Thursday 7 July 2016

ಅರರೆ .. ಇದ್ದವ ಒಬ್ಬ , ಅಷ್ಟೊಂದು ಕಬ್ಬಿನ ಹಾಲು.... ?



------ ಎಂ. ಗಣಪತಿ ಕಾನುಗೋಡು.
ಅದೊಂದು ಕಾಲವಿತ್ತು. ನಮ್ಮ ಊರಿನಲ್ಲಿ ತಿಂಗಳುದ್ದಕ್ಕೂ ಕಬ್ಬಿನಾಲೆಮನೆ. ಆಲೆಮನೆಯ ಕೆಲಸಕ್ಕಾಗಿ, ಸಂತೋಷಕ್ಕಾಗಿ ಊರಿನವರೆಲ್ಲಾ ಅಲ್ಲಿ ಪ್ರತಿನಿತ್ಯ ಹಗಲು ರಾತ್ರಿ ಸೇರಿಕೊಂಡಿರುತ್ತಿದ್ದರು. ಯಾರೇ ಬಂದರೂ ಕುಡಿಯುವಷ್ಟು ಕಬ್ಬಿನ ಹಾಲು. ಯಾರು ಎಷ್ಟು ಬೇಕಾದರೂ ಮನೆಗೆ ಒಯ್ಯಬಹುದಾಗಿತ್ತು. ಹಾಲನ್ನು ಎಷ್ಟು ದಾನ ಮಾಡಿದರೂ ಅದು ಹಾಗೆಯೇ ಒದಗಿಬರುತ್ತದೆ ಎನ್ನುವ ನಂಬಿಕೆ ಆಗಿನದು.
ನಮ್ಮೂರಿನ ಶಂಕರಜ್ಜ ಆಗ ವಯಸಿನಲ್ಲಿ 70 ದಾಟಿದವ. ಮನೆಯಲ್ಲಿ ಇರುವುದು ಅವ ಒಬ್ಬನೆ. ಆರ್ಥಿಕವಾಗಿ ಕಡುಬಡವ. ಆತನೂ ದಿನನಿತ್ಯ ಆಲೆಮನೆಗೆ ಬಂದು ಹಾಲು ಕುಡಿಯುತ್ತಿದ್ದ. ಮನೆಗೂ ಒಯ್ಯುತ್ತಿದ್ದ. ಎಷ್ಟು .... ?. ಪ್ರತಿದಿನ ಸುಮಾರು ಹದಿನೈದು ಲೀಟರಿನ ಒಂದು ಚೆರಿಗೆ ಕಬ್ಬಿನ ಹಾಲನ್ನು ತಪ್ಪದೆ ಒಯ್ಯುತ್ತಿದ್ದ. ಇದು ತಿಂಗಳುದ್ದಕ್ಕೂ ನಡೆದ ವಿಚಾರ.
' ಅರರೆ ... ಇದ್ದವ ಒಬ್ಬವ. ಇಲ್ಲಿಯೂ ಸಾಕಷ್ಟು ಕುಡಿಯುತ್ತಾನೆ, ಮನೆಗೂ ಪ್ರತಿದಿನ ಒಯ್ಯುತ್ತಾನೆ, ಅಷ್ಟೊಂದು ಹಾಲನ್ನು ಮನೆಯಲ್ಲಿಯೂ ಕುಡಿಯುತ್ತಾನೆಯೇ ? ' ಇದು ಊರಿನವರ ಕುತೂಹಲ ಮತ್ತು ಪ್ರಶ್ನೆಯಾಯಿತು.
ಸರಿ. ಊರಿನವರು ಗುಟ್ಟಾಗಿ ಒಂದು ತೀರ್ಮಾನಕ್ಕೆ ಬಂದರು. ಅದನ್ನು ಏನು ಮಾಡುತ್ತಾನೆ ಎಂದು ಪತ್ತೆ ಹಚ್ಚಬೇಕೆಂದು ನಿರ್ಣಯಿಸಿದರು. ಒಂದು ದಿನ ರಾತ್ರಿ ಶಂಕರಜ್ಜ ಚೆರಿಗೆ ಕಬ್ಬಿನ ಹಾಲನ್ನು ಮನೆಗೆ ಒಯ್ದ ಸ್ವಲ್ಪ ಹೊತ್ತಿನಲ್ಲಿಯೇ ಊರಿನ ಒಂದು ತಂಡ ಅವನ ಮನೆಗೆ ಹಠಾತ್ತನೆ ಭೇಟಿ ಕೊಟ್ಟಿತು. ಹೋಗಿ ನೋಡಿದರೆ ಅಲ್ಲಿ ಕಂಡದ್ದೇನು ?.
ಶಂಕರಜ್ಜ ಆ ಕಬ್ಬಿನ ಹಾಲನ್ನು ಬೆಲ್ಲ ಮಾಡಲಿಕ್ಕಾಗಿ ಒಲೆಯಮೇಲೆ ಇಟ್ಟು ಕಾಯಿಸುತ್ತಿದ್ದ. ಒಲೆಯ ಪಕ್ಕಕ್ಕೆ ಮುಕ್ಕಾಲು ಡಬ್ಬ ಬೆಲ್ಲ ಅಲ್ಲಿಯವರೆಗೆ ರೆಡಿಯಾಗಿತ್ತು.
ತಾರೀಖು : 25 - 6 - 2016 .

No comments:

Post a Comment

Note: only a member of this blog may post a comment.