Wednesday 27 July 2016

ಸ್ನೇಹ ಸಂವಾದದಲ್ಲಿ ಬರೆದ ದೇವನ ಲಕ್ಷಣಗಳೇನು? ' ಅಲ್ಲಾಹು 'ವಿನ ಕುರಿತು [Posted on 24 -7 - 2014] ಬರೆದ ಬರಹಕ್ಕೆ ಒಂದು ಪ್ರತಿಕ್ರಿಯೆ]

 ಸ್ನೇಹ ಸಂವಾದದಲ್ಲಿ ಬರೆದ ದೇವನ ಲಕ್ಷಣಗಳೇನು? ' ಅಲ್ಲಾಹು 'ವಿನ ಕುರಿತು [Posted on 24 -7 - 2014] ಬರೆದ ಬರಹಕ್ಕೆ ಒಂದು ಪ್ರತಿಕ್ರಿಯೆ] 

------ ಎಂ. ಗಣಪತಿ ಕಾನುಗೋಡು.


ಹಿಂದೂಧರ್ಮದ ಪ್ರಕಾರವೂ ಸೃಷ್ಟಿಕರ್ತನು ಒಬ್ಬನೇ. ಅವನೇ " ಪರಮೇಶ್ವರ.". ಪರಮ ಎಂದರೆ ಸುಪ್ರೀಂ. ಈಶ್ವರ ಎಂದರೆ ಸರ್ವಶಕ್ತ. [Super human power or atimaanusha Shakti]. ಯಾರು ನಶ್ವರ ಅಲ್ಲವೋ [ಅಳಿದು ಹೋಗುವುದಿಲ್ಲವೋ] ಅವನು ಈಶ್ವರ. ಅವನು "ನಿರಾಕಾರ ನಿರ್ಗುಣ ಪರಮೇಶ್ವರ". ಅಂದರೆ ಹಿಂದೂಧರ್ಮದ ದೇವರು ಯಾವುದೇ ಆಕಾರವನ್ನು ಹೊಂದಿರದವನು. ಅವನಿಗೆ ಮನುಷ್ಯರಿಗೆ ಇರುವಂಥಹ ಯಾವುದೇ ಗುಣಗಳಿಲ್ಲ. ಪರಮೇಶ್ವರನು ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ. [Omniscient , Omnipotent , Omnipresent ]. ಅವನು ಅನಾದಿ ಮತ್ತು ಅನಂತ್ಯ. ಅವನಿಗೆ ಹುಟ್ಟು ಮತ್ತು ಸಾವುಗಳಿಲ್ಲ. ಅವನನ್ನೇ ಇಸ್ಲಾಂ ಧರ್ಮದವರು " ಅಲ್ಲಾಹು " ಎಂದು ಕರೆಯುತ್ತಾರೆ. ಏಕೆಂದರೆ ಸ್ನೇಹ ಸಂವಾದದಲ್ಲಿ 'ನಮ್ಮ ಮಿತ್ರ' ರವರು ಬರೆದ "ದೇವನ ಗುಣಲಕ್ಷಣಗಳೇನು?" ಎಂಬ ವಿವರಣೆಯಲ್ಲಿ ಬರೆದ ಎಲ್ಲ ಲಕ್ಷಣಗಳೂ 'ಪರಮೇಶ್ವರ' ನದೇ ಆಗಿದೆ. ಅವರು ಅಂದುಕೊಂಡಂತೆ ಅದು 'ಅಲ್ಲಾಹು'ಗೆ ಮಾತ್ರ ಅಲ್ಲ. ಒಟ್ಟಾರೆ ದೇವರಿಗೆ ಇರುವ ಲಕ್ಷಣಗಳು ಅವು ಎಂಬುದನ್ನು ಅವರು ತಿಳಿದುಕೊಳ್ಳಬೇಕು. ವಿಶ್ವದಾದ್ಯಂತ ಇರುವ ದೇವರು ಒಬ್ಬನೇ. ದೇವನೊಬ್ಬ ನಾಮ ಹಲವು ಎನ್ನುವ ಮಾತನ್ನು ಅರ್ಥ ಮಾಡಿಕೊಂಡರೆ ಮತಾಂಧತೆ ಮಾಯವಾಗುತ್ತದೆ. ಇಂದಿನ ಅಧುನಿಕ ಯಾಂತ್ರಿಕ ಸಂಪರ್ಕಸಾಧನ ಹಲವು ಸಾವಿರ ವರ್ಷಗಳ ಹಿಂದೆಯೇ ಇದ್ದಿದ್ದರೆ ಬಹುಶ್ಯಃ ವಿಶ್ವದಾದ್ಯಂತ ಸಮಗ್ರವಾಗಿ ಒಂದೇ ಧರ್ಮವಿರುತ್ತಿತ್ತು. ಏಕೆಂದರೆ ಎಲ್ಲಾ ಧರ್ಮವು ಹೇಳುವುದು ಒಂದನ್ನೇ. ಭಾಷೆ ಮತ್ತು ವಿಷಯ ಪ್ರಸ್ತಾರಕ್ಕಾಗಿ ತೆಗೆದುಕೊಂಡನ್ಥಹ ಉದಾಹರಣೆಗಳು ಬೇರೆ ಬೇರೆ ಅಷ್ಟೇ. ಆಧುನಿಕ ಸಂಪರ್ಕವಿಲ್ಲದ ಕಾಲದಲ್ಲಿ ಆಯಾ ದೇಶದ ಮತ್ತು ಜನಾಂಗದ ಭಾಷೆ ಮತ್ತು ಸ್ಥಾನಿಕ ವಿಷಯಗಳನ್ನು ಸಂಪರ್ಕ ಮಾಧ್ಯಮವನ್ನಾಗಿ ಬಳಸಿಕೊಂಡದ್ದು ತಪ್ಪಲ್ಲ. ಇದಕ್ಕೆ ಹಿಂದೂ ಧರ್ಮವೂ ಹೊರತಲ್ಲ. ಅದಕ್ಕಾಗಿಯೆ ವಿಶ್ವದ ಯಾವುದೇ ಧರ್ಮವೂ ಹಿಂದೂ ಧರ್ಮಕ್ಕೆ ಹೊರತಲ್ಲ. 
ಸಾಮಾನ್ಯ ಮನುಷ್ಯನು ಅಶಕ್ತ. ಅವನಿಗೆ ಮೂಲ ಅರ್ಥದಲ್ಲಿ ದೇವರನ್ನು ಗೃಹಿಸುವ ಶಕ್ತಿ ಇಲ್ಲ. ಕಾರಣಕ್ಕಾಗಿ ಕಾಲಾನುಕ್ರಮದಲ್ಲಿ ಹಿಂದೂ ಧರ್ಮದ ಸಂತರು. ದಾರ್ಶನಿಕರು [ಇಸ್ಲಾಂ ಧರ್ಮದಲ್ಲಿ ಪ್ರವಾದಿಗಳಿದ್ದಂತೆ] ಸಾಮಾನ್ಯ ಜನರಿಗೆ ದೇವರನ್ನು ಸುಲಭವಾಗಿ ಕಂಡುಕೊಳ್ಳುವ ಮಾರ್ಗಗಳನ್ನು ತೋರಿಸಿದ್ದಾರೆ. ನಿರಾಕಾರ ಸ್ವರೂಪದಲ್ಲಿ ದೇವರನ್ನು ಕಾಣದ ಅರಿತುಕೊಳ್ಳುವ ಶಕ್ತಿಯಿಲ್ಲದವನಿಗೆ ಹಲವು ಆಕಾರಗಳ ಕಲ್ಪನೆಯಿಂದ ಅವನನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸಿದರು. ಅವನ ನಿರ್ಗುಣ ಸ್ವಭಾವದ ಸ್ವರೂಪದಲ್ಲಿ ದೇವರನ್ನು ಅರಿತುಕೊಳ್ಳಲಾರದವರಿಗೆ ಸರ್ವಗುಣಗಳ ಕಲ್ಪನೆಯಲ್ಲಿ ಅವನನ್ನು ಕಂಡುಕೊಳ್ಳುವ ಮಾರ್ಗವನ್ನು ತೋರಿಸಿದರು. ಕಾರಣಕ್ಕಾಗಿ ವಿಶ್ವದ ಅಂತಹ ಸಾಮಾನ್ಯ ಜನರಿಗಾಗಿ ಅವರ ಮಟ್ಟಕ್ಕೆ ಹೊಂದುವ ಹಾಗೆ ದೇವರ ರೂಪಗಳನ್ನು ಮತ್ತು ಕಥೆಗಳನ್ನು ಹೆಣೆದರು. ಆದರೆ ಅವೇ ದೇವರ ಸ್ವರೂಪ ಮತ್ತು ಗುಣಗಳಲ್ಲ. ಮೂಲಕ ನಿರಾಕಾರ, ನಿರ್ಗುಣ ಪರಮೇಶ್ವರನನ್ನು ಅವರ ಅಶಕ್ತ ಮನಸ್ಸಿಗೆ ನಾಟಿಸುವುದು ಇದರ ಮೂಲ ಉದ್ದೇಶ. ಘಟನೆಯಲ್ಲಿ ಹಲವು ಸಂತರು ಮತ್ತು ದಾರ್ಶನಿಕರು ಬೇರೆಬೇರೆ ಮಾರ್ಗಗಳನ್ನು ತೋರಿಸಿದರು. ಮಾರ್ಗಗಳು ಬೇರೆ ಬೇರೆಯೇ ವಿನಃ ಮೂಲ ಗುರಿ ಒಂದೇ. ಅದನ್ನೇ ಹಿಂದೂ ಧರ್ಮದಲ್ಲಿ ಬೇರೆ ಬೇರೆ ಪಂಗಡಗಳು ಇವೆಯೆಂದು ವಾಸ್ತವಿಕತೆಯ ಅರಿವಿಲ್ಲದ ಜನ ತಪ್ಪು ಗೃಹಿಸಿದ್ದಾರೆ. ಅಂತಹ ಪಂಗಡಗಳು, ಧರ್ಮದ ಉಪಶಾಖೆಗಳು ಇಸ್ಲಾಂ ಧರ್ಮವನ್ನೊಳಗೊಂಡು ವಿಶ್ವದ ಎಲ್ಲಾ ಧರ್ಮಗಳಲ್ಲೂ ಇವೆ. ಆದರೆ ದೇವರನ್ನು ಮೂಲ ಸ್ವರೂಪದಲ್ಲಿ ಕಂಡುಕೊಳ್ಳುವ ಸಾಮರ್ಥ್ಯವಿದ್ದವರು ಅವನನ್ನು ನಿರಾಕಾರ,ನಿರ್ಗುಣ ಪರಮೇಶ್ವರನನ್ನಾಗಿಯೇ ಗೃಹಿಸಿಕೊಳ್ಳುತ್ತಾರೆ. ಇದು ಹಿಂದೂ ಧರ್ಮದಲ್ಲಿ ಹಿಂದೆ,ಇಂದು ಮತ್ತು ಮುಂದೂ ಇರುವಂಥಹ ಪ್ರಕ್ರಿಯೆ. ಆದ್ದರಿಂದ ಹಿಂದೂಧರ್ಮ ವಿಶ್ವಧರ್ಮವಾಗಿದೆ. [ ವಿವರಣೆಯನ್ನು ಬರೆಯುವ ಹೊತ್ತಿಗೆ ಸ್ನೇಹ ಸಂವಾದದಲ್ಲಿ ಲೇಖನವು ಕಂಡುಬರಲಿಲ್ಲವಾದ್ದರಿಂದ ಇದನ್ನು ಇಲ್ಲಿ ಪ್ರಕಟಿಸಲಾಗಿದೆ]


No comments:

Post a Comment

Note: only a member of this blog may post a comment.