Monday 2 October 2017

%%%%% ಹೆಣದ ಹಿಂದೆ ಜನ ಕ್ಯೂನಲ್ಲಿ ಸಾಗುತಿದ್ದುದು ತಮ್ಮ ಸರದಿಗೋ ?. %%%%%


~~~~~ ಎಂ. ಗಣಪತಿ. ಕಾನುಗೋಡು.
ಮೊನ್ನೆ ನಮ್ಮ ಹತ್ತಿರದ ನಗರದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಒಂದು ಹೆಣವನ್ನು ಹೊತ್ತು ಒಯ್ಯುತ್ತಿದ್ದರು. ಅದರ ಮುಂದೆ ಸತ್ತವನ ಮೊಮ್ಮಗ ಮಡಿಕೆಯಲ್ಲಿ ಅಗ್ನಿಯನ್ನು ಹಿಡಿದು ಸಾಗುತ್ತಿದ್ದ. ಅವನ ಹಿಂದೆ ಅವನು ಸಾಕಿದ ನಾಯಿ ಅವನನ್ನೇ ಹಿಂಬಾಲಿಸುತ್ತಿತ್ತು.
ಸಂಬಂಧಿಕರು ಒಂದು ಗುಂಪಾಗಿ ದುಃಖದಿಂದ ಹೆಣದ ಹಿಂದೆ ನಡೆದು ಹೋಗುತ್ತಿದ್ದರು. ಅವರ ಹಿಂದೆ ಸುಮಾರು ಹತ್ತು ಹದಿನೈದು ಜನ ' ಕ್ಯೂ ' ನಲ್ಲಿ ಖುಷಿಯಿಂದ ನಗುಮುಖದಿಂದಲೇ ಅವರನ್ನು ಹಿಂಬಾಲಿಸುತ್ತಿದ್ದರು.
ಶ್ಮಶಾನವನ್ನು ತಲುಪಬೇಕಿದ್ದರೆ ನಗರದ ಮಧ್ಯೆಯೇ ಸುಮಾರು ದೂರ ಹೆಣ ಸಾಗಬೇಕಾಗಿತ್ತು. ದಾರಿಯಲ್ಲಿ ಓಡಾಡುತ್ತಿದ್ದ ಜನ, ಅಂಗಡಿ ಮುಂಗಟ್ಟಿನಲ್ಲಿ ಇದ್ದ ಜನ, ಅಲ್ಲಲ್ಲಿ ಮನೆಯ ಮುಂದೆ ನಿಂತ ಜನ ಹೀಗೆ ಈ ದೃಶ್ಯವನ್ನು ನೋಡಿದವರಿಗೆ ಇದು ಒಂದು ಥರ ಕುತೂಹಲವೆನ್ನಿಸಿತು. ಏಕೆಂದರೆ ಒಂದಷ್ಟು ಮಂದಿ ದುಃಖದಿಂದ ಹೆಣವನ್ನು ಸುತ್ತುವರಿದುಕೊಂಡು ಗುಂಪಾಗಿ ಹೋಗುತ್ತಿದ್ದಾರೆ. ಇನ್ನು ಕೆಲವರು ಅವರ ಹಿಂದೆ ಸಾಲಾಗಿ ಸಂತೋಷದಿಂದ ಮುನ್ನೆಡೆಯುತ್ತಿದ್ದಾರೆ. ಏನಿದು..... ?, ಏನಿರಬಹುದು ..........?, ತಾವೂ ಸಾವಿನಲ್ಲಿ ಸತ್ತವನನ್ನು ಅನುಸರಿಸಲು ಅಷ್ಟು ಸಂತೋಷದಿಂದ ಸರದಿಯಲ್ಲಿ ಮುಂದೆ ನುಗ್ಗುತ್ತಿದ್ದಾರಾ ? ಎಂದು ಹಲವು ಬಗೆಯಲ್ಲಿ ಯೋಚಿಸ ಹತ್ತಿದರು.
ಇದಿಷ್ಟಕ್ಕೂ ನಡುನಡುವೆ ಆಗಾಗ ಒಬ್ಬೊಬ್ಬರಾಗಿಯೇ ಹೊರಗಿನಿಂದ ಬಂದು ' ಇವರು ಸತ್ತದ್ದು ಹೇಗೆ ? ಎಂದು ಗುಟ್ಟಾಗಿ ಅಗ್ನಿಯನ್ನು ಹಿಡಿದುಕೊಂಡ ಮೊಮ್ಮಗನ ಕಿವಿಯಲ್ಲಿ ಪ್ರಶ್ನೆ ಮಾಡುತ್ತಿದ್ದರು. ಅದಕ್ಕೆ ಅವನು ಏನನ್ನೋ ಗುಟ್ಟಾಗಿಯೇ ಉತ್ತರವನ್ನು ಕೊಡುತ್ತಿದ್ದ. ಹಾಗೆಯೇ ತಕ್ಷಣ ಆ ವ್ಯಕ್ತಿ ಹಿಂದಿನ ' ಕ್ಯೂ ' ನಲ್ಲಿ ಸೇರಿಕೊಳ್ಳುತ್ತಿದ್ದ. ಆ ' ಕ್ಯೂ' ಉದ್ದ ಬೆಳೆದದ್ದು ಹೀಗೆಯೇ.
ನಾನು ಹೇಗೋ ಆ ಸಂದರ್ಭಕ್ಕೆ ಅಲ್ಲಿಗೆ ಹೋಗಿದ್ದೆ. ನನಗೂ ಈ ದೃಶ್ಯವನ್ನು ನೋಡಿ ಕುತೂಹಲ ಕೆರಳಿತು. ಆ ಮೊಮ್ಮಗನ ಕಿವಿಯಲ್ಲಿ ಅವರೇನು ಕೇಳುತ್ತಿದ್ದಾರೆ, ಅದಕ್ಕೆ ಅವನೇನು ಉತ್ತರವನ್ನು ಕೊಡುತ್ತಿದ್ದಾನೆ, ಹಾಗೆ ಕೇಳಿಸಿಕೊಂಡವರು ತಕ್ಷಣ ' ಕ್ಯೂ ' ನಲ್ಲಿ ಏಕೆ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ನನ್ನನ್ನು ಇನ್ನಷ್ಟು ಕುತೂಹಲಕ್ಕೀಡು ಮಾಡಿತು.
ಅಷ್ಟೊತ್ತಿಗೆ ಮತ್ತೊಬ್ಬ ಬಂದು ಆ ಮೊಮ್ಮಗನ ಕಿವಿ ಕಚ್ಚಲು ಶುರುಮಾಡಿದ. ವಿಷಯ ತಿಳಿದುಕೊಳ್ಳಲು ಈ ಸಮಯಕ್ಕೆ ಮೊಮ್ಮಗನ ಪಕ್ಕಕ್ಕೆ ಸೇರಿಕೊಂಡಿದ್ದ ನಾನು ಅವರಿಬ್ಬ ಗುಟ್ಟಿನ ಸಂಭಾಷಣೆಗೆ ಕಿವಿಯನ್ನು ಕೊಟ್ಟೆ. ಅದನ್ನು ಕೇಳಿ ನನಗೆ ತಲೆಯೇ ಕೆಟ್ಟು ಹೋಯಿತು. ಏಕೆ ?.
ಅವನ ಪ್ರಶ್ನೆ ಮತ್ತು ಮೊಮ್ಮಗನ ಉತ್ತರ ಹೀಗಿತ್ತು.
" ಇವರು ಸತ್ತದ್ದು ಹೇಗೆ ? ".
" ಮೊನ್ನೆ ನಾನು ಸಾಕಿದ ಈ ನಾಯಿ ನನ್ನ ಅಜ್ಜನನ್ನು ಕಚ್ಚಿತು. ಅದು ಕಚ್ಚಿ ಎರಡೇ ದಿನಗಳಲ್ಲಿ ನನ್ನ ಅಜ್ಜ ಸತ್ತು ಹೋದ ".
" ಹಾಗಾದರೆ ನಿನ್ನ ನಾಯಿಯನ್ನು ನನಗೆ ಒಂದು ವಾರದ ಮಟ್ಟಿಗೆ ಬಾಡಿಗೆಗೆ ಕೊಡು. ಅದಕ್ಕೆ ಬಾಡಿಗೆಯಾಗಿ ಒಂದು ಲಕ್ಷ ರುಪಾಯಿ ಕೊಡುತ್ತೇನೆ ".
ಅದಕ್ಕೆ ಉತ್ತರ ಪಡೆದವನು ತನ್ನ ಮೊದಲಿನವರಂತೆ ತಕ್ಷಣ ' ಕ್ಯೂ ' ನಲ್ಲಿ ಹೋಗಿ ನಿಂತದ್ದೂ ಆಯಿತು.
ಹಾಗಾದರೆ ಮೊಮ್ಮಗ ಹೇಳಿದ್ದೇನು ?.
" ಅದಕ್ಕಿಂತಲೂ ಹೆಚ್ಚು ಕೊಡುತ್ತೇನೆ ಎಂದು ಕೇಳಿದವರು ನಿಮಗಿಂತ ಮುಂಚೆ ' ಕ್ಯೂ ' ನಲ್ಲಿ ಇದ್ದಾರೆ. ಆದ್ದರಿಂದ ನಿಮಗೇ ತಕ್ಷಣವೇ ಕೊಡಲು ಸಾಧ್ಯವಿಲ್ಲ. ಬೇಕೇಬೇಕೆಂದಿದ್ದರೆ ಅದಕ್ಕಿಂತ ಹೆಚ್ಚು ಕೊಡಬೇಕು, ' ಕ್ಯೂ ' ನಲ್ಲಿ ಕಾಯಿರಿ. ".
ತಾರೀಖು : 23 - 9 - 2015 .
ವಿಷಯದ ಕೃಪೆ : ಸುಧಾ ವಾರಪತ್ರಿಕೆ.

#### ರಾಮಾಯಣದಲ್ಲಿ ಹನುಮಂತನನ್ನು ಸೃಷ್ಟಿಸಿದವರು ಯಾರು ?. ಹನುಮಂತ ರಾಮನ ಬಂಟನಾದದ್ದು ಹೇಗೆ ? ####


ಮೇರು ಪರ್ವತದಲ್ಲಿ ಕೇಸರಿ ಎನ್ನುವ ವಾನರ ರಾಜ ಮತ್ತು ಆತನ ಹೆಂಡತಿ ಅಂಜನೆಗೆ ಮಗನಾಗಿ ಹುಟ್ಟಿದವ ಹನುಮಂತ. ಮಕ್ಕಳಾಗದಿದ್ದಾಗ ಅವರು ತಮ್ಮ ಕುಲದೇವರಾದ ವಾಯುದೇವರನ್ನು ಕುರಿತು ಪ್ರಾರ್ಥಿಸಿ ವಾಯುವಿನ ಅನುಗ್ರಹದಿಂದ ಹನುಮಂತನನ್ನು ಪಡೆದರು. ಕೇಸರಿಯ ಮಗನಾದ್ದರಿಂದ ಕೆಸರಿನಂದನ, ಅಂಜನೆಯ ಮಗನಾದ್ದರಿಂದ ಆಂಜನೇಯ, ವಾಯುವಿಗೆ ಮರುತ್ ಎನ್ನುವ ಹೆಸರಿರುವುದರಿಂದ ಮಾರುತಿ ಎನ್ನುವ ಹೆಸರುಗಳು ಬಂತು.
ಹನುಮಂತ ಬಂಟನಾಗಿಲ್ಲ. ಆತ ರಾಜನ -- ವಾನರ ರಾಜನ -- ಮಗ. ಹನುಮಂತ ಸುಗ್ರೀವನ ಮಂತ್ರಿಯೂ ಹೌದು. ಆದ್ದರಿಂದ ಆತ ಬಂಟನಲ್ಲ. ರಾಮನು ಯಾರೆಂದು ಪರೀಕ್ಷಿಸಲು, ತಿಳಿದುಕೊಳ್ಳಲು ಸುಗ್ರೀವನ ಆದೇಶದ ಮೇರೆಗೆ ಹನುಮಂತ ರಾಮನ ಹತ್ತಿರ ಬಂದಿದ್ದ. ವಟುವಿನ ವೇಷ ಧರಿಸಿ ರಾಮನ ಬಳಿ ಹೋದಾಗ ರಾಮನ ತೇಜಸ್ಸು, ಮಾತು, ಗಾಂಭೀರ್ಯ ಎಲ್ಲವನ್ನು ನೋಡಿ ಹನುಮಂತ ಮರುಳಾಗಿಬಿಟ್ಟ. ಹೀಗಾಗಿ ರಾಮನ ಬಾಲಿ ಇರಲು ಇಚ್ಛಿಸಿದರಾಮನೇ ಹೇಳುತ್ತಾನೆ ' ಹನುಮಂತ ತನ್ನ ಮಿತ್ರ, ಆತ ಮಾಡಿದ ಸಹಾಯವನ್ನು ತೀರಿಸಲಿಕ್ಕಾಗುವುದಿಲ್ಲ, ನಾನು ಅವನಿಗೆ ಋಣಿ ' ಎಂದಿದ್ದಾನೆ. ಆದರೆ ಹನುಮಂತನೇ ತಾನು ರಾಮನ ದಾಸ ಎಂದುಕೊಳ್ಳುತ್ತಾನೆ. ಆದ್ದರಿಂದ ಹನುಮಂತ ಬಂಟನಲ್ಲ. ಸ್ವಇಚ್ಹೆಯಿಂದ ರಾಮನ ಆಪ್ತ ತಾನು ಎಂದು ಹೇಳಿಕೊಳ್ಳುತ್ತಾನೆ.
~~~~ ಸತ್ಯದರ್ಶನ ಖ್ಯಾತಿಯ ಡಾ.ಪಾವಗಡ ಪ್ರಕಾಶರಾವ್ [ ಸತ್ಯಪ್ರಕಾಶ -- 2 ].

-ಎಂ ಗಣಪತಿ , ಕಾನುಗೋಡು 

ಹೀಗೆ ಸುಮ್ಮನೆ,

ಈಗ ಬೀಳುತ್ತಿರುವುದು 'ಹಸ್ತೆ' ಮಳೆ. [ 27 - 9 - 2017 ರಿಂದ 10 - 10 - 2017 ] ಇದು ಹನಿಯಿಕ್ಕಬೇಕು.ದುಮ್ಮೆದ್ದು ಹೊಯ್ಯಬಾರದು ಎಂದು ಎಂದಿನ ಅಭಿಪ್ರಾಯ. ' ಹಸ್ತೆ ಹನುಕಿ ಚಿತ್ತೆ ಬರಸಿ ಸತಿ ದುಮ್ಮೆದ್ದು ಹೊಯ್ದಾಗ ಸಮೃದ್ಧಿಯಾಗುವುದು ' ಎಂದು ಬಲ್ಲವರ ಮಾತು. ಆಗ ಬೆಳೆ,ಫಸಲು ಚೆನ್ನಾಗಿ ಆಗುತ್ತದೆ. ಕಾಳು ಚೆನ್ನಾಗಿ ತುಂಬುತ್ತದೆ. ವಜನ ಬರುತ್ತದೆ. ಅಡಕೆಯೂ ಫಸಲು ತುಂಬಿಬರುತ್ತದೆ ಎನ್ನುತ್ತಾರೆ. ಫಸಲು ಗುತ್ತಿಗೆ ಹಿಡಿಯುವವರು ಇದನ್ನೆಲ್ಲಾ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಈಗ ಭತ್ತದ ಬೆಳೆ ಕೋಲು ಹೊಡೆಯಾಗಿರುತ್ತದೆ. ಅಂದರೆ ಅದು ತೆನೆಯಾಗಿ ಇನ್ನೂ ಅದರ ಎಲೆಗಳ ಸುತ್ತ ಮುಚ್ಚಿಕೊಂಡಿರುತ್ತದೆ. ಮೇಲ್ಭಾಗ ತೆರೆದುಕೊಂಡಿರುತ್ತದೆ. ಜೋರು ಮಳೆಯಾದರೆ ಅದರೊಳಗೆ ನೀರು ಮೀರಿ ಹೊಕ್ಕು ಭತ್ತ ಜೋಳ್ಳಾಗುತ್ತದೆ. ಹಸ್ತೆ ಮಳೆ ಅದಕ್ಕೆ ಆತಂಕ ಮಾಡದೆ ಬೆಳೆಯ ಸಮೃದ್ಧಿಗೆ ಪೂರಕವಾಗುತ್ತದೆ. ಚಿತ್ತೆ ಮಳೆ [೧೧-೧೦-೨೦೧೭ ರಿಂದ ೨೩-೧೦-೨೦೧೭ ] ಬರಸಬೇಕು.ಅದು ಬಂದರೆ ಬೆಳೆಗಳಿಗೆ ಹುಳು ಬೀಳುತ್ತದೆ. ಆ ಹುಳುವನ್ನು ನಿವಾರಿಸಲು ವಿಶಾಖೆ ಮಳೆ ಬೀಳಬೇಕು [೭-೧೧-೨೦೧೭ ರಿಂದ ೧೮-೧೧-೨೦೧೭] 'ಸ್ವಾತಿ ' ಮಳೆ [೨೪-೧೦-೨೦೧೭ ರಿಂದ ೬-೧೧-೨೦೧೭ ] ಚೆನ್ನಾಗಿ ಬರಬೇಕು. ಸ್ವಾತಿ ಮಳೆಯ ನೀರಿನಿಂದ ಹಾಲನ್ನು ಹೆಪ್ಪಿಡುತ್ತಾರೆ. ಅದು ಮರುದಿನ ಮೊಸರಾಗುತ್ತದೆ. ಒಂದು ಲೀಟರು ಹಾಲಿಗೆ ಸುಮಾರು ಐವತ್ತು ಮಿ. ಲೀ. ಸ್ವಾತಿ ನೀರು ಬೇಕಾಗಬಹುದು. ಹಳೆ ಮಜ್ಜಿಗೆಯನ್ನು ತೆಗೆದು ಹೊಸ ಮೊಸರನ್ನು ಮಾಡುವ ಈ ಕ್ರಮ ಬಹಳ ಹಿಂದಿನಿಂದ ಬಂದ ಸಂಪ್ರದಾಯ. ~~~~ ಎಂ.ಗಣಪತಿ ಕಾನುಗೋಡು.

ದಿವಂಗತ ಶಿರೂರು ವೆಂಕಮ್ಮ.

ದಿವಂಗತ ಶಿರೂರು ವೆಂಕಮ್ಮ. ನನ್ನ ತಾಯಿಯ ಚಿಕ್ಕಮ್ಮ. ನನ್ನ ಪ್ರೀತಿಯ ಅಜ್ಜಿ. ಚಿಕ್ಕ ವಯಸ್ಸಿನಲ್ಲಿ ಗಂಡ ಮತ್ತು ಏಕ ಮಾತ್ರ ಮಗನನ್ನು ಕಳೆದುಕೊಂಡವಳು. ಅತಿ ಬಡತನ, ಶಿಥಿಲವಾದ ಸಣ್ಣ ಮನೆ. ಕಷ್ಟದ ಸ್ಥಿತಿಯಲ್ಲಿ ಚಿಕ್ಕವಯಸ್ಸಿನ ವಿಧವಾ ಸೊಸೆ ಮತ್ತು ಆರು ಮಂದಿ ಚಿಕ್ಕ ಮೊಮ್ಮಕ್ಕಳನ್ನು ಬೆಳಸಿ ಮುನ್ನಡೆಸಿದವಳು. ತನ್ನ ಮನೆಯವರನ್ನಲ್ಲದೆ ನಮ್ಮೆಲ್ಲರನ್ನೂ ಬಹಳವಾಗಿ ಪ್ರೀತಿಸಿದವಳು. ಅಕ್ಕಿಯ ಡಬ್ಬ ಖಾಲಿಯಾದರೂ ಅವಳ ಮನೆಗೆ ನೆಂಟರು ಖಾಲಿಯಾಗುತ್ತಿರಲಿಲ್ಲ. ಅದಕ್ಕೆ ಕಾರಣ ಅವಳು ಜನರಿಗೆ ತೋರಿಸುತ್ತಿದ್ದ ಪ್ರೀತಿ, ವಾತ್ಸಲ್ಯ. ನೆಂಟರಿಗೆ ಅನ್ನ ಮಾಡಿ ಬಡಿಸಿ ತಾನು ಮತ್ತು ಮನೆಯವರು ಗುಟ್ಟಾಗಿ ಗಂಜಿ ಸುರಿದದ್ದು ಹಲವು ಬಾರಿ. ಅನೇಕ ಕಾಹಿಲೆಗಳಿಗೆ ಹಳ್ಳಿ ಔಷಧವನ್ನೂ ಕೊಡುತ್ತಿದ್ದಳು. ಆಕೆ ನಮ್ಮನ್ನು ಬಿಟ್ಟು ಹೋಗಿ 35 ವರುಷಗಳಾದುವು. ಈಗ ಅವಳ ಆರೂ ಮೊಮ್ಮಕ್ಕಳು -- ಗಂಡು ಮಕ್ಕಳು, ಹೆಣ್ಣು ಮಕ್ಕಳು ಸುಖವಾಗಿದ್ದಾರೆ. ಅದಕ್ಕೆ ಅವಳ ಪಾಲನಾ ತಪಸ್ಸು ಕಾರಣ. ನಮ್ಮೆಲ್ಲರ ಸಿರಿ ಸೊಬಗನ್ನು ನೋಡಲು ಅವಳಿಲ್ಲ ಎನ್ನುವುದೇ ನಮ್ಮೆಲ್ಲರ ಕೊರತೆ. ಅವಳಿಗೆ ಸಾಷ್ಟಾಂಗ ನಮಸ್ಕಾರ. ಫೋಟೋ ಕೃಪೆ : ಶ್ರೀ H.N.ಶ್ರೀಧರ ಹೆಗಡೆ ಮಂಕಳಲೆ
Image may contain: 1 person, close-up

#### ಭಾನು -- ಭೂಮಿ ####


ಎಲ್ಲಿಯ ಭಾನು ಎಲ್ಲಿಯ ಭೂಮಿ
ದಿಗಿಲು ತಂದಿದೆ ದಿಗಂತದ ಬೆಳಕು.
ಸಮುದ್ರವಸನೆಯತ್ತ ರವಿ ಕಿರಣ 
ರಜನಿಗದೋ ಚಿನ್ನದ ತಿಲಕ
ದಿನಕರನ ನೇರ ನೋಟದ ಭಾಸ.
ನೀರಿನುದ್ದಕೂ ಮಿನುಗುವ ಸೆರಗು
ಪರಿ ಸಾರುತಿದೆ ದಾರಿ ದೀಪದಂತೆ.
ತಂಪಿನ ಜಲಕೆ ಬೆಳ್ಳಿಯ ಪ್ರಭಾವಳಿ.
.............................................
ಚಿತ್ತಾರ ಸಾರುತಿದೆ ನೀತಿಯೊಂದ.
ನೀರ ತಟದಲಿನ ಮರವಿಂಗಿಸಿ ದಾಹವ
ಸೊಂಪಿನ ಸಕಲ ಸಮೃದ್ಧಿಯ ನಡುವೆ.
ಬತ್ತಿ ಕಾಷ್ಟವಾದುದು ಫಲ ಬಿಡದೆ ಬರೆ.
ಏಕೋ ಒಣಗಿ ಬರಡಾದುದು ಸೊರಗಿ.
ವಿಧಿ ಬಿಡಲಿಲ್ಲ ಅದು ಪಡೆದ ಪಾಡು.
~~~~~~~~~~~~~~~~~~~~~
ಎಂ ಗಣಪತಿ ಕಾನುಗೋಡು

Photography by : Sharada Hegde
Image may contain: twilight, sky, outdoor and nature

#### ದಡ್ಡನಿಗೆ ಒಂದು ಕಡೆ. ಬುದ್ಧಿವಂತನಿಗೆ ಮೂರು ಕಡೆ. ####


ಹಳ್ಳಿಯ ಊರಿನ ಒಂದು ಕಾಲು ದಾರಿಯಲ್ಲಿ ರಾತ್ರಿ ಒಬ್ಬ ದಡ್ಡ ನಡೆದುಕೊಂಡು ಹೋಗುತ್ತಿದ್ದ. ಅವನ ಕಾಲಿಗೆ ಏನೂ ಮೆತ್ತನ ವಸ್ತು ತಾಗಿದಂತಾಯಿತು. ಅದು ಏನೋ , ಯಂತದೋ ಎಂದು ರಸ್ತೆಗೆ ಅಂಗಾಲಿನಿಂದ ವರೆಸಿ ಮುಂದೆ ಹೊರಟು ಹೋದ. ಸ್ವಲ್ಪ ಹೊತ್ತು ತಡೆದು ಅದೇ ದಾರಿಯಲ್ಲಿ ಬುದ್ಧಿವಂತನೊಬ್ಬ ನಡೆದು ಬಂದ. ಅವನ ಕಾಲಿಗೂ ಅದು ಸ್ವಲ್ಪ ತಾಗಿತು. ಅರರೆ ಇದು ಏನಿರಬಹುದೆಂದು ಅಂಗಾಲಿನಲ್ಲಿಯೇ ಆಚೀಚೆ ನೆಲಕ್ಕೆ ತೀಡಿ ನೋಡಿದ. ಅಂಗಾಲಿಗೆಲ್ಲಾ ತಣ್ಣಗೆ ಆಯಿತೇ ವಿನಃ ಅದು ಏನೆಂದು ತಿಳಿಯಲಿಲ್ಲ. ಆಗ ಕೈಗೆ ಒರೆಸಿಕೊಂಡು ಬೆರಳುಗಳಿಂದ ತಿಕ್ಕಿ ನೋಡಿದ. ಆಗಲೂ ಹೊಳೆಯಲಿಲ್ಲ. ಆಗ ನೋಡಿಯೇ ಬಿಡೋಣವೆಂದು ಮೂಸಿ ನೋಡಿದ. ಅದು ಮೂಗಿಗೂ ಸಾಕಷ್ಟು ತಾಗಿತು. ಕೊನೆಗೆ ನೋಡಿದರೆ ಥೂ, ಪೂ, ಅದು ಪಾಯಖಾನೆ, ಯಾರೋ ನಡುದಾರಿಯಲ್ಲಿ ರಸ್ತೆಯಲ್ಲಿ ಹೇತು ಹೋಗಿದ್ದರು.
ನೀತಿ : ಹೆಚ್ಚು ವಿಚಾರಿಸದೆ ಮುಂದೆ ನಡೆದ ದಡ್ಡನಿಗೆ ಒಂದೇ ಕಡೆ ಸ್ವಲ್ಪ ಹೊಲಸಾಯಿತು. ಬಹಳ ವಿಚಾರ ಮಾಡಲು ಹೊರಟ ಬುದ್ಧಿವಂತನಿಗೆ -- ಕಾಲು, ಕೈ ಮತ್ತು ಮೂಗು -- ಹೀಗೆ ಮೂರು ಕಡೆ ಬಹಳ ಹೊಲಸಾಯಿತು.

31/Augus/2017