Wednesday, 16 March 2016

# ಮಹಿಳಾದಿನಾಚರಣೆ -- ಅದರ ಉದ್ದೇಶ ಮತ್ತು ಪರಿಣಾಮ. #


~~~~~ ಎಂ. ಗಣಪತಿ ಕಾನುಗೋಡು.
ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯ ದಿನವೆಂದು ಆಚರಿಸಲಾಗುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಪ್ರಾಧಾನ್ಯತೆಯನ್ನು ಸ್ಥಾಪಿಸುವ ಉದ್ದೇಶ ಮತ್ತು ಪ್ರಯತ್ನ ಈ ಆಚರಣೆಯ ಹಿಂದೆ ಇದೆ. 
1914 ರ ಮಾರ್ಚ್ 8 ರಂದು ವಿಶ್ವದ ಮಹಿಳೆಯರ ಹಕ್ಕುಗಳಿಗಾಗಿ ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ವ್ಯಾಪಕ ಹೋರಾಟವನ್ನು ಆರಂಭಿಸಲಾಯಿತು. ಅದೇ ದಿನವನ್ನು ವಿಶ್ವ ಮಹಿಳಾದಿನವನ್ನಾಗಿ ಇಂದಿಗೂ ಎಲ್ಲಾ ಕಡೆಯಲ್ಲೂ ಆಚರಿಸಿಕೊಂಡು ಬರಲಾಗುತ್ತಿದೆ.
ಅಂತೆಯೇ ನಮ್ಮ ದೇಶದಲ್ಲಿ ಇದನ್ನು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ಆದರೆ ಇದರ ಉದ್ದೇಶ ನಮ್ಮ ದೇಶದ ಮಹಿಳೆಯರಿಗೆ ಎಷ್ಟ ಮಾತಿಗೆ ತಿಳಿದಿದೆ, ಅವರ ಮೇಲೆ ಇದರ ಪ್ರಭಾವ ಎಷ್ಟರ ಮಟ್ಟಿಗೆ ಆಗಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಭಾರತದಲ್ಲಿ ಎರಡು ರೀತಿಯ ಸಮಾಜವನ್ನು ಕಾಣಬಹುದು. ಒಂದು ಗ್ರಾಮೀಣ ಭಾರತ ಮತ್ತೊಂದು ನಗರ ಭಾರತ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಗ್ರಾಮೀಣ ಭಾರತದ ಮಹಿಳೆ ನಗರ ಭಾರತದ ಮಹಿಳೆಗಿಂತ ಬಹಳ ಹಿಂದೆ ಇದ್ದಾಳೆ. ಅಷ್ಟೇ ಆಕೆ ಇವೆಲ್ಲಾ ವಿಚಾರಗಳಲ್ಲಿ ಪುರುಷನಿಗಿಂತ ಹಿಂದೆ ಇದ್ದಾಳೆ. ಅಂದರೆ ನಗರ ಭಾರತದ ಮಹಿಳೆ ನೂರಕ್ಕೆ ನೂರರಷ್ಟು ಈ ಎಲ್ಲಾ ವಿಚಾರಗಳಲ್ಲಿ ಸಾಧಿಸಿದ್ದಾಳೆ ಎಂದಾಗಲಿ ಮತ್ತು ನಗರದ ಮಹಿಳೆ ಇವೆಲ್ಲಾ ವಿಚಾರಗಲ್ಲಿ ಪುರುಷನೊಂದಿಗೆ ಸಾಕಷ್ಟು ಸರಿಸಮನಾಗಿದ್ದಾಳೆ ಎಂದು ಅರ್ಥವಲ್ಲ. ಆದರೆ ಈ ದಾರಿಯಲ್ಲಿ ಗ್ರಾಮೀಣ ಮಹಿಳೆ ನಗರದ ಮಹಿಳೆಗಿಂತ ಬಹಳಷ್ಟು ಹಿಂದೆ ಉಳಿದಿದ್ದಾಳೆ ಎನ್ನುವುದು ಸುಳ್ಳಲ್ಲ. ಈ ಅರಿವನ್ನು ಗ್ರಾಮೀಣ ಮಹಿಳೆಗೆ ಹೆಚ್ಚು ಪಾಲು ಮತ್ತು ಒಂದು ಮಟ್ಟಕ್ಕೆ ನಗರದ ಮಹಿಳೆಗೂ ಸಹ ತಂದು ಕೊಡುವ ಕೆಲಸ ಮಹಿಳಾ ದಿನಾಚರಣೆಯಿಂದ ಆಗಬೇಕಾಗಿದೆ.
ಭಾರತೀಯ ಜೀವನ ಕ್ರಮಕ್ಕೂ ಪಾಶ್ಚಿಮಾತ್ಯ ಜೀವನ ಕ್ರಮಕ್ಕೂ ಬಹಳ ಅಂತರ ಇದೆ. ಪಾಶ್ಚಿಮಾತ್ಯ ಜೀವನ ವ್ಯಕ್ತಿಮೂಲವಾದದ್ದು. ಭಾರತೀಯ ಜೀವನ ಕೌಟುಂಬಿಕಮೂಲವಾದದ್ದು. ಅಲ್ಲಿ ಮಹಿಳೆ ಬಹಳ ಹಿಂದೆಯೇ ಪುರುಷ ಪ್ರಾಧಾನ್ಯತೆಯನ್ನು ಪ್ರಶ್ನಿಸಿದ್ದಾಳೆ. ನಮ್ಮ ಸಾಂಪ್ರದಾಯಿಕ ಸಾಮಾಜಿಕ ಜೀವನದಲ್ಲಿ ಮಹಿಳೆ ಇಲ್ಲಿಯವರೆಗೆ ಪುರುಷಪ್ರಾಧಾನ್ಯತೆಯನ್ನು ಒಪ್ಪಿಕೊಂಡು ಬಂದಿದ್ದಾಳೆ.
ಆದರೆ ಇಂದು ಭಾರತೀಯ ಮಹಿಳೆ ಪಾಸ್ಚಿಮಾತ್ತೀಕರಣಗೊಳ್ಳುತ್ತಿದ್ದಾಳೆ. [ Being westernised ].ಪುರುಷನ ಪ್ರಧಾನ ಪದ್ಧತಿಯನ್ನು ಪ್ರಶ್ನಿಸುತ್ತಿದ್ದಾಳೆ. ಪುರುಷನಿಗೆ ಸರಿಸಮನಾಗಿ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆ ದಾಪುಗಾಲನ್ನಿಡುತ್ತಿದ್ದಾಳೆ. ಪುರುಷನಿಗೆ ಸರಿಸಮನಾದ ಸ್ಥಾನಮಾನವನ್ನು ತಾನು ಗಳಿಸಿಕೊಂಡ ಯೋಗ್ಯತೆಯ ಮೇಲೆ ಬಯಸುತ್ತಿದ್ದಾಳೆ. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಆಕೆಗೆ ಇಂದು ಅದು ಗಗನ ಕುಸುಮವಾಗಿದೆ. ವಿಶ್ವ ಮಹಿಳಾದಿನಾಚರಣೆಯು ಮಹಿಳೆಗೆ ಈ ಸಮಾನತೆಯನ್ನು ತಂದುಕೊಡುವಲ್ಲಿ ತನ್ನ ಕೆಲಸವನ್ನು ಮಾಡಬೇಕಾದದ್ದು ಇಂದಿನ ಅಗತ್ಯ.
ಪುರುಷ ಮತ್ತು ಮಹಿಳೆ ಬದುಕಿನ ಬಂಡಿಯ ಎರಡು ಚಕ್ರಗಳು ಎನ್ನುವುದು ಸುಳ್ಳಲ್ಲ. ಯಾವುದು ಹಿಂದೆ ಬಿದ್ದರೂ ಗಾಡಿ ಮುಂದೆ ಸಾಗಲಾರದು. ನಮ್ಮ ಹಿಂದಿನ ಸಾಮಾಜಿಕ ಪರಂಪರೆಯಲ್ಲಿ ಪುರುಷ ದುಡಿಯಬೇಕು. ಮಹಿಳೆ ಅವನ ದುಡಿತವನ್ನು ಸಂಸಾರಕ್ಕೆ ಸರಿಯಾಗಿ ವಿನಿಯೋಗಿಸಿ ಜೀವನರಥವನ್ನು ಮುನ್ನಡಿಸಬೇಕು ಎನ್ನುವುದಾಗಿತ್ತು. ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ಈ ಪರಂಪರೆ ಶಿಥಿಲಗೊಳ್ಳುತ್ತಿದೆ. ನಮ್ಮ ಸಾಮಾಜಿಕ ಜೀವನ ಸ್ಥಿತ್ಯಂತರಗೊಳ್ಳುತ್ತಿದೆ. ಇಂಥಹ ಸಂಧಿಗ್ದ ಸನ್ನಿವೇಶದಲ್ಲಿ ಗೊಂದಲಗಳು ಮತ್ತು ಘರ್ಷಣೆಗಳು ನಿರೀಕ್ಷಿತ. ಇಂತಹ ಅವಘಡಗಳನ್ನು ತಿಳಿಗೊಳಿಸುವ ಮತ್ತು ಸರಿಪಡಿಸುವ ಕೆಲಸ ವಿಶ್ವ ಮಹಿಳಾದಿನಾಚರಣೆಯಿಂದ ಆಗಬೇಕಾಗಿದೆ.
ತಾರೀಖು : 13 - 3 - 2016 .