Monday 6 November 2017

@@@ ರಾಮಾ ನಿನಗೆ ಎಲ್ಲರೂ ಸಮಾನರೇ ಅಲ್ಲವೇ ?. @@@


[ ಅಕ್ಬರ ಮತ್ತು ಬೀರಬಲ್ಲನ ಕಥೆಗಳು ]
~~~ ಎಂ. ಗಣಪತಿ ಕಾನುಗೋಡು.
ಅಕ್ಕಸಾಲಿಯೊಬ್ಬ ತನ್ನ ಮಗನಿಗೆ ತಮ್ಮ ಕಸುಬನ್ನು ಹೇಳಿಕೊಡುವ ಮೊದಲು ಅದರ ಮೂಲ ಗುಟ್ಟನ್ನು ಹೇಳಿಕೊಟ್ಟಿದ್ದ. ಯಾರೇ ಬಂಗಾರದ ಒಡವೆಯನ್ನು ಮಾಡಿಸಲು ತಮ್ಮ ಹತ್ತಿರ ಬಂದರೂ ಅದರಲ್ಲಿ ಸ್ವಲ್ಪ ಬಂಗಾರವನ್ನು ಕದಿಯಲೇಬೇಕು. ಇದು ವೃತ್ತಿ ಧರ್ಮ ಎಂದು ಹೇಳಿಕೊಟ್ಟಿದ್ದ. ಅವನ ಪ್ರಕಾರ ಇದು ಆ ಕಸುಬಿನ ಮೂಲಗುಟ್ಟು.
ತನಗೆ ವಯಸ್ಸಾಗಿ ಮಗನಿಗೆ ಅಂಗಡಿಯ ದಂಧೆಯನ್ನು ವಹಿಸಿಕೊಟ್ಟಿದ್ದ. ಆದರೂ ಮೇಲು ಹುಶಾರಿಗಾಗಿ ಅಂಗಡಿಯ ಮೂಲೆಯಲ್ಲಿ ಕುಳಿತುಕೊಂಡು ಮಗನ ವಹಿವಾಟನ್ನು ಗಮನಿಸುತ್ತಿದ್ದ. ತನ್ನ ಮಗ ಯಾರದ್ದೇ ಕೆಲಸಕ್ಕೆ ಅವರಿಂದ ಬಂಗಾರ ಪಡೆದು ಕೆಲಸ ಶುರುಮಾಡಿದ ಕೂಡಲೇ " ರಾಮ ರಾಮಾ ನಿನ್ನ ಕೆಲಸವನ್ನು ಮಾಡು " ಎಂದು ಮಗನಿಗೆ ಬಂಗಾರವನ್ನು ಹೊಡೆದುಕೊಳ್ಳುವ ನೆನಪನ್ನು ಸಾಂಕೇತಿಕವಾಗಿ ನೆನಪು ಮಾಡಿಕೊಡುತ್ತಿದ್ದ.
ಒಂದು ದಿನ ಅವನ ಮಗಳೇ ಒಡವೆ ಮಾಡಿಸಲಿಕ್ಕಾಗಿ ಅವನಲ್ಲಿಗೆ ಗಂಡನ ಮನೆಯಿಂದ ಬಂಗಾರವನ್ನು ತಂದು ಕೊಟ್ಟಳು. ತನ್ನ ತಮ್ಮ ತನಗೆ ಯಾವುದೇ ವಂಚನೆ ಇಲ್ಲದೆ ಕೆಲಸ ಮಾಡಿಕೊಡುತ್ತಾನೆ ಎನ್ನುವುದು ಅವಳ ನಂಬಿಕೆ. ತನ್ನ ಬಂಗಾರವನ್ನು ತಮ್ಮನಿಗೆ ಕೊಟ್ಟು ಕೆಲಸವನ್ನು ನೋಡುತ್ತಾ ಎದುರಿಗೇ ಕುಳಿತುಕೊಂಡಿದ್ದಳು. ಅಕ್ಕನ ಬಂಗಾರವನ್ನು ಬೆಂಕಿಗೆ ಹಾಕಿ ಕರಗಿಸಲಿಕ್ಕೆ ಮಗ ಅಕ್ಕಸಾಲಿ ಪ್ರಾರಂಭಿಸಿದ.
ಮೂಲೆಯಲ್ಲಿ ಕುಳಿತಿರುವ ತಂದೆಯ ಎಂದಿನ ಮಾತು ಪ್ರಾರಂಭವಾಯಿತು. " ರಾಮ ರಾಮಾ ನಿನ್ನ ಕೆಲಸವನ್ನು ಮಾಡು. ರಾಮಾ ನಿನಗೆ ಎಲ್ಲರೂ ಸಮಾನರೇ ಅಲ್ಲವೇ ? " ಎಂದು ಹೇಳಿದ. ಹೀಗೆ ಬಹಳ ಹೊತ್ತಾಯಿತು. ತನ್ನ ಮಾತನ್ನು ಮಗ ಗಮನಿಸಿದನೋ ಇಲ್ಲವೋ ಎಂದು ತಂದೆಯು ಪದೇ ಪದೇ ಅದೇ ಮಾತನ್ನು ಹೇಳತೊಡಗಿದ. ಆಗ ಮಗನಿಗೆ ಸಿಟ್ಟು ಬಂದು ಹೇಳಿಯೇಬಿಟ್ಟ.
" ಅಪ್ಪಾ, ಯಾಕೆ ಸುಮ್ಮನೆ ರಾಮ ರಾಮಾ ಎಂದು ಬಡಿದುಕೊಳ್ಳುತ್ತೀ. ರಾಮ ಲಂಕೆಯನ್ನು ಸುಲಿಗೆಮಾಡಿ ಬಹಳ ಸಮಯ ಆಯಿತು " ಎಂದು ಸಂಕೇತದ ಉತ್ತರವನ್ನು ಕೊಟ್ಟ.
.....................................................................................................
ನನ್ನ ಅನಿಸಿಕೆ : ' ಅಕ್ಕನ ಬಂಗಾರವಾದರೂ ಅಕ್ಕಸಾಲಿ ಅಕ್ಕಿಯಷ್ಟು ಬಂಗಾರವನ್ನು ಹೊಡೆಯುತ್ತಾನೆ ' ಎಂಬುದು ಹಳೆಯ ಗಾದೆ. ಇದರ ಅರ್ಥ ಯಾವುದೇ ವ್ಯವಹಾರಸ್ಥನೂ ಯಾರಿಂದಲಾದರೂ ತನ್ನ ಲಾಭವನ್ನು ಪಡೆಯದೇ ಇರುವುದಿಲ್ಲ ಎನ್ನುವ ವಾಸ್ತವಿಕ ಸತ್ಯ. ಯಾವುದೇ ಉದ್ಯೋಗದಲ್ಲಿಯೂ ಯಾರ ದಾಕ್ಷಿಣ್ಯಕ್ಕೆ ಒಳಗಾಗದೆ ಹಾಗಂತ ಅವರ ಮನಸ್ಸಿಗೆ ನೋವಾಗದಂತೆ ತನ್ನ ಪ್ರಯೋಜನವನ್ನು ಉಳಿಸಿಕೊಳ್ಳಬೇಕು, ಹೀಗೆ ತನ್ನ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು, ಅಂಥಹ ವೃತ್ತಿ ನೈಪುಣ್ಯತೆಯನ್ನು ಹೊಂದಿರಬೇಕು ಎನ್ನುವುದು ಈ ಕಥೆಯ ಸಂದೇಶ.
ತಾರೀಖು : 5 - 11 - 2015

ಯೋಗ ಪಟು ಕುಮಾರ ಚಂದನ್ K. R


ಕುಮಾರ ಚಂದನ್ K. R. ನಮ್ಮ ಊರಿನ ಯೋಗ ಚೆನ್ನಿಗ, ಕೀರ್ತಿಮುಕುಟ , 16 ವರ್ಷದ, PUC ಅಭ್ಯಾಸ ಮಾಡುತ್ತಿರುವ ಬಾಲಕ. ನಮ್ಮ ಊರಿನ ಮತ್ತೋರ್ವ ಯೋಗ ಪಟು ಸಂಧ್ಯಾ ಎಂ.ಎಸ್. ಇವಳ ಯೋಗಾಸನ ಹವ್ಯಾಸದ ಜೊತೆಗಾರ. ಶ್ರೀ ರಾಘವೇಂದ್ರ ಮತ್ತು ಶ್ರೀಮತಿ ವಿಜಯಲಕ್ಷ್ಮಿ ಇವರ ಹೆಮ್ಮೆಯ ಪುತ್ರ.

ರಾಜ್ಯದ ಮತ್ತು ಅಂತರ ರಾಜ್ಯದ ಹಲವಾರು ಕಡೆಗಳಲ್ಲಿ ಯೋಗದ ವಿವಿಧ ಪ್ರಬೇಧಗಳನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡಿದ್ದಾನೆ. 2016 ಸಾಲಿನಲ್ಲಿ ಅಂದರೆ ಕಳೆದ ವರ್ಷ S G F I [ School Game Federation of India ] ಎನ್ನುವ ರಾಷ್ಟ್ರ ಮಟ್ಟದ ಸಂಸ್ಥೆಯು ನಡೆಸಿದ ಮತ್ತು Yoga Federation of India ಎನ್ನುವ ಮತ್ತೊಂದು ರಾಷ್ಟ್ರ ಮಟ್ಟದ ಸಂಸ್ಥೆಯು ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಭಾಗವಹಿಸಿ ಅವಾರ್ಡನ್ನು ಪಡೆದಿರುತ್ತಾನೆ.

ಯೋಗಾಸನದಲ್ಲಿ ಹಲವಾರು ಬಗೆಗಳಿವೆ. ಎಲ್ಲವೂ ದಿನ ನಿತ್ಯ ಅಭ್ಯಾಸ ಮತ್ತು ಸಾಧನೆಯಿಂದಲೇ ದಕ್ಕಬೇಕಾದದ್ದು. ಇನ್ನು ಕೆಲವೊಂದು ಬಹಳ ಕಷ್ಟದ್ದು -- ಸಾಮಾನ್ಯ ಸಾಧನೆಗೆ ದಕ್ಕದ್ದಲ್ಲ. ಶರೀರವನ್ನು ಸಮತೋಲನದಲ್ಲಿಡಬೇಕಾದದ್ದೂ ಒಂದು ಇದರ ಸರ್ಕಸ್. ಮುಕ್ತಹಸ್ತ, ವೃಶ್ಚಿಕ , ಮುಕ್ತಹಸ್ತ-ಪದ್ಮ-ವೃಶ್ಚಿಕ , ಮುಕ್ತಹಸ್ತ- ದ್ವಿಪಾದ- ವಾಮದೇವ, ಮುಕ್ತಹಸ್ತ- ದೀಪ-ವೃಶ್ಚಿಕ, [ ಇವು ಮೂರು ಆಸನಗಳ ಸಂಯೋಗ ], ತ್ರಿಪುರಾಸನ, ತ್ರಿವಿಕ್ರಮಾಸನ, ನಟರಾಜ ಆಸನ, ಪಕ್ಷಾಸನ, ಗಂಡಬೇರುಂಡ, ಶಕುನ ಹೀಗೆ ಯೋಗದ ಹಲವಾರು ಆಸನಗಳಲ್ಲಿ ಪ್ರಸಿದ್ಧನಾಗಿದ್ದಾನೆ. ಈ ಪ್ರತಿಯೊಂದು ಆಸನಕ್ಕೂ ಅದರದ್ದೇ ಆದ ಅರ್ಥ, ಮನುಷ್ಯನ ಮಾನಸಿಕ ಮತ್ತು ದೈಹಿಕ ಚಿಕಿತ್ಸೆಯ ಉಪಯೋಗ , ಸೂಕ್ಷ್ಮ ತಂತ್ರಗಳು ಇವೆ.

'Yoga Federation of India '  ಸಂಸ್ಥೆಯವರು ತಾರೀಖು 24 -11 -2017 ರಂದು  ದೆಹಲಿಯಲ್ಲಿ ನಡೆಸಿದ  2017 ನೇ ಸಾಲಿನ  ಯೋಗಾಸನಾ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾನೆ. ಅದರಲ್ಲಿ ವಿಜೇತನಾಗಿ ಅಂತರ ರಾಷ್ಟ್ರದ ಯೋಗಾಸನಾ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಈ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲೂ ವಿಜೇತನಾಗಿ ಏಸಿಯನ್  ಯೋಗ ಫೆಡರೇಶನ್ ( ASIAN  YOGA  FEDERATION ) ನಡೆಸುವ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಇದರಲ್ಲಿ ವಿಜೇತನಾದರೆ  ಎಸಿಯನ್ ಕಪ್ ದೊರೆಯುತ್ತದೆ ಅನ್ನುವುದು ವಿಶೇಷ ಸಂಗತಿ.

S G F I ಸಂಸ್ಥೆಯು  ತಾರೀಖು 11 - 11  - 2017  ರಂದು  ಛತ್ತೀಸಗಡದಲ್ಲಿ ನಡೆಸಿದ  2017  ಸಾಲಿನ  ರಾಷ್ಟ್ರ ಮಟ್ಟದ ಯೋಗಾಸನಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುತ್ತಾನೆ. ಅಲ್ಲದೆ  ಅದರಲ್ಲಿಯೂ ವಿಜೇತನಾಗಿರುತ್ತಾನೆ ಎನ್ನುವುದು ಮತ್ತೊಂದು ಹೆಮ್ಮೆಯ ಸಂಗತಿ.

ಕಳೆದ ಜೂನ್ ತಿಂಗಳಿನಲ್ಲಿ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯದ ಆಯುಶ್ ಇಲಾಖೆಯವರು ಮೈಸೂರಿನಲ್ಲಿ ನಡೆಸಿದ 2017 -- 18 ಸಾಲಿನ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ.
ಹೊರ ರಾಜ್ಯಗಳಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಎರಡು ಸಲ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾನೆ.

ಕಳೆದ ವರ್ಷ ಅಂತರ ರಾಷ್ಟ್ರ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದರೂ 10 ನೆ ತರಗತಿಯ ಅಭ್ಯಾಸದ ಒತ್ತಡ ಇದ್ದ ಕಾರಣ ಆ ಅವಕಾಶವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ಎಲ್ಲಾ ಸ್ಪರ್ಧೆಗಳಲ್ಲಿ ಆತ ಭಾಗವಸಿದ್ದುದರ ವಿಶೇಷವೆಂದರೆ ಆ ಸ್ಪರ್ಧೆ ಕೇವಲ 14 ವರುಷದಿಂದ 17 ವರ್ಷದ ಮಕ್ಕಳಿಗೆ ಮಾತ್ರ ಎನ್ನುವುದು. ಈ ಚಿಕ್ಕ ವಯಸ್ಸಿನಲ್ಲಿ ಇಂಥಹ ಸಾಧನೆ ಅವನದು ಎನ್ನುವುದು ಪ್ರಶಂಸನಾರ್ಹ.

ಯೋಗಾಸನದ ಪ್ರತಿಭೆಯನ್ನು ಪರಿಗಣಿಸಿ ಅವನನ್ನು ಅನೇಕ ಕಡೆ ಸನ್ಮಾನಿಸಲಾಗಿದೆ..
ಈ ತನಕ ಚಿನ್ನದ ಪದಕ 16, ಬೆಳ್ಳಿಯ ಪದಕ 6, ಕಂಚಿನ ಪದಕ 2 ಸೇರಿ ಒಟ್ಟು 24 ವಿಶೇಷ ಪದಕಗಳು, ನೂರಾರು ಪ್ರಶಸ್ತಿ ಪತ್ರಗಳನ್ನು ಕುಮಾರ ಚಂದನ್ ಯೋಗಾಸನದ ಹೆಗ್ಗಳಿಕೆಯಲ್ಲಿ ಬಾಚಿಕೊಂಡಿದ್ದಾನೆ. ಪಡೆದ ಸ್ಮರಣಿಕೆಗಳು ನೂರಾರು, ಸನ್ಮಾನ ಪತ್ರಗಳು ಹಲವಾರು. ಇವೆಲ್ಲದರ ಜೊತೆಗೆ 'ಯೋಗ ರತ್ನ' ಎನ್ನುವ ಬಿರುದು ಕೂಡಾ ಅವನ ಸಾಹಸಕ್ಕೆ ಸಂದಿದೆ.

ಇಂದು ಸಾಗರದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಗರ ಕನ್ನಡ ಸಾಹಿತ್ಯ ಪರಿಷತ್ತಿನವರು ಮತ್ತು ನಮ್ಮ ಊರಿನಲ್ಲಿ ತ್ರಿವೇಣಿ ಮಹಿಳಾ ಮಂಡಳಿಯವರು ಕುಮಾರಿ ಸಂಧ್ಯಾ ಮತ್ತು ಕುಮಾರ ಚಂದನ್ ಅವರನ್ನು ಯೋಗಾಸನ ಪ್ರತಿಭೆಗಳೆಂದು ಗುರುತಿಸಿ ಸನ್ಮಾನಿಸಿದ್ದಾರೆ.


ಯೋಗಾಸನದಲ್ಲಿ ಇಷ್ಟೆಲ್ಲಾ ಹೆಗ್ಗಳಿಕೆಯನ್ನು ಹೊಂದಿದ ಕುಮಾರ ಚಂದನ್ K. R. ನಮ್ಮ ಊರಿನ ಮಗ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.


ತಾರೀಖು : 12 - 05 - 2017.
ಕನ್ನಡ ರಾಜ್ಯೋತ್ಸವದ ದಿನ.






ಯೋಗಾಸನ ಪಟು ಎಂ. ಎಸ. ಸಂಧ್ಯಾ

ನಮ್ಮ ಊರಿನ ಹದಿ ಹರೆಯದ ಚೆಲುವೆ , ಕೀರ್ತಿ ಪತಾಕೆ, ಯೋಗಾಸನ ಪಟು ಎಂ. ಎಸ. ಸಂಧ್ಯಾ. ಶ್ರೀ ಶ್ರೀಧರಮೂರ್ತಿ ಮತ್ತು ಶ್ರೀಮತಿ ಸುಧಾ ಇವರ ಹೆಮ್ಮೆಯ ಪುತ್ರಿ.
ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಈಗ ಅಂತರ ರಾಷ್ಟ್ರ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಪ್ರಾಥಮಿಕ 9 ನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ 14 ವರ್ಷದ ಹಸುಳೆ. ನಾಲ್ಕು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು ಅಭ್ಯಾಸಕ್ಕೂ ಮೀರಿ ವಿವಿಧ ಯೋಗ ಪ್ರಭೇಧಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದ ಹೊರಗೆ ಹಲವಾರು ಕಡೆ ಪ್ರದರ್ಶಿಸಿದ ವಿಶೇಷ ಪ್ರತಿಭೆ. .
ರಾಷ್ಟ್ರ ಮಟ್ಟಕ್ಕೆ ಮತ್ತು ಹೊರ ರಾಜ್ಯ ವಲಯದಲ್ಲಿ ಕರ್ನಾಟಕವನ್ನು ಮೂರು ಸಾರಿ ಪ್ರತಿನಿಧಿಸಿ ಎಲ್ಲಾ ಕಡೆಯಿಂದಲೂ ಬಂಗಾರದ ಪದಕ, ಪ್ರಶಸ್ತಿ ಪತ್ರಗಳನ್ನು ಕರ್ನಾಟಕ ರಾಜ್ಯಕ್ಕೆ, ನಮ್ಮ ಊರಿಗೆ ಬಾಚಿ ತಂದ ಹೆಮ್ಮೆಯ ಬಾಲೆ.
ಯೋಗ ಫೆಡರೇಶನ್ ಆಫ್ ಇಂಡಿಯಾ ಮಟ್ಟದ ಯೋಗ ಸ್ಪರ್ಧೆ ಮತ್ತು ರಾಜ್ಯ ಮಟ್ಟದ ಫೆಡರೇಶನ್ ಯೋಗ ಸ್ಪರ್ಧೆಯಲ್ಲಿ ಉನ್ನತ ಸ್ಥಾನವನ್ನು ಗಳಿಸಿಕೊಂಡಿದ್ದಾಳೆ.
ಕಳೆದ ವರ್ಷ ನವದೆಹಲಿಯಲ್ಲಿ ನಡೆದ ಭಾರತ ರಾಷ್ಟ್ರ ಮಟ್ಟದ S G F T competition ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ವೈಯುಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಪಡೆದ ಏಕೈಕ ವಿದ್ಯಾರ್ಥಿನಿ.
ಪ್ರಸ್ತುತ ಏಶಿಯನ್ ಫೆಡರೇಶನ್ ಕಪ್ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಸುತ್ತಿದ್ದಾಳೆ.
ಒಂದು ದಿಕ್ಕಿನಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿನಿಯಾಗಿದ್ದರೆ ಮತ್ತೊಂದು ದಿಕ್ಕಿನಲ್ಲಿ ಕೆಲವು ಮಕ್ಕಳಿಗೆ ಯೋಗವನ್ನು ಕಲಿಸುತ್ತಿರುವ ಯೋಗ ಗುರುವಾಗಿದ್ದಾಳೆ.
ಸುಮಾರು 65 ಬಂಗಾರದ ಪದಕಗಳು, 2 ಬೆಳ್ಳಿ, 2 ಕಂಚಿನ ಪದಕಗಳು, ನೂರಾರು ಸ್ಮರಣಿಕೆಗಳು ಅವಳ ಮಡಿಲಿಗೆ, ಅಲ್ಲ, ನಮ್ಮ ಊರಿನ ಮಡಿಲಿಗೆ ಅವಳಿಂದಾಗಿ ಸೇರಿವೆ.
ಯೋಗರತ್ನ, ಯೋಗದ ಧ್ರುವತಾರೆ, ಚಿನ್ನದ ಹುಡುಗಿ, ಮಲೆನಾಡು ಯೋಗ ಕುಮಾರಿ, ಯೋಗ ಕುಮಾರಿ, ಎರಡು ಸಾರಿ ಚಾಂಪಿಯನ್ ಆಫ್ ಚಾಂಪಿಯನ್ ಬಿರುದು ಇವು ಆಕೆ ಪಡೆದ ಬಿರುದಾವಳಿಗಳು ಮತ್ತು ಪ್ರಶಸ್ತಿಗಳು.
ಹಲವಾರು ಸನ್ಮಾನಗಳು, ಸನ್ಮಾನ ಪತ್ರಗಳು ಅವಳಿಗೆ ಸಂದಿವೆ. ಇಂದು ಸಂಜೆ ನಮ್ಮ ಊರಿನ ತ್ರಿವೇಣಿ ಮಹಿಳಾಮಂಡಳಿಯವರು ಆಕೆಯನ್ನು ಗ್ರಾಮಸ್ಥರ ಎದುರು ಸನ್ಮಾನಿಸಿ ತಮಗೆ ಗೌರವ ತಂದುಕೊಂಡಿದ್ದಾರೆ. ಈ ಹೆಮ್ಮೆಯ ಪುತ್ರಿ ಎಂ. ಎಸ್. ಸಂಧ್ಯಾ ನಮ್ಮ ಊರಿನ ಮಗಳು ಎನ್ನುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಇವಳ ಜೊತೆಗೆ ಅದೇ ಮಟ್ಟದಲ್ಲಿ ಯೋಗ ಪ್ರದರ್ಶನದಲ್ಲಿ ನಮ್ಮ ಊರಿನ ಮತ್ತೊಂದು ಪ್ರತಿಭೆ ಕುಮಾರ ಚಂದನ ಕೆ. ಆರ್.[ 16 ವರ್ಷ ]. ಅದರ ಮಾಹಿತಿಯನ್ನು ಪ್ರತ್ಯೇಕ ತಿಳಿಸಲಾಗುತ್ತದೆ.
( 1- November - 2017 - M Ganapathi Kangod)