Friday, 24 June 2016

ಮೂಕ ಮಾತನಾಡಿದ, ಮಾತು ಬಲ್ಲವ ಮೂಕನಾದ


~ ~ ನಡೆದ ಒಂದು ಘಟನೆ.
~~~~~~~ ಎಂ. ಗಣಪತಿ ಕಾನುಗೋಡು.
ನಮ್ಮ ಸಾಗರದಲ್ಲಿ ಖಾಸಗಿ ಬಸ್ಸಿನವರ ದರ್ಭಾರೂ ಇದೆ. ಅವರಲ್ಲೊಂದು ಕ್ರಮ. ನಿಲ್ದಾಣಕ್ಕೆ ಬಸ್ಸು ಬರುವ ಮುಂಚೆಯೇ ಆ ಬಸ್ಸಿಗೆ ಪ್ರಯಾಣಕರನ್ನು ಕೂಡಿಸುವುದಕ್ಕಾಗಿಯೇ ಒಬ್ಬ ಏಜಂಟ ಇರುತ್ತಾನೆ. ಬಸ್ಸು ಬಂದ ಕೂಡಲೇ ಅವರನ್ನು ಒಳಗೆ ಹತ್ತಿಸಿ ಪ್ರತಿಯೊಬ್ಬರನ್ನೂ ವಿಚಾರಿಸಿ ತಾನೇ ಟಿಕೆಟ್ ಕೊಡುತ್ತಾನೆ. ನಂತರ ಬಸ್ಸಿನಿಂದ ಕೆಳಗೆ ಇಳಿದು ತನ್ನ ಟಿಕೆಟ್ ಬುಕ್ಕನ್ನು ಪರಿಶೀಲಿಸಿ ಒಟ್ಟು ಎಷ್ಟು ಸೀಟು [ ಪ್ರಯಾಣಿಕರ ಸಂಖ್ಯೆ ] ಆಯಿತೆಂದು ಲೆಕ್ಕ ಮಾಡಿಕೊಳ್ಳುತ್ತಾನೆ. ನಂತರ ಅದನ್ನು ಚೆಕ್ ಅಪ್ ಮಾಡಿಕೊಳ್ಳಲಿಕ್ಕಾಗಿ ಬಸ್ಸಿನಲ್ಲಿರುವ ಜನರನ್ನು ಲೆಕ್ಕ ಮಾಡಲು ಕಂಡಕ್ಟರನಿಗೆ ಹೇಳುತ್ತಾನೆ.
ಆ ದಿನ ಸಾಗರದಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸು ನಿಲ್ದಾಣಕ್ಕೆ ಬಂದು ನಿಂತಿತು. ಅಂದೂ ಅವ ಹಾಗೆಯೇ ಮಾಡಿದ. ಆದರೆ ತನ್ನ ಟಿಕೆಟ್ಟಿನ ಲೆಕ್ಕ 42 . ಕಂಡಕ್ಟರನ ಜನರ ಲೆಕ್ಕ 43 . ಒಂದು ಸೀಟು ವ್ಯತ್ಯಾಸ. ಇನ್ನೆರಡು ಸಾರಿ ತನ್ನ ಟಿಕೆಟ್ ಸಂಖ್ಯೆಯನ್ನೇ ಲೆಕ್ಕ ಮಾಡಿಕೊಂಡ. ತನ್ನ ಲೆಕ್ಕ ಸರಿ ಇದೆ. ನಿನ್ನ ಜನರ ಲೆಕ್ಕ ಸರಿಯಾಗಿಲ್ಲವೆಂದು ಕಂಡಕ್ಟರನಿಗೆ ಬೆದರಿಸಿ ಪುನಃ ಲೆಕ್ಕ ಮಾಡಲು ಹೇಳಿದ. ಕಂಡಕ್ಟರನೂ ತಿರುಗಾ ಮುರುಗಾ ಎರಡೆರಡು ಸಾರಿ ಲೆಕ್ಕ ಮಾಡಿದ. ತನ ಲೆಕ್ಕ ಸರಿ ಇದೆ, ನಿನ್ನ ಲೆಕ್ಕ ಸರಿ ಇಲ್ಲವೆಂದು ಏಜಂಟನಿಗೆ ಗದರಿಸಿದ. ಅವನದು ಸರಿ ಇಲ್ಲ ಎಂದು ಅವನು, ಇವನದು ಸರಿ ಇಲ್ಲ ಎಂದು ಅವನು , ಹೀಗೆ ಒಬ್ಬರಿಗೊಬ್ಬರು ಅರ್ಧ ಗಂಟೆ ಪರಸ್ಪರ ತರಾಟೆಗೆ ತೆಗೆದುಕೊಂಡರು.
ಸರಿ, ಇಬ್ಬರೂ ಸೇರಿ ಪ್ರಯಾಣಿಕರನ್ನೇ ಕೇಳೋಣವೆಂದು ' ಯಾರಿಗೆ ಟಿಕೆಟ್ ಆಗಲಿಲ್ಲಾರೀ... ' ಎಂದು ಇಬ್ಬರೂ ಹತ್ತಾರು ಸಾರಿ ದೊಡ್ಡದಾಗಿ ಕಿರುಚಿದರು. ಯಾರೂ ಮಾತನಾಡಲಿಲ್ಲ. ಅಂದಾಗ ಎಲ್ಲರೂ ಟಿಕೆಟ್ ಪಡೆದುಕೊಂಡಿದ್ದಾರೆ ಎಂದಂತಾಯಿತು. ತಮ್ಮದು ಸರಿ ಇದೆ ಈ ಜನರೇ ಸರಿ ಇಲ್ಲ, ಬಾಯಿ ಇದ್ದರೂ ಸುಳ್ಳು ಬೊಗಳುತ್ತಾರೆ ಎಂದು ತಮ್ಮೊಳಗೆ ಬೈದುಕೊಳ್ಳುತ್ತಾ ಪ್ರಯಾಣಿಕರ ಟಿಕೆಟ್ಟನ್ನು ಒಂದು ಕಡೆಯಿಂದ ಪರಿಶೀಲಿಸುತ್ತಾ ಬಂದರು. ಅರರೆ... ಇಲ್ಲಿಯವರೆಗೆ ಎಲ್ಲರೂ ಟಿಕೆಟ್ ಪಡೆದುಕೊಂಡಿದ್ದಾರಲ್ಲಾ ಎಂದು ಗಿಜಿರಾದುಕೊಳ್ಳುತ್ತಾ ಮುಂದೆ ಸಾಗಿದರು. ಕೊನೆಯಲ್ಲಿ ಡ್ರೈವರನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನ ಎದುರು ಹೋದರು. ಶಿವಮೊಗಕ್ಕೆ ಹೋಗಲು ತಕ್ಕನಾಗಿ ಹಣವನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ಟಿಕೆಟ್ಟಿಗಾಗಿಯೇ ಕಾದು ಕುಳಿತಿದ್ದ ಆ ಪ್ರಯಾಣಿಕ ಅವರು ತನ್ನ ಎದುರು ಬಂದ ಕೂಡಲೇ ತನ್ನನ್ನು ಕೇಳುವುದರೊಳಗಾಗಿ ಹಣವನ್ನು ಕೊಟ್ಟು ತನಗೆ ಶಿವಮೊಗ್ಗಕ್ಕೆ ಟಿಕೆಟ್ ಕೊಡಿರೆಂದು ಸನ್ನೆ ಮಾಡಿದ.
ಅವನಿಗೆ ಬಾಯಿಯೂ ಬರುವುದಿಲ್ಲ. ಕಿವಿಯೂ ಕೇಳುವುದಿಲ್ಲ. ಪ್ರಮಾದವೆಂದರೆ ಏಜಂಟನು ಮೊದಲು ಟಿಕೆಟ್ ಕೊಡುವಾಗ ಅವನನ್ನು ಗಮನಿಸದೆ ದಾಟಿಕೊಂಡು ಹೋಗಿದ್ದ. ಅವ ಮರಳಿ ಬರುತ್ತಾನೆ ಎಂದು ಆ ಪ್ರಯಾಣಿಕ ಭಾವಿಸಿಕೊಂಡಿದ್ದ. ಸಮಯ ಬಂದಾಗ ಮೂಕ ತನ್ನ ಭಾಷೆಯಲ್ಲಿ ಸರಿಯಾಗಿ ಮಾತನಾಡಿದ. ಮಾತುಬಲ್ಲವ ತಾನು ಮಾಡಿದ ತಪ್ಪಿಗಾಗಿ ಅವನೆದುರು ಮೂಕನಾದ.

Wednesday, 15 June 2016

ಉಳ್ಳಾಗಡ್ಡೆ ಲಾಭ ....?


 --ಎಂ. ಗಣಪತಿ, ಕಾನುಗೋಡು 

   ವ್ಯಕ್ತಿಯೊಬ್ಬ ಯಾವುದಾದರೂ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಾನೆ. ಆಗ ಜನರು ಅವನದು ಉಳ್ಳಾಗಡ್ಡೆ ಲಾಭದ ಕತೆಯಾಯಿತು ಎಂದು ಆ ವ್ಯವಹಾರದ ಕುರಿತು ವರ್ಣನೆ ಮಾಡುತ್ತಾರೆ.

   ಹಾಗಾದರೆ ಉಳ್ಳಾಗಡ್ಡೆ ಲಾಭದ ಕತೆ ಎಂದರೆ ಏನು ? . ವ್ಯಾಪಾರಿಯೊಬ್ಬ ಒಂದು ಕ್ವಿಂಟಾಲ್ ಉಳ್ಳಾಗಡ್ಡೆಯನ್ನು ತಂದರೆ ಅದನ್ನು ತೊಂಬತ್ತು ಕೇಜಿ ಲೆಕ್ಕಕ್ಕೆ ಹಿಡಿದು ಮಾರುತ್ತಾನೆ. ಏಕೆಂದರೆ ನೀರುಳ್ಳಿ ಆರಿಕೆ ಬರುತ್ತದೆ . ಸಿಪ್ಪೆ ಹಾರಿ ಹೋಗುತ್ತದೆ . ಹೆಚ್ಚಾಗಿ ಕೊಳೆತು ಹೋಗುತ್ತದೆ. ಹತ್ತು ಕೇಜಿ ಕಡಿಮೆ ಲೆಕ್ಕಕ್ಕೆ ಹಿಡಿದು ಕೊಂಡರೂ ಪೂರ್ತಿ ವ್ಯಾಪಾರ ಮಾಡಿ ಲೆಕ್ಕಾಚಾರ ಮಾಡಿಕೊಳ್ಳುವ ಹೊತ್ತಿಗೆ ಕೆಲವೊಮ್ಮೆ ಅವನಿಗೆ ವ್ಯಾಪಾರಕ್ಕೆ ಸಿಗುವುದು  ಎಂಬತ್ತೇ ಕೇಜಿಯಾಗಿರುತ್ತದೆ . ಅಲ್ಲಿಗೂ ಇನ್ನೂ ಹತ್ತು ಕೇಜಿ ತೂಕದಲ್ಲಿ ಕಡಿಮೆ ಬಂದಿರುತ್ತದೆ . ಒಟ್ಟಾರೆ ನಷ್ಟವೇ ಸರಿ. 

   ತಕ್ಕಡಿಗೆ  ಸಂಸ್ಕೃತದಲ್ಲಿ  " ತುಲಾ " ಎನ್ನುತ್ತಾರೆ . ತುಲಾ ಲಘ್ನ , ತುಲಾ ರಾಶಿ , ತುಲಾ ಭಾರ ಎನ್ನುವುದಿಲ್ಲವೇ? ಹಾಗೆ.  ಅದಕ್ಕಾಗಿ ಗಾದೆ ಇರುವುದು " ಉಳ್ಳಾಗಡ್ಡೆ ಲಾಭ ತುಲಾದಲ್ಲಿ ಹೋಯಿತು ". 

  ಕೆಲವು ಜನ ತಮ್ಮ ತಲುಬಿಗಾಗಿ ಅದಕ್ಕೊಂದು ಒತ್ತು ಕೊಟ್ಟುಕೊಂಡಿದ್ದರ ಪರಿಣಾಮ ಆ ಗಾದೆಯು ಬಹಿರಂಗವಾಗಿ ಹೇಳಲಿಕ್ಕೆ ಬಾರದಷ್ಟು ಅಪಭ್ರಂಶಗೊಂಡಿದೆ. ಓ ದೇವರೇ .. !!ಎಂ. ಗಣಪತಿ, ಕಾನುಗೋಡು  
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771
@@@@@@       ಹವ್ಯಕರ ಮದುವೆ  ಮನೆಯ ಸಾಂಪ್ರದಾಯಿಕ  ಜರೆವ ಹಾಡುಗಳು      @@@@@@

ಕದಿಯುವಿಕೆ ---- ಒಂದು ಮಾನಸಿಕ ರೋಗ

                                                                          
                                                                                            ~~~~~ ಎಂ. ಗಣಪತಿ ಕಾನುಗೋಡು.

ಕದಿಯುವುದು, ಸುಳ್ಳು ಹೇಳುವುದು, ಹಚ್ಚುಗುಳಿ ಮಾಡುವುದು, ತಾನು ಏನಿಲ್ಲ ಎಂದು ಕೊರಗುವುದು ಇವೆಲ್ಲವೂ ಒಂದು ಮಾನಸಿಕ ರೋಗ. ಈ ಪ್ರಪಂಚದಲ್ಲಿ ಎಲ್ಲರೂ ಹುಚ್ಚರು. ಎಲ್ಲರಿಗೂ ಒಂದೊಂದು ಥರದ ಹುಚ್ಚು. ಕೆಲವರದ್ದು ಸಹ್ಯವಾದ ಹುಚ್ಚು. ಇನ್ನು ಕೆಲವರದ್ದು ಅಸಹ್ಯವಾದ ಹುಚ್ಚು. ಈ ತೆರನ ರೋಗವೂ ಈ ಹುಚ್ಚುಗಳಲ್ಲಿಯೇ ಅಡಕವಾದದ್ದು.

ಕದಿಯುವುದು ಕೆಲವರಿಗೆ ಒಂದು ಅಭ್ಯಾಸವೆಂದರೂ ಸರಿಯೇ, ಹವ್ಯಾಸವೆಂದರೂ ಸರಿಯೇ. ವಿದ್ಯೆ, ಸಾಕಷ್ಟು ಸಂಬಳ ತರುವ ದೊಡ್ಡ ಉದ್ಯೋಗ, ಸಾಕಷ್ಟು ಆದಾಯ ತರುವ ಉದ್ದಿಮೆ, ಬೇಕಾದಷ್ಟು ಬಂಗಾರ ಬೆಳ್ಳಿ,ಹಣದಿಂದ ಕೂಡಿದ ಸಂಪತ್ತು, ಭೂಮಿ, ಸೈಟುಗಳಿಂದ ಕೂಡಿದ ಹೇರಳ ಆಸ್ತಿ ಇದ್ದರೂ ಕೂಡ ಇಂಥವರು ಸಣ್ಣ ಸಣ್ಣ ಕಳ್ಳತನವನ್ನು ಮಾಡುತ್ತಾರೆ. ದೊಡ್ಡ ಕಳ್ಳತನವನ್ನು ಅವರು ಮಾಡುವುದಿಲ್ಲ. ಅದಕ್ಕೆ ಹೆಚ್ಚು ತ್ರಾಸು ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಂದು ಅದರ ಅಗತ್ಯವೂ ಅವರಿಗೆ ಇಲ್ಲ. ಅಂಥವರಿಗೆ ಬೇರೆ ಯಾವುದರಿಂದಲೂ ಸಮರ್ಪಕ ಮನಃಶಾಂತಿ ದೊರೆಯುವುದಿಲ್ಲ. ತಿಂದ ಅನ್ನ ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ. ಹೀಗೆ ಕದಿಯುವುದರಿಂದ ಮಾತ್ರ ಅವರ ಚಿತ್ತಸ್ವಾಸ್ತವ ಉಳಿದುಕೊಳ್ಳುತ್ತದೆ. ಅದಕ್ಕಾಗಿಯಷ್ಟೇ ಅವರು ಕದಿಯುತ್ತಾರೆ. ಕದಿಯಲ್ಪಟ್ಟ ವಸ್ತು ನಿಮಗೆ ದೊಡ್ಡದಿರಬಹುದು. ಅವರಿಗೆ ಅದು ಯಕಶ್ಚಿತ.

ಇದು ಒಂದು ರೀತಿಯ ಕಾಯಿಲೆ. ಇದಕ್ಕೆ ಮನೋವೈದ್ಯಕೀಯ ಶಾಸ್ತ್ರದಲ್ಲಿ ' ಕ್ಲೆಪ್ಟೋಮೇನಿಯಾ ' ಎನ್ನುತ್ತಾರೆ. ಇಂಥಹ ರೋಗ ಇದ್ದವರಲ್ಲಿ ಮೂರನೆಯ ಎರಡು ಭಾಗ ಹೆಂಗಸರು ಎನ್ನುವುದು ವಿಶೇಷ. ಈ ರೋಗಕ್ಕೆ ಗುರಿಯಾದವರಲ್ಲಿ ಆತಂಕ, ಉನ್ಮಾದ, ವ್ಯಕ್ತಿತ್ವದೋಷ ಮತ್ತು ದುಶ್ಚಟಗಳು ಕಂಡುಬರುತ್ತವೆ. ಅಪಘಾತದಿಂದ ಮೆದುಳಿಗೆ ಪೆಟ್ಟು ಬಿದ್ದವರು ಈ ಕಾಯಿಲೆಗೆ ಗುರಿಯಾಗುವ ಸಾಧ್ಯತೆ ಇದೆ.

ಕೃತಿಚೌರ್ಯವೂ ಒಂದು ಈ ತೆರನ ಕಳ್ಳತನ. ತಮಗೂ ಒಂದು ಯೋಗ್ಯತೆಯನ್ನು ದೇವರು ಕೊಟ್ಟಿದ್ದಾನೆ, ಅದನ್ನು ತಾವು ಸರಿಯಾಗಿ ಉಪಯೋಗಿಸಿಕೊಂಡು ಅದಕ್ಕೆ ತುಕ್ಕು [ ರಷ್ಟು ] ಹಿಡಿಯದಂತೆ ಕಾಪಾಡಿಕೊಳ್ಳಬೇಕು ಎನ್ನುವ ವಾಸ್ತವ ಜ್ಞಾನ ಅವರಿಗೆ ಇರುವುದಿಲ್ಲ. ತನ್ನ ಒಳಗಿನ ಯೋಗ್ಯತೆ ಗ್ರಾಹ್ಯವಾದುದೋ ಅಲ್ಲವೋ ಎನ್ನುವುದನ್ನು ಮತ್ತೊಬ್ಬರ ಎದುರಿಗೆ ಮಂಡಿಸಿ ತಾನು ಪಕ್ಕಾ ಮಾಡಿಕೊಳ್ಳಬೇಕು ಎನ್ನುವ ಪ್ರಜ್ಞೆ ಅವರಿಗೆ ಇದ್ದಂತೆ ಕಾಣುವುದಿಲ್ಲ. ಆದ್ದರಿಂದ ನಮ್ಮ ಕೃತಿಯನ್ನು ಯಾರಾದರೂ ಚೌರ್ಯ ಮಾಡಿದರೆ ಅದು ಅವರಿಗಿರುವ ಒಂದು ರೋಗವೆಂದು ನಾವು ಅವರ ಬಗ್ಯೆ ಕನಿಕರವನ್ನು ವ್ಯಕ್ತಪಡಿಸಬೇಕು. ಯಾರಾದರೊಬ್ಬ ವೈದ್ಯ ಅಂಥವರನ್ನು, ಅಂಥವರ ರೋಗವನ್ನು ಯಾವುದಾದರೂ ಒಂದು ಸಲ ಪತ್ತೆಹಚ್ಚಿ ಹಿಡಿದು ರೋಗಕ್ಕೆ ಮದ್ದನ್ನಿಟ್ಟು ಅಂತಹ ರೋಗಿಯನ್ನು ಸಮ [ ನೆಲಸಮ ! ] ಮಾಡುತ್ತಾನೆ. ಅಲ್ಲಿಯವರೆಗೂ ಕಾಯಬೇಕಷ್ಟೆ.

ಸುಳ್ಳು ಹೇಳುವುದು, ಹಚ್ಛುಗುಳಿ ಮಾಡುವುದೂ ಇಂಥಹುದೇ ಒಂದು ರೋಗ. ಅನಾವಶ್ಯಕವಾಗಿ ಸುಳ್ಳು ಹೇಳಿ ಕೆಲವರು, ವೃಥಾ ಒಬ್ಬರಿಂದೊಬ್ಬರಿಗೆ ಜಗಳ, ವೈಮನಸ್ಸು ಹಚ್ಚಿಹಾಕಿ ಇನ್ನು ಕೆಲವರು ಮನೋರಂಜನೆಯನ್ನು ಪುಕ್ಕಟ್ಟೆಯಾಗಿ ಪಡೆಯುವುದು, ಅಂಥಹವರಿಗೂ ಅದು ಒಂದು ರೋಗವೇ.

ನಮ್ಮ ಯೋಗ ಕನಿಷ್ಠವಾದಷ್ಟೂ ಅಂಥವರ ರೋಗ ಬಲಿಷ್ಟವಾಗುತ್ತದೆ. ಕದಿಸಿಕೊಳ್ಳುವವರು ನಾವಿದ್ದರೆ ಅವರು ಕದಿಯುತ್ತಾರೆ. ಕೇಳಿಸಿಕೊಳ್ಳುವವರು ನಾವಿದ್ದರೆ ಹೇಳುವವರು ಅವರಾಗುತ್ತಾರೆ.