Tuesday 9 June 2015

@@@@@ ಜ್ಯೋತಿಷ್ಯ @@@@@


ಜೋತಿಷ್ಯ ಹೇಳುವವರು ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
[ ಇದನ್ನು ತಮಾಷೆಯಾಗಿ ಎಲ್ಲರೂ ತೆಗೆದುಕೊಳ್ಳಬೇಕು ]
++ ಒಬ್ಬ ವಿವಾಹಿತನು ಸ್ವಲ್ಪ ಕಾಲದಲ್ಲಿಯೇ ಸಾಯುವ ಯೋಗ ಕಂಡುಬಂದರೆ ನೀನು ಸಧ್ಯ ಸಾಯುತ್ತೀಯೆ ಎಂದು ಹೇಳಬಾರದು. ಅದರ ಬದಲು ನಿನ್ನ ಹೆಂಡತಿಯ ಮಾಂಗಲ್ಯಯೋಗಕ್ಕೆ ಮಾರಕವಿದೆ, ಅದಕ್ಕಾಗಿ ಕೂಡಲೇ ಶಾಂತಿಯನ್ನು ಮಾಡಿಸಬೇಕು ಎಂದು ಹೇಳಬೇಕು. ಇದರಿಂದ ಇವನಿಗೂ ಕಾಸು ಆಗುತ್ತದೆ. ನಾಲ್ಕು ಮಂದಿ ವೈದಿಕರಿಗೂ ಕೆಲಸ ಸಿಕ್ಕುತ್ತದೆ. ಆಜುಬಾಜಿನವರಿಗೂ ಪಾಯಸದ ಊಟ ದೊರೆಯುತ್ತದೆ.
++ ಕೆಲವರಿಗೆ ವಿವಾಹಯೋಗ ಇರುವುದಿಲ್ಲ. ಆದರೆ ಮಕ್ಕಳಾಗುವ ಯೋಗ ಇರುತ್ತದೆ. ಅದಕ್ಕೆ ನಿನಗೆ ವಿವಾಹಯೋಗವಿಲ್ಲದಿದ್ದರೂ ಮಕ್ಕಳಾಗುತ್ತದೆ ಎಂದು ಎದುರಾಎದುರು ಹೇಳಿದರೆ ಜಾತಕನಿಂದ ತಪರಾಕಿ ತಿನ್ನಬೇಕಾದೀತು. ಅದರ ಬದಲು ನಿಮ್ಮ ಸುತಮುತ್ತಲ ಊರಿನಲ್ಲಿ ನಿಮ್ಮನ್ನು ತಂದೆಯೆಂದೇ ಪರಿಗಣಿಸುವ ಹಲವು ಮಂದಿ ನಿಮಗೆ ಇರುತ್ತಾರೆ ಎಂದು ಹೇಳಬೇಕು.
++ ಆಶ್ಲೇಷ ನಕ್ಷತ್ರದ ಕನ್ಯೆಯಿಂದ ಅತ್ತೆಗೆ ಕೇಡು ಎಂಬುದು ಕೆಲವರ ಅಭಿಪ್ರಾಯ. ಅಂಥಹ ಸಂದರ್ಭದಲ್ಲಿ ಸೊಸೆಯಿಂದ ಬರುವ ಎಂಥಹ ಬಲಿಷ್ಠ ಕೇಡನ್ನೂ ಹೊಡೆದೋಡಿಸುವನ್ಥಹ ಸ್ವಭಾವನ್ನು ತೋರಿಸುವ ಜಾತಕವಿರುವ ಅತ್ತೆಯನ್ನೇ ಕನ್ಯೆಗೆ ತಳುಕೆ ಹಾಕಬೇಕು.
++ ತೀರಾ ಜೋರಿನ ಸ್ವಭಾವದ ಹೆಣ್ಣಿಗೆ ಅತಿ ಸೌಮ್ಯ ಸ್ವಭಾವದ ಗಂಡನ್ನು, ಅದೇ ಸ್ವಭಾವದ ಗಂಡಿಗೆ ಅತಿ ಸೌಮ್ಯ ಸ್ವಭಾವದ ಹೆಣ್ಣನ್ನು ತಳಿಕೆ ಹಾಕಬೇಕು. ಇಲ್ಲದಿದರೆ ಬಾಯಿಮುಚ್ಚಿಕೊಳ್ಳುವ ಹಂತಕ್ಕೆ ಬರಲು ಅಂತಹ ಹೆಂಡತಿಗೆ ಅಥವಾ ಗಂಡನಿಗೆ ಸ್ವಲ್ಪ ತ್ರಾಸು ಆಗುತ್ತದೆ.



ಓಹೋಯ್.... ಹೆಂಡತಿಯ ಕೈಯ್ಯಲ್ಲಿರುವ ಹಣದ ಸೆಲೆಯ ಬಲ್ಲಿರೇನೈ ?

                                                                                   ~~~~ ಎಂ. ಗಣಪತಿ ಕಾನುಗೋಡು.
[ ಇದನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕು ]

ನಮ್ಮ ಹೆಂಡತಿಯ ಟ್ರೆಜರಿಯಲ್ಲಿರುವ ಹಣದ ಮೊತ್ತದ ಗುಟ್ಟನ್ನು ಯಾರಾದರೂ ತಾವು ಕಂಡುಹಿಡಿದಿರುವಿರಾ ?. ಹೌದು ಎಂದರೆ ನೀವು ಮೋಸಹೋಗಿದ್ದೀರಿ ಎಂದೇ ಅರ್ಥ, ಅನುಮಾನವೇ ಇಲ್ಲ. ಹೆಂಗಸರು ಯಾರೂ ತಮ್ಮಲ್ಲಿ ಕೂಡಿಟ್ಟುಕೊಂಡಿರುವ ಹಣದ ಗಂಟಿನ ಗುಟ್ಟನ್ನು ತಮ್ಮ ಗಂಡನಿಗೆ ಹೊರಹಾಕುವುದಿಲ್ಲ. ಹಾಗೆಂದು ಅದು ಅವರು ನಮಗೆ ಮಾಡುವ ವಂಚನೆ ಅಲ್ಲ. ಗೃಹಿಣಿಯಾಗಿದ್ದರೆ ಅವರ ಖರ್ಚಿಗೆಂದು ಕೊಟ್ಟ ಹಣದಲ್ಲಿಯೇ ಉಳಿಸಿಕೊಂಡು, ಯಾವುದಾದರೂ ಹರಕತ್ತಿನ ಸಂದರ್ಭಕ್ಕೆ ತಮಗೆ ಒದಗುತ್ತದೆಯೆಂದು ಅದನ್ನು ಒಳಗೆ ಕೂಡಿಕೊಂಡಿಟ್ಟಿರುತ್ತಾರೆ. ಮೊತ್ತದ ಗುಟ್ಟನ್ನು ಹೊರಹಾಕುವ ಪರಿ ಹೇಗೆ ಬಲ್ಲಿರಾ ?.
ಅವರಾಗಿಯೇ ತನ್ನಲ್ಲಿ ಹಣವಿದೆಯೆಂದು ಎಂದೂ ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ನಾವು, ಗಂಡಸರು, ಮಾಡಬೇಕಾದ ಉಪಾಯವೆಂದರೆ ಅವರಲ್ಲಿ ೧೦೦೦ ರುಪಾಯಿ ನೋಟಿಗೆ ಚಿಲ್ಲರೆಯನ್ನು ಕೇಳಬೇಕು. ಅದಕ್ಕೆ ಅಷ್ಟು ಸುಲಭವಾಗಿ ಅವರು ಚೇಂಜನ್ನು ಕೊಡುವುದಿಲ್ಲ
" ಅಯ್ಯೋ.. ನನ್ನ ಹತ್ತಿರ ಐದು ಪೈಸೆಯೂ ಇಲ್ಲ " ಎನ್ನುತ್ತಾರೆ
" ಅಯ್ಯೋ ಮಾರಾಯಿತಿ... ನೀನು ನನಗೆ ಧರ್ಮ ಕೊಡುವುದು ಬೇಡ, ಸಾವಿರ ರುಪಾಯಿನ ಗಟ್ಟಿಯ ಒಂದು ನೋಟನ್ನು ತೆಗೆದುಕೊಂಡು ನನಗೆ ಅದರ ಚಿಲ್ಲರೆ ಕೊಡು ಅಷ್ಟೇ. ನನಗ್ಯಾಕೋ ಸ್ವಲ್ಪ ಅರ್ಜಂಟ್ ಚಿಲ್ಲರೆ ಬೇಕು ಅದಕ್ಕೆ ಕೇಳಿದೆ ಅಷ್ಟೆ " ಎನ್ನಬೇಕು.

ಇದೇ ರೀತಿ ಹಲವು ಬಾರಿ ಪೀಡಿಸಿ 1000 ರೂಪಾಯಿನ ನೋಟು ಕೊಟ್ಟು ಚಿಲ್ಲರೆ ಪಡೆಯಬೇಕು. ಅದಕ್ಕೆ ಅವರು ಹೆಚ್ಚಾಗಿ 500 ರೂಪಾಯಿನ ನೋಟುಗಳನ್ನೇ ಕೊಡುತ್ತಾರೆ. ಏಕೆಂದರೆ ಎರಡು ನೋಟಿಗೆ ಎರಡು ಕಡೆ ಹುಡುಕಾಡಿ ತೆಗೆದುಕೊಡುವ ತ್ರಾಸು ತೆಗೆದುಕೊಂಡರೆ ಸಾಕು. ಅವರ ಒಂದು ಸ್ವಭಾವವೆಂದರೆ ಅವರ ಗುಟ್ಟಿನ ಹಣವನ್ನು ಎಂದೂ ಒಂದು ಕಡೆ ಇಡುವುದಿಲ್ಲ. ಏಕೆಂದರೆ ಅದು ಸುಲಭವಾಗಿ ಗಂಡಸರ ಕೈಗೆ ಸಿಗಬಾರದು. ಅಲ್ಲದೆ ನೋಟುಗಳನ್ನೂ ಕಿವಿ ತುರಿಸುವ ಕಡ್ಡಿಯ ಗಾತ್ರಕ್ಕೆ ಸಣ್ಣ ಸುತ್ತಿರುತ್ತಾರೆ. ಅದು ಅವರ ಚಹರೆ.
ಹತ್ತಾರು ಸಾರಿ ವ್ಯವಹಾರ ನಡೆದ ಮೇಲೆ ಮತ್ತೆ ನಾವು 1000 ನೋಟನ್ನು ಒಯ್ದರೆ ಅವರು " ಇನ್ನು ತನ್ನಲ್ಲಿ ಹಣವಿಲ್ಲ, ಇದ್ದ 500 ರೂಪಾಯಿನ ದುಡ್ಡನ್ನಷ್ಟೂ ನಿಮಗೆ ಇಲ್ಲಿಯವರೇ ಕೊಡಲಿಲ್ಲವೇ ಹಾಗಾದರೆ...... ದೇವರಾಣೆ, ನನ್ನಲ್ಲಿಲ್ಲ. ? " ಎನ್ನುತ್ತಾರೆ. ಎಲ್ಲಿ ' ದೇವರಾಣೆ ' ಎಂದು ಅವರ ಬಾಯಲ್ಲಿ ಬಂತೋ ಅಲ್ಲಿಗೆ ಅವರ ಹತ್ತಿರ ಇನ್ನು 500 ರೂಪಾಯಿನ ನೋಟುಗಳಿಲ್ಲ ಎಂದರ್ಥ. ಏಕೆಂದರೆ ಗಂಡಸರ ಬಾಯಲ್ಲಿ ಬಂದ ಹಾಗೆ ಪುಕ್ಕಟ್ಟೆ ' ದೇವರಾಣೆ ' ಶಬ್ದ ಅವರ ಬಾಯಲ್ಲಿ ಎಂದೂ ಬರುವುದಿಲ್ಲ. ಇಷ್ಟು ಹೊತ್ತಿಗೆ ನಾವು ಅವರಿಗೆ ಕೊಟ್ಟ 1000 ರೂಪಾಯಿನ ನೋಟುಗಳೆಷ್ಟು ಎಂಬುದನ್ನು ಸರಿಯಾಗಿ ಲೆಕ್ಕವಿಟ್ಟುಕೊಂಡು ಇಲ್ಲಿಯ ಹಂತದವರೆಗೆ ಅವರ ಹುತ್ತದಲ್ಲಿ ಕಾಯ್ದಿಟ್ಟುಕೊಂಡಿದ್ದ ಗಂಟು ಎಷ್ಟು ಎಂಬುದನ್ನು ನಾವು ಒಂದುಕಡೆ ಬರೆದಿಟ್ಟುಕೊಂಡಿರಬೇಕು.
ಹೀಗೆ ಎರಡನೇ ಆವರ್ತದಲ್ಲಿ 500 ನೋಟು ಕೊಟ್ಟು ನೂರು ರುಪಾಯಿ ನೋಟುಗಳನ್ನು ಎತ್ತುವುದು, ಮೂರನೇ ಆವರ್ತದಲ್ಲಿ 100 ರುಪಾಯಿ ನೋಟನ್ನು ಕೊಟ್ಟು ಅದರ ಚಿಲ್ಲರೆ ನೋಟುಗಳನ್ನು ಹೊರಗೆಳೆಯುವುದು ಹೀಗೆ ಮಾಡಿ ನಾವು ಅವರಿಗೆ ಕೊಟ್ಟ ನೋಟಿನ ಮೊತ್ತವನ್ನು ಸರಿಯಾಗಿ ಬರೆದಿಟ್ಟುಕೊಂಡು ಅವರು ಒಳಗೆ ಕೂಡಿಟ್ಟುಕೊಂಡ ಹಣದ ಒಟ್ಟು ಮೊತ್ತವೆಷ್ಟು ಎಂಬುದರ ಚಿದಂಬರ ರಹಸ್ಯವನ್ನು ಕಂಡುಹಿಡಿದುಕೊಳ್ಳಬೇಕು. ನಾನು ಅದನ್ನು ಒಂದುಕಡೆ ಬರೆದಿಟ್ಟುಕೊಳ್ಳಬೇಕು ಎಂದು ಏಕೆ ಹೇಳಿದೆನೆಂದರೆ ಹೆಂಗಸರಿಂದ ಹಣವನ್ನು ಹೊರಗೆಳೆಯುವ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಪ್ರತಿ ವ್ಯವಹಾರದ ನಡುವೆಯೂ ಕನಿಷ್ಠ 15 ದಿನ ಗ್ಯಾಪ್ ಇರಬೇಕು. ಪ್ರತಿಸಲ ನಿಧಾನವಾಗಿ ಸ್ವಲ್ಪ ತುಪ್ಪ ಸುರಿಸಿ ಅವರನ್ನು ಪುಸಲಾಯಿಸಿ ಮಾತನಾಡಿಸಬೇಕು . ಇವೆಲ್ಲಾ ತಂತ್ರಗಳು ಆಯಾ ಗಂಡಸರ ಶಕ್ತಿಗೆ ಸೇರಿದ್ದು. ಇದಕ್ಕೆ ಒಂದು ವರ್ಷದ ಅವಧಿಯೇ ಬೇಕಾದೀತು. ಇವೆಲ್ಲಾ ಅವರು ಕೂಡಿಟ್ಟುಕೊಂಡಿರುವ ಮೊತ್ತವನ್ನು ಅವಲಂಬಿಸಿರುತ್ತದೆ. ಇಲ್ಲಿಗೆ ಅವರ ಗುಟ್ಟಿನ ಗಂಟಿನ ಲೆಕ್ಕಾಚಾರ ನಮಗೆ ಸಿಗುತ್ತದೆ. ಇಲ್ಲಿಗೆ ಒಂದು ಅಂಕ.
ಇನ್ನು ಎರಡನೆಯ ಅಂಕ ಪ್ರಾರಂಭ. ಅವರಲ್ಲಿನ ಒಟ್ಟು ಮೊತ್ತ ಗೊತ್ತಾದ ಮೇಲೆ ಅದರಲ್ಲಿ ಸ್ವಲ್ಪ ಹಣವನ್ನು ಸಾಲವಾಗಿ ಕೇಳಬೇಕು. ಅಷ್ಟು ಸುಲಭವಾಗಿ ಅದನ್ನು ಅವರು ಕೊಡಲೊಪ್ಪುವುದಿಲ್ಲ. ಹೆಚ್ಚಿನ ಬಡ್ಡಿಯ ಆಸೆಯನ್ನು ಅವರಿಗೆ ತೋರಿಸಬೇಕು. ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿ. ಆರು ತಿಂಗಳಿನ ನಂತರದ ಬಡ್ಡಿಯನ್ನು ಮೊದಲೇ ಕೊಟ್ಟು ಸಾಲವನ್ನು ಪಡೆಯಬೇಕು. ಅವರ ಒಂದು ಗುಟ್ಟು ಎಂದರೆ ಬಡ್ಡಿ ಆಸೆ ಹುಟ್ಟಿದ ಮೇಲೆ ನಮ್ಮಿಂದ ಅಸಲನ್ನು ಅವರು ಕೇಳುವುದೇ ಇಲ್ಲ. ಆದ್ದರಿಂದ ಬಡ್ಡಿಯ ಪಾವತಿ ಸರಿಯಾಗಿ ನಡೆಯಲೇಬೇಕು. ಹೀಗೆ ವ್ಯವಹಾರ ನಡೆಯುತ್ತಿರುವಾಗಲೇ ಇನ್ನಷ್ಟು, ಸ್ವಲ್ಪ ತಿಂಗಳ ನಂತರ ಮತ್ತಷ್ಟು ಹಣವನ್ನು ಅವರಿಂದ ಸಾಲವಾಗಿ ಪಡೆಯುವುದು ಸುಲಭ. ಏಕೆಂದರೆ ಬಡ್ಡಿಯ ಆಸೆಯೇ ಹಾಗೆ. ಅದು ಹಾಗೆ ಒಳಗಿನ ಹಣವನ್ನು ಹೊರಬರುವಂತೆ ಮಾಡುತ್ತದೆ. ಪ್ರಕ್ರಿಯೆ ಎಲ್ಲಿಯವರೆಗೆ ನಡೆಯುತ್ತದೆಯೆಂದರೆ ಅವರಲ್ಲಿ ಅಸಲಾಗಿ ಕೂಡಿಕೊಂಡ ನಮ್ಮಿಂದ ಪಡೆದ ಬಡ್ಡಿಯ ಮೊತ್ತವೂ ಮುಂದಿನ ಬಡ್ಡಿಯ ಆಸೆಗಾಗಿ ಪೂರ್ತಿ ಹೊರಬೀಳುತ್ತದೆ. ಅಷ್ಟರ ಮಟ್ಟಿಗೆ, ಅಲ್ಲಿಯವರೆಗೆ. ನಮ್ಮ ಬಡ್ಡಿಯ ಪಾವತಿಯ ಕ್ರಮ ಕರಾರುವಾಕ್ಕಾಗಿ ಇರಬೇಕು.

ಮುಂದೇನು ?. ಮುಂದಿನದನ್ನು ಶಿವನೇ ಬಲ್ಲ. ಏಕೆಂದರೆ ನಾವು ಮಾಡುವ ಪ್ರತಿ ಕೆಲಸವೂ " ಶಿವಾರ್ಪಣ " ಎಂದೇ ಅಲ್ಲವೇ ?.