Tuesday 18 June 2013

ಯುವತಿಯರ ನಗರ ವಲಸೆ ; ಗ್ರಾಮೀಣ ಯುವಕರ ಮದುವೆ ನಿರಾಸೆ


                                                                                   -ಎಂ. ಗಣಪತಿ ಕಾನುಗೋಡು

ಯುವತಿಯರು ಓದಿನಲ್ಲಿ ಯುವಕರಿಗಿಂತ ಬಹಳ ಚುರುಕು. ಆದರೆ ಹಿಂದಿನ ಕಾಲದಲ್ಲಿ ಎಸ್‍ಎಸ್‍ಎಲ್‍ಸಿಕ್ಕಿಂತ ಮುಂದೆ ಅವರಿಗೆ ವಿದ್ಯಾಭ್ಯಾಸ ಮಾಡಿಸುತ್ತಿರಲಿಲ್ಲ. ಮದುವೆ ಮಾಡಿ ಕೈತೊಳೆದು ಕೊಳ್ಳುವುದು ಇತ್ತೀಚಿನ ವರ್ಷಗಳವರೆಗೂ ಪೋಷಕರ ವಾಡಿಕೆಯಾಗಿತ್ತು. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿನ ಯುವತಿಯರ ಸ್ಥಿತಿಯಾಗಿತ್ತು. 
ಇಂದು ಹಾಗಲ್ಲ. ಹಳ್ಳಿ ಯುವತಿಯರು ವಿದ್ಯಾಭ್ಯಾಸದಲ್ಲಿ ಬಹಳ ಮುಂದೆ ಹೋಗಿದ್ದಾರೆ. ಶಿಕ್ಷಣ ಕ್ಷೇತ್ರ, ಸ್ಪಾಟ್‍ವೇರ್ ಇಂಜಿನೀಯರಿಂಗ್ ಕ್ಷೇತ್ರವನ್ನೂ ಒಳಗೊಂಡು ಅನೇಕ ಕ್ಷೇತ್ರಗಳಲ್ಲಿ ನೌಕರಿ ಗಿಟ್ಟಿಸಿ ಸಂಪಾದಿಸುವಷ್ಟು ಪದವಿಗಳನ್ನು ಗಳಿಸಿ ಮುನ್ನುಗಿದ್ದಾರೆ. ಒಂದು ಹಂತದ ವಿದ್ಯಾಭ್ಯಾಸ ಮುಗಿದರೂ ಮದುವೆಯಾಗಿ ಸಂಸಾರ ನಡೆಸಬೇಕೆಂಬ ಅಪಹಪಿಕೆಯಲ್ಲಿ ಅವರು ಇಲ್ಲ. ನೌಕರಿ ಮಾಡಿ ತಾನೂ ಹಣ ಸಂಪಾದಿಸಬೇಕು ಎಂಬ ಧೋರಣೆ ಅವರದ್ದು. ವರ್ಷ 25 ದಾಟುತ್ತಿದೆ, ಮೊದಲು ಮದುವೆಯಾಗು, ತಡವಾದರೆ ಸರಿಯಾದ ವರ ಸಿಗುವುದಿಲ್ಲ ಎಂದು ತಾಯಿ ತಂದೆಯರು ಒತ್ತಾಯಿಸುತ್ತಾರೆ. ಆದರೆ ಅದಕ್ಕೆ ಸಿದ್ಧರಿಲ್ಲ. ಒಮ್ಮೆ ಮದುವೆಯಾಗದಿದ್ದರೂ ಚಿಂತೆಯಿಲ್ಲ. ಸಂಪಾದನೆಯನ್ನು ಬಿಡುವುದಿಲ್ಲ ಎಂಬ ಗಟ್ಟಿ ನಿರ್ಧಾರವನ್ನು ತಳದಿದ್ದಾರೆ. ಒಮ್ಮೆ ವಿವಾಹವಾಗುವಾದರೂ ತನ್ನ ನೌಕರಿಯನ್ನು ಒಪ್ಪಿಕೊಳ್ಳುವ, ತನಗಿಂತ ಮೇಲು ಹುದ್ದೆಯ ಹುಡುಗನೇ ಬೇಕೆನ್ನುತ್ತಾರೆ. ಅವರ ದೃಷ್ಟಿಯಿಂದ ಅದು ಸರಿಯೇ. 
ಹಳ್ಳಿಯಲ್ಲಿ ವಾಸಿಸುವ ಹಿರಿಯರ ಭಾವನೆ ಬೇರೆಯಿದೆ. ಪಾರಂಪರಿಕವಾಗಿ ಬಂದ ಕೃಷಿ ಭೂಮಿ, ಮನೆಯನ್ನು ಬಿಟ್ಟು ಹೋಗಬಾರದು ಅದನ್ನು ಕಳೆಯ ಬಾರದು ಎನ್ನುವ ಬಲವಾದ ನಂಬಿಕೆ ಅವರದು. ಅದಕ್ಕಾಗಿ ಗಂಡು ಮಗನನ್ನು ಹಳ್ಳಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ಆದರೆ ಅದನ್ನು ಧಿಕ್ಕರಿಸಿ ನಗರಕ್ಕೆ ಹಾರಿದವನು ಬಚಾವು. ತಾಯಿತಂದೆಗಳ ಒತ್ತಡಕ್ಕೆ ಅಲ್ಲಲ್ಲಿ ಹಳ್ಳಿಯಲ್ಲಿಯೇ ಉಳಿದ ಗ್ರಾಮೀಣ ಯುವಕರ ಸ್ಥಿತಿ ಇಂದು ಬಹಳ ಪೇಚಿಗೆ ಸಿಕ್ಕಿದೆ. ಎಷ್ಟೇ ಸಂಪತ್ತು ಇದ್ದರೂ ಅವನನ್ನು ಮದುವೆಯಾಗಲು ಹೆಣ್ಣುಮಕ್ಕಳು ಮುಂದೆ ಬರುವುದಿಲ್ಲ. ಶಿಕ್ಷಣ ಕಡಿಮೆ ಇರುವ ಹೆಚ್ಚು ಮಕ್ಕಳು ಕೂಡಾ ನಗರವಾಸಿ ನೌಕರಿ ಹೊಂದಿದ ವರನೇ ಬೇಕೆನ್ನುತ್ತಾರೆ. ವರ್ಷ ನಲವತ್ತಾದರೂ ಹೆಣ್ಣಿನ ಅಭಾವದಿಂದಾಗಿ ಗ್ರಾಮೀಣ ಯುವಕ ಇಂದು ಮದುವೆ ಇಲ್ಲದೆ ನಿರಾಸೆಯಾಗಿದ್ದಾನೆ. 
ಈ ತೆರನ ಸಂದಿಗ್ಧ ಪರಿಸ್ಥಿತಿ ಮುಂದುವರೆದವರೆನಿಸಿಕೊಂಡ ಬ್ರಾಹ್ಮಣ, ವೀರಶೈವ ಮುಂತಾದ ಇನ್ನೂ ಅನೇಕ ಸಮುದಾಯಗಳಲ್ಲಿ ಈಗ ಉಲ್ಬಣವಾಗಿದೆ. ಇದರ ಹೊರತಾದ ಇನ್ನಿತರ ಸಮುದಾಯಗಳಲ್ಲೂ ಯುವತಿಯರು ಶೈಕ್ಷಣಿಕವಾಗಿ ದೂರದೂರ ಸಾಗುತ್ತಿದ್ದಾರೆ. ಭಾವನಾತ್ಮಕವಾಗಿ ಕೃಷಿಯನ್ನೇ ಅವಲಂಬಿಸುವ ಎಲ್ಲ ಸಮುದಾಯದ ಗ್ರಾಮೀಣ ಯುವಕರು ಒಂದು ದಿನ ಇದೇ ಸಂದಿಗ್ಧತೆಯನ್ನು ಅನುಭವಿಸಬೇಕಾಗುತ್ತದೆ. 
ಈಗ ಗ್ರಾಮೀಣ ಯುವಕನ ಮುಂದೆ ಕಾಡುತ್ತಿರುವುದು ಒಂದೇ ಪ್ರಶ್ನೆ. ಭೂಮಿ ಕೃಷಿಯನ್ನು ಹಾಳುಗೆಡವಿ ನಗರದ ಸಂಪಾದನೆಗೆ ತಾನು ಹೋಗಬೇಕೋ ಇಲ್ಲವೆ ಮದುವೆ, ಮಕ್ಕಳು, ಸಂಸಾರ ಯಾವುದೂ ಇಲ್ಲದೆ ಮಣ್ಣಿನಲ್ಲಿಯೇ ಮಣ್ಣಾಗಬೇಕೋ?

ಎಂ. ಗಣಪತಿ M.A.. ಕಾನುಗೋಡು
 ಅಂಚೆ : ಬಿ.ಮಂಚಾಲೆ-577431
 ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
 ಮೊ.: 9481968771
 E-mail: mgkangod.blogspot.com

2 comments:

  1. ಬ್ರಾಹ್ಮಣರು ಅವರ ವೃತ್ತಿ ಎಂಥದ್ದು ಎಂದು ಯೋಚನೆ ಮಾಡಬೇಕಿತ್ತು ...ಅದನ್ನು ಬಿಟ್ಟು ತೋಟ ಗದ್ದೆ ಅಂತ ಬೇರೆಯವರ ವೃತ್ತಿ ಯನ್ನು ಅನುಕರಿಸಿ ಈಗ ಹೆಣ್ಣುಮಕ್ಕಳನ್ನು ಯಾಕೆ ದೂರಬೇಕು ???

    ReplyDelete
  2. ಖಂಡಿತವಾಗಿ ವಿಚಾರಿಸಬೇಕಾದ ವಿಚಾರ @aphegde.in ಅವರೇ ಅದೇರೀತಿ ಹೆಣ್ಣು ಮಕ್ಕಳನ್ನೂ ವಿದ್ಯಾಭ್ಯಾಸಕ್ಕೆ ಕಳಿಸದೇ ಮನೇಯಲ್ಲೇ ಕೂರಿಸಬೇಕಿತ್ತು ಎನೆನ್ನುತ್ತೀರಾ.....

    ReplyDelete

Note: only a member of this blog may post a comment.