Monday 30 March 2015

%%%%%% ಕುರಿಗೆ ಶೃಂಗಾರ ವೈಭವ %%%%%%


~~~~~~ ಎಂ. ಗಣಪತಿ. ಕಾನುಗೋಡು.
ಕುರಿಯೆಂದರೆ ಎಲ್ಲರ ಭಾವನೆಯಲ್ಲಿ ಕನಿಷ್ಠ. ಆದರೆ ಅದಕ್ಕೂ ಅದರ ಭಾವನೆಯಲ್ಲಿ ಸಂದರ್ಭದಲ್ಲಿ ತಾನು ಗರಿಷ್ಟ ಎನ್ನುವುದಿದೆ. ವಿಷಯ ತಿಳಿದರೆ ಹಾಗೆಂದು ಅದು ತಪ್ಪೂ ಅಲ್ಲ.
ಕುರಿಗೆ ಬೆಲೆ ಬರಬೇಕಾದರೆ ಅದಕ್ಕೆ ಚೆನ್ನಾಗಿ ಹೊಟ್ಟೆಗೆ ಹಾಕಿ ಬೆಳೆಸುತ್ತಾರೆ, ಸಾಕುತ್ತಾರೆ. ಅದನ್ನು ಖರೀದಿಸಿದವ ಅದರ ಮೈಯನ್ನು ನೋಡಿಯೇ ಅಷ್ಟೊಂದು ಹಣವನ್ನು ಕೊಡುತ್ತಾನೆ. ಬಹಳ ಖುಷಿಯಿಂದಲೇ ಅದನ್ನು ಮನೆಗೆ ತರುತ್ತಾನೆ. ನೋಡಿ, ಅದಕ್ಕೆ ಇದ್ದಲ್ಲಿಯೂ ಗೌರವ, ಕೊಟ್ಟಲ್ಲಿಯೂ ಗೌರವದ ಹೆಮ್ಮೆ.
ಖರೀದಿಸಿ ತಂದವ ಅದನ್ನು ಮನೆಯವರಿಗೆ ಮತ್ತು ಸುತ್ತಲಿನವರಿಗೆ ತೋರಿಸಿ ಹೆಮ್ಮೆಪಡುತ್ತಾನೆ. ಮನೆಗೆ ತಂದವನು ಅದಕ್ಕೆ ಸ್ನಾನ ಮಾಡಿಸುತ್ತಾನೆ.ಸಂತೋಷದಿಂದ ಹಣೆಗೆ ಕುಂಕುಮವನ್ನು ಹಚ್ಚುತ್ತಾನೆ. ಕೆಂಪು ದಾಸವಾಳ ಹೂವಿನ ಮಾಲೆಯನ್ನು ಅದರ ಕೊರಳಿಗೆ ಹಾಕುತ್ತಾನೆ. ಹಣೆಗೂ ಹೂವಿನ ದಂಡೆಯನ್ನು ಕಟ್ಟುತ್ತಾನೆ. ಹೇಗೆ ಬೇಕೋ ಹಾಗೆ ಮನಸೋ ಇಚ್ಛೆ ಅದನ್ನು ಶೃಂಗರಿಸುತ್ತಾನೆ. ಭಕ್ತಿಯಿಂದ ಅದಕ್ಕೆ ಪೂಜೆ ಮಾಡುತ್ತಾನೆ. ಕರ್ಪೂರದ ಆರತಿ ಎತ್ತುತ್ತಾನೆ. ಎಷ್ಟೊಂದು ವೈಭವ ಅದಕ್ಕೆ.
ಇಷ್ಟೆಲ್ಲಾ ಸಂಭ್ರಮವನ್ನು ಮಾಡಿದ ಮೇಲೆ ಆ ಕುರಿಗೂ ಸಂತೋಷವಾಗಿರಬೇಕು. ಸಂಭ್ರಮಿತ ಆ ಕುರಿಯನ್ನು ಮನೆಯ ಜನರು, ನೆರೆಹೊರೆಯ ಜನರು, ಕುರಿಯ ಒಡೆಕಾರನ ಮನೆಯ ಹತ್ತಿರದ ನೆಂಟರು ಒಡಗೊಂಡು ಊರಿನುದ್ದಕ್ಕೂ ಜಾಘಂಟೆ, ತಾಳಗಳ ಢಮ,ಢಮದೊಂದಿಗೆ ಮೆರವಣಿಗೆ ಒಯ್ಯುತ್ತಾರೆ. ಕುರಿಯು ಖುಷಿಯಿಂದ ಕುಣಿದು ಕುಪ್ಪಳಿಸುತ್ತಲೇ ನಡೆಯುತ್ತಿರುತ್ತದೆ.
ಊರ ತುದಿಯಲ್ಲಿರುವ ಭೂತಪ್ಪನ ಗುಡಿಯೆದುರು ಮೆರವಣಿಗೆ ಬಂದು ನಿಲ್ಲುತ್ತದೆ. ತಮ್ಮಲ್ಲೆರ ಜೊತೆಗೆ ಭೂತಪ್ಪ ದೇವರ ದರ್ಶನವನ್ನು ತನಗೂ ತನ್ನ ಒಡೆಕಾರನು ಮಾಡಿಸಲು ವ್ಯವಸ್ಥೆ ಮಾಡಿದ್ದಾನೆಂದು ಕುರಿ ಭಾವಿಸಿರಬೇಕು.
ಸರಿ. ಭೂತಪ್ಪ ದೇವರಿಗೆ ಪೂಜೆ , ಮಹಾಮಂಗಳಾರತಿಯನ್ನು ಯಜಮಾನನು [ ಒಡೆಕಾರ ]ನಡೆಸುತ್ತಾನೆ. ಕುರಿಗೂ ಆ ಮಹಾಮಂಗಳಾರತಿಯನ್ನು ದೇವರ ಆರತಿಯೆಂದು ತೋರಿಸಿ ಎತ್ತುತ್ತಾನೆ.
ಒಡೆಕಾರ ತನ್ನ ಹೆಗಲ ಮೇಲಿನ ಉದ್ದನೆಯ ಪಂಚೆಯನ್ನು ಕುರಿಯ ಕೊರಳಿಗೆ ಹಾಕುತ್ತಾನೆ. ಓಹೋ .. ಯಜಮಾನ ತನ್ನ ಪಂಚೆಯನ್ನೇ ತನಗೆ ಉಡುಗೊರೆ ಹೊಚ್ಚಿದನೆಂದು ಕುರಿ ಸಂತೋಷಗೊಂಡಿರಬೇಕು. ಹಾಕಿದ ಪಂಚೆಯಿಂದ ಕುರಿಯ ಕೊರಳನ್ನು ಒಂದೆಡೆ ಯಜಮಾನ ಘಟ್ಟಿಯಾಗಿ ಎಳೆದು ಹಿಡಿದುಕೊಂಡ. ಅಷ್ಟೊತ್ತಿಗೆ ಅದರ ಸೊಂಟವನ್ನು ಯಾರೋ ಘಟ್ಟಿಯಾಗಿ ಎಳೆದು ಹಿಡಿದುಕೊಂಡಿದ್ದರು. ಅಹಹ ....... ತನ್ನ ಯಜಮಾನ ಮತ್ತು ಅವನ ಕಡೆಯವರು ತನ್ನ ಕೊರಳು ಮೈಯನ್ನು ಹಿಡಿದುಕೊಂಡು ಮುದ್ದಾಡುತ್ತಿದ್ದಾರೆಂದು ಶೃಂಗಾರ ವೈಭವದಿಂದ ಸಂಭ್ರಮಿತವಾದ ಕುರಿಯು ಭಾವಿಸಿರಬೇಕು.
ಕಣ್ಣು ರೆಪ್ಪೆ ಮಿಡುಕಿಸುವುದರಲ್ಲಿ ತನ್ನ ಕುತ್ತಿಗೆಯನ್ನು ಕತ್ತರಿಸಿ ಭೂತಪ್ಪ ದೇವರಿಗೆ ತನ್ನನ್ನು ಬಲಿಕೊಟ್ಟಿದ್ದು ಕುರಿಗೆ ಕೊನೆಗೂ ಗೊತ್ತಾಗಲೇ ಇಲ್ಲ.
" ಬದುಕಿನಲ್ಲಿ ನಮ್ಮ ಪಾಡೂ ಹಲವು ಬಾರಿ ಈ ಸಂಭ್ರಮಿತ ಕುರಿಯ ಪಾಡಿನಂತೆಯೇ ಆಗುತ್ತದೆ ".
ತಾರೀಖು : 29 - 3 - 2015

@ ಕಚಗುಳಿ :

ನಾಗಪ್ಪ ಶೆಟ್ಟರ ಅಂಗಡಿಗೆ ಮೊನ್ನೆ ರಾತ್ರಿ ಜೀನಸು ಸಾಮಾನು ತರೋಣ ಅಂತ ಹೋಗಿದ್ದೆ. ಶೆಟ್ಟರು ನಾನು ಹೇಳಿದ ಸಾಮಾನಿನ ಪಟ್ಟಿಯನ್ನು ಬರೆಯುತ್ತಿದ್ದರು. ತಕ್ಷಣ ವಿದ್ಯುತ್ ಹೋಗಿ ಅಂಗಡಿಯೆಲ್ಲಾ ಕಪ್ಪಾಯಿತು.ತತ್ ಕ್ಷಣ ಶೆಟ್ರು ನನ್ನ ಎರಡೂ ಕೈಗಳನ್ನು ಘಟ್ಟಿಯಾಗಿ ಹಿಡಿದುಕೊಂಡು " ದೇವ್ರೂ ಇವತ್ತು ನೀವು ನಮ್ಮ ಮನೆಗೆ ಊಟಕ್ಕೆ ಬರಬೇಕು " ಅಂದ್ರು. 
"ಇವತ್ತು ಆಗಲ್ಲ, ಇನ್ನೊಂದು ದಿನ ಖಂಡಿತ ಬರ್ತೀನಿ " ಎಂದೆ.
" ಹಾಗಂದ್ರೆ ಆಗೋಲ್ಲ ದೇವ್ರೂ, ನಾನೇನು ನಿಮ್ಮನ್ನ ದಿನಾ ಊಟಕ್ಕೆ ಕರೀತೀನಾ ? " ಎನ್ನುತ್ತಾ ನನ್ನ ಕೈಗಳನ್ನು ಕಪ್ಪಿನಲ್ಲಿಯೇ ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡರು.
ನಾನು ಬೇಡವೆಂದಷ್ಟೂಅವರ ಒತ್ತಾಯ ಜಾಸ್ತಿ ಆಗ್ತಾ ಹೋಯ್ತು. ನನ್ನ ಕೈಗಳನ್ನಂತೂ ಬಿಡಲೇ ಇಲ್ಲ.
ಸದ್ಯ ವಿದ್ಯುತ್ ಬಂದು ದೀಪ ಬಂತು.
ಶೆಟ್ರು " ಸರಿ, ನಿಮಗಿಷ್ಟ ಇಲ್ಲ ಎಂದ ಮೇಲೆ ನಾನು ಯಾಕೆ ಒತ್ತಾಯ ಮಾಡಲಿ " ಎನ್ನುತ್ತಾ ನನ್ನ ಕೈಗಳನ್ನು ಬಿಟ್ಟರು.
ದೀಪ ಆರಿ ಅಂಗಡಿಯೆಲ್ಲಾ ಕಪ್ಪಾದಾಗ ನಾನು ಅವರ ಹಣದ ಪೆಟ್ಟಿಗೆ ಬಳಿ ಕುಳಿತಿದ್ದುದೇ ಅವರ ಆ ಒತ್ತಾಯಕ್ಕೆ ಕಾರಣವಾಗಿತ್ತು

&&&&&& ಗ್ಯಾಸ್ಟ್ರಿಕ್ ಎಂದರೇನು ? &&&&

ನಮಗೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಗ್ಯಾಸ್ಟರೈಟಿಸ್ ನ ಅನುಭವವಾಗಿರುತ್ತದೆ. ಇದನ್ನು ನಿರ್ಲಕ್ಷ ಮಾಡಿದರೆ ಕ್ರಮೇಣವಾಗಿ ಗಂಭೀರ ಅರೋಗ್ಯ ಸಮಸ್ಯೆಗಳು ಉಂಟಾಗುವ ಸಂದರ್ಭ ಇರುತ್ತದೆ.
ನಾವು ಸೇವಿಸುವ ಆಹಾರವು ಅನ್ನನಾಳದ ಮೂಲಕ ಜಠರವನ್ನು ಸೇರುತ್ತದೆ.ಜಠರದಲ್ಲಿರುವ ಸೆಲ್ ನಿಂದ ಗ್ಯಾಸ್ಟರೈಟೀಸ್ ದ್ರವ ಯುತ್ಪತ್ತಿಯಾಗುತ್ತದೆ.ನಾವು ತೆಗೆದುಕೊಂಡ ಆಹಾರವು ಗ್ಯಾಸ್ಟ್ರಿಕ್ ದ್ರವದ ಜೊತೆ ಮಿಶ್ರವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಕೆಲವು ಸಮಯದಲ್ಲಿ ಈ ಗ್ಯಾಸ್ಟ್ರಿಕ್ ದ್ರವ ಬೇಕಾದ ಪ್ರಮಾಣಕ್ಕಿಂತ ಜಾಸ್ತಿಯಾಗಿ ಯುತ್ಪತ್ತಿಯಾದರೆ ಗ್ಯಾಸ್ಟ್ರೈಟೀಸ್ ಉಂಟಾಗುತ್ತದೆ. ಇದನ್ನೇ ನಾವು ಗ್ಯಾಸ್ಟ್ರಿಕ್ ಅಥವಾ ಕನ್ನಡದಲ್ಲಿ ಆಮ್ಲಪಿತ್ತ ಎನ್ನುತ್ತೇವೆ. ಒಮ್ಮೆ ಈ ದ್ರವ ಯುತ್ಪತ್ತಿಯಾಗುವ ಸಂದರ್ಭದಲ್ಲಿ ಅದು ಬೆರೆಯಲಿಚ್ಚಿಸುವ ಆಹಾರ ಜಠರಕ್ಕೆ ಹೋಗದಿದ್ದಾಗಲೂ ಗ್ಯಾಸ್ಟ್ರೈಟೀಸ್ ಉಂಟಾಗುತ್ತದೆ.
ಅವಸರದ ಜೀವನ ಶೈಲಿಯೂ ಗ್ಯಾಸ್ಟ್ರೈಟೀಸ್ ಗೆ ಪ್ರಮುಖ ಕಾರಣ.ಇದು ಮಿದುಳಿನ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಎಡರ್ನಲ್ ಗ್ಲಾಂಡ್ಸ್ ನ ಸ್ರವಿಸುವಿಕೆ ಹೆಚ್ಚಾಗುತ್ತದೆ.ಮಾನಸಿಕವಾಗಿ ಒತ್ತಡಕ್ಕೆ ಒಳಗಾದಾಗ ಹಾರ್ಮೋನ್ ಸಮತೋಲನ ತಪ್ಪಿ ಗ್ಯಾಸ್ಟ್ರೈಟೀಸ್ ಉಂಟಾಗುತ್ತದೆ. ಆಹಾರದಲ್ಲಿ ಹೆಚ್ಚಿನ ಮಸಾಲ ಪದಾರ್ಥ ಮತ್ತು ಅಧಿಕ ಎಣ್ಣೆ ಪದಾರ್ಥ ಸೇವನೆಯಿಂದ, ಅತಿ ಖಾರ, ಅತಿಹುಳಿಪದಾರ್ಥ ಸೇವನೆಯಿಂದ, ಹಾಗೂ ಹಸಿದ ಹೊಟ್ಟೆಯಲ್ಲಿ ಕಾಫೀ,ಟೀ ಯನ್ನು ಕುಡಿಯುವುದರಿಂದ, ದಿನದಲ್ಲಿ ಸಾಕಷ್ಟು ನೀರು ಕುಡಿಯದೇ ಇರುವುದರಿಂದ [ ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರನ್ನು ಕುಡಿಯಬೇಕು. ಒಂದು ಸಾರಿಗೆ ಅರ್ಧ ಲೀಟರಿಗಿಂತ ಹೆಚ್ಚು ನೀರನ್ನು ಕುಡಿಯಬಾರದು ], ನೋವು ನಿರೋಧಕ ಮಾತ್ರೆಗಳನ್ನು ಸೇವನೆ ಮಾಡುವುದರಿಂದ, ಆಲ್ಕೋಹಾಲ್ ನಂತಹ ದುಶ್ಚಟಗಳನ್ನು ಅತಿಯಾಗಿ ಹೊಂದುವುದರಿಂದ, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದರಿಂದ, ವಿಟಮಿನ್ ಬಿ - 12 ಮತ್ತು ಅನಿಮಿಯಾ ಸಮಸ್ಯೆ ಇರುವ ಕಾರಣದಿಂದ ಗ್ಯಾಸ್ಟ್ರೈಟೀಸ್ ಉಂಟಾಗುವ ಸಾಧ್ಯತೆಗಳು ಬಹಳ ಇದೆ.
ಗ್ಯಾಸ್ಟ್ರೈಟೀಸ್ ಆದಾಗ ಕಂಡುಬರುವ ಲಕ್ಷಣಗಳು ಹಲವಾರು. ಎದೆಯಲ್ಲಿ, ಹೊಟ್ಟೆಯ ಕೆಳಭಾಗದಲ್ಲಿ ಉರಿ, ಹುಳಿತೇಗು, ಒಮ್ಮೊಮ್ಮೆ ವಾಂತಿ ಬಂದ ಹಾಗೆ ಅನ್ನಿಸುತ್ತದೆ, ಹೆಚ್ಚಾದಾಗ ಪಿತ್ತ,ಪಿತ್ತ ವಾಂತಿಯೂ ಆಗುತ್ತದೆ, ಹೊಟ್ಟೆ ಉಬ್ಬರ,ನೋವು, ಅಜೀರ್ಣ, ತಲೆ ಸುತ್ತುವುದು, ಊಟ ಸೇರದೆ ಇರುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಕ್ರಾನಿಕ್ [ chronic ] ಗ್ಯಾಸ್ಟರೈಟೀಸ್ ಕೂಡ ಕೆಲವರಿಗೆ ಇರುತ್ತದೆ. ಅದರ ವಿವರಣೆ ಬೇರೆಯೇ ಇದೆ.
ಗ್ಯಾಸ್ಟ್ರೈಟಿಸ್ ಬರುವುದಕ್ಕೆ ಮೇಲೆ ತಿಳಿಸಿದ ಅನೇಕ ಕಾರಣಗಳನ್ನು ಗಮನಿಸಿ ಅವುಗಳನ್ನು ಪರಿಹರಿಸಿಕೊಳ್ಳುವತ್ತ ಗಮನ ಹರಿಸಿದರೆ ಅದರ ಸಮಸ್ಯೆ ಇಲ್ಲವಾಗುತ್ತದೆ.
ಮಾಹಿತಿಯ ಕೃಪೆ : ಹೆಸರಾಂತ ವೈದ್ಯರು.
~~~~~~~~ ಸಂಗ್ರಹ : ಎಂ. ಗಣಪತಿ. ಕಾನುಗೋಡು.
ತಾರೀಖು : 27 - 3 - 2015