Friday, 17 May 2013

ನಮಸ್ಕಾರ. ಪ್ರಭುವೇ ನಮಗೆ ವೋಟು ಕೊಡಿ                                                                                   
                                                                                          ಎಂ.ಗಣಪತಿ. ಕಾನುಗೋಡು.

ನಮ್ಮ ಸಂವಿಧಾನ ಪ್ರಾಜ್ಞರು ಉದ್ದೇಶಿಸಿದ್ದು ಪ್ರಜಾಪ್ರಭುತ್ವ. ಆದರೆ ಊರ್ಜಿತಕ್ಕೆ ಬಂದದ್ದು ಅರಾಜಕತೆಯ ಪ್ರಭುತ್ವ. ಇದಕ್ಕೆಲ್ಲ ಕಾರಣ ನಾವು. ನಾವೇ. ಘನ ಮತದಾರರು. ಲಂಚ, ಭ್ರಷ್ಟಾಚಾರದ ಅಂಗಡಿಗಳು ತೆರೆಯಲ್ಪಡುವುದೇ ಚುನಾವಣೆಯ ಜಾತ್ರೆಯಲ್ಲಿ. ಹೆಂಡ, ಹಣ, ಸೀರೆ, ಬೇರೆ ಬೇರೆ ವಸ್ತುಗಳು ಎಂಬ ಪುಕ್ಕಟೆ ಲಾಭಗಳ ಭೋರ್ಗರೆತ. ಇವುಗಳಿಗೆ ಪ್ರಥಮ ಬುನಾದಿಯೇ ಚುನಾವಣಾ ಪರಿಷೆ.
  ಪ್ರಜಾಪ್ರಭುತ್ವದ ಆಡಳಿತೆಯಲ್ಲಿ ಮತದಾರನೇ ಪ್ರಭು. ಈ ಪ್ರಭುತ್ವದ ಕಿರೀಟವನ್ನು ಹೊತ್ತುಕೊಳ್ಳಬೇಕಾದ ಪ್ರಜೆಗೆ ಅದರ ಹಕ್ಕಿನ ಪ್ರಜ್ಞೆಯೊಂದೇ ಸಾಲದು. ಅದನ್ನು ನಿಭಾಯಿಸುವ ಹೊಣೆಗಾರಿಕೆಯ ಅರಿವು ಅತಿ ಅಗತ್ಯ. ನಮ್ಮ ದೇಶದ ಇಂದಿನ ಸನ್ನಿವೇಶದಲ್ಲಿ ಮತದಾರನಿಗೆ ಈ ಅರಿವು ಪೂರ್ತಿ ಇದ್ದಂತೆ ಕಾಣುವುದಿಲ್ಲ. ಚುನಾವಣಾ ಅಭ್ಯರ್ಥಿಯು ತನ್ನ ಮನೆಬಾಗಿಲಿಗೆ ಬಂದು ನಮಸ್ಕಾರ, ಪ್ರಭುವೇ ನಮಗೆ ವೋಟು ಕೊಡಿಎಂದು ಎಚ್ಚರಿಸಿದಾಗ ಮತದಾರ ತನ್ನ ಕಣ್ಣು ತೆರೆಯುವ, ಬಾಯಿ ಕಳೆಯುವ ಮತ್ತು ಕೈ ಚಾಚುವ ಪರಿಸ್ಥಿತಿ ಇಂದು ಬಹಳಷ್ಟಿದೆ.
        ಚುನಾವಣಾ ಅಭ್ಯರ್ಥಿ ಕೋಟಿ ಕೋಟಿ ತೊಡಗಿಸಿ ಆಯ್ಕೆಯಾಗುತ್ತಾನೆ. ಮಂತ್ರಿಯಾಗ ಬೇಕಾದವನು ತನ್ನ ಈ ವೆಚ್ಚದ ಜೊತೆಗೆ ಹತ್ತಾರು ಶಾಸಕರ ಇಂತಹ ವೆಚ್ಚಗಳನ್ನು ನಿಭಾಯಿಸಿ ಅವರನ್ನು ತನ್ನ ಬೆಂಬಲಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇದು ಕೇವಲ ಸೂಚನೆ, ಬೆಂಬಲಕಷ್ಟೆ ಅನ್ವಯ. ಇನ್ನು ತನ್ನನ್ನು ಮಂತ್ರಿ ಸ್ಥಾನಕ್ಕೆ ಅನುಮೋದಿ ಸುವ ಪಕ್ಷದ ಪ್ರಮುಖರಿಗೆ, ಮಂತ್ರಿಯನ್ನಾಗಿ ಮಾಡುವ ಶಾಸಕಾಂಗದ ನಾಯಕನಿಗೆ ಬೇರೆ ಬೇರೆ ಸಲುವಳಿ. ಇವೆಲ್ಲಾ ಕೋಟ್ಯನುಕೋಟಿ ರುಪಾಯಿಗಳ ಒಂದು ಮೊತ್ತ. ಇದು ಒಬ್ಬ ಜನಪ್ರತಿನಿಧಿಯ ಪ್ರಥಮ ಹಂತ. ಇನ್ನು 5 ವರ್ಷ ಅಧಿಕಾರದಲ್ಲಿ ಉಳಿಯುವ ಯತ್ನ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿ ಮರಳಿ ಚುನಾವಣೆಯಲ್ಲಿ ಗೆಲ್ಲುವ ಹೋರಾಟದ ಇನ್‍ವೆಸ್ಟ್‍ಮೆಂಟ್ ಪ್ರತ್ಯೇಕ. ಇದನ್ನು ಶ್ರೀಸಾಮಾನ್ಯ ಪ್ರಜೆಯು ಲೆಕ್ಕಾಚಾರ ಹಾಕಲು ಅವನ ಕ್ಯಾಲುಕಲೇಟರ್ ಚಿಕ್ಕದಾಗುತ್ತದೆ. ಅದಕ್ಕೆ ಹದಿನಾರು ಡಿಜಿಟ್‍ಮೇಲಿನ ಕ್ಯಾಲುಕಲೇಟರ್ ಬೇಕು.
        ಇಷ್ಟೆಲ್ಲಾ ದೊಡ್ಡ ಮೊತ್ತವನ್ನು ಒಬ್ಬ ಜನಪ್ರತಿನಿಧಿಯಾದವನು ಎಲ್ಲಿ ಗಳಿಸಿ ಕೊಳ್ಳಬೇಕು. ಪ್ರಜೆಗಳ ಕಲ್ಯಾಣಕ್ಕೆಂದು ವಿನಿಯೋಗಿಸಿದ ಸರ್ಕಾರದ ಯೋಜನೆಗಳ ಹಣವನ್ನೇ ಶೇಖಡಾವಾರು ಭರಣದ ರೂಪದಲ್ಲಿ ಕೊಳ್ಳೆ ಹೊಡೆಯಬೇಕು. ಕೆಲವು ಯೋಜನೆಗಳನ್ನು ಜಾರಿ ಗೊಳಿಸದೆಯೇ ಕೇವಲ ದಾಖಲೆಗಳಲ್ಲಷ್ಟೆ ಅನುಷ್ಟಾನಗೊಳಿಸಿ ಹಣವನ್ನು ಲಪಟಾಯಿಸಬೇಕು.  ಈ ರೀತಿಯ ಲೂಟಿಯಲ್ಲಿ ದಾರಿಯಲ್ಲಿ ಮಧ್ಯೆ ಮಧ್ಯೆ ಎಟುಕುವ   ವ್ಯಕ್ತಿಗಳನ್ನು ಜನಪ್ರತಿನಿಧಿಗಳು ಉಪಯೋಗಿಸಿಕೊಳ್ಳುತ್ತಾರೆ.  ಇದು ಅಧಿಕಾರಿಗಳೂ ಇರಬಹುದು , ಗುತ್ತಿಗೆದಾರರೂ ಇರಬಹುದು .
ಒಟ್ಟಾರೆ ಇದೊಂದು ಜನಪ್ರತಿನಿಧಿಯ ಬಿಂದುವಿನಿಂದ ಮತದಾರನ ಬಿಂದುವಿನವರೆಗೆ ಚಲಿಸುವ ಚಕ್ರ. ಈ ಚಕ್ರವು ಸಾಮಾನ್ಯ ಮತದಾರನ ಬಿಂದುವಿನಿಂದ ಅತ್ಯಂತ ಮೇರು ಜನ ಪ್ರತಿನಿಧಿಯವರೆಗೆ ಹಾಗೆಯೇ ಮತ್ತೊಮ್ಮೆ  ಅದೇ ಜನಪ್ರತಿನಿಧಿಯ ಮಟ್ಟದಿಂದ ಸಾಮಾನ್ಯ ಮತದಾರನ ಮಟ್ಟದವರೆಗೆ ಒಮ್ಮೆ ಮುಮ್ಮುಖವಾಗಿಯೂ ತಿರುಗುತ್ತದೆ , ಮತ್ತೊಮ್ಮೆ ಹಿಮ್ಮುಖವಾಗಿಯೂ ತಿರುಗುತ್ತದೆ .  ಒಮ್ಮೆ ಹಿಮ್ಮುಖವಾಗಿಯೂ ತಿರುಗುತ್ತದೆ. ಮತ್ತೊಮ್ಮೆ ಮುಮ್ಮುಖ ವಾಗಿಯೂ ತಿರುಗುತ್ತದೆ. ಪ್ರಾಮಾಣಿಕ ರಾಜಕಾರಣಿಯಾಗಿದ್ದರೆ ಚುನಾಯಿತನಾಗದೇ ಮನೆಯಲ್ಲಿ ಕೈಕಟ್ಟಿ ಕುಳಿತಿರಬೇಕಷ್ಟೆ.
       ಇಂತಹ ವ್ಯವಸ್ಥೆಯನ್ನು ಕಲ್ಪಿಸಿದವರು ಯಾರು? ಮತದಾರರೋ ಅಥವಾ ರಾಜಕಾರಣಿಗಳೋ?. ಏಕೆಂದರೆ ಒಬ್ಬರು ಕೊಟ್ಟವರು, ಮತ್ತೊಬ್ಬರು ತೆಗೆದುಕೊಂಡವರು. ವಾಸ್ತವವೆಂದರೆ ರಾಜಕಾರಣಿಗಳು ಕೊಟ್ಟಿರದಿದ್ದರೆ ಇವರು ತೆಗೆದುಕೊಳ್ಳುತ್ತಿರಲಿಲ್ಲ. ಮತ ದಾರರು ಕಟ್ಟುನಿಟ್ಟಾಗಿ ತಿರಸ್ಕರಿಸಿದಿದ್ದರೆ ಅವರು ಕೊಡುತ್ತಿರಲಿಲ್ಲ. ಕೋಳಿ ಮೊದಲೋ? ಮೊಟ್ಟೆ ಮೊದಲೋ?. ಉತ್ತರವನ್ನು ಯಾರು ಕೊಡಬೇಕು.
       ಹಾಗೆಂದು ಇಂದು ಮತದಾರ ತಿಳುವಳಿಕೆ ಇಲ್ಲದವನೆಂದು ಭಾವಿಸಬೇಕಾಗಿಲ್ಲ. ನಮ್ಮ ದೇಶದಲ್ಲಿ ಇನ್ನೂ ಕೆಲವು ಅನಕ್ಷರಸ್ಥರು ಇರಬಹುದು. ಆದರೆ ದಡ್ಡರು ಯಾರೂ ಇಲ್ಲ. ತಮ್ಮ ತಮ್ಮ ಬಚಾವಿಗೆ ಎಲ್ಲರಿಗೂ ತಜ್ಞತೆಯಿದೆ. ಮುಂಜಾಗರೂಕತೆ ಇದೆ. ಆದರೆ ಅವುಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆಯೇ ವಿನಃ ಸಾರ್ವಜನಿಕಕ್ಕೆ ವಿನಿಯೋಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ, ಇಲ್ಲಿ ಸ್ವಾರ್ಥಿ ಯಾರು? ಮತದಾರನೋ? ರಾಜಕಾರಣಿಯೋ?
 ಮುಖ್ಯವಾಗಿ ಹೇಳುವುದಾದರೆ ಚುನಾವಣಾ ಪ್ರಕ್ರಿಯೆ ಆಡಳಿತದ ಮೇಲೆ ಸಕಲ ಪ್ರಭಾವವನ್ನು ಹೊಂದಿದೆ. ವಾಸ್ತವಿಕ ಅರ್ಥದಲ್ಲಿ ಚುನಾವಣೆ ನಡೆದು ದಕ್ಷ, ಪ್ರಾಮಾಣಿಕ ಪ್ರತಿನಿಧಿಗಳನ್ನೊಳಗೊಂಡ ಸರ್ಕಾರ ರಚನೆಯಾಗಬೇಕು. ಈ ಕಾರಣದಿಂದ ಚುನಾವಣಾ ಆಯೋಗವು ಈ ಮುಂದಿನ ಸುಧಾರಣೆಗಳನ್ನು ತರುವುದು ಸೂಕ್ತ.
1) ಚುನಾವಣೆಯಲ್ಲಿ ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಯಾರಿಗೂ ಪ್ರಚಾರದ ಅಗತ್ಯವಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯೆನ್ನಿಸಿಕೊಂಡವನೂ ಬುದ್ದಿ ಹೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕರಪತ್ರ, ಬಾವುಟ, ಬ್ಯಾನರ್, ಮೈಕ್ ಪ್ರಚಾರ, ಇತ್ಯಾದಿ ಯಾವುದೇ ಸಾಮಗ್ರಿಯಿಲ್ಲದೇ ಅಂಡರ್‍ಗ್ರೌಂಡ್‍ನಲ್ಲಿ ಗುಪ್ತವಾಗಿ ಪ್ರಚಾರ ನಡೆಸುತ್ತಿರುವವರನ್ನು ಕಂಡು ಹಿಡಿದು ಕೂಡಲೇ ಬಂಧಿಸಿ ಚುನಾವಣೆಯ ನಂತರ ಹೊರಗೆ ಬಿಡಬೇಕು.
2) ಯಾವುದೇ ಪಕ್ಷದ ಚುನಾವಣಾ ಕಾರ್ಯಾಲಯವನ್ನು ಚುನಾವಣಾ ಅವಧಿಯಲ್ಲಿ ಸಂಪೂರ್ಣವಾಗಿ ಮುಚ್ಚಿಸಬೇಕು. ಅಭ್ಯರ್ಥಿಯ ಮತ್ತು ಪಕ್ಷದ ಚುನಾವಣಾ ಪ್ರಚಾರದ ಸರಕುಗಳಾದ ವಾಹನ, ಬ್ಯಾನರ್,ಬಾವುಟ, ಕರಪತ್ರ, ಸಭೆ ಸಮಾರಂಭಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.
3) ಅಭ್ಯರ್ಥಿಯನ್ನು ಚುನಾವಣೆ ಮುಗಿಯುವವರೆಗೆ ಗೃಹಬಂಧನದಲ್ಲಿ ಇರಿಸಬೇಕು. ಮೊಬೈಲ್, ಸ್ಥಿರ ದೂರವಾಣಿ ಮತ್ತು ಜನರ ಸಂಪರ್ಕವನ್ನು ಕಡಿತಗೊಳಿಸ ಬೇಕು. ಅಷ್ಟು ಕಾಲ ಇದೇ ಸ್ಥಿತಿಯಲ್ಲಿ ಕ್ಷೇತ್ರದ ಹೊರಗೆ ದೂರದಲ್ಲಿ ಅಭ್ಯರ್ಥಿ ಇದ್ದರೆ ಇನ್ನೂ ಅನುಕೂಲ.
4) ಚುನಾವಣಾ ಕ್ಷೇತ್ರದ ಕೇಂದ್ರಭಾಗದಲ್ಲಿ ಒಂದು ಸಾರ್ವಜನಿಕ ಪ್ರಚಾರಸಭೆಯನ್ನು ಚುನಾವಣಾ ಆಯೋಗವೇ ಏರ್ಪಡಿಸಬೇಕು. ಒಂದೇ ವೇದಿಕೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಸೇರುವಂತೆ ಮಾಡಬೇಕು. ಅಷ್ಟರ ಮಟ್ಟಿಗೆ ಮಾತ್ರ ಅಭ್ಯರ್ಥಿಯು ಹೊರಗೆ ಬರುವುದಕ್ಕೆ ಅವಕಾಶ ನೀಡಬೇಕು.ಈ ಸಭೆಗೆ ಮತದಾರರನ್ನು ಆಹ್ವಾನಿಸುವ ಕೆಲಸ ಆಯೋಗದ್ದಾಗಬೇಕು. ಇದಕ್ಕೆ ಅನುಕೂಲವಾದ ಮಾಧ್ಯಮಗಳು ಮತ್ತು ಪರಿಕರಗಳನ್ನು ಉಪಯೋಗಿಸಿಕೊಳ್ಳುವುದು ಆಯೋಗದ ಸೂಕ್ತ ವಿವೇಚನಗೆ ಬಿಟ್ಟದ್ದು. ಇವೆಲ್ಲದರ ಖರ್ಚನ್ನು ಆಯೋಗವೇ ನಿಗದಿಗೊಳಿಸ ಬೇಕು. ಅದನ್ನು ಅಭ್ಯರ್ಥಿಗಳು ಪೂರ್ವಭಾವಿಯಾಗಿ ಭರಿಸಬೇಕು.
5) ಈ ಸಂಯುಕ್ತ ವೇದಿಕೆಯಲ್ಲಿ ಅಭ್ಯರ್ಥಿಗಳು ಮತದಾರರ ಸಮುದಾಯಕ್ಕೆ ತಿಳಿಸ ಬೇಕಾದ ವಿಷಯಗಳನ್ನು ತಿಳಿಸುವುದು, “ಪ್ರಭುವೇ ನಮಗೆ ವೋಟು ಕೊಡಿ’’ ಎಂದು ಮತಯಾಚನೆ ಮಾಡಿಕೊಳ್ಳುವುದು ಇಂತಹ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪ್ರತಿ ಅಭ್ಯರ್ಥಿಗೂ ಇದಕ್ಕೆ ಸಂಬಂಧಪಟ್ಟಂತೆ ನಿಯಮಗಳು ಮತ್ತು ಸಮಯವನ್ನು ಆಯೋಗವು ಪ್ರಚುರಪಡಿಸಬೇಕು. ಮತಯಾಚನೆಯ ಈ ವೇದಿಕೆಯಲ್ಲಿ ಚುನಾವಣಾ  ಸ್ಪರ್ಧಾಳುಗಳೊಂದಿಗೆ ಸೌಹಾರ್ಧಯುತವಾಗಿ ವಿಷಯ ಕುರಿತು ಚರ್ಚೆ ಮಾಡಲು ಸಮಯಾವಕಾಶ ಮತ್ತು ಧ್ವನಿವರ್ಧಕ ವನ್ನೊಳಗೊಂಡ ಸೂಕ್ತ ವ್ಯವಸ್ಥೆಯು ಮತದಾರನಿಗೆ ಇರಬೇಕು. ಆದರೆ ಇಂತಹ ಸಭೆಗೆ ಕೆಲವೇ ಗಂಟೆಗಳ ಅವಧಿ ಸಾಕಾಗದು. ಬೇಕಾಗುವಷ್ಟು ಸಮಯದ ವ್ಯವಸ್ಥೆಯನ್ನು ಒದಗಿಸುವುದು ಅನಿವಾರ್ಯ. ಪ್ರಚಾರ ಕಾರ್ಯಕ್ಕಾಗಿ 15 ದಿನಗಳು ಸಾವಿರಾರು ಕಾರ್ಯಕರ್ತರ ಸಮಯದ ನಷ್ಟ ಮತ್ತು ಶ್ರಮದ ವ್ಯರ್ಥ, ನೂರಿನ್ನೂರು ವಾಹನಗಳ ವೆಚ್ಚಕ್ಕಿಂತ ಇದು ಅನುಕೂಲ. ಈ ಹದಿನೈದು ದಿನಗಳ ಅವಧಿಯಲ್ಲಿ ಮತದಾರರಿಗೆ ಪ್ರಚಾರದ ಕಾರ್ಯಕರ್ತರ ಕಿರಿಕಿರಿ ತಪ್ಪುತ್ತದೆ. ಇನ್ನು ದಿನಪತ್ರಿಕೆ, ಆನ್‍ಲೈನ್ ವ್ಯವಸ್ಥೆ, ಟಿ.ವಿ. ಮಾದ್ಯಮವನ್ನು ಕೂಡಾ ಪ್ರಚಾರಕ್ಕೆ ಆಯೋಗ ಬಳಸಿಕೊಳ್ಳಬಹುದು. ಈ  ಎಲ್ಲಾ ವೆಚ್ಚದ ಮೊತ್ತವನ್ನು ಆಯೋಗವು ಪೂರ್ವಭಾವಿಯಾಗಿ ಅಭ್ಯರ್ಥಿಗಳಿಂದ ವಸೂಲು ಮಾಡಿಕೊಳ್ಳಬೇಕು.
             ಇದರಿಂದ ಏಳು ಪ್ರಯೋಜನಗಳಿವೆ. 1) ಅಭ್ಯರ್ಥಿಗಳು 15 ದಿನಗಳ ಕಾಲ ಮತಯಾಚನೆಗಾಗಿ ಬಳಸುವ ಕಾರ್ಯಕರ್ತರ ದಾಕ್ಷಿಣ್ಯ, ಶ್ರಮ, ಅವರ ವೆಚ್ಚ, ವಾಹನ ವೆಚ್ಚ, ಇಂಧನ ಉಳಿತಾಯ, ಪ್ರಚಾರ ಸಾಮಾಗ್ರಿಯ ವೆಚ್ಚ, ಅಭ್ಯರ್ಥಿಯ ಮತ್ತು ಪಕ್ಷದ ಮುಖಂಡರ ಒದ್ದಾಟ ಎಲ್ಲವೂ ಕಡಿಮೆ ಯಾಗುತ್ತವೆ. 2) ಆಯೋಗವು ಪ್ರಚಾರ ವೆಚ್ಚಕ್ಕಾಗಿ ವಸೂಲ್ಮಾಡುವಂತಹ ಮೊಬಲಗು ಒಂದು ಪರಿಗಣನಾತ್ಮಕ ಮಟ್ಟದಲ್ಲಿರುತ್ತದೆ. ಅದನ್ನು ಭರಿಸುವ ಯೋಗ್ಯತೆ ಇದ್ದವನೇ ಸ್ಪರ್ಧಿಸಬೇಕು. ಸುಮ್ಮನೆ ಚಟಕ್ಕಾಗಿ ಸ್ಪರ್ಧಿಸುವವರ ಸಂಭ್ಯಾವತೆ ಇಲ್ಲವಾಗುತ್ತದೆ. 3) ಚುನಾವಣಾ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಮತ್ತು ಕಾರ್ಯಕರ್ತರು ನೇರವಾಗಿ ಮತದಾರರೊಡನೆ ವ್ಯಕ್ತಿಗತ ಸಂಪರ್ಕಕ್ಕೆ ಸಿಕ್ಕು ಅವ್ಯವಹಾರ ನಡೆಯುವುದು ಕಡಿಮೆಯಾಗುತ್ತದೆ. 4) ಮುಖತಃ ಭೇಟಿ ಯಾದಾಗ ಮತದಾರರನ್ನು ಸಂತೋಷಗೊಳಿಸಲಿಕ್ಕಾಗಿ ಪೊಳ್ಳು  ಆಶ್ವಾಸನೆಗಳನ್ನು ಅಭ್ಯರ್ಥಿಗಳು ಕೊಡುವುದು, ಹಾಗೆಯೇ ಮತದಾರರಿಂದ ಛೀಮಾರಿ ಹಾಕಿಸಿ ಕೊಳ್ಳುವುದು ಇವೆರಡೂ ತಪ್ಪುತ್ತವೆ. 5) ಮತದಾರರು ಬಹಿರಂಗವಾಗಿ ತಮ್ಮ ಅನಿಸಿಕೆ, ಅಹವಾಲುಗಳನ್ನು ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಂಡಿಸುವಂತಹ ಪರಂಪರೆಯನ್ನು ಬೆಳೆಸಲು ಹುಟ್ಟುಹಾಕಿದಂತಾಗುತ್ತದೆ.    6) ಅಭ್ಯರ್ಥಿಗಳು ತಮ್ಮ ಸ್ವಂತ ವೇದಿಕೆಯಲ್ಲಿ ಮತ್ತೊಂದು ಪಕ್ಷ ಹಾಗೂ ಅದರ ಅಭ್ಯರ್ಥಿಯನ್ನು ಆದಾರ ರಹಿತವಾಗಿ ದೂಷಣೆ ಮಾಡಿ ಮತದಾರ ಸಮುದಾಯವನ್ನು ತಪ್ಪುದಾರಿಗೆ ಎಳೆಯುವುದು ನಿಲ್ಲುತ್ತದೆ. 7) ಸಂಯುಕ್ತ ವೇದಿಕೆಯಲ್ಲಿ ಪ್ರಚುರಗೊಳಿಸಿದ ಅಂಶಗಳನ್ನು ಅಭ್ಯರ್ಥಿಯು ಮರೆಗೆ ಸರಿಸದ ಹಾಗೆ ಸೋತ ಅಭ್ಯರ್ಥಿಗಳು ಚುನಾವಣೆಯ ನಂತರ ಮತದಾರ ಸಮುದಾಯವನ್ನು ಎಚ್ಚರಗೊಳಿಸುತ್ತಿರಲು ಸಹಾಯವಾಗುತ್ತದೆ.
6) ಪಕ್ಷದ ಪ್ರಣಾಳಿಕೆ, ಸಾಧನೆಗಳ ಮಾಹಿತಿ (ಪಕ್ಷದ ಅಭ್ಯರ್ಥಿಯಾಗಿದ್ದಲ್ಲಿ), ಅಭ್ಯರ್ಥಿಯ ಫೋಟೋ ಸಹಿತ ಪರಿಚಯ, ಅಭ್ಯರ್ಥಿಯ ಮನವಿ ಕುರಿತಂತೆ ಎಲ್ಲಾ ಅಭ್ಯರ್ಥಿಗಳದ್ದನ್ನೂ ಸೇರಿಸಿ ಸಂಯುಕ್ತವಾಗಿ ಒಂದು ಕಿರುಪುಸ್ತಕವನ್ನು ಚುನಾವಣಾ ಆಯೋಗವು ಪ್ರಕಟಿಸಬೇಕು. ಇದಕ್ಕೆ ಅಗತ್ಯವಾದ ಮಾಹಿತಿ ಪರಿಕರ ಗಳು ಮತ್ತು ವೆಚ್ಚನ್ನು ಅಭ್ಯರ್ಥಿಗಳಿಂದ ಪೂರ್ವಭಾವಿಯಾಗಿ ಆಯೋಗವು ಪಡೆದುಕೊಳ್ಳಬೇಕು. ಈ ಕಿರುಹೊತ್ತಿಗೆಗಳನ್ನು ಸಂಯುಕ್ತ ಚುನಾವಣಾ ಪ್ರಚಾರದ ಸಭೆಯಲ್ಲಿ ಪ್ರತಿಯೊಬ್ಬ ಮತದಾರನಿಗೆ ಪುಕ್ಕಟ್ಟೆ ಹಂಚಬೇಕು. ಮತದಾರನ ಕೈಗೆ ಸುಲಭವಾಗಿ ಬರುವ ಹಾಗೆ ವ್ಯವಸ್ಥೆಯನ್ನು ಆಯೋಗ ಮಾಡಬೇಕು. ಅದಕ್ಕಾಗಿ ಮತದಾರ ಪರದಾಡಬಾರದು.
7) ಮತದಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದ ಹಾಗೆ, ತನ್ನ ಮತ ಚಲಾವಣೆಯ ಹಕ್ಕನ್ನು ಸರಿಯಾಗಿ ನಿರ್ವಹಿಸುವ ಹಾಗೆ ಆಯೋಗವು ದಿನಪತ್ರಿಕೆ, ಟಿ.ವಿ. ಕರಪತ್ರ, ಮತ್ತು ಮೈಕ್ ಪ್ರಚಾರ ಇತ್ಯಾದಿ ಮಾಧ್ಯಮಗಳ ಮೂಲಕ ಪ್ರಸಾರ ಮಾಡಬೇಕು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸಮಾಜದ ಕಟ್ಟಕಡೆಯ ಪ್ರಜೆ ಎನ್ನಿಸಿಕೊಂಡವನಿಗೂ ಕೂಡಾ  ತನಗಿರುವ ಮತದಾನದ ಹಕ್ಕಿನ ಪ್ರಜ್ಞೆಯಿದೆ. ಆದರೆ ಅದನ್ನು ಸೂಕ್ತವಾಗಿ ಚಲಾಯಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಇದು ಕೇವಲ ಕಟ್ಟಕಡೆಯ ಪ್ರಜೆಯೊಂದೇ ಅಲ್ಲ. ಸಮಾಜದ ಪ್ರಥಮ ಸಾಲಿನ ಪ್ರಜೆಗಳಲ್ಲೂ ಈ ಕೊರತೆ ಬಹಳಷ್ಟಿದೆ. ಆದ್ದರಿಂದ ಕಡ್ಡಾಯ ಮತದಾನದ ಕಾನೂನು ಅಗತ್ಯ. ಒಮ್ಮೆ ಮತದಾರ ಮತ ಚಲಾವಣೆ ಮಾಡ ಲಾಗದ ಅನಾನುಕೂಲ ಸ್ಥಿತಿಯಿದ್ದಲ್ಲಿ ಆಯೋಗಕ್ಕೆ ಸೂಕ್ತ ಮಾಹಿತಿಯನ್ನು ಕೊಟ್ಟು ವಿನಾಯಿತಿಯನ್ನು ಪಡೆದುಕೊಳ್ಳಬೇಕು.
8) ಚುನಾವಣೆಯಲ್ಲಿ ಮತದಾರ ಪ್ರಜ್ಞಾವಂತಿಕೆಯಿಂದ ತನ್ನ ಜವಾಬ್ಧಾರಿಯನ್ನು ನಿರ್ವಹಿಸಬೇಕು. ಅಭ್ಯರ್ಥಿಯೇ ಆಗಲಿ ಅಥವಾ ಅವನ ಪರವಾಗಿ ಯಾರಾದರೂ ತನ್ನ ಮನೆಯ ಬಾಗಿಲಿಗೆ ಮತಯಾಚನೆಗೆ ಬಂದರೆ “ನಿನಗೆ ಮತ ಕೊಡುವುದಿಲ್ಲ’’ ಎಂದು ಗದರಿಸಬೇಕು. ಮತ ಚಲಾವಣೆಗೆ ಸಂಬಂಧಪಟ್ಟ ವಿಚಾರಗಳನ್ನೆಲ್ಲಾ ಎಲ್ಲಿ, ಹೇಗೆ, ಏನು, ಏಕೆ ಮತ್ತು ಯಾವುದು ಎಂಬಿತ್ಯಾದಿ ಅಂಶಗಳನ್ನು ತಾನೇ ಸ್ವತಃ ತಿಳಿದುಕೊಳ್ಳಬೇಕಾದದ್ದು ಮತದಾರನ ಹೊಣೆ. ಹಾಗೆಂದು ಇವು ಅವನಿಗೆ ನಿಲುಕದ ವಿಷಯವೇನಲ್ಲ. ಕಾರಣ ತನ್ನ ಬದುಕಿನ ಇತರೆ ಎಲ್ಲಾ ವಿಷಯಗಳನ್ನು ತಾನೇ ಮುನ್ನುಗ್ಗಿ ನಿಭಾಯಿಸಿಕೊಂಡು ಗಟ್ಟಿಯಾಗುವುದಿಲ್ಲವೇ? ಆಯೋಗವು ಏರ್ಪಡಿಸಿದ ಪ್ರಚಾರ ಸಭೆಗೆ ಸ್ವಯಂ ಪ್ರೇರಿತನಾಗಿ  ಅದಕ್ಕಾಗಿ ಸಾಕಷ್ಟು ವೈಚಾರಿಕ ಸಿಧ್ಧತೆಗೊಂಡ ಮನೋಭೂಮಿಕೆಯಲ್ಲಿ ಹೋಗುವುದು , ಅಭ್ಯರ್ಥಿಗಳ ಮಾತುಗಳನ್ನು ಆಲಿಸುವುದು, ಮಂಥನ ಮಾಡುವುದು, ಮಾಹಿತಿಗಳ ಕಿರುಪುಸ್ತಕವನ್ನು ಮನೆಗೆ ಒಯ್ದು ಅಭ್ಯಾಸ ಮಾಡುವುದು. ಇವೆಲ್ಲಾ ಅವನ ಮತ ಚಲಾವಣೆಯ ಹಿನ್ನಲೆ ತಯಾರಿಯಾಗಿರಬೇಕು.ಯಾವುದೇ ತಾತ್ಕಾಲಿಕ ಆಮಿಷಕ್ಕೆ, ಒತ್ತಡಕ್ಕೆ, ಮುಲಾಜಿಗೆ ಜಾತಿ ಮತ್ತು ಯಾವುದೋ ಸ್ವಾರ್ಥ ಸಾಧನೆಯ ಆಸೆಗೆ ಗುರಿಯಾಗದೇ ಸ್ವಯಂ ವಿವೇಚನೆಯಿಂದ ಮತಚಲಾಯಿಸಬೇಕು. ಹೀಗಾದಾಗ ಮಾತ್ರ  ತಾವು ಚುನಾಯಿಸಿದ ಪ್ರತಿನಿಧಿ ಕರ್ತವ್ಯವಿಮುಖನಾದರೆ  ಅವನನ್ನು ನಿಯಂತ್ರಿಸುವ ಶಕ್ತಿ ಮತದಾರರಿಗೆ ಬರುತ್ತದೆ. ಇಂತಹ ಮತದಾರರು ಸಿಡಿದೆದ್ದಾಗ ಜನಪ್ರತಿನಿಧಿಯಾದವನು ಒಂದೋ ಜನರಿಗೆ ಅನುಕೂಲಕರವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವೇ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು.
9) ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಟ ವಿದ್ಯಾರ್ಹತೆ ಮತ್ತು ಕನಿಷ್ಟ ಸಾರ್ವಜನಿಕ ಕ್ಷೇತ್ರದ ಅನುಭವವನ್ನು ನಿಗದಿಗೊಳಿಸಬೇಕು. ಒಂದು ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರಿಗೆ ಮುಂದಿನ ಒಂದು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿರಕೂಡದು. ಸತತವಾಗಿ ಮೂರು ಚುನಾವಣೆಯಲ್ಲಿ ಸೋತವರು ಮತ್ತು 80 ವರ್ಷ ವಯಸ್ಸು ದಾಟಿದವರು ಚುನಾವಣೆಯಲ್ಲಿ ಪುನಹ ಸ್ಪರ್ಧಿಸುವಂತಿರಬಾರದು. ಯಾವುದೇ ಅಭ್ಯರ್ಥಿ ತನ್ನ ಸ್ವಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವಂತಿರಬೇಕು. ಈ ಅಂಶವನ್ನು ಸಧ್ಯದಲ್ಲಿಯೇ  ಜಾರಿಗೆ ತರಲು ಸರಕಾರದ ಮಟ್ಟದಲ್ಲಿ ಈಗಾಗಲೇ ಚಿಂತನೆ ನಡೆಯುತ್ತಿದೆ.
10) ಮತದಾನದ ಯಂತ್ರದಲ್ಲಿ ಅಭ್ಯರ್ಥಿಗಳ ಹೆಸರುಗಳ ಜೊತೆಗೆ ಕೊನೆಯಲ್ಲಿ “ಇವರಲ್ಲಿ ಯಾರೂ ಇಷ್ಟವಿಲ್ಲ’’ ಎಂದು ಮುದ್ರಿಸಿದ ಒಂದು ಕಾಲಂನ್ನು ಪ್ರತ್ಯೇಕವಾಗಿ ಸೇರಿಸಬೇಕು. ಮತದಾರನಿಗೆ ಸ್ಪರ್ಧಿಸಿದವರಲ್ಲಿ ಯಾರೂ ಬೇಡವೆಂದೆನಿಸಿದಾಗ ಈ ಕೊನೆಯ ಕಾಲಂನ ಗುಂಡಿಯನ್ನು ಒತ್ತಿ  ಮತವನ್ನು ನೀಡುವಂತೆ ಇರಬೇಕು. ಅದಕ್ಕೆ ಹೆಚ್ಚು ಮತಗಳು ಬಂದರೆ ಆ ಕ್ಷೇತ್ರಕ್ಕೆ ಮರು ಚುನಾವಣೆಯಾಗಬೇಕು. ಈ ಮರು ಚುನಾವಣೆಯಲ್ಲಿ ಮೊದಲು ಸ್ಪರ್ಧಿಸಿದವರಿಗೆ ಪುನಃ ಅವಕಾಶವಿರಬಾರದು. ಇಂತಹ ಪ್ರಕ್ರಿಯೆ ಚಾಲನೆಗೆ ಬಂದರೆ ಕೇವಲ ಯೋಗ್ಯತಾವಂತರಷ್ಟೆ ಸ್ಪರ್ಧಿಸ ಬೇಕಾಗುತ್ತದೆ.
      ಆದರೆ ಸದ್ಯದ ಸ್ಥಿತಿಯಲ್ಲಿ ಇದು ಒಂದು ಅಪ್ರಯೋಗಿಕವಾದ (ಯುಟೋಪಿಯನ್) ಪರಿಕಲ್ಪನೆ. ಈ ರೀತಿಯಲ್ಲಿ ಮರುಚುನಾವಣೆ ನಡೆಯುವ ಹಾಗೆ ಕೊನೆಯ ಕಾಲಂಗೆ ಮತನೀಡಬೇಕಾದರೆ ಮತದಾರರು ಪ್ರಜ್ಞಾವಂತರಷ್ಟೇ ಅಲ್ಲ ಅಷ್ಟೇ ಪ್ರಾಮಾಣಿಕರೂ ಮತ್ತು ಜವಾಬ್ದಾರಿಯುತರೂ ಆಗಬೇಕಾಗುತ್ತದೆ.
  ಮತದಾನ ತಿರಸ್ಕರಿಸುವ ಈ ರೀತಿಯ ತಂತ್ರವನ್ನು  ಚಾಲನೆಗೆ ತಂದಾಗ ತಿಳಿಯುವುದು ಒಂದಂತೂ ಸತ್ಯ. ಯಾರು ಭ್ರಷ್ಟರು? ರಾಜಕಾರಣಿಗಳೊ ಅಥವಾ ಮತದಾರರೋ ಎನ್ನುವ ಕಠೋರ ಸತ್ಯ ಬಯಲಿಗೆ ಬರುತ್ತದೆ.
    ಈಗಾಗಲೇ ಈ ರೀತಿಯ ಮತದಾನಕ್ಕೆ ಕಾನೂನು ರೀತ್ಯಾ ಅವಕಾಶ ವಿದೆ. ಆದರೆ ಇದು ಬಹಳ ಮಂದಿಗೆ ಗೊತ್ತಿಲ್ಲ. ಸ್ಪರ್ಧಿಸಿದವರಲ್ಲಿ ಯಾರು ಇಷ್ಟವಿಲ್ಲವೆಂದಾಗ ಚುನಾವಣಾ ಪ್ರಿಸೈಡಿಂಗ್ ಅಧಿಕಾರಿಗಳಿಂದ ಅದಕ್ಕಾಗಿಯೇ
  ಇರುವ ಒಂದು ಪ್ರತ್ಯೇಕ ಅರ್ಜಿ ನಮೂನೆಯನ್ನು ಕೇಳಿ ಪಡೆದು ಅದರಲ್ಲಿ ಬರೆದು ಮತದಾರ ಮತಪೆಟ್ಟಿಗೆಗೆ ಹಾಕಬೇಕು. ಅರ್ಜಿ ನಮೂನೆ ಎಂದರೆ ಫಾರಂ ನಂ. 17ಎ ಅಂಡರ್ ರೂಲ್ 49-0. ಈ ರೀತಿ ವಿಶೇಷ ಸೌಲಭ್ಯದ ಬಗ್ಗೆ ಪ್ರಚಾರವೂ ಇಲ್ಲವೆಂಬುದು ಖೇದದ ಸಂಗತಿ. ಮತದಾನ ಯಂತ್ರದಲ್ಲ್ಲಿಯೇ ಈ ವ್ಯವಸ್ಥೆಯನ್ನು ಸಜ್ಜುಗೊಳಿಸಿದರೆ ಪ್ರತ್ಯೇಕ ಪ್ರಚಾರ ಅನಗತ್ಯ.
11) ಹಳ್ಳಿಗಳಲ್ಲಿ ಮತಗಟ್ಟೆಗಳನ್ನು ಈಗಿನ ವ್ಯವಸ್ಥೆಗಿಂತ ಇನ್ನೂ ಹತ್ತಿರ ಹತ್ತಿರ ಮಾಡಬೇಕು. ಮತದಾರ ಮತ ಚಲಾಯಿಸಲು 1 ಕಿ. ಮೀ. ಗಿಂತ ಹೆಚ್ಚು ದೂರ ನಡೆಯುವಂತೆ ಇರಬಾರದು. ಆಗ ವಯಸ್ಸಾದವರು, ಅನಾರೋಗ್ಯ, ಪೀಡಿತರು ಅಂಗವಿಕಲರು,ಮತದಾನದ ಬಗ್ಗೆ ಸ್ವಲ್ಪ ಅಸಡ್ಡೆ ಇದ್ದವರು ಅನುಕೂಲತೆ ಜಾಸ್ತಿ ಯಾಗಿದ್ದರಿಂದ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸುತ್ತಾರೆ. ಇದರಿಂದ ಮತದಾನದ  ಪ್ರಮಾಣ ಹೆಚ್ಚುತ್ತದೆ. ಮತದಾರರಿಗೆ ತೊಂದರೆಯೂ ಕಡಿಮೆ ಯಾಗುತ್ತದೆ.
12) ಉದ್ಯೋಗ, ವಿದ್ಯಾಭ್ಯಾಸ, ಆರೋಗ್ಯ ಚಿಕಿತ್ಸೆ ಇತ್ಯಾದಿ ಅನೇಕ ಕಾರಣಗಳಿಗಾಗಿ ಸ್ವಂತ ಊರಿನಿಂದ ದೂರ ಇದ್ದವರು ತಾವಿರುವ ಊರಿನಿಂದಲೇ ತಮ್ಮ ಹುಟ್ಟೂರಿನ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವ ವ್ಯವಸ್ತೆಯಾಗಬೇಕು.ಈಗಿನ ಅಂತರ್ಜಾಲದ ತಾಂತ್ರಿಕತೆಯಲ್ಲಿ ಇದು ಸಾಧ್ಯ. ಅದಕ್ಕೆ ತಕ್ಕನಾದ ಅಂತರ್ಜಾಲ ಯೋಜನೆಯನ್ನು ರೂಪಿಸಬೇಕು. ಹೀಗೆ ಮಾಡಿದರೆ ತನ್ನ ಜನ್ಮ ಕ್ಷೇತ್ರದ ಅಭ್ಯರ್ಥಿಗೆ ಮತದಾರನು ಮತ ಕೊಡಲು ಅನುಕೂಲವಾಗುತ್ತದೆ . ತಮ್ಮ ಉದ್ಯೋಗಕ್ಕಾಗಿ  ತಮ್ಮ ಹುಟ್ಟಿದ ಕ್ಷೇತ್ರದಿಂದ ದೂರದಲ್ಲಿ ವಾಸಿಸುತ್ತಿರುವ ಮತದಾರರಿಗೆ ತಮ್ಮ ಊರಿಗೆ ಬಂದು ಮತದಾನ ಮಾಡುವ ಸಾವಿರಾರು ರೂಪಾಯಿಗಳ ಹಣದ ಖರ್ಚುಸಮಯ ನಷ್ಟ, ಪ್ರಯಾಣದ ತೊಂದರೆ ಇತ್ಯಾದಿ ಕಷ್ಟಗಳನ್ನು ತಪ್ಪಿಸಿದಂತೆ ಆಗುತ್ತದೆ. ಈ ಕಷ್ಟಗಳನ್ನು ತೆಗೆದುಕೊಳ್ಳಲು ಇಷ್ಟ ಪಡದ ಮತದಾರನೂ ಮತ ಚಲಾಯಿಸಲು ಅನುಕೂಲವಾಗುತ್ತದೆ. ಈ ವ್ಯವಸ್ಥೆಯನ್ನು ಮಾಡಿದಲ್ಲಿ ಮತದಾನದ ಪ್ರಮಾಣ ಹೆಚ್ಚುತ್ತದೆ. ಏಕೆಂದರೆ ಗ್ರಾಮೀಣ ಪ್ರದೇಶವನ್ನು ಹೆಚ್ಚಾಗಿ ಹೊಂದಿದ ಒಂದು ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ದೂರದಲ್ಲಿ ಇರುವ ಇಂತಹ ಮತದಾರರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಇರುತ್ತಾರೆ.
      ಈ ಮೇಲಿನ ಎಲ್ಲಾ ವಿಚಾರಗಳೂ ಒಂದು ಹಂತದಲ್ಲಿ ಅಪ್ರಯೋಗಿಕ ಪರಿಕಲ್ಪನೆಗಳು (ಯುಟೋಪಿಯನ್ ಕಾನ್ಸೆಪ್ಟ್ಸ್) ಎನ್ನುವಂತೆ ಕಾಣುತ್ತದೆ ಹೌದು. ಕೆಲವು ವರ್ಷಗಳ ಹಿಂದೆ ಸನ್ಮಾನ್ಯ ಟಿ.ಎನ್. ಶೇಷನ್‍ರವರು ಬಹಳಷ್ಟು ಚುನಾವಣೆ ಸುಧಾರಣೆಗಳನ್ನು ತಂದಾಗಲೂ ಜನರು ಅವುಗಳನ್ನು ಪ್ರ್ರಾಯೋಗಿಕ ವಾಗಿ ಎಷ್ಟರ ಮಟ್ಟಿಗೆ ಸಾಧ್ಯ ಎಂದುಕೊಂಡಿದ್ದರು. ಇತ್ತೀಚಿಗಿನ ಚುನಾವಣೆ ಯಲ್ಲಿನ ಸುಧಾರಣೆಗಳು ಅಂದಿನಗಿಂತ ಬಹಳ ಮುಂದೆ ಹೋಗಿವೆ. ಜನತೆ ಅದಕ್ಕೆ ಹೊಂದಿಕೊಳ್ಳುತ್ತಿಲ್ಲವೇ?
ಒಂದು ದೃಷ್ಟಿಯಲ್ಲಿ ಮೇಲ್ನೋಟಕ್ಕೆ ಈ ಎಲ್ಲಾ ವಿಚಾರಗಳ ಪ್ರಯೋಗವು ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಂತೆ ಭಾಸವಾಗುತ್ತದೆ ನಿಜ. ಬಹಳಷ್ಟು ರಾಜಕಾರಣಿಗಳ ಕೈಕಾಲು, ಬಾಯಿಗಳನ್ನು ಕಟ್ಟಿದಂತಾಗುತ್ತದೆ. ಅವರ ಅಭಿಪ್ರಾಯ ಮಂಡನೆಯ ಹಕ್ಕಿಗೆ ಧಕ್ಕೆ ತಂದಂತಾಗುತ್ತದೆ. ಹಾಗೆಯೇ ಮತದಾರನ ಚಾಚುವ ಕೈಗಳನ್ನು ಕತ್ತರಿಸಿದಂತಾಗಿ ಅವನಿಗೆ ಅಭಾವದ ಪ್ರಜ್ಞೆ ನಿರ್ಮಾಣವಾಗುತ್ತದೆ. ರಾಜಕೀಯ ಮುಖಂಡರ ಹಿಂಬಾಲಕರನ್ನು ಬಂಧಿಸಿದಂತಾಗುತ್ತದೆ. ಒಟ್ಟಾರೆ ಇಂತಹ ಚುನಾವಣೆಯ ಅನುಸರಣೆ ಅಬ್ಬರವಿಲ್ಲದ ಜಾತ್ರೆಯಾಗುತ್ತದೆ.
     ಆದರೆ ಇದೆಲ್ಲ ಅನಿಸಿಕೆಗಳು ಜನಮಾನಸದಲ್ಲಿ ಒಂದೆರಡು ಚುನಾವಣೆಗಳಲ್ಲಿ ಸಾಣಿಗೆ ಸಿಕ್ಕ ಕರಗಸದಂತಾಗುತ್ತದೆ. ನಂತರದಲ್ಲಿ ನಿಧಾನವಾಗಿ ರಾಜಕಾರಣಿಗಳು ಮತ್ತು ಮತದಾರರು ಅಲ್ಲದೇ ಈ ಪ್ರಕ್ರಿಯೆಯಲ್ಲಿ ಸುಳಿದು ಹೋಗುವ ಪ್ರತಿಯೊಬ್ಬರೂ ಈ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾರೆ. ಎರಡು ಚುನಾವಣೆಗಳ ಅವಧಿಯ ನಂತರ ಈ ಪ್ರಕ್ರಿಯೆಗಳ ಜಾರಿಗಾಗಿ ತಂದ ಅನೇಕ ಕಾನೂನು ಕ್ರಮಗಳ ಪ್ರಯೋಗ ಜನಸಾಮಾನ್ಯರಲ್ಲಿ ಸಹಜವಾಗಿಯೇ ಅನಪೇಕ್ಷಿತವಾಗಬಹುದು. ಕಾರಣ ಅಷ್ಟು ಹೊತ್ತಿಗೆ ಬದಲಾದ ಪರಿಸ್ಥಿತಿಗಳಿಗೆ ಜನರು ತಮ್ಮ ಮನೋಗತಿಯನ್ನು ರೂಢಿಸಿಕೊಂಡಿರಲಿಕ್ಕೆ ಸಾಕು. ಯಾವುದೇ ವಿಷಯವೂ ಅಷ್ಟೆ. ಬದಲಾವಣೆಯ ಹಂತದಲ್ಲಿ ಅದು ಸಂಘರ್ಷವನ್ನು ಎದುರಿಸಬೇಕಾಗುತ್ತದೆ.
     ಸರ್ಕಾರ ಈ ಸುಧಾರಣೆಗಳಿಗಾಗಿ ಕಾನೂನು ತಿದ್ದುಪಡಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ಅಧಿಕಾರದ ಮಂಚೂಣಿಯಲ್ಲಿ ಇರುವವರ ಪ್ರಾಮಾಣಿಕತೆ, ವಿವೇಚನೆ, ದಕ್ಷತೆ, ದೂರದರ್ಶಿತ್ವ, ಹೆಚ್ಚಿನದಾಗಿ ಪರಮದೈರ್ಯ ಮತ್ತು ಇಚ್ಛಾಶಕ್ತಿ ಅಗತ್ಯವಿದೆ. ಈ ಎಲ್ಲಾ ಗುಣಗಳನ್ನು ಅನುಸರಿಸದೆ ಈಗಿನ ದಾರಿಯಲ್ಲಿಯೇ ನಮ್ಮ ರಾಜಕೀಯ ನೇತಾರರು, ರಾಜಕೀಯ ಚಿಂತಕರು ಮತ್ತು ಆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇನ್ನು ಅನೇಕ ಜವಾಬ್ದಾರಿ ವ್ಯಕ್ತಿಗಳು ಮುಂದೆ ಸಾಗಿದರೆ ಅವರಷ್ಟೇ ಅಲ್ಲ, ಇಡೀ ರಾಷ್ಟ್ರವೇ ಒಂದು ದಿನ ಅಧಃಪತನದ ಕಟ್ಟಕಡೆಯ ನಕಾರಾತ್ಮಕ ಕಂದಕಕ್ಕೆ ಬೀಳಬೇಕಾಗುತ್ತದೆ. ಊರಲೆಲ್ಲಾ ನೀರು ಆರಿದ ಮೇಲೆ ಬೆಂಕಿ ಉರಿದು ಬಿದ್ದರೆ ಅದನ್ನು ಆರಿಸುವ ಪ್ರಯತ್ನ ಅಪ್ರಯೋಗಿಕವಲ್ಲವೇ?
  ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಬದುಕಿನ ಉಳಿದ ವಿಚಾರಗಳಿಗೆ ತಾನು ಸ್ಪಂದಿಸುವಂತೆ ಮತದಾನದ ವಿಚಾರದಲ್ಲಿಯೂ ಸ್ವತಂತ್ರ ವಾಗಿ ಯೋಚಿಸಬೇಕು. ಅದು ಬಿಟ್ಟು ಯಾವುದೋ ಒತ್ತಡಕ್ಕೆ, ಪೂರ್ವಾಗ್ರಹ ಪೀಡನೆಗೆ ಅಥವಾ ಸಮೂಹಸನ್ನಿಗೆ ಬಲಿಯಾಗಬಾರದು. ತನಗಾಗಿ ಪ್ರತಿನಿಧಿ ಬೇಕು. ಅಂಥವನನ್ನು ಚುನಾಯಿಸಿಕೊಳ್ಳಬೇಕು. ಎಂಬ ವಿಚಾರ ಅವನ ತಲೆಯಲ್ಲಿ ಇರಬೇಕು.
ಆಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆಯಾಗಬಹುದು.

                                                                       *** 

ದಿನಾಂಕ: 20-04-2013                                               ಎಂ.ಗಣಪತಿ    ಕಾನುಗೋಡು
                                                                              ಅಂಚೆ: ಬಿ.ಮಂಚಾಲೆ-577431
                                                                                      ಸಾಗರ ತಾ: ಶಿವಮೊಗ್ಗ ಜಿಲ್ಲೆ
                                                                                      ಕರ್ನಾಟಕ ರಾಜ್ಯ.
                                                                                      ಮೊ: 9481968771
  
 

No comments:

Post a Comment