Monday 7 April 2014

ಹಬ್ಬದ ಹಾಡು -ದಿನದ ಮಾತು


ದಿನದ ಮಾತು :

ಒಂದನೆಯ ಕಂತು :
ಹಬ್ಬದ ಹಾಡು.ಇದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಸುವಂತಹ ಒಂದು ಸಾಂಪ್ರದಾಯಿಕ ಪದ್ಧತಿ.ಇದಕ್ಕೆ ಬಿಂಗಿಪದ್ಯ, ಅಂಟಿಕೆಪಂಟಿಕೆ ಎಂತಲೂ ಕರೆಯುತ್ತಾರೆ.ಹಳ್ಳಿಗಳಲ್ಲಿ, ಹೆಚ್ಚಾಗಿ ಮಲೆನಾಡಿನಲ್ಲಿ ಮಾತ್ರ ಇದರ ಆಚರಣೆಯನ್ನು ಕಾಣುತ್ತೇವೆ. ಇದರ ಆಚರಣೆಯ ಕ್ರಮ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಈ ರೀತಿ ದೀಪ ಹಚ್ಚುವ ಸಮುದಾಯಗಳಲ್ಲೂ ಅದರ ಆಚರಣೆಯ ಆಸಕ್ತಿ ಕಡಿಮೆಯಾಗಿದೆ.

ಈ ಪದ್ಧತಿಯು ಧಾರ್ಮಿಕ ಮತ್ತು ಸಾಂಸ್ಕ್ರತಿಕ ನೆಲೆಯನ್ನು ಹೊಂದಿದೆ. ಗ್ರಾಮಾಧಿದೇವತೆಯ ದೀಪವನ್ನು ಊರಿನ ಮತ್ತು ನೆರೆ ಊರಿನ ಮನೆಗಳಿಗೆ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಕೊಡುವುದು ಈ ಸಂಪ್ರದಾಯದ ಮುಖ್ಯ ಉದ್ದೇಶ. ಒಂದು ಊರಿನ ಜನ ಕನಿಷ್ಠ 8 - 10 ಮಂದಿಯ ಒಂದು ತಂಡವಾಗಿ ಮನೆ ಮನೆಗೆ ಹೋಗುತ್ತಾರೆ.ಪುರಾಣದ ಕತೆಗಳನ್ನೊಳಗೊಂಡ ಹಾಡುಗಳನ್ನು ಜನಪದ ಶೈಲಿಯಲ್ಲಿ ಹಾಡುತ್ತ ಹೋಗುತ್ತಾರೆ. ಹಸಲರು,ಮಡಿವಾಳರು, ಒಕ್ಕಲಿಗರು,ದೀವರು [ನಾಯ್ಕರು].... ಹೀಗೆ ಜನಪದರು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದಾರೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಊರಿಗೆ ಒಂದೇ ತಂಡ ದೇವರ ದೀಪವನ್ನುಹಚ್ಚಬೇಕು ಎನ್ನುವ ರಿವಾಜು ಇದೆ. ಆ ದೀಪವನ್ನು ಎಲ್ಲರೂ ಹಿಡಿಯುವಂತಿಲ್ಲ. ಅದಕೆಂದೇ ಊರಿನಲ್ಲಿ ಲಾಗಾಯ್ತಿನಿಂದ ಒಂದು ಕುಟುಂಬವನ್ನು ಗ್ರಾಮದ ನಿಯಮದಂತೆ ಹೆಸರಿಸಲಾಗಿರುತ್ತದೆ.ಆ ಕುಟುಂಬದ ಯಜಮಾನನೆ ದೀಪವನ್ನು ಹಿಡಿಯಬೇಕಾದದ್ದು ಸಂಪ್ರದಾಯ. ಒಮ್ಮೆ ಆ ಯಜಮಾನನಿಗೆ ಅಶೌಚ [ಸತ್ತ ಸೂತಿಕ ಅಥವಾ ಹುಟ್ಟಿದ ಅಮೆ] ಬಂದರೆ ಆ ವರ್ಷವೊಂದೆ ಅಲ್ಲ . ಆ ವರ್ಷವೂ ಸೇರಿ ಒಟ್ಟು ಮುಂದಿನ ಮೂರು ವರ್ಷಗಳು ದೀಪ ಹಚ್ಚುವ ಹಾಗಿಲ್ಲ.

-------- ಇದು ಬಹಳ ದೀರ್ಘವಾದ ಮತ್ತು ಆಸಕ್ತಿಯುತ ವಿಚಾರ. ಮುಂದಿನ ಮಾಹಿತಿ ಎರಡನೆಯ ಕಂತಿನಲ್ಲಿ ನೋಡಿ.


ದಿನದ ಮಾತು :

ಹಬ್ಬದ ಹಾಡು : ಎರಡನೆಯ ಕಂತು .

ದೇವರ ದೀಪ ಹಚ್ಚಲಿಕ್ಕೆಂದೇ ಒಂದು ವ್ಯವಸ್ತೆ ಇರುತ್ತದೆ.ದೀಪ ಹಚ್ಚುವ ಪಾತ್ರೆ ಸುಮಾರು ೩೦ ಸೆಂಟಿಮೀಟರು ಅಗಲಕ್ಕಿದ್ದು ಅಂದಾಜು ೩ ಲೀಟರು ದೀಪದ ಎಣ್ಣೆ ಹಿಡಿಯುವಷ್ಟು ದೊಡ್ಡದಿರುತ್ತದೆ. ಇದು ಮಣ್ಣಿನ ಗಡಿಗೆಯದು.ಇದಕ್ಕೆ ಹಬ್ಬದ ದೀಪದ ಹಣತೆ ಎನ್ನುತ್ತಾರೆ.ದೀಪ ಹಿಡಿಯುವ ಯಜಮಾನನ ಅಜ್ಜ,ಮುತ್ತಜ್ಜನ ಕಾಲದಿಂದ ಬಾಳಿಸಿ ಕಾಯ್ದು ಇಟ್ಟುಕೊಂಡು ಬಂದಿದ್ದು ಇದು.ನೂರಾರು ವರುಷಗಳಷ್ಟು ಹಿಂದಿನದು.ಇದನ್ನು ಆ ಯಜಮಾನನ ಮನೆಯಲ್ಲಿಯೇ ಜಾಗರೂಕತೆಯಿನ್ದ ಕಾಯ್ದಿಡಲಾಗುತ್ತದೆ.ದೀಪ ಹಚ್ಚುವ ಹಬ್ಬದ ಸಂದರ್ಭದಲ್ಲಿ ಮಾತ್ರ ಅದನ್ನು ಹೊರತೆಗೆಯಲಾಗುತ್ತದೆ. ಆ ದೀಪ ಉರಿಯಲಿಕ್ಕೆ ಬೇಕಾಗುವಂತಹ ಹತ್ತಿಯ ಉದ್ದನೆಯ ಮತ್ತು ದೀಪ ಸುಲಭದಲ್ಲಿ ಆರಿಹೋಗದ ಹಾಗೆ ದಪ್ಪನೆಯ ಬತ್ತಿ [ಓರತಿ] ಹಾಗೂ ಇದಕ್ಕೆ ಪೂರಕವಾದ ಇನ್ನಿತರೆ ಸರಂಜಾಮುಗಳಿರುತ್ತವೆ.ಈ ವಸ್ತುಗಳೆಲ್ಲ ದೀಪ ಹಿಡಿಯುವ ಯಜಮಾನನ ಮನೆಯಲ್ಲಿಯೇ ಕಾಯಿದಿಡಲಾಗುತ್ತದೆ.

ದೀಪಾವಳಿಯ ದಿನ ಸಂಜೆ .ಹಾಡು ಹೇಳುವ ತಂಡದವರು ಸೇರಿ ಆ ಊರಿನ ಗ್ರಾಮಾಧಿದೇವತೆಯ ದೇವಸ್ಥಾನದಲ್ಲಿ ದೇವರಿಗೆ ಪೂಜೆ, ಮಂಗಳಾರತಿ ಮಾಡಿಸಿ ತಮ್ಮ ದೀಪದ ಪಾತ್ರೆಗೆ ಆ ದೇವರ ದೀಪವನ್ನು ಹೊತ್ತಿಸಿಕೊಳ್ಳುತ್ತಾರೆ. ನಂತರ ಆ ದೇವ ಎದುರಿಗೆ ಹಬ್ಬದ ಹಾಡುಗಳನ್ನು ಹಾಡುತ್ತಾರೆ. ಅದು ಒಂದು ಪವಿತ್ರವಾದ ಜ್ಯೋತಿಯೆಂದು ಪರಿಗಣಿಸಲಾಗುತ್ತದೆ. ದೀಪಾವಳಿ ಹಬ್ಬದ ದಿನದಿಂದ ಸತತ ಮೂರು ರಾತ್ರಿಯವರೆಗೆ ದೀಪ ಒಯ್ಯಲಾಗುತ್ತದೆ.ಮೂರು ರಾತ್ರಿ ಕಳೆದು ನಾಲ್ಕನೆಯ ದಿನದ ಬೆಳಿಗ್ಯೆ ಮುಂಜಾನೆ ಯಾವ ದೇವಸ್ಥಾನದ ದೇವರಿಂದ ದೀಪ ತೆಗೆದುಕೊಂಡು ಹಚ್ಚಿಕೊಳ್ಳಲಾಗಿತ್ತೊ ಅದೇ ದೇವರ ದೀಪಕ್ಕೆ ಮರಳಿ ಆ ದೀಪವನ್ನು ಸೇರಿಸಬೇಕಾದದ್ದು ಗ್ರಾಮದ ಕಟ್ಟಳೆ. ದೀಪವನ್ನು ಸೇರಿಸುವ ಮೊದಲು ದೇವರ ಎದುರಿಗೆ ಹಾಡಲಾಗುತ್ತದೆ. ದೀಪ ಕೊಡುವ ಸಂದರ್ಭದಲ್ಲಿ ಒಟ್ಟಾದ ಹಣ,ಎಣ್ಣೆ, ಇತರೆ ವಸ್ತುಗಳನ್ನು ಆ ದೇವರಿಗೆ ವಿನಿಯೋಗಿಸಲಾಗುತ್ತದೆ..ಅದೇ ಸಮ್ಪನ್ಮೂಲವನ್ನು ಬಳಸಿ ಆ ದೇವರಿಗೆ ಅದೇ ಕಾರ್ತಿಕ ಮಾಸದಲ್ಲಿ ಒಂದು ದಿನ ಕಾರ್ತಿಕೋತ್ಸವವನ್ನು ಮಾಡಲಾಗುತ್ತದೆ ಆ ಮೂರು ದಿನದ ಅವಧಿಯಲ್ಲಿ ದೀಪ ಹಗಲು - ರಾತ್ರಿ ಆರುವ ಹಾಗಿಲ್ಲ. ಹಾಗೆ ಆರಿದರೆ ದೀಪ ಹಚ್ಚಿದ ಇಡೀ ಊರಿಗೆ ಕೇಡು ಬರುತ್ತದೆಯೆಂದು ನಂಬಲಾಗಿದೆ.ಹೀಗೆ ಹಬ್ಬದ ದಿನ ಸಂಜೆ ದೇವರ ದೀಪ ದೇವಸ್ಥಾನದಿಂದ ಹೊರಗೆ ಹೊರಡುತ್ತದೆ.ಅಲ್ಲಿಂದ ಹೊರಟಿದ್ದು ಮೊದಲು ತಮ್ಮ ಊರಿನ ಎಲ್ಲ ಮನೆಗಳಿಗೆ ಹೋಗುತ್ತದೆ.ಪ್ರತಿ ಮನೆಯನ್ನು ಬಾಗಿಲು ತೆಗಸಿ ಆ ಮನೆಯವರಿಗೆ ದೇವರ ದೀಪವನ್ನು ಕೊಡಲಾಗುತ್ತದೆ.ಬಹಳ ಮನೆಗಳಿದ್ದರೆ ಒಂದು ಊರಿಗೆ ಒಂದು ರಾತ್ರಿ ಕಳೆಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾತ್ರಿ ಮಾತ್ರ ದೀಪವನ್ನು ಒಯ್ಯಲಾಗುತ್ತದೆ. ಬೆಳಗಾದ ಕೂಡಲೆ ದೀಪ ಕೊಡುವುದನ್ನು ನಿಲ್ಲಿಸುತ್ತಾರೆ.ನಂತರ ಅಂದು ದೀಪ ಪುನಃ ದೀಪ ಹಿಡಿದ ಯಜಮಾನನ ಮನೆಗೆ ಬರಬೇಕು.ಮತ್ತೆ ಸಂಜೆಯಾಗುವವರೆಗೂ ಅದು ಆರದ ಹಾಗೆ ಯಜಮಾನನ ಮನೆಯವರು ಆಗಾಗ್ಯೆ ಓರತಿಯನ್ನು ಮುಂದೆ ಹಾಕುತ್ತ ,ಪಾತ್ರೆಗೆ ಎಣ್ಣೆ ಹಾಕುತ್ತಾ ಜಾಗರೂಕತೆ ವಹಿಸುತ್ತಾರೆ.ಗಾಳಿಯಿಂದ ಆರದ ಹಾಗೆ ಮರೆ ಮಾಡಿರುತ್ತಾರೆ. ಇದು ಹಿಂದಿನ ಪದ್ಧತಿ.ಆದರೆ ಆ ಸಮುದಾಯದ ಇಂದಿನ ಯುವಕರು ಅಂತಹ ತೊಂದರೆಯನ್ನು ತೆಗೆದುಕೊಳ್ಳಲಿಕ್ಕೆ ಇಷ್ಟಪಡುವುದಿಲ್ಲ.ಆದ್ದರಿಂದ ಬೆಳಿಗ್ಯೆ ಯಜಮಾನನ ಮನೆಗೆ ದೀಪ ಮರಳಿ ಬಂದಕೂಡಲೆ ಮನೆಯೊಳಗೆ ಒಂದು ಕಡೆ ದಪ್ಪ ಕಟ್ಟಿಗೆಗಳನ್ನಿಟ್ಟು ಅದಕ್ಕೆ ಆ ದೀಪವನ್ನು ಹೊತ್ತಿಸುತ್ತಾರೆ.ಹೀಗೆ ಹಗಲು ಸಮಯದಲ್ಲಿ ಮೂರುದಿನ ದೀಪವನ್ನು ಬೆಂಕಿಯಾಗಿ ಪರಿವರ್ತಿಸುತ್ತಾರೆ.ಆದರೆ ಆ ಬೆಂಕಿ ಎಷ್ಟೊತ್ತಿಗೂ ಆರದ ಹಾಗೆ ನಿಗಾ ವಹಿಸುತ್ತಾರೆ.ಇಲ್ಲಿ ಅವರು ಅನುಸರಿಸುವ ಸಂಪ್ರದಾಯವೆಂದರೆ ಆ ಬೆಂಕಿಯನ್ನು ಬಾಯಿಯ ಉಸುರಿನಿಂದ ಊದಿ ಉರಿಯುವ ಹಾಗೆ ಮಾಡುವ ಹಾಗಿಲ್ಲ.ಅದಕ್ಕೆ ಅಡಿಕೆ ಹಾಳೆಯ ಅಥವಾ ರೊಟ್ಟಿನ ಬೀಸಣಿಗೆಯನ್ನು ಬೀಸಿ ಉರಿಯನ್ನು ಆರದ ಹಾಗೆ ಬೆಳಿಗ್ಯೆಯಿಂದ ಸಂಜೆಯವರೆಗೂ ಒಬ್ಬೊಬ್ಬರು ಪಾಳಿಯಂತೆ ಗಮನ ಹರಿಸುತ್ತಿರುತ್ತಾರೆ.

-------- ಮುಂದಿನ ವಿಷಯ ಮೂರನೆಯ ಕಂತಿನಲ್ಲಿ.-------

ದಿನದ ಮಾತು :

ಹಬ್ಬದ ಹಾಡು : ಮೂರನೆಯ ಕಂತು.:

ದೀಪಾವಳಿ ಹಬ್ಬದ ದಿನದಿಂದ ಮುಂದಿನ ಮೂರು ದಿನಗಳಲ್ಲಿ ಪ್ರತಿದಿನ ಸಂಜೆ ಕಪ್ಪಾದ ನಂತರ ಹಬ್ಬ ಹಾಡುವವರ ದೀಪದ ತಂಡ ಹೊರಡುತ್ತದೆ.ಮೊದಲು ತಮ್ಮ ಊರಿಗೆ ದೀಪ ಕೊಟ್ಟು ನಂತರ ಆ ಮೂರು ದಿನಗಳ ಅವಧಿಯಲ್ಲಿ ಎಷ್ಟು ಆಗುತ್ತದೆಯೋ ಅಷ್ಟು ಪಕ್ಕದ ಊರುಗಳಿಗೆ ದೀಪ ಕೊಡಲು ಹೋಗುತ್ತಾರೆ.ಹೀಗೆ ಸಾಗುವಾಗ ಕೆಲವು ನಿರ್ಬಂಧಗಳಿವೆ. ಈ ಮೊದಲೇ ತಿಳಿಸಿದಂತೆ ದೀಪ ಹಿಡಿಯುವ ಯಜಮಾನನಿಗೆ ಅಶೌಚ ಬಂದರೆ ಅದನ್ನು ಹಚ್ಚುವ ಪ್ರಸಂಗವೇ ಇಲ್ಲ. ಆದರೆ ತಂಡದಲ್ಲಿ ಪಾಲ್ಗೊಳ್ಳುವ ಯಾವುದೇ ವ್ಯಕ್ತಿಗೆ ಅಶೌಚ ಬಂದಿರಬಾರದು. ಹಾಗೆ ಬಂದಿದ್ದರೆ ಅಂಥವನು ತಂಡಕ್ಕೆ ಸೇರಿಕೊಳ್ಳುವ ಹಾಗಿಲ್ಲ.ಇದನ್ನುಳಿದು ಊರಿನ ಆ ಸಮುದಾಯದ ಪ್ರತಿ ಕುಟುಂಬದ ಸದಸ್ಯನೂ ತಂಡದಲ್ಲಿ ಭಾಗವಹಿಸಬೇಕೆಂಬ ನಿಯಮವಿದೆ.ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಕೆಲವರಿಗೆ ವಿನಾಯಿತಿ ಇರುತ್ತದೆ.ಎರಡನೆಯ ನಿರ್ಬಂಧವೆಂದರೆ ಎದುರು ದೀಪ ಬರುವ ಹಾಗಿಲ್ಲ. ಅಂದರೆ ಇವರಂತೆಯೇ ಇವರ ಪಕ್ಕದ ಊರಿನವರು ಅಥವಾ ದೂರದ ಬೇರೆ ಊರಿನವರು ಇದೇರೀತಿ ದೀಪ ಹಚ್ಚಿ ಬರುವ ಸಂಪ್ರದಾಯವನ್ನು ಇಟ್ಟುಕೊಂಡಿರುತ್ತಾರೆ. ಇವರು ತಮ್ಮ ಗ್ರಾಮದ ದೇವರ ದೀಪವನ್ನು ಒಯ್ಯುತ್ತಿರುವಾಗ ದಾರಿಯ ಮಧ್ಯದಲ್ಲಿ ಮತ್ತೊಂದು ತಂಡದವರ ದೇವರ ದೀಪ ಎದುರಾಗಿ ಬರಬಾರದು. ಇಲ್ಲವೇ ಇವರ ದೀಪ ಅವರ ದೀಪಕ್ಕೆ ಎದುರಾಗಬಾರದು.ಇದು ವಿರೋದಾಭಾಸದ ಲಕ್ಷಣ ಎಂದು ಭಾವಿಸಲಾಗುತ್ತದೆ.ಹೀಗೆ ಎದುರು ದೀಪವಾದರೆ ಎರಡೂ ತಂಡದ ಇಡಿಯ ಊರಿಗೆ ಕೇಡು ಬರುತ್ತದೆಯೆಂದು ನಂಬಲಾಗಿದೆ. ಅದಕ್ಕಾಗಿಯೇ ದಾರಿಯಲ್ಲಿ ಸಾಗುವಾಗ ದಾರಿಯುದ್ದಕ್ಕೂ ಯಾವುದೇ ತಂಡದವರು ಒಂದು ಕ್ರಮದಲ್ಲಿ ಕೂಗು ಹಾಕುತ್ತಾ ಹೋಗುತ್ತಾರೆ.ತಂಡದ ಮುಖ್ಯ ಹಾಡುಗಾರನು "ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೋ " ಅಥವಾ ಕೆಲವು ಕಡೆ " ಡ್ವಮ್ಸಾಲ್ ಹೊಡಿರಣ್ಣ ಡಮ್ಸಾಲ್ ಹೊಡಿರೊ " ಎಂದು ದೊಡ್ಡದಾಗಿ ರಾಗವಾಗಿ ಹೇಳುತ್ತಾನೆ . ತಂಡದ ಇತರರು ಬಹಳ ದೊಡ್ಡದಾಗಿ ಬಲು ದೂರ ಕೇಳುವ ಹಾಗೆ "ಹುಯ್ಯೋ " ಎನ್ನುತ್ತಾರೆ.ಇದರಿಂದಾಗಿ ಸನಿಹದಲ್ಲೇ ದೀಪದ ತಂಡವೊಂದು ತಮ್ಮ ದಾರಿಯೆದುರಿನಿಂದ ಬರುತ್ತಿದೆಯೆಂದು ಮತ್ತೊಂದು ತಂಡಕ್ಕೆ ದೂರದಲ್ಲಿಯೆ ಅರಿವಾಗುತ್ತದೆ. ಆಗ ಯಾವುದಾದರೊಂದು ತಂಡ ಮತ್ತೊಂದು ದಾರಿಯತ್ತ ಹೀಗೆಯೆ ಕೂಗುತ್ತ ಮುಂದೆ ಸಾಗುತ್ತದೆ.ಮತ್ತೊಂದು ತಂಡ ಬೇರೆ ದಾರಿಯಲ್ಲಿ ಹೋಗಿದ್ದನ್ನು ಗಮನಿಸಿ ಈ ತಂಡ ತನ್ನ ದಾರಿಯಲ್ಲಿ ಮುಂದೆ ಸಾಗುತ್ತದೆ .ಇದರಿಂದಾಗಿ ಎದುರು ದೀಪವಾಗುವುದನ್ನು ಎರಡೂ ತಂಡದವರು ಪರಸ್ಪರ ತಪ್ಪಿಸಿಕೊಳ್ಳುತ್ತಾರೆ.

      ಒಂದು ಊರು ಉದ್ದನೆಯ ಸಾಲುಗೇರಿಯಾಗಿರುತ್ತದೆ.ಆ ಊರಿಗೆ ಒಂದು ತಂಡ ಊರಿನ ಒಂದು ತುದಿಯಿಂದ ಪ್ರವೇಶ ಮಾಡಿರುತ್ತದೆ. ಮತ್ತೊಂದು ತಂಡ ಮತ್ತೊಂದು ತುದಿಯಿಂದ ಅದೇ ಊರಿಗೆ ಪ್ರವೇಶ ಮಾಡುತ್ತದೆ. ಒಂದು ತಂಡ ಆ ಊರಿಗೆ ಪ್ರವೇಶ ಮಾಡಿದ್ದು ಮತ್ತೊಂದು ತಂಡಕ್ಕೆ ಗೊತ್ತಿರುವುದಿಲ್ಲ. ಆದರೆ ಎರಡೂ ತಂಡದವರು ಸನಿಹ,ಸನಿಹ ಬಂದ ಕೂಡಲೆ ಮತ್ತೊಂದು ತಂಡ ಹಾಡು ಹಾಡುತ್ತಿರುವುದು ಇನ್ನೊಂದು ತಂಡಕ್ಕೆ ಕೇಳುತ್ತದೆ.ಹೀಗೆಯೆ ಮುಂದುವರೆದರೆ ಎದುರುದೀಪವಾಗುತ್ತದೆ. ಆದ್ದರಿಂದ ಅದರಲ್ಲಿ ಯಾವುದಾದರೊಂದು ತಂಡದವರು ಆ ಊರಿನ ಒಂದು ಮನೆಯೊಳಗೆ ಕುಳಿತುಕೊಂಡು ಆ ಮನೆಯ ಬಾಗಿಲು ಮುಚ್ಚಿಸಿಕೊಳ್ಳುತ್ತಾರೆ. ಆ ಮನೆಯೊಂದನ್ನು ಬಿಟ್ಟು ಮುಂದೆ ದಾಟಿ ಹೋಗುವಂತೆ ಮತ್ತೊಂದು ತಂಡಕ್ಕೆ ಸೂಚನೆಯನ್ನು ಕಳಿಸುತ್ತಾರೆ. ಆ ತಂಡದವರು ಹಾಗೆಯೇ ಮಾಡುತ್ತಾರೆ.ಆ ನಂತರದಲ್ಲಿ ಈ ತಂಡದವರು ತಮ್ಮ ಮುಂದಿನ ಮನೆಗೆ ದಾಟುತ್ತಾರೆ.ಅಂತೆಯೇ ಮುಂದೆ ಸಾಗುತ್ತಾರೆ.ನಂತರ ಮನೆಯೊಂದನ್ನು ಬಿಟ್ಟು ದಾಟಿ ಈಚೆ ಮುಂದೆ ಸಾಗಿದ ತಂಡ ಮರಳಿ ಬಂದು ಬಿಟ್ಟ ಮನೆಯನ್ನು ಪ್ರವೇಶಿಸಿ ದೇವರ ದೀಪವನ್ನು ಕ್ರಮದಂತೆ ಅವರಿಗೆ ಕೊಟ್ಟು ತನ್ನ ದಾರಿಯಲ್ಲಿ ಪುನಃ ಸಾಗುತ್ತದೆ.ಈ ಕ್ರಮದಲ್ಲಿ ಎದುರುದೀಪವಾಗುವುದನ್ನು ಇಲ್ಲಿ ತಪ್ಪಿಸಲಾಗುತ್ತದೆ.

======ಮುಂದಿನ ವಿಷಯ ನಾಲ್ಕನೆಯ ಕಂತಿನಲ್ಲಿ.======

ದಿನದ ಮಾತು :

ಹಬ್ಬದ ಹಾಡು :ನಾಲ್ಕನೆಯ ಕಂತು :

ದೀಪಾವಳಿಯ ದೀಪವನ್ನು ಮನೆಮನೆಗೆ ಕೊಡುವಾಗ ಕೆಲವು ರಿವಾಜುಗಳಿವೆ.ಅಶೌಚ [ ಜನ್ಮಾಶೌಚ ಮತ್ತು ಮರಣಾಶೌಚಗಳೆರಡು ] ಇರುವ ಮನೆಗಳಿಗೆ ದೀಪ ಕೊಡುವ ಹಾಗಿಲ್ಲ.ತಂಡದವರ ಸ್ವಂತ ಊರಿನಲ್ಲಿಯಾದರೆ ಯಾರಯಾರ ಮನೆಗೆ ಅಶೌಚ ಬಂದಿದೆಯೆಂದು ಮೊದಲೇ ಗೊತ್ತಿರುತ್ತದೆ. ಅಂಥವರ ಮನೆ ಮಧ್ಯೆ ಸಿಕ್ಕಿದರೂ ಆ ಮನೆಯನ್ನು ಬಿಟ್ಟು ಮುಂದಿನ ಮನೆಗೆ ಅವರು ಸಾಗುತ್ತಾರೆ. ಯಾರದ್ದೇ ಮನೆಯನ್ನು ಪ್ರವೇಶಿಸುವ ಮೊದಲು ಆ ಮನೆಗೆ ಮಾವಿನ ಎಲೆಯ ತೋರಣ ಕಟ್ಟಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸುತ್ತಾರೆ. ಹಬ್ಬದ ದಿನ ಹಿನ್ದೂಗಳ ಮನೆಗಳಲ್ಲಿ ಈ ರೀತಿಯ ತೋರಣಗಳನ್ನು ಕಟ್ಟುವುದು ಸಂಪ್ರದಾಯ ತಾನೆ.ಕಟ್ಟಲಿಲ್ಲವೆನ್ದಾದರೆ ಮನೆಗೆ ಬೀಗ ಹಾಕಲಾಗಿದೆಯೋ ಎಂಬುದನ್ನು ಗಮನಿಸುತ್ತಾರೆ.ಬೀಗವನ್ನು ಹಾಕಲಿಲ್ಲ, ತೋರಣವನ್ನು ಕಟ್ಟಲಿಲ್ಲವೆಂದಾದರೆ ಆ ಮನೆಗೆ ಅಶೌಚ ಬಂದಿದೆ ಎಂತಲೇ ಅರ್ಥ. ತೋರಣ ಕಟ್ಟದೆ ಬೀಗ ಹಾಕಿದ್ದರೆ ಆ ಮನೆಯವರು ಊರಲ್ಲಿಲ್ಲವೆನ್ದು ಭಾವಿಸಿ ಅವರ ಮನೆ ಬಾಗಿಲಮೇಲೆ ಹತ್ತಿಯ ಓರತಿಯಿಂದ ಹಚ್ಚಿದ ದೀಪವನ್ನು ಇಟ್ಟು ಮುಂದೆ ಸಾಗುತ್ತಾರೆ.ಅಶೌಚ ಬಂದು ಒಮ್ಮೆ ಅವರು ದೂರ ಹೋಗಿದ್ದರೆ ದೋಷ ತಮಗೆ ತಟ್ಟುವುದಿಲ್ಲವೆಂಬುದು ತಂಡದವರ ಭಾವನೆ. ಏಕೆಂದರೆ ಅಶೌಚವಿಲ್ಲದ ಮನೆಗೆ ದೀಪ ಕೊಡದೆ ಮುಂದೆ ಹೋಗುವುದು ಅಪರಾಧವಾಗುತ್ತದೆ. ದಾರಿಯ ಮಧ್ಯದಲ್ಲಿ ಯಾವುದಾದರು ಅಹಿಂದುವಿನ ಮನೆ ಸಿಕ್ಕರೆ ಆ ಮನೆಯವರು ದೀಪವನ್ನು ಬಯಸಿದರೆ,ಅಂಥವರು ತಮ್ಮ ರಿವಾಜಿನೊಳಗೆ ಇದ್ದರೆ ಅವರಿಗೂ ತಮ್ಮ ಕ್ರಮದಂತೆ ದೀಪವನ್ನು ಕೊಡುತ್ತಾರೆ.ಹಳ್ಳಿಯ ಸಾಮುದಾಯಿಕ ಜೀವನದಲ್ಲಿ ಅನೇಕ ಹಿಂದೂ ಮನೆಗಳ ಮಧ್ಯದಲ್ಲಿ ಒಂದೆರಡು ಅಹಿಂದು ಮನೆಗಳಿದ್ದರೆ ಅವರೂ ತಮ್ಮ ಬಾಹ್ಯ ಜೀವನದಲ್ಲಿ ಹಿಂದೂಗಳಿಗೆ ಹೊಂದಿಕೊಂಡೇ ಇರಬೇಕಾಗುತ್ತದೆ.ಈ ಮಾತು ಎಲ್ಲಾ ಜನಾಂಗಕ್ಕೂ ಅನ್ವಯಿಸುತ್ತದೆ. ಹೀಗೆ ಪಕ್ಕದ ಊರಿನ ಮೊದಲ ಮನೆಯಾಗಿ ಒಮ್ಮೆ ತೋರಣ ಕಟ್ಟದಿರುವುದನ್ನು ಗಮನಿಸದೆ ತಂಡದವರು ಒಳಪ್ರವೇಶಿಸುದನ್ನು ಕಂಡಕೂಡಲೆ ತಮಗೆ ಅಶೌಚವಿದೆ ಮುಂದೆ ಸಾಗಿ ಎಂದು ಆ ಮನೆಯವರು ಹೇಳಬೇಕು. ಆ ಊರಿನಲ್ಲಿ ಮುಂದೆ ಯಾರಯಾರ ಮನೆಗಳಲ್ಲಿ ಅಶೌಚವಿದೆಯೆಂದು ಆ ಮನೆಯಿಂದಲೇ ತಂಡದವರು ತಿಳಿದುಕೊಳ್ಳುತ್ತಾರೆ.ಅಂಥವರ ಮನೆಗೆ ಮುದ್ದಾಂ ದೀಪವನ್ನು ಕೊಡುವುದಿಲ್ಲ. ಇದೊಂದು ವಿಚಾರವನ್ನು ಹೊರತುಪಡಿಸಿ ತಾವು ಪ್ರಾರಂಭಿಸಿದ ಊರಿನಲ್ಲಿ ಯಾವುದೇ ಮನೆಗೆ ದೀಪ ಕೊಡದೆ ಮುಂದೆ ಹೋಗುವ ಹಾಗಿಲ್ಲ. ಪರಿಧಿಯಲ್ಲಿ ಸಿಗುವ ಯಾವುದಾದರು ಮನೆಗೆ ಬೀಗ ಹಾಕಿದ್ದಲ್ಲಿ ಆ ಮನೆಯ ಎದುರು ಬಾಗಿಲ ಹೊಸ್ತಿಲ ಮೇಲೆ ದೀಪವನ್ನಿಟ್ಟು ಮುಂದೆ ಸಾಗಬೇಕು. ಅಸ್ಪ್ರಶ್ಯತೆಯ ಮನೋಭಾವ ಯಾರಿಗೂ ಬಿಟ್ಟಿದ್ದಲ್ಲ. ಆ ಅವಹೇಳನಕ್ಕೆ ಗುರಿಯಾದದ್ದು ಕೇವಲ ಬ್ರಾಹ್ಮಣರಷ್ಟೇ. ಎಲ್ಲ ಜಾತಿಯವರೂ ತಮಗಿಂತ ಅತ್ತ್ಯಂತ ಕೆಳಗಿನ ಜಾತಿಯವರನ್ನು ಅಸ್ಪರ್ಶರೆಂದೆ ಪರಿಗಣಿಸುತ್ತಾರೆ.ಹೀಗೆ ದೀಪ ಹಿಡಿದು ಹೊರಟ ತಂಡದರಿಗೆ ಅಸ್ಪರ್ಶ್ಯರಾದ ಯಾವುದಾದರು ಮನೆಗಳು ತಮ್ಮ ದಾರಿಯ ಮಧ್ಯೆ ಸಿಕ್ಕರೆ ಅವರನ್ನು ಬಿಟ್ಟು ಮುಂದೆ ಸಾಗುವ ಹಾಗಿಲ್ಲ. ಹಾಗೆ ಸಾಗಿದರೆ ಆ ಮನೆಯವರು ದೇವರ ದೀಪ ತಮಗೆ ಸಿಗದಿದ್ದುದು ಅವಲಕ್ಷಣ ಎಂದು ಭಾವಿಸುತ್ತಾರೆ. ಆ ತಂಡದವರು ಮುಂದೆ ಸಾಗದಂತೆ ತಡೆ ಹಾಕುತ್ತಾರೆ.ಆದ್ದರಿಂದ ಅನಿವಾರ್ಯವಾಗಿ ಆ ತಂಡದವರುತಮ್ಮ ಜಾತಿಯ ಪದ್ಧತಿಯಂತೆ ಅವರ ಮನೆಯ ಒಳಗೆ ಹೋಗದಿದ್ದರೂ ಅವರ ಮನೆಯ ಎದುರು ಬಾಗಲ ಹೊಸ್ತಿಲ ಮೇಲೆ ದೀಪವನ್ನು ಇಟ್ಟು ಹೋಗಲೇಬೇಕು. ದಾರಿಯ ಮಧ್ಯೆ ಅಂಥಹವರದ್ದೆ ಸಾಲುಮನೆಗಳು ಸಿಕ್ಕಿದರೆ ಆ ಕೇರಿಯ ಮುಂದೆ ದಾರಿಯಲ್ಲಿ ತಂಡವು ನಿಧಾನವಾಗಿ ಹಾಡು ಹೇಳುತ್ತ ಮುಂದೆ ಸಾಗುತ್ತಿರುತ್ತದೆ.ಆಗ ಎದುರಿಗೆ ಸಿಕ್ಕುವ ಆಯಾ ಮನೆಯವರು ತಂಡದವರ ಸನಿಹಕ್ಕೇ ಬಂದು ಅವರ ಮನಸ್ಸಿಗೆ ತೋಚಿದಷ್ಟು ಕಾಣಿಕೆಯನ್ನು ಕೊಟ್ಟು ಅವರವರ ಮನೆಗಳಿಗೆ ದೇವರ ದೀಪವನ್ನು ಒಯ್ಯುವುದು ವಾಡಿಕೆ. ಇಲ್ಲಿ ಜಾತೀಯತೆ,ವೈಯುಕ್ತಿಕ ವೈಷಮ್ಯ ಇವಾವುದರ ಸಾಧನೆಯನ್ನು ಮಾಡುವಂತಿಲ್ಲ.ದೀಪಾವಳಿಯ ದೀಪ ಸಕಲರಿಗೂ ಸಲ್ಲಬೇಕೆಂಬುದು ಈ ಸಂಪ್ರದಾಯದ ಘನ ಉದ್ದೇಶ.

====== ಮುಂದಿನ ವಿಷಯ ಐದನೆಯ ಕಂತಿನಲ್ಲಿ ======.


ದಿನದ ಮಾತು :

ಹಬ್ಬದ ಹಾಡು : ಐದನೆಯ ಕಂತು :

ದೀಪಾವಳಿಯ ಹಬ್ಬದ ಹಾಡು ಹಾಡುವ ತಂಡದಲ್ಲಿ ಕನಿಷ್ಠ 8 ರಿಂದ 10 ಮಂದಿ ಇರುತ್ತಾರೆ. ದೀಪವನ್ನು ಹಿಡಿಯುವವನೆ ಈ ತಂಡಕ್ಕೆ ಯಜಮಾನ. ಇವನು ಪಟ್ಟಗಚ್ಚೆ ಹಾಕಿ ಪಂಚೆಯುಟ್ಟಿರುತ್ತಾನೆ.ಕೋಟು,ಪೇಟ ಧರಿಸಿರುತ್ತಾನೆ.ಒಂದು ಕೈಯಲ್ಲಿ ದೀಪ ಮತ್ತೊಂದು ಕೈಯಲ್ಲಿ ರೊಟ್ಟಿನ ಅಥವಾ ಅಡಿಕೆ ಹಾಳೆಯ ಅಗಲನೆಯ ಬೀಸಣಿಗೆಯನ್ನು ಹಿಡಿದಿರುತ್ತಾನೆ.ಗಾಳಿಯಿಂದ ರಕ್ಷಿಸಲು ಸಂದರ್ಭ ಬಂದಾಗ ದೀಪಕ್ಕೆ ಅಡ್ಡವಾಗಿ ಆ ಬೀಸಣಿಗೆಯನ್ನು ಹಿಡಿಯುತ್ತಾನೆ.ಹೆಚ್ಚಾಗಿ ಇವನು ವಯಸ್ಸಿನಲ್ಲಿ ತಂಡದ ಇತರರಿಗಿಂತ ಹಿರಿಯವನಿರುತ್ತಾನೆ.ಕೆಲವು ವರ್ಷಗಳ ಹಿಂದೆ ತಂಡದ ಪ್ರತಿಯೊಬ್ಬರೂ ಕಂಬಳಿಕೊಪ್ಪೆಯನ್ನು ಸೂಡಿಕೊಂಡು ಬರುತ್ತಿದ್ದರು.ಈ ಸಮುದಾಯದ ಹಿಂದಿನ ಜನರು ಈ ಸಂಪ್ರದಾಯದ ಕಟ್ಟಳೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರು.ಈಗಿನ ಯುವಕರಿಗೆ ಅನೇಕ ನಿಯಮಗಳ ಅರಿವೇ ಇಲ್ಲ. ಇದ್ದಷ್ಟನ್ನು ಸರಿಯಾಗಿ ಪಾಲಿಸುವುದಿಲ್ಲ.

ಈ ತಂಡದ ಜನರಲ್ಲಿ ಒಳ್ಳೆಯ ಧ್ವನಿ ಇರುವ ಹಾಗೂ ಹಬ್ಬದ ಹಾಡುಗಳನ್ನು ಬಲ್ಲವ ಒಬ್ಬ ಪ್ರಧಾನ ಹಾಡುಗಾರನಿರುತ್ತಾನೆ ಅವನೊಂದಿಗೆ ಸಾಮಾನ್ಯವಾಗಿ ಅವನಿಗೆ ಹೊಂದಿಕೊಂಡು ಹೇಳುವಂತಹ ಮತ್ತೊಬ್ಬ ಸಹ ಹಾಡುಗಾರನಿರುತ್ತಾನೆ.ಇವರಿಬ್ಬರು ಸೇರಿಯೇ ಹಾಡುತ್ತಾರೆ.ತಂಡದ ಉಳಿದವರು ಅವರು ಹೇಳಿದ ಹಾಡಿನ ಪಲ್ಲವಿಯನ್ನು ಅಥವಾ ಆ ಹಾಡಿನ ಉತ್ತರಾರ್ಧದ ತುದಿಯನ್ನು ಆಯಾ ಹಾಡಿನ ಕ್ರಮಕ್ಕೆ ಅನುಸರಿಸಿ ಹಾಡುತ್ತಾರೆ. ಆದರೆ ಪ್ರಧಾನ ಹಾಡುಗಾರರ ಜೊತೆಗೆ ಅಲ್ಲ.ಅವರು ಹಾಡಿ ಬಿಡುವ ತುಸು ಅರೆಕ್ಷಣದ ಮೊದಲಿಗೆ ಇವರು ಈ ಮೊದಲು ತಿಳಿಸಿದಂತೆ ಹಾಡನ್ನು ಧ್ವನಿಗೂಡಿಸುತ್ತಾರೆ.ಇದಕ್ಕೆ ಸ್ವರಗುಟ್ಟುವುದು ಎನ್ನುತ್ತಾರೆ . ಉದಾಹರಣೆಗೆ, ಪ್ರಧಾನ ಹಾಡುಗಾರರು "ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಳಗೆ ಮಳೆಯೇ ಕರೆದಾವೋ " ಎಂಬ ಸೊಲ್ಲನ್ನು ಹೇಳಿ ಮುಗಿಸಿದರೋ ಇಲ್ಲವೋ ಎನ್ನುವ ಕ್ಷಣದಲ್ಲೇ ಹಿಂದಿನ ಹಾಡುಗಾರರು " ಬರಲೇಳು ಬಲೀನ್ದ್ರನು ರಾಜಾ ಬಂದನು ತನ್ನ ರಾಜ್ಯಕೆ ತಾ " ಎನ್ನುವ ಆ ಹಾಡಿನ ಪಲ್ಲವಿಯನ್ನು ಧ್ವನಿಗೂಡಿಸುತ್ತಾ ಇರುತ್ತಾರೆ.ಈ ಹಾಡಿನ ಪ್ರಥಮದಲ್ಲಿ ಪ್ರಧಾನ ಹಾಡುಗಾರರು ಈ ಪಲ್ಲವಿಯಿಂದಲೇ ಪ್ರಾರಂಭಿಸಿರುತ್ತಾರೆ ಈ ಹಾಡುಗಳಲ್ಲಿ ಜಾನಪದ ಸೊಗಡು ಮತ್ತು ಅದರದೇ ಆದ ವೈಶಿಷ್ಟತೆಯಿರುತ್ತದೆ.ಇಂಪು ಇರುತ್ತದೆ. ಪೌರಾಣಿಕ ಕಥೆಗಳು ಅದರಲ್ಲಿರುತ್ತವೆ.ಸಾಂದರ್ಭಿಕ ಅರ್ಥಗಳಿರುತ್ತವೆ.ಜೀವನದ ಸಂದೇಶಗಳಿರುತ್ತವೆ. ದೇವರ ದೀಪವೊಂದು ತಮ್ಮ ಮನೆ ಬಾಗಿಲಿಗೆ ಬಂದ ಸಾರ್ಥಕ್ಯ ಮನೋಭಾವವನ್ನು ಈ ಹಾಡುಗಳು ಜನರ ಮನಸ್ಸಿನಲ್ಲಿ ಮೂಡಿಸುತ್ತವೆ.[ಈ ಹಾಡುಗಳ ಸಮಯೌಚಿತ್ಯ ಮತ್ತು ಭಾವಗಳನ್ನು ಮುಂದಿನ ಕಂತಿನಲ್ಲಿ ತಿಳಿಸಲಾಗುತ್ತದೆ].

ಹೀಗೆ ದೀಪ ಕೊಡಲು ಹೋದ ಮನೆಗಳಲ್ಲೆಲ್ಲ ಈ ತಂಡದವರಿಗೆ ದೀಪಾವಳಿ ಹಬ್ಬದ ಕಜ್ಜಾಯ,ಅಂದು ತಮ್ಮ ಮನೆಯ ದೇವರಿಗೆ ಒಡೆದ ತೆಂಗಿನಕಾಯಿ, ಹಣ್ಣು, ಹೂವಿನಪ್ರಸಾದ, ವೀಳ್ಯದೆಲೆ ಅಡಿಕೆ, ಕನಿಷ್ಠ ಒಂದು ಕೆಜಿ ಅಕ್ಕಿ, ದೀಪದ ಪಾತ್ರೆಗೆ [ಸುಮಾರು 30 ಸೆ.ಮಿ.ಅಗಲದ,ಅಂದಾಜು 3 ಲೀ ಎಣ್ಣೆ ಹಿಡಿಯುವ ಮಣ್ಣಿನ ಸುಟ್ಟಗಡಿಗೆಯನ್ತಹ ಪಾತ್ರೆ. ಇದಕ್ಕೆ ಹಣತೆ ಎನ್ನುತ್ತಾರೆ.ಇದನ್ನು ಅಂಥವರ ಮನೆಯಲ್ಲಿ ಸುಮಾರು ನೂರು ವರ್ಷಗಳಿಂದ, ಅಜ್ಜ,ಮುತ್ತಜ್ಜನ ಕಾಲದಿಂದ ಕಾಯ್ದಿರಿಸಿಕೊಂಡು ಬರಲಾಗಿದೆ].ಹಾಕಿ ಹೆಚ್ಚಾದದ್ದನ್ನು ಅವರ ಪ್ಲಾಸ್ತಿಕ್ಕ್ ಕ್ಯಾನಿಗೆ ಶೇಂಗ ಅಥವಾ ಎಳ್ಳೆಣ್ಣೆ, ಸಮಾಧಾನವೆನಿವಸ್ಟು ಹಣ ಹೀಗೆ... ಹೀಗೆ.... ಎಲ್ಲವನ್ನು ದೀಪ ತಂದವರ ಗೌರವಾರ್ಥ ಕೊಡಲಾಗುತ್ತದೆ. ಒಳ ಹೊಕ್ಕವರ ಮನೆಯಲ್ಲಿ ಹೊಸದಾಗಿ ಮದುವೆಯಾದ ಅಳಿಯ-ಮಗಳು ಬಂದಿದ್ದರೆ ಅವರು ನಿದ್ರೆಯಿಂದ ಎದ್ದು ಹೊರಗೆ ಬರುವ ಹಾಗೆ ಮತ್ತೆ ಮತ್ತೆ ಹಾಡುಗಳನ್ನು ಹಾಡಿ ಪೀಡಿಸಿ ಅವರನ್ನು ಸಂತೋಷಪಡಿಸಿ ಅವರಿಂದಲೂ ಖುಷಿಯಿಂದ ಹಣವನ್ನು ತಂಡದವರು ಕೀಳುತ್ತಾರೆ.


======ಮುಂದಿನ ವಿಷಯ ಆರನೆಯ ಕಂತಿನಲ್ಲಿ.======



ದಿನದ ಮಾತು :

ಹಬ್ಬದ ಹಾಡು : ಆರನೆಯ ಕಂತು.:

ದೀಪಾವಳಿಯ ದೇವರ ದೀಪದ ಕುರಿತು ಹಳ್ಳಿಯ ಜನರಲ್ಲಿ ಗೌರವ,ಪೂಜ್ಯ ಭಾವನೆ ಇದೆ.ಮಧ್ಯ ರಾತ್ರಿಯಾಗಿರಲಿ.ಮಕ್ಕಳು,ಮುದುಕರು,ಕಾಯಿಲೆಯವರ ನಿದ್ರೆಗೆ ಬಾಧಕವಾಗುತ್ತದೆಯೆಂದು ಅವರು ಭಾವಿಸುವುದಿಲ್ಲ.ರಾತ್ರಿ ಯಾವುದೋ ಸಮಯಕ್ಕೆ ದೀಪದ ತಂಡದವರು ಬರುತ್ತಾರೆ. ಮನೆಯ ಬಾಗಿಲಲ್ಲಿ ನಿಂತು ಅವರ ಪದ್ಧತಿಯಂತೆ " ದಿಮಿಸಾಲ್ ಹೊಡಿರಣ್ಣ ದಿಮಿಸಾಲ್ ಹೊಡಿರೊ " ಎನ್ನುತ್ತಾರೆ.ಅದಕ್ಕೆ ಎದುರಾಗಿ ಅವರ ಹಿಮ್ಮೇಳದವರು " ಹುಯ್ಯೋ " ಎಂದು ಕೂಗುತ್ತಾರೆ.ಇದನ್ನು ಕೇಳಿದ ಮನೆಯವರು ಎಚ್ಚರಾಗಿ ಬಾಗಿಲನ್ನು ತೆಗೆಯುತ್ತಾರೆ.ಆಗ ದೀಪವನ್ನು ಮುಂದಿಟ್ಟುಕೊಂಡು ತಂಡ ಮನೆಯೊಳಗೆ ಬರುತ್ತದೆ.[ಈ ಸಂದರ್ಭಕ್ಕೆ ಬೇರೆಬೇರೆ ಹಾಡುಗಳಿವೆ.ಅವುಗಳನ್ನು ಮುಂದಿನ ಕಂತಿನಲ್ಲಿ ವಿವರಿಸಲಾಗುತ್ತದೆ.] ದೀಪಕ್ಕೆ ಮನೆಯೊಡತಿ ಮಣೆಯನ್ನು ಕೊಡುತ್ತಾಳೆ.ಅದರ ಮೇಲೆಯೇ ದೀಪವನ್ನು ಇಡಬೇಕಾದದ್ದು ಕಡ್ಡಾಯ. ನಂತರ ಸಂಪ್ರದಾಯದಂತೆ ಯಾವಯಾವ ಹಾಡುಗಳನ್ನು ಹಾಡಬೇಕೊ ಅವುಗಳನ್ನು ಅನುಕ್ರಮವಾಗಿ ಹಾಡಲಾಗುತ್ತದೆ. ಈ ಅವಧಿಯಲ್ಲಿ ಮನೆಯವರು ಕೆಲವು ಕ್ರಮಗಳನ್ನು ಅನುಸರಿಸುವುದು ವಾಡಿಕೆ. ಮೊದಲನೆಯದಾಗಿ ದೀಪವನ್ನು ಮಣೆಯ ಮೇಲೆ ಇಟ್ಟಕೂಡಲೆ ಮನೆಯೊಡತಿ ತಮ್ಮ ಮನೆಯ ಹತ್ತಿಯ ಓರತಿಯಿಂದ [ಬತ್ತಿ ] ಆ ದೇವರ ದೀಪದಿಂದ ದೀಪವನ್ನು ತೆಗೆದುಕೊಂಡು ತಮ್ಮ ಮನೆಯ ದೇವರ ದೀಪಕ್ಕೆ ಸೇರಿಸುತ್ತಾಳೆ. ಮತ್ತೊಂದು ಓರತಿಯಿಂದ ತಮ್ಮ ಮನೆಯ ದೇವರ ದೀಪದಿಂದ ದೀಪವನ್ನು ತೆಗೆದುಕೊಂಡು ತಂಡದವರ ದೀಪಕ್ಕೆ ಸೇರಿಸುತ್ತಾಳೆ.ಇದೇ ರೀತಿ ಪ್ರತಿಯೊಬ್ಬರ ಮನೆಯಲ್ಲೂ ನಡೆಯಬೇಕೆಂಬುದು ನಿರೀಕ್ಷೆ. ಹೀಗೆ ಅದೊಂದು ಗ್ರಾಮಾಧಿದೇವತೆಯ ದೀಪವೊಂದೇ ಅಲ್ಲ.ಎಲ್ಲರ ಮನೆಯ ದೀಪವೂ ಸೇರಿ ಅದು ಶಕ್ತಿ ದೀಪವಾಗುತ್ತದೆ. ಎರಡನೆಯದಾಗಿ ಆ ದೀಪದ ಹಣೆತೆಗೆ ಶೇಂಗ ಅಥವಾ ಎಳ್ಳೆಣ್ಣೆಯನ್ನು ಸುರುವುತ್ತಾಳೆ.ಆ ದೀಪ ಸಣ್ಣದಾಗದಿರಲಿ ಎಂದು ಅದಕ್ಕೆ ಮತ್ತಷ್ಟು ಓರತಿಯನ್ನು ಸೇರಿಸುತ್ತಾಳೆ. ಮೂರನೆಯದಾಗಿ ಮತ್ತೊಂದು ಸಂಪ್ರದಾಯವಿದೆ.ಆ ದೀಪದ ಹಣತೆಯಲ್ಲಿರುವ ಎಣ್ಣೆಯಲ್ಲಿ ಮುಖವನ್ನು ನೋಡಿದರೆ ಸಕಲ ಸಂಕಷ್ಟಗಳೂ ನಿವಾರಣೆಯಾಗುತ್ತದೆಯೆನ್ದು ಜನರ ನಂಬಿಕೆ.ಆದ್ದರಿಂದ ಮನೆಯ ಜನೆರೆಲ್ಲರು ಆ ಎಣ್ಣೆಗೆ ನಾಣ್ಯದ ಕಾಣಿಕೆಯನ್ನು ಹಾಕಿ ತಮ್ಮ ಮುಖವನ್ನು ನೋಡಿ ದೀಪಕ್ಕೆ ಕೈ ಮುಗಿಯುತ್ತಾರೆ. ಇವಿಷ್ಟು ಕ್ರಮಗಳು ಆದ ನಂತರ ಸಾಮಾನ್ಯವಾಗಿ ಮನೆಯೊಡತಿ ಒಂದು ಮೊರದಲ್ಲಿ ತಮ್ಮ ಮನೆಯ ದೇವರಿಗೆ ಹಬ್ಬದಲ್ಲಿ ಒಡೆದ ತೆಂಗಿನಕಾಯಿ,ಹಣ್ಣು ಹೂವಿನ ಪ್ರಸಾದ,ಹಬ್ಬದ ಕಜ್ಜಾಯ,ವೀಳ್ಯದೆಲೆ ಅಡಿಕೆ,ಅಂದಾಜು ಒಂದು ಕೆಜಿ ಅಕ್ಕಿಮತ್ತು ಅವರಿಗೆ ಸಮಾಧಾನವೆನಿಸುವಷ್ಟು ಹಣ ಈ ಎಲ್ಲವನ್ನು ತಂದು ಅವರಿಗೆ ಕೊಡುತ್ತಾಳೆ. ಇಷ್ಟು ಹೊತ್ತಿಗೆ ತಂಡದವರ ಅನುಕ್ರಮವಾಗಿ ಹಾಡುವ ಹಾಡುಗಳನ್ನು ಪೂರೈಸಿರುತ್ತಾರೆ.ಆಸಕ್ತಿ ಇದ್ದವರು ಇನ್ನೂ ಹೆಚ್ಚಿನ ಬಗೆಬಗೆಯ ಹಾಡುಗಳನ್ನು ಹೇಳಿಸಿ ಕೇಳಿ ಖುಷಿ ಪಡೆಯುತ್ತಾರೆ.ನಂತರ ಕೊನೆಯಲ್ಲಿ ಮಂಗಳ ಪದ್ಯವನ್ನು ಹಾಡಿ ತಂಡದವರು ಮುಂದಿನ ಮನೆಗೆ ತೆರಳುತ್ತಾರೆ.

====== ಮುಂದಿನ ವಿಷಯ ಏಳನೆಯ ಕಂತಿನಲ್ಲಿ ======


ದಿನದ ಮಾತು :

ಹಬ್ಬದ ಹಾಡು : ಏಳನೆಯ ಕಂತು : [ಕೊನೆಯ ಕಂತು]

ದೀಪಾವಳಿಯ ಹಬ್ಬದ ಹಾಡಿನ ಸಂಪ್ರದಾಯದಲ್ಲಿ ಬೇರೆ ಬೇರೆ ನಿಯಮಗಳಂತೆ ಹಾಡುಗಳನ್ನು ಹಾಡಲಿಕ್ಕೂ ಕೆಲವು ನಿಯಮಗಳಿವೆ.ಒಟ್ಟಾರೆ ತಮಗೆ ಬಾಯಿಗೆ ಬಂದದ್ದನ್ನು ಉಗುಳುವುದಲ್ಲ.ಒಂದು ಮನೆಯ ಎದುರು ಹೋದ ಕೂಡಲೆ ಮೊದಲು ಬಾಗಿಲನ್ನು ತೆರೆಸುವ ಹಾಡನ್ನು ಹಾಡಬೇಕು. "ಆ ಮನೆ ಬಾಗಿಲು ಚಂದಾ ಈ ಮನೆ ಬಾಗಿಲು ಚಂದಾ ಬಾಗಿಲ ಮೇಲೊನ್ದೇನೈತೊ ಶಿವ ಶಿವಾ || ಬಾಗಿಲ ಮೇಲೇನೆನ್ದು ಬರೆದಾರೋ ಹಸಿರ ಪಾಲಣದ ನವಿಲಿಂಡು ಶಿವ ಶಿವಾ |.............ಹೀಗೆ ಅವರದ್ದೇ ಆದ ಜಾನಪದ ಧಾಟಿಯಲ್ಲಿ ತಾವು ಒಳ ಹೋಗುವ ಮನೆಯವರ ಬಾಗಿಲನ್ನು ಹೊಗಳಿ ಹಾಡುತ್ತಾರೆ. ಮನೆಯವರು ಬಾಗಿಲನ್ನು ತೆಗೆದ ನಂತರ ದೇವರ ದೀಪವನ್ನು ಮುಂದೆ ಮಾಡಿಕೊಂಡು ಒಳ ಹೋಗುವಾಗ "ಇಲ್ಲಿಗೆ ಹರ ಹರಾ ಇಲ್ಲಿಗೆ ಶಿವ ಶಿವಾ ಇಲ್ಲಿಗೆ ಸಂದೇ ಪದ ಮುಂದೇ | ಇಲ್ಲಿಗೆ ಸಂದೇ ಪದ ಮುಂದೆ ಕಾರಣ ಗ್ರಾಮದ ದೀಪಾ ನಡೆಮುಂದೆ ಗ್ರಾಮದ ದೀಪಾ ನಡೆ ಮುಂದೆ ||............. ಹೀಗೆ ದೀಪ ಮನೆಯೊಳಗೆ ಹೋಗುವ ಹಾಡನ್ನು ಹಾಡುತ್ತಾರೆ. ದೀಪ ಒಳಗೆ ಹೋದ ನಂತರ ಮನೆಯೊಡತಿ ಅದಕ್ಕೆ ಮಣೆ ಕೊಟ್ಟ ನಂತರ ಆ ದೀಪಕ್ಕೆ ಎಣ್ಣೆ ಎರಸುವ ಹಾಡನ್ನು ಹೇಳುತ್ತಾರೆ.ಇದಕ್ಕೆ ಅವರು ಎಣ್ಣೆ ಎರೆಯುವ ಹಾಡು ಎನ್ನುತ್ತಾರೆ.ಈ ಹಾಡಿನಲ್ಲಿ ಆ ಮನೆಯನ್ನು ಮತ್ತು ಮನೆಯೊಡತಿಯನ್ನು ಹೊಗಳುವ ಸಾಹಿತ್ಯವಿರುತ್ತದೆ. "ಸಾಕೆಂಬಾ ಹಾಲಿಗೆ ಬೇಕೆಮ್ಬಾ ಕಡೆಗೋಲೂ ವಜ್ರ ಮಾಣಿಕ್ಯದ ಉರಿನೇಣೂ ".ಅಂದರೆ ಆ ಮನೆಯಲ್ಲಿ ಸಾಕೆಂಬಷ್ಟು ಹಾಲು ಮೊಸರು ಇರಲಿ. ಅದನ್ನು ಕಡೆಯುವ ಕಡೆಗೋಲಿಗೆ ವಜ್ರ ಮತ್ತು ಮಾಣಿಕ್ಯದ ದಪ್ಪನೆಯ ಎಳೆಯುವ ದಾರ [ಉಗಿನೇಣು ] ವಿರಲಿ ಎಂದು ಹೊಗಳುತ್ತಾರೆ. 'ಓಲೆಯ ಬೆಳಕಲ್ಲಿ ಮಗನ ಜೋಗುಳ ಪಾಡಿ ನಿದ್ರೆ ಬರಿಸುವ ಒಡತಿ ಎಣ್ಣೆ ಎರಿ [ಹಣತೆಗೆ ಎಣ್ಣೆ ಹಾಕು ಅಥವಾ ಎರಸು ಎಂಬರ್ಥದಲ್ಲಿ ] ಬಾರೆ ' ......... ಹೀಗೆ ತಮ್ಮ ದೀಪದ ಹಣೆತೆಗೆ ಮನೆಯೊಡತಿ ಎಣ್ಣೆಯನ್ನು ಹಾಕುವಂತೆ ಪ್ರೇರೇಪಿಸುವ ಹಾಡನ್ನು ಹಾಡುತ್ತಾರೆ.ನಂತರದಲ್ಲಿ ಹಬ್ಬದ ಸಂದರ್ಭದ ಅತಿ ಮುಖ್ಯವಾದ ಹಾಡು. ಬಲೀನ್ದ್ರನನ್ನು ಸ್ತುತಿಸುವ,ಹೊಗಳುವ ಹಾಡು. 'ಬಲ್ಲೇಳು ಬಲೀನ್ದ್ರನು ರಾಜ ಬಂದನು ತನ್ನ ರಾಜ್ಯಕೆ ತಾ | ಬಲ್ಲೇಳು ಬಲೀಂದ್ರ ಬಲವಿದ್ದು ಬರುವಾಗ ಕಲ್ಲೊಡನೆ ಮಳೆಯೇ ಕರೆದಾವೋ |............. ಹೀಗೆ ಬಲಿ ಚಕ್ರವರ್ತಿಯನ್ನು ಕುರಿತು ಹಾಡುತ್ತಾರೆ. ಆದರೆ ಈ ಹಾಡನ್ನು ಅವರ ಮೂರು ದಿನಗಳ ಅವಧಿಯಲ್ಲಿ ಮೊದಲ ಎರಡು ದಿನ ಮಾತ್ರ ಹಾಡುತ್ತಾರೆ.ಮೂರನೆಯ ದಿನ ಅದು ಇಲ್ಲ. ಏಕೆಂದರೆ ಅವರು ತರುವ ಬಲೀನ್ದ್ರನನ್ನು ಹಬ್ಬದ ಮುನ್ನಾದಿನ ತಂದು ಹಬ್ಬದ ಮರುದಿನ ಬಿಟ್ಟುಬಿಡುತ್ತಾರೆ.ಮೂರನೆಯೆ ದಿನ ಬಲೀಂದ್ರ ಇರುವುದಿಲ್ಲ.ಆ ಕಾರಣದಿಂದ ಬಲೀನ್ದ್ರನ ಹಾಡನ್ನು ಮೂರನೆಯ ದಿನ ಹೇಳುವುದಿಲ್ಲ.ಇವಿಷ್ಟು ಒಂದು ಮನೆಯೊಳಗೆ ದೀಪ ಒಯ್ದಾಗ ಕಡ್ಡಾಯವಾಗಿ ಹಾಡಬೇಕಾದ ಹಾಡುಗಳು. ನಂತರದಲ್ಲಿ ಮನೆಯವರು ಬಯಸಿದರೆ ಇನ್ನು ಕೆಲವು ಐಚ್ಚಿಕ ಹಾಡುಗಳನ್ನು ಹಾಡುತ್ತಾರೆ. ತಮಗೆ ಸಲ್ಲಬೇಕಾದ ಗೌರವಗಳನ್ನು ವಸ್ತುಗಳು,ಹಣದ ರೂಪದಲ್ಲಿ ಮನೆಯವರು ಕೊಟ್ಟ ಮೇಲೆ ಅಂತಿಮವಾಗಿ ಮಂಗಳಪದ್ಯವನ್ನು ಹಾಡಿ ಅಲ್ಲಿಂದ ಮುಂದಿನ ಮನೆಗೆ ತೆರಳುತ್ತಾರೆ.ಮಂಗಳ ಪದ್ಯ ಈ ರೀತಿ ಇರುತ್ತದೆ."ಎತ್ತಿರಾರತಿಯಾ ಸಖಿಯರೇ ಎತ್ತಿರಾರತಿಯಾ |...............
ಥರ ಥರ ಮೂರುತಿ ಪವನ ಜ್ಯೋತಿಗೆ ಎತ್ತಿರಾರತಿಯಾ || " ಇವಿಷ್ಟು ಹಬ್ಬದ ಹಾಡುಗಳನ್ನು ಹಾಡುವಲ್ಲಿ ತಂಡದವರು ಅನುಸರಿಸುವ ನಿಯಮಗಳು.


[ ಈ ಹಾಡಿನ ಸಂಪ್ರದಾಯದ ಕುರಿತು ಮಾಹಿತಿ ಕೊಟ್ಟವರು.: ಶ್ರೀಯುತರುಗಳಾದ ಕ್ರಷ್ಣಪ್ಪನವರ ಮಗನಾದ ಹುಚ್ಚಪ್ಪ ಮತ್ತು ಅವನ ಮಕ್ಕಳು ಸುರೇಶ ,ಬಾಲಚಂದ್ರ [ಮಡಿವಾಳ ಸಮುದಾಯದವರು].ಪುರ್ಲೆಮಕ್ಕಿ.ಸಾಗರ ತಾಲೂಕು. ಹಾಗೂ ಮಾರ್ಯಪ್ಪ,ಮರಿಯಪ್ಪ,ದ್ಯಾವಪ್ಪ,[ಹಸಲರ ಸಮುದಾಯದವರು] ಬನದಕೊಪ್ಪ.ಸಾಗರ ತಾಲೂಕು.]

======ಇಲ್ಲಿಗೆ ಹಬ್ಬದ ಹಾಡಿನ ಸಂಪ್ರದಾಯದ ವಿವರಣೆ ಮುಗಿಯಿತು. ======

No comments:

Post a Comment

Note: only a member of this blog may post a comment.