Wednesday 28 November 2018

### ಮಾತಿನ ವಂಚನೆ ###

ನಾವು ಅನೇಕರಿಗೆ ಮಾತನ್ನು ಕೊಡುತ್ತೇವೆ. ಆದರೆ ಅದನ್ನು ಈಡೇರಿಸಿಕೊಡಲು ಅಥವ ಆ ಮಾತಿಗೆ ಮುಟ್ಟಿಕೊಳ್ಳಲು ಆಗುತ್ತದೆಯೋ ಇಲ್ಲವೋ ಎಂಬುದನ್ನು ಮಾತು ಕೊಡುವ ಮುಂಚೆಯೇ ಸಾಕಷ್ಟು ಯೋಚಿಸಿಕೊಳ್ಳಬೇಕು ಎನ್ನುವುದು ಬದುಕಿನ ತತ್ವ. ಈ ತತ್ವವನ್ನು ಬಹಳಷ್ಟು ಸಾರಿ, ಗೊತ್ತಿದ್ದರೂ, ನಾವು ತಪ್ಪುತ್ತೇವೆ. ಯಾವುದೋ ಸನ್ನಿವೇಶದಲ್ಲಿ ನಮ್ಮೆದುರು ತಾಗುವ ವ್ಯಕ್ತಿ ನಮ್ಮಿಂದ ಈಡೇರಿಸಿಕೊಡಲಾಗದ ಮಾತನ್ನು ಕೇಳುತ್ತಾನೆ. ಅದಕ್ಕೆ ಒಪ್ಪದಿದ್ದರೆ ಆ ಸನ್ನಿವೇಶಕ್ಕೆ ಆತನಿಂದ ನಮಗೆ ಸಿಗುವ ಪ್ರಯೋಜನ ಅಥವಾ ಆತ ಆ ಹೊತ್ತಿಗೆ ನಮಗೆ ಮಾಡಿಕೊಡಲೇಬೇಕಾದ ಕೆಲಸವನ್ನು ಮಾಡಿಕೊಡುವುದಿಲ್ಲ. ಆ ಮುಜುಗರಕ್ಕಾಗಿ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಯಾವುದೋ ಮಾತನ್ನು ಎದುರು ವ್ಯಕ್ತಿಗೆ ಕೊಡುತ್ತೇವೆ. ಒಮ್ಮೆ ಆ ಮಾತನ್ನು ನಡೆಸಿಕೊಡಬೇಕೆಂಬ ಹಂಬಲ ನಮಗಿದ್ದರೂ ಮತ್ತಾವುದೋ ವಿಷಯ \ ವ್ಯಕ್ತಿ ನಮಗೆ ಅಡ್ಡಿಯಾಗುತ್ತಾರೆ. ಹೆಚ್ಚಾಗಿ ರಾಜಕಾರಣಿಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದವರು ಈ ತೆರನ ಮಾತಿನ ವಂಚನೆಯನ್ನು ಮಾಡುತ್ತಾರೆ. ಏಕೆಂದರೆ ತಮಗೆ ಬೇಕಾದುದೆಲ್ಲವನ್ನೂ ಅವರಿಂದ ಪಡೆದುಕೊಳ್ಳಬೇಕೆಂಬ ಹಪಾಹಪಿ ಜನರದ್ದು. ಅವರಿಗೂ ಒಂದು ಕ್ಷೇತ್ರದ, ಕಾರ್ಯದ, ವ್ಯಕ್ತಿ ಸಾಮರ್ಥ್ಯದ ಮಿತಿ ಇದೆ ಎನ್ನುವುದನ್ನು ಯಾರೂ ಭಾವಿಸುವುದಿಲ್ಲ. ವಾಸ್ತವಿಕ ವಿಚಾರವನ್ನು ತಿಳಿಸಿ ಮಾತು ಕೊಡಲು ಒಪ್ಪದಿದ್ದರೆ ಜನರು ಆ ರಾಜಕೀಯ \ ಸಾರ್ವಜನಿಕ ವ್ಯಕ್ತಿಯನ್ನು ತಕ್ಷಣ ನಿರಾಕರಿಸುತ್ತಾರೆ. ಆದ್ದರಿಂದ ಹಾಗೆ ಮಾತುಕೊಟ್ಟು ಕದಿಯುವುದು ಬಹಳಷ್ಟು ಸಾರಿ ಆ ಕ್ಷೇತ್ರದಲ್ಲಿದ್ದವರಿಗೆ ಅನಿವಾರ್ಯ. ಕೊನೆಗೆ ಒಂದು ದಿನ ದೂರಿಸಿಕೊಳ್ಳುವುದು, ಮತ್ತೆ ಪ್ರಯೋಜನವನ್ನು ಜನರಿಂದ ಪಡೆಯಬೇಕೆಂದಾಗ ಅದಕ್ಕೆ ತಾತ್ಕಾಲಿಕ ಭತ್ಯೆಯನ್ನು [ Tips ] ಕೊಡುವುದು ರಾಜಕಾರಣಿಗಳಿಗೆ \ ಸಾರ್ವಜನಿಕ ವ್ಯಕ್ತಿಗಳಿಗೆ ರೂಢಿಸಿಕೊಂಡ ಅಭ್ಯಾಸ. ಹಲವು ಬಾರಿ, ಎಲ್ಲರಿಗೂ ಸರಿಯಾಗಿ ಇರುತ್ತೇನೆ ಎನ್ನುವ ' ಸಂಭಾವಿತರು ' ಈ ರೀತಿಯ ಮಾತಿನ ವಂಚನೆಯನ್ನು ಮಾಡುತ್ತಾರೆ. ಏಕೆಂದರೆ ಯಾರಿಗೂ ನಿಷ್ಟುರವಾಗಿ ತಾನು ಇರುವುದಿಲ್ಲ ಎನ್ನುವುದು ಅವರ ಕನಸು. ಆದರೆ ಮತ್ತೊಂದು ದಿನ ವಾಸ್ತವತೆಯ ಅರಿವಾಗಿ ಅಂಥವರು ಎಲ್ಲರಿಗೂ ಗುಟ್ಟಾಗಿ ಬೇಡದವರಾಗಿರುತ್ತಾರೆ. ಒಂದು ಕುಟುಂಬದಲ್ಲಿಯೂ -- ಹೆಚ್ಚಾಗಿ ಅವಿಭಕ್ತ ಕುಟುಂಬ --- ಯಜಮಾನನಾದವನು ಕುಟುಂಬದ ಸದಸ್ಯರಿಗೆ ಈ ರೀತಿಯ ಮಾತಿನ ವಂಚನೆಯನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಅದು ತನ್ನ ಅಣ್ಣ ತಮ್ಮಂದಿರಿಗೂ ಇರಬಹುದು, ಮಕ್ಕಳಿಗೂ ಇರಬಹುದು, ಕೊನೆಗೆ ತನ್ನ ಹೆಂಡತಿಗೂ ಇರಬಹುದು. ಏಕೆಂದರೆ ಇಲ್ಲಿಯೂ ಹಾಗೆ. ಸದಸ್ಯರು ಆ ಕುಟುಂಬದ ಶಕ್ತಿಗೆ ಮೀರಿದ ಅನೇಕ ಪ್ರಯೋಜನವನ್ನು ಆಗಾಗ್ಯೆ ಕೇಳುತ್ತಿರುತ್ತಾರೆ. ಯಾವುದೇ ಕ್ಷೇತ್ರದಲ್ಲಿ, ಯಾವುದೇ ವ್ಯಕ್ತಿ ಇಂಥಹ ಮಾತಿನ ವಂಚನೆಯನ್ನು ಬಹಳಷ್ಟು ಸಾರಿ ಮಾಡುತ್ತಲೇ ಇರುತ್ತಾನೆ. ಕೆಲವು ಅನಿವಾರ್ಯವಾಗಿ ವಂಚನೆ . ಮತ್ತೆ ಕೆಲವು ವಂಚನೆಗಾಗಿ ವಂಚನೆ. ತಾರೀಖು :28 -11- 2018

Thursday 22 November 2018

#### ಹಾಸ್ಯಪ್ರಜ್ಞೆ ####


~~~~ ಎಂ. ಗಣಪತಿ ಕಾನುಗೋಡು.

ಬದುಕಿನ ಅಗತ್ಯಗಳಲ್ಲಿ ಹಾಸ್ಯಪ್ರಜ್ನೆಯೂ ಒಂದು. ಹಾಸ್ಯ ಮನುಷ್ಯನ ಮಾನಸಿಕ ದುಗುಡಗಳನ್ನು ದೂರ ಸರಿಸುತ್ತದೆ. ಆದರೆ ಆ ಹಾಸ್ಯ ವ್ಯಂಗ್ಯವಾಗಿರಬಾರದು. ಇನ್ನೊಬ್ಬರಿಗೆ ನೋವನ್ನು ತರುವಂತಿರಬಾರದು.
ಕೆಲವರಿಗೆ ಹಾಸ್ಯ ಪ್ರಜ್ಞೆ ಚೆನ್ನಾಗಿರುತ್ತದೆ. ಹಾಸ್ಯ ಮಾಡುವುದೂ ಒಂದು ಕಲೆ. ಆ ಕಲೆ ಕೆಲವರಲ್ಲಿ ಮಾತ್ರ ಇರುತ್ತದೆ. ಇನ್ನು ಕೆಲವರಿಗೆ ಹಾಸ್ಯ ಅರ್ಥವಾಗುತ್ತದೆ,ಅದನ್ನು ಅನುಭವಿಸಿ ಖುಷಿಯಾಗುತ್ತಾರೆ. ಆದರೆ ಅವರಿಗೆ ಹಾಸ್ಯ ಮಾಡುವ ಚಾಕಚಕ್ಯತೆ ಇರುವುದಿಲ್ಲ. ಮಾತಿನಲ್ಲಿ ಜಡಕಿಲ್ಲದೆ. ವ್ಯಂಗ್ಯವಿಲ್ಲದೆ, ಇನ್ನೊಬ್ಬರ ಮನಸ್ಸಿಗೆ ಸುಲಭವಾಗಿ ನಾಟುವ ಹಾಗೆ ಮೋಡಿ ಹರಿಸಿ ನಗಿಸಬಲ್ಲ ಶಕ್ತಿ ಕೆಲವರಿಗೆ ಮಾತ್ರ ಇರುತ್ತದೆ.
ಇನ್ನು ಕೆಲವರಿಗೆ ಹಾಸ್ಯಪ್ರಜ್ನೆಯೇ ಇರುವುದಿಲ್ಲ. ಅಂಥವರಿಗೆ ಹಾಸ್ಯ ಅರ್ಥವಾಗುವುದೂ ಇಲ್ಲ. ಹಾಸ್ಯದ ಹೊಯಿಲನ್ನು ಹರಿಸಲು ಹೇಗೂ ಬರುವುದಿಲ್ಲ. ಆದರೆ ಮಾತನ್ನು ಅಪಾರ್ಥ ಮಾಡಿಕೊಂಡು ಮತ್ತೊಬ್ಬರು ಮಾಡುವ ಹಾಸ್ಯದಿಂದ ಅಂಥವರು ಮುನಿಸಿಕೊಳ್ಳುವುದು, ತಪ್ಪಾಗಿ ಭಾವಿಸುವುದೂ ಇದೆ. ಕೆಲವೊಮ್ಮೆ ಜಗಳಕ್ಕೆ ತಿರುಗುವುದೂ ಇದೆ.
ಹಾಸ್ಯದ ಪ್ರವೃತ್ತಿ ಸ್ವಲ್ಪ ಕಷ್ಟವೇ. ಏಕೆಂದರೆ ಕೆಲವರಿಗೆ ಅದು ಅರ್ಥವಾಗುವುದಿಲ್ಲ ಎಂದಾದರೆ , ಅರ್ಥವಾಗುವ ಇನ್ನು ಕೆಲವರಿಗೆ ಆ ಹೊತ್ತಿಗೆ ಯಾವುದೋ ಕಾರಣದಿಂದ ಮನಸ್ಸು ಕೆಟ್ಟಿರುತ್ತದೆ. ಅಂಥಹ ಸನ್ನಿವೇಶಗಳಲ್ಲಿ ಹಾಸ್ಯದ ಚಟಾಕಿ ಹಾರಿಸುವವನು ಎದುರು ವ್ಯಕ್ತಿಯಿಂದ ಬೈಸಿಕೊಳ್ಳುವ ಸಾಧ್ಯತೆ ಹೆಚ್ಚು.
ಹಾಸ್ಯ ಮಾಡುವ ಪ್ರವೃತ್ತಿ ಇರುವವರು ಎದುರಿನ ಮಂದಿ ತಿರುಗಿ ಸಣ್ಣ ಮಾತನ್ನಾಡಿದರೆ ಬೇಸರಿಸಬಾರದು. ಹಾಗೆ ಬೇಸರ ಮಾಡಿಕೊಳ್ಳುವುದಾದರೆ ಹಾಸ್ಯ ಮಾಡಿ ಮತ್ತೊಬ್ಬರಿಗೆ ಸಂತೋಷವನ್ನು ದೊರಕಿಸಿಕೊಡುವ ಜನ ಇಲ್ಲವಾಗುತ್ತಾರೆ.