Tuesday, 16 September 2014

ದಾಂಪತ್ಯ ಮುರಿಯುವಲ್ಲಿ ಇರಬಹುದಾದ ಮರೆ

- ಎಂ ಗಣಪತಿ , ಕಾನುಗೋಡು .
[ ಈ ಲೇಖನವನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು ]
ಒಂದು ದಾಂಪತ್ಯ ಮುರಿದು ಬೀಳಬೇಕಾದರೆ ಗಂಡನ ಪಾತ್ರ ಹೆಚ್ಚಿರಬಹುದು, ಹೆಂಡತಿಯ ಪಾತ್ರ ಹೆಚ್ಚಿರಬಹುದು ಇಲ್ಲವೇ ಗಂಡ ಮತ್ತು ಹೆಂಡತಿಯ ಸಮಪಾತ್ರವಿರಬಹುದು, ಗಂಡನ ತಂದೆ ತಾಯಿಯ ಪಾತ್ರ ಇರಬಹುದು, ಹೆಂಡತಿಯ ತಂದೆ ತಾಯಿಯ ಪಾತ್ರ ಇರಬಹುದು, ಗಂಡನ ಅಥವಾ ಹೆಂಡತಿಯ ಅಕ್ಕ ತಂಗಿಯರದ್ದಿರಬಹುದು ಅಥವಾ ಅಪರೂಪಕ್ಕೆ ನೆರೆಹೊರೆಯವರದ್ದೂ ಇರಬಹುದು. ಒಬ್ಬ ಗಂಡಿನ ಅಥವಾ ಹೆಣ್ಣಿನ ಉಭ್ರಮೆಗೆ ಕಾಲಾವಕಾಶವಿರುವುದು ಕೇವಲ ಹತ್ತೆಂಟು ವರುಷ ಅಷ್ಟೆ. ವ್ಯಕ್ತಿಯೊಬ್ಬ ಹೇಗೆ ಬಾಳಬೇಕೊ ಹಾಗೆ ಬಾಳದೆ ಇದ್ದರೆ ಕಾಲ ಮೀರಿದ ಮೇಲೆ ಬದುಕೇ ಶೂನ್ಯವಾಗುತ್ತದೆ. ಸಮಾಜವು ಅಂಥವರನ್ನು ನೋಡುವ ದೃಷ್ಟಿಯೇ ಬೇರೆ. ಆದ್ದರಿಂದ ಸಾಕಷ್ಟು ವಿವೇಚನೆ ದಂಪತಿಗಳಿಗೆ ಬದುಕಿನ ಪ್ರಾರಂಭದಲ್ಲಿ ಅಗತ್ಯ.
ಯಾವುದೇ ಬೆಸುಗೆ ಭದ್ರವಾಗಿ ಮುಂದುವರಿಯಬೇಕೆಂದರೆ ಆ ಕೂಟದಲ್ಲಿ ಬರುವ ವ್ಯಕ್ತಿಗಳು ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಮಾತಿನಲ್ಲಿ, ಹಠದಲ್ಲಿ ಗೆದ್ದೇತೀರಬೇಕೆನ್ನುವುದರ ಪರಿಣಾಮ ವಿರಸ,ವಿಘಟನೆ. . ದಾಂಪತ್ಯದ ವಿರಸ ಅದು ಕೇವಲ ಗಂಡ-ಹೆಂಡತಿಗೊಂದೆ ಅಲ್ಲ, ಮಕ್ಕಳನ್ನೊಳಗೊಂಡ ತಮ್ಮ ಕುಟುಂಬವೊಂದೇ ಅಲ್ಲ, ಗಂಡನ ಮನೆಯ ಕುಟುಂಬ ಮತ್ತು ಹೆಂಡತಿಯ ಮನೆಯ ಕುಟುಂಬಗಳನ್ನೂ ಬಲಿ ತೆಗೆದುಕೊಳ್ಳುತ್ತದೆ.
ಯಾರೂ ತನಗೆ ಅನಿವಾರ್ಯವಲ್ಲವೆಂದು ಗಂಡ ಮತ್ತು ಹೆಂಡತಿ ಪರಸ್ಪರ ಭಾವಿಸಿದರೆ ಪರಿಣಾಮ ವಿಘಟನೆ.ಈ ಭಾವನೆಯನ್ನು ತೊಡೆದು ಹಾಕದಿದ್ದರೆ ಯಾರನ್ನು ಬಿಟ್ಟು ಯಾರನ್ನು ಯಾರನ್ನು ಪುನಃ ಮದುವೆಯಾದರೂ ಅಲ್ಲಿಯೂ ಇದೇ ಪಾಡು. ಒಬ್ಬರಿಗೊಬ್ಬರು ಹೊಂದಿಕೊಂಡು ಸಾಗಿ ಅಹಮಿಕೆಯನ್ನು ಬಿಟ್ಟರೆ ಯಾರನ್ನು ಯಾರೂ ಬಿಡಬೇಕಾದದ್ದಿಲ್ಲ. ಒಟ್ಟಾರೆ ಇದೇ ಪರಿಕ್ರಮದಲ್ಲಿ ಗಂಡನಿಗೆ ವಯಸ್ಸು ಹೋಗುತ್ತದೆ. ಹೆಂಡತಿಗೆ ಮುಟ್ಟು ಸಾರಿಸಿ ಹೋಗುತ್ತದೆ. ಆಕೆಗೆ ವಯಸ್ಸು ಆಗುವುದೇ ಇಲ್ಲ. ಏಕೆಂದರೆ ಈಗಾಗಲೇ ಎರಡು ಜನರನ್ನು ಬಿಟ್ಟು ಬಂದವಳು ಅವಳು ಎಂದಾದರೆ ಇನ್ನೂ ನಾಲ್ಕಾರು ಗಂಡಸರು ಆಕೆಗೆ ಬಂದಾರು !. ಹೆಣ್ಣಿನ ವಯಸ್ಸನ್ನು ಕೇಳಬಾರದೆಂದು ಮೊದಲೇ ಗಾದೆ ಇದೆ. ಅಷ್ಟರಮಟ್ಟಿಗೆ ಹೆಣ್ಣಿನ ಬಗ್ಯೆ ನಮ್ಮ ಸಮಾಜದಲ್ಲಿ ವಿಶೇಷತೆಯ ಅಪಭ್ರಾಂತಿಯನ್ನು ಹುಟ್ಟಿಸಿಬಿಟ್ಟಿದ್ದಾರೆ.
ಈ ತೆರನಾದ ಬಿರುಕಿಗೆ ಕಾರಣ ಹಲವಾರು.
 1 . ತಮ್ಮ ಆದಾಯಕ್ಕಿಂತ ಮಿಗಿಲಾದ ಬಯಕೆಗಳು.
2 .ಮತ್ತೊಬ್ಬರ ಬದುಕಿಗೆ ತಮ್ಮ ಜೀವನವನ್ನು ಹೋಲಿಸಿಕೊಂಡು ಕರುಬಿಕೊಳ್ಳುವುದು.
3 . ತಮ್ಮ ಸ್ಥಿತಿ ಮತ್ತು ಮಿತಿಯನ್ನು [ಭಗವಂತ ಕರುಣಿಸಿದ ಪಾಡು] ಮೀರಿ ಆಕಾಶವನ್ನು ನೋಡುವುದು. [ಇದು ಒಂದನೇ ಅಂಶಕ್ಕಿಂತ ಸ್ವಲ್ಪ ಭಿನ್ನ.]
 4 .ಗಂಡ-ಹೆಂಡತಿಯರಿಂದ ಪರಸ್ಪರ ಅತಿಯಾದ ನಿರೀಕ್ಷೆ.
5 . ಸಣ್ಣ ಪುಟ್ಟ ಸಂಗತಿಗಳಿಗೂ ಮಾತಿಗೆ ಮಾತು, ಜಗಳ.
6 . ಸಂಸಾರದಲ್ಲಿನ ಸಣ್ಣ ಪುಟ್ಟ ವಿಚಾರಕ್ಕೂ ಪರಸ್ಪರ ವಿಪರೀತ ಅವಲಂಬನೆ. ದೇವಸ್ಥಾನಕ್ಕೆ ಹೋಗಿಬರಲು ಗಂಡನು ಜೊತೆಯಲ್ಲಿಯೇ ಇರಬೇಕೆಂದು ಹೆಂಡತಿ ಬಯಸುವುದು. ಸ್ನಾನಕ್ಕೆ ನೀರು ಕಾಯಿಸಿಕೊಡಲು ಹೆಂಡತಿಯೇ ಬೇಕು ಎಂದು ಗಂಡ ಬಯಸುವುದು ...ಹೀಗೆ.
7 .ಯಾರೂ ತನಗೆ ಮುಖ್ಯ ಅಲ್ಲ ಎಂದು ಪರಸ್ಪರ ಸ್ವಪ್ರತಿಷ್ಠೆ ಮಾಡುವುದು.
 8 .ಒಬ್ಬರು ಮತ್ತೊಬ್ಬರಿಗೆ ಪಾಠ ಕಲಿಸುತ್ತೇನೆಂದು ಪರಸ್ಪರ ದಿನಗಟ್ಟಲೆ ಮಾತನಾಡದೆ ಸುಮ್ಮನೆ ಇರುವುದು.
9 . ಪದೇ ಪದೇ ಒಬ್ಬರ ತಪ್ಪನ್ನು ಮತ್ತೊಬ್ಬರು ಎತ್ತಿಯಾಡಿಸುವುದು. ತಮ್ಮ ತಪ್ಪಿಗೆ ಯಾವುದಾದರೂ ಒಂದು ಸಬೂಬನ್ನು ಹೇಳಿ ಜಾರಿಕೊಳ್ಳುವುದು.
 10 .ಒಬ್ಬರ ಒಳ್ಳೆಯ ಪ್ರಯತ್ನವನ್ನು ಮತ್ತೊಬ್ಬರು ಮೆಚ್ಚಿಕೊಳ್ಳದೆ ಇರುವುದು. ತಾನು ಮಾಡಿದ ಪ್ರಯತ್ನ ಸಂಸಾರದ ಒಳಿತಿಗೆ ವಿರುದ್ಧವಾಗಿದ್ದನ್ನು ಗಮನಿಸಿ ಮತ್ತೊಬ್ಬರು ಮತ್ತೊಂದು ದಿನ ವಿರೋಧಿಸಿದರು ಎನ್ನುವ ಕಾರಣಕ್ಕಾಗಿಯೇ ಅವರ ಸೂಕ್ತ ಪ್ರಯತ್ನವನ್ನು ವ್ಯರ್ಥವಾಗಿ ಕಡೆಗಣಿಸುವುದು.
11 . ಯಾವಾವುದೋ ಮನಸ್ತಾಪದಿಂದ ಹಾಸಿಗೆಯಲ್ಲಿ ದೂರ ಇರುವುದು. ಪ್ರತಿಭಾರಿ ಹತ್ತಿರ ಬಂದಾಗ ಏನಾದರೊಂದು ನೆವ ಹೇಳಿ ಸಂಪರ್ಕದಿಂದ ತಪ್ಪಿಸಿಕೊಳ್ಳುವುದು.
 12 . ಗಂಡ - ಹೆಂಡತಿಯರ ನಡುವೆ ಚಾರಿತ್ರಿಕವಾಗಿ ಪರಸ್ಪರ ಸಂಶಯ ಪಡುವುದು. ಯಾರು ಮತ್ತೊಬ್ಬರೊಡನೆ ಸಲಿಗೆಯಿಂದ ವರ್ತಿಸಿದರೂ ಅವರೊಡನೆ ಇನ್ನೊಬ್ಬರು ಸಂದೇಹದಿಂದ ನೋಡುವುದು. ಆದರೆ ಈ ತೆರನಾದ ಸಂಶಯದ ಬಿರುಕು ಈಗಿನ ದಂಪತಿಗಳಲ್ಲಿ ಬಹಳ, ಬಹಳ ಅಪರೂಪ.
September 14

No comments:

Post a Comment