Friday 24 July 2015

@@@@@ ಸೊಂಟದವರೆಗೂ ಸೀರೆಯನ್ನೆತ್ತಿಕೊಂಡ ಗಂಗಾ @@@@@


~~~~ ಒಂದು ನಡೆದ ಪ್ರಸಂಗ.
```````` ಎಂ. ಗಣಪತಿ ಕಾನುಗೋಡು.
ಹಳ್ಳಿಗಳಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಜನಪದರ ಆಟ ಸಂಗ್ಯಾ -- ಬಾಳ್ಯಾ ನಡೆಯುತ್ತಿದ್ದ ಕಾಲ. ಆ ಆಟದಲ್ಲಿ ಚೆನ್ನಾಗಿ ಪಾತ್ರ ನಿರ್ವಹಿಸಿದವರಿಗೆ ಮೆಡ್ಲು [ ಮೆಡಲ್ ] ಕೊಡುವ ವಾಡಿಕೆ ಇತ್ತು. ಮೆಡಲ್ ಎಂದರೆ ಒಂದು ಖನಿಜದ ಪದಕ. ಅದು ಆ ಆಟದ ಮೇಳದಲ್ಲಿಯೇ ಖರೀದಿಗೆ ಸಿಗುತ್ತಿತ್ತು. ಕೊಡಲಿಚ್ಚಿಸುವವರು ಅದನ್ನು ಮೇಳದಿಂದ ಖರೀದಿಸಿ ರಂಗದ ಮೇಲೆ ಬಂದು ಆಟದ ಮಧ್ಯದಲ್ಲಿಯೇ ಪಾತ್ರಧಾರಿಯನ್ನು ತಡೆದು ನಿಲ್ಲಿಸಿ ಹೊಗಳಿ ಅವನಿಗೆ ಅದನ್ನು ಕೊಡುತ್ತಿದ್ದರು. ಅದನ್ನು ಧನ್ಯತೆಯಿಂದ ಸ್ವೀಕರಿಸಿದ ಕಲಾವಿದ " ಇದನ್ನು ಕೊಟ್ಟವರಿಗೆ ನನ್ನ ವಂದನೆಗಳು " ಎಂದು ಅವರಿಗೆ ಅಲ್ಲಿಯೇ ವಂದನೆಯನ್ನು ಹೇಳುತ್ತಿದ್ದ. ನಂತರ ಆ ಮೆಡಲನ್ನು ತಾತ್ಕಾಲಿಕವಾಗಿ ಭಾಗವತನ ಕೈಯಲ್ಲಿ ಕೊಟ್ಟು ಪುನಃ ತನ್ನ ಪಾತ್ರದ ಅಭಿನಯವನ್ನು ತಕ್ಷಣ ಪ್ರಾರಂಭಿಸುತ್ತಿದ್ದ. ಮರುದಿನ ಬೆಳಿಗ್ಯೆ ಭಾಗವತನಿಂದ ಮರಳಿ ಆ ಮೆಡಲನ್ನು ಪಡೆದುಕೊಂಡು ಪುನಃ ಮೇಳಕ್ಕೆ ಕೊಟ್ಟು ನಗದು ಮಾಡಿಕೊಳ್ಳುವುದು ರೂಢಿ.
ನಮ್ಮ ಊರಿನಲ್ಲಿ ಹೀಗೆ ಒಂದು ದಿನ ಸಂಗ್ಯಾ -- ಬಾಳ್ಯಾ ಆಟ ನಡೆಯಿತು. ಮೇಳ ನಮ್ಮ ಊರಿನ ಜನಪದರದ್ದೇ. ಆ ಪ್ರಸಂಗದಲ್ಲಿ ' ಗಂಗಾ ' ಎನ್ನುವ ಸ್ತ್ರೀಯು ಕಥಾನಾಯಕಿ. ನಮ್ಮ ಊರಿನ ಈಸ್ರಹುಡುಗ ಆ 'ಗಂಗಾ' ಳ ಪಾತ್ರವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದ. ಎಲ್ಲಾ ಆಟದಲ್ಲಿಯೂ ಆ ಪಾತ್ರವನ್ನು ಆತ ಖಾಯಂ ಆಗಿ ಮಾಡುತ್ತಿದ್ದ. ಎಲ್ಲೇ ಆಟವಾದರೂ ಅವನಿಗೆ 20 ರಿಂದ 30 ಮೆಡ್ಲು ಒಂದು ರಾತ್ರಿಯಲ್ಲಿ ದಕ್ಕುತ್ತಿತ್ತು.
ಸರಿ, ಅಂದು ನಮ್ಮ ಊರಿನಲ್ಲಿಯೂ ಆತ ಗಂಗೆಯ ಪಾತ್ರವನ್ನು ಅತಿ ಮನಮೋಹಕವಾಗಿ ನಿರ್ವಹಿಸಿದ. ಅದಕ್ಕೆ ಮೆಚ್ಚಿದ ಪ್ರೇಕ್ಷಕರೊಬ್ಬರು ರಂಗದ ಮೇಲೆ ಬಂದು ' ಗಂಗಾಳ ಪಾತ್ರದಿಂದ ನಮ್ಮೆಲ್ಲರ ಮನಸೂರೆಗೈದ ಈಸ್ರಹುಡುಗನಿಗೆ ಈ ಮೆಡಲನ್ನು ಕೊಡುತ್ತೇನೆ , ಸ್ವೀಕರಿಸಬೇಕು " ಎಂದರು. ಅದನ್ನು ಸ್ವೀಕರಿಸಿದ ಈಸ್ರಹುಡುಗ ಅವರಿಗೆ ಪದ್ಧತಿಯ ಪ್ರಕಾರ ವಂದನೆಯನ್ನು ಹೇಳಿದ. ಆ ಮೆಡಲನ್ನು ಎಂದಿನಂತೆ ಭಾಗವತನಿಗೆ ಕೊಡಲು ಅವನತ್ತ ತಿರುಗಿದ.
ಆದರೆ ಅಂದು ಬೆಳಿಗ್ಯೆ ಆ ಭಾಗವತನಿಗೂ ಅವನಿಗೂ ಏತಕ್ಕೋ ಹಣಾಹಣಿ ಜಗಳ ನಡೆದಿತ್ತು. ಅದು ಈಗ ಈಸ್ರಹುಡುಗನಿಗೆ ನೆನಪಾಗಿಹೋಯಿತು. ಮೆಡಲನ್ನು ಭಾಗವತನಿಗೆ ಕೊಟ್ಟರೆ ಮರುದಿನ ಬೆಳಿಗ್ಯೆ ಮರಳಿ ತನಗೆ ಕೊಡುತ್ತಾನೋ ಇಲ್ಲವೋ ಎನ್ನುವ ಸಂದೇಹ ಅವನಿಗೆ ಕಾಡಿತು. ಖಂಡಿತಾ ಕೊಡುವುದಿಲ್ಲ ಎನ್ನುವ ನಿರ್ಣಯಕ್ಕೆ ಬಂದೂ ಆಯಿತು. ಅರ್ರೇ.... ಏನು ಮಾಡುವುದು ಸಿಕ್ಕು ಬಿದ್ದೆನಲ್ಲ ಎಂದು ಒಂದು ನಿಮಿಷ ಚಿಂತೆಗೀಡಾದ. ತಟ್ಟನೆ ಅವನಿಗೆ ಒಂದು ಉಪಾಯ ಹೊಳೆಯಿತು. ತಾನು ಒಳಗೆ ಧರಿಸಿರುವ ಅಂಡರ್ವೇರ್ ಅವನಿಗೆ ನೆನಪಾಯಿತು. ಮೆಡಲನ್ನು ಕಾಯ್ದುಕೊಳ್ಳಬೇಕೆಂಬ ಅಮಲಿನಲ್ಲಿ ತಾನು ಈಗ ಸ್ತ್ರೀ ಪಾತ್ರದಲ್ಲಿ ರಂಗದ ಮೇಲಿದ್ದೇನೆಂಬ ಸಾಂದರ್ಭಿಕ ಜ್ಞಾನವನ್ನು ಮರೆತುಬಿಟ್ಟ. ತಡಮಾಡಲೇ ಇಲ್ಲ.
ಈಸ್ರಹುಡುಗ ನಡು ರಂಗಸ್ಥಳದಲ್ಲಿಯೇ ಅಂಗಾತನೆ ಸೊಂಟದವರೆಗೂ ಪೂರ್ತಿ ಸೀರೆಯನ್ನೆತ್ತಿಕೊಂಡು ತನ್ನ ಅಂಡರ್ವೇರ್ ಜೇಬಿಗೆ ಆ ಮೆಡಲನ್ನು ಸೇರಿಸಿಯೇಬಿಟ್ಟ.


@@@@@ ಶಿವಧನಸ್ಸನ್ನು ಮುರಿದೇಬಿಟ್ಟ @@@@@

~~~~ ನಡೆದ ಘಟನೆ .
`````` ಎಂ. ಗಣಪತಿ. ಕಾನುಗೋಡು.
ನಮ್ಮ ಊರಿನಲ್ಲಿ ಬಹಳಕಾಲದಿಂದ ಪ್ರತಿವರ್ಷವೂ ಒಂದು ನಾಟಕವನ್ನು ಆಡುವುದು ರೂಢಿ. ಬಹಳ ವರ್ಷಗಳ ಹಿಂದೆ ಪೌರಾಣಿಕ ನಾಟಕವನ್ನೇ ಆಡುತ್ತಿದ್ದೆವು.
ನಮ್ಮ ತಂಡದಲ್ಲಿ ಒಬ್ಬನಿದ್ದ. ರಾಮಣ್ಣನೆಂದು ಅವನ ಹೆಸರು. ಅವ ಸುಂದರಕಾಯ. ಸುಂದರವದನ. ಬಲು ಚುರುಕಿನವ. ಆದರೆ ಆತ ಉಗ್ಗ. ಮಾತನ್ನಾಡುವಾಗ ಬಹಳ ತಡವರಿಸುತ್ತಿದ್ದ. ಹಾಗಾಗಿ ಅವನಿಗೆ ನಮ್ಮ ತಂಡದ ಯಜಮಾನ ನಾಟಕದಲ್ಲಿ ಪಾತ್ರವನ್ನು ಕೊಡುತ್ತಿರಲಿಲ್ಲ. ಆದರೆ ಪಾತ್ರ ಮಾಡುವಂಥಹ ನಮಗೆ ಸಿಗುವಂಥ ಎಲ್ಲಾ ಗೌರವಾದರಗಳು ಅವನಿಗೆ ಸಿಗುತ್ತಿದ್ದುವು. ಕಾರಣ, ಊರಿನ ರಿವಾಜಿನ ಪ್ರಕಾರ ಆತ ನಾಟಕದಲ್ಲಿ ಪರದೆ ಎಳೆಯುವುದು, ಮೇಕ್ ಅಪ್ ಗೆ ಎಲ್ಲಾ ಸಿದ್ಧತೆ ಮಾಡಿಕೊಡುವುದು, ಕಲಾವಿದರಿಗೆ ಎಲ್ಲಾ ರೀತಿಯ ಸಹಕಾರವನ್ನು ಮಾಡಿಕೊಡುವುದು ಹೀಗೆ ಎಲ್ಲಾ ರೀತಿಯಲ್ಲಿ ನಮಗೆ ಹೊಂದಿಕೊಂಡಿದ್ದ. ಅಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ನಮ್ಮೊಡನೆ ಇದ್ದ.
ಹೀಗಿದ್ದವ ಒಂದು ವರುಷದ ನಾಟಕ ಪಾತ್ರವನ್ನು ಹಂಚುವ ಪ್ರಾರಂಭದಲ್ಲಿ ಇದ್ದಕಿದ್ದಂತೆ ಕ್ಯಾತೆಯನ್ನು ತೆಗೆದ. " ಅಲ್ರಯ್ಯಾ.. ಇಷ್ಟು ವರುಷವೂ ಬರೇ ಪರದೆ ಎಳೆಯುವುದು, ಸಾಮಾನು ಸೇರಿಸುವುದೇ ನನ್ನ ಹಣೆಬರಹವಾಗಿಹೋಯಿತು. ಈ ವರ್ಷ ಮಾತ್ರ ತನಗೆ ಪಾತ್ರವೊಂದನ್ನು ಕೊಡಲೇಬೇಕೆಂದು ದುಂಬಾಲು ಬಿದ್ದು ಹಠಕ್ಕಿಟ್ಟುಕೊಂಡ. ಆದರೆ ಆತ ಉಗ್ಗ, ಅದಕ್ಕಾಗಿಯೇ ಆತನಿಗೆ ಪಾತ್ರವನ್ನು ಕೊಟ್ಟಿಲ್ಲ ಎಂಬುದನ್ನು ರಾಮಣ್ಣನಿಗೆ ಯಾರೂ ಪತ್ತೆ ಕೊಟ್ಟಿರಲಿಲ್ಲ. ತಾನು ಸುಂದರಕಾಯ, ವದನ, ಆಜಾನುಬಾಹು ಎಂಬುದಷ್ಟೇ ಅವನ ಅಹಮಿಕೆ.
ಸರಿ, ನಮ್ಮ ತಂಡದ ಯಜಮಾನ ಅವನ ಹಠಕ್ಕೆ ಮನಸೋತು ಅವನಿಗೆ ಈ ವರ್ಷದ ನಾಟಕದಲ್ಲಿ ಪಾತ್ರವೊಂದನ್ನು ಕೊಟ್ಟ. ನಾಟಕ ' ಸೀತಾಸ್ವಯಂವರ '. ಅದರಲ್ಲಿ ರಾವಣನ ಪಾತ್ರ ನಿನ್ನದೆಂದು ಹೇಳಿದ್ದಾಯಿತು. ಆತ ಯೋಚನೆ ಮಾಡಿದ. ರಾಮಾಯಣದಲ್ಲಿ ರಾಮನನ್ನು ಬಿಟ್ಟರೆ ರಾವಣನದೇ ದೊಡ್ಡ ಪಾತ್ರ. ಬಾಪುರೆ... ಹೇಗೆ ನನ್ನ ಛಾಪು... ಎಂದು ತನ್ನಲ್ಲಿಯೇ ತಾನು ಭೀಗಿಕೊಂಡ.
ಆದರೆ ಅವನ ಪಾತ್ರಕ್ಕೆ ಮಾತೇ ಇರಲಿಲ್ಲ. ಸೀತಾಸ್ವಯಂವರದ ದೃಶ್ಯದಲ್ಲಿ ಆತ ಶಿವಧನಸ್ಸನ್ನು ಒಮ್ಮೆ ಎತ್ತಿ ಅದರ ಹಗ್ಗವನ್ನು ಸ್ವಲ್ಪವಷ್ಟೇ ಎಳೆದು ಅದರ ಹೆದೆಯನ್ನೇರಿಸಲು ಸಾಧ್ಯವಿಲ್ಲವೆಂದು ಹೇಳಿ ತನ್ನ ಆಸನಕ್ಕೆ ಮರಳುವುದಷ್ಟೇ ಅವನ ಪಾತ್ರದ ಕೆಲಸ. ಅದು ಅವನಿಗೆ ಗೊತ್ತಾದದ್ದು ಬಹಳ ದಿನಗಳ ನಂತರವಷ್ಟೇ. ಹೇಗೂ ಒಪ್ಪಿಕೊಂಡಾಗಿದೆ, ಅದನ್ನೇ ಬಹಳ ಕಲಾತ್ಮಕವಾಗಿ ತೋರಿಸುತ್ತೇನೆ ಎಂದು ಎಲ್ಲರ ಎದುರಿಗೆ ಕೊಚ್ಚಿಕೊಂಡ.
ನಾಟಕ ಪ್ರಾರಂಭವಾಗಿದೆ. ಸ್ವಯಂವರದ್ದೇ ದೃಶ್ಯ ಎದುರಿಗೆ ಬಂದಿದೆ. ಸ್ವಯಂವರಕ್ಕೆಂದು ರಾಜ ಮಹಾರಾಜರೆಲ್ಲಾ ಬಂದು ಕುಳಿತಿದ್ದಾರೆ. ಅದರಂತೆ ರಾವಣನಪಾತ್ರ ಮಾಡಿಕೊಂಡ ರಾಮಣ್ಣನೂ ಒಬ್ಬ. ಸೀತೆ ಹಾರ ಹಿಡಿದು ನಿಂತಿದ್ದಾಳೆ. ' ಯಾರು ಶಿವಧನಸ್ಸಿಗೆ ಹೆದೆಯನ್ನು ಏರಿಸುತ್ತಾರೋ ಅವಳಿಗೆ ನನ್ನ ಮಗಳನ್ನು ವಿವಾಹ ಮಾಡಿಕೊಡುತ್ತೇನೆ ' ಎಂದು ಜನಕ ಮಹಾರಾಜ ಸಾರಿದ. ಅದರಂತೆ ಎಲ್ಲಾ ರಾಜರೂ ಒಬ್ಬೊಬ್ಬರಾಗಿಯೇ ಎದ್ದು ಬಂದು ವ್ಯರ್ಥ ಪ್ರಯತ್ನವನ್ನು ಮಾಡಿ ತಮ್ಮ ಆಸಕ್ಕೆ ಮರಳಿದರು. ಉಳಿದದ್ದು ರಾವಣ. ನಂತರ ಶ್ರೀರಾಮ..
ಈಗ ರಾಮಣ್ಣನ ರಾವಣನ ಸರದಿ ಬಂತು. ತನಗೆ ಮಾತೇ ಇಲ್ಲದ ಪಾತ್ರವನ್ನು ಕೊಟ್ಟು ಮೋಸ ಮಾಡಿದರೂ ಅದಕ್ಕೇ ತುಂಬು ಅಭಿನಯದ ಜೀವವನ್ನು ತುಂಬಿ ಕಿಕ್ಕಿರಿದ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೇನೆ ಎಂದು ರಾಮಣ್ಣ ತನ್ನ ಗೆಳೆಯರೊಂದಿಗೆ ಬೆಟ್ಟು ಕಟ್ಟಿದ್ದ. ತನ್ನ ಸಮಯ ಬಂದಕೂಡಲೆ ತಾನು ಕುಳಿತ ಸಿಂಹಾಸನದ ಮೇಲೆಯೇ ಹಲವು ಭಂಗಿಯ ಕೈಕರಣ, ದೃಷ್ಟಿ ಅಭಿನಯ, ಮುಖಾಭಿನಯ ಮಾಡಿ ಮೇಲೇಳಲಿಕ್ಕೇ ಹತ್ತು ನಿಮಿಷ ಮಾಡಿದ. ಇದು ಪ್ರೇಕ್ಷಕರಿಗೆ ತುಂಬಾ ಮೋಜೆನಿಸಿತು. ಪ್ರೇಕ್ಷಕರೆಲ್ಲರೂ ನಮ್ಮ ಊರಿನವರೇ ಆಗಿದ್ದರಿಂದ ರಾವಣ ಪಾತ್ರಧಾರಿ ರಾಮಣ್ಣನೆನ್ದು ಎಲ್ಲರಿಗೂ ಗೊತ್ತಿತ್ತು. ನಮ್ಮದು ನೂರಿನ್ನೂರು ಮನೆಗಳ ಊರು. ಆದ್ದರಿಂದ ಬಹಳ ಮಂದಿ ನಾಟಕ ನೋಡಲು ಸೇರಿದ್ದರು. ರಾಮಣ್ಣನ ಅದ್ಭುತ ಅಭಿನಯವನ್ನು ಕಂಡು ನೋಡಿ ಖುಷಿಗೊಂಡ ಪ್ರೇಕ್ಷಕರು " ಹೋ..... ಹೋ .... ರಾಮಣ್ಣನ್ನ ನೋಡ್ರಲೇ ಏನು ಮಜಾ ಮಾಡ್ಡ್ತಾ ಇದ್ದಾನೆ..... ಹೋಯ್...ಹೋಯ್.... " ಎಂದು ಚಪ್ಪಾಳೆ, ಕೇಕೆ, ಸೀಟಿ ಹಾಕಿದರು. ರಾಮಣ್ಣ ಉಮೇದಿ ಇನ್ನೂ ಉಲ್ಬಣಗೊಂಡಿತು. ಬಡಬಡನೆ ಸೀದಾ ಎದ್ದು ಓಡಿ ಶಿವಧನಸ್ಸನ್ನು ಎತ್ತಿದ. ಎತ್ತಿದವನೇ ಪ್ರೇಕ್ಷಕರು ಕೊಟ್ಟ ಉಮೇದಿಯಿಂದ ಧನಸ್ಸಿನ ಹೆದೆಯನ್ನು [ ಹಗ್ಗವನ್ನು ] ಜೋರಾಗಿ ಎಳೆದೇಬಿಟ್ಟ. ಆ ಶಿವಧನಸ್ಸು ಮುಂದೆ ಶ್ರೀರಾಮನ ಪಾತ್ರದವನು ಹೆದೆಯೇರಿಸುವಾಗ ಸುಲಭವಾಗಿ ಮುರಿಯುವಂತೆ ಹಗರದಬ್ಬೆಗೆ ಬಂಗಾರದ ಬೇಗಡಿಯನ್ನು ಸುತ್ತಿ ತಯಾರಿಸಿದ್ದಾಗಿತ್ತು. ರಾವಣನ ಪಾತ್ರ ಮಾಡಿದ ರಾಮಣ್ಣ ಹೀಗೆ ರಭಸದಿಂದ ಎಳೆದ ಕೂಡಲೇ ' ಶಿವಧನಸ್ಸು ' ಮುರಿದೇ ಹೋಯಿತು.
ಸೇರಿದ ಪ್ರೇಕ್ಷಕರು ಮತ್ತೆ ಹೋ......ಹೋ........ಹೊಯ್........... ಎಂದು ಒರಲಿದರು. ' ರಾವಣನೆ ಶಿವಧನಸ್ಸನ್ನು ಮುರಿದೇಬಿಟ್ಟ ' ಎಂದು ಹುಯ್ಯೋ ಎಂದರು.