Wednesday, 28 November 2018

### ಮಾತಿನ ವಂಚನೆ ###

ನಾವು ಅನೇಕರಿಗೆ ಮಾತನ್ನು ಕೊಡುತ್ತೇವೆ. ಆದರೆ ಅದನ್ನು ಈಡೇರಿಸಿಕೊಡಲು ಅಥವ ಆ ಮಾತಿಗೆ ಮುಟ್ಟಿಕೊಳ್ಳಲು ಆಗುತ್ತದೆಯೋ ಇಲ್ಲವೋ ಎಂಬುದನ್ನು ಮಾತು ಕೊಡುವ ಮುಂಚೆಯೇ ಸಾಕಷ್ಟು ಯೋಚಿಸಿಕೊಳ್ಳಬೇಕು ಎನ್ನುವುದು ಬದುಕಿನ ತತ್ವ. ಈ ತತ್ವವನ್ನು ಬಹಳಷ್ಟು ಸಾರಿ, ಗೊತ್ತಿದ್ದರೂ, ನಾವು ತಪ್ಪುತ್ತೇವೆ. ಯಾವುದೋ ಸನ್ನಿವೇಶದಲ್ಲಿ ನಮ್ಮೆದುರು ತಾಗುವ ವ್ಯಕ್ತಿ ನಮ್ಮಿಂದ ಈಡೇರಿಸಿಕೊಡಲಾಗದ ಮಾತನ್ನು ಕೇಳುತ್ತಾನೆ. ಅದಕ್ಕೆ ಒಪ್ಪದಿದ್ದರೆ ಆ ಸನ್ನಿವೇಶಕ್ಕೆ ಆತನಿಂದ ನಮಗೆ ಸಿಗುವ ಪ್ರಯೋಜನ ಅಥವಾ ಆತ ಆ ಹೊತ್ತಿಗೆ ನಮಗೆ ಮಾಡಿಕೊಡಲೇಬೇಕಾದ ಕೆಲಸವನ್ನು ಮಾಡಿಕೊಡುವುದಿಲ್ಲ. ಆ ಮುಜುಗರಕ್ಕಾಗಿ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಯಾವುದೋ ಮಾತನ್ನು ಎದುರು ವ್ಯಕ್ತಿಗೆ ಕೊಡುತ್ತೇವೆ. ಒಮ್ಮೆ ಆ ಮಾತನ್ನು ನಡೆಸಿಕೊಡಬೇಕೆಂಬ ಹಂಬಲ ನಮಗಿದ್ದರೂ ಮತ್ತಾವುದೋ ವಿಷಯ \ ವ್ಯಕ್ತಿ ನಮಗೆ ಅಡ್ಡಿಯಾಗುತ್ತಾರೆ. ಹೆಚ್ಚಾಗಿ ರಾಜಕಾರಣಿಗಳು, ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದವರು ಈ ತೆರನ ಮಾತಿನ ವಂಚನೆಯನ್ನು ಮಾಡುತ್ತಾರೆ. ಏಕೆಂದರೆ ತಮಗೆ ಬೇಕಾದುದೆಲ್ಲವನ್ನೂ ಅವರಿಂದ ಪಡೆದುಕೊಳ್ಳಬೇಕೆಂಬ ಹಪಾಹಪಿ ಜನರದ್ದು. ಅವರಿಗೂ ಒಂದು ಕ್ಷೇತ್ರದ, ಕಾರ್ಯದ, ವ್ಯಕ್ತಿ ಸಾಮರ್ಥ್ಯದ ಮಿತಿ ಇದೆ ಎನ್ನುವುದನ್ನು ಯಾರೂ ಭಾವಿಸುವುದಿಲ್ಲ. ವಾಸ್ತವಿಕ ವಿಚಾರವನ್ನು ತಿಳಿಸಿ ಮಾತು ಕೊಡಲು ಒಪ್ಪದಿದ್ದರೆ ಜನರು ಆ ರಾಜಕೀಯ \ ಸಾರ್ವಜನಿಕ ವ್ಯಕ್ತಿಯನ್ನು ತಕ್ಷಣ ನಿರಾಕರಿಸುತ್ತಾರೆ. ಆದ್ದರಿಂದ ಹಾಗೆ ಮಾತುಕೊಟ್ಟು ಕದಿಯುವುದು ಬಹಳಷ್ಟು ಸಾರಿ ಆ ಕ್ಷೇತ್ರದಲ್ಲಿದ್ದವರಿಗೆ ಅನಿವಾರ್ಯ. ಕೊನೆಗೆ ಒಂದು ದಿನ ದೂರಿಸಿಕೊಳ್ಳುವುದು, ಮತ್ತೆ ಪ್ರಯೋಜನವನ್ನು ಜನರಿಂದ ಪಡೆಯಬೇಕೆಂದಾಗ ಅದಕ್ಕೆ ತಾತ್ಕಾಲಿಕ ಭತ್ಯೆಯನ್ನು [ Tips ] ಕೊಡುವುದು ರಾಜಕಾರಣಿಗಳಿಗೆ \ ಸಾರ್ವಜನಿಕ ವ್ಯಕ್ತಿಗಳಿಗೆ ರೂಢಿಸಿಕೊಂಡ ಅಭ್ಯಾಸ. ಹಲವು ಬಾರಿ, ಎಲ್ಲರಿಗೂ ಸರಿಯಾಗಿ ಇರುತ್ತೇನೆ ಎನ್ನುವ ' ಸಂಭಾವಿತರು ' ಈ ರೀತಿಯ ಮಾತಿನ ವಂಚನೆಯನ್ನು ಮಾಡುತ್ತಾರೆ. ಏಕೆಂದರೆ ಯಾರಿಗೂ ನಿಷ್ಟುರವಾಗಿ ತಾನು ಇರುವುದಿಲ್ಲ ಎನ್ನುವುದು ಅವರ ಕನಸು. ಆದರೆ ಮತ್ತೊಂದು ದಿನ ವಾಸ್ತವತೆಯ ಅರಿವಾಗಿ ಅಂಥವರು ಎಲ್ಲರಿಗೂ ಗುಟ್ಟಾಗಿ ಬೇಡದವರಾಗಿರುತ್ತಾರೆ. ಒಂದು ಕುಟುಂಬದಲ್ಲಿಯೂ -- ಹೆಚ್ಚಾಗಿ ಅವಿಭಕ್ತ ಕುಟುಂಬ --- ಯಜಮಾನನಾದವನು ಕುಟುಂಬದ ಸದಸ್ಯರಿಗೆ ಈ ರೀತಿಯ ಮಾತಿನ ವಂಚನೆಯನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಅದು ತನ್ನ ಅಣ್ಣ ತಮ್ಮಂದಿರಿಗೂ ಇರಬಹುದು, ಮಕ್ಕಳಿಗೂ ಇರಬಹುದು, ಕೊನೆಗೆ ತನ್ನ ಹೆಂಡತಿಗೂ ಇರಬಹುದು. ಏಕೆಂದರೆ ಇಲ್ಲಿಯೂ ಹಾಗೆ. ಸದಸ್ಯರು ಆ ಕುಟುಂಬದ ಶಕ್ತಿಗೆ ಮೀರಿದ ಅನೇಕ ಪ್ರಯೋಜನವನ್ನು ಆಗಾಗ್ಯೆ ಕೇಳುತ್ತಿರುತ್ತಾರೆ. ಯಾವುದೇ ಕ್ಷೇತ್ರದಲ್ಲಿ, ಯಾವುದೇ ವ್ಯಕ್ತಿ ಇಂಥಹ ಮಾತಿನ ವಂಚನೆಯನ್ನು ಬಹಳಷ್ಟು ಸಾರಿ ಮಾಡುತ್ತಲೇ ಇರುತ್ತಾನೆ. ಕೆಲವು ಅನಿವಾರ್ಯವಾಗಿ ವಂಚನೆ . ಮತ್ತೆ ಕೆಲವು ವಂಚನೆಗಾಗಿ ವಂಚನೆ. ತಾರೀಖು :28 -11- 2018

Thursday, 22 November 2018

#### ಹಾಸ್ಯಪ್ರಜ್ಞೆ ####


~~~~ ಎಂ. ಗಣಪತಿ ಕಾನುಗೋಡು.

ಬದುಕಿನ ಅಗತ್ಯಗಳಲ್ಲಿ ಹಾಸ್ಯಪ್ರಜ್ನೆಯೂ ಒಂದು. ಹಾಸ್ಯ ಮನುಷ್ಯನ ಮಾನಸಿಕ ದುಗುಡಗಳನ್ನು ದೂರ ಸರಿಸುತ್ತದೆ. ಆದರೆ ಆ ಹಾಸ್ಯ ವ್ಯಂಗ್ಯವಾಗಿರಬಾರದು. ಇನ್ನೊಬ್ಬರಿಗೆ ನೋವನ್ನು ತರುವಂತಿರಬಾರದು.
ಕೆಲವರಿಗೆ ಹಾಸ್ಯ ಪ್ರಜ್ಞೆ ಚೆನ್ನಾಗಿರುತ್ತದೆ. ಹಾಸ್ಯ ಮಾಡುವುದೂ ಒಂದು ಕಲೆ. ಆ ಕಲೆ ಕೆಲವರಲ್ಲಿ ಮಾತ್ರ ಇರುತ್ತದೆ. ಇನ್ನು ಕೆಲವರಿಗೆ ಹಾಸ್ಯ ಅರ್ಥವಾಗುತ್ತದೆ,ಅದನ್ನು ಅನುಭವಿಸಿ ಖುಷಿಯಾಗುತ್ತಾರೆ. ಆದರೆ ಅವರಿಗೆ ಹಾಸ್ಯ ಮಾಡುವ ಚಾಕಚಕ್ಯತೆ ಇರುವುದಿಲ್ಲ. ಮಾತಿನಲ್ಲಿ ಜಡಕಿಲ್ಲದೆ. ವ್ಯಂಗ್ಯವಿಲ್ಲದೆ, ಇನ್ನೊಬ್ಬರ ಮನಸ್ಸಿಗೆ ಸುಲಭವಾಗಿ ನಾಟುವ ಹಾಗೆ ಮೋಡಿ ಹರಿಸಿ ನಗಿಸಬಲ್ಲ ಶಕ್ತಿ ಕೆಲವರಿಗೆ ಮಾತ್ರ ಇರುತ್ತದೆ.
ಇನ್ನು ಕೆಲವರಿಗೆ ಹಾಸ್ಯಪ್ರಜ್ನೆಯೇ ಇರುವುದಿಲ್ಲ. ಅಂಥವರಿಗೆ ಹಾಸ್ಯ ಅರ್ಥವಾಗುವುದೂ ಇಲ್ಲ. ಹಾಸ್ಯದ ಹೊಯಿಲನ್ನು ಹರಿಸಲು ಹೇಗೂ ಬರುವುದಿಲ್ಲ. ಆದರೆ ಮಾತನ್ನು ಅಪಾರ್ಥ ಮಾಡಿಕೊಂಡು ಮತ್ತೊಬ್ಬರು ಮಾಡುವ ಹಾಸ್ಯದಿಂದ ಅಂಥವರು ಮುನಿಸಿಕೊಳ್ಳುವುದು, ತಪ್ಪಾಗಿ ಭಾವಿಸುವುದೂ ಇದೆ. ಕೆಲವೊಮ್ಮೆ ಜಗಳಕ್ಕೆ ತಿರುಗುವುದೂ ಇದೆ.
ಹಾಸ್ಯದ ಪ್ರವೃತ್ತಿ ಸ್ವಲ್ಪ ಕಷ್ಟವೇ. ಏಕೆಂದರೆ ಕೆಲವರಿಗೆ ಅದು ಅರ್ಥವಾಗುವುದಿಲ್ಲ ಎಂದಾದರೆ , ಅರ್ಥವಾಗುವ ಇನ್ನು ಕೆಲವರಿಗೆ ಆ ಹೊತ್ತಿಗೆ ಯಾವುದೋ ಕಾರಣದಿಂದ ಮನಸ್ಸು ಕೆಟ್ಟಿರುತ್ತದೆ. ಅಂಥಹ ಸನ್ನಿವೇಶಗಳಲ್ಲಿ ಹಾಸ್ಯದ ಚಟಾಕಿ ಹಾರಿಸುವವನು ಎದುರು ವ್ಯಕ್ತಿಯಿಂದ ಬೈಸಿಕೊಳ್ಳುವ ಸಾಧ್ಯತೆ ಹೆಚ್ಚು.
ಹಾಸ್ಯ ಮಾಡುವ ಪ್ರವೃತ್ತಿ ಇರುವವರು ಎದುರಿನ ಮಂದಿ ತಿರುಗಿ ಸಣ್ಣ ಮಾತನ್ನಾಡಿದರೆ ಬೇಸರಿಸಬಾರದು. ಹಾಗೆ ಬೇಸರ ಮಾಡಿಕೊಳ್ಳುವುದಾದರೆ ಹಾಸ್ಯ ಮಾಡಿ ಮತ್ತೊಬ್ಬರಿಗೆ ಸಂತೋಷವನ್ನು ದೊರಕಿಸಿಕೊಡುವ ಜನ ಇಲ್ಲವಾಗುತ್ತಾರೆ.

Monday, 27 August 2018

" ಒಂದು ಸುಖವನ್ನು ಬಯಸಿದರೆ ಹಲವು ಸಮಸ್ಯೆಗಳನ್ನು ಆಹ್ವಾನಿಸಿದಂತೆ ".

" ಒಂದು ಸುಖವನ್ನು ಬಯಸಿದರೆ ಹಲವು ಸಮಸ್ಯೆಗಳನ್ನು ಆಹ್ವಾನಿಸಿದಂತೆ ".

ಉದಾಹರಣೆ:
ಮದುವೆಯಾಗಿ ಸುಖವಾಗಿ ಇರಬೇಕು ಎನ್ನುವ ಹಂಬಲವನ್ನು ಬೆನ್ನಟ್ಟುವ ಸಮಸ್ಯೆಗಳು :
[ ಈ ಮುಂದೆ ಹೇಳಲ್ಪಡುವ ವಿಷಯಗಳನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು. ಇವು ಸರ್ವೆಸಾಮಾನ್ಯ ವಿಚಾರಗಳಾದುದರಿಂದ ಕೆಲವು ವಿಚಾರಗಳು ಕೆಲವರಿಗೆ ಅನ್ವಯಿಸಬಹುದಾದರೂ ಅದನ್ನು ತಮಗೆಂದು ದಯೆಯಿಟ್ಟು ತೆಗೆದುಕೊಳ್ಳಬಾರದು. ]
1 . ಸರಿಯಾದ ನೆಂಟಸ್ಥನದ ಮತ್ತು ಚೆನ್ನಾಗಿರುವ ಕನ್ಯೆಯ ಜಾತಕ ಬರುವುದಿಲ್ಲ.
2 . ಬಂದದ್ದು ಜಾತಕವೇ ತಾಳೆಯಾಗುವುದಿಲ್ಲ. ಒಂದಕ್ಕೆ ಮಕ್ಕಳಾಗುವುದಿಲ್ಲ, ಇನ್ನೊಂದಕ್ಕೆ ಗಂಡನ ಜೊತೆ ಜಗಳವಾಡುವವಳು, ಇನ್ನೊಂದು ಶಷ್ಟಾಷ್ಟಕ, ದಾಂಪತ್ಯ ದೀರ್ಘವಾಗಿ ಮುಂದುವರೆಯುವುದಿಲ್ಲ, ಇನ್ನೊಂದಕ್ಕೆ ಕುಜದೋಷ ಜಾಸ್ತಿ ಇದೆ, ಗಂಡ ಸಾಯುವ ಯೋಗ, ಇನ್ನೊಂದು ಚ್ಯಾರಿತ್ರ್ಯ ಸರಿಯಿಲ್ಲ, ಇನ್ನೊಂದು ಆಶ್ಲೇಷ ನಕ್ಷತ್ರ, ಅತ್ತೆಗೆ ಕೇಡು. ಹೀಗೆ ಒಂದಲ್ಲ ಒಂದು ಕಾರಣದಿಂದ ಜೋಯಿಸರು ಬಂದ, ಮೆಚ್ಚಿಕೊಂಡ ಜಾತಕಗಳನ್ನು ಬದಿಗಿಡುತ್ತಾರೆ.
3 . ಅಂತೂ ಜಾತಕ ತಾಳೆಯಾಗಿ, ಸಂಬಂಧ ಒಪ್ಪಿ ಹುಡುಗ - ಹುಡುಗಿ ನೋಡಿಯಾಯಿತು. ಈಗಿನ ಕಾಲದ ರೂಢಿಯಂತೆ ಅವರಿಬ್ಬರ ಇಂಟರ್ವ್ಯೂದಲ್ಲಿ ಯಾವುದೋ ವಿಚಾರಕ್ಕೆ ಹುಡುಗ / ಹುಡುಗಿ ಸೇರಲಿಲ್ಲ,ಮದುವೆ ಮುರಿದು ಹೋಯಿತು.
4 . ಮದುವೆ ನಿಕ್ಕಿಯಾಯಿತು. ಮುಹೂರ್ತದ ದಿನ ಅನಿರೀಕ್ಷಿತ ಅಶೌಚ ಬಂದು ಮದುವೆ ಮುಂದೆ ಹೋಯಿತು.
5 .ಮದುವೆಯಾಯಿತು. ಗಂಡ-ಹೆಂಡತಿ ಕೈ ಕೈ ಹುರಿ ಹೊಸೆದುಕೊಂಡು ಜಾತ್ರೆ, ಹನಿಮೂನ್ ಎಂತೆಲ್ಲಾ ತಿರುಗಿದ್ದೂ ಆಯಿತು. ಸರಿ. ಮೂರೂ ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಬಂತು. ಡೈವೋರ್ಸೂ ಆಗಿಹೋಯಿತು.
6 . ಇಲ್ಲ. ಕೆಲವು ದಾಂಪತ್ಯಕ್ಕೆ ಸಂಬಂಧಿಕರು ಯಾರೋ ಸಕಾಲದಲ್ಲಿ ಸರಿಯಾಗಿ ಬೆಸುಗೆ ಹಾಕಿದರು. ಗಂಡ-ಹೆಂಡತಿ ಹೇಗೋ ಸರಿಯಾಗಿ ಹೊಂದಿಕೊಂಡರು. ಮಕ್ಕಳೆ ಆಗಲಿಲ್ಲ.
7 . ಹರಕೆಯಿಂದಲೋ,ಚಿಕಿತ್ಸೆಯಿಂದಲೋ ಹೆಂಡತಿ ಬಸುರಿಯಾದಳು. ಮಧ್ಯದಲ್ಲಿಯೆ ಗರ್ಭಪಾತವಾಗಿ ಹೋಯಿತು.
8 .ಮತ್ತೇನೋ ಪ್ರಯತ್ನದಿಂದ ಗರ್ಭಿಣಿಯಾಗಿದ್ದಾಗ ಬಹಳ ನಿಗಾ ಇಟ್ಟು ಮಗುವಾಯಿತು. ಅದು ಬುದ್ಧಿಮಾಂದ್ಯ. ಸ್ಕಾನಿಂಗ್ ನಲ್ಲಿ ಹೇಳಲೆ ಇಲ್ಲ.
9 .ಸರಿಯಾದ ಮಗು ಆಯಿತು. ತಾಯಿಗೆ ಸೂತಕಸನ್ನಿ.
10 . ಎಲ್ಲ ಸರಿಯಾಯಿತು. ಮಗುವನ್ನು ಚೆನ್ನಾಗಿ ಬೆಳೆಸಲಾಯಿತು .
11 . ಇಷ್ಟು ಹೊತ್ತಿಗೆ ಅತ್ತೆ ಸೊಸೆಗೆ ಸರಿ ಬರಲಿಲ್ಲ. ಅಪ್ಪ -ಅಮ್ಮಂದಿರನ್ನು ಬಿಟ್ಟು ಬೇರೆ ಇರುವುದು ಅನಿವಾರ್ಯವಾಯಿತು. ಮದುವೆಯಾಗಿದ್ದರಿಂದ ಅಪ್ಪ ಮತ್ತು ಮಗನಿಗೆ ಸಮಸ್ಯೆ ಒಂದೇ ತರಹದ್ದು ಆಯಿತು.
12 .ಮಗನ ಸಂಸಾರದಲ್ಲಿ ಅವನ ಮಗ \ ಮಗಳು ಸರಿಯಾದ ವಿದ್ಯಾಭ್ಯಾಸವಿಲ್ಲದೆ ಪೋಕರಿಯಾದ \ ಳು.
13 .ಮಗ \ ಮಗಳು ಪೋಕರಿಯಾಗದೆ ಬೆಳೆದು ಸರಿಯಾದ ವಿದ್ಯಾಭ್ಯಾಸ ಮಾಡಿಕೊಂಡು ಮದುವೆ ವಯಸ್ಸಿಗೆ ಬಂದರು. ಅಷ್ಟೊತ್ತಿಗೆ ಮಗನಾದರೆ ಯಾವುದೋ ಒಂದು ವಿಜಾತಿಯ ಹುಡುಗಿಯನ್ನು ಗಂಟು ಹಾಕಿಕೊಂಡ. ಮಗಳಾದರೆ ವಿಜಾತಿಯ ಒಬ್ಬ ಬಸ್ ಕಂಡಕ್ಟರನನ್ನು ಕೂಡಿಕೊಂಡು ಓಡಿ ಹೋದಳು.
14 . ಮಗ ಸರಿಯಾದ ದಾರಿಯಲ್ಲೇ ಹೋಗಿ ದುಡಿಯುವ ಹಂತಕ್ಕೆ ಬಂದ. ಸಂಸಾರದ ನೆರವಿಗೆ ಬರುವ ಯೋಗ್ಯತೆ ಗಳಿಸಿಕೊಂಡ. ಹೆಂಡತಿ ಮಗನನ್ನು ಒಳಹಾಕಿಕೊಂಡು ಗಂಡನ ಜೊತೆ ಜಗಳವಾಡಲು ಪ್ರಾರಂಭಿಸಿದಳು. ಅಂತೂ ಗಂಡನಿಂದ ಸಂಸಾರದ ಯಜಮಾನಿಕೆಯನ್ನು ಬಿಡಿಸಿ ಮಗನಿಗೆ ಕೊಡಿಸಿ ತನ್ನ ಗಂಡನನ್ನು ಮೂಲೆಗೆ ಕೂರಿಸಿದಳು.
15 .ತಾಯಿ ತನ್ನ ಅಧ್ವರ್ಯದಲ್ಲಿಯೇ ಮಗನಿಗೆ ಮದುವೆ ಮಾಡಿದಳು. ಆರು ತಿಂಗಳಲ್ಲಿಯೇ ಅತ್ತೆ -ಸೊಸೆಗೆ ಸರಿಬಾರದೆ ಸೊಸೆಯು ಅತ್ತೆಯನ್ನು ಬದಿಗೆ ಸರಿಸಿದಳು.
16 .ಇಲ್ಲಿ ಮಗನ ಸಂಸಾರವೇ ಬೇರೆಯಾಯಿತು. ಮಗನ ಅಮ್ಮನಿಗೆ ಮಗನೂ ಇಲ್ಲ.ಅವಳಿಗೆ ಗಂಡ ಹೇಗೂ ಮುಂಚೆಯೇ ಕೈ ತಪ್ಪಿ ಹೋಗಿದ್ದಾನೆ.
17 .ಮಗನ ಅಪ್ಪನಿಗೆ ತನ್ನ ಹೆಂಡತಿಯೇ ಕೈ ತಪ್ಪಿ ಹೋದಮೇಲೆ ಮಗ-ಸೊಸೆಯ ಪರಿಚಯ ಇರುವುದಾದರೂ ಹೇಗೆ?
18 .ಹೆಂಡತಿ ತವರ ಮನೆಯಲ್ಲಿ ಪಾತ್ರೆ ತೊಳೆಯಲಿಕ್ಕೆ ಒಂದು ಜನವಾಗಿದೆ. ಗಂಡ ಶ್ರೀಮಂತ ನೆಂಟರೊಬ್ಬರ ಮನೆಯಲ್ಲಿ ಮನೆ ಕಾಯಲಿಕ್ಕೆ ಒಂದು ಜನವಾಗಿದೆ.

ನೋಡಿದಿರಾ.... !. ಒಂದು ಮದುವೆಯಾಗುವ ಸುಖವನ್ನು ಬಯಸಿದ್ದರ ಹಿಂದೆ ಇರಬಹುದಾದ ಹಲವಾರು ----- ಸದ್ಯ ಹದಿನೆಂಟು ---- ಸಮಸ್ಯೆಗಳು. ಇನ್ನೂ ಉಪ ಸಮಸ್ಯೆಗಳು ಬಹಳ ಇವೆ.
ಬದುಕೇ ಹಾಗೆ. ಒಂದು ಸುಖವನ್ನು ಬಯಸಲು ಹೊರಟರೆ ಹಲವಾರು ಸಮಸ್ಯೆಗಳನ್ನು ಅನುಭವಿಸಲು ನಾವು ಸಿದ್ಧರಿರಬೇಕು. 
------------------
ಎಂ. ಗಣಪತಿ. ಕಾನುಗೋಡು.
 P. O. B. ಮಂಚಾಲೆ
 ಸಾಗರ --- ಶಿವಮೊಗ್ಗ
Pin: 577431
. ಮೊ. 9481968771
Date : 26 August 2014

Thursday, 31 May 2018

#### ಸಂಸಾರ ####ಸಂಸಾರವೆಂದರೆ ಗಂಡ ಹೆಂಡತಿ, ತಾಯಿ ತಂದೆ, ಅಣ್ಣ ತಮ್ಮ, ಮಕ್ಕಳು ಮರಿ, ನೆಂಟರು ಇಷ್ಟರು.ಜೊತೆಗೆ ಖಾಯಂ ಕೆಲಸದವರು ಕೂಡಾ . ಇದು ನಮ್ಮ ಪಾರಂಪರಿಕ ಅವಿಭಕ್ತ ಕುಟುಂಬ. ಅದು ಈಗ ಕೇವಲ ಗಂಡ ಹೆಂಡತಿ , ಒಂದು ಮಗು ಹೀಗೆ ಮೂವರು ಸದಸ್ಯರನ್ನೊಳಗೊಂಡ ಅಣುಕುಟುಂಬವಾಗುತ್ತಲಿದೆ [ Nuclear Family ].

ಸಂಸಾರವೇ ಸಮಾಜಕ್ಕೆ ತಳಹದಿ. ಈಗಿನ ಕಾಲದ ಆರ್ಥಿಕ ಸ್ಥಿತಿಗಳಿಂದಲೂ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿಶಯವಾದ ಪ್ರಾಶಸ್ತ ಕೊಡಲು ಪ್ರಾರಂಭಿಸಿರುವುದರಿಂದಲೂ ಸಂಸಾರದಲ್ಲಿ ವಿಶ್ವಾಸ , ವಿಧೇಯತೆ, ಒಗ್ಗಟ್ಟು,ಮುಂತಾದ ಸ್ನೇಹಗುಣಗಳು ಕಡಿಮೆ ಆಗಿವೆ. ಸ್ನೇಹ, ವಿಶ್ವಾಸ ಇಲ್ಲದ ಸಂಸಾರ ಒಂದೋ ಮರಳುಕಾಡು ಅದಿಲ್ಲದಿದ್ದರೆ ಕುರುಕ್ಷೇತ್ರ. ಅಣ್ಣ ತಮ್ಮಂದಿರ , ಅಪ್ಪ ಮಕ್ಕಳ ನಡುವೆಯ ಮಾತಿರಲಿ ಗಂಡ ಹೆಂಡತಿಯ ನಡುವೆಯೇ ಹೊಡೆದಾಟ. ಪರಿಣಾಮ ಸಂಸಾರ ಶಿಥಿಲ . ಮಕ್ಕಳು ಮೂರಾಬಟ್ಟೆ. ಅಜ್ಜ ಅಜ್ಜಿಯರಿದ್ದರೆ ನಾಯಿಪಾಡು.

ಜೊತೆಯಲ್ಲಿ ಇರಬೇಕಾದವರು ಅಹಿತವಾದರೆ ಅದು ಕಾಲಿನಲ್ಲಿ ಮುಳ್ಳು ಚುಚ್ಚಿ ಮುರಿದುಕೊಂಡಂತೆ. ತೆಗೆದರೆ ಘಾಯ., ತೆಗೆಯದಿದ್ದರೆ ನೋವು. ಸಂಸಾರದ ನಡೆ ಕುಂಟು. ಏಕೆ ?. ಇಲ್ಲಿ ನಡೆಯುವವರು , ನಡೆಸುವವರು ಹೊಂದಾಣಿಕೆಯ ಕೊರತೆಯ ಗೊಂದಲದಲ್ಲಿ ಹೆಳವರಾಗಿದ್ದಾರೆ, ಮೂಕರಾಗಿದ್ದಾರೆ, ಕಿವುಡರಾಗಿದ್ದಾರೆ. ಮುರಿದ ಮುಳ್ಳಿನ ಪರಿಣಾಮ ಸಂಸಾರದ ಯಾವ ಕೆಲಸದಲ್ಲಿಯೂ ಎಲ್ಲರಿಗೂ ನೋವಿನ ಮೇಲೆ ಜ್ಞಾನ, ಹಿಂದೇಟು.

ಈ ನೋವು ಇಲ್ಲದಿರಬೇಕಾದರೆ ಸಂಸಾರದಲ್ಲಿ ಪ್ರತಿಯೊಬ್ಬನಲ್ಲಿಯೂ ಅತಿ ಸ್ವಾತಂತ್ರ್ಯದ [ ಸ್ವೇಚ್ಚೆ ] ಮನೋಭಾವ ತಗ್ಗಬೇಕು. ಜೊತೆಗಿರುವವರ ಹಿತಕ್ಕಾಗಿ ತಮ್ಮ ಸುಖದ ಕಾಳಜಿಯನ್ನು ಸ್ವಲ್ಪ ಮಟ್ಟಿಗೆ ಪ್ರತಿಯೊಬ್ಬರೂ ಕಡಿಮೆ ಮಾಡದ ಹೊರತು ಒಟ್ಟಾರೆ ಯಾರಿಗೂ ಸುಖ ಸಿಕ್ಕದು.

ಸಂಸಾರದಲ್ಲಿ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ ಇದ್ದರೆ ಕ್ಷಮೆ, ತ್ಯಾಗ ಇವೆರಡೂ ತನ್ನಿಂದ ತಾನೇ ಬಂದು ಅಲ್ಲಿ ಸೇರಿಕೊಳ್ಳುತ್ತದೆ. ಈ ಗುಣಗಳೆಲ್ಲಾ ನಮ್ಮಲ್ಲಿ ತನ್ನಿಂದ ತಾನೇ ಹುಟ್ಟುವ ಕೇಂದ್ರವೆಂದರೆ ಮನೆ. ಅದು ಸಂಸಾರ.

[ ಆಧಾರ : ವಚನ ಭಾರತದ ಪೀಠಿಕೆಯಲ್ಲಿ ಮಾನ್ಯ ಎ. ಆರ್. ಕೃಷ್ಣಶಾಸ್ತ್ರಿಯವರ ಮಾತು ---- ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ತಮ್ಮ ಕೃತಿ ' ಸಪ್ತಪದಿ ಸಂದೇಶ ' ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದು ]


M Ganapathi Kangod

Friday, 11 May 2018

ಒಂದು ವಿಶಿಷ್ಟ ಕಾರ್ಯಕ್ರಮಇಂದು ಸಾಗರದ ಗೆಣಸಿನಕುಣಿ ಶ್ರೀ ನಾಗಭೂಷಣ ಹೆಗಡೆಯವರ ಮಗನ ಮದುವೆಯ ವಧೂಪ್ರವೇಶದ ಸತ್ಕಾರ ಸಂಭ್ರಮ. ಅದರಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಸುಮಾರು ನಾಲ್ಕು ಅಡಿ ಉದ್ದದ ವಿಶಿಷ್ಟವಾದ ಕೊಳಲನ್ನು ನುಡಿಸಿ ಅದರ ಸೂಕ್ಷ್ಮತೆಯ ಸೂಚನೆಯಿಂದಾಗಿ ಮತ್ತೊಬ್ಬರು ಬಚ್ಚಿಟ್ಟುಕೊಂಡ ಯಾವುದೇ ವಸ್ತುವನ್ನು ಪತ್ತೆ ಹಚ್ಚುವ ಒಂದು ಜಾನಪದ ಕಲೆ. ಕಲಾವಂತಿಕೆಯ ಚಾತುರ್ಯ. ಒಬ್ಬನ ಕಣ್ಣನ್ನು ಕಟ್ಟಿ ಅವನಿಗೆ ಗೊತ್ತಾಗದಂತೆ ಒಂದು ವಸ್ತುವನ್ನು ಮತ್ತೊಬ್ಬ ವ್ಯಕ್ತಿಯ ಹತ್ತಿರ ಬಚ್ಚಿಟ್ಟಿರುತ್ತಾರೆ. ಕಣ್ಣು ಬಿಚ್ಚಿದ ನಂತರ ಕೊಳಲಿನ ನುಡಿಯ ಸೂಚನೆ ಮೇರೆಗೆ ಅವನು ಅದನ್ನು ಪತ್ತೆ ಹಚ್ಚಿ ತರುತ್ತಾನೆ. ಆ ವಸ್ತು ಬಚ್ಚಿಟ್ಟಿರುವ ಜಾಗವನ್ನು ಕೊಳಲನ್ನು ನುಡಿಸುವವನಿಗೆ ಗೊತ್ತಾಗುವಂತೆ -- ಹುಡುಕುವವನಿಗೆ ಗೊತ್ತಾಗದಂತೆ -- ವ್ಯವಸ್ಥೆ ಮಾಡಲಾಗುತ್ತದೆ. ಏಕೆಂದರೆ ಆ ವಸ್ತು ಎಲ್ಲಿ ಇದೆ ಎಂಬುದನ್ನು ತನ್ನ ಕೊಳಲಿನ ಶ್ರುತಿಯಿಂದಲೇ ಹುಡುಕುವವನಿಗೆ ನುಡಿಸುವವನು ಸೂಚಿಸುತ್ತಾನೆ. ಇಲ್ಲಿ ವಿಶೇಷ ಎಂದರೆ ಕೊಳಲನ್ನು ನುಡಿಸುವವನು ಹುಡುಕುವವನಿಗೆ ತಿಳಿಯುವಂತೆ ಕೊಳಲಿನ ಶ್ರುತಿಯ ಸೂಚನಾ ನುಡಿಯ ಕೌಶಲ್ಯವನ್ನು ಮೆರೆಯಬೇಕು. ಹುಡುಕುವವನು ನುಡಿಸುವವನ ಸೂಚನೆಯನ್ನು ಅರ್ಥಮಾಡಿಕೊಳ್ಳುವ ಕೌಶಲ್ಯವನ್ನು ಹೊಂದಿರಬೇಕು. ತಿಮ್ಮ ನಾಗೂಗೌಡ. ಜಡ್ಡಿಗದ್ದೆ , ವಾನಳ್ಳಿ , ಶಿರಸಿ ತಾಲೂಕು ಇವರು ವಯಸ್ಸಾದ ಮುದುಕರು. ತಮ್ಮ ವಿಶಿಷ್ಟ ಕೊಳಲನ್ನು ನುಡಿಸುತ್ತಾರೆ. ಗಣಪತಿ ಗೌಡ ಎನ್ನುವವರು ಕೊಳಲ ನುಡಿಯ ಸೂಚನೆಯಂತೆ ವಸ್ತುವನ್ನು ಹುಡುಕಿ ತೆಗೆಯುತ್ತಾರೆ.

ಈ ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀ ನಾಗಭೂಷಣ ಹೆಗಡೆಯವರ ಸಂಬಂಧಿ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಶಿರಸಿ ದಂಪತಿಗಳು ಮಾಡಿರುತ್ತಾರೆ. ಅಪರೂಪದ ಜಾನಪದ ಕಲಾವಿದರನ್ನು ಸಾಗರದ ಜನತೆಗೆ ಪರಿಚಯಿಸಿದ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಮತ್ತು ಗಾಯತ್ರಿ ರಾಘವೇಂದ್ರ ಅವರಿಗೆ ಧನ್ಯವಾದಗಳು

https://www.facebook.com/mganapathi.kangod/videos/979174142250156/


ಶ್ರದ್ಧ ಮೇಧಾಮ್ ಯಶಃ ಪ್ರಜ್ಞಾಮ್.. ವಿದ್ಯಾ ಬುದ್ಧಿಮ್ ಶ್ರಿಯಂ ಬಲಂ ...


ಶ್ರದ್ಧೆ ಎಂದರೆ ಒಂದು ವಿಷಯವನ್ನು ತಿಳಿಯುವಲ್ಲಿ ಇರಬೇಕಾದ ಬದ್ಧತೆ. ಮೇಧಾ ಎಂದರೆ ತಿಳಿದುಕೊಂಡ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವಿಕೆ. ಪ್ರಜ್ಞಾ ಎಂದರೆ ಅರಿತು, ಮನಸ್ಸಿನಲ್ಲಿ ಇಟ್ಟುಕೊಂಡ ವಿಷಯವನ್ನು ತಕ್ಕ ಕಾಲದಲ್ಲಿ ಸರಿಯಾಗಿ ಬಳಸುವಿಕೆ. ಆದ್ದರಿಂದ ಶೃದ್ಧಾ, ಮೇಧಾ ಮತ್ತು ಪ್ರಜ್ಞಾ ಶಕ್ತಿ ಪ್ರತಿ ಮನುಷ್ಯನಿಗೆ ಅತಿ ಅಗತ್ಯ.

ನಾವು ಪ್ರತಿದಿನ ನಿತ್ಯೆ ಪೂಜೆಯ ಕೊನೆಯಲ್ಲಿ ಪುರುಷೋತ್ತಮ ನನ್ನ (ದೇವರನ್ನು) ಪ್ರಾರ್ಥಿಸುತ್ತೇವೆ ..

" ಶ್ರದ್ಧ ಮೇಧಾಮ್ ಯಶಃ ಪ್ರಜ್ಞಾಮ್.. ವಿದ್ಯಾ ಬುದ್ಧಿಮ್ ಶ್ರಿಯಂ ಬಲಂ ... ಆಯುಷ್ಯಮ್ ತೇಜ ಆರೋಗ್ಯಮ್ ದೇಹಿ ಮೇ ಪುರುಷೋತ್ತಮ .."

ಏನಂತೀರಿ ?ಕಂಕುಳಲ್ಲಿ ಮಗು ಇಟ್ಟುಕೊಂಡು ಬಾವಿಯಲ್ಲಿ ಮಗುವನ್ನು ಹುಡುಕಿದ್ದಳಂತೆ. ....... ಗಾದೆ.

ತನ್ನ ಸೊಂಟದ ಮೇಲೆ ಮಗುವನ್ನು ಇಟ್ಟುಕೊಂಡ ತಾಯಿ ಅದನ್ನು ಮರೆತು ಮಗುವನ್ನು ಹುಡುಕುತ್ತಾಳೆ. ಎಲ್ಲಿಯೂ ಸಿಗದೇ ಕೊನೆಗೆ ಬಾವಿಯಲ್ಲಿ ಒಮ್ಮೆ ಬಿದ್ದಿದೆಯಾ ಅಂತ ಹಣುಕುತ್ತಾಳೆ. ಬಾವಿಯ ತಿಳಿನೀರಿನಲ್ಲಿ ತನ್ನ ಸೊಂಟದ ಮೇಲೆ ಇರುವ ಮಗುವಿನ ಬಿಂಬ ಕಾಣುತ್ತದೆ. ಅದನ್ನು ಕಂಡು ಭ್ರಮೆಯಿಂದ ' ಅಯ್ಯೋ ನನ್ನ ಮಗು ಬಾವಿಯಲ್ಲಿ ಬಿದ್ದು ಬಿಟ್ಟಿದೆ ಎಂದು ಕೈಯೆತ್ತಿಬಿಡುತ್ತಾಳೆ. ಆಗ ಕಂಕುಳಲ್ಲಿ ಇದ್ದ ಮಗು ನಿಜವಾಗಿಯೂ ಬಾವಿಗೆ ಬಿದ್ದುಬಿಡುತ್ತದೆ. ಇದರ ಇಂಗಿತಾರ್ಥ ಅಂದರೆ ನಾವು ನಮ್ಮ ಆಸೆಯನ್ನು ತೀರಿಸುವ ಸಾಧನವನ್ನು ನಮ್ಮ ತೊತೆಗೆ ಇಟ್ಟುಕೊಂಡು ಮತ್ತೆಲ್ಲೋ ಅರಸಲು ಹೋಗಿ ಅದನ್ನು ಕಳೆದುಕೊಂಡು ಬಿಡುತ್ತೇವೆ.

Saturday, 21 April 2018

#### ಸಲಹೆ, ಭೋಧನೆಯ ಮಾತುಗಳು ಹೇಗೆ, ಎಲ್ಲಿ, ಯಾರಿಗೆ ? ####

~~~~ ಎಂ. ಗಣಪತಿ ಕಾನುಗೋಡು. ಯಾವುದೇ ಮಾತನ್ನಾದರೂ ಅದನ್ನು ಕೇಳುವವನ ಶಕ್ತಿ, ತಾಳ್ಮೆ ಮತ್ತು ಅವನ ಅಗತ್ಯವನ್ನು ಗ್ರಹಿಸಿ ಆಡಬೇಕಾಗುತ್ತದೆ. ಅದಿಲ್ಲದಿದ್ದರೆ ನಮ್ಮ ಆ ಮಾತು ವ್ಯರ್ಥ, ಕೆಲವೊಮ್ಮೆ ಅನರ್ಥಕ್ಕೂ ಎಡೆಮಾಡಿಕೊಡುತ್ತದೆ. ಅಪಹಾಸ್ಯಕ್ಕೆ ಗುರಿಯಾಗುತ್ತದೆ. ಸಮಯ , ಸಂದರ್ಭವನ್ನು ತಿಳಿಯದೆಯೇ ನಮ್ಮ ದೃಷ್ಟಿಯಲ್ಲಿ ಸರಿಯೆನಿಸಿದ ಮಾತುಗಳನ್ನು ಕೂಡಾ ಯೋಚಿಸಿ ಮಾತನಾಡಬೇಕಾಗುತ್ತದೆ. ಒಬ್ಬನಿಗೆ ತನ್ನದೇ ಕೆಲಸದ, ಸಮಸ್ಯೆಯ ಒತ್ತಡವಿದ್ದಾಗ ಇನ್ನೊಬ್ಬರ ಮಾತನ್ನು ಕೇಳುವಷ್ಟು ತಾಳ್ಮೆ ಇರುವುದಿಲ್ಲ. ಯಾವುದೋ ಒಂದು ನಿಲುವಿಗೆ ತಳಿಕೆ ಹಾಕೊಂಡವನಿಗೆ ಇನ್ನೊಬ್ಬರ ಮಾತನ್ನು ಅನುಸರಿಸುವ ಮನೋಭಾವ ಇರುವುದಿಲ್ಲ. ತಿಳಿವಳಿಕೆ ಕಡಿಮೆ ಇದ್ದವನಿಗೆ ಇನ್ನೊಬ್ಬರ ಮಾತನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಯೌವನದ ಮದ, ಅಲ್ಪಜ್ಞಾನದ ಮದ [ ಮೂರ್ಖತನ ] ], ಹಣ, ಅಧಿಕಾರದ ಮದ, ಸ್ವಪ್ರತಿಷ್ಠೆಯ ಮದ ಹೀಗೆ ಯಾವುದೇ ಮದ ಇದ್ದವನಿಗೆ ಸಲಹೆ, ಬೋಧನೆ, ಹಿತವಚನ ಎಲ್ಲವೂ ನಂಜಾಗಿ ವ್ಯತಿರಿಕ್ತವಾಗುತ್ತದೆ. ಯಾವುದೇ ವಿಚಾರಕ್ಕೂ ಕರಾರುವಾಕ್ಕಾಗಿ ಮಾತನಾಡಬೇಕೆಂಬುದು ತಾರ್ಕಿಕ ವಿಚಾರ ಹೌದು. ಆದರೆ ವಾಸ್ತವಿಕ ಜೀವನದಲ್ಲಿ ಅದು ವಿರೋಧಭಾವವಾಗುತ್ತದೆ. ಯಾವುದೇ ಸನ್ನಿವೇಶದಲ್ಲಿ, ಯಾವುದೇ ವ್ಯಕ್ತಿಗೆ ಅಥವಾ ಯಾವುದೇ ಘಟನೆಗೆ ಸಂಬಂಧ ಪಟ್ಟಂತೆ ಮಾತನಾಡಬೇಕಾದರೆ ಬಹಳ ಸೂಕ್ಷ್ಮ ದೃಷ್ಟಿ ಬೇಕು,. ಹಿಂದುಮುಂದಿನ ವಿಷಯಗಳ ಅರಿವು ಇರಬೇಕು. ಇದ್ದುದನ್ನು ಇದ್ದ ಹಾಗೆ ಮಾತನಾಡುವುದು ಸಲ್ಲದು. ಅನೇಕ ಸಂದರ್ಭಗಳಲ್ಲಿ ಮಾತೂ ಮೂಕವಾಗಬೇಕಾಗುತ್ತದೆ ತಾರೀಖು 20 -- 4 -- 2018

Sunday, 18 March 2018

###### ಚಾಂದ್ರಮಾನ ಯುಗಾದಿ ######


~~~~~ ಎಂ. ಗಣಪತಿ ಕಾನುಗೋಡು.
ನಮ್ಮಲ್ಲಿ ಹಬ್ಬದ ಆಚರಣೆಗೂ ಒಂದು ಅರ್ಥ ಇದೆ. ಮನುಷ್ಯನಿಗೆ ಬದುಕಿನಲ್ಲಿ ನಿತ್ಯ ಜೀವನದ ಒತ್ತಡದಲ್ಲಿ ಸಂತೋಷವನ್ನು ಕಾಣಲಿಕ್ಕಾಗಿ ಒಂದೊಂದು ದಿನವನ್ನು ನಿರ್ಣಯಿಸಿ ಆ ದಿನದಂದು ಒಂದೊಂದು ಹಬ್ಬವನ್ನು ಆಚರಿಸಲಾಗುತ್ತದೆ. ಒಂದು ಹಬ್ಬದ ಆಚರಣೆಯ ಮಿಥಿಗೂ ಒಂದು ಅರ್ಥ ಇದೆ. ಸಾಂಪ್ರದಾಯಿಕ , ಪೌರಾಣಿಕ ಹಿನ್ನೆಲೆ ಇದೆ. ಆ ದಿನದಂದು ನಾವು ನಮ್ಮ ಎಷ್ಟೇ ತೊಂದರೆ ಇದ್ದರೂ ಸಮಯವನ್ನು ಹೊಂದಿಸಿಕೊಂಡು ಸಂಭ್ರಮವನ್ನು ಆಚರಿಸುತ್ತೇವೆ. ಕೆಲವು ಹಬ್ಬಗಳಿಗಂತೂ ಇಂಥಾದ್ದೇ ಭಕ್ಷ್ಯ ಆಗಬೇಕೆಂಬ ರೂಢಿ ಬಂದಿದ್ದು ಇದೇ ಕಾರಣಕ್ಕಾಗಿ. ತೀರಾ ಬಡತನದ ಒಂದು ಕಾಲದಲ್ಲಿ ಸಾಲ ಮಾಡಿಯಾದರೂ ನಮ್ಮ ಹಿಂದಿನವರು ವಿಶೇಷ ಭಕ್ಷ್ಯವನ್ನು ತಿನ್ನುತ್ತಿದ್ದರು. ಇಂದು ನಮಗೆ ಅಂಥಹ ಬಡತನ ಇಲ್ಲ. ಆದರೆ ನಮಗೆ ಯಾವುದಕ್ಕೂ ಪುರುಸೊತ್ತೇ ಇರುವುದಿಲ್ಲ. ಅಂಥಹ ಆಚರಣೆಯಲ್ಲಿ ಯುಗಾದಿಯೂ ಒಂದು.
ಚೈತ್ರ ಶುದ್ಧ ಪಾಡ್ಯಮಿಯಂದು ಚಾಂದ್ರಮಾನ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಸೌರಮಾನ ಯುಗಾದಿ ಎನ್ನುವ ಮತ್ತೊಂದು ಆಚರಣೆ ಬೇರೆ ಇದೆ. ಅದನ್ನು ಮೇಷ ಮಾಸದ ಸಂಕ್ರಮಣದ ದಿನ ಆಚರಿಸಲಾಗುತ್ತದೆ. ನಮ್ಮಲ್ಲಿ ರೂಢಿಯಲ್ಲಿ ಇರುವುದು ಚಾಂದ್ರಮಾನ ಯುಗಾದಿ.
ಹಿಂದೂ ಸಂಪ್ರದಾಯದಲ್ಲಿ ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ರೋಮನ್ ಸಂಪ್ರದಾಯದ ಪ್ರಕಾರ ಜನವರಿಯ ಮೊದಲನೆಯ ದಿನವನ್ನು ಪಾಶ್ಚಿಮಾತ್ಯರು ಹೊಸ ವರ್ಷದ ದಿನವೆಂದು ಆಚರಿಸುತ್ತಾರೆ.
ಯುಗ ಎಂದರೆ ಇಲ್ಲಿ ವರ್ಷ ಎಂದು ಅರ್ಥೈಸಲಾಗಿದೆ. ಹೊಸ ವರ್ಷದ ಮೊದಲನೆಯ ದಿನವನ್ನು ಯುಗಾದಿ [ ಯುಗದ ಆದಿ ] ಎಂದು ಕರೆಯಲಾಗಿದೆ.
ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿಯನ್ನು ಆಚರಿಸುತ್ತಾರೆ. ಉತ್ತರ ಭಾರತದವರು ವಿಕ್ರಮ ಶಕದ ಆರಂಭದ ದಿನ ಅಂದರೆ ಕಾರ್ತಿಕ ಶುದ್ಧ ಪಾಡ್ಯಮಿಯಂದು ಯುಗಾದಿಯನ್ನು ಆಚರಿಸುತ್ತಾರೆ. ಹಿಂದೆ ದಕ್ಷಿಣ ಭಾರತದಲ್ಲಿ ಆಳುತ್ತಿದ್ದ ದೊರೆ ಶಾಲಿವಾಹನನು ತನ್ನ ವಿಜಯದ ಸಂಕೇತವಾಗಿ ಶಕೆ ಪ್ರಾರಂಭಿಸಿದುದೂ ಚೈತ್ರ ಶುದ್ಧ ಪಾಡ್ಯಮಿಯಂದು.
ಋತುಗಳ ರಾಜ ವಸಂತನು ಈ ದಿನದಂದು ತನ್ನ ಶುಭ ಪಾದಾರ್ಪಣ ಮಾಡುತ್ತಾನೆ. ಗಿಡಮರಗಳಿಂದ ಎಲೆಗಳನ್ನು ಉದುರಿಸಿದ ಶಿಶಿರ ಋತು ಹೋಗಿ ಹೊಸ ಚಿಗುರು ಎಲೆ, ಹೂಗಳಿಗೆ, ಕಾಯಿಗಳಿಗೆ ಕಾರಣವಾಗುವ ವಸಂತ ಋತು ಇಂದಿನಿಂದ ಪ್ರಾರಂಭ ಆಗುತ್ತದೆ.
ಯುಗಾದಿಯ ದಿನ ಮನೆಮಂದಿಯೆಲ್ಲಾ ಬೆಳಗಿನ ಜಾವವೇ ಅಭ್ಯಂಜನ ಮಾಡಬೇಕೆಂಬುದು ಎಂದಿನ ಸಂಪ್ರದಾಯ. ಇಂದು ಹೊಸ ಬಟ್ಟೆಯನ್ನು ಧರಿಸಬೇಕು. ಇಷ್ಟದೇವತಾ ಪೂಜೆಯನ್ನು ಮಾಡಿ ಬೇವು -- ಬೆಲ್ಲ ತಿಂದು ಸಿಹಿ ಊಟವನ್ನು ಮಾಡಬೇಕು. ದೇವಸ್ಥಾನಗಳಲ್ಲಿ, ಗುರುಮನೆಗಳಲ್ಲಿ ಉತ್ಸವ ವಿಶೇಷಗಳು ನಡೆದು ಪಂಚಾಗ ಶ್ರಾವಣ ಕಾರ್ಯಕ್ರಮವೂ ನಡೆಯುತ್ತದೆ. ಇಂದಿನ ದಿನ ಚಂದ್ರ ದರ್ಶನವನ್ನು ಮುಖ್ಯವಾಗಿ ಮಾಡಬೇಕು.
ಬೇವು -- ಬೆಲ್ಲದ ಸೇವನೆಗೆ ಒಂದು ಅರ್ಥ ಇದೆ. ಸಿಹಿ ಕಹಿಗಳು , ಸುಖ ದುಃಖಗಳನ್ನೂ ಸಮನಾಗಿ ನೋಡಿ ಪ್ರತಿಯೊಬ್ಬನೂ ಸಮದರ್ಶಿಯೂ, ಸ್ಥಿತಪ್ರಜ್ನನೂ ಆಗಬೇಕೆಂಬುದು ಇದರ ಸಂದೇಶ.
ತಾರೀಖು : 17 -- 3 -- 2018
ಯುಗಾದಿಯ ಮುನ್ನಾದಿನ.

Sunday, 11 February 2018

ಅಡಿಕೆ ಸುಗ್ಗಿ

ಮರದ ಮೇಲಿರುವ ಅಡಿಕೆಯ ಬೆಳೆ, ಅಡಿಕೆಯನ್ನು ಮರದಿಂದ ಕೊಯ್ದು ಕೆಳಗೆ ಇಳಿಸುವ ಬಗೆ, ತೋಟದಲ್ಲಿ ಕೊಯ್ಯುವಾಗ ಉದುರಿದ ಅಡಿಕೆಯನ್ನು ಆರಿಸುವುದು, ಅಡಿಕೆಯನ್ನು ಬೆತ್ತದ ಕಲ್ಲಿಯಲ್ಲಿ ಹೊತ್ತು ತೋಟದಿಂದ ಮನೆಗೆ ತರುವುದು, ತೋಟದಲ್ಲಿ ಅಡಿಕೆ ಸುಗ್ಗಿಯ ಕೂಲಿಕಾರರ ಚಹಾ ವಿಶ್ರಾಂತಿ, ಸಾಗರ ಸೀಮೆಯ ಪದ್ಧತಿ ಪ್ರಕಾರ ಅಡಿಕೆ ಗೊನೆಯನ್ನು ಜಜ್ಜಿ ಬೇರ್ಪಡಿಸಿ ಹಸಿರು ಅಡಿಕೆಯನ್ನು ಸುಲಿಯಲಿಕ್ಕೆ ರಾಶಿ \ ಉದಿ ಹಾಕುವುದು, ಮೆಟ್ಟುಗತ್ತಿ \ ಹಾಯಗತ್ತಿಯಿಂದ ಹಸಿರು ಅಡಿಕೆಯನ್ನು ಸುಲಿಯುವುದು, ಸಾಗರ ಸೀಮೆಯ ಪದ್ಧತಿಯಂತೆ ಹಸಿರಡಿಕೆಯನ್ನು ಗೊನೆಯಿಂದ ಬೇರ್ಪಡಿಸಿ ಉದಿ ಹಾಕಿ ಸಾಲಿನಲ್ಲಿ ಕುಳಿತು ಅಡಿಕೆಯನ್ನು ಸುಲಿಯುತ್ತಿರುವುದು, ತಾಯಂದಿರ ಜೊತೆಗೆ ಮಧ್ಯಾಹ್ನದ ಊಟ ಸವಿಯಲು ಬಂದ ಅವರ ಮಕ್ಕಳ ಸುಲಿತದ ಮೇಳ, ಹಾಯಗತ್ತಿಯಿಂದ ಸುಲಿದ ಅಡಿಕೆಯ ಸಿಪ್ಪೆಯ ಗುಪ್ಪೆ -- ಎರಡೇ ಸಿಪ್ಪೆಯಾಗಿರುವುದು ಮತ್ತು ಮೆಟ್ಟುಗತ್ತಿಂದ ಸುಲಿದ ಸಿಪ್ಪೆಯ ಗುಪ್ಪೆ - ಮೂರು ಸಿಪ್ಪೆಯಾಗಿರುವುದು [ ಹದಿನಾಲ್ಕನೇ ಚಿತ್ರ ]. ಸುಲಿದ ಸಿಪ್ಪೆಯನ್ನು ಹೊತ್ತು ಹೊರಗೆ ಹಾಕುತ್ತಿರುವುದು, ಸುಲಿದ ಅಡಿಕೆಯನ್ನು ಬೆಂಕಿಯಿಂದ ಬೇಯಿಸುವುದು, ಬೇಯಿಸಿದ ಅಡಿಕೆಯನ್ನು ಚಾಪೆಯ ಮೇಲೆ ಪ್ರತಿನಿತ್ಯ ಬಿಸಿಲಿಗೆ ಹರವಿ ಒಂದು ವಾರ ಒಣಗಿಸುವುದು. ಒಣಗಿದ ಅಡಿಯಲ್ಲಿ ಕೆಂಪುಗೋಟು, ಕಸರು, ಕಲ್ಲುಬೆಟ್ಟೆ, ಆಪಿ, ಚಿಕಣಿ ಅಡಿಕೆಯನ್ನು ಆರಿಸಿ ಬೇರ್ಪಡಿಸುವುದು. ಚೀಲಗಳಲ್ಲಿ ತುಂಬಿಟ್ಟು ಮಾರಾಟ ಮಾಡಲು ಸಿದ್ಧಪಡಿಸಿದ ಕೆಂಪು ಅಡಿಕೆ [ ರಾಶಿ ಅಡಿಕೆ ]. ಇದು ಅಡಿಕೆ ಸುಗ್ಗಿಯ ಒಂದು ಸಾಮಾನ್ಯ ಚಿತ್ರಣ. ಚಾಲಿ ಅಡಿಕೆ ಸುಲಿಯುವ ಪ್ರಕ್ರಿಯೆ ಬೇರೆ ಇದೆ.

Tuesday, 16 January 2018

#### ಮಕರ ಸಂಕ್ರಾಂತಿ ####

ಎಂ. ಗಣಪತಿ. ಕಾನುಗೋಡು.

ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣವು ಸೂರ್ಯನ ಪಥ ಬದಲಾವಣೆಗೆ ಸಂಬಂಧಿಸಿದ ಪರ್ವದಿನ [ Transition Day ]. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ 6 ತಿಂಗಳು ಪ್ರಯಾಣ ಬೆಳಸುತ್ತಾನೆ. ಪೌಷ್ಯ ಲಕ್ಷ್ಮಿಯ ಆಗಮನದ ತರುವಾಯ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನವನ್ನೇ ಮಕರ ಸಂಕ್ರಾಂತಿ ಎಂದು ಕರೆಯುವುದು. ಹೀಗೆ ಸೂರ್ಯಪಥ ಗಮನದಿಂದ ಭಾರತವಲ್ಲದೆ ಅರೇಬಿಯಾ, ಸಿರಿಯಾ, ಬೆಬಿಲೋನ್, ರೋಮ್ ಮೊದಲಾದ ದೇಶಗಳಿಗೆ ರಾತ್ರಿ ಕಡಿಮೆ ಆಗಿ ಹಗಲು ಹೆಚ್ಚು ದೊರಕುತ್ತದೆ.
ಮದುವೆಯಾದ ಮೊದಲ ವರ್ಷದಲ್ಲಿ ಮಕರ ಸಂಕ್ರಾಂತಿಯಂದು ಹತ್ತಿರದ ನೆಂಟರಿಷ್ಟರೊಂದಿಗೆ ಸೊಸೆಯನ್ನು ತವರಿಗೆ ಕರೆದೊಯ್ದು ತಾಯಿಗೆ ಸೋಸೆಯಿಂದ ಬಾಗೀನ ಕೊಡಿಸುವ ಪದ್ಧತಿ ಕೆಲವೆಡೆ ಇದೆ. ಕರ್ಕಾಟಕ ಸಂಕ್ರಾಂತಿಯಂದು ತವರ ಮನೆಯವರು ತಮ್ಮ ಹತ್ತಿರದ ಬಂಧು ಮಿತ್ರರೊಂದಿಗೆ ಬಂದು ಮಗಳ ಕೈಯಿಂದ ಗಂಡನ ಮನೆಯ ಹೊಸ್ತಿಲ ಪೂಜೆಯನ್ನು ಮಾಡಿಸುತ್ತಾರೆ.
ಹಿಂದೂ ಪದ್ಧತಿಯಲ್ಲಿ ಪ್ರತಿಯೊಂದು ಮಾಸಕ್ಕೆ ತಕ್ಕಂತೆ ಒಂದೊಂದು ರಾಶಿ ಹಾಗೂ ಸಂಕ್ರಮಣ ಇದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಹೋಗುವುದೇ ಸಂಕ್ರಮಣ. ಅಂತೆಯೇ ಹನ್ನೆರಡು ರಾಶಿಗಳಿಗೆ ತಕ್ಕಂತೆ ಹನ್ನೆರಡು ಸಂಕ್ರಮಣಗಳು ಇವೆ. ಇವುಗಳಲ್ಲಿ ಮಕರ ಸಂಕ್ರಮಣ [ ಜನವರಿ 14 ] ಮತ್ತು ಕರ್ಕಾಟಕ ಸಂಕ್ರಮಣ [ ಜುಲೈ 16 ] ಗಳನ್ನು ಮುಖ್ಯವಾಗಿ ಆಚರಿಸಲಾಗುತ್ತದೆ.
ಎಲ್ಲ ಸಂಕ್ರಮಣಗಳು ಪ್ರತಿ ತಿಂಗಳು 14 , 15 ಅಥವಾ 16 ನೆ ತಾರೀಖಿನಂದು ಮಾತ್ರ ಬರುತ್ತವೆ. ಈ ದಿನಗಳು ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲ ಎನ್ನುತ್ತಾರೆ. ಸಂಕ್ರಮಣ ಕಾಲದಲ್ಲಿ ಶೃದ್ಧಾಭಕ್ತಿ ವಿವೇಕಗಳಿಂದ ಮಾಡುವ ಸ್ನಾನ, ಧ್ಯಾನ, ಹೋಮ, ಪೂಜೆ, ತರ್ಪಣ, ಶ್ರಾದ್ಧ , ಉಪವಾಸ ವ್ರತಗಳನ್ನು ನಡೆಸುವುದು ಒಳ್ಳೆಯದು ಎಂದು ಹೇಳಲಾಗಿದೆ.
ಸಂಕ್ರಾಂತಿಯು ಪುಣ್ಯಕಾಲವೆಂದು ಪರಿಗಣಿತವಾದುದರಿಂದ ಅಂದು ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಪ್ರಶಸ್ತ. ಹೀಗೆ ಮಾಡುವ ಸ್ನಾನವು ಶರೀರದ ಕೊಳೆಯನ್ನು ತೊಳೆಯುವ ಮಲಾಪಕರ್ಷಣ ಸ್ನಾನವಲ್ಲ. ಮಾನಸಿಕ ದೋಷಗಳನ್ನು ತೊಳೆಯುವ ಪುಣ್ಯಸ್ನಾನ. ಅದಕ್ಕಾಗಿ ಬಿಸಿನೀರಿನಿಂದ ಮಾಡುವ ಅಭ್ಯಂಜನಕ್ಕಿಂತ ಗಂಗಾದಿ ಪುಣ್ಯತೀರ್ಥಗಳಿಗೆ ಹೋಗಿ ಸಂಕಲ್ಪ ಪೂರಕವಾಗಿ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಪುಣ್ಯ ಸ್ನಾನವಾದ ನಂತರ ಶ್ರಾದ್ಧಕ್ಕೆ ಅಧಿಕಾರವುಳ್ಳವರು ಪಿತೃಗಳನ್ನೂ ಕುರಿತು ತರ್ಪಣಾದಿ ರೂಪದಲ್ಲಿ ಶ್ರಾದ್ಧ ಮಾಡಬೇಕು. ದಾನಧರ್ಮಗಳನ್ನು ಮಾಡಬೇಕು.
ಧ್ಯಾನ ಧೀಕ್ಷೆ ಮತ್ತು ಮಂತ್ರಧೀಕ್ಷೆಯನ್ನು ಪಡೆಯುವುದಕ್ಕೆ ಇದು ಉತ್ತಮವಾದ ಕಾಲ. ಹಿಂದೂಗಳು ಮಕರ ಸಂಕ್ರಾಂತಿಯ ದಿನವನ್ನು ' ಉತ್ತರಾಯಣ ಪುಣ್ಯಕಾಲ ' ಎಂದು ಕರೆಯುತ್ತಾರೆ. ಏಕೆಂದರೆ ಸೂರ್ಯನಾರಾಯಣನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಹೆಜ್ಜೆಯಿಡಲು ಪ್ರಾರಂಭಿಸುವ ಪವಿತ್ರ ಸಮಯವಾಗಿರುತ್ತದೆ. ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಮ್ಮವರ ನಂಬಿಕೆ. ಶರಶಯ್ಯೆಯ ಮೇಲೆ ಮಲಗಿದ್ದ ಇಚ್ಛಾಮರಣಿ ಭೀಷ್ಮರು ಸಹ ಕೊನೆಯುಸಿರನ್ನು ಎಳೆಯುವುದಕ್ಕಾಗಿ ಉತ್ತರಾಯಣ ಬರುವವರೆಗೆ ಕಾಯ್ದಿದ್ದರು. ಮಕರ ಸಂಕ್ರಾಂತಿಯ ದಿನದಿಂದ ದೇವತೆಗಳಿಗೆ ಹಗಲು ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣಗಳ ಹೇಳಿಕೆ. ಮಧ್ಯಾಹ್ನದ ಬೋಜನವಾದ ನಂತರ ಪರಿಕರ ಸಹಿತವಾದ ಎಳ್ಳು ಬೆಲ್ಲವನ್ನು, ಕಬ್ಬಿನ ಜಲ್ಲೆಯನ್ನು, ಸಕ್ಕರೆಯಿಂದ ಮಾಡಿದ ವಿಗ್ರಹಗಳನ್ನು ಹಂಚುವ ಪದ್ಧತಿ ಇದೆ. ಇವೆಲ್ಲವನ್ನೂ ಹಂಚಿ ಇಷ್ಟಮಿತ್ರರೊಂದಿಗೆ ಮಧುರ ಮಾತುಗಳನ್ನು ಆಡುತ್ತಾರೆ. ಸಾಮಾಜಿಕ ಸಂಬಂಧವನ್ನು ಘಟ್ಟಿಗೊಳಿಸಲು ಇದು ಒಂದು ಮಾರ್ಗ. ಸಾಗರದ ಕೆಲವು ಕಡೆ ಮದ್ಯಾಹ್ನದ ಊಟಕ್ಕೆ ಸಿಹಿ ಹೆಸರುಬೇಳೆ ಹುಗ್ಗಿ [ ಪೊಂಗಲ್ ] ಮತ್ತು ಸಿಹಿ ಬೆರಸದ ಪೊಂಗಲ್ , ಜೊತೆಗೆ ಹೊಸ ಹುಣಿಸೆ ಹಣ್ಣಿನ ಹುಳಿಗೊಜ್ಜನ್ನು ಮಾಡುತ್ತಾರೆ. ಭೋಗಿ, ಸಂಕ್ರಮಣ ಮತ್ತು ಕನು ಹಬ್ಬ ಎಂದು ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸುವ ಪದ್ಧತಿ ಕೆಲವೆಡೆ ಇದೆ. ಸುಗ್ಗಿಯ ಕಾಲದ ಹಿಗ್ಗು ಬಂದಿರುತ್ತದೆ. ಕಬ್ಬು ಸಮೃದ್ಧಿಯಾಗಿ ಈ ವೇಳೆಗೆ ಬೆಳೆದಿರುತ್ತದೆ. ಮನೆಯಲ್ಲಿ ಮಕ್ಕಳಿಗೆ ಅಭ್ಯಂಜನ ಮಾಡಿಸಿ ಮಕ್ಕಳ ತಲೆಯ ಮೇಲೆ ಭೋಗಿ ಹಣ್ಣು [ ಬದರೀಫಲ] [ ಬೋರೆಯ ಹಣ್ಣು,ಎಲಚಿಹಣ್ಣು ] , ಕಬ್ಬು ಮೊದಲಾದುವುಗಳನ್ನು ಎರೆದು ಆರತಿ ಮಾಡುವ ಪದ್ಧತಿ ಕೆಲವೆಡೆ ಇದೆ. ಕೆಲವು ಕಡೆ ಹಸು , ಎಮ್ಮೆ ಮೊದಲಾದ ಜಾನುವಾರುಗಳಿಗೆ ಸ್ನಾನ ಮಾಡಿಸಿ ಅವುಗಳ ಕೋಡಿಗೆ , ಮೈಗೆ ಬಣ್ಣ ಬಳಿದು ಅಲಂಕರಿಸುತ್ತಾರೆ. ಅವುಗಳಿಗೆ ಪ್ರಿಯವಾದ ಹುಲ್ಲುಕಡ್ಡಿ, ಧಾನ್ಯ, ಕಾಯಿ, ಬೆಲ್ಲವನ್ನು ತಿನ್ನಿಸುತ್ತಾರೆ. ದೃಷ್ಟಿದೋಷ, ಪೀಡೆಯ ನಿವಾರಣೆಗಾಗಿ ಬೆಂಕಿಯ ಮೇಲೆ ದಾಟಿಸುವ ಪದ್ಧತಿ ಇದೆ. ಇದಕ್ಕೆ ಕಿಚ್ಚು ಹಾಯಿಸುವುದು ಎನ್ನುತ್ತಾರೆ.
ಇನ್ನು ಕೆಲವು ಕಡೆ ದೇವಸ್ಥಾನಗಳಲ್ಲಿ ದೇವರ ಮುಂದೆ ಮೊಲಕ್ಕೆ ಅರಿಸಿನ - ಕುಂಕುಮ ಬಳಿದು ಹೂವು ಮುಡಿಸಿ ಪೂಜೆ ಮಾಡಿ ಬಿಡುವ ಪದ್ಧತಿ ಇದೆ.
ಆಂದ್ರದಲ್ಲಿಯೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಲಾಗುತ್ತದೆ. ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ತಂದ ದಿನವೆಂದು ಭಾವಿಸಿ ಮನೆಯ ಮುಂದೆ ಬೆಂಕಿಯನ್ನು ಹಾಕಿ ರಾವಣ ದಹನವನ್ನು ನಡೆಸುತ್ತಾರೆ. ಇದನ್ನು ' ಭೋಗಿಮಂಟ 'ಎಂದು ಕರೆಯುತ್ತಾರೆ. ಸ್ವರ್ಗಸ್ತರಾದ ಪಿತೃಗಳು ಅದೃಶ್ಯರಾಗಿ ಸ್ವರ್ಗಲೋಕದಿಂದ ತಮ್ಮ ಮನೆಯಂಗಳಕ್ಕೆ ಆಗಮಿಸುವರೆಂದು ಅವರ ನಂಬಿಕೆ.
ತಮಿಳುನಾಡಿನಲ್ಲಿ ಸಂಕ್ರಾಂತಿಯ ಹಬ್ಬವನ್ನು ' ಪೊಂಗಲ್ ' ಎಂದು ಕರೆಯುತ್ತಾರೆ. ವಿಶೇಷ ವಿಧಿಯಿಂದ ಹಾಲನ್ನು ಕಾಯಿಸಿ ಉಕ್ಕಿಸುವ ದಿನವಾದ್ದರಿಂದ ಅಲ್ಲಿ ಇದು ಪೊಂಗಲ್ ಎಂದು ಪ್ರಸಿದ್ಧವಾಗಿದೆ. ಪೊಂಗಲ್ಲನ್ನು ಬೇಯಿಸಿ ಕಬ್ಬಿನ ಜಲ್ಲೆಗಳನ್ನಿರಿಸಿ ಪೂಜೆ ಮಾಡುತ್ತಾರೆ. ಅದನ್ನು ಸೂರ್ಯನಿಗೆ ನೈವೇಧ್ಯ ಮಾಡುತ್ತಾರೆ. ಸಂಕ್ರಾಂತಿಯು ತಮಿಳರಿಗೆ ಸಂಭ್ರಮದ ಹಬ್ಬ.
ಉತ್ತರ ಭಾರತದಲ್ಲಿಯೂ ಈ ಹಬ್ಬವನ್ನು ಆಚರಿಸುವುದುಂಟು. ಅಲಹಾಬಾದಿನಲ್ಲಿ ಈ ವೇಳೆಗೆ ಸುಪ್ರಸಿದ್ಧವಾದ ಕುಂಭಮೇಳವನ್ನು ನಡೆಸುವ ಪದ್ಧತಿ ಇದೆ.
ತಾರೀಖು :14 - 1 - 2018 .