಂದೇ ದಿಕ್ಕಿನಲ್ಲಿ , ಒಂದೇ ರೀತಿಯಲ್ಲಿ   ಓಡುತ್ತದೆ  ಇವರದ್ದು ಹಾಗಲ್ಲ. ಯಾರನ್ನಾದರೂ ವಂಚಿಸಿ ಹೊಟ್ಟೆ ತುಂಬಿಸಿಕೊಂಡು  ಮೋಜುಮಾಡಲು ಹಲವು ಕಡೆ, ಹಲವು ರೀತಿಯಲ್ಲಿ ಬುದ್ಧಿಯನ್ನು ವ್ಯಯಿಸುತ್ತಾರೆ. ಉಂಡಾಡಿಗಳಾಗಿ ತಿರುಗುತ್ತಾರೆ.ಕೆಲವೋಮ್ಮೆ ರೌಡಿಸಂನ್ನು ನಡೆಸುತ್ತಾರೆ.  ಸಮಾಜ ಕಂಟಕರಾಗಿ  ಬದುಕು ನಡೆಸುತ್ತಾರೆ. 
ಒಟ್ಟಾರೆ  ಎಲ್ಲರ ಬದುಕು ಪುರಸೊತ್ತು ರಹಿತವಾದದ್ದು.  ಸಮಯವನ್ನು ವಿನಿಯೋಗಿಸಿಕೊಳ್ಳುವ ಕ್ರಮಗಳು ಬೇರೆ ಬೇರೆ ಅಷ್ಟೆ. ನಾವು ಜೀವನದ ಸೀಮಿತ  ಕಾಲಾವದಿಯನ್ನು   ಸರಿಯಾಗಿ ವಿನಿಯೋಗಿಸಿಕೊಳ್ಳುವುದು ಮುಖ್ಯ. ಜೀವನವನ್ನು  ಶಿಸ್ತುಬದ್ದವಾಗಿ  ಹೊಂದಿಸಿಕೊಳ್ಳುವವರು ಪುರುಸೊತ್ತಿಗೂ ವೇಳೆಯನ್ನು ಹೊನ್ದಿಸಿಕೊಂಡಿರುತ್ತಾರೆ.  ಎಲ್ಲದಕ್ಕೂ ಘನ ಷರತ್ತು ಬೇಕು ಅಷ್ಟೆ. 

Wednesday, 28 August 2013

ನವ ದಂಪತಿಗಳ ವಿವಾಹ ವಿಚ್ಛೇದನ



                                                                          -ಎಂ. ಗಣಪತಿ ಕಾನುಗೋಡು
ವಿವಾಹ ವಿಚ್ಛೇದನ ಹೊಸತಲ್ಲ. ಹಿಂದಿನ ಕಾಲದಲ್ಲಿ ವಿಚ್ಛೇದನ ಹೆಚ್ಚಾಗಿ ಪುರುಷ ಮೂಲವಾಗಿತ್ತು. ಪ್ರಸ್ತುತ ಮುಂದುವರೆದ ಸನ್ನಿವೇಶದಲ್ಲಿ ಪತಿಯರಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಪತ್ನಿಯರೇ ವಿಚ್ಛೇದನ ಬಯಸುವುದು ಕಂಡುಬರುತ್ತಿದೆ. ನವವಿವಾಹಿತರಲ್ಲಿ ವಿವಾಹವಾದ ಒಂದು ತಿಂಗಳು, ವರ್ಷದೊಳಗೆ  ಭಿನ್ನಾಭಿಪ್ರಾಯ ಹುಟ್ಟಿಕÉೂಂಡಿರುತ್ತದೆ. ಇದಕ್ಕೆ ಕಾರಣಗಳು ಹಲವಾರು. 
ಯುವಕ ಯುವತಿಯರಿಬ್ಬರು ಪರಸ್ಪರ ನಿರೀಕ್ಷೆಗಳ ಭ್ರಮೆಯಲ್ಲಿ ವಿವಾಹವಾಗಿರುತ್ತಾರೆ. ಅವುಗಳ ತುಲನೆ ವಿವಾಹದ ಮೊದಲನೆ ದಿನದಿಂದಲೇ ಇಬ್ಬರಿಂದಲೂ ಪರಸ್ಪರ ನಡೆಯುವುದಕ್ಕೆ ಪ್ರಾರಂಭವಾಗುತ್ತದೆ. ಯಾರ ನಿರೀಕ್ಷೆಗೆ ಯಾರೂ ನಿಲುಕುವುದಿಲ್ಲ. ಪರಸ್ಪರ ಭಿನ್ನಾಭಿಪ್ರಾಯಕ್ಕೆ  ಇದೇ ಮೊದಲ ಮೆಟ್ಟಿಲು.     
ಹೆಣ್ಣುಮಕ್ಕಳಿಗೆ ಈ ವಿಷಯದಲ್ಲಿ ಕಾನೂನಿನ ಸವಲತ್ತು ಹಿಂದಿನಿಗಿಂತ ಈಗ ಹೆಚ್ಚಾಗಿದೆ. ವಿರಸಕ್ಕೆ ಕಾರಣವೇನಿದ್ದರೂ ವರದಕ್ಷಿಣೆಯ ಕಾನೂನು ವರದಕ್ಷಿಣೆಯ ವಿಚಾರವನ್ನೇ ಹುಟ್ಟುಹಾಕಿ ಪತಿಯ ಮತ್ತು ಅವರ ಪೋಷಕರ ಮಗ್ಗಲು ಮುರಿಯುವಲ್ಲಿ ಬಳಕೆಯಾಗುತ್ತಿದೆ. ದುರುಪಯೋಗವಾಗುತ್ತಿದೆ ಕೂಡಾ. ತಂದೆಯ ಮನೆಯ ಆಸ್ತಿಯಲ್ಲಿ ಸಮಹಕ್ಕನ್ನು ಪಡೆದ ನಂತರವೂ ಗಂಡ ಬೇಡವೆಂದೆನಿಸಿದರೂ ಅವನ ಆಸ್ತಿ ಮತ್ತು ಸಂಪತ್ತು ಬೇಡವೆನಿಸುವುದಿಲ್ಲ. ಅದರಲ್ಲಿ ಪಾಲು ಕೇಳುವಷ್ಟು ಕಾನೂನಿನ ಬೆಂಬಲ ಅವಳಿಗಿದೆ. ಮಕ್ಕಳಿದ್ದರೆ ಮಕ್ಕಳ ಪೋಷಣೆ ತನ್ನ ಬದುಕಿನ ರಕ್ಷಣೆಗೆಂದು ಗಂಡನಿಂದ ಹಲವು ಲಕ್ಷ ರೂಪಾಯಿಗಳನ್ನು ದೋಚುವ ಸ್ಥಿತಿಯಲ್ಲಿ ಅವಳಿದ್ದಾಳೆ. ಇದು ವಿಚ್ಛೇದನದತ್ತ ಮುನ್ನುಗ್ಗುವಲ್ಲಿ ಮಹಿಳೆಗೆ ಇರುವ ಕಾನೂನಿನ ಬೆಂಬಲ. 
ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸರಿಸಮಾನಾಗಿ ಶಿಕ್ಷಣವನ್ನು ಹೊಂದಿ ಹೆಚ್ಚು ಸಂಪಾದಿಸುತ್ತಿದ್ದಾರೆ. ಕೂಡಿ ನಡೆಯುವಲ್ಲಿ ಅಗತ್ಯವಾದ ಶ್ರೇಷ್ಠತೆ ಮತ್ತು ಅಧೀನತೆಯ ನಡವಳಿಕೆ ಇಲ್ಲಿ ಶೂನ್ಯ. ಯಾರಿಗೆ ಯಾರೂ ಸೋತು ಸರಿಯುವುದಿಲ್ಲ. ಅಂತಿಮ ಪರಿಣಾಮ ವಿಚ್ಛೇದನ.
ವಿವಾಹದ ಹೊಸತರಲ್ಲಿ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ವಾಸ್ತವಿಕ ಆತ್ಮೀಯತೆ ಬೆಳೆದಿರುವುದಿಲ್ಲ. ದುಡಿಮೆಗಾಗಿ ದಿನದ ಬಹಳ ಕಾಲ ಗಂಡ ಮತ್ತು ಹೆಂಡತಿ ದೂರವಿರುವುದರಿಂದ ಪರಸ್ಪರ ಚಾರಿತ್ರಿಕವಾಗಿ ಒಮ್ಮೊಮ್ಮೆ ಸಂಶಯ ಪಡುವ ಸಂದರ್ಭವೂ ಇದೆ. ಈ ಬಿರುಕಿನ ಅಂತಿಮ ಘಟನೆ ವಿಚ್ಛೇದನ.
ಸಂಪಾದನೆಯ ಅಮಲಿನಲ್ಲಿ ಕೆಲವು ಯುವಕರು ನಗರದಲ್ಲಿ ಡ್ರಗ್ ಅಡಿಕ್ಷನ್, ಕುಡಿತ ಮುಂತಾದ ದುಶ್ಚಟಗಳಿಗೆ ದಾಸರಾಗಿದ್ದಾರೆ. ಇವರನ್ನು ತಿದ್ದಲಾಗದೆ, ಕೊನೆಗೆ ಸಹಿಸಲಾಗದೆ ಅವರ ಪತ್ನಿಯರು ಹತಾಶರಾಗುತ್ತಾರೆ. ಈ ಬೇಗುದಿಯ ಅಂತ್ಯವೇ ವಿಚ್ಛೇದನ. 
ಇಂದಿನ ಕುಟುಂಬಗಳಲ್ಲಿ ಮಕ್ಕಳಿಗೆ ಸಹಬಾಳ್ವೆಯ ಮನೋಭಾವವನ್ನು ಕಲಿಸುವ ಅವಕಾಶ ಕಡಿಮೆ. ಶಿಕ್ಷಣದ ಕಾರಣದಿಂದ ಅವರ ಬುದ್ಧಿ ಬೆಳವಣಿಗೆಯ ಪ್ರಾರಂಭದಿಂದ ಕುಟುಂಬದ ಹೊರಗೆ ಬೆಳೆದು ವಿವಾಹದ ಹಂತಕ್ಕೆ ಬಂದಿರುತ್ತಾರೆ. ಕುಟುಂಬದ ಹಿರಿಯರು-ಕಿರಿಯರು, ಹುಟ್ಟಿನ ನೆರೆಹೊರೆಯವರು, ಸಂಬಂಧಿಕರು ಎನ್ನುವ ಸಾಮಾಜಿಕ ಜೀವನದ ಪ್ರಾಥಮಿಕ ಸಂಘಗಳ ಒಡನಾಟವೇ ಇಂದಿನ ಯುವಜನತೆಗೆ ದೊರಕುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಅವರಿಗೆ ದೊರಕುವುದು ವಿಷಯಗಳ ಜ್ಞಾನವಷ್ಟೇ. ಬದುಕಿನ ಅರಿವಲ್ಲ. ಕೂಡಿ ಬದುಕುವ ಬುದ್ಧಿ ಬರುವಷ್ಟರ ಹೊತ್ತಿಗೆ ವಿವಾಹ ವಿಚ್ಛೇದನದಂತಹ ಆಗಬಾರದ ಪ್ರಮಾದವೆಲ್ಲ ಆಗಿ ಯುವಜನರು ಮುದುಕರಾಗಿರುತ್ತಾರೆ. 
ಈಗ ಕೇವಲ ಎರಡು ಅಥವಾ ಒಂದೇ ಮಗುವಾದ್ದರಿಂದ ತಾಯಿ ತಂದೆಯರು ಅವರನ್ನು ಅತೀ ಮುದ್ದಿನಿಂದ ಸಾಕಿರುತ್ತಾರೆ. ಮುದ್ದಿನ ಸಂವೇದನೆಯಲ್ಲಿ ಬದುಕಿನ ಕಲೆಯ ನೆಲೆ ಕಮರಿ ಹೋಗಿದೆ. ಗಂಡು-ಹೆಣ್ಣು ಮಕ್ಕಳು ದಾಂಪತ್ಯದಲ್ಲಿ ಹೊಂದಿಕೊಳ್ಳದೆ ಸಿಡಿದು ಹೋಗಲು ಇದು ಪ್ರಮುಖ ಕಾರಣ. 
ಇಂದಿನ ದಂಪತಿಗಳು ಯೋಚಿಸಬೇಕಾದದ್ದಿಷ್ಟೇ. ಇದ್ದಲ್ಲಿಯೇ ಕಾಡಿ ಕೂಡಿ ಬಾಳ್ವೆ ನಡೆಸಬೇಕು. ಹೊಂದಿಕೊಳ್ಳುವ ಮನೋಭಾವ ಇಲ್ಲದವರು ಯಾರನ್ನ ಬಿಟ್ಟು ಯಾರನ್ನ ಕೂಡಿಕೊಂಡರೂ ಇದೇ ಪಾಡು. ಹೊಂದಿಕೊಂಡು ಮುನ್ನಡೆಯಬೇಕೆಂದಿದ್ದರೆ ಒಬ್ಬರಿಗೆ ಒಬ್ಬರು ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಗ್ಗಿ ನಡೆಯಬೇಕಾದದ್ದು ಅಗತ್ಯ. ಪರಸ್ಪರ ವಿಶ್ವಾಸ ಮುಖ್ಯ. ಸುಖಕ್ಕಾಗಿ ಪರದಾಡಿ ಮುದುಕರಾಗುವ ಮುಂಚೆ ಇದ್ದಲ್ಲಿಯೇ ಸಾವರಿಸಿಕೊಂಡು ನೆಮ್ಮದಿಯಿಂದ ಇರುವುದು ಲೇಸು. ಸುಖ ಎನ್ನುವುದು ಅವರವರ ಮನೋಗತಿಗೆ ಬಿಟ್ಟ ವಿಚಾರ. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771

ಕೀರ್ತಿ ಕಾಮನೆ - ಮನುಷ್ಯನ ಒಂದು ಹಂಬಲ


                                                                         ಎಂ. ಗಣಪತಿ. ಕಾನುಗೋಡು
ಮನುಷ್ಯನ ಅನೇಕ ಬಯಕೆಗಳಲ್ಲಿ ಕೀರ್ತಿ ಕಾಮನೆಯೂ  ಒಂದು. ಜೀವನದ ಮೂಲಭೂತ ಬಯಕೆಗಳಾದ ಅನ್ನ, ವಸತಿ, ವಸ್ತ್ರ, ಇವು ಮೂರು ಇಂಗಿದ ಮೇಲೆ ಅವಕ್ಕೂ ಮೀರಿದ  ಅಸಂಖ್ಯಾತ ಪೂರಕ  ಬಯಕೆಗಳತ್ತ ಎಲ್ಲರೂ ಧಾವಿಸುತ್ತಾರೆ. ಅವುಗಳಲ್ಲಿ ಕೀರ್ತಿ ಸಾಧಿಸಬೇಕೆಂಬ ಹಂಬಲವೂ ಹೌದು. 
ಹುಟ್ಟು ಮತ್ತು ಸಾವು ಮನುಷ್ಯನನ್ನು ಒಳಗೊಂಡು ಎಲ್ಲಾ ಪ್ರಾಣಿಗಳಿಗೂ ಸಹಜ. ಆದರೆ ಎಷ್ಟೋ ಜನರು ಇದ್ದದ್ದು  ಹಾಗೂ  ಸತ್ತದ್ದು ಯಾರಿಗೂ  ತಿಳಿಯುವುದೇ ಇಲ್ಲ. ಕಾರಣ ಯಾವುದೇ  ವಿಚಾರದಲ್ಲೂ ಅವರು ಸಮಾಜದ  ಕಣ್ಣಿಗೆ ಕಾಣಿಸಿಕೊಂಡಿರುವುದಿಲ್ಲ. 
ಕೆಲವರು ಹಾಗಲ್ಲ. ತಾನು ಪ್ರಚಾರದಲ್ಲಿರಬೇಕು. ತನ್ನನ್ನು ಬಹಳ ಜನ ಗುರುತಿಸಬೇಕು ಎಲ್ಲರೂ ಶ್ಲಾಘಿಸುವಂತೆ  ಹೆಸರು ಗಳಿಸಬೇಕು   ಎನ್ನುವ ಹೆದ್ದಾಸೆ ಅವರಿಗೆ ಇರುತ್ತದೆ.   ಇದೇ ಕೀರ್ತಿ ಕಾಮನೆ.
ಈ ಉದ್ದೇಶಕ್ಕಾಗಿ ಜನರು ಗುರುತಿಸುವಂತಹ ಅನೇಕ ಕೆಲಸಗಳಲ್ಲಿ ತಮ್ಮನ್ನುತೊಡಗಿಸಿಕೊಂಡಿರುತ್ತಾರೆ. ಸಮಾಜ  ಸೇವೆ, ಹಳ್ಳಿಗಳಲ್ಲಿ ಗಿಡಮೂಲಕೆ ಜೌಷದಿsಗಳನ್ನು ಕೊಡುವುದು,  ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕ ಕೆಲಸಗಳಿಗೆ ಹಣ  ಕೊಡುವುದು, ಹಾವು ಹಿಡಿಯುವುದು. ಯಾರೇ  ಯಾವುದೇ ತೊಂದರೆಯಲ್ಲಿ ಸಿಕ್ಕಿ ಕೊಂಡಾಗ ತಕ್ಷಣ ಅಲ್ಲಿಗೆ ಧಾವಿಸಿ ಸಹಾಯಮಾಡುವುದು,  ಊರಿನಲ್ಲಿ  ಯಾರ ನಡುವೆಯಾದರೂ ವೈಮಸ್ಸು ಜಗಳ ಬಂದಾಗ  ಪಂಚಾಯಿತಿ ಮಾಡಿ ಅವರಲ್ಲಿ ರಾಜಿ ಮಾಡಿಸುವುದು, ಕಲಾಕ್ಷೇತ್ರಗಳಲ್ಲಿ ಭಾಗವಹಿಸುವುದು, ಹೀಗೆ ಇನ್ನೂ ಅನೇಕ ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವರು ಸ್ವಲ್ಪ ಸಂಭಾವನೆ ಪಡೆದರೂ ಕೂಡ ಅವರು ಮಾಡಿದ ಸೇವೆಗೆ ಅದು ಗೌಣ. 
ಇಂತಹ ಸ್ವಭಾವದರಲ್ಲಿಯೂ ಮೂರು ವಿಧಗಳಿವೆ. 1. ತಮ್ಮ  ವೈಯುಕ್ತಿಕ ಬದುಕನ್ನು ಬದಿಗಿಟ್ಟು ಅಗತ್ಯವಿದ್ದವರಿಗೆ ಆಯಾ ಸಂದರ್ಭಗಳಲ್ಲಿ ಧಾವಿಸಿ, ಸೇವೆ ಮಾಡಿ ಕೀರ್ತಿ ಸಂಪಾದಿಸುವವರು 2. ತಮ್ಮ ನಿತ್ಯ ಬದುಕನ್ನು ಪ್ರಧಾನವಾಗಿಟ್ಟುಕೊಂಡು ಬಿಡುವಿನ ವೇಳೆಯಲ್ಲಿ ಇಂತಹ ಸೇವೆಗಳನ್ನು ಮಾಡಿ ಕೀರ್ತಿ ಸಂಪಾದಿಸುವವರು. 3. ಕೆಲವರು ನೌಕರಿ ಅಥವಾ ಇನ್ಯಾವುದೋ ನಿರ್ದಿಷ್ಟ ಮತ್ತು ನಿಬಿಡವಾದ ಉದ್ಯೋಗದಲ್ಲಿ ನಿರತರಾಗಿರುತ್ತಾರೆ. ಇಂತಹವರು ತಾವು ಮಾಡುವ ಉದ್ಯೋಗವನ್ನೇ ಬಹಳ ಪ್ರ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡುವುದು. ಅದರ ಪ್ರಯೋಜನ ಸಂಬಂಧ ಪಟ್ಟ ಸಂಸ್ಥೆಗೆ ಮತ್ತು ಜನರಿಗೆ ಯಶಸ್ವಿಯಾಗಿ ದೊರಕುವಂತೆ ಶ್ರಮಿಸುವುದು. ಈ ಮಾರ್ಗದಲ್ಲಿ  ಉದ್ಯೋಗದಲ್ಲಿರುವ ವ್ಯಕ್ತಿಗಳು ಹೆಸರನ್ನು ಗಳಿಸುತ್ತಾರೆ.  ಇಂತಹವರು ತಾವು ನಿರತರಾದ ಕೆಲಸವನ್ನು ಬದಗಿಡುವುದಾಗಲೀ, ಅಥವಾ ಅದನ್ನು ಬಿಟ್ಟು ಸೇವೆ ಮಾಡಿ ಹೆಸರು ಗಳಿಸುವ ತುಡಿತಕ್ಕೆ  ಹೋಗುವುದಿಲ್ಲ. ಉಪಾಧ್ಯಾಯರು, ವೈದ್ಯರು, ಕಾರ್ಮಿಕರು, ಇನ್ಯಾವುದೇ, ಸರ್ಕಾರಿ ಅಥವಾ ಖಾಸಗಿ ನೌಕರರು ಈ ವರ್ಗಕ್ಕೆ ಸೇರುತ್ತಾರೆ. 
ಅವರ ಹಂಬಲ ಏನೇ ಇರಲಿ, ಹೀಗೆ ಪ್ರಾಮಾಣಿಕವಾಗಿ ತೊಂದರೆ, ನಷ್ಟಗಳನ್ನು  ಎಣಿಸದೆ ಪರೋಪಕಾರವನ್ನು ಮಾಡುವ ಜನರು ಸಮಾಜದಲ್ಲಿ ಇನ್ನೂ ಇದ್ದಾರೆ. ಇದರಲ್ಲೂ,  ಕೆಲವರು ಹೆಚ್ಚು ಪ್ರಚಾರಕ್ಕೆ ಬಂದು ಸಾರ್ವಜನಿಕ ಸನ್ಮಾನ, ಶ್ಲಾಘನೆಗೆ ಒಳಗಾಗುತ್ತಾರೆ. ಇನ್ನು ಕೆಲವರು ಅಂತಹ ಬಹಿರಂಗ ಗೌರವ ದೊರಕದಿದ್ದರೂ  ಜನರ ಅಂತರಂಗದ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. 
ಒಂದು ದೃಷ್ಠಿಯಲ್ಲಿ ಕೀರ್ತಿ ಕಾಮನೆ ಮನುಷ್ಯನ ಒಂದು ಬಗೆಯ ಸ್ವಾರ್ಥ ಎನ್ನಿಸುತ್ತದೆ. ಆದರೆ ಸಂಪೂರ್ಣವಾಗಿ  ಸ್ವಾರ್ಥದ ಬದುಕಿನಲ್ಲಿಯೇ   ಮುಳುಗಿದವರನ್ನು ಕಂಡಾಗ `ಕೀರ್ತಿ ಕಾಮನೆ' ಯಂತಹ ಸ್ವಾರ್ಥದ ಸಾಧನೆಯಲ್ಲೂ ಪರಾರ್ಥದ ಸಾರ್ಥಕತೆ ಇದೆ  ಎನ್ನುವುದು ಮೆಚ್ಚುವಂತಹ ಸಂಗತಿ. 
ಒಂದು ವಿಪರ್ಯಾಸದ  ವಿಷಯವೆಂದರೆ, ಒಳ್ಳೆಯ ಕೆಲಸಗಳಿಂದಲೂ ಒಬ್ಬ ವ್ಯಕ್ತಿ ಪ್ರಚಾರಲ್ಲಿರುತ್ತಾನೆ. ಹಾಗೆಯೇ  ಕೆಟ್ಟ ಕೆಲಸಗಳಿಂದಲೂ ಮತ್ತೊಬ್ಬ ವ್ಯಕ್ತಿ ಪ್ರಚಾರದಲ್ಲಿಯೇ  ಇರುತ್ತಾನೆ. ಆದರೆ ಒಬ್ಬನದು ಸತ್ಕೀರ್ತಿ. ಇನ್ನೊಬ್ಬನದು  ದುಷ್ಕೀರ್ತಿ. 


ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771

Saturday, 24 August 2013

ಹೆಂಡತಿಯ ಮೇಲೆ ಗಂಡನ ಅತ್ಯಾಚಾರ !!


                                                                                                    ಎಂ. ಗಣಪತಿ. ಕಾನುಗೋಡು
ಹೌದು. ಹೆಂಡತಿಯ ಮೇಲೆ ಗಂಡನಾದವನು ಅತ್ಯಾಚಾರ ನಡೆಸುವುದೂ ಇದೆ. ಇದನ್ನು ಕೇಳಿ ಬಹಳ ಜನರಿಗೆ ಆಶ್ಚರ್ಯವಾಗುತ್ತದೆ. ಒಬ್ಬ ಪುರುಷ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದಮೇಲೆ ಅವಳ ದೈಹಿಕ ಸಂಪರ್ಕವನ್ನು ಹೊಂದುವ ಹಕ್ಕು  ಅವನಿಗೆ ಇದೆ. ಇಲ್ಲಿ ಅತ್ಯಾಚಾರದ ಪ್ರಶ್ನೆ ಏನು ಎಂದು ಸಾಮಾನ್ಯರ ಅಭಿಪ್ರಾಯ. 
ಸ್ವತಃ ಪತ್ನಿಯೊಡನೆ ದೈಹಿಕ ಸಂಪರ್ಕವನ್ನು ಹೊಂದಬೇಕಾದರೂ ಆಕೆಯ ಪೂರ್ಣ ಸಮ್ಮತಿಬೇಕು. ಅವಳ ಇಚ್ಚೆಯ ವಿರುದ್ಧ ಬಲಾತ್ಕಾರವಾಗಿ ಅವಳನ್ನು ಸಂಪರ್ಕಿಸುವುದು ವೈವಾಹಿಕ ಅತ್ಯಾಚಾರ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಪತಿ-ಪತ್ನಿಯರ ಕೂಡುವಿಕೆಗೂ ಕಾಲ, ಸ್ಥಳ, ಪರಸ್ಪರ ಒಪ್ಟಿಗೆ ಹಾಗೂ ಆ ಕ್ರಿಯೆಗೆ ಸಂಬಂಧಪಟ್ಟು ಸಂದರ್ಭದ ಪೂರ್ಣ ಸಿದ್ಧತೆಬೇಕು. ಇವ್ಯಾವುದರ ಹೊಂದಾಣಿಕೆಯೂ ಇಲ್ಲದೆ ಹಠಾತ್ ಒತ್ತಾಯಪೂರ್ವಕವಾಗಿ ನಡೆಸುವ ಸಂಭೋಗ ಅತ್ಯಾಚಾರವೆನಿಸುತ್ತದೆ. ಮದುವೆಯಾದ ಹೊಸತರದಲ್ಲಿ ಅಥವಾ ಯೌವನದ ಬಿಸಿ ಕುದುಯುತ್ತಿರುವವರೆಗೂ  ಈ ತೆರೆನ ಅನಪೇಕ್ಷಿತ ಸಂದರ್ಭಗಳು ನಿರ್ಮಾಣವಾಗುತ್ತದೆ. ಇದು ಪ್ರಾಯದ ಪ್ರಮಾದವೇ ವಿನಃ ಹಿಂಸೆಯ ದುರುದ್ದೇಶ ಪುರುಷನಿಗೆ ಇರುವುದಿಲ್ಲ.  ಹಾಗಂತ ಈ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ. 
ಆಹಾರ ಪಥ್ಯದಂತೆ ಹಾಸಿಗೆ ಪಥ್ಯವೂ ಕೂಡ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಒಂದು ನಿಗ್ರಹ. ಸಂತಾನ ನಿಯಂತ್ರಣದ ಆಧುನಿಕ ತಂತ್ರಗಳ ಅಭಾವದ ಕಾಲದಲ್ಲಿ ಸಂತಾನ ನಿಯಂತ್ರಣಕ್ಕಾಗಿ ನಮ್ಮ ಹಿರಿಯರು ಹಾಸಿಗೆ ಪಥ್ಯವನ್ನು ಅನುಸರಿಸುತ್ತಿದ್ದರು. ಹೆಂಡತಿ ಗರ್ಭವನ್ನು ಧರಿಸಬಹುದಾದ ದಿನಗಳಲ್ಲಿ ಆಕೆಯ ದೆೃಹಿಕ ಸಂಪರ್ಕವನ್ನು ನಡೆಸುತ್ತಿರಲಿಲ್ಲ. ಹೆಂಡತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಹಾಸಿಗೆ ಪಥ್ಯ ಅಗತ್ಯ. ಆಧುನಿಕ ಸಮಾಜದ  ಬಹುತೇಕ ಯುವಜನರಿಗೆ ಈ ಪರಿಕಲ್ಪನೆಯ ಮಾಹಿತಿ ಇಲ್ಲ. 
ಬಹಳ ಕೆಲಸಗಳಿಂದ ದಣಿದಾಗ, ಕಾಯಿಲೆಯಿಂದ ಬಳಲಿದಾಗ, ರಾತ್ರಿ ನಿದ್ದೆಯಲ್ಲಿ ಮೈಮರೆತಾಗ, ತುಂಬು ಗರ್ಭಿಣಿ ಇದ್ದಾಗ, ಬಾಣಂತಿಯಿದ್ದಾಗ ಗಂಡನಡೆಸುವ ಸಂಪರ್ಕ ಕ್ರಿಯೆಯು ಅತ್ಯಾಚಾರವೆನಿಸುತ್ತದೆ. 
ನಗರದ ಬಹಳ ಕುಟುಂಬಗಳಲ್ಲಿ ರಜಸ್ವಲೆಯಾದ  ಮಹಿಳೆ ಹೊರಗೆ ಇರುವುದು ಕಂಡುಬರುವುದಿಲ್ಲ. ಈ ಸಂದರ್ಭದಲ್ಲಿ ಅವಳಿಗೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಬೇಕು. ಈ ಕಾರಣದಿಂದ ಕೆಲಸದ ಒತ್ತಡದಿಂದ ಆಕೆ  ದೂರವಿರಬೇಕು ಎನ್ನುವ  ನಮ್ಮ ಹಿರಿಯರ ಕಲ್ಪನೆಯಲ್ಲಿ ನಾಲ್ಕುದಿನ ಆಕೆಯನ್ನು ಪ್ರತ್ಯೇಕ ಇರಿಸುವ ಪದ್ಧತಿ ಬಂದಿದ್ದಿರಬೇಕು.  ಈ ಸಂದರ್ಭದಲ್ಲಿ ದೈಹಿಕ ಸಂಪರ್ಕವೂ ಅವಳ ಆರೋಗ್ಯದ ದೃಷ್ಟಿಯಿದ ನಿಷಿದ್ಧ. ದೇಹ ಮತ್ತು ಮನಸ್ಸು  ಬಹಳ ಬಳಲಿಕೆಯಲ್ಲಿ ಇರುವುದರಿಂದ ಮಹಿಳೆಗೆ ಅದರ ಅಪೇಕ್ಷೆಯೂ ಇರುವುದಿಲ್ಲ. ಆದರೆ ಇಂದಿನ  ಜಂಜಾಟದ ಬದುಕಿನಲ್ಲಿ, ಅದೂ ಕೂಡ ಕೇವಲ ಪತಿ- ಪತ್ನಿಯರಷ್ಟೆ ಇರುವ ಅಣು ಕುಟುಂಬದಲ್ಲಿ ಮಹಿಳೆ ರಜಸ್ವಲೆಯಾದಾಗ ಹೊರಗೆ ಇರುವ ಮಾತು ಇರಲಿ, ಒಟ್ಟಿಗೇ ಹಾಸಿಗೆಯನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ  ಹೆಂಡತಿಯ ಸಂಪರ್ಕವನ್ನು  ಅದಕ್ಕೆ ಬೇಕಾದ ವ್ಯವಸ್ಥೆಯೊಂದಿಗೆ ಗಂಡ ಬಯಸುವ ಸಾಧ್ಯತೆ ಇದೆ.  ಇದು ಅತ್ಯಾಚಾರ. 
ಪುರುಷರಿಗಿಂತ ಮಹಿಳೆಯರು ಹೆಚ್ಚು ಧಾರ್ಮಿಕ ಆಚರಣೆವುಳ್ಳವರು. ಕುಟುಂಬದಲ್ಲಿ ವ್ರತಾದಿಗಳಿದ್ದಾಗ ಧಾರ್ಮಿಕ ಕಟ್ಟಳೆಯಕಾರಣ ಆನೇಕ ಮಹಿಳೆಯರಿಗೆ ದೈಹಿಕ ಸಂಪರ್ಕ ನಿಷಿದ್ಧ. ಅಂದಿನ ದಿನ ಹಾಸಿಗೆ ಪಥ್ಯವನ್ನು ಅವಳು ಬಯಸುತ್ತಾಳೆ. ಪುರುಷನ ಯೌವನದ ಒತ್ತಡ ಸುಮ್ಮನಿದ್ದೀತೆ?. ಹೆಂಡತಿಯ ಇಚ್ಚೆಯ ವಿರುದ್ಧವಾಗಿ, ಬಲತ್ಕಾರವಾಗಿ  ಅವಳ ಸಂಪರ್ಕ ನಡೆಸುತ್ತಾನೆ. ಇದು ಗಂಡನ ಅತ್ಯಾಚಾರ.  
ಹಿಂದಿನಹಾಗೆ ಈಗ  ಅವಿಭಕ್ತ ಕುಟುಂಬಗಳಿಲ್ಲ. ಮನೆತುಂಬಾ ಜನರು ಇಲ್ಲ. ಈಗ ಏನಿದ್ದರೂ ಅಣು ಕುಟುಂಬ (ನ್ಯೂಕ್ಲಿಯರ್ ಫ್ಯಾಮಿಲಿ). ಗಂಡ ಮತ್ತು ಹೆಂಡತಿ ಇಬ್ಬರದ್ದೇ ದರ್ಭಾರು. ಮಧ್ಯೆ ಬ್ರೇಕ್ ಹಾಕುವ ಹಿರಿಯರು ಇಲ್ಲಿ ಇಲ್ಲ. ಇಂತಹ ಅವಘಟನೆಯ ವೇದನೆಯನ್ನು  ಹೊರಗೆ ತರುವ ಸ್ಥಿತಿಯಲ್ಲಿ ಹೆಂಡತಿ ಇರುವುದಿಲ್ಲ. ಏಕೆಂದರೆ ಗಂಡ ಎನ್ನುವ ಮರ್ಯಾದೆ, ಪ್ರೀತಿ ಅವಳಿಗೆ ಇದ್ದೇ ಇರುತ್ತದೆ. ಒಳಗೇ ವಿರೋಧಿಸಿದರೆ ಗಂಡ ತಡೆದುಕೊಳ್ಳಬೇಕಲ್ಲ.  ಅಸಾಯಕಳಾಗಿ ಈ ತೆರೆನ ಅತ್ಯಾಚಾರಕ್ಕೆ ಆಕೆ ಸಿಲುಕಿಕೊಳ್ಳುತ್ತಾಳೆ. 
ಪುರುಷನಿಗೂ ಕೂಡ ಲೈಂಗಿಕ ಸಂಪರ್ಕ ಒಂದು ಅಗತ್ಯ. ಹಾಗೂ ನೈಜವಾದ ಪ್ರಕ್ರಿಯೆ ಎಂಬುದು ಸುಳ್ಳಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮೇಲೆ ಹೇಳಿದ ಅನೇಕ ಪ್ರಸಂಗಗಳಲ್ಲಿಯೂ ಅವನಿಗೆ  ವಿನಾಯಿತಿ ಇರುತ್ತದೆ.
ವಿಷಯ ಹೇಗಾದರೂ ಇರಲಿ. ಹೆಂಡತಿಯ ಮೇಲೆ ನಡೆಯುವ ಗಂಡನ ಅತ್ಯಾಚಾರ ಒಟ್ಟಾರೆ ಸಮಾಜದ ಸ್ವಾಸ್ತ್ದ್ಯದ ದೃಷ್ಟಿಯಿಂದ ಪುರುಷನಿಗೆ ತಿಳಿಯಹೇಳಬೇಕಾದ ಮತ್ತು P್ಷÀಮಿಸಬಹುದಾದ ಘಟನೆಯೂ ಹೌದು. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771