Monday 28 July 2014

ಜರೆದ ಹಾಡು :


ಏನ್ ಮರುಳಾದೆ ದಗಡಿ ಪೀಪಿ ಊದ್ದವಂಗೆ |
ಒಣಗಿದ ಮರಕೆ ತಮಟೆ ಕಟ್ಕೊಂಡ್ ಡಾಮ್ ಡೂಮ್ ಎಂದವಂಗೆ || ಪ ||
ಸಾಲಿಸೀರೆ ಉಟ್ಟುಕೊಂಡು ಬಟ್ ಮುತ್ ಕೊರಳಿಗೆ ಕಟ್ಟಿಕೊಂಡು |
ಕೃಷ್ಣಭಟ್ಟನ ಕೂಡಿಕೊಂಡು ಅಗಳ ಬಿದ್ದು ಓಡ್ದಾಂಗಲ್ಲಾ |೧|
ಏನ್ ಮರುಳಾದೆ ............
ಇದು ಒಂದು ಜರೆದ ಹಾಡಿನ ಒಂದು ತುಣುಕು. ಹವ್ಯಕರಲ್ಲಿ ಸುಮಾರು 50 ವರ್ಷಗಳ ಹಿಂದೆ ಈ ತೆರನ ಜರೆದ ಹಾಡುಗಳು ಪ್ರಚಲಿತದಲ್ಲಿದ್ದುವು.ಈ ಮೇಲೆ ಬರೆದ ಹಾಡು ಮದುವೆ ಮನೆಯಲ್ಲಿ ಗಂಡಿನ ಕಡೆಯವರು ಮದುವಣಗಿತ್ತಿಯನ್ನು ಜರೆಯುವ ಹಾಡು. ಇದಕ್ಕೆ ಉತ್ತರವಾಗಿ ವಧುವಿನ ಕಡೆಯವರು ಮದುಮಗನನ್ನು ಜರೆದು ಒಂದು ಹಾಡನ್ನು ಹೇಳುತ್ತಿದ್ದರು. ಸಮಾಜ ಶಾಸ್ತ್ರಜ್ಞರು ಇದನ್ನು ' joking relationship ' ಎನ್ನುತ್ತಾರೆ. ಊಟಕ್ಕೆ ಕುಳಿತಾಗ ಒಂದು ಕಡೆಯವರು [ವಧುವಿನ ಮನೆಯಲ್ಲಾಗಲಿ ವರನ ಮನೆಯಲ್ಲಾಗಲಿ ಊಟಕ್ಕೆ ಕುಳಿತವರು] ಮೊದಲು ಹೀಗೆ ಒಂದು ಜರೆದ ಹಾಡನ್ನು ಪ್ರಾರಂಭಿಸುತ್ತಿದ್ದರು. " ಚೂರು ಹೋಳಿಗೆ ಬಡಿಸಿದಳೆ ಭೀಗಿತಿ ಸೂಜಿಲಿ ತುಪ್ಪವ ತೂರಾಡಿದಳೆ............... " ಎಂದು ಒಗ್ಗರಿಸುತ್ತಿದ್ದರು. ಇದನ್ನು ಸ್ವಲ್ಪ ಹೊತ್ತು ತನ್ನ ಜೊತೆಯವರೊಡನೆ ಆಲಿಸಿದ ಎದುರು ಕಡೆಯ ಭೀಗಿತಿ ತಕ್ಷಣ ಒಳಗಿನಿಂದ ಹರಿವಾಣ ಹೋಳಿಗೆಯನ್ನು ತಂದು ಹಾಡು ಹೇಳಿದವರಿಗೆ ತಲಾ ಎರಡೆರಡು ಹೋಳಿಗೆಯನ್ನು ಬಡಬಡನೆ ಬೇಡ ಬೇಡವೆಂದರೂ ಹಾಕುತ್ತಿದ್ದಳು. ಅದರ ಮೇಲೆ ಸೌಟಿನಲ್ಲಿ ತುಪ್ಪವನ್ನು ಸುರುವುತ್ತಿದ್ದಳು. ಆಗ ನಗೆಯ ಹೊಯಿಲು ಎರಡೂ ಕಡೆಯವರಿಂದ ತೇಲುತ್ತಿದ್ದವು. ಅಲ್ಲದೆ ಅದಕ್ಕೆ ಉತ್ತರವಾಗಿ [ಅದಕ್ಕಾಗಿಯೆ ಮೊದಲು ಜರೆದವರು ಕಾಯುತ್ತಿದ್ದವರು] ಎದುರು ಕಡೆಯವರು ಮತ್ತೊಂದು ಜರೆದ ಹಾಡನ್ನು ಝಡಾಯಿಸುತ್ತಿದ್ದರು. " ಹಡಗಿನ ಹೊಟ್ಟೆಗೆ ಹೆಡಿಗೆ ಹೋಳಿಗೆ ಹೊಳೆಗೆ ಉಪ್ಪ ಕರಡಿದ ಹಾಗೆ ಆಯ್ತಲ್ಲೇ ಭೀಗಿತಿ.......... " ಎಂದು ಕೊಟ್ಟ ಉತ್ತರಕ್ಕೆ ಮತ್ತೆ ಎರಡೂ ಕಡೆಯವರಿಂದ 'ಹೋ' ಎಂದು
ನಗೆಯ ಹೊಯಿಲು. ಅಂದಿನ ಮದುವೆ ಸಮಾರಂಭದಲ್ಲಿ ಹಾಡು ಹೇಳುವವರೆ ಒಂದು ತಂಡವಾಗಿ ಕುಳಿತುಕೊಳ್ಳುತ್ತಿದ್ದರು. ಅಂದು ಈಗಿನ ಹಾಗಲ್ಲ. ಪ್ರತಿಯೊಬ್ಬ ಹೆಣ್ಣುಮಗಳೂ ಹಾಡುಗಳನ್ನು ಕಲಿತುಕೊಳ್ಳಬೇಕೆಮ್ಬ ಸಾಮಾಜಿಕ ನಿಯಮ ಹವ್ಯಕರಲ್ಲಿ ಇತ್ತು. ಚೌಲ, ಉಪನಯನ, ಮದುವೆಗಳ ಹಾಡುಗಳು, ಇಂತಹ ಮದುವೆ ಮನೆಯ ಜರೆದ ಹಾಡುಗಳು, ದೇವರ ಮೇಲಿನ ಹಾಡುಗಳು, ಹಬ್ಬಹರಿದಿನಗಳ ಹಾಡುಗಳು, ಜೋಗುಳದ ಹಾಡುಗಳು, ಹೀಗೆ ಇನ್ನೂ ಅನೇಕ ನೂರಾರು ಹಾಡುಗಳು ಅಂದಿನ ಹೆಂಗಸರಿಗೆ ಕರಗತವಾಗಿದ್ದುವು. ಹಾಡನ್ನು ಕಲಿಯದ ಹೆಣ್ಣುಮಕ್ಕಳನ್ನು ಕುರಿತು ಅಂದಿನ ಅಜ್ಜಿಯರು " ಹಾಡು ಬರೋದಿಲ್ಲ,ಸೇಡಿ ಬರೋದಿಲ್ಲ ನಾವೈದೇವಕ್ಕ ದುರ್ದುಂಡೇರು " ಎಂದು ಮೂದಲಿಸುತ್ತಿದ್ದರು. ಅನಕ್ಷರತೆಯ ಅಂದಿನ ಕಾಲದಲ್ಲಿ ಕಿವಿಯಿಂದ ಕಿವಿಗೆ ಹಾಡುಗಳು transfer ಆಗುತ್ತಿದ್ದುವು. ತಾಯಿ ಮಗಳಿಗೆ ಚಿಕ್ಕಂದಿನಿಂದಲೇ ಅವುಗಳನ್ನು ಕಲಿಸುತ್ತಿದ್ದಳು. ಅಷ್ಟರ ಮಟ್ಟಿಗೆ ತಾಯಿಯೂ ಪರಿಣಿತರಿಳುತ್ತಿದ್ದಳು.
ಹೀಗೆ ವಧುವಿನ ಮನೆಯಲ್ಲಿ ಹೆಚ್ಹಾಗಿ ಗಂಡಿನ ಕಡೆಯವರು ಜರೆದ ಹಾಡನ್ನು ಪ್ರಾರಂಭಿಸುತ್ತಿದ್ದರು. ಅದಕ್ಕಾಗಿಯೆ ಪೂರ್ವ ತಯಾರಿಯೂ ನಡೆದಿರುತಿತ್ತು. ಇದಕ್ಕೆ ಸಾಕಷ್ಟು ಇಲ್ಲಿ ವಧುವಿನ ಕಡೆಯವರು ಉತ್ತರವನ್ನು ಕುಟ್ಟಿಯೂ ಆಗುತಿತ್ತು. ಇದಕ್ಕೆ ಸಾಲದೆಂಬಂತೆ ಮರುದಿನ ವರನ ಮನೆಯಲ್ಲಿ ವರನ ಕಡೆಯವರಿಗೆ ಇನ್ನಷ್ಟು ಕುಟ್ಟಿಗಾಣಿಸಬೇಕೆನ್ದು ವಧುವಿನ ಕಡೆಯವರು ಇನ್ನಷ್ಟು ತಯಾರಿ ನಡೆಸುತ್ತಿದ್ದರು. ಸೊಂಟ ಉಳಿಕಿದೆಯೆಂದು ಅಂದು ಊರಿನ ತಮ್ಮ ಮನೆ ಮದುವೆ ಬರದಿದ್ದ ಆ ಊರಿನ ಹಾಡಿನ expert ಮೇಲಿನಮನೆ ಗಂಗಕ್ಕನನ್ನೂ ಗಾಳಿ ಹೊಡೆದು ಮರುದಿನದ ತಮ್ಮ ಮನೆಯ ದಿಬ್ಬಣಕ್ಕೆ ready ಮಾಡುತ್ತಿದ್ದರು.
ಹೀಗೆ ಮರುದಿನ ವರನ ಮನೆಯ ವಧು ಗೃಹಪ್ರವೇಶದ ಸಮಾರಂಭದಲ್ಲಿ ವಧುವಿನ ಕಡೆಯವರಿಂದ ಮೊದಲು ಅನುಕ್ರಮವಾಗಿ ಮನೆದುಂಬಿಸಿದ ಹಾಡು, ಮಡಿಲಕ್ಕಿ ತೂರಿದ ಹಾಡು, ಚೆಟ್ಟು ಹೊಯ್ದ ಹಾಡು ಹೀಗೆ ಸರಣಿ ಹಾಡುಗಳು ಮೆರೆಯುತ್ತಿದ್ದವು. ನಂತರ ಜರೆದ ಹಾಡಿನ ಅಬ್ಬರ. ನಿನ್ನೆ ಮೊದಲು ಗಂಡಿನ ಕಡೆಯವರು ತಮ್ಮ ಮನೆಯಲ್ಲಿ ಜರಿಯಲು ಶುರುಮಾಡಿದ ಹಾಗೆ ಇಂದು ಗಂಡಿನ ಮನೆಯಲ್ಲಿ ಹೆಣ್ಣಿನ ಕಡೆಯವರದ್ದೇ ಮೊದಲ ಪಾಳಿ. ವರನನ್ನು ಜರೆಯುವುದು, ಭೀಗಿತಿ ಅಥವಾ ಭೀಗರು ,ಗಂಡಿನ ಕಡೆಯ ನೆಂಟರು ಹೀಗೆ ಎಲ್ಲರನ್ನು ಜರೆದು ಹಾಡನ್ನು ಹೇಳಿ ಮೋಜಿನ ವಾತಾವರಣವನ್ನು ನಿರ್ಮಾಣವನ್ನು ಮಾಡುವುದು. ಅದಕ್ಕೆ ಉತ್ತರವಾಗಿ ಗಂಡಿನ ಕಡೆಯವರು ಝಡಾಯಿಸುವುದು. ಯಾರು ಯಾರನ್ನು ಜರೆದರೂ ಅದೇ ಒಂದು ಮೋಜು ಆಗುತಿತ್ತು. ಎರಡೂ ಕಡೆಯವರು 'ಹುಯ್ಯೋ' ಎಂದು ಅತ್ಯಂತ ಖುಷಿಯಿಂದ ನಗೆಯಾಡುತ್ತಿದ್ದರು. ಅತಿ ಕೊನೆಗೆ ಇಲ್ಲಿಯವರೆಗೆ ಬೀಗರನ್ನು ಜರೆಯದೆ ಇದ್ದರೆ [ ಈ ಹೊಗಳುವ ಸಲುವಾಗಿಯೇ ಯಾರಾದರೊಬ್ಬ ಮುಖ್ಯಸ್ತರನ್ನು ಮೊದಲು ಜರೆಯುತ್ತಿರಲಿಲ್ಲ] ಈಗ ಭೀಗರನ್ನು ಹೊಗಳಿ ಹಾಡನ್ನು ಹೇಳಿ ಇಷ್ಟು ಹೊತ್ತಿನವರೆಗೆ ಯಾರಿಗಾದರೂ ಒಮ್ಮೆ ಬೇಸರವಾಗಿದ್ದರೆ ಅದನ್ನು compensete ಮಾಡುವುದು. ಇದು ಎರಡೂ ಕಡೆಯವರಿಂದ ನಡೆಯುವ ಓಲೈಕೆಯ ತಂತ್ರ. ಕೆಲವೊಮ್ಮೆ ಈ ರೀತಿಯ ಜರೆವ ಹಾಡಿನ ಪ್ರಕ್ರಿಯೆ ಜಡಕಿಗೆ ಸಿಕ್ಕು [ ಜರೆಯುವುದರಲ್ಲಿ ಒಂದು ಕಡೆಯವರು weak ಇದ್ದಾಗ ] ಎರಡು ಸಂಬಂಧಗಳ ನಡುವೆ ಜಗಳ ಆಗಿದ್ದು ಉಂಟು.
ಒಟ್ಟಾರೆ ಅಂದಿನ ಕಾಲದಲ್ಲಿ ಶುಭಾಸಮಾರಂಭದಲ್ಲಿ ಧಾರ್ಮಿಕವಿಧಿಗಳನ್ನು ಪ್ರಸ್ತುತಪಡಿಸುವ ಮಂತ್ರಗಳ ಜೊತೆಗೆ ಅದೇ ಧಾರ್ಮಿಕ ವಿಧಿಗಳ ಝಾಡನ್ನು ಬಿಂಬಿಸುವ ಹಾಡುಗಳೂ ಇರುತ್ತಿದ್ದುವು. ಜೊತೆಗೆ ಸಂಬಂಧಗಳನ್ನು ಬೆಸೆಯುವಂಥಹ ತಮಾಷೆಯ ಜರೆಯುವ ಹಾಡುಗಳೂ ಇರುತ್ತಿದ್ದುವು. ವಿಧ್ಯುಕ್ತವಾದ ಧಾರ್ಮಿಕ ವಿಧಿಗಳ ಮದುವೆ ಕಾರ್ಯಕ್ರಮದಲ್ಲಿ ಅಂದಿನ ಸಣ್ಣ ವಯಸ್ಸಿನ [ ಗಂಡು ಹದಿನಾರರಿಂದ ಇಪ್ಪತ್ತು ವರ್ಷಗಳು.ಹೆಣ್ಣು ಎಂಟರಿಂದ ಹದಿನೈದು ವರ್ಷಗಳು] ವಧು ಮತ್ತು ವರರ ನಡುವೆ ಸುಲಭ ಸಾಂಗತ್ಯವನ್ನು ಏರ್ಪಡಿಸುವುದಕ್ಕಾಗಿ ಓಕುಳಿಯಾಡುವುದು, ನೀರಿನಲ್ಲಿ ಹಾಕಿದ ಉಂಗುರವನ್ನು ಹುಡುಕಿ ತೆಗೆಯುವುದು [ಅದನ್ನು ಹುಡುಕಿ ತೆಗದವರಿಗೆ ಆ ಉಂಗುರ], ಅಲ್ಲೇ ಮದುವೆ ಮನೆಯಲ್ಲಿ ವಧು,ವರರು ಮೀನು ಹಿಡಿಯುವ ಆಟವನ್ನುಆಡುವುದು ಮುಂತಾದ ಪ್ರಕ್ರಿಯೆಗಳು ಜರೆದ ಹಾಡುಗಳನ್ತಾದ್ದೆ ಮತ್ತೊಂದು ರೂಪ.ಸ್ಸಕಸ್ಃಟು ಪುರುಸೊತ್ತು ಇದ್ದ ಅಂದಿನ ಜೀವನ ಕ್ರಮದಲ್ಲಿ ನವ ವಧು ಮತ್ತು ವರ ಹಾಗೂ ಹೊಸ ಎರಡು ಸಂಬಂಧಗಳನ್ನು ಚೆನ್ನಾಗಿ ಬೆಸೆಯುವಂತಹ ಹವ್ಯಕರ ಸಾಮಾಜಿಕ ಪ್ರಕ್ರಿಯೆ ಇವುಗಳಾಗಿದ್ದುವು.

Sunday 13 July 2014

===== ಹವ್ಯಕರ ಮದುವೆಯಲ್ಲಿ ಅಂದಿನ ಸಂಪ್ರದಾಯ. =====



ಹವ್ಯಕರ ಮದುವೆ ಮನೆಯಲ್ಲಿ ಗಂಡಿನ ಕಡೆಯ ನೆಂಟರನ್ನು ಊಟಕ್ಕೆ ಕರೆಯುವುದರಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಸಂಪ್ರದಾಯವಿತ್ತು. ನೆಂಟರಿಗೆನ್ದೇ ಒಂದು ಬಿಡಾರದ ಮನೆಯೆಂದು ಊರಿನಲ್ಲಿ ಒಂದು ಮನೆಯನ್ನು ಹೆಣ್ಣಿನಕಡೆಯವರು ವ್ಯವಸ್ಥೆ ಮಾಡುತ್ತಿದ್ದರು. ಅದು ಹೆಚ್ಚಾಗಿ ಮದುವೆ ಮನೆಯ ಮೊದಲೇ ಇರುತ್ತಿತ್ತು. ಏಕೆಂದರೆ ಗಂಡಿನಕಡೆಯವರು ಮದುವೆಗೆ ಮುಂಚೆ ಮದುವೆಮನೆಯನ್ನು ದಾಟಿ ಹೋಗುವ ಪದ್ಧತಿಯಿರಲಿಲ್ಲ. ಅಲ್ಲಿ ಅವರು ಕೈಕಾಲು,ಮುಖತೊಳೆದುಕೊಳ್ಳಲಿಕ್ಕೆ,ಬಟ್ಟೆ ಬದಲಾಯಿಸಿಕೊಳ್ಳುವುದಕ್ಕೆ, ತಾತ್ಕಾಲಿಕ ವಿಶ್ರಾಂತಿ ತೆಗೆದುಕೊಳ್ಳಲಿಕ್ಕೆ,ಲಘು ಪಾನೀಯಕ್ಕೆ ಅನುಕೂಲತೆ ಕಲ್ಪಿಸಲಾಗುತ್ತಿತ್ತು. ಅಂದು ಎಲ್ಲರಿಗೂ ಸಾಕೆನ್ನುವಷ್ಟು ಪುರುಸೊತ್ತು ಇದ್ದ ಕಾಲ.

ಮದುವೆ ಕಾರ್ಯಕ್ರಮ ಮುಗಿದಕೂಡಲೆ ನೆಂಟರು ಬಿಡಾರದ ಮನೆಗೆ ತಮ್ಮ ಅನುಕೂಲತೆಗಾಗಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಇಲ್ಲಿ ಹೆಣ್ಣಿನ ಮನೆಯಲ್ಲಿ ಊಟಕ್ಕೆ ತಯಾರಾದ ಕೂಡಲೆ ಮನೆಯ ಯಜಮಾನ ಪುರೋಹಿತರೊಡಗೂಡಿ ನೆಂಟರ ಬಿಡಾರದ ಮನೆಗೆ ಬರುತ್ತಿದ್ದ.ಹಾಗೆ ಬರುವಾಗ ಮಂಗಲಾಕ್ಷತೆ,ಒಂದು ಮಡಿ ಮತ್ತು ಒಂದು ಚೊಂಬು ನೀರು ಅವನ ಸಹಾಯಕರೊಂದಿಗೆ ತರುತ್ತಿದ್ದ. ಆ ನೀರಿನ ಚೊಂಬು ಮತ್ತು ಮಡಿಯನ್ನು ಮುಖ್ಯ ಬೀಗರೆದುರು ಇಡುತ್ತಿದ್ದ.ಕೈಕಾಲು,ಮುಖ ತೊಳೆದು ಮಡಿಯುಟ್ಟು ಊಟಕ್ಕೆ ಬರಬೇಕೆಂದು ಭಿನ್ನವಿಸಿಕೊಳ್ಳುತ್ತಿದ್ದ. ಅದಕ್ಕಾಗಿಯೆ ಆ ಮಡಿ ಮತ್ತು ನೀರು [ಸಾಂಕೇತಿಕವಾಗಿ]. ಪುರೋಹಿತರು ಅವರನ್ನು ಊಟಕ್ಕೆ ಆಹ್ವಾನಿಸುವ ಮಂತ್ರವೊಂದನ್ನು ಹೇಳುತ್ತಿದ್ದರು.ಅಷ್ಟಾದ ನಂತರ ಸರ್ವರೂ ಊಟಕ್ಕೆ ಆಗಮಿಸಬೇಕೆಂದು ಯಜಮಾನ ಬೀಗರು,ನೆಂಟರೆದುರಿಗೆ ಕೈ ಮುಗಿದು ಆಹ್ವಾನಿಸುತ್ತಿದ್ದ. ಅದಕ್ಕಾಗಿ ಬೀಗರು,ನೆಂಟರೆಲ್ಲರಿಗೆ ಅಕ್ಷತೆಯನ್ನು ಕೊಡುತ್ತಿದ್ದ. ಅಷ್ಟರಲ್ಲಿಯೇ ನೆಂಟರು ಆಗಿನ ಪದ್ಧತಿಯಂತೆ ಅಂಗಿ,ಬನಿಯನ್ ತೆಗೆದು ಶಲ್ಯ ಹೊದೆದುಕೊಂಡು ಊಟದ ಕರೆಗಾಗಿ ಅಣಿಯಾಗಿರುತ್ತಿದ್ದರು. ಆಗಿನ ಕಾಲದಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಗಂಡಸರೆಲ್ಲರೂ ಪಂಚೆಯುಟ್ಟು ಬರುತ್ತಿದ್ದರು. ಈ ರೀತಿ ಆಹ್ವಾನ ಬಂದ ನಂತರ ಬೀಗರು,ಅವರ ಹಿಂದೆ ಆಯಾ ಮಟ್ಟದ ಜೇಷ್ಟತೆಯ ಮೇಲೆ ಮದುವೆ ಮನೆಗೆ ಔತಣಕ್ಕೆ ಎಲ್ಲರೂ ಹೊರಡುತ್ತಿದ್ದರು. ಇಲ್ಲಿ ಇನ್ನೊಂದು ವಿಶೇಷವೆಂದರೆ ನೆಂಟರನ್ನು ಊಟಕ್ಕೆ ಕರೆತರಲು ಓಲಗದವರು ಓಲಗ ವನ್ನು ನೆಂಟರ ಮುಂದೆ ಊದುತ್ತ ಬರುತ್ತಿದ್ದರು. ನೆಂಟರು ನಿಧಾನ ನಡಿಗೆಯಲ್ಲಿ ಓಲಗದವರು,ಮನೆಯ ಯಜಮಾನನನ್ನು ಹಿಂಬಾಲಿಸುತ್ತಿದ್ದರು. ಹೀಗೆ ಮದುವೆಮನೆಗೆ ಬಂದು ನೆಂಟರು ಔತಣವನ್ನು ಸ್ವೀಕರಿಸುವ ಸಂಪ್ರದಾಯವಿತ್ತು.
ನೆಂಟರಿಗೆ ಊಟವಾದ ಹೊರತು ಹೆಣ್ಣಿನ ಕಡೆಯವರು ಊಟ ಮಾಡುವ ಹಾಗಿರಲಿಲ್ಲ.ನೆಂಟರ ಪಂಕ್ತಿ ಎಂತಲೇ ಪ್ರತ್ಯೇಕ ವ್ಯವಸ್ತೆ ಮಾಡಲಾಗುತ್ತಿತ್ತು. ಇದು ಸುಮಾರು ನಲವತ್ತು ವರ್ಷದ ಹಿಂದಿನ ಮಾತು.