Monday, 30 December 2013

ಹೊಸ ವರುಷ ಹಳೆ ದುಗುಡಹೊಸ ವರುಷ ಹೊಸತಲ್ಲ ನನಗೆ .. ನನ್ನಷ್ಟೇ ಹಳತು. |
ಹಳೆದುಗುಡ ಹೊಸೆತಿರಲು ಹೊಸತೇನ  ಕಾಣಲಿ ನಾನು. |
ಹೊಸತನರಸಿದೊಡೆ ಆಸೆಗಳ ಹಾಸು - ಹೊಕ್ಕು
ಸಿಕ್ಕಾಗಿ ಬದುಕಿನ ಸೊಗಡು ಜಡವಾಯಿತು. |
ಕಾಲ ಕಲಿಸುವುದೊಂದೇ ಪಾಠ.. ನಿತ್ಯದಾಟ
ಹಳಸಲ ಮನಕೆ ಕರೆದು ತುಂಬುವ ನಿತ್ಯ ಚೇತನ. |


ಸರ್ವರಿಗೂ ಹೊಸವರುಷ ಶುಭವನ್ನು ಕೊಡಲಿ ..

                         - ಎಂ ಗಣಪತಿ , ಕಾನುಗೋಡು .

Saturday, 7 December 2013

ಹೌದೇ... ಎಲ್ಲಾ ನಿನ್ನ ಗಂಡನ್ದೇಯಾ !!.. ..-- ಎಂ. ಗಣಪತಿ, ಕಾನುಗೋಡು


ಪದ್ಮಜ್ಜಿ ಮತ್ತು ಲಕ್ಷ್ಮಜ್ಜಿ  ಇಬ್ಬರೂ ಓರೆಗಿತ್ತಿಯರು.  ಇಬ್ಬರ ಗಂಡಂದಿರೂ ತೀರಿ ಹೋಗಿದ್ದಾರೆ . ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿಯೇ ತಾಗಿಕೊಂಡಿದೆ.  ಇಬ್ಬರೂ ಹಲ್ಲು ಬಿದ್ದ ಬೋಡು ಬಾಯಿಯ ಮುದುಕಿಯರಾಗಿದ್ದಾರೆ. ಇವರಿಬ್ಬರ ಯಜಮಾನರಲ್ಲಿ ಅಣ್ಣ ಬುದ್ದಿವಂತ. ಆಸ್ತಿ ಮನೆ ವಿಸ್ತರಿಸಿ ತಮ್ಮನಿಗೆ  ಆಸ್ತಿಯಲ್ಲಿ ನ್ಯಾಯವಾಗಿ ಪಾಲು ಕೊಟ್ಟು ಮನೆಯನ್ನೂ ಕಟ್ಟಿಸಿಕೊಟ್ಟಿದ್ದಾನೆ.

 ವಯಸ್ಸು ಹೋದರೇನು ? ಓರೆಗಿತ್ತಿಯರ ನಂಜೇನೂ ಹೋಗಲಿಲ್ಲವಲ್ಲ...   ಒಂದು ದಿನ ಸಂಜೆ ಅಕ್ಕಪಕ್ಕದ ಅವರವರ ಮನೆಯ ಕಟ್ಟೆಯಮೇಲೆ ಕುಳಿತಿದ್ದರು. ಹೇಗೋ ಜಗಳಕ್ಕೆ ಶುರುವಾಯಿತು. ಇದು ಹಿಂದಿನಿಂದಲೂ ಇದ್ದದ್ದೇ. ಸುಮಾರು ಅರ್ಧ ಗಂಟೆ ವಾದಾಟವಾದ ನಂತರ ಹೇಳಿದಳು ಅಕ್ಕ ಅಜ್ಜಿ ...

 " ನಿಂಗಳದ್ದು ಎಂತಾ ಇದ್ದೇ ? ಯಲ್ಲಾ ಯಮ್ಮನೇರು ಮಾಡಿಟ್ಟಿದ್ದನ್ನೇ ನಿಂಗ ತಿಂಬೋದು  ಸೈಯಲ್ಲೇ ? !!" ..

ತಂಗಿ ಅಜ್ಜಿಗೆ ಸಿಟ್ಟು ನೆತ್ತಿಗೇರಿತು. ಅಕ್ಕನ ಒಂದು ಮಾತಿಗೆ ನಾಲ್ಕು ಮಾತು ಕುಟ್ಟಿಗಾಣಿಸಬೇಕು ಎಂಬುದೇ ಅವಳ ಆತುರ .. ಉಭ್ರಮೆಯಲ್ಲಿಯೇ ಹೇಳಿಬಿಟ್ಟಳು ..

" ಹೌದೇ.... ಎಲ್ಲಾ ನಿನ್ನ ಗಂಡನ್ದೇಯಾ .. ಈ ಮನೆಯೂ ನಿನ್ನ ಗಂಡನ್ದೇಯಾ ... ಈ ಅಡಿಕೆ ತೋಟವೂ  ನಿನ್ನ ಗಂಡನ್ದೇಯಾ .. ನಮ್ಮನೆ ಸೋಮ,  ಚಂದ್ರನೂ  ನಿನ್ನ ಗಂಡನ್ದೇಯಾ.. .. (ಸೋಮ ಚಂದ್ರ ಇವಳ ಮಕ್ಕಳು :) )  "


ಈ ತೆರನ ಸಂದರ್ಭಕ್ಕೇ ಕಾಯುತ್ತಿದ್ದ ಅಕ್ಕ ಅಜ್ಜಿ ಮುಡುಗಿದ ಸೊಂಟದಲ್ಲಿಯೇ ತಂಗಿ ಅಜ್ಜಿಯ ಕಡೆಗೆ ದೌಡಾಯಿಸಿ ಹೇಳಿದಳು ...." ಹೌದೋ ... ಏನೋ ...... ಯಾರಿಗೆ ಗೊತ್ತು..... ? . ..!!  "

ಎಂ. ಗಣಪತಿ, ಕಾನುಗೋಡು   
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771

Friday, 6 December 2013

ಉಂಡ ಬಾಳೆಎಲೆಯ ಪಾಡು-ಎಂ.ಗಣಪತಿ ಕಾನುಗೋಡು


ಒಂದು ಕಾಲದಲ್ಲಿ ದಿನನಿತ್ಯದ ಊಟ, ತಿಂಡಿಗೆ ಪ್ರತಿಯೊಬ್ಬರೂ ಬಾಳೆಎಲೆಯನ್ನು ಬಳಸುತ್ತಿದ್ದರು. ಆದರೆ ಈಗ ಹಬ್ಬ-ಹರಿದಿನಗಳಲ್ಲಿ ಮಾತ್ರ ಬಾಳೆಎಲೆಗೆ ವಿಶೇಷ ಮಹತ್ವ. ಮದುವೆ ಸಮಾರಂಭಗಳಲ್ಲಿ ಸಾವಿರಗಟ್ಟಲೆ ಜನರಿಗೆ ಊಟಕ್ಕೆ ಬಾಳೆಎಲೆಯನ್ನು ಬಳಸುತ್ತಾರೆ ಅಷ್ಟೆ.
ನಗರದಲ್ಲಿ ಕೆಲವೊಂದು ಮಾಂಸಾಹಾರಿ ಊಟದ ಹೋಟೆಲ್ ಎದುರಿಗೆ ಬೋರ್ಡು ನೇತು ಹಾಕಿಕೊಂಡಿರುತ್ತದೆ. ‘ಬಾಳೆಎಲೆಯ ಮೀನು ಊಟ ದೊರೆಯುತ್ತದೆ’. ಆಹಾ ! ಮಾಂಸಾಹಾರಕ್ಕೂ ಬಾಳೆಎಲೆಗೂ ಅಷ್ಟೊಂದು ನಂಟು. ಬಾಳೆಎಲೆಯ ಮೀನು ಊಟಕ್ಕಾಗಿಯೇ ಆ ಹೋಟೆಲ್‍ಗೆ ವಿಶೇಷ ಗಿರಾಕಿಗಳು.
ಬಳಸುವ ಬಾಳೆಎಲೆಯ ಬಗ್ಗೆ ಎಷ್ಟೊಂದು ಕಾಳಜಿ. ಅದನ್ನು ಕ್ರಮವಾಗಿ ಕತ್ತರಿಸುತ್ತಾರೆ. ಹುಳ-ಹುಪ್ಪಟವಿದ್ದರೆ ಅದರ ಮೇಲೆ ನಿಲ್ಲದಂತೆ ಎಚ್ಚರ ವಹಿಸುತ್ತಾರೆ. ಗಲೀಜು ಇದ್ದರಂತೂ ಸರಿಯೇ. ಇಲ್ಲದಿದ್ದರೂ, ಅವುಗಳನ್ನು ನೀರಿನಿಂದ ಚೊಕ್ಕಟವಾಗಿ ತೊಳೆದು ಒಪ್ಪವಾಗಿ ಕಾಯ್ದಿರುತ್ತಾರೆ. ಯಾರೂ ಅದಕ್ಕೆ ಗಲೀಜು ತಾಗಿಸದಂತೆ ತಾಕೀತು ಮಾಡುತ್ತಾರೆ. ದಿನನಿತ್ಯದ ಕುಟುಂಬದೊಳಗಿನ ಆಹಾರದ ವ್ಯವಸ್ಥೆಗೆ ಇರಲಿ ಅಥವಾ ವಿಶೇಷ ಸಮಾರಂಭದಲ್ಲಿಯೇ ಇರಲಿ. ಬಾಳೆಎಲೆಯ ಬಗ್ಗೆ ಇದು ಸಾಮಾನ್ಯವಾಗಿ ಇರುವ ಮುಂಜಾಗರೂಕತೆ. ಎಷ್ಟೊಂದು ಗಮನ, ಮರ್ಯಾದೆ ಅದರ ಕಡೆಗೆ. ನಮ್ಮ ಊಟ ಪರಿಶುದ್ಧವಾಗಿರಬೇಕಲ್ಲವೇ?. ಯಾರ ಪಾದಧೂಳಿಯೂ ಬೀಳದ ತಾವಿನಲ್ಲಿ ಅದಕ್ಕೆ ಮಾನದ ಸ್ಥಾನ. ಅಬ್ಬಾ....!
ಇಷ್ಟೆಲ್ಲಾ ಗೌರವಾದರಗಳು, ಪ್ರತ್ಯೇಕ ಸ್ಥಾನಮಾನಗಳಿಂದ ಸಂಪನ್ನಗೊಂಡ ಬಾಳೆಎಲೆ ಊಟ ಮುಗಿದ ಮೇಲೆ ತಿಪ್ಪೆಗೆ ಬಿಸಾಡಲ್ಪಡುತ್ತದೆ. ಅಯ್ಯೋ ಒಂದು ಘಂಟೆ ಮುಂಚೆ ತಾರಸಿ ಮನೆಯ ಬೆಚ್ಚನೆಯ ಕೊಠಡಿಯಲ್ಲಿ ಜೋಪಾನವಾಗಿ ಕಾಯ್ದು ಇಟ್ಟಿದ್ದ ಬಾಳೆಎಲೆ ಉಂಡ ಬಾಳೆಎಲೆ ಎಂದಾದ ಮೇಲೆ ಕೊಠಡಿ ಇರಲಿ ಮನೆಯ ಯಾವ ಮೂಲೆಯಲ್ಲೂ ಅದಕ್ಕೆ ಸ್ಥಳವಿಲ್ಲ. ತಾರಸಿ ಎದುರಿನ ತಿಪ್ಪೆಯೇ ಅದಕ್ಕೆ ಗತಿ. ಇದಕ್ಕೇ ಉಂಡ ಬಾಳೆಎಲೆಯ ಪಾಡು ಎನ್ನುವುದು.
ಉಂಡ ಬಾಳೆಯನ್ನೇನು ತಿಜೋರಿಯಲ್ಲಿ ಕಾಯ್ದಿಡಲಾಗುತ್ತದೆಯೇ?. ಇದು ಸಹಜ ಪ್ರಶ್ನೆಯೆ. ಅದರ ಉಪಯೋಗ ಮುಗಿದ ಮೇಲೆ ಬಿಸಾಡಬೇಕು. ಅಲ್ಲವೇ? ಇನ್ನೇನು ಅಂಗಳದಲ್ಲಿ ಹೊಲಸು ಮಾಡಿಕೊಳ್ಳಲಾಗುತ್ತದೆಯೇ? ತಿಪ್ಪೆಯೇ ಅದಕ್ಕೆ ಒಪ್ಪು.
ಅದು ಅಲ್ಲವೆಂದಲ್ಲ. ಆದರೆ ಉಂಡ ಎಲೆಯ ಪಾಡು ಮನುಷ್ಯನಿಗೂ ಬಂದರೆ? ಇಲ್ಲಿಯೇ ಈ ಒಕ್ಕಣೆಯ ಮಹತ್ವ ಇರುವುದು. ಸಮಾಜದಲ್ಲಿ ಎಷ್ಟೋ ಜನರು ಮತ್ತೊಬ್ಬರ ಉಪಯೋಗಕ್ಕೆ ದೊರಕಿ ದೊರಕಿಸಿಕೊಂಡವರ ತೀಟೆ ತೀರಿದ ಮೇಲೆ ಉಂಡ ಬಾಳೆಎಲೆಯ ಪಾಡನ್ನು ಅನುಭವಿಸುತ್ತಾರೆ.
ಹೌದು. ಬದುಕೇ ಪರಾವಲಂಬಿ. ಒಬ್ಬರ ಉಪಯೋಗವನ್ನು ಪಡೆದುಕೊಂಡೇ ಇನ್ನೊಬ್ಬ ತನ್ನ ಬದುಕನ್ನು ಸಾಗಿಸಬೇಕು. ಇದು ವ್ಯಕ್ತಿಯ ತೀರ ವೈಯುಕ್ತಿಕ ಜೀವನದಿಂದ ಹಿಡಿದು ಸಾಮೂಹಿಕ ಜೀವನದ ವರೆಗೂ ಇರುವ ಸತ್ಯ. ಗಂಡ-ಹೆಂಡತಿ, ಪೋಷಕರು – ಮಕ್ಕಳು, ಸಹೋದರ-ಸಹೋದರಿಯರು ಹೀಗೆ ಎಲ್ಲರೂ ವೈಯುಕ್ತಿಕ ಜೀವನದಲ್ಲಿ ಪರಸ್ಪರ ಅವಲಂಬಿಗಳು. ಇಲ್ಲಿಯೂ ಹೆಚ್ಚು ಉಪಯೋಗಕ್ಕೆ ಸಿಗುವವನು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಾನೆ. ಯಾವ ಉಪಯೋಗಕ್ಕೂ ಬಾರದ ಕುಟುಂಬದ ಸದಸ್ಯನ ಪಾಡು ಪ್ರಥಮ ಹಂತದಲ್ಲಿಯೇ ಉಂಡ ಬಾಳೆಎಲೆಯ ಪಾಡು.  ಉಪಯೋಗಕ್ಕೆ ಸಿಕ್ಕವನ ಪಾಡು ಕೂಡ ತದನಂತರದಲ್ಲಿ ಅದೇ ಸ್ಥಿತಿ. ಆದರೆ ಇದು ಕುಟುಂಬವಾದ್ದರಿಂದ ಇಲ್ಲಿ ಅವಲಂಬನೆ ವರ್ತುಲವಾಗಿರುತ್ತದೆ. ಯಾರ  ಹಂಗು ಯಾರಿಗೂ ಇಲ್ಲಿಗೇ ಮುಗಿಯಿತು ಎಂದು ಪೂರ್ಣವಿರಾಮ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಪರಿಣಾಮದ ಲಕ್ಷಣಗಳು ಇಲ್ಲಿ ಮಾರ್ಮಿಕವಾಗಿರುತ್ತದೆ. ಮೂರ್ತ ರೂಪದಲ್ಲಿ ಪ್ರಕಟಗೊಳ್ಳುವುದಿಲ್ಲ.
ಕುಟುಂಬದ ಹೊರಗೆ ಬಂದರೆ ಸಾಮೂಹಿಕ ಜೀವನದಲ್ಲಿ ಈ ತೆರೆನ ಪಾಡು. ಮೂರ್ತ ರೂಪದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಉಪಯೋಗಕ್ಕೆ ಬೇಕೆನಿಸಿದರೆ ಮತ್ತೊಬ್ಬ ವ್ಯಕ್ತಿ ಅವನನ್ನು ಬಾಳೆಎಲೆಯ ಹಾಗೆ ಬಹಳ ಮಹತ್ವ ಕೊಟ್ಟು ಮುತುವರ್ಜಿಯಿಂದ ಕಾಯ್ದುಕೊಳ್ಳುತ್ತಾನೆ. ಎಷ್ಟು ಹೊತ್ತಿಗೂ ಅವನು ನಕರಾತ್ಮಕನಾಗದ ಹಾಗೆ ಪೋಷಿಸುತ್ತಾನೆ. ಹೊಗಳುತ್ತಿರುತ್ತಾನೆ. ಆತ ಯಾವಾಗಲೂ ತನ್ನ ಬದಿಯಲ್ಲಿ ತಾಗಿಕೊಂಡಿರಬೇಕು. ಉಪಯೋಗದ ಸಾಮಥ್ರ್ಯವನ್ನು ಅರಿತೇ ಬಾಳೆಎಲೆಯನ್ನು ರಕ್ಷಿಸಿ ಇಟ್ಟುಕೊಂಡ ಹಾಗೆ ತನಗೆ ಯಾವ ಹೊತ್ತಿಗೆ ಯಾವ ಪ್ರಯೋಜನವನ್ನು ಕೊಡುವ ಸಾಮಥ್ರ್ಯವಿದೆಯೋ ಅಂಥವರನ್ನು ಈತ ಆಯಾ ಹೊತ್ತಿಗೆ ಬಳಸಿಕೊಳ್ಳಲು ಹೊಂಚು ಹಾಕಿರುತ್ತಾನೆ. ತನಗೆ ಸಹಾಯವಾಗಲೆಂದು ಆತನನ್ನು ಮಾತಿನಿಂದ ಹಿಗ್ಗುವಂತೆ ಉಬ್ಬಿಸುತ್ತಾನೆ. ಇವನ ಲಾಭಕ್ಕಾಗಿ ಆತ ಯಾರ್ಯಾರನ್ನೋ ಬೈಯ್ದಾಡಿ ನಿಷ್ಟುರಕ್ಕೆ ಗುರಿಯಾಗುತ್ತಾನೆ. ತನ್ನ ಸ್ವಂತ ಸಂಸಾರ, ದುಡಿಮೆ ಎಲ್ಲವನ್ನೂ ಬಿಟ್ಟು ಆತ ಇವನಿಗಾಗಿ ಹೋರಾಡುತ್ತಾನೆ.
ಒಂದು ದಿನ ಈತನಿಗೆ ಅವನಿಂದ ಆಗಬೇಕಾದ ಪ್ರಯೋಜನವೆಲ್ಲವೂ ಮುಗಿಯುತ್ತದೆ. ಇನ್ನು ಮುಂದೆ ಅವನನ್ನು ತನ್ನ ಜೊತೆ ಇಟ್ಟುಕೊಂಡರೆ ತೊಂದರೆಯೇ ಸರಿ. ಅನಾವಶ್ಯಕವಾಗಿ ಆತನನ್ನು ಓಲೈಸಬೇಕು. ರಕ್ತವನ್ನು ಸಂಪೂರ್ಣವಾಗಿ ಹೀರಿಕೊಂಡ ನಂತರ “ಇಂಬಳ” (ಒಂದು ಬಗೆಯ ರಕ್ತ ಹೀರುವ ಹುಳು) ನಮ್ಮ ದೇಹದಿಂದ ಬೇರ್ಪಡುವುದು ಅದರ ಸ್ವಭಾವ. ಹಾಗೆ ಇನ್ನು ಹಿಡಿದುಕೊಂಡರೆ ಪ್ರಯೋಜನವಿಲ್ಲ ಎಂದೆನಿಸಿದ ಮರುಘಳಿಗೆಯಲ್ಲಿ ಇಂಬಳದಂತೆ ಆತನನ್ನು ಈತ ಬಿಟ್ಟುಬಿಡುತ್ತಾನೆ. ಪುನಃ ಆತ ಇವನನ್ನು ಎಷ್ಟು ಮೂಸಿ ನೋಡಿದರೂ ಅವನ ಮೂಗಿಗೆ ನಾರುವುದು ದುರ್ವಾಸನೆಯೇ ವಿನಹ ಮುಂಚಿನ ಸುವಾಸನೆಯಿಲ್ಲ. ಗುರುತೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವನ ಕುರಿತು ಈತ ನಿರ್ಲಿಪ್ತನಾಗಿರುತ್ತಾನೆ. ಸೂಕ್ಷ್ಮವಾಗಿ ಗ್ರಹಿಸಿದರಷ್ಟೇ ಸಮಾಜದಲ್ಲಿ ನಡೆಯುತ್ತಿರುವ ಇಂಥಹ ಅಹಿತರಕ ನಡವಳಿಕೆಗಳು ನಮ್ಮ ಗಮನಕ್ಕೆ ಬರುತ್ತವೆ.
ಬೇಕೆನಿಸಿದಾಗ ಹೇಗೆ ಬೇಕೋ ಹಾಗೆ ತಮ್ಮ ತೆವಲು ತೀರಿಸಿಕೊಳ್ಳಲಿಕ್ಕೆ ಸರಿಯಾಗಿ ಮತ್ತೊಬ್ಬರನ್ನು ಬಳಸಿಕೊಂಡ ಜನ ತೆವಲು ತೀರಿದ ನಂತರ ಅವರ ಸ್ಥಿತಿಯನ್ನು ಉಂಡ ಬಾಳೆಎಲೆಯ ಪಾಡನ್ನಾಗಿ ಮಾಡಿಬಿಡುತ್ತಾರೆ.


ದಿನಾಂಕ: 05.12.2013          

ಎಂ. ಗಣಪತಿ, ಕಾನುಗೋಡು     
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771

Tuesday, 3 December 2013

ಔತಣದಲ್ಲಿ ಹಲ್ಲು ಸೆಟ್ಟು ....?(ಒಂದು  ಹಾಸ್ಯ ಲೇಖನ)

-ಎಂ.ಗಣಪತಿ ಕಾನುಗೋಡು

ಇದು ನಗಲಿಕ್ಕಾಗಿ ಕಟ್ಟಿದ ಕಥೆಯಲ್ಲ. ವಾಸ್ತವಿಕ ಸಂಗತಿ. ಮನೆಯ ಯಜಮಾನಿ ಸ್ವಲ್ಪ ವಯಸ್ಸಾದವಳು. ಮೇಲ್ಭಾಗದ ಮುಂದಿನ ಎರಡು ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದಳು. ಪ್ರತಿದಿನ ಬೆಳಿಗ್ಗೆ ಅದನ್ನು ಬಾಯಿಗೆ ಜೋಡಿಸಿಕೊಳ್ಳುವುದು, ರಾತ್ರಿ ತೆಗೆದಿಡುವುದು ಎಂದಿನ ರೂಢಿ. 
ಮಗನ ಮದುವೆಯಾದ ವರ್ಷ. ದೀಪಾವಳಿಯ ಹೊಸ ಹಬ್ಬಕ್ಕೆ ಕರೆಯಲು ಸೊಸೆಯ ಮನೆಯ ಬೀಗರು ಬಂದಿದ್ದಾರೆ. ಹೊಸ ಬೀಗರಿಗೆ ಔತಣ ಎಂದ ಮೇಲೆ ತಯಾರಿ ಭರ್ಝರಿಯಾಗಿಯೇ ನಡೆದಿತ್ತು. 
ಬೆಳಿಗ್ಗೆಯಿಂದ ಮಧ್ಯಾಹ್ನದ ಊಟದ ಹೊತ್ತಿನ ವರೆಗೂ ಪುರುಸೊತ್ತಿಲ್ಲದಷ್ಟು ಕೆಲಸ ಯಜಮಾನಿಗೆ. ಬೀಗರನ್ನು ಇನ್ನೇನು ಊಟಕ್ಕೆ ಒಳಗೆ ಕರೆಯಬೇಕು ಅನ್ನುವಷ್ಟರಲ್ಲಿ ಯಜಮಾನಿ ಮುಖ ತೊಳೆದು ಒಮ್ಮೆ ತಲೆ ಬಾಚಲಿಕ್ಕಾಗಿ ಕನ್ನಡಿ ನೋಡಿದ್ದಾಳೆ. ಬಾಯಿಯೊಳಗಿನ ಎರಡು ಹಲ್ಲಿನ ಸೆಟ್ ಎಲ್ಲಿಯೋ ಬಿದ್ದು ಹೋಗಿದೆ. ಅಯ್ಯೋ ದೇವರೇ ....!?
ಬಿದ್ದು ಹೋಗಿದ್ದು ಪರವಾಗಿಲ್ಲ. ಕೆಡುವುದೇನು? ಅತ್ತೆಯ ಚಂದ ನೋಡಿ ಬೀಗರೇನು ಅವರನ್ನು ಮೆಚ್ಚಿಕೊಳ್ಳಬೇಕಾಗಿಲ್ಲವಲ್ಲ ! ಆದರೆ ಅದು ಎಲ್ಲಿ ಬಿತ್ತು ಅಂತ ಬೇಕಲ್ಲ. ಹೊರಗಡೆ ಎಲ್ಲಾದರೂ ಬಿತ್ತೋ ಅಥವಾ ಅಡುಗೆಯ ಐಟಂಗಳಲ್ಲಿ ಯಾವುದಾದರಲ್ಲೂ ಬಿದ್ದು ಹೋಗಿದೆಯೋ?. ಅದು ಬೀಗರ ಊಟದ ಪ್ಲೇಟಿಗೆ ಬಂದರೆ ಏನು ಗತಿ? ಶಿವ.....ಶಿವಾ.....
ವಿಷಯವನ್ನು ಮಗನಿಗೆ ಮತ್ತು ಗಂಡನಿಗೆ ತಿಳಿಸಿದ್ದು ಆಯಿತು. ಸೊಸೆಗೂ ಗುಟ್ಟಾಗಿ ಪಿಸುಗುಟ್ಟಿದ್ದಾಯಿತು. ಆಕೆಗೆ ತಿಳಿಸಿದರೆ ಅಪ್ಪನಿಗೆ ಹೇಳಿಬಿಟ್ಟಾಳು ಎಂದು ಮುಚ್ಚಿಟ್ಟರೆ ಮುಂದಿನ ಪ್ರಸಂಗದಿಂದ ಅದು ಅವಳಿಗೆ ತಿಳಿಯದೇ ಇರುತ್ತದೆಯೇ? ಆಗಲೇ ಗಂಟೆ ಮಧ್ಯಾಹ್ನ 1.30 ಆಗಿದೆ. ಬೀಗರು 3.00 ಗಂಟೆ ಬಸ್ಸಿಗೆ ಊರಿಗೆ ಮರಳಬೇಕು ಎಂದು ಬಂದ ಕೂಡಲೇ ಹೇಳಿದ್ದು ಬೇರೆ. ಅಯ್ಯೋ....ದೇವರೇ....!
ಮಗ ತಡಮಾಡಲಿಲ್ಲ. ಶೆಲ್ಪ್‍ನಲ್ಲಿದ್ದ ಹರಿವಾಣಗಳನ್ನಷ್ಟೇ ಅಲ್ಲ ಮಹಡಿಯ ರೂಮ್‍ನಲ್ಲಿದ್ದ ಹತ್ತಾರು ಹರಿವಾಣಗಳನ್ನು ತೊಳೆದು ತಂದು ಅಡುಗೆಮನೆಯ ಉದ್ದಗಲಕ್ಕೆ ಹರಡಿದ. ಅನ್ನದಿಂದ ಹಿಡಿದು ಸಾರು, ಸಾಂಬಾರು, ಹುಣಸೆಹಣ್ಣಿನ ಮಂದನೆಯ ಗೊಜ್ಜು, ಪಲ್ಯ, ಕೋಸುಂಬರಿ, ಪಾಯಸ, ಬಾಣಲೆತುಂಬಾ ಸಣ್ಣಕ್ಕಿ ಕೇಸರಿಬಾತು, ಚಿತ್ರಾನ್ನ ಒಂದೇ.. ಎರಡೇ.. ಹೀಗೆ.. ಹೀಗೆ.. ಎಲ್ಲವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹರಿವಾಣಕ್ಕೆ ಸುರವಿ ಸೌಟಿನಲ್ಲಿ ಹರವಿ ಹರವಿ ನೋಡಿದ್ದಾಯ್ತು. ಇದರಿಂದ ಪದಾರ್ಥಗಳು ಆರಿ ಹೋಯಿತೇ ವಿನಃ ಹಲ್ಲುಸೆಟ್ಟು ಸಿಗಲಿಲ್ಲ. ಒಬ್ಬೊಬ್ಬರು ಒಂದೊಂದನ್ನು ಜಾಲಾಡಿದರು. ಸೆಟ್ಟು ಸಿಕ್ಕದಿದ್ದಕ್ಕಾಗಿ ಸಿಡಿಮಿಡಿಗೊಂಡು ಅವನು ಸರಿಯಾಗಿ ನೋಡಲಿಲ್ಲವೇನೋ ಎಂದು ಇವನು ಇವನು ಸರಿಯಾಗಿ ನೋಡಿಲಿಲ್ಲವೇನೋ ಎಂದು ಅವನು ಹೀಗೆ ಒಬ್ಬರಿಗೊಬ್ಬರು ಗಾಬರಿಯಲ್ಲಿ ಬೈಯ್ದಾಡಿಕೊಂಡಿದ್ದೂ ಆಯಿತು. ಪಾತ್ರೆಯ ಶಬ್ದ, ಮಾತಿನ ಗೊಣಗಾಟದಲ್ಲಿ ಗಂಟೆ ಎರಡೂವರೆಯೂ ಆಯಿತು. 
ಜಗುಲಿಯ ಮೇಲೆ ಕುಳಿತಿದ್ದ ಬೀಗರಿಬ್ಬರು ಮನೆಯ ಯಜಮಾನನ್ನು ಹೊರಗೆ ಕರೆದರು. ಇನ್ನು ಅರ್ಧಗಂಟೆಯಲ್ಲಿ ತಾವು ಊರಿಗೆ ಹೊರಡಬೇಕು ಎಂದರು. ಅದು ಹಳ್ಳಿ ಬೇರೆ. ಬಿಟ್ಟರೆ ಮರುದಿನವೇ ಗತಿ. ಏನು ಬೀಗರೆ ಬಹಳ ವಿಶೇಷ ಔತಣ ಮಾಡಿಬಿಟ್ಟಿದ್ದೀರಿ ಅಂತ ಕಾಣುತ್ತೆ. ನಾವು ನಮ್ಮ ಹಲ್ಲಿನಲ್ಲಿ ಅಗಿದು ತಿಂದು ಜೀರ್ಣಿಸಿಕೊಳ್ಳಲಿಕ್ಕೆ ಆಗುತ್ತೋ ಇಲ್ಲವೋ, ಏನು ಮಹಾರಾಯರೆ ಎಂದು ತಮ್ಮ ಮಗಳ ಮಾವನನ್ನು ಕೇಳಿದರು. ಮಾವನ ಗತಿಯೋ ? ಅವನು ಬಾಯಿ ಬಿಟ್ಟರೆ ಕೆಟ್ಟ.! 
ಜಗುಲಿಯಲ್ಲಿ ಬೀಗರು ಅರ್ಜೆಂಟ್ ಮಾಡಿದ್ದನ್ನು ಯಜಮಾನ ಒಳಗೆ ಬಂದು ಹೇಳಿದ. ಅನಿವಾರ್ಯ. ಸಿದ್ದತೆ ಮಾಡಿದರು. ನೆಂಟರು ಅವಸರ ಅವಸರದಲ್ಲಿ ಊಟ ಮುಗಿಸಿ ಮನೆಗೆ ತೆರಳಿದ್ದೂ ಆಯಿತು.
ದೇವರು ದೊಡ್ಡವ ಅಂತೂ ಬೀಗರ ಬಾಯಿಗೆ ನನ್ನ ಹಲ್ಲು ಸೆಟ್ಟು ಬಂದು ಕೂರಲಿಲ್ಲವಲ್ಲ. ಭಗವಂತ ನಮಸ್ಕಾರ. ಯಜಮಾನಿಯಿಂದ ದೇವರಿಗೆ ಥ್ಯಾಂಕ್ಸ್. 
ನೆಂಟರನ್ನು ಕಳುಹಿಸಿ ಮನೆಯವರೆಲ್ಲಾ ಪ್ರಕರಣದಲ್ಲಿ ದಣಿದು ಊಟ ಮುಗಿಸುವ ಹೊತ್ತಿಗೆ ಸಂಜೆ 5.00 ಗಂಟೆಯಾಗಿತ್ತು. ಅಡುಗೆ ಮನೆಯನ್ನು ಸೇರಿಸುವ ಕೆಲಸವನ್ನು ಸೊಸೆಗೆ ವಹಿಸಿ ಅತ್ತೆ ಮನಸ್ಸಿನ ಬೇಸರದಿಂದ ಸ್ವಲ್ಪ ವಿಶ್ರಾಂತಿಗೆ ಹೋದಳು.
ಕಸ ಮುಸುರೆ ಮುಗಿಸಿ ಬಂದ ಸೊಸೆ ಅತ್ತೆಯ ಮಂಚದ ಎದುರಿಗೆ ಬಂದು ನಿಂತಳು. ಅತ್ತೆ ಇಲ್ಲಿ ಸಿಕ್ಕಿತು ನಿಮ್ಮ ಹಲ್ಲು ಸೆಟ್ಟು ಎಂದಳು. ಅಯ್ಯೋ ಎಲ್ಲಿತ್ತೆ ಪುಣ್ಯಾತ್ಗಿತ್ತೀ ಎಂದು ಹೌಹಾರಿದಳು ಅತ್ತೆ. ಸೊಸೆ ಹೇಳಿದಳು. ಅದು ಅಡುಗೆ ಮನೆಯ ಅಕ್ಕಿ ತೊಳೆದ ನೀರಿನ ಬಕೆಟಿನಲ್ಲಿತ್ತು.

ದಿನಾಂಕ: 03.12.2013    

 ಎಂ. ಗಣಪತಿ, ಕಾನುಗೋಡು    
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kanagod@gmail.com
Blog : mgkangod.blogspot.com
Mob : 9481968771