Monday 23 November 2015

@@@@ ನಕಲಿ ವಿಚಾರವಾದಿಗಳ ಹಾವಳಿ @@@@


                                                                                        ~~~~~~ ಎಂ. ಗಣಪತಿ ಕಾನುಗೋಡು.
ಇಂದು ತಮ್ಮನ್ನು ವಿಚಾರವಾದಿಗಳು, ಚಿಂತಕರು, ಪ್ರಗತಿಪರರು ಎಂದು ಕರೆದುಕೊಳ್ಳುತ್ತಿರುವ ಅನೇಕರನ್ನು ನಮ್ಮ ಸುತ್ತಮುತ್ತ ನಾವು ನೋಡುತ್ತಿದ್ದೇವೆ. ಚುಪುರು ಗಡ್ಡ, ಮೋಟು ತೋಳಿನ ಮೊಳಕಾಲು ಕೆಳನವರೆಗೂ ಹಾಸಿಕೊಂಡ ಖಾದಿ ಅಂಗಿಯನ್ನು ಹಾಕಿಕೊಂಡು ಇದೇ ವಿಚಾರವಾದಿಗಳ ಲಾಂಛನ ಎಂಬಂತೆ ಕೈ ಬೀಸಿಕೊಂಡು ಓಡಾಡುತ್ತಿರುತ್ತಾರೆ.
ಬಹಳಷ್ಟು ವಿಚಾರವಾದಿಗಳೆಂದು ಕರೆದುಕೊಳ್ಳುತ್ತಿರುವವರಿಗೆ ತಾವು ಏನು ಜನರ ಎದುರು ಪ್ರಚುರಪಡಿಸಲು, ಸಾರಲು ಹೊರಟಿರುತ್ತಾರೋ ಅಂಥಹ ವಿಚಾರಗಳು ಅವರ ಸ್ವಂತದ್ದಾಗಿರುವುದಿಲ್ಲ. ಗಟ್ಟಿ ಹೇಳಬೇಕೆಂದರೆ ಸ್ವಂತ ಬುದ್ಧಿಯೇ ವರಿಗೆ ಇರುವುದಿಲ್ಲ.
ಇಂಥಹ ಬುದ್ಧಿಜೀವಿಗಳಲ್ಲೂ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಇರುವಂತೆ ಬೇರೆ ಬೇರೆ ಪಂಥಗಳಿವೆ. ಆ ಪಂಥಕ್ಕೂ ಒಬ್ಬ ಮುಖಂಡ ಇರುತ್ತಾನೆ. ಆ ಮುಖಂಡ ರಾಜ್ಯ ಮಟ್ಟದವನು ಇರಬಹುದು, ರಾಷ್ಟ್ರ ಮಟ್ಟದವನು ಇರಬಹುದು, ಅಂತರಾಷ್ಟ್ರೀಯ ಮಟ್ಟದವನೂ ಇರಬಹುದು.ಅವನಿಗೆ ತನ್ನದೇ ಆದ ಒಂದು ಅಭಿಮಾನಿ ಶಿಷ್ಯಗಣ ಸಮೂಹವಿರುತ್ತದೆ. ಆ ಗಣಗಳೆಲ್ಲರೂ ತನ್ನ ಮುಖಂಡ ಏನನ್ನು ಹೇಳುತ್ತಾನೋ ಅದನ್ನೇ ಒಂದು ವಿಚಾರ, ಚಿಂತನೆ, ಪ್ರಗತಿಪರತೆ ಅವರವರ ಹರಹುವಿನಲ್ಲಿ ತುತ್ತೂರಿ ಊದುತ್ತಿರುತ್ತಾರೆ. ಅವರು ಸಾರುವ ಚಿಂತನೆಗಳಾವುವೂ ಅವರ ಸ್ವಂತದ್ದಾಗಿರುವುದಿಲ್ಲ.
ಒಂದು ನಿರ್ಧಿಷ್ಟ ಕ್ಷೇತ್ರದಲ್ಲಿ ಪರಿಣಿತಿ ಮತ್ತು ತರಬೇತಿಯನ್ನು ಹೊಂದಿರುವ ವ್ಯಕ್ತಿ ವಿಚಾರವಾದಿಯಾಗಿರಲು ಸಾಧ್ಯ -- ಅದೂ ಆ ನಿರ್ಧಿಷ್ಟ ಕ್ಷೇತ್ರಕ್ಕೆ ಅಷ್ಟೇ. ಬದುಕಿನ ವಾಸ್ತವತೆಯನ್ನು, ಸತ್ಯವನ್ನು ತಿಳಿಸುವಂತಾದ್ದು ವಿಚಾರ ಅಥವ ಚಿಂತನೆ. ಇಂಥಹ ವಾಸ್ತವತೆ ಮತ್ತು ಸತ್ಯ ವ್ಯಕ್ತಿ ವ್ಯಕ್ತಿಗಳ ಜೀವನದಲ್ಲಿ, ಬೇರೆ ಬೇರೆ ಸಮಾಜಗಳ ಸ್ಥಿತಿಯಲ್ಲಿ, ಕಾಲದ ಬದಲಾವಣೆಯಲ್ಲಿ ಬೇರೆ ಬೇರೆಯಾಗಿರುತ್ತದೆ.ಯಾರೋ ಒಬ್ಬ ಎಲ್ಲಿಯೋ ಹೇಳಿದ್ದು, ಯಾವಾಗಲೋ ಹೇಳಿದ್ದು ಸರ್ವಕಾಲಿಕ, ಸರ್ವದೇಶೀಯ ಸತ್ಯವಾಗಿರಲು ಸಾಧ್ಯವಿಲ್ಲ. ಒಂದು ವಿಚಾರ ಮಹತ್ವಪೂರ್ಣ ಎನಿಸಬೇಕಾದರೆ ಅದು ವಾಸ್ತವವನ್ನು ಕುರಿತು ಜನರಿಗಿರುವ ತಪ್ಪು ಕಲ್ಪನೆಯನ್ನು ಬದಲಾಯಿಸಬೇಕು.
ಒಬ್ಬ ವಿಚಾರವಾದಿಯ ಬದುಕಿನ ಉದ್ದೇಶ ಮಾನವ ಸ್ವಾತಂತ್ರ್ಯವನ್ನು ಮತ್ತು ಬದುಕಿನ ಜ್ಞಾನವನ್ನು ಎತ್ತಿ ಹಿಡಿಯುವುದು ಆಗಿರಬೇಕು. ಅದಕ್ಕಾಗಿ ಸಮಾಜದ ಹಾಗೂ ಅದರ ಸಂಸ್ಥೆಗಳ ಹೊರಗೆ ನಿಂತು ತನ್ನ ಕ್ರಿಯಾಶೀಲತೆಯಿಂದ ಜೀವನದ ವಾಸ್ತವತೆ ಮತ್ತು ಸತ್ಯವನ್ನು ಜನರಿಗೆ ಮನಗಾಣಿಸಿಕೊಡವುದಾಗಬೇಕು. ಸಮಾಜದ ಒಂದು ಭಾಗವಾಗಿದ್ದುಕೊಂಡೇ ತನ್ನ ವೈಚಾರಿಕ ತವಕ, ತಲ್ಲಣಗಳನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಲುಪಿಸುವುದು, ಅವರನ್ನು ಸದಾ ಎಚ್ಚರದಲ್ಲಿರುವಂತೆ ಮಾಡುವುದು ಆಗಿರಬೇಕು. ಆದರೆ ಬಹಳಷ್ಟು ವಿಚಾರವಾದಿಗಳೆಂದು ತಮ್ಮನ್ನು ಕರೆದುಕೊಳ್ಳುವವರು ಸಮಾಜದ ಒಂದು ಭಾಗವಾಗಿದ್ದುಕೊಂಡು ಈ ಕೆಲಸಗಳನ್ನು ಮಾಡಲು ಅಣಿಯಾಗಿರುವುದಿಲ್ಲ. ಸಮಾಜದಿಂದ ಹೊರಗೇ ಇರಲು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ತಾನು ಉಳಿದ ಎಲ್ಲರಿಗಿಂತ ಭಿನ್ನ ಎಂದು ಮೆರೆಯಲು ಯತ್ನಿಸುತ್ತಾರೆ.
ಮನುಷ್ಯನ ಬದುಕು ಭಾವನೆ ಮತ್ತು ಬುದ್ಧಿಯೆಂಬ ಎರಡು ಪ್ರಮುಖ ಶಕ್ತಿಗಳಿಂದ ಕೂಡಿರುತ್ತವೆ. ಭಾವನೆ ಕೇವಲ ಮನಸ್ಸಿಗೆ ಸಂಬಂಧಪಟ್ಟಿದ್ದು. ಬುದ್ಧಿ ಅಂತಃಶಕ್ತಿಗೆ ಸಂಬಂಧಪಟ್ಟಿದ್ದು. ಇವೆರಡೂ ಬೇರೆ ಬೇರೆ. ಆದರೆ ಇವೆರಡೂ ನಮ್ಮ ಒಂದೇ ಅನುಭವದಲ್ಲಿ ನಡೆದಾಡುವ ಎರಡು ಮುಖಗಳು. ನಮ್ಮ ಬದುಕಿನ ಅನುಭವದಲ್ಲಿ ಭಾವನೆ ಕೇವಲ ಸಂವೇದನಾಗಮ್ಯವಾಗಿರುತ್ತದೆ. ಆದರೆ ಬುದ್ಧಿಯು ವಿಚಾರಗಮ್ಯವಾಗಿರುತ್ತದೆ. ನಮ್ಮ ಬದುಕಿನ ಎಷ್ಟೋ ಘಟನೆಗಳನ್ನು ಬುದ್ಧಿಯ ವಿಚಾರದ ಅರದಲ್ಲಿ ತಿಕ್ಕಿ ನೋಡಲು ಸಾಧ್ಯವಾಗದು. ನಮಗೆ ತಂದೆ ಯಾರು ಎಂಬುದರ ಅನುಭವವನ್ನು ಡಿ.ಎನ್.ಎ. ಪರೀಕ್ಷೆಯಿಂದ ನಿರ್ಣಯಮಾಡಿಕೊಳ್ಳಲು ಹೊರಟರೆ ಅನರ್ಥವಾದೀತು. ತಾಯಿ ಹೇಳಿದ ಮಾತನ್ನು ಒಪ್ಪಿಕೊಂಡು ಆ ಭಾವನೆಯ ಸಂವೇದನೆಯಲ್ಲಿ ನಮ್ಮ ತಂದೆಯ ಮಕ್ಕಳಾಗಿ ನಾವು ಮುನ್ನಡೆಯುತ್ತೇವೆ. ಇಲ್ಲಿ ನಮ್ಮ ಬದುಕು ಭಾವನಾಪ್ರಧಾನ ಎಂಬುದಕ್ಕೆ ಪುಷ್ಠಿ ದೊರೆಯುತ್ತದೆ. ಇದನ್ನು ಅನುಮಾನ ಪ್ರಮಾಣ ಎಂದು ಕರೆಯಲಾಗುತ್ತದೆ. ಅದರಂತೆ ವಿಚಾರಗಮ್ಯವಾದ ಬುದ್ಧಿಯ ಪ್ರಾಧಾನ್ಯತೆಯೂ ಹೀಗೆಯೆ. ಬದುಕಿನ ಮತ್ತೊಂದು ಹಂತದಲ್ಲಿ ಯಾವುದೇ ವಿಷಯವನ್ನು ವಿಚಾರದ ಒರೆಗೆ ಹಚ್ಚಿಯೇ ಮುನ್ನಡೆಯಬೇಕಾಗುತ್ತದೆ. ಇಲ್ಲಿ ನಮ್ಮ ಬದುಕು ಬುದ್ಧಿಪ್ರಧಾನವಾದುದು ಎನ್ನುವುದು ಸುಳ್ಳಲ್ಲ. ಇದಕ್ಕೆ ಪ್ರತ್ಯಕ್ಷ ಪ್ರಮಾಣ ಎಂದು ಕರೆಯಲಾಗುತ್ತದೆ. ನಾವು ನಮ್ಮ ಜೀವನವನ್ನು ಅನುಭವಿಸುವಾಗಲೆಲ್ಲಾ ನಮ್ಮ ಭಾವನೆ ಮತ್ತು ಬುದ್ಧಿ ಈ ಎರಡೂ ಶಕ್ತಿಗಳು ಒಂದಲ್ಲ ಒಂದು ಪ್ರಮಾಣದಲ್ಲಿ ಸೇರಿಕೊಂಡೇ ಕೆಲಸ ಮಾಡುತ್ತಿರುತ್ತವೆ. ಇವೆರೆಡರಲ್ಲಿ ಯಾವುದಾದರೊಂದು  ಮತ್ತೊಂದನ್ನು ಹಿಮ್ಮೆಟ್ಟಿಸಿ ಮುನ್ನಡೆದಾಗ ನಮ್ಮ ಬದುಕಿನ ದಾರಿ ತಪ್ಪುತ್ತದೆ. ಬುದ್ಧಿ ಮತ್ತು ಭಾವನೆಗಳ ನಡುವೆ ಸಮತೂಕ ಏರ್ಪಟ್ಟಾಗ ನಮ್ಮ ಅಂತರಂಗದ ಸರಿಯಾದ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಆಗ ನಮ್ಮ ಯೋಚನೆಗಳು, ಮಾತುಗಳು ಮತ್ತು ಕೃತಿಗಳಲ್ಲಿ ಒಂದು ಹೃದ್ಯವಾದ ಸಾಮರಸ್ಯ ಕಂಡುಬರುತ್ತದೆ. ಮನುಷ್ಯನ ತ್ರಿಕರಣ ಸಾಂಗತ್ಯ ಎಂದರೆ ಇದೇ. ಅಂತಹ ಸಾಮರಸ್ಯವನ್ನು ಸಮಾಜದಲ್ಲಿ ಸ್ವಯಂ ಶಕ್ತಿಯಿಂದ ಹುಟ್ಟುಹಾಕುವವನು ಮಾತ್ರ ಒಬ್ಬ ವಿಚಾರವಾದಿ, ಪ್ರಗತಿಪರ, ಚಿಂತಕ ಆಗಲು ಸಾಧ್ಯ. ಇಂದು, ತಾವು ವಿಚಾರವಾದಿಗಳೆಂದು ಕೈಬೀಸುತ್ತಿರುವ ಎಷ್ಟು ಮಂದಿಯಲ್ಲಿ ಈ ಚರ್ಯೆ ಕಂಡು ಬರಲು ಸಾಧÀ್ಯ? ನಿಜವಾದ ವಿಚಾರವಾದಿ ತನ್ನ ಬದುಕನ್ನು ಐಷಾರಾಮಿಯಾಗಿ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಅವನಿಗೆ ತನ್ನ ವೈಯಕ್ತಿಕ ಜೀವನ ಪ್ರಧಾನವಾಗಿರುವುದಿಲ್ಲ. ಆತ ಸದಾ ಪರರ ಬಗ್ಗೆ, ಸಮಾಜದ ಬಗ್ಗೆ ತನ್ನ ಜೀವನವನ್ನು ಮುಡಿಪಾಗಿಡುತ್ತಾನೆ. ತನ್ನ ವೈಯಕ್ತಿಕ ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಾ ಇರುತ್ತಾನೆ. ಹಾಗೆಯೇ ತನ್ನ ಅಂತರಂಗವನ್ನು ಹದಗೊಳಿಸಿ, ಸಿದ್ಧಗೊಳಿಸಿ ವಾಸ್ತವತೆಯ ಅಭಿವ್ಯಕ್ತಿಯನ್ನು ಸಮಾಜಕ್ಕೆ ಕೊಡಲು ತನ್ನನ್ನು ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಕಾರಣ ಇಂತಹ ವಿಚಾರವಾದಿಯಲ್ಲಿ ತತ್ಕಾಲದ ಪ್ರಜ್ಞೆಗಿಂತ ಹೆಚ್ಚು ಭವಿಷ್ಯತ್ ಕಾಲದ ಪ್ರಜ್ಞೆಯು ತೀವ್ರವಾಗಿರುತ್ತದೆ. ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲದ ನಡುವೆ ಹಾಗೂ ನಮ್ಮ ಭಾವನಾ ಪ್ರಪಂಚ ಮತ್ತು ವೈಚಾರಿಕ ಪ್ರಪಂಚದ ನಡುವೆ ಒಂದು ಸಮತೂಕವನ್ನು ತರುವ ಹಪಾಹಪಿ ನಿಜವಾದ ವಿಚಾರವಾದಿಯ ಹೋರಾಟವಾಗಿರುತ್ತದೆ. ಇಂತಹ ನಿಜವಾದ ವಿಚಾರವಾದಿಗಳು, ಪ್ರಗತಿಪರರು ನಮ್ಮಲ್ಲಿ ತೀರಾ ಅಪರೂಪಕ್ಕೆ ಕಾಣಸಿಗುತ್ತಾರೆ ಅಷ್ಟೆ.

ನಮ್ಮ ಸುತ್ತಮುತ್ತಲು ಮೇಲರಿಮೆಯಿಂದ ತಿರುಗುತ್ತಿರುವ ವಿಚಾರವಾದಿಗಳು, ಪ್ರಗತಿಪರರು ಎಂದು ತಮ್ಮನ್ನು ಬಿಂಬಿಸಿಕೊಂಡು ತಿರುಗುತ್ತಿರುವ ಬುದ್ಧಿವಂತರಿಗೆ ಇವಾವುದರ ಅರಿವು ಇಲ್ಲ. ಅಂಥಹ ಬ್ರಾಂಡನ್ನು ಧರಿಸಿ ಹೊರಟವರಲ್ಲಿ ಬಹಳಷ್ಟು ಮಂದಿ ನಕಲಿ ವಿಚಾರವಾದಿಗಳು. ಅಸಲಿ ಅಲ್ಲ. ಜಗತ್ತಿನಲ್ಲಿ ಬೇರೆ ಯಾರಿಗೂ ಬುದ್ಧಿ ಇಲ್ಲ, ಇದ್ದದ್ದು ಇದ್ದರೆ ಅದು ತಮಗೊಬ್ಬರಿಗೆ ಮಾತ್ರ ಎಂದು ಅವರು ಭಾವಿಸಿರುತ್ತಾರೆ. ತಮ್ಮ ಸುತ್ತಲಿನವರನ್ನು ವಿಚಾರ, ಚಿಂತನೆ ಇಲ್ಲದವರೆಂದು ಅವರನ್ನು ಅತಿ ನಿಕೃಷ್ಟವಾಗಿ ಕಾಣುತ್ತಾರೆ.



ತಾರೀಖು : 10 - 11 - 2015

No comments:

Post a Comment

Note: only a member of this blog may post a comment.