Wednesday 28 August 2013

ಕೀರ್ತಿ ಕಾಮನೆ - ಮನುಷ್ಯನ ಒಂದು ಹಂಬಲ


                                                                         ಎಂ. ಗಣಪತಿ. ಕಾನುಗೋಡು
ಮನುಷ್ಯನ ಅನೇಕ ಬಯಕೆಗಳಲ್ಲಿ ಕೀರ್ತಿ ಕಾಮನೆಯೂ  ಒಂದು. ಜೀವನದ ಮೂಲಭೂತ ಬಯಕೆಗಳಾದ ಅನ್ನ, ವಸತಿ, ವಸ್ತ್ರ, ಇವು ಮೂರು ಇಂಗಿದ ಮೇಲೆ ಅವಕ್ಕೂ ಮೀರಿದ  ಅಸಂಖ್ಯಾತ ಪೂರಕ  ಬಯಕೆಗಳತ್ತ ಎಲ್ಲರೂ ಧಾವಿಸುತ್ತಾರೆ. ಅವುಗಳಲ್ಲಿ ಕೀರ್ತಿ ಸಾಧಿಸಬೇಕೆಂಬ ಹಂಬಲವೂ ಹೌದು. 
ಹುಟ್ಟು ಮತ್ತು ಸಾವು ಮನುಷ್ಯನನ್ನು ಒಳಗೊಂಡು ಎಲ್ಲಾ ಪ್ರಾಣಿಗಳಿಗೂ ಸಹಜ. ಆದರೆ ಎಷ್ಟೋ ಜನರು ಇದ್ದದ್ದು  ಹಾಗೂ  ಸತ್ತದ್ದು ಯಾರಿಗೂ  ತಿಳಿಯುವುದೇ ಇಲ್ಲ. ಕಾರಣ ಯಾವುದೇ  ವಿಚಾರದಲ್ಲೂ ಅವರು ಸಮಾಜದ  ಕಣ್ಣಿಗೆ ಕಾಣಿಸಿಕೊಂಡಿರುವುದಿಲ್ಲ. 
ಕೆಲವರು ಹಾಗಲ್ಲ. ತಾನು ಪ್ರಚಾರದಲ್ಲಿರಬೇಕು. ತನ್ನನ್ನು ಬಹಳ ಜನ ಗುರುತಿಸಬೇಕು ಎಲ್ಲರೂ ಶ್ಲಾಘಿಸುವಂತೆ  ಹೆಸರು ಗಳಿಸಬೇಕು   ಎನ್ನುವ ಹೆದ್ದಾಸೆ ಅವರಿಗೆ ಇರುತ್ತದೆ.   ಇದೇ ಕೀರ್ತಿ ಕಾಮನೆ.
ಈ ಉದ್ದೇಶಕ್ಕಾಗಿ ಜನರು ಗುರುತಿಸುವಂತಹ ಅನೇಕ ಕೆಲಸಗಳಲ್ಲಿ ತಮ್ಮನ್ನುತೊಡಗಿಸಿಕೊಂಡಿರುತ್ತಾರೆ. ಸಮಾಜ  ಸೇವೆ, ಹಳ್ಳಿಗಳಲ್ಲಿ ಗಿಡಮೂಲಕೆ ಜೌಷದಿsಗಳನ್ನು ಕೊಡುವುದು,  ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕ ಕೆಲಸಗಳಿಗೆ ಹಣ  ಕೊಡುವುದು, ಹಾವು ಹಿಡಿಯುವುದು. ಯಾರೇ  ಯಾವುದೇ ತೊಂದರೆಯಲ್ಲಿ ಸಿಕ್ಕಿ ಕೊಂಡಾಗ ತಕ್ಷಣ ಅಲ್ಲಿಗೆ ಧಾವಿಸಿ ಸಹಾಯಮಾಡುವುದು,  ಊರಿನಲ್ಲಿ  ಯಾರ ನಡುವೆಯಾದರೂ ವೈಮಸ್ಸು ಜಗಳ ಬಂದಾಗ  ಪಂಚಾಯಿತಿ ಮಾಡಿ ಅವರಲ್ಲಿ ರಾಜಿ ಮಾಡಿಸುವುದು, ಕಲಾಕ್ಷೇತ್ರಗಳಲ್ಲಿ ಭಾಗವಹಿಸುವುದು, ಹೀಗೆ ಇನ್ನೂ ಅನೇಕ ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವರು ಸ್ವಲ್ಪ ಸಂಭಾವನೆ ಪಡೆದರೂ ಕೂಡ ಅವರು ಮಾಡಿದ ಸೇವೆಗೆ ಅದು ಗೌಣ. 
ಇಂತಹ ಸ್ವಭಾವದರಲ್ಲಿಯೂ ಮೂರು ವಿಧಗಳಿವೆ. 1. ತಮ್ಮ  ವೈಯುಕ್ತಿಕ ಬದುಕನ್ನು ಬದಿಗಿಟ್ಟು ಅಗತ್ಯವಿದ್ದವರಿಗೆ ಆಯಾ ಸಂದರ್ಭಗಳಲ್ಲಿ ಧಾವಿಸಿ, ಸೇವೆ ಮಾಡಿ ಕೀರ್ತಿ ಸಂಪಾದಿಸುವವರು 2. ತಮ್ಮ ನಿತ್ಯ ಬದುಕನ್ನು ಪ್ರಧಾನವಾಗಿಟ್ಟುಕೊಂಡು ಬಿಡುವಿನ ವೇಳೆಯಲ್ಲಿ ಇಂತಹ ಸೇವೆಗಳನ್ನು ಮಾಡಿ ಕೀರ್ತಿ ಸಂಪಾದಿಸುವವರು. 3. ಕೆಲವರು ನೌಕರಿ ಅಥವಾ ಇನ್ಯಾವುದೋ ನಿರ್ದಿಷ್ಟ ಮತ್ತು ನಿಬಿಡವಾದ ಉದ್ಯೋಗದಲ್ಲಿ ನಿರತರಾಗಿರುತ್ತಾರೆ. ಇಂತಹವರು ತಾವು ಮಾಡುವ ಉದ್ಯೋಗವನ್ನೇ ಬಹಳ ಪ್ರ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡುವುದು. ಅದರ ಪ್ರಯೋಜನ ಸಂಬಂಧ ಪಟ್ಟ ಸಂಸ್ಥೆಗೆ ಮತ್ತು ಜನರಿಗೆ ಯಶಸ್ವಿಯಾಗಿ ದೊರಕುವಂತೆ ಶ್ರಮಿಸುವುದು. ಈ ಮಾರ್ಗದಲ್ಲಿ  ಉದ್ಯೋಗದಲ್ಲಿರುವ ವ್ಯಕ್ತಿಗಳು ಹೆಸರನ್ನು ಗಳಿಸುತ್ತಾರೆ.  ಇಂತಹವರು ತಾವು ನಿರತರಾದ ಕೆಲಸವನ್ನು ಬದಗಿಡುವುದಾಗಲೀ, ಅಥವಾ ಅದನ್ನು ಬಿಟ್ಟು ಸೇವೆ ಮಾಡಿ ಹೆಸರು ಗಳಿಸುವ ತುಡಿತಕ್ಕೆ  ಹೋಗುವುದಿಲ್ಲ. ಉಪಾಧ್ಯಾಯರು, ವೈದ್ಯರು, ಕಾರ್ಮಿಕರು, ಇನ್ಯಾವುದೇ, ಸರ್ಕಾರಿ ಅಥವಾ ಖಾಸಗಿ ನೌಕರರು ಈ ವರ್ಗಕ್ಕೆ ಸೇರುತ್ತಾರೆ. 
ಅವರ ಹಂಬಲ ಏನೇ ಇರಲಿ, ಹೀಗೆ ಪ್ರಾಮಾಣಿಕವಾಗಿ ತೊಂದರೆ, ನಷ್ಟಗಳನ್ನು  ಎಣಿಸದೆ ಪರೋಪಕಾರವನ್ನು ಮಾಡುವ ಜನರು ಸಮಾಜದಲ್ಲಿ ಇನ್ನೂ ಇದ್ದಾರೆ. ಇದರಲ್ಲೂ,  ಕೆಲವರು ಹೆಚ್ಚು ಪ್ರಚಾರಕ್ಕೆ ಬಂದು ಸಾರ್ವಜನಿಕ ಸನ್ಮಾನ, ಶ್ಲಾಘನೆಗೆ ಒಳಗಾಗುತ್ತಾರೆ. ಇನ್ನು ಕೆಲವರು ಅಂತಹ ಬಹಿರಂಗ ಗೌರವ ದೊರಕದಿದ್ದರೂ  ಜನರ ಅಂತರಂಗದ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. 
ಒಂದು ದೃಷ್ಠಿಯಲ್ಲಿ ಕೀರ್ತಿ ಕಾಮನೆ ಮನುಷ್ಯನ ಒಂದು ಬಗೆಯ ಸ್ವಾರ್ಥ ಎನ್ನಿಸುತ್ತದೆ. ಆದರೆ ಸಂಪೂರ್ಣವಾಗಿ  ಸ್ವಾರ್ಥದ ಬದುಕಿನಲ್ಲಿಯೇ   ಮುಳುಗಿದವರನ್ನು ಕಂಡಾಗ `ಕೀರ್ತಿ ಕಾಮನೆ' ಯಂತಹ ಸ್ವಾರ್ಥದ ಸಾಧನೆಯಲ್ಲೂ ಪರಾರ್ಥದ ಸಾರ್ಥಕತೆ ಇದೆ  ಎನ್ನುವುದು ಮೆಚ್ಚುವಂತಹ ಸಂಗತಿ. 
ಒಂದು ವಿಪರ್ಯಾಸದ  ವಿಷಯವೆಂದರೆ, ಒಳ್ಳೆಯ ಕೆಲಸಗಳಿಂದಲೂ ಒಬ್ಬ ವ್ಯಕ್ತಿ ಪ್ರಚಾರಲ್ಲಿರುತ್ತಾನೆ. ಹಾಗೆಯೇ  ಕೆಟ್ಟ ಕೆಲಸಗಳಿಂದಲೂ ಮತ್ತೊಬ್ಬ ವ್ಯಕ್ತಿ ಪ್ರಚಾರದಲ್ಲಿಯೇ  ಇರುತ್ತಾನೆ. ಆದರೆ ಒಬ್ಬನದು ಸತ್ಕೀರ್ತಿ. ಇನ್ನೊಬ್ಬನದು  ದುಷ್ಕೀರ್ತಿ. 


ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊ : 9481968771

1 comment:

  1. ಹೌದು, ಮನುಷ್ಯನ ಆಸೆಗಳಿಗೆ ಕೊನೆ ಬರುವುದು ಸಾವು ಬಂದಾಗ ಮಾತ್ರ.....

    ಬದುಕಿರುವಷ್ಟೂ ದಿನ ಒಂದಲ್ಲಾ ಒಂದು ಆಸೆ ಪೂರೈಸುವತ್ತಲೆ ಎಲ್ಲರ ಚಿತ್ತ. ಯಾರೂ ಇದಕ್ಕೆ ಹೊರತಲ್ಲ....
    ಎಲ್ಲಾ ಬಿಟ್ಟ ಸನ್ಯಾಸಿಗಳಿಗೂ ಕೀರ್ತಿ ಶನಿ ಅಂಟಿದೆ......!!!!!!!!!

    ReplyDelete

Note: only a member of this blog may post a comment.