Wednesday 26 November 2014

ಮೂರ್ಛೆರೋಗ


ಪ್ರಸ್ತುತಿ : ಎಂ.ಗಣಪತಿ ಕಾನುಗೋಡು.
ಮೂರ್ಛೆರೋಗಕ್ಕೆ ವಿಶೇಷವಾದ ಗಮನ ಮತ್ತು ಚಿಕಿತ್ಸೆ ಬೇಕಾಗುತ್ತದೆ. ಇದಕ್ಕೆ ನರರೋಗ ತಜ್ಞರಿಂದ ಸಲಹೆಯನ್ನು ಪಡೆಯಬೇಕಾಗುತ್ತದೆ.
ಮೂರ್ಛೆರೋಗ ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ವ್ಯತ್ಯಾಸದಿಂದ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳಿಂದ ಕಾಣಿಸಿಕೊಳ್ಳುತ್ತದೆ.ಈ ದೋಷದಿಂದ ಮೆದುಳಿನ ಪ್ರಕ್ರಿಯೆಯಲ್ಲಿ ಬದಲಾವಣೆಯುಂಟಾಗಿ ಮೂರ್ಛೆ ಬರುತ್ತದೆ.
ಪ್ರಥಮ ಚಿಕಿತ್ಸೆ :
ಮೂರ್ಛೆರೋಗ ಬಂದ ವ್ಯಕ್ತಿಯನ್ನು ಬಾಗಿಸುವುದಾಗಲಿ, ಅವರ ತಕ್ಷಣದ ಚಲನೆಗಳನ್ನು ನಿಯಂತ್ರಿಸುವುದಾಗಲಿ, ಅವರ ಬಾಯಿಗೆ ಯಾವುದಾದರೂ ವಸ್ತುಗಳನ್ನು ಅಡ್ಡ ಇಡುವುದಾಗಲೀ ಮಾಡಕೂಡದು. ಅವರನ್ನು ಒಂದೆಡೆ ಮಲಗಿಸಿ ಚೆನ್ನಾಗಿ ಗಾಳಿ, ಬೆಳಕು ಅವನಿಗೆ ಸಿಗುವಂತೆ ನೋಡಿಕೊಳ್ಳಬೇಕು. ಆ ವ್ಯಕ್ತಿಯ ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶಾಂತತೆಯನ್ನು ಕಾಯ್ದುಕೊಳ್ಳಬೇಕು. ಯಾರೂ ಗಾಬರಿಯಾಗಿ ಆ ವ್ಯಕ್ತಿಯನ್ನು ಸುತ್ತುಗಟ್ಟಬಾರದು. ಅಪಾಯಕಾರಿ ವಸ್ತುಗಳನ್ನು ದೂರವಿರಿಸಿ ಧರಿಸಿದ ಬಟ್ಟೆಯನ್ನು ಸಡಿಲಿಸಬೇಕು. ಕೆಳಗೆ ಬೀದ್ದ ವ್ಯಕ್ತಿಯನ್ನು ಮಗ್ಗುಲಾಗಿ ಮಲಗಿಸಿ ತಲೆಯ ಕೆಳಗೆ ಮೆತ್ತನೆಯ ದಿಂಬನ್ನು ಇರಿಸಬೇಕು. ಸಾಧ್ಯವಾದಸ್ಟು ಮಟ್ಟಿಗೆ ಎಷ್ಟು ನಿಮಿಷ ಮೂರ್ಛೆ ಇತ್ತು ಎಂಬುದನ್ನು ಕರಾರುವಾಕ್ಕಾಗಿ ಗಮನಿಸಬೇಕು. ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಮೂರ್ಛೆ ತಾನಾಗಿಯೇ ನಿಲ್ಲುತ್ತದೆ. ಅಲ್ಲಿಯವರೆಗೆ ಸುತ್ತಲಿದ್ದವರು ಶಾಂತಿಯಿಂದ ಆ ವ್ಯಕ್ತಿಯನ್ನು ಮತ್ತು ಮೂರ್ಛೆ ನಿಲ್ಲುವ ಸಮಯವನ್ನು ಕಾಯಬೇಕು. ಆ ವ್ಯಕ್ತಿಗೆ ಪೂರ್ಣ ಪ್ರಜ್ಞೆ ಬರುವ ತನಕ ಕುಡಿಯಲು ಅಥವ ತಿನ್ನಲು ಏನನ್ನೂ ಕೊಡಬಾರದು. ಮೂರ್ಛೆ ಬಂದಾಗ ಚಿಟಿಕೆ ಹಾಕುವುದು,ಕೈಗೆ ಕಬ್ಬಿಣ ಹಿಡಿಸುವುದು, ಈರುಳ್ಳಿ ಅಥವ ಚಪ್ಪಲಿಯನ್ನು ಮೂಸಿಸುವುದು ಇತ್ಯಾದಿಗಳನ್ನು ಮಾಡಬಾರದು.ಇವುಗಳಿಂದ ಆ ವ್ಯಕ್ತಿಯು ಎಚ್ಚರಗೊಳ್ಳುತ್ತಾನೆಂಬುದು ಮೂಢನಂಬಿಕೆಯಷ್ಟೆ
ಐದು ನಿಮಿಷಗಳಲ್ಲಿ ಮೂರ್ಛೆ ನಿಲ್ಲದಿದ್ದಲ್ಲಿ ರೋಗಿಯನ್ನು ವ್ಯವಸ್ತಿತವಾಗಿ ವೈದ್ಯರ ಬಳಿ ಕೊಂಡೊಯ್ಯಬೇಕು. ಇದು ಅತಿ ಮುಖ್ಯ.
ಈ ರೋಗ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.ಮೂರ್ಛೆಯ ಲಕ್ಷಣಗಳನ್ನು ಗಮನಿಸಿ ಇದನ್ನು ಎರಡು ವಿಧಗಳನ್ನಾಗಿ ವಿಂಗಡಿಸಲಾಗಿದೆ.
1 .ಪೂರ್ಣ ಪ್ರಮಾಣದ ಮೂರ್ಛೆ :
ಮೆದುಳಿಗೆ ಪೂರ್ಣಪ್ರಮಾಣದಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ದೋಷದಿಂದ ಈ ರೀತಿ ಮೂರ್ಛೆ ಸಂಭವಿಸುತ್ತದೆ. ಇಂಥಹವರಲ್ಲಿ ರೋಗದ ಬಗ್ಯೆ ಯಾವುದೇ ತರಹದ ಮುನ್ಸೂಚನೆ ಕಾಣುವುದಿಲ್ಲ. ಈ ರೀತಿಯ ಪೂರ್ಣ ಪ್ರಮಾಣದ ಮೂರ್ಛೆರೋಗದಲ್ಲಿಯೂ ಸುಮಾರು ನಾಲ್ಕು ವಿಧಗಳಿವೆ. A ) .Toniclonic seizure . B ) .Absence seizure . C ) .Myoclonic seizure . D ) .Atonic seizure .
2 . ಪಾರ್ಶ್ವಿಕ ಮೂರ್ಛೆ :
ಮೆದುಳಿನ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ ವಿದ್ಯುತ್ ತರಂಗಗಳ ದೋಷ ಉಂಟಾಗುವುದರಿಂದ ಇದು ಸಂಭವಿಸುತ್ತದೆ. ಈ ತರಹದ ಮೂರ್ಛೆರೋಗ ಇರುವವರಿಗೆ ಮೂರ್ಛೆ ಬರುವ ಮೊದಲು ಮುನ್ಸೂಚನೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ಕೆಲವು ರೋಗಿಗಳಿಗೆ ಮುನ್ಸೂಚನೆಯ ಅರಿವಾಗದಿದ್ದರೂ ಅವರನ್ನು ಗಮನಿಸುತ್ತಿರುವವರು ಮುನ್ಸೂಚನೆಯನ್ನು ಗಮನಿಸಲು ಸಾಧ್ಯವಾಗುತ್ತದೆ. ಈ ತರಹದ ಪಾರ್ಶ್ವಿಕ ಮೂರ್ಛೆಯಲ್ಲಿ ಎರಡು ವಿಧಗಳಿವೆ.
A ) ಸರಳ ಪಾರ್ಶ್ವಿಕ ಮೂರ್ಛೆ. B ) ಮಿಶ್ರ ಪಾರ್ಶ್ವಿಕ ಮೂರ್ಛೆ.
ಮೂರ್ಛೆರೋಗವನ್ನು ಮತ್ತು ಅದರ ಬಗೆಯನ್ನು ಕೇವಲ ರೋಗ ಲಕ್ಷಣಗಳಿಂದ ಮಾತ್ರ ನಿರ್ಧರಿಸಲಾಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯಲ್ಲಿ ಮೂರ್ಛೆರೋಗದ ಲಕ್ಷಣ ಕಂಡಾಗ ಜೊತೆಯಲ್ಲಿದ್ದವರು ಗಾಬರಿಯಾಗದೆ ಆ ಸಂದರ್ಭದಲ್ಲಿ ಆವ್ಯಕ್ತಿಯಲ್ಲಿ ಕಂಡುಬರುವ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದನ್ನು ವೈದ್ಯರ ಹತ್ತಿರ ವಿವರಿಸಿದರೆ ಅದು ಮೂರ್ಛೆರೋಗವೋ, ಹೌದಾದರೆ ಅದು ಯಾವ ಬಗೆಯದು ಎಂದು ವೈದ್ಯರು ನಿರ್ಧರಿಸಲು ಸುಲಭವಾಗುತ್ತದೆ. ಇಂದಿನ ಮೊಬೈಲ್ ಯುಗದಲ್ಲಿ ಅ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಕಂಡುಬರುವ ಬದಲಾವಣೆಗಳನ್ನು ಚಿತ್ರೀಕರಿಸಿ ವೈದ್ಯರಿಗೆ ತೋರಿಸುವುದರಿಂದ ರೋಗದ ಖಚಿತತೆಯನ್ನು ನಿರ್ಣಯಿಸಲು ಸಹಾಯವಾಗುತ್ತದೆ.
ಮೂರ್ಛೆ ರೋಗಿಗಳಲ್ಲಿ ಕಾಯಿಲೆಗೆ ಕಾರಣವನ್ನು ಪತ್ತೆ ಹಚ್ಚಲು ಮತ್ತು ಆ ರೋಗ ಯಾವ ತರಹದ್ದೆಂದು ಗುರುತಿಸಲು ಕೆಲವು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಅವೆಂದರೆ 1 .ರಕ್ತ ಪರೀಕ್ಷೆ. 2 .ಇ. ಇ. ಜಿ. 3 . ಮೆದುಳಿನ ಸ್ಕ್ಯಾನಿಂಗ್ 4 . C . S . F Analysis .
ಮೂರ್ಛೆರೋಗಕ್ಕೆ ಸಂಬಂಧಿಸಿದ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಸೇವನೆ ಮುಖ್ಯವಾದ ಚಿಕಿತ್ಸೆ. ಔಷಧಗಳಿಂದ ರೋಗ ಹತೋಟಿಗೆ ಬಾರದವರಲ್ಲಿ [ ಇದು ಅತಿ ಕಡಿಮೆ ] ಅಂಥಹ ರೋಗಿಗಳಿಗೆ ಶಸ್ತ್ರಚಿಕಿತ್ಸೆಯಿಂದ ರೋಗವನ್ನು ಹತೋಟಿಗೆ ತರಬಹುದು.
ಈ ಕಾಯಿಲೆಯು ಯಾವುದೇ ವಯಸ್ಸಿನಲ್ಲಾದರೂ ಕಾಣಬಹುದು. ಇದು ಮಕ್ಕಳಲ್ಲಿ ಸ್ವಲ್ಪ ಹೆಚ್ಚು. ಹಾಗೆಂದು ಬಾಲಗ್ರಹದ ವಿಚಾರ ಬೇರೆ.ಅದನ್ನೂ ತಕ್ಕ ಚಿಕಿತ್ಸೆಯಿಂದ ಗುಣಮಾಡಬಹುದು. ವೃಧ್ಯಾಪ್ಯದಲ್ಲಿ ಈ ಕಾಯಿಲೆ ಸ್ವಲ್ಪ ಕಡಿಮೆ. ಇದು ಅಂಟುರೋಗವಲ್ಲ. ಈ ರೋಗವಿದ್ದವರು ಈಜುವುದು, ವಾಹನ ಚಾಲನೆ ಮುಂತಾದುವುದರಲ್ಲಿ ಜಾಗರೂಕರಾಗಿರಬೇಕು. ಕೆಲವು ವಿಧದ ಮೂರ್ಛೆರೋಗಗಳು ಆನುವಂಶಿಕವಾಗಿ ಬರಬಹುದು. ಆದರೆ ಹೆಚ್ಚಿನ ಪ್ರಸಂಗಗಳಲ್ಲಿ ಇದು ಅನುವಂಶಿಕವಲ್ಲ ಎಂಬುದು ಮುಖ್ಯ. ಈ ರೋಗದಿಂದ ಬಳಲುವ ಎಲ್ಲರೂ ಸಮಾಜದ ಎಲ್ಲರಂತೆ ಜೀವನ ನಡೆಸಬಹುದು. ಮುಖ್ಯವಾಗಿ ಹೇಳುವುದಾದರೆ ಈ ರೋಗವಿರುವ ಗರ್ಭಿಣಿ ಸ್ತ್ರೀಯರು, ಬಾಣಂತಿಯರು ಕೂಡ ವೈದ್ಯರ ಸಲಹೆಯಂತೆ ಮಾತ್ರೆ ಸೇವನೆ ಮಾಡುತ್ತ ಇದ್ದರೆ, ಆ ಸಂದರ್ಭದಲ್ಲಿ ಅನುಸರಿಸಬೇಕಾದ ವೈದ್ಯರ ಸಲಹೆಯನ್ನು ಪಾಲಿಸಿದರೆ ಎಲ್ಲರಂತೆ ಇರಬಹುದು
ಮೂರ್ಛೆರೋಗವಿದ್ದವರು ಪಾಲಿಸಬೇಕಾದ ಅಂಶಗಳು. :
+ ಈ ರೋಗವಿದ್ದವರು ಸಂಬಂಧಿಸಿದ ವೈದ್ಯರ ಸಲಹೆಯ ಪ್ರಕಾರವೇ ಔಷಧವನ್ನು ಸೇವಿಸುವುದರಲ್ಲಿ ತಪ್ಪಬಾರದು. + ಕ್ರಮ ತಪ್ಪದೆ ಪ್ರತಿನಿತ್ಯ ಔಷಧವನ್ನು ಸೇವಿಸಬೇಕು.
+ ವೈದ್ಯರ ಸೂಚನೆಯಿಲ್ಲದೆ ಔಷಧವನ್ನು ಮತ್ತು ಅದರ ಪ್ರಮಾಣವನ್ನು ಬಲಿಸಬಾರದು.
+ ಯಾವುದೇ ಕಾರಣಕ್ಕೂ ವೈದ್ಯರು ಸಲಹೆ ಮಾಡಿದ ಮಾತ್ರೆಗಳನ್ನು ದಿಢೀರನೆ ನಿಲ್ಲಿಸಬಾರದು. ಹೀಗೆ ಮಾಡಿದಲ್ಲಿ ಮೂರ್ಛೆರೋಗ ಮರುಕಳಿಸುವ ಸಾಧ್ಯತೆ ಇದೆ. ಅಲ್ಲದೆ ಹಾಗೆ ಬರುವ ರೋಗ ಇನ್ನೂ ತೀವ್ರ ಸ್ವರೂಪದ್ದಾಗಬಹುದು.
ತಾರೀಖು :25 - 11 - 2014
ಮಾಹಿತಿಯ ಕೃಪೆ : ಡಾ ||. ಎ. ಶಿವರಾಮಕೃಷ್ಣ . ನರರೋಗತಜ್ಞರು. ಶಿವಮೊಗ್ಗ. [ ಅವರ "ಮೆದುಳಿನ ಕಾಯಿಲೆಗಳು" -- ಪುಸ್ತಕದಿಂದ ]

No comments:

Post a Comment

Note: only a member of this blog may post a comment.