Tuesday 15 September 2015

@@@@ ಬಣ್ಣ ಕಳೆದುಕೊಂಡ ಗುಂಡ ಕಟ್ಟಿದ ಬಂಗಾರದ ಮಾಂಗಲ್ಯದ ಸರ @@@@


                                                               ~~~~ ಎಂ. ಗಣಪತಿ. ಕಾನುಗೋಡು.

ನಮ್ಮೂರ ಗುಂಡ ಮದುವೆಯಾಗಿ ಈ ದಿನಕ್ಕೆ ನಾಲ್ಕು ವರ್ಷಗಳಾದುವು. ಆತ ಮನೆಯಲ್ಲಿ ಸಾಕಷ್ಟು ಶ್ರೀಮಂತ. ಮದುವೆಯಲ್ಲಿ ತನ್ನ ಮಗಳಿಗೆ ಅವನ ಆರ್ಥಿಕ ಅನುಕೂಲಕ್ಕನುಸಾರವಾಗಿ ಬಹಳ ಬಂಗಾರ ಹಾಕುತ್ತಾನೆ ಎಂದು ಭಾವಿಸಿಕೊಂಡಿದ್ದ ಅವನ ಮಾವನಿಗೆ ಭ್ರಮನಿರಸನವಾಗಿತ್ತು. ಅನಿವಾರ್ಯವಾಗಿ ಹಾಕಲೇಬೇಕಾಗಿದ್ದ ಬಂಗಾರದ ಮಾಂಗಲ್ಯದ ಸರವನ್ನು ಬಿಟ್ಟರೆ ಹೆಚ್ಚಿನದಕ್ಕೆ ಅಳಿಯನ ಶ್ರೀಮಂತಿಕೆಯನ್ನು ನೋಡಿಯಷ್ಟೇ ಸಮಾಧಾನಪಟ್ಟುಕೊಳ್ಳಬೇಕಾಯಿತು. ಏಕೆಂದರೆ ಗುಂಡನ ಹೆಂಡತಿಯ ತವರಿನಲ್ಲಿ ಆರ್ಥಿಕವಾಗಿ ಬಡವರು.
ನಮಗೆ ಊರಿನವರೂ ಇದು ಅರ್ಥವಾಗಲಿಲ್ಲ.
ಊರಿನ ಜನ, ಅವನ ಸಂಬಂಧಿಕರು ಮಾತಾಡಿಕೊಳ್ಳುತಿದ್ದರು -- ಗುಂಡನ ಪಕ್ಕದ ಮನೆಯ ಸೊಸೆಯ ಹಾಗೆ ಇವನ ಹೆಂಡತಿಯೂ ವರ್ಷಾರು ತಿಂಗಳಲ್ಲಿ ಡೈವೋರ್ಸ್ ಕೊಡದಿದ್ದರೆ ಸಾಕು, ಅವಳ ಹಾಗೆ ಗುಂಡನ ಬಂಗಾರ , ಹಣವನ್ನೆಲ್ಲ ದಾಟಿಸಿಕೊಂಡು ಇವನ ಕೈ ಬಿಟ್ಟು ಓಡಿಹೋಗದಿದ್ದರೆ ಸಾಕು ದೇವರೇ ಎಂದು ತಮ್ಮೊಳಗೆ ಅಂದುಕೊಳ್ಳುತಿದ್ದರು.
ಗುಂಡನ ದಾಂಪತ್ಯ ಯಾವ ಕುಂದೂ ಇಲ್ಲದೆ ಸುಗಮವಾಗಿದ್ದು ನಾಲ್ಕು ವರ್ಷಗಳು ಕಳೆದು ಹೋದುವು. ಅವನ ಹೆಂಡತಿ ಮದುವೆಯ ನಂತರ ಮುಟ್ಟಾಗಲೇ ಇಲ್ಲ. ಬೇಗನೆ ಮುದ್ದಾದ ಎರಡು ಮಕ್ಕಳೂ ಹುಟ್ಟಿದುವು. ಅವನ ಹೆಂಡತಿ ಗಂಡನೊಡನೆ ಅತಿ ಪ್ರೀತಿಯಿಂದ ಇದ್ದಾಳೆ . ಅಂತೂ ನಾವೆಲ್ಲಾ ಭಾವಿಸಿದಂತೆ ಅವನ ಹೆಂಡತಿ ಅವನನ್ನು ಬಿಟ್ಟು ಹೋಗಲಿಲ್ಲ.
ಆದರೆ ಹೋದದ್ದು ವಿವಾಹದಲ್ಲಿ ಅವನು ಹೆಂಡತಿಗೆ ಕಟ್ಟಿದ ಚಿನ್ನದ ಮಾಂಗಲ್ಯದ ಸರದ ಬಣ್ಣ ಮಾತ್ರ. ಸರ ಪೂರ್ತಿ ಬೆಳ್ಳಗಾಗಿತ್ತು. ನಾಲ್ಕು ವರ್ಷಗಳ ನಂತರ ಒಂದು ದಿನ ತನ್ನ ಮಕ್ಕಳೊಂದಿಗೆ ಹೆಂಡತಿಯನ್ನೊಡಗೂಡಿದ ಸುಖೀಸಂಸಾರದೊಂದಿಗೆ ಬಂಗಾರದ ಅಂಗಡಿಗೆ ಹೋಗಿ ತನ್ನ ಹೆಂಡತಿ ಕೇಳಿದ ಹೆಚ್ಚಿನ ತೂಕದ ಒಳ್ಳೆಯ ಬಂಗಾರದ
ಮಾಂಗಲ್ಯದ ಸರವನ್ನು ಅವಳಿಗೆ ಕೊಡಿಸಿ ಅಲ್ಲೇ ಕೊರಳಿಗೆ ಕಟ್ಟಿಸಿಕೊಂಡು ಮನೆಗೆ ಬಂದ.
ನಮಗೆಲ್ಲ ಅಚ್ಚರಿ. ಊರಿಗೇ ಶ್ರೀಮಂತನಾಗಿದ್ದ ಗುಂಡ ಮೊದಲು ತಂದ ಸರದ ಬಣ್ಣ ಹೋದದ್ದು ಏಕೆ ?. ಹಾಗಂತ ಅವನಿಗೆ ಸೊನಗಾರನು ಮೋಸ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಕೆ. ಜಿ. ಗಟ್ಟಲೆ ಬಂಗಾರವನ್ನು ತನ್ನ ಸಂಸಾರಕ್ಕೆ ಖರೀದಿಸಿದವನು. ಸಾಕಷ್ಟು ಬುದ್ಧಿವಂತ ಬೇರೆ. ಒಂದು ವಾರ ನಮಗೆ ನಿದ್ರೆಯೇ ಸರಿಯಾಗಿ ಬರಲಿಲ್ಲ.
ನಾವು, ಅವನ ಗೆಳೆಯರೆಲ್ಲ ಒಂದು ದಿನ ಈ ವಿಚಾರವಾಗಿ ಗುಂಡನನ್ನು ಕೇಳಿಯೇ ಬಿಟ್ಟೆವು. ಆಗ ಅವನು ಕೊಟ್ಟ ಉತ್ತರ ಹೀಗಿತ್ತು.
" ಯಾರಿಗೆ ಗೊತ್ತೋ ಮಾರಾಯರಾ. ನನ್ನ ಹೆಂಡತಿ ನನ್ನ ಜೊತೆಗೆ ಬಾಳುವೆ ಮಾಡಿಕೊಂಡು ಮುಂದುವರೆಯುತ್ತಾಳೆ ಎಂದು ಇಂದಿನ ಕಾಲದಲ್ಲಿ ಏನು ಗ್ಯಾರಂಟಿ ?. ನಮ್ಮ ಪಕ್ಕದ ಮನೆಯವನನ್ನು ನೋಡಿ ನನಗೆ ಸಾಕಾಗಿ ಹೋಗಿತ್ತು. ಒಮ್ಮೆ ಅವಳು ನನ್ನನ್ನು ಬಿಟ್ಟು ಓಡಿಹೋದರೆ ಅಷ್ಟರಲ್ಲೇ ಹೋಗಲಿ ಎಂದು ಬೆಳ್ಳಿಯ ಸರಕ್ಕೆ ಬಂಗಾರದ ನೀರನ್ನು ಹಾಕಿಸಿ ಅದಕ್ಕೆ ಐದು ನೂರು ರುಪಾಯಿ ಖರ್ಚು ಮಾಡಿದ್ದೆ ಅಷ್ಟೆ. ಸರದ ಬಣ್ಣ ಹೋದರೂ ಅವಳು ಹೋಗಲಿಲ್ಲ. ಅದಕ್ಕೆ ಖುಷಿಯಿಂದ ಅವಳ ಇಚ್ಚೆಯಂತೆ ಎರಡು ಲಕ್ಷ ರೂಪಾಯಿನ ಅಪ್ಪಟ ಬಂಗಾರದ ಮಾಂಗಲ್ಯದ ಸರವನ್ನೇ ಕೊಡಿಸಿದೆ ".


ತಾರೀಖು : 9 - 9 - 2015

@@@@@ ಪೂತನಿಯ ಮೊಲೆಯಲ್ಲಿ ಹಾಲು, ಮನದಲ್ಲಿ ವಿಷ. ಪರಿಣಾಮ ಹಾಲಾಹಲ @@@@@


                                                                           ಎಂ.ಗಣಪತಿ.ಕಾನುಗೋಡು.

ಹಾಲುಣ್ಣಿಸಲು ಬಂದವರನ್ನೂ ಶಿಶುಕೃಷ್ಣ ಕೊಂದ ಎಂದಮೇಲೆಯೆ ಲೋಕಕ್ಕೆ ಗೊತ್ತಾದದ್ದು ಒಂದು ಪಾಠ. ಯಾರು ನಮಗೆ ಬಾಹ್ಯವಾಗಿ ಒಳ್ಳೆಯವರೆಂದು ಕಂಡರೂ ಅವರನ್ನು ಪೂರ್ವ್ವಾಪರವಾಗಿ ನಾವು ಗ್ರಹಿಸಿಕೊಳ್ಳಬೇಕು ಎನ್ನುವುದೇ ಆ ಪಾಠ.
ಪೂತನಿ ಒಬ್ಬಳು ರಾಕ್ಷಸಿ. ಕೃಷ್ಣನ ಮೇಲೆ ವೈರುಧ್ಯವನ್ನೇ ಸಾಧಿಸುತಿದ್ದ ಕಂಸನ ಪರಿವಾರದಳು. ಕಂಸನ ಆದೇಶದ ಮೇರೆಗೆ ತನ್ನ ರಾಕ್ಷಸ ವೇಷವನ್ನು ಮರೆಸಿ ಸುಂದರ ಸ್ತ್ರೀ ವೇಷದಿಂದ ಗೋಕುಲದಲ್ಲಿ ನಂದನ ಮನೆಯನ್ನು ಹೊಕ್ಕು ಅಲ್ಲಿ ಶ್ರೀಕೃಷ್ಣನಿಗೆ ಮೊಲೆಯ ಹಾಲನ್ನುಣಿಸತೊಡಗಿದಳು. ಮೂಲತಃ ಹಾಲು ವಿಷವಲ್ಲ. ಆದರೆ ಅವನನ್ನು ಕೊಲ್ಲಲೇಬೇಕೆಂಬ ದುರುದ್ಧೇಶದ ವಿಷ ಅವಳ ಮನಸ್ಸಿನಲ್ಲಿ ಇತ್ತು. ಉಣ್ಣಿಸುವುದು ಮೊಲೆಯ ಶುದ್ಧ ಹಾಲಾದರೂ ಮನಸ್ಸಿನಲ್ಲಿ ವಿಷವಿದ್ದರೆ ಆ ಹಾಲೂ ವಿಷಪೂರಿತವಾಗುತ್ತದೆ ಎನ್ನುವುದು ಲೋಕಕ್ಕೆ ಇನ್ನೊಂದು ಪಾಠವೂ ಹೌದು. ಹಾಗಾಗಿಯೇ ನಮ್ಮ ತಾಯಂದಿರು ತಮ್ಮ ಮಕ್ಕಳಿಗೆ ಮೊಲೆಯುಣ್ಣಿಸುವಾಗ ಪ್ರಸನ್ನತೆಯಿಂದ, ಮಕ್ಕಳ ಮೇಲಿನ ಅತಿ ಅನುರಾಗದಿಂದ ಉಣ್ಣಿಸುತ್ತಾರೆ. ಉಣ್ಣಿಸಬೇಕು. ಏಕೆಂದರೆ ನಮ್ಮ ದೇಹದಿಂದ ಹೊರಡುವ ಜೀವ ರಸಗಳು ನಮ್ಮ ಭಾವನೆಗಳಿಂದಲೂ ಪ್ರಭಾವಿತಗೊಳ್ಳುತ್ತವೆ.
ನಮ್ಮ ವಿರುದ್ಧ ಯಾರು ಎಂಥಹ ಒಳ್ಳೆಯ ರೂಪದಿಂದ ಬಂದರೂ ಅದು ಸೋಗು ಇರಬಹುದೇ ಎಂದು ನಾವು ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳಬೇಕು. ಅಂತಹವರನ್ನು ನಿರ್ಧಾಕ್ಷಿಣ್ಯವಾಗಿ ಧಿಕ್ಕರಿಸಬೇಕು. ಇಲ್ಲದಿದ್ದರೆ ನಾವು ಘೋರ ಅವಘಡಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವುದನ್ನು ಶ್ರೀಕೃಷ್ಣ ಲೋಕಕ್ಕೆ ಕಲಿಸಿಕೊಟ್ಟ ಪಾಠ.
ಸುಂದರ ರೂಪದ ಹೆಣ್ಣು ಪೂತನಿ ಒಳ್ಳೆಯವಳು, ತಾಯಿಯ ಸ್ವರೂಪಿ ಎಂದು ಗೋಕುಲದ ಜನರು ಗ್ರಹಿಸಿರಬೇಕು. ಎಷ್ಟೇ ಗುಟ್ಟಾಗಿ ಬಂದರೂ ಆಕೆಯ ಬರವು ಯಾರಿಗೂ ಗೊತ್ತಾಗದೆ ಇರಲಿಕ್ಕಿಲ್ಲ. ಆದರೆ ಕೃಷ್ಣ ಮುಂದೆ ಒಂದು ದಿನ ಸ್ನಾನ ಮಾಡುವ ಹೆಣ್ಣುಗಳೊಂದಿಗೆ ಅವರ ಉಡುಪುಗಳನ್ನು ಕದ್ದು ಮಜಾ ಮಾಡುವ ಹಗುರ ಸ್ವಭಾವದವನೆಂದು ನಮಗೆ ಮೇಲ್ನೋಟಕ್ಕೆ ಅನ್ನಿಸಿದರೂ ವಾಸ್ತವಿಕವಾಗಿ ಈ ಸುಂದರ ಹೆಣ್ಣು ಪೂತನಿ ತನ್ನೆಡೆ ಬಂದಾಗ ಆತ ಕಣ್ಮುಚ್ಚಿ ಸುಮ್ಮನೆ ಅವಳ ಮೊಲೆಯುಣ್ಣಲಿಲ್ಲ. ಅಷ್ಟರ ಮಟ್ಟಿಗೆ ಆತ ಚಿಂತನಾಶೀಲ. ಶೈಶವಾವಸ್ಥೆಯಲ್ಲಿಯೇ ಅವನಲ್ಲಿ ಆ ಶಕ್ತಿ, ಪ್ರಜ್ಞೆ ಇತ್ತು ಎನ್ನುವುದು ಒಂದು ಭಾವನಾತ್ಮಕ ಕಲ್ಪನೆ. ಆದ್ದರಿಂದ ತನ್ನ ಸುತ್ತಲಿನ ಮಂದಿ ಆಕೆಯನ್ನು ಒಳ್ಳೆಯವಳೆಂದು ಗ್ರಹಿಸಿದರೂ ಶ್ರೀಕೃಷ್ಣ ಯಥಾವತ್ತಾಗಿ ಅವಳನ್ನು ಗ್ರಹಿಸಿದ. ಮೇಲ್ನೋಟಕ್ಕೆ ಒಳ್ಳೆಯವಳೆಂದು ಕಂಡರೂ ಅವಳನ್ನು ಕೊಲ್ಲಲೇಬೇಕೆಂದು ನಿರ್ಣಯಿಸಿ ಅವಳ ಮೊಲೆಯನ್ನೇ ಕಚ್ಚಿ ಕೊಂದುಬಿಟ್ಟ. ಆ ವಯಸ್ಸಿನಲ್ಲಿ, ಆ ಹೊತ್ತಿನಲ್ಲಿ ಅವನಲ್ಲಿದ್ದ ಅವನ ಆಯುಧವೆಂದರೆ ಅವನ ಹಲ್ಲುಗಳು ಮಾತ್ರ. ನಾವು ಮನಸ್ಸು ಮಾಡಿದರೆ, ನಮಗೆ
ಇಚ್ಚಾಶಕ್ತಿ ಇದ್ದರೆ ನಮ್ಮ ಶತ್ರುಗಳನ್ನು ಎದುರಿಸಲು ಹೊರಗಿನ ಆಯುಧ, ಶಕ್ತಿ ಬೇಕಾಗಿಲ್ಲ, ನಮ್ಮಲ್ಲಿ ಅಂತರ್ಗತವಾಗಿರುವ ಅನ್ಥಶಕ್ತಿಯೇ ಸಾಕು ಎನ್ನುವುದು ಶ್ರೀಕೃಷ್ಣ ನಮಗೆ ಹೇಳಿಕೊಟ್ಟ ಪಾಠ.
ಪೂತನಿ ಮತ್ತು ಕೃಷ್ಣನ ಪ್ರಸಂಗದಿಂದ ನಾವು ಕಲಿಯಬೇಕಾದ ಪಾಠವೆಂದರೆ ಶತ್ರುಗಳು ನಮ್ಮ ದೇಹದ ಹೊರಗೆ ಇದ್ದಾರೆ. ಹಾಗೆಯೆ ನಮ್ಮ ದೇಹದ ಮತ್ತು ಮನಸ್ಸಿನ ಒಳಗೂ ಇವೆ. ಅವುಗಳನ್ನು ಯಾವಾಗ, ಎಲ್ಲಿ, ಹೇಗೆ ಮಟ್ಟ ಹಾಕಬೇಕೋ ಹಾಗೆ ಮಟ್ಟಹಾಕಬೇಕು ಎನ್ನುವ ವಿಚಾರ ಸರ್ವಕಾಲಿಕ ಸತ್ಯ.

ತಾರೀಖು : 5 - 9 - 2015

ಶ್ರೀ ಕೃಷ್ಣಾಷ್ಟಮಿಯ ದಿನ .

Friday 4 September 2015

%&%&%& ನೀರಂಡೆ. ನೀ.... ರಂಡೆ %&%&%&


ನಾಗಮ್ಮ ಮತ್ತು ಹುಚ್ಚಮ್ಮ ಇಬ್ಬರೂ ಹಳ್ಳಿಯಲ್ಲಿ ಹಾಲು ಮಾರುವವರು. ಅಕ್ಕಪಕ್ಕದ ಹಳ್ಳಿಯವರು. ಬೇರೆ ಬೇರೆ ಊರಿಗೆ ಹೋಗಿ ದಿನನಿತ್ಯ ಬೆಳಿಗ್ಯೆ ಎಂಟು ಘಂಟೆಗೆ ಹಾಲು ಮಾರಲು ಹೊರಡುವವರು. ಇಬ್ಬರೂ ಸ್ನೇಹಿತೆಯರೇ. ಸಾಗುವಾಗ ನಮ್ಮೂರಿನ ಒಂದು ಜಾಗದಲ್ಲಿ ಸಂಧಿಸಿ ಸ್ವಲ್ಪ ಸುಖ - ಕಷ್ಟ ಮಾತನಾಡಿಕೊಂಡು ಮುಂದೆ ಸಾಗುವವರು.
ನಮ್ಮೂರು ಭತ್ತ ಬೆಳೆಯುವ ಪ್ರದೇಶ. ಪೈರು ತುಂಬಿ ಬೆಳೆದ ದಿನಗಳು. ಆ ಒಂದು ದಿನ ಎಂದಿನಂತೆ ಅದೇ ಜಾಗದಲ್ಲಿ ಅವರಿಬ್ಬರೂ ಸಂಧಿಸಿದರು. ನಾಗಮ್ಮ ಹುಚ್ಚಮ್ಮಳನ್ನು ಕಂಡವಳೇ ' ಅದೇನೆ ಹುಚ್ಚಿ, ಅದೆಂತ ಶಬ್ದ ಆಕೈತಲೇ 'ಎಂದು ಅವಳನ್ನು ಕೇಳಿದಳು.
' ನೀರಂಡೆ ' ಎಂದಳು ಹುಚ್ಚಮ್ಮ.
ನಾಗಮ್ಮನಿಗೆ ಸಿಟ್ಟು ನೆತ್ತಿಗೇರಿತು. ಏನೇ ..... ಸ್ವಲ್ಪ ಹಲ್ಲು ಹಿಡಿದು ಮಾತಾಡೆ. ಗಂಡ ಸತ್ತವಳು ನೀನು. ಸ್ವಕಾ ಏನೋ ಕೇಳಿದರೆ ನನಗೇ ರಂಡೆ ಹೇಳ್ತೀಯಾ ?. ನನ್ನ ಗಂಡ ಇನ್ನೂ ಬದುಕಿ ಐದಾನೆ ಕಣೇ. ನಾನಲ್ಲ. ನೀನು ರಂಡೆ. ಕುಟ್ಟಿಕಾಣಿಸಿಯೇ ಬಿಟ್ಟಳು ನಾಗಮ್ಮ.
ಇಬ್ಬರಿಗೂ ಹಾಲಿನ ಬಿಂದಿಗೆ ತಲೆಯ ಮೇಲೆಯೇ ಇದೆ. ಒಂದು ಬ್ಯಾಲನ್ಸ್ ನಿಂದಾಗಿ ಬಿಂದಿಗೆಯನ್ನು ಕೈಯಲ್ಲಿ ಹಿಡಿದುಕೊಳ್ಳದೆ ತಲೆಯ ಮೇಲೆ ಇಟ್ಟುಕೊಂಡು ಇಬ್ಬರೂ ಮತ್ತೊಬ್ಬರತ್ತ ಎರಡೂ ಕೈಗಳನ್ನು ಬೀಸಿಕೊಳ್ಳುತ್ತಾ ಟಗರು ಕಾಳಗಕ್ಕೆ ಶುರುವಿಟ್ಟುಕೊಂಡರು.
' ಹೌದೆ ನಾಗಿ ನನ್ನ ಗಂಡ ಸತ್ತು ಹೋಗವ್ನೆ.ಹಾಂಗೆ ಹೇಳಿ ನಾನು ಯಾರನ್ನು ಇಟ್ಟುಕೊಳ್ಳಕ್ಕೆ ಹೋಗ್ಲಿಲ್ಲ. ನೀನು ದೊಡ್ಡ ಗರತಿಯೇನೆ ?. ನಿಂದು ಊರ್ನಾಗೆಲ್ಲಾ ನಾರಿ [ ಗಬ್ಬು ] ಹೋಗೈತೆ. ನಾನಲ್ಲ. ನೀನು ರಂಡೆ. ಮುಚ್ಕ್ಯಾ ಸಾಕು '. ಹುಚ್ಚಮ್ಮನೂ ಬಿಡಲಿಲ್ಲ. ನಾಗಮ್ಮನಿಗೆ ಸರಿಯಾಗಿಯೇ ಕಾಸಿದಳು.
ನಾನಲ್ಲ ಕಣೆ ನೀನು ರಂಡೆ. --- ನಾಗಮ್ಮ.
ಯಾವಳೇ ನೀನು, ನೀನು ದೊಡ್ಡ ಶುಭಗ್ಯನೆ ?. ನೀನು ರಂಡೆ. --- ಹುಚ್ಚಮ್ಮ.
ಜಗಳ ತಾರಕ್ಕೇರಿ ಹೊಡೆದಾಟದವರೆಗೂ ಹೋದದ್ದು ಇಡೀ ಊರಿಗೆ ತಿಳಿಯಿತು. ಗ್ರಾಮದ ಹಿರಿಯರೆಲ್ಲಾ ಅಲ್ಲಿಗೆ ಬಂದರು. ಇಬ್ಬರನ್ನೂ ಸಮಾಧಾನಪಡಿಸಿ ಮೊದಲಿನಿಂದ ವಿಷಯವೇನೆಂದು ತಿಳಿದುಕೊಂಡರು. ಇಬ್ಬರ ಹೇಳಿಕೆಯೂ ತಪ್ಪಲ್ಲ. ಇಬ್ಬರೂ ಪರಸ್ಪರ ತಿಳಿದುಕೊಂಡಿದ್ದು ತಪ್ಪಾಗಿದೆ ಅಷ್ಟೆ ಎಂದು ಇಬ್ಬರಿಗೂ ಬುದ್ಧಿ ಹೇಳಿ ಸಮಜಾಯಿಸಿ ಮಾಡಿ ಅವರಿಬ್ಬರನ್ನೂ ಆ ಜಾಗದಿಂದ ಕಳಿಸಿಕೊಟ್ಟರು.
ವಿಷಯ ಇಷ್ಟೇ. ನಮ್ಮೂರಿನ ಜಮೀನಿನ ಭತ್ತದ ಬೆಳೆಗೆ ಕಾಡುಹಂದಿಯ ಕಾಟ ಜಾಸ್ತಿಯಾಗಿತ್ತು. ಭತ್ತದ ಗದ್ದೆಗೆ ರಾತ್ರಿಯೆಲ್ಲಾ ನುಗ್ಗಿ ಪೈರನ್ನು ತುಳಿದು ಹಾಳು ಮಾಡುತ್ತಿದ್ದುವು. ಅವುಗಳನ್ನು ಬೆದರಿಸಲಿಕ್ಕಾಗಿ ನೀರು - ಅಂಡೆಯನ್ನು ಆ ದಿನ ಬೆಳಿಗ್ಯೆಯಷ್ಟೇ ಯಾರೋ ಮಾಡಿದ್ದರು. ಅದನ್ನು ಆಡುಭಾಷೆಯಲ್ಲಿ " ನೀರಂಡೆ " ಎನ್ನುತ್ತಾರೆ. ಅದನ್ನೇ ಹುಚ್ಚಮ್ಮ ನಾಗಮ್ಮನಿಗೆ ಹೇಳಿದ್ದು. ಆದರೆ ನೀರಂಡೆಯ ಮಾಹಿತಿ ನಾಗಮ್ಮನಿಗೆ ಇರಲಿಲ್ಲ. ಇಬ್ಬರಲ್ಲೂ ಜಗಳ ಕುದುರಿದ್ದು ಇದೇ ಕಾರಣಕ್ಕೆ.
{ ನೀರಂಡೆ ಎಂದರೇನು ?. ಎರಡು ಮರದ ಗೂಟಕ್ಕೆ ಒಂದು ಮರದ ರಾಟಿಯನ್ನು ಕಟ್ಟುತ್ತಾರೆ. ಆ ರಾಟಿಯ ಮೇಲೆ ಸ್ವಲ್ಪ ಎತ್ತರದಿಂದ ಸಣ್ಣದಾಗಿ ನೀರು ಧುಮುಕುವಂತೆ ವ್ಯವಸ್ಥೆ ಮಾಡಿ ಹಗಲು ರಾತ್ರಿ ಅದು ತಿರುಗುತ್ತಿರುವಂತೆ ಸಜ್ಜು ಮಾಡಿರುತ್ತಾರೆ. ಅದರ ಎದುರು ಒಂದು ಮರದ ಗೂಟಕ್ಕೆ ಉದ್ದನೆಯ ಕೊಡೆಯ ಕಡ್ಡಿಯೊಂದನ್ನು ಕಟ್ಟಿರುತ್ತಾರೆ. ಅದು ಸ್ವಲ್ಪ flexible ಆಗಿರುತ್ತದೆ. ಆ ಕೊಡೆಯ ಕಡ್ಡಿಯ ಒಂದು ತುದಿ ರಾಟಿಗೆ ತಾಗಿಕೊಂಡಿರುತ್ತದೆ. ಅದರ ಮತ್ತೊಂದು ತುದಿ ತಾಗುವ ಹಾಗೆ ಕಡ್ಡಿಯ ಎದುರಿಗೆ ಖಾಲಿ ಡಬ್ಬವೊಂದನ್ನು ಇಟ್ಟಿರುತ್ತಾರೆ. ನೀರು ರಾಟಿಯ ಮೇಲೆ ಬಿದ್ದು ತಿರುಗಿದಂತೆಲ್ಲಾ ಅದು ತಿರುಗಿ ಕೊಡೆ ಕಡ್ಡಿಯ ಒಂದು ತುದಿಯನ್ನು ಎತ್ತಿ ಹಾಕುತ್ತಾ ಇರುತ್ತದೆ. ಆಗ ಕೊಡೆ ಕಡ್ಡಿಯ ಮತ್ತೊಂದು ತುದಿ ಸಹಜವಾಗಿ ಖಾಲಿ ಡಬ್ಬದ ಮೇಲೆ ಒತ್ತಡದಿಂದ ಬಿದ್ದು ಶಬ್ದವನ್ನು ಮಾಡುತ್ತದೆ. ಆ ಶಬ್ದವನ್ನು ಕಂಡ ಹಂದಿಗಳು ಹೊಲದ ಹತ್ತಿರ ಬಂದದ್ದು ಹೆದರಿಕೊಂಡು ಪಲಾಯನ ಮಾಡುತ್ತದೆ. ಬೆಳೆ ರಕ್ಷಣೆಯಾಗುತ್ತದೆ. ಇದು ರೈತರ ಪೃಕೃತಿದತ್ತವಾದ ಒಂದು ಸರಳ ಯಂತ್ರ. }.

@@@@ ರೈತ --- ದೇಶದ ಅನ್ನದಾತನ ಮೇರು- ಕೂರು. @@@@


~~~~~~ ಎಂ. ಗಣಪತಿ. ಕಾನುಗೋಡು.

ರೈತ ದೇಶದ ಬೆನ್ನೆಲುಬು. ಆತ ನಮಗೆ ಅನ್ನವನ್ನು ನೀಡುವ ಅನ್ನದಾತ. ಅವನನ್ನು ನಮ್ಮ ದೇಶದ ಹಿಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು " ಜೈ ಕಿಸಾನ್ " ಎಂದು ಶ್ಲಾಘಿಸಿದರು. " ಭೂಮಿಯನುಳುವ ನೇಗಿಲ ಯೋಗಿಯ ನೋಡಲ್ಲಿ " ಎಂದು ಅವನನ್ನು ಕವಿಗಳು ಕೊಂಡಾಡಿದರು. ಆತನನ್ನು ಯೋಗಿ ಎಂದು ಬಣ್ಣಿಸಿದ್ದೇಕೆ ಎಂದು ಎಲ್ಲರೂ ಗಮನಿಸಬೇಕು. " ಯೋಗಿ " ಎಂದರೆ ತನ್ನ ಸ್ವಾರ್ಥವನ್ನು ತ್ಯಾಗಮಾಡಿ ಸಮಾಜದ ಉದ್ಧಾರಕ್ಕಾಗಿ ತನ್ನ ಜೀವನವನ್ನು ವ್ಯಯಿಸುವವನು ಎಂದರ್ಥ. ನಮ್ಮ ದೇಶದ ರೈತ ಅದೇ ಅರ್ಥದಲ್ಲಿ ತನ್ನ ಜೀವವನ್ನು ಸವೆಸಿ ದೇಶದ ಜನತೆಗೆ ಅನ್ನ ನೀಡುತ್ತಿದ್ದಾನೆ ಎಂದರ್ಥ. ಏಕೆಂದರೆ ಇಂದು ಕೃಷಿ ಲಾಭದಾಯಕವಾಗಿಲ್ಲ. ಆದರೂ ಅವನು ತನ್ನ ಆರ್ಥಿಕ ಲಾಭದ ಧೃಷ್ಟಿಯಿಂದ ಹಳ್ಳಿಯನ್ನು, ತನ್ನ ಭೂಮಿಯನ್ನು ತೊರೆದು ನಗರಕ್ಕೆ ವಲಸೆ ಹೋಗಿಲ್ಲ. ಇಲ್ಲಿ ರೈತನ ಸ್ವಾರ್ಥರಹಿತ ಬದುಕು ನಮಗೆ ಗೋಚರಿಸುತ್ತದೆ.
ಆದರೆ ರೈತನ ವೈಯುಕ್ತಿಕ ಬದುಕು ಅತಿ ಕಷ್ಟದಿಂದ ಕೂಡಿದೆ. ಆತ ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು, ಸಾಲದಲ್ಲಿಯೇ ಮರಣ ಹೊಂದುತ್ತಾನೆ. ' ಈಗ ತನ್ನ ಕೈ ಸ್ವಲ್ಪ ಗಿಡ್ಡವಾಗಿದೆ, ಇನ್ನೊಂದು ನಾಲ್ಕು ವರ್ಷ ಕಳೆದರೆ ಅಡ್ಡಿಯಿಲ್ಲ, ತಾನು ಆರ್ಥಿಕವಾಗಿ ಸುಧಾರಿಸಿಕೊಳ್ಳುತ್ತೇನೆ ' ಎಂದು ಆತ ಹೇಳಿಕೊಳ್ಳುತ್ತಲೇ ಇರುತ್ತಾನೆ. ಅವನ ಅಜ್ಜ ಹೇಳಿದ ಮಾತು ಇದೇ. ಅವನ ಅಪ್ಪ ಹೇಳಿದ ಮಾತು ಇದೇ. ಈಗ ಅವನು ಹೇಳುತ್ತಿರುವುದು ಇದೇ. ಅವನ ಮಗ, ಮೊಮ್ಮಕ್ಕಳು ಹೇಳುವ ಮಾತು ನಾಳೆ, ನಾಡಿದ್ದು ಇದೇ.
ಅವನು ತನ್ನ ಕೃಷಿಗಾಗಿ ಮಾಡುವ ಹಣದ ವೆಚ್ಚ ಮತ್ತು ಅವನು ಬೆಳೆದ ಉತ್ಪನ್ನದಿಂದ ಬರುವ ಆದಾಯ ಇವೆರಡರ ನಡುವೆ ಇರುವ ಅಂತರ ಅತಿ ಕಡಿಮೆ. ಅವನ ಬೆಳೆಯ ಉತ್ಪಾದನೆಯ ಮತ್ತು ಬೆಳೆದ ಬೆಳೆಯ ಬೆಲೆಯ ಅನಿರ್ಧಿಷ್ಟತೆ. ತನ್ನ ಬೆಳೆಯನ್ನು ಮಾರಾಟಮಾಡುವಲ್ಲಿ ಅವನ ಅಸಹಾಯಕತೆ, ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪಿಡುಗು, ಕಾಡುಪ್ರಾಣಿಗಳು , ಹಕ್ಕಿ ಪಕ್ಷಿಗಳು , ಕಳ್ಳ ಕಾಕರು ಒಯ್ದು ಬಿಟ್ಟದ್ದು ಇವನ ಮನೆಯೊಳಗೆ ಎನ್ನುವ ಪರಿಸ್ಥಿತಿ, ಬೆಳೆಗೆ ತಗಲುವ ರೋಗರುಜಿನಗಳು, ಕೂಲಿಕಾರ ಅಭಾವದ ಸಮಸ್ಯೆ, ಸಾಲಬಾಧೆ... ಹೀಗೆ ಅನೇಕ ಸಮಸ್ಯೆಗಳು ರೈತನನ್ನು ಕಾಡುತ್ತಿವೆ.
ಸರ್ಕಾರ ಅವನನ್ನು ಸಾಕಬೇಕು. ಪ್ರಸ್ತುತ ಸರ್ಕಾರದ ಸವಲತ್ತುಗಳು ನಮ್ಮ ದೇಶದ ರೈತನಿಗೆ ಕಣ್ಣೊರೆಸುವ ತಂತ್ರವಾಗಿದೆ. ಕೆಲವು ಸಬ್ಸಿಡಿಗಳು ಕೇವಲ ಬೋಗಸ್. ಕೃಷಿ ಉಪಕರಣಗಳನ್ನು ಅದನ್ನು ತಯಾರಿಸಿದ ಮಾಲಿಕರಿಂದ ಮೂಲ ಬೆಲೆಗಿಂತ ದುಪ್ಪಟ್ಟು ಏರಿಸುವಂತೆ ಮಾಡಿಸಿ ಅದಕ್ಕೆ 50 % ಸಬ್ಸಿಡಿ ಎಂದು ಸರ್ಕಾರ ಸಾರುತ್ತದೆ. ಕೃಷಿ ಇಲಾಖೆಯಿಂದ ಅವನ್ನು ರೈತರಿಗೆ ವಿತರಿಸಲಾಗುತ್ತದೆ. ನಿಜವಾದ ಅರ್ಥದಲ್ಲಿ ರೈತನಿಗೆ ಉಪಕರಣ ದೊರಕುವುದು ಮೂಲ ಬೆಲೆಗೆ ವಿನಃ ಸಹಾಯಧನದ ಪ್ರಯೋಜನ ಅವನಿಗೆ ದೊರಕುವುದೇ ಇಲ್ಲ. ವಾಸ್ತವಿಕವಾಗಿ ಸಹಾಯಧನದ ಲಾಭ ದೊರಕುವುದು ಸರ್ಕಾರದಲ್ಲಿದ್ದವರಿಗೆ ಅಷ್ಟೇ. ಉಪಕರಣದ ಮಾಲಿಕನಿಗೆ ಸರ್ಕಾರದ ಜಾಹೀರಿನಿಂದ ತನ್ನ ಉತ್ಪಾದನೆಯ ವಸ್ತು ಹೇರಳವಾಗಿ ಮಾರಾಟವಾಗುತ್ತದೆ. ಅದು ಅವನಿಗೆ ಸಲ್ಲುವ ಪ್ರಯೋಜನ. ಇದರಂತೆ ಅನೇಕ ವಿಚಾರಗಳಲ್ಲಿ ರೈತನಿಗೆ ವಂಚನೆಯಾಗುತ್ತಿದೆ. ಕೆಲವೊಂದು ಆಮಿಷಗಳು ಗಗನ ಕುಸುಮವೂ ಆಗಿದೆ.
ರೈತನ ಇಂಥಹ ಕಠಿಣ ಪರಿಸ್ತಿತಿಯು ಒಂದು ದಿನ ಅವನನ್ನು ಸಮ್ಪೂರ್ಣವಾಗಿ ಈ ಕ್ಷೇತ್ರವನ್ನು ತ್ಯಜಿಸುವಂತೆ ಮಾಡಿ ನಗರಕ್ಕೆ ಗುಳೆ ಹೋಗುವಂತೆ ಮಾಡಿದರೂ ಆಶ್ಚರ್ಯವಿಲ್ಲ.
ತಾರೀಖು : 30 - 8 - 2015

$$$$$$ ಕಲಿಯುಗದ ಇಚ್ಚಾಮರಣಿ $$$$$$


~~~~ ಎಂ. ಗಣಪತಿ. ಕಾನುಗೋಡು.

ಹೌದು, ಇಲ್ಲೊಬ್ಬ ಇಚ್ಚಾಮರಣಿ ಇದ್ದಾರೆ. ಅವರೇ ದಿವಂಗತ ಶ್ರೀ ನಾರಾಯಣಪ್ಪ ಶಾನುಭೋಗ್. ಸಾಗರ ತಾಲ್ಲೂಕಿನ ನಂದಿತಳೆ ಹತ್ತಿರದ ಹೊಂಗೋಡು ಇವರ ಊರು. ಅವರ ಮರಣ ತಾರೀಖು 6 - 8 - 2015 . ವಯಸ್ಸು 94 ವರ್ಷ. ಅವರ ಹೆಂಡತಿ [ 84 ವರ್ಷ ]. ಮರಣ ಹೊಂದಿದ ಹನ್ನರಡನೆಯ ದಿನ ರಾತ್ರಿಯೇ ಇವರೂ ಮರಣ ಹೊಂದಿದರು.
ಶ್ರೀ ನಾರಾಯಣಪ್ಪನವರು ಸುಮಾರು ಹದಿನೈದು ವರ್ಷಗಳಿಂದ ತನ್ನ ಹೆಂಡತಿ ಸತ್ತ ಸ್ವಲ್ಪ ಕಾಲದಲ್ಲಿಯೇ ತಾನೂ ಮರಣ ಹೊಂದುತ್ತೇನೆ ಎಂದು ತಮ್ಮ ಮಕ್ಕಳೆದುರು ಹೇಳುತಿದ್ದರು. ಅವರದು ತುಂಬು ಕುಟುಂಬ. ಸಮಾಜದಲ್ಲಿ ಗೌರವಸ್ಥರು. ಸುಖೀ ಸಂಸಾರದವರು. ತೊಂಬತ್ತನಾಲ್ಕು ವಯಸ್ಸಿನವರೆಗೆ ತಮ್ಮ ಎಂಬತ್ತನಾಲ್ಕು ವಯಸ್ಸಿನ ಹೆಂಡತಿಯ ಜೊತೆಗೆ ತಮ್ಮ ಅವಿಭಕ್ತ ಕುಟುಂಬದಲ್ಲಿ ಬಾಳಿದವರು. ತಮ್ಮ ಮಕ್ಕಳ ನಡುವೆ ನಾಳೆ ಒಡುಕು ಬಾರದಿರಲಿ ಎಂದು ಕುಟುಂಬದೊಳಗಿನ ಎಲ್ಲಾ ವಿಷಯಗಳಲ್ಲೂ ಮುಂಜಾಗರೂಕತೆಯಿಂದ ತಕ್ಕ ವ್ಯವಸ್ಥೆ ಮಾಡಿದವರು.
ಕಳೆದ ಮೂರೂವರೆ ತಿಂಗಳಿನಿಂದ ಅವರ ಪತ್ನಿಗೆ ಆರೋಗ್ಯ ಹದಗೆಟ್ಟಿತು. ಇನ್ನೇನು ತನ್ನ ಹೆಂಡತಿ ಬದುಕಿ ಉಳಿಯುವುದಿಲ್ಲ ಎಂದು ಅವರಿಗೆ ಮನವರಿಕೆಯಾದಾಗ ಅವಳು ಸತ್ತ ಕೂಡಲೇ ತಾನೂ ಸಾಯುತ್ತೇನೆ, ಆದರೆ ಅವಳ ದಿನಕರ್ಮಕ್ಕೆ ತೊಂದರೆ ಕೊಡುವುದಿಲ್ಲ, ಅವುಗಳನ್ನು ಪೂರೈಸಿಕೊಂಡೇ ಹೋಗುತ್ತೇನೆ ಎಂದು ತಮ್ಮ ಮಕ್ಕಳೆಲ್ಲರೆದುರಿಗೆ ಹೇಳಿದರು. 
ಸುಮಾರು ಒಂದೂವರೆ ತಿಂಗಳ ಹಿಂದೆ ಅವರ ಹೆಂಡತಿ ಕಾಯಿಲೆಯಿಂದ ತೀರಿಕೊಂಡರು. ಆದರೆ ನಾರಾಯಣಪ್ಪನವರು ಘಟ್ಟಿಯಾಗಿಯೇ ಇದ್ದರು. ಅವರ ಅರೋಗ್ಯ ಸ್ವಲ್ಪವೂ ಕೆಟ್ಟಿರಲಿಲ್ಲ. ಹಾಗೆಂದು ತನ್ನ ಹೆಂಡತಿ ತೀರಿಹೋದಳೆಂದು ಅವರು ಬಹಿರಂಗವಾಗಿ ಅಳುಕಲೂ ಇಲ್ಲ.
ಪತ್ನಿಯ ಕರ್ಮಾಚರಣೆಯನ್ನು ತಾನೇ ಮುಂದೆ ನಿಂತು ಗಂಡುಮಕ್ಕಳಿಂದ ಶಾಸ್ತ್ರಬದ್ಧವಾಗಿಯೇ ನಡೆಸಿದರು. ಈ ಸೂತಕದ ದಿನಗಳಲ್ಲಿಯೇ ಮಧ್ಯೆ ಒಂದು ದಿನ ತನ್ನ ಮಕ್ಕಳನ್ನು ಮತ್ತು ಪಕ್ಕದ ಮನೆಯಲ್ಲಿರುವ ತನ್ನ ತಮ್ಮನ ಮಕ್ಕಳನ್ನು ತಮ್ಮ ಮನೆಯಲ್ಲಿ ಒಂದೆಡೆ ಕರೆದು ಸೇರಿಸಿದರು. ತಾನು ತನ್ನ ಪತ್ನಿಯ ಹನ್ನೆರಡು ಮುಗಿಸಿಕೊಂಡು ಸಾಯುತ್ತೇನೆ, ನೀವು ಯಾರೂ ದುಃಖಿಸಬಾರದು, ನಾನು ಸತ್ತಾಗ ಮನೆಯ ಇಂತಹ ಜಾಗದಲ್ಲಿ, ಈ ಕ್ರಮದಲ್ಲಿಯೇ ಭೂಷಣಕ್ಕೆ ತನ್ನ ಶವವನ್ನು ಹಾಕಬೇಕು, ತನ್ನ ಮುಂದಿನ ಕರ್ಮಾಂಗವನ್ನು ಹೀಗೆ ಹೀಗೆ ಮಾಡಬೇಕು ಎಂದು ಹೇಳಿದರು. ತನ್ನ ತಮ್ಮನ ಮಕ್ಕಳು ಮತ್ತು ತನ್ನ ಮಕ್ಕಳೊಂದಿಗೆ ' ನೀವು ಎಲ್ಲರೂ ಹಿತವಾಗಿರಬೇಕು, ಯಾವಾಗಲೂ ನಡುವೆ ಮನಸ್ತಾಪವನ್ನು ತಂದುಕೊಳ್ಳದೆ ಒಗ್ಗಟ್ಟಿನಿಂದ ಇರಬೇಕು, ಎಲ್ಲರೂ ಚೆನ್ನಾಗಿರಿ ಎಂದು ತಿಳಿವಳಿಕೆ ಹೇಳಿದರು.
ಹೆಂಡತಿಯ ಮರಣ ಕರ್ಮಾಚರಣೆಯ ಹನ್ನೊಂದನೇ ದಿನ ಆರಾಮವಾಗಿ ತಾವು ಜನಿವಾರ ಹಾಕಿಕೊಂಡು ಸೂತಕ ತೊಳೆದುಕೊಂಡಿದ್ದರು. ಚಟುವಟಿಕೆಯಿಂದ ಓಡಾಡಿಕೊಂಡು ಊಟ ಉಪಚಾರ ಮಾಡಿಕೊಂಡು ಎಂದಿನಂತೆ ಲವಲವಿಕೆಯಿಂದ ಇದ್ದರು. 
ಮರುದಿನ ಪತ್ನಿಯ ಮರಣದ ಹನ್ನೆರಡನೆಯ ದಿನ. ಅಂದು ಬೆಳಿಗ್ಯೆ ಕಷಾಯವನ್ನು ಮಾತ್ರ ಕುಡಿದರು. ನಂತರ ನಾಷ್ಟ ಮಾಡಲಿಲ್ಲ. ತನಗೆ ಸ್ವಲ್ಪ ವಿಶ್ರಾಂತಿ ಬೇಕು ಮಲಗಿಕೊಂಡಿರುತ್ತೇನೆ ಎಂದು ಮಲಗಿಕೊಂಡರು. ಮಧ್ಯಾಹ್ನ ಎರಡು ಘಂಟೆಯವರೆಗೂ ಮಲಗಿದ್ದರು. ನಡುವೆ ಯಾರು ಎಷ್ಟೇ ಒತ್ತಾಯ ಮಾಡಿದರೂ ಹೊಟ್ಟೆಗೆ ಏನನ್ನೂ ತೆಗೆದುಕೊಳ್ಳಲಿಲ್ಲ. ಹನ್ನೆರಡನೆಯ ವಿಧಿಯನ್ನು ಒಳಗೆ ವೈದಿಕರು ಸಾಗಿಸುತ್ತಿದ್ದಾರೆ. ಎರಡು ಘಂಟೆಯ ಹೊತ್ತಿಗೆ ಅಲ್ಲಿದ್ದ ಯಾರನ್ನೋ ತಮ್ಮ ಬಳಿ ಕರೆದಿದ್ದಾರೆ. ಈಗ ಘಂಟೆ ಎಷ್ಟಾಯಿತು ಎಂದು ಕೇಳಿದರು. ಅವರು ಎರಡು ಘಂಟೆ ಎಂದರು. ಭಟ್ಟರಿಗೆ ಊಟವಾಯಿತೇ ಎಂದು ಮರುಪ್ರಶ್ನೆ ಹಾಕಿದರು. ಇಲ್ಲ ಎಂದು ಅವರೆಂದರು. ಪುನಃ ಕಣ್ಮುಚ್ಚಿ ಮಲಗಿದರು.
ಅಂದರೆ ನಮ್ಮ ಗ್ರಹಿಕೆ ಪ್ರಕಾರ ಅವರು ತಮ್ಮ ಸಾವಿಗಾಗಿ ತಮ್ಮ ಪತ್ನಿಯ ಮರಣದ ಹನ್ನೆರಡನೆಯ ದಿನದ ಕರ್ಮಾಚರಣೆಯು ಮುಗಿಯುವುದನ್ನೇ ನಿರೀಕ್ಷಿಸುತ್ತಿದ್ದಾರೆ ಎಂದರ್ಥ. ಕರ್ಮಾಚರಣೆಯು ಮುಗಿದು ದಾನಮಾನಗಳೆಲ್ಲಾ ಮುಗಿದು ವೈದಿಕರೆಲ್ಲಾ ಮನೆಗೆ ಹೋದದ್ದೂ ಆಯಿತು. ಅಲ್ಲಿಯವರೆಗೆ ತಿನ್ನಲಿಕ್ಕೆ, ಕುಡಿಯಲಿಕ್ಕೆ ಯಾರು ಎಷ್ಟೇ ಒತ್ತಾಯಿಸಿದರೂ ಅದನ್ನು ಮುಟ್ಟಲಿಲ್ಲ. ಪ್ರತಿಯಾಗಿ, ಶ್ರೀಧರಸ್ವಾಮಿಗಳು [ ಸಾಗರ ತಾಲ್ಲೂಕಿನ ವರದಪುರದ ಬ್ರಹ್ಮೀಭೂತ ಸಂತರು ] ತನ್ನ ಎದುರಿಗೆ ನಿಂತಿದ್ದಾರೆ, ತಾನು ಈಗ ಅತ್ಯಾನಂದದ ಸ್ಥಿತಿಯಲ್ಲಿದ್ದೇನೆ, ನನಗೆ ವೃಥಾ ತೊಂದರೆಯನ್ನು ಕೊಡಬೇಡಿ ಎಂದು ಹೇಳುತಿದ್ದರು. ಹಾಗೆಯೇ ಕಣ್ಮುಚ್ಚಿ ಮಲಗಿಬಿಡುತ್ತಿದ್ದರು.
ಸಂಜೆ ಐದು ಘಂಟೆಗೆ ಹಠಾತ್ತನೆ ಅವರಿಗೆ ಪ್ರಜ್ಞೆ ತಪ್ಪಿತು. ಸುತ್ತಲಿದ್ದವರು, ಮಕ್ಕಳು ಅವರನ್ನು ಕೂಡಲೇ ಅಲ್ಲಿಂದ 15 ಕಿ. ಮೀ.ದೂರದ ಸಾಗರದ ವೈದ್ಯರಲ್ಲಿ ಕರೆದೊಯ್ದರು. ವೈದ್ಯರು ಅರ್ಧ ತಾಸಿನ ತಮ್ಮ ಪ್ರಯತ್ನದ ನಂತರ ಕೈಚೆಲ್ಲಿದರು. ಯಾವುದಕ್ಕೂ ನಾರಾಯಣಪ್ಪನವರಿಗೆ ಎಚ್ಚರವೇ ಇರಲಿಲ್ಲ. ಒಂದು 
ವಿಸ್ಮಯ ಎಂದರೆ ಆಸ್ಪತ್ರೆಯಲ್ಲಿ ಈ ನಡುವೆ ಒಂದು ಸಾರಿ ಅವರು ' ನನಗೆ ಮನೆಯಲ್ಲೇ ಸಾಯಲು ಅವಕಾಶ ಮಾಡಿ ' ಎಂದುಬಿಟ್ಟರು. ಅದರ ಹಿಂದೂ, ಮುಂದೂ ಮಾತು ಇರಲಿಲ್ಲ. ಕೂಡಲೇ ಮನೆಗೆ ಅವರನ್ನು ಮನೆಗೆ ತರಲಾಯಿತು. ಮನೆಗೆ ಬಂದ ಕೆಲವೇ ಘಂಟೆಗಳಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯಿತು.
ತನ್ನ ಮಕ್ಕಳಿಗೆ ಮುಂಚೆಯೇ ತಿಳಿಸಿದಂತೆ, ತನ್ನ ಇಚ್ಚೆಯಂತೆ ತನ್ನ ಪತ್ನಿ ಮರಣ ಹೊಂದಿದ ಹನ್ನೆರಡನೆ ದಿನದ ವಿಧಿಗಳನ್ನು ಪೂರೈಸಿಕೊಂಡು ಶ್ರೀ ನಾರಾಯಣಪ್ಪ ಶ್ಯಾನುಭೋಗ್ ಇವರು ಮರಣ ಹೊಂದಿದರು. ದ್ವಾಪರಯುಗದ ಭೀಷ್ಮನ ಇಚ್ಚಾಮರಣವನ್ನು ನೆನಪಿಗೆ ತಂದುಕೊಟ್ಟ ಮಹಾನುಭಾವರು. ' ಕಲಿಯುಗದ ಇಚ್ಚಾಮರಣಿ ' ಎಂಬ ಕೀರ್ತಿಗೆ ಪಾತ್ರರಾದರು. ದಿವಂಗತರಿಗೆ ಸಾಷ್ಟಾಂಗ ನಮಸ್ಕಾರ.
ಮಾಹಿತಿಯ ಕೃಪೆ : ಶ್ರೀಮತಿ ಮಧುರಾ ಮತ್ತು ಶ್ರೀ ದೇವಪ್ಪ ಪಡವಗೋಡು. ಸಾಗರ ತಾಲ್ಲೂಕು. ಮೃತರ ಮಗಳು ಮತ್ತು ಅಳಿಯ.
ತಾರೀಖು : 3 - 9 - 2015