Monday 12 September 2016

###### ಒಗಟುಗಳು ######


~~~~ ಎಂ. ಗಣಪತಿ. ಕಾನುಗೋಡು.

ಒಗಟುಗಳು ಜನಪದ ಸಾಹಿತ್ಯದ ಒಂದು ಪ್ರಾಕಾರ. ಇದಕ್ಕೆ ಕನ್ನಡದಲ್ಲಿ ಒಂಟು, ಒಡಪು, ಒಡಗತೆ [ ಅಪಭೃಂಶಿತ ' ವರ್ಚಿಗತೆ '. ] ಎಂದೂ ಹೇಳುತ್ತಾರೆ. ಇದಕ್ಕೆ ಆಂಗ್ಲಭಾಷೆಯಲ್ಲಿ ' riddles ' ಎನ್ನುತ್ತಾರೆ. ಮೂಲತಃ ಒಗಟುಗಳನ್ನು ಕೇಳುವುದು ಮತ್ತು ಅವುಗಳನ್ನು ಬಿಡಿಸುವುದು ಮನೋರಂಜನೆಯ ಪ್ರಕ್ರಿಯೆಗಳಾಗಿದ್ದುವು.
ಸಾಮಾನ್ಯವಾಗಿ ಒಗಟುಗಳೆಂದರೆ ಒಂದು ವಿಷಯವನ್ನು ಒಳಗೊಂಡ ಜಡಕಿನ ಪ್ರಶ್ನೆಯನ್ನು ಕೇಳುವುದು ಮತ್ತು ಅದನ್ನು ಚುರುಕು ಬುದ್ಧಿಯಿಂದ ಬಿಡಿಸುವುದು. ಅದರ ಪಧಾನ ಗುಣ ಸಂಕ್ಷಿಪ್ತತೆ ಮತ್ತು ಆಕರ್ಷಣೆ. ಒಗಟಿನಲ್ಲಿ ಗೋಪ್ಯ ಮುಖ್ಯ ಅಂಶ. ಅದು ಮನುಷ್ಯನ ಬುದ್ಧಿಗೆ ಕೈ ಹಾಕುತ್ತದೆ. ಅವನ ಬುದ್ಧಿಮತ್ತೆಯನ್ನು [ I Q ] ಪರೀಕ್ಷೆ ಮಾಡುತ್ತದೆ. ಚುರುಕು ಬುದ್ಧಿಯುಳ್ಳವರು ಒಂದು ಒಗಟಿನ ಅಂತರಾರ್ಥವನ್ನು ಕೂಡಲೇ ಗ್ರಹಿಸುತ್ತಾರೆ.
ಒಗಟುಗಳು ಜನತೆಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಅವು ಹಾಸ್ಯಮಯತೆಗಳಿಂದ ಕೂಡಿರುವುದರಿಂದ ಮನೋರಂಜಕವಾಗಿರುತ್ತವೆ.ಹಲವು ಭಾರಿ ಸಾಹಿತ್ಯಕವಾಗಿರುತ್ತವೆ. ಗಣಿತ, ವಿಜ್ನಾನಗಳಿಂದ ಕೂಡಿ ಶೈಕ್ಷಣಿಕವಾಗಿರುತ್ತವೆ. ಮತಾಚಾರದವುಗಳೂ ಇರುತ್ತವೆ.
ಬೈಗುಳಗಳ ಒಗಟುಗಳು, ಅಶ್ಲೀಲ ಒಗಟುಗಳು, ಮದುವೆಯ ಒಗಟುಗಳು, ಹೆಸರಿನ ಒಗಟುಗಳು, ಆಟದ ಒಗಟುಗಳು ಎಂದು ಹಲವು ಥರದ ಒಗಟುಗಳು ಇವೆ.
ಒಗಟುಗಳು ಪದ್ಯರೂಪ, ಸಂಭಾಷಣೆಯ ರೂಪ, ಹಾಡಿನ ರೂಪ, ಕಥೆಯ ರೂಪ ಗಳಲ್ಲಿ ಇರುತ್ತವೆ. ಕೆಲವು ಒಗಟುಗಳು ಒಂದೇ ಸಾಲಿನಷ್ಟು ಚಿಕ್ಕವು. ಆರು ಸಾಲಿನ ದೊಡ್ಡವೂ ಇವೆ. ಹಾಡಿನ ರೂಪದಲ್ಲಿ ಇರುವವು ಹೆಚ್ಚಾಗಿ ತ್ರಿಪದಿಗಳು. ಒಗಟುಗಳು ಕಾವ್ಯಾತ್ಮಕ, ಆಸಕ್ತಿಯುತ ಮತ್ತು ಸಂಭ್ರಮಶೀಲವಾದವು. ಅವುಗಳಲ್ಲಿ ಎರಡು ಸದೃಶ ವಸ್ತುಗಳಿರುತ್ತವೆ. ಉಪಮಾನ ಮತ್ತು ಉಪಮೇಯ. ಒಗಟಿಗೆ ಕೊಡುವ ಹೋಲಿಕೆಗಳು ಸಾಮಾನ್ಯವಾಗಿ ಬಾಹ್ಯ ಪ್ರಪಂಚದ ವಸ್ತು ಚಿತ್ರಗಳೇ ಆಗಿರುತ್ತವೆ.
ಒಗಟುಗಳ ಸರಮಾಲೆಯೇ ಇರುತ್ತದೆ. ತಮಾಷೆಯೆಂದರೆ ಒಂದು ಒಗಟಿಗೆ ಉತ್ತರ ಹೇಳಿದರೆ ಆ ಉತ್ತರದಿಂದಲೇ ಪ್ರಾರಂಭವಾಗುವ ಮತ್ತೊಂದು ಒಗಟು ಇರುತ್ತದೆ. ಆ ಉತ್ತರದ ಒಗಟನ್ನೇ ಮೊದಲು ಒಗಟು ಕೇಳಿದವನಿಗೆ ಬಿಡಿಸಲು ಒಡ್ಡುವ ಪರಿಪಾಠವಿದೆ. ಹೀಗೆ ಈ ಮೋಜಿನಲ್ಲಿ ಒಂದು ರೀತಿಯ ಕೊಂಡಿ ಇರುವುದೂ ಇದೆ.
ಒಂದು ಕಾಲದಲ್ಲಿ ಅದು ಮನೋರಂಜನೆಯ ಮತ್ತು ಜ್ನಾನವವರ್ಧನೆಯ ಕೋರ್ಸ್ ಆಗಿತ್ತು. ಹಗಲೆಲ್ಲಾ ದುಡಿದು ರಾತ್ರಿ ಮಲಗಿದಾಗ ಹಾಸಿಗೆಯಿಂದಲೇ ಮಧ್ಯರಾತ್ರಿಯವರೆಗೂ ಆಗಿನ ಅವಿಭಕ್ತ ಕುಟುಂಬದಲ್ಲಿ ಸದಸ್ಯ ಸದಸ್ಯರ ನಡುವೆ ಒಗಟನ್ನು ಕೇಳುವ , ಬಿಡಿಸುವ ಪರಿಪಾಠವಿತ್ತು. ಕೆಲವು ಜನರಿಗೆ ಒಗಟುಗಳು ಕಂಠಸ್ಥ. ಜನ ಸೇರಿರುವ ಕಡೆ ಒಗಟುಗಳನ್ನು ಒಡ್ಡುವ ಜಾಣ್ಮೆ ಅವರಲ್ಲಿ ಇರುತ್ತದೆ.
ಕನ್ನಡ ಸಾಹಿತ್ಯದ ವಚನ ಸಾಹಿತ್ಯದಲ್ಲಿ ಬೆಡಗಿನ ವಚನಗಳು, ಸರ್ವಜ್ಞ ವಚನಗಳು, ಕಂತಿ ಹಂಪನ ಸಮಸ್ಯೆಗಳು, ಹರಿಹರನ ಮುಂಡಿಗೆಯ ಅಷ್ಟಕ, ಕನಕದಾಸರ ಮುಂಡಿಗೆಗಳು, ಮಹಾಭಾರತದ ಜಾತಕದ ಕಥೆಗಳು , ಯಕ್ಷಪ್ರಶ್ನೆ ಪ್ರಸಂಗ, ಅಲ್ಲದೆ ಅದರ ಇನ್ನು ಕೆಲವು ಪದ್ಯಗಳು [ ಉದಾ : ವೇದ ಪುರುಷನ ಸುತನ ಸುತನ ....... ವೀರ ನಾರಾಯಣ ] ಇವುಗಳಲ್ಲಿ ಒಗಟುಗಳನ್ನು ಕಾಣುತ್ತೇವೆ. ಕನಕದಾಸರ ಕೀರ್ತನೆಗಲ್ಲೂ ಕೆಲವೆಡೆ ಒಗಟುಗಳ ರಚನೆಗಳಿವೆ. ಜನಪದ ಸಾಹಿತ್ಯದಲ್ಲಂತೂ ಅದರದೇ ಸಂತೆ. ಸಂಸ್ಕೃತ ಗ್ರಂಥಗಳಲ್ಲಿ ಅಂದರೆ ವೇದ -- ಉಪನಿಷತ್ತುಗಳಲ್ಲಿ ಒಗಟಿನಂಥಹ ಮಾತುಗಳನ್ನು ಕಾಣಬಹುದು. ಸಂಸ್ಕೃತದಲ್ಲಿ ಇದಕ್ಕೆ ಪ್ರಹೇಲಿಕಾಗಳು ಎಂದಿದ್ದಾರೆ. ಬೋಜರಾಜ, ಕಾಳಿದಾಸರ ಕಥೆಗಳಲ್ಲಿ ಇರುವ ಒಗಟುಗಳು ಈ ಸಾಲಿಗೆ ಸೇರುತ್ತವೆ. ' ಬೋಜ ಪ್ರಬಂಧ ' ದಲ್ಲಿ ಕಾಳಿದಾಸನು ಪೂರ್ಣಗೊಳಿಸುವ ಒಗಟುಗಳನ್ನು ಕಾಣಬಹುದು.
ಒಗಟುಗಳು ಸಾರ್ವತ್ರಿಕವಾದದ್ದು. ಎಲ್ಲಾ ಪ್ರದೇಶದಲ್ಲಿ, ಎಲ್ಲಾ ಭಾಷೆಗಳಲ್ಲಿ ಎಲ್ಲಾ ಜನಾಂಗಗಳಲ್ಲಿ ಕಂಡುಬರುತ್ತವೆ. ಒಗಟನ್ನು ಒಡ್ಡುವುದು ಮತ್ತು ಬಿಡಿಸುವುದು ಇವೆಲ್ಲ ಒಂದು ಬಗೆಯ ಕ್ರೀಡೆ. ಒಗಟಿನ ಸ್ಪರ್ಧೆ ನಡೆದದ್ದೂ ಇದೆ. ಒಗಟಿನ ಜೂಜು ಒಂದು ಮೋಜಿನ ಪ್ರಸಂಗ.
ತಾರೀಖು : 6 - 9 - 2016

No comments:

Post a Comment

Note: only a member of this blog may post a comment.