Wednesday 28 August 2013

ನವ ದಂಪತಿಗಳ ವಿವಾಹ ವಿಚ್ಛೇದನ



                                                                          -ಎಂ. ಗಣಪತಿ ಕಾನುಗೋಡು
ವಿವಾಹ ವಿಚ್ಛೇದನ ಹೊಸತಲ್ಲ. ಹಿಂದಿನ ಕಾಲದಲ್ಲಿ ವಿಚ್ಛೇದನ ಹೆಚ್ಚಾಗಿ ಪುರುಷ ಮೂಲವಾಗಿತ್ತು. ಪ್ರಸ್ತುತ ಮುಂದುವರೆದ ಸನ್ನಿವೇಶದಲ್ಲಿ ಪತಿಯರಷ್ಟೇ ಅಲ್ಲ ಅದಕ್ಕಿಂತ ಹೆಚ್ಚಾಗಿ ಪತ್ನಿಯರೇ ವಿಚ್ಛೇದನ ಬಯಸುವುದು ಕಂಡುಬರುತ್ತಿದೆ. ನವವಿವಾಹಿತರಲ್ಲಿ ವಿವಾಹವಾದ ಒಂದು ತಿಂಗಳು, ವರ್ಷದೊಳಗೆ  ಭಿನ್ನಾಭಿಪ್ರಾಯ ಹುಟ್ಟಿಕÉೂಂಡಿರುತ್ತದೆ. ಇದಕ್ಕೆ ಕಾರಣಗಳು ಹಲವಾರು. 
ಯುವಕ ಯುವತಿಯರಿಬ್ಬರು ಪರಸ್ಪರ ನಿರೀಕ್ಷೆಗಳ ಭ್ರಮೆಯಲ್ಲಿ ವಿವಾಹವಾಗಿರುತ್ತಾರೆ. ಅವುಗಳ ತುಲನೆ ವಿವಾಹದ ಮೊದಲನೆ ದಿನದಿಂದಲೇ ಇಬ್ಬರಿಂದಲೂ ಪರಸ್ಪರ ನಡೆಯುವುದಕ್ಕೆ ಪ್ರಾರಂಭವಾಗುತ್ತದೆ. ಯಾರ ನಿರೀಕ್ಷೆಗೆ ಯಾರೂ ನಿಲುಕುವುದಿಲ್ಲ. ಪರಸ್ಪರ ಭಿನ್ನಾಭಿಪ್ರಾಯಕ್ಕೆ  ಇದೇ ಮೊದಲ ಮೆಟ್ಟಿಲು.     
ಹೆಣ್ಣುಮಕ್ಕಳಿಗೆ ಈ ವಿಷಯದಲ್ಲಿ ಕಾನೂನಿನ ಸವಲತ್ತು ಹಿಂದಿನಿಗಿಂತ ಈಗ ಹೆಚ್ಚಾಗಿದೆ. ವಿರಸಕ್ಕೆ ಕಾರಣವೇನಿದ್ದರೂ ವರದಕ್ಷಿಣೆಯ ಕಾನೂನು ವರದಕ್ಷಿಣೆಯ ವಿಚಾರವನ್ನೇ ಹುಟ್ಟುಹಾಕಿ ಪತಿಯ ಮತ್ತು ಅವರ ಪೋಷಕರ ಮಗ್ಗಲು ಮುರಿಯುವಲ್ಲಿ ಬಳಕೆಯಾಗುತ್ತಿದೆ. ದುರುಪಯೋಗವಾಗುತ್ತಿದೆ ಕೂಡಾ. ತಂದೆಯ ಮನೆಯ ಆಸ್ತಿಯಲ್ಲಿ ಸಮಹಕ್ಕನ್ನು ಪಡೆದ ನಂತರವೂ ಗಂಡ ಬೇಡವೆಂದೆನಿಸಿದರೂ ಅವನ ಆಸ್ತಿ ಮತ್ತು ಸಂಪತ್ತು ಬೇಡವೆನಿಸುವುದಿಲ್ಲ. ಅದರಲ್ಲಿ ಪಾಲು ಕೇಳುವಷ್ಟು ಕಾನೂನಿನ ಬೆಂಬಲ ಅವಳಿಗಿದೆ. ಮಕ್ಕಳಿದ್ದರೆ ಮಕ್ಕಳ ಪೋಷಣೆ ತನ್ನ ಬದುಕಿನ ರಕ್ಷಣೆಗೆಂದು ಗಂಡನಿಂದ ಹಲವು ಲಕ್ಷ ರೂಪಾಯಿಗಳನ್ನು ದೋಚುವ ಸ್ಥಿತಿಯಲ್ಲಿ ಅವಳಿದ್ದಾಳೆ. ಇದು ವಿಚ್ಛೇದನದತ್ತ ಮುನ್ನುಗ್ಗುವಲ್ಲಿ ಮಹಿಳೆಗೆ ಇರುವ ಕಾನೂನಿನ ಬೆಂಬಲ. 
ಇಂದು ಹೆಣ್ಣುಮಕ್ಕಳು ಗಂಡುಮಕ್ಕಳಿಗೆ ಸರಿಸಮಾನಾಗಿ ಶಿಕ್ಷಣವನ್ನು ಹೊಂದಿ ಹೆಚ್ಚು ಸಂಪಾದಿಸುತ್ತಿದ್ದಾರೆ. ಕೂಡಿ ನಡೆಯುವಲ್ಲಿ ಅಗತ್ಯವಾದ ಶ್ರೇಷ್ಠತೆ ಮತ್ತು ಅಧೀನತೆಯ ನಡವಳಿಕೆ ಇಲ್ಲಿ ಶೂನ್ಯ. ಯಾರಿಗೆ ಯಾರೂ ಸೋತು ಸರಿಯುವುದಿಲ್ಲ. ಅಂತಿಮ ಪರಿಣಾಮ ವಿಚ್ಛೇದನ.
ವಿವಾಹದ ಹೊಸತರಲ್ಲಿ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ವಾಸ್ತವಿಕ ಆತ್ಮೀಯತೆ ಬೆಳೆದಿರುವುದಿಲ್ಲ. ದುಡಿಮೆಗಾಗಿ ದಿನದ ಬಹಳ ಕಾಲ ಗಂಡ ಮತ್ತು ಹೆಂಡತಿ ದೂರವಿರುವುದರಿಂದ ಪರಸ್ಪರ ಚಾರಿತ್ರಿಕವಾಗಿ ಒಮ್ಮೊಮ್ಮೆ ಸಂಶಯ ಪಡುವ ಸಂದರ್ಭವೂ ಇದೆ. ಈ ಬಿರುಕಿನ ಅಂತಿಮ ಘಟನೆ ವಿಚ್ಛೇದನ.
ಸಂಪಾದನೆಯ ಅಮಲಿನಲ್ಲಿ ಕೆಲವು ಯುವಕರು ನಗರದಲ್ಲಿ ಡ್ರಗ್ ಅಡಿಕ್ಷನ್, ಕುಡಿತ ಮುಂತಾದ ದುಶ್ಚಟಗಳಿಗೆ ದಾಸರಾಗಿದ್ದಾರೆ. ಇವರನ್ನು ತಿದ್ದಲಾಗದೆ, ಕೊನೆಗೆ ಸಹಿಸಲಾಗದೆ ಅವರ ಪತ್ನಿಯರು ಹತಾಶರಾಗುತ್ತಾರೆ. ಈ ಬೇಗುದಿಯ ಅಂತ್ಯವೇ ವಿಚ್ಛೇದನ. 
ಇಂದಿನ ಕುಟುಂಬಗಳಲ್ಲಿ ಮಕ್ಕಳಿಗೆ ಸಹಬಾಳ್ವೆಯ ಮನೋಭಾವವನ್ನು ಕಲಿಸುವ ಅವಕಾಶ ಕಡಿಮೆ. ಶಿಕ್ಷಣದ ಕಾರಣದಿಂದ ಅವರ ಬುದ್ಧಿ ಬೆಳವಣಿಗೆಯ ಪ್ರಾರಂಭದಿಂದ ಕುಟುಂಬದ ಹೊರಗೆ ಬೆಳೆದು ವಿವಾಹದ ಹಂತಕ್ಕೆ ಬಂದಿರುತ್ತಾರೆ. ಕುಟುಂಬದ ಹಿರಿಯರು-ಕಿರಿಯರು, ಹುಟ್ಟಿನ ನೆರೆಹೊರೆಯವರು, ಸಂಬಂಧಿಕರು ಎನ್ನುವ ಸಾಮಾಜಿಕ ಜೀವನದ ಪ್ರಾಥಮಿಕ ಸಂಘಗಳ ಒಡನಾಟವೇ ಇಂದಿನ ಯುವಜನತೆಗೆ ದೊರಕುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಅವರಿಗೆ ದೊರಕುವುದು ವಿಷಯಗಳ ಜ್ಞಾನವಷ್ಟೇ. ಬದುಕಿನ ಅರಿವಲ್ಲ. ಕೂಡಿ ಬದುಕುವ ಬುದ್ಧಿ ಬರುವಷ್ಟರ ಹೊತ್ತಿಗೆ ವಿವಾಹ ವಿಚ್ಛೇದನದಂತಹ ಆಗಬಾರದ ಪ್ರಮಾದವೆಲ್ಲ ಆಗಿ ಯುವಜನರು ಮುದುಕರಾಗಿರುತ್ತಾರೆ. 
ಈಗ ಕೇವಲ ಎರಡು ಅಥವಾ ಒಂದೇ ಮಗುವಾದ್ದರಿಂದ ತಾಯಿ ತಂದೆಯರು ಅವರನ್ನು ಅತೀ ಮುದ್ದಿನಿಂದ ಸಾಕಿರುತ್ತಾರೆ. ಮುದ್ದಿನ ಸಂವೇದನೆಯಲ್ಲಿ ಬದುಕಿನ ಕಲೆಯ ನೆಲೆ ಕಮರಿ ಹೋಗಿದೆ. ಗಂಡು-ಹೆಣ್ಣು ಮಕ್ಕಳು ದಾಂಪತ್ಯದಲ್ಲಿ ಹೊಂದಿಕೊಳ್ಳದೆ ಸಿಡಿದು ಹೋಗಲು ಇದು ಪ್ರಮುಖ ಕಾರಣ. 
ಇಂದಿನ ದಂಪತಿಗಳು ಯೋಚಿಸಬೇಕಾದದ್ದಿಷ್ಟೇ. ಇದ್ದಲ್ಲಿಯೇ ಕಾಡಿ ಕೂಡಿ ಬಾಳ್ವೆ ನಡೆಸಬೇಕು. ಹೊಂದಿಕೊಳ್ಳುವ ಮನೋಭಾವ ಇಲ್ಲದವರು ಯಾರನ್ನ ಬಿಟ್ಟು ಯಾರನ್ನ ಕೂಡಿಕೊಂಡರೂ ಇದೇ ಪಾಡು. ಹೊಂದಿಕೊಂಡು ಮುನ್ನಡೆಯಬೇಕೆಂದಿದ್ದರೆ ಒಬ್ಬರಿಗೆ ಒಬ್ಬರು ಆಯಾ ಸಂದರ್ಭಕ್ಕೆ ಅನುಸಾರವಾಗಿ ಬಗ್ಗಿ ನಡೆಯಬೇಕಾದದ್ದು ಅಗತ್ಯ. ಪರಸ್ಪರ ವಿಶ್ವಾಸ ಮುಖ್ಯ. ಸುಖಕ್ಕಾಗಿ ಪರದಾಡಿ ಮುದುಕರಾಗುವ ಮುಂಚೆ ಇದ್ದಲ್ಲಿಯೇ ಸಾವರಿಸಿಕೊಂಡು ನೆಮ್ಮದಿಯಿಂದ ಇರುವುದು ಲೇಸು. ಸುಖ ಎನ್ನುವುದು ಅವರವರ ಮನೋಗತಿಗೆ ಬಿಟ್ಟ ವಿಚಾರ. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771

ಕೀರ್ತಿ ಕಾಮನೆ - ಮನುಷ್ಯನ ಒಂದು ಹಂಬಲ


                                                                         ಎಂ. ಗಣಪತಿ. ಕಾನುಗೋಡು
ಮನುಷ್ಯನ ಅನೇಕ ಬಯಕೆಗಳಲ್ಲಿ ಕೀರ್ತಿ ಕಾಮನೆಯೂ  ಒಂದು. ಜೀವನದ ಮೂಲಭೂತ ಬಯಕೆಗಳಾದ ಅನ್ನ, ವಸತಿ, ವಸ್ತ್ರ, ಇವು ಮೂರು ಇಂಗಿದ ಮೇಲೆ ಅವಕ್ಕೂ ಮೀರಿದ  ಅಸಂಖ್ಯಾತ ಪೂರಕ  ಬಯಕೆಗಳತ್ತ ಎಲ್ಲರೂ ಧಾವಿಸುತ್ತಾರೆ. ಅವುಗಳಲ್ಲಿ ಕೀರ್ತಿ ಸಾಧಿಸಬೇಕೆಂಬ ಹಂಬಲವೂ ಹೌದು. 
ಹುಟ್ಟು ಮತ್ತು ಸಾವು ಮನುಷ್ಯನನ್ನು ಒಳಗೊಂಡು ಎಲ್ಲಾ ಪ್ರಾಣಿಗಳಿಗೂ ಸಹಜ. ಆದರೆ ಎಷ್ಟೋ ಜನರು ಇದ್ದದ್ದು  ಹಾಗೂ  ಸತ್ತದ್ದು ಯಾರಿಗೂ  ತಿಳಿಯುವುದೇ ಇಲ್ಲ. ಕಾರಣ ಯಾವುದೇ  ವಿಚಾರದಲ್ಲೂ ಅವರು ಸಮಾಜದ  ಕಣ್ಣಿಗೆ ಕಾಣಿಸಿಕೊಂಡಿರುವುದಿಲ್ಲ. 
ಕೆಲವರು ಹಾಗಲ್ಲ. ತಾನು ಪ್ರಚಾರದಲ್ಲಿರಬೇಕು. ತನ್ನನ್ನು ಬಹಳ ಜನ ಗುರುತಿಸಬೇಕು ಎಲ್ಲರೂ ಶ್ಲಾಘಿಸುವಂತೆ  ಹೆಸರು ಗಳಿಸಬೇಕು   ಎನ್ನುವ ಹೆದ್ದಾಸೆ ಅವರಿಗೆ ಇರುತ್ತದೆ.   ಇದೇ ಕೀರ್ತಿ ಕಾಮನೆ.
ಈ ಉದ್ದೇಶಕ್ಕಾಗಿ ಜನರು ಗುರುತಿಸುವಂತಹ ಅನೇಕ ಕೆಲಸಗಳಲ್ಲಿ ತಮ್ಮನ್ನುತೊಡಗಿಸಿಕೊಂಡಿರುತ್ತಾರೆ. ಸಮಾಜ  ಸೇವೆ, ಹಳ್ಳಿಗಳಲ್ಲಿ ಗಿಡಮೂಲಕೆ ಜೌಷದಿsಗಳನ್ನು ಕೊಡುವುದು,  ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕ ಕೆಲಸಗಳಿಗೆ ಹಣ  ಕೊಡುವುದು, ಹಾವು ಹಿಡಿಯುವುದು. ಯಾರೇ  ಯಾವುದೇ ತೊಂದರೆಯಲ್ಲಿ ಸಿಕ್ಕಿ ಕೊಂಡಾಗ ತಕ್ಷಣ ಅಲ್ಲಿಗೆ ಧಾವಿಸಿ ಸಹಾಯಮಾಡುವುದು,  ಊರಿನಲ್ಲಿ  ಯಾರ ನಡುವೆಯಾದರೂ ವೈಮಸ್ಸು ಜಗಳ ಬಂದಾಗ  ಪಂಚಾಯಿತಿ ಮಾಡಿ ಅವರಲ್ಲಿ ರಾಜಿ ಮಾಡಿಸುವುದು, ಕಲಾಕ್ಷೇತ್ರಗಳಲ್ಲಿ ಭಾಗವಹಿಸುವುದು, ಹೀಗೆ ಇನ್ನೂ ಅನೇಕ ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವರು ಸ್ವಲ್ಪ ಸಂಭಾವನೆ ಪಡೆದರೂ ಕೂಡ ಅವರು ಮಾಡಿದ ಸೇವೆಗೆ ಅದು ಗೌಣ. 
ಇಂತಹ ಸ್ವಭಾವದರಲ್ಲಿಯೂ ಮೂರು ವಿಧಗಳಿವೆ. 1. ತಮ್ಮ  ವೈಯುಕ್ತಿಕ ಬದುಕನ್ನು ಬದಿಗಿಟ್ಟು ಅಗತ್ಯವಿದ್ದವರಿಗೆ ಆಯಾ ಸಂದರ್ಭಗಳಲ್ಲಿ ಧಾವಿಸಿ, ಸೇವೆ ಮಾಡಿ ಕೀರ್ತಿ ಸಂಪಾದಿಸುವವರು 2. ತಮ್ಮ ನಿತ್ಯ ಬದುಕನ್ನು ಪ್ರಧಾನವಾಗಿಟ್ಟುಕೊಂಡು ಬಿಡುವಿನ ವೇಳೆಯಲ್ಲಿ ಇಂತಹ ಸೇವೆಗಳನ್ನು ಮಾಡಿ ಕೀರ್ತಿ ಸಂಪಾದಿಸುವವರು. 3. ಕೆಲವರು ನೌಕರಿ ಅಥವಾ ಇನ್ಯಾವುದೋ ನಿರ್ದಿಷ್ಟ ಮತ್ತು ನಿಬಿಡವಾದ ಉದ್ಯೋಗದಲ್ಲಿ ನಿರತರಾಗಿರುತ್ತಾರೆ. ಇಂತಹವರು ತಾವು ಮಾಡುವ ಉದ್ಯೋಗವನ್ನೇ ಬಹಳ ಪ್ರ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡುವುದು. ಅದರ ಪ್ರಯೋಜನ ಸಂಬಂಧ ಪಟ್ಟ ಸಂಸ್ಥೆಗೆ ಮತ್ತು ಜನರಿಗೆ ಯಶಸ್ವಿಯಾಗಿ ದೊರಕುವಂತೆ ಶ್ರಮಿಸುವುದು. ಈ ಮಾರ್ಗದಲ್ಲಿ  ಉದ್ಯೋಗದಲ್ಲಿರುವ ವ್ಯಕ್ತಿಗಳು ಹೆಸರನ್ನು ಗಳಿಸುತ್ತಾರೆ.  ಇಂತಹವರು ತಾವು ನಿರತರಾದ ಕೆಲಸವನ್ನು ಬದಗಿಡುವುದಾಗಲೀ, ಅಥವಾ ಅದನ್ನು ಬಿಟ್ಟು ಸೇವೆ ಮಾಡಿ ಹೆಸರು ಗಳಿಸುವ ತುಡಿತಕ್ಕೆ  ಹೋಗುವುದಿಲ್ಲ. ಉಪಾಧ್ಯಾಯರು, ವೈದ್ಯರು, ಕಾರ್ಮಿಕರು, ಇನ್ಯಾವುದೇ, ಸರ್ಕಾರಿ ಅಥವಾ ಖಾಸಗಿ ನೌಕರರು ಈ ವರ್ಗಕ್ಕೆ ಸೇರುತ್ತಾರೆ. 
ಅವರ ಹಂಬಲ ಏನೇ ಇರಲಿ, ಹೀಗೆ ಪ್ರಾಮಾಣಿಕವಾಗಿ ತೊಂದರೆ, ನಷ್ಟಗಳನ್ನು  ಎಣಿಸದೆ ಪರೋಪಕಾರವನ್ನು ಮಾಡುವ ಜನರು ಸಮಾಜದಲ್ಲಿ ಇನ್ನೂ ಇದ್ದಾರೆ. ಇದರಲ್ಲೂ,  ಕೆಲವರು ಹೆಚ್ಚು ಪ್ರಚಾರಕ್ಕೆ ಬಂದು ಸಾರ್ವಜನಿಕ ಸನ್ಮಾನ, ಶ್ಲಾಘನೆಗೆ ಒಳಗಾಗುತ್ತಾರೆ. ಇನ್ನು ಕೆಲವರು ಅಂತಹ ಬಹಿರಂಗ ಗೌರವ ದೊರಕದಿದ್ದರೂ  ಜನರ ಅಂತರಂಗದ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. 
ಒಂದು ದೃಷ್ಠಿಯಲ್ಲಿ ಕೀರ್ತಿ ಕಾಮನೆ ಮನುಷ್ಯನ ಒಂದು ಬಗೆಯ ಸ್ವಾರ್ಥ ಎನ್ನಿಸುತ್ತದೆ. ಆದರೆ ಸಂಪೂರ್ಣವಾಗಿ  ಸ್ವಾರ್ಥದ ಬದುಕಿನಲ್ಲಿಯೇ   ಮುಳುಗಿದವರನ್ನು ಕಂಡಾಗ `ಕೀರ್ತಿ ಕಾಮನೆ' ಯಂತಹ ಸ್ವಾರ್ಥದ ಸಾಧನೆಯಲ್ಲೂ ಪರಾರ್ಥದ ಸಾರ್ಥಕತೆ ಇದೆ  ಎನ್ನುವುದು ಮೆಚ್ಚುವಂತಹ ಸಂಗತಿ. 
ಒಂದು ವಿಪರ್ಯಾಸದ  ವಿಷಯವೆಂದರೆ, ಒಳ್ಳೆಯ ಕೆಲಸಗಳಿಂದಲೂ ಒಬ್ಬ ವ್ಯಕ್ತಿ ಪ್ರಚಾರಲ್ಲಿರುತ್ತಾನೆ. ಹಾಗೆಯೇ  ಕೆಟ್ಟ ಕೆಲಸಗಳಿಂದಲೂ ಮತ್ತೊಬ್ಬ ವ್ಯಕ್ತಿ ಪ್ರಚಾರದಲ್ಲಿಯೇ  ಇರುತ್ತಾನೆ. ಆದರೆ ಒಬ್ಬನದು ಸತ್ಕೀರ್ತಿ. ಇನ್ನೊಬ್ಬನದು  ದುಷ್ಕೀರ್ತಿ. 


ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771

Saturday 24 August 2013

ಹೆಂಡತಿಯ ಮೇಲೆ ಗಂಡನ ಅತ್ಯಾಚಾರ !!


                                                                                                    ಎಂ. ಗಣಪತಿ. ಕಾನುಗೋಡು
ಹೌದು. ಹೆಂಡತಿಯ ಮೇಲೆ ಗಂಡನಾದವನು ಅತ್ಯಾಚಾರ ನಡೆಸುವುದೂ ಇದೆ. ಇದನ್ನು ಕೇಳಿ ಬಹಳ ಜನರಿಗೆ ಆಶ್ಚರ್ಯವಾಗುತ್ತದೆ. ಒಬ್ಬ ಪುರುಷ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದಮೇಲೆ ಅವಳ ದೈಹಿಕ ಸಂಪರ್ಕವನ್ನು ಹೊಂದುವ ಹಕ್ಕು  ಅವನಿಗೆ ಇದೆ. ಇಲ್ಲಿ ಅತ್ಯಾಚಾರದ ಪ್ರಶ್ನೆ ಏನು ಎಂದು ಸಾಮಾನ್ಯರ ಅಭಿಪ್ರಾಯ. 
ಸ್ವತಃ ಪತ್ನಿಯೊಡನೆ ದೈಹಿಕ ಸಂಪರ್ಕವನ್ನು ಹೊಂದಬೇಕಾದರೂ ಆಕೆಯ ಪೂರ್ಣ ಸಮ್ಮತಿಬೇಕು. ಅವಳ ಇಚ್ಚೆಯ ವಿರುದ್ಧ ಬಲಾತ್ಕಾರವಾಗಿ ಅವಳನ್ನು ಸಂಪರ್ಕಿಸುವುದು ವೈವಾಹಿಕ ಅತ್ಯಾಚಾರ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.  ಪತಿ-ಪತ್ನಿಯರ ಕೂಡುವಿಕೆಗೂ ಕಾಲ, ಸ್ಥಳ, ಪರಸ್ಪರ ಒಪ್ಟಿಗೆ ಹಾಗೂ ಆ ಕ್ರಿಯೆಗೆ ಸಂಬಂಧಪಟ್ಟು ಸಂದರ್ಭದ ಪೂರ್ಣ ಸಿದ್ಧತೆಬೇಕು. ಇವ್ಯಾವುದರ ಹೊಂದಾಣಿಕೆಯೂ ಇಲ್ಲದೆ ಹಠಾತ್ ಒತ್ತಾಯಪೂರ್ವಕವಾಗಿ ನಡೆಸುವ ಸಂಭೋಗ ಅತ್ಯಾಚಾರವೆನಿಸುತ್ತದೆ. ಮದುವೆಯಾದ ಹೊಸತರದಲ್ಲಿ ಅಥವಾ ಯೌವನದ ಬಿಸಿ ಕುದುಯುತ್ತಿರುವವರೆಗೂ  ಈ ತೆರೆನ ಅನಪೇಕ್ಷಿತ ಸಂದರ್ಭಗಳು ನಿರ್ಮಾಣವಾಗುತ್ತದೆ. ಇದು ಪ್ರಾಯದ ಪ್ರಮಾದವೇ ವಿನಃ ಹಿಂಸೆಯ ದುರುದ್ದೇಶ ಪುರುಷನಿಗೆ ಇರುವುದಿಲ್ಲ.  ಹಾಗಂತ ಈ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ. 
ಆಹಾರ ಪಥ್ಯದಂತೆ ಹಾಸಿಗೆ ಪಥ್ಯವೂ ಕೂಡ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ಒಂದು ನಿಗ್ರಹ. ಸಂತಾನ ನಿಯಂತ್ರಣದ ಆಧುನಿಕ ತಂತ್ರಗಳ ಅಭಾವದ ಕಾಲದಲ್ಲಿ ಸಂತಾನ ನಿಯಂತ್ರಣಕ್ಕಾಗಿ ನಮ್ಮ ಹಿರಿಯರು ಹಾಸಿಗೆ ಪಥ್ಯವನ್ನು ಅನುಸರಿಸುತ್ತಿದ್ದರು. ಹೆಂಡತಿ ಗರ್ಭವನ್ನು ಧರಿಸಬಹುದಾದ ದಿನಗಳಲ್ಲಿ ಆಕೆಯ ದೆೃಹಿಕ ಸಂಪರ್ಕವನ್ನು ನಡೆಸುತ್ತಿರಲಿಲ್ಲ. ಹೆಂಡತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಹಾಸಿಗೆ ಪಥ್ಯ ಅಗತ್ಯ. ಆಧುನಿಕ ಸಮಾಜದ  ಬಹುತೇಕ ಯುವಜನರಿಗೆ ಈ ಪರಿಕಲ್ಪನೆಯ ಮಾಹಿತಿ ಇಲ್ಲ. 
ಬಹಳ ಕೆಲಸಗಳಿಂದ ದಣಿದಾಗ, ಕಾಯಿಲೆಯಿಂದ ಬಳಲಿದಾಗ, ರಾತ್ರಿ ನಿದ್ದೆಯಲ್ಲಿ ಮೈಮರೆತಾಗ, ತುಂಬು ಗರ್ಭಿಣಿ ಇದ್ದಾಗ, ಬಾಣಂತಿಯಿದ್ದಾಗ ಗಂಡನಡೆಸುವ ಸಂಪರ್ಕ ಕ್ರಿಯೆಯು ಅತ್ಯಾಚಾರವೆನಿಸುತ್ತದೆ. 
ನಗರದ ಬಹಳ ಕುಟುಂಬಗಳಲ್ಲಿ ರಜಸ್ವಲೆಯಾದ  ಮಹಿಳೆ ಹೊರಗೆ ಇರುವುದು ಕಂಡುಬರುವುದಿಲ್ಲ. ಈ ಸಂದರ್ಭದಲ್ಲಿ ಅವಳಿಗೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಬೇಕು. ಈ ಕಾರಣದಿಂದ ಕೆಲಸದ ಒತ್ತಡದಿಂದ ಆಕೆ  ದೂರವಿರಬೇಕು ಎನ್ನುವ  ನಮ್ಮ ಹಿರಿಯರ ಕಲ್ಪನೆಯಲ್ಲಿ ನಾಲ್ಕುದಿನ ಆಕೆಯನ್ನು ಪ್ರತ್ಯೇಕ ಇರಿಸುವ ಪದ್ಧತಿ ಬಂದಿದ್ದಿರಬೇಕು.  ಈ ಸಂದರ್ಭದಲ್ಲಿ ದೈಹಿಕ ಸಂಪರ್ಕವೂ ಅವಳ ಆರೋಗ್ಯದ ದೃಷ್ಟಿಯಿದ ನಿಷಿದ್ಧ. ದೇಹ ಮತ್ತು ಮನಸ್ಸು  ಬಹಳ ಬಳಲಿಕೆಯಲ್ಲಿ ಇರುವುದರಿಂದ ಮಹಿಳೆಗೆ ಅದರ ಅಪೇಕ್ಷೆಯೂ ಇರುವುದಿಲ್ಲ. ಆದರೆ ಇಂದಿನ  ಜಂಜಾಟದ ಬದುಕಿನಲ್ಲಿ, ಅದೂ ಕೂಡ ಕೇವಲ ಪತಿ- ಪತ್ನಿಯರಷ್ಟೆ ಇರುವ ಅಣು ಕುಟುಂಬದಲ್ಲಿ ಮಹಿಳೆ ರಜಸ್ವಲೆಯಾದಾಗ ಹೊರಗೆ ಇರುವ ಮಾತು ಇರಲಿ, ಒಟ್ಟಿಗೇ ಹಾಸಿಗೆಯನ್ನು ಹಂಚಿಕೊಳ್ಳುತ್ತಾರೆ. ಇಲ್ಲಿ  ಹೆಂಡತಿಯ ಸಂಪರ್ಕವನ್ನು  ಅದಕ್ಕೆ ಬೇಕಾದ ವ್ಯವಸ್ಥೆಯೊಂದಿಗೆ ಗಂಡ ಬಯಸುವ ಸಾಧ್ಯತೆ ಇದೆ.  ಇದು ಅತ್ಯಾಚಾರ. 
ಪುರುಷರಿಗಿಂತ ಮಹಿಳೆಯರು ಹೆಚ್ಚು ಧಾರ್ಮಿಕ ಆಚರಣೆವುಳ್ಳವರು. ಕುಟುಂಬದಲ್ಲಿ ವ್ರತಾದಿಗಳಿದ್ದಾಗ ಧಾರ್ಮಿಕ ಕಟ್ಟಳೆಯಕಾರಣ ಆನೇಕ ಮಹಿಳೆಯರಿಗೆ ದೈಹಿಕ ಸಂಪರ್ಕ ನಿಷಿದ್ಧ. ಅಂದಿನ ದಿನ ಹಾಸಿಗೆ ಪಥ್ಯವನ್ನು ಅವಳು ಬಯಸುತ್ತಾಳೆ. ಪುರುಷನ ಯೌವನದ ಒತ್ತಡ ಸುಮ್ಮನಿದ್ದೀತೆ?. ಹೆಂಡತಿಯ ಇಚ್ಚೆಯ ವಿರುದ್ಧವಾಗಿ, ಬಲತ್ಕಾರವಾಗಿ  ಅವಳ ಸಂಪರ್ಕ ನಡೆಸುತ್ತಾನೆ. ಇದು ಗಂಡನ ಅತ್ಯಾಚಾರ.  
ಹಿಂದಿನಹಾಗೆ ಈಗ  ಅವಿಭಕ್ತ ಕುಟುಂಬಗಳಿಲ್ಲ. ಮನೆತುಂಬಾ ಜನರು ಇಲ್ಲ. ಈಗ ಏನಿದ್ದರೂ ಅಣು ಕುಟುಂಬ (ನ್ಯೂಕ್ಲಿಯರ್ ಫ್ಯಾಮಿಲಿ). ಗಂಡ ಮತ್ತು ಹೆಂಡತಿ ಇಬ್ಬರದ್ದೇ ದರ್ಭಾರು. ಮಧ್ಯೆ ಬ್ರೇಕ್ ಹಾಕುವ ಹಿರಿಯರು ಇಲ್ಲಿ ಇಲ್ಲ. ಇಂತಹ ಅವಘಟನೆಯ ವೇದನೆಯನ್ನು  ಹೊರಗೆ ತರುವ ಸ್ಥಿತಿಯಲ್ಲಿ ಹೆಂಡತಿ ಇರುವುದಿಲ್ಲ. ಏಕೆಂದರೆ ಗಂಡ ಎನ್ನುವ ಮರ್ಯಾದೆ, ಪ್ರೀತಿ ಅವಳಿಗೆ ಇದ್ದೇ ಇರುತ್ತದೆ. ಒಳಗೇ ವಿರೋಧಿಸಿದರೆ ಗಂಡ ತಡೆದುಕೊಳ್ಳಬೇಕಲ್ಲ.  ಅಸಾಯಕಳಾಗಿ ಈ ತೆರೆನ ಅತ್ಯಾಚಾರಕ್ಕೆ ಆಕೆ ಸಿಲುಕಿಕೊಳ್ಳುತ್ತಾಳೆ. 
ಪುರುಷನಿಗೂ ಕೂಡ ಲೈಂಗಿಕ ಸಂಪರ್ಕ ಒಂದು ಅಗತ್ಯ. ಹಾಗೂ ನೈಜವಾದ ಪ್ರಕ್ರಿಯೆ ಎಂಬುದು ಸುಳ್ಳಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮೇಲೆ ಹೇಳಿದ ಅನೇಕ ಪ್ರಸಂಗಗಳಲ್ಲಿಯೂ ಅವನಿಗೆ  ವಿನಾಯಿತಿ ಇರುತ್ತದೆ.
ವಿಷಯ ಹೇಗಾದರೂ ಇರಲಿ. ಹೆಂಡತಿಯ ಮೇಲೆ ನಡೆಯುವ ಗಂಡನ ಅತ್ಯಾಚಾರ ಒಟ್ಟಾರೆ ಸಮಾಜದ ಸ್ವಾಸ್ತ್ದ್ಯದ ದೃಷ್ಟಿಯಿಂದ ಪುರುಷನಿಗೆ ತಿಳಿಯಹೇಳಬೇಕಾದ ಮತ್ತು P್ಷÀಮಿಸಬಹುದಾದ ಘಟನೆಯೂ ಹೌದು. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771