Thursday 25 August 2016

###### ಬ್ರಹ್ಮ ######


~~~~ ಒಂದು ಮಾಹಿತಿ
..... ಎಂ. ಗಣಪತಿ. ಕಾನುಗೋಡು.
ಬ್ರಹ್ಮ ಎನ್ನುವ ಶಬ್ದಕ್ಕೆ ಮೂರು ಅರ್ಥಗಳಿವೆ.
1. ಪರಮಾತ್ಮ. ಸತ್ವ, ರಜ, ತಮಗಳ ಗುಣತ್ರಯ ರಹಿತವೂ ಉಪಾಧಿರಹಿತವೂ ಪರಿಚ್ಛೇದಶೂನ್ಯವೂ ಆಗಿ ಸಚ್ಚಿದಾನಂದ ಸ್ವರೂಪವೆನಿಸಿದ ಪರಾತ್ಪರ ಶಕ್ತಿಯೇ ಈ ಪರಮಾತ್ಮ. ಅದಕ್ಕಾಗಿಯೇ ಪರಮಾತ್ಮನಲ್ಲಿ ಲೀನರಾದವರು ಇದ್ದರೆ ಅವರಿಗೆ ಬ್ರಹ್ಮೀಭೂತರು, ಬ್ರಹ್ಮೈಕ್ಯ ಎಂದು ಹೆಸರಿಸಿರಬೇಕು.
2. ವೇದಗಳು ಎಂತಲೂ ಅರ್ಥವಿದೆ.
3. ಪ್ರಪಂಚದ ಸೃಷ್ಟಿಕರ್ತನಾದ ದೇವತೆ -- ಬ್ರಹ್ಮ. ವಿಷ್ಣುವಿನ ನಾಭಿಕಮಲದಿಂದ ಹುಟ್ಟಿದವ. ಬ್ರಹ್ಮನಿಗೆ ಹುಟ್ಟುವಾಗ ಒಂದೇ ಮುಖವಿತ್ತು. ಆಗ ಅವನು ಆ ಕಮಲ ಮಧ್ಯದಲ್ಲಿ ಕುಳಿತು ಶೂನ್ಯವಾಗಿರುವುದನ್ನು ಕಂಡು ನಾಲ್ಕು ದಿಕ್ಕುಗಳನ್ನೂ ನೋಡಲು ಹವಣಿಸಿದ. ಆಗ ಅವನಿಗೆ ಮತ್ತೆ ನಾಲ್ಕು ಮುಖಗಳು ಪ್ರಾಪ್ತಿಯಾಯಿತು. ಹೀಗೆ ಬ್ರಹ್ಮನಿಗೆ ಈ ಮತ್ತೊಂದು ಹಂತದಲ್ಲಿ ಐದು ಮುಖಗಳು ಇದ್ದುವು.
ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳಲ್ಲಿ ತಾನೇ ಸರ್ವಶ್ರೇಷ್ಠ ಎಂಬುದಾಗಿ ಬ್ರಹ್ಮ ಅಹಂಕಾರ ಮಾಡಿದ. ವೇದಗಳನ್ನು ನಿಂದಿಸಿ ಮಾತನಾಡಿದ. ಇದರಿಂದ ಕೋಪಗೊಂಡ ಶಿವನು ಅವನ ಒಂದು ತಲೆಯನ್ನು ಕತ್ತರಿಸಿದ. ಈ ಮೂರನೆಯ ಹಂತದಲ್ಲಿ ಇದ್ದದ್ದು ಅವನಿಗೆ ನಾಲ್ಕು ಮುಖಗಳು. ಆ ನಂತರವಷ್ಟೇ ಬ್ರಹ್ಮನಿಗೆ ಚತುರ್ಮುಖ ಎನ್ನುವ ಹೆಸರು ಬಂತು.
ಇಲ್ಲಿ ಇನ್ನೊಂದು ಅಭಿಪ್ರಾಯವೂ ಇದೆ. ಬ್ರಹ್ಮನ ಈ ಅಹಂಕಾರವನ್ನು ಸಹಿಸದೆ ಅದನ್ನು ಪ್ರಶ್ನಿಸಲು ಎದುರಿಗೆ ಬಂದಾಗ ಬ್ರಹ್ಮನು ಶಿವನನ್ನು ತಿರಸ್ಕರಿಸಿದ. ಆಗ ಶಿವನು ಸ್ತ್ರೀರೂಪದ ಭೈರವನನ್ನು ಸೃಷ್ಟಿಸಿ ಆತನಿಂದ ಅವನ ಐದನೆಯ ತಲೆಯನ್ನು ಕತ್ತರಿಸುವಂತೆ ಮಾಡಿದ ಎನ್ನುವುದು ಈ ಮತ್ತೊಂದು ಅಭಿಪ್ರಾಯ.
ಒಟ್ಟಾರೆ ಅವನ ಅಹಂಕಾರವನ್ನು ಸಹಿಸದ ಶಿವ ಅವನ ತಲೆಯನ್ನು ಕತ್ತರಿಸಿದ್ದಲ್ಲದೆ ಲೋಕದಲ್ಲಿ ದೇವಾಲಯ, ಪೂಜೆ, ರಥೋತ್ಸವಾದಿಗಳು ಇಲ್ಲದಿರುವಂತೆ ಬ್ರಹ್ಮನಿಗೆ ಶಾಪವನ್ನು ಕೊಟ್ಟ. ಅದಕ್ಕಾಗಿಯೇ ಎಲ್ಲಿಯೂ ಬ್ರಹ್ಮನ ದೇವಾಲಯ. ಅವನ ಪೂಜೆ ಇರುವುದು ಕಂಡುಬರುವುದಿಲ್ಲ.
ಬ್ರಹ್ಮ ಶಿವನಿಂದ ಯೋಗಮಾಯೆಯಲ್ಲಿ ಜನಿಸಿದವ ಎನ್ನುವ ಮಾತೂ ಇದೆ.
ಬ್ರಹ್ಮನಿಗೆ ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ಯ, ಪುಲಹ, ಕ್ರತು ಎಂಬುದಾಗಿ ಆರು ಮಾನಸಪುತ್ರರು ಎಂದು ಒಂದು ಕಡೆ ಹೇಳಲಾಗಿದೆ. ಇದಲ್ಲದೆ ಸನಂದನ, ಸನತ್ಕುಮಾರ, ಮತ್ತು ಸನತ್ಸುಜಾತರು ಕೂಡ ಬ್ರಹ್ಮನ ಮಾನಸಪುತ್ರರು ಎಂದು ಮತ್ತೊಂದು ಕಡೆ ಹೇಳಲಾಗಿದೆ. ಭೃಗು ಋಷಿಯೂ ಅವನಿಂದ ಉತ್ಪತ್ತಿಯಾದವನು ಎನ್ನಲಾಗಿದೆ.
ಬ್ರಹ್ಮನು ಅತ್ರಿಮುನಿಯನ್ನು ಮಾನಸಪುತ್ರನನ್ನಾಗಿ ಪಡೆದಿದ್ದಾನೆ ಎಂದು ಒಂದು ಕಡೆ ಹೇಳಿದರೆ ಮತ್ತೊಂದು ಕಡೆ ಅತ್ರಿಮುನಿಯ ಪತ್ನಿಯಾದ ಅನಸೂಯಾದೇವಿಯ ಹೊಟ್ಟೆಯಲ್ಲಿ ಬ್ರಹ್ಮನು ಚಂದ್ರನಾಗಿ ಹುಟ್ಟಿದ ಎನ್ನಲಾಗಿದೆ. ಅಂದರೆ ಮತ್ತೊಂದು ಹಂತದಲ್ಲಿ ಬ್ರಹ್ಮನೇ ಅತ್ರಿಯ ಮಗ ಎಂದಂತಾಯಿತು. ಆದರೆ ರೂಪ ಬೇರೆ ಎನ್ನುವುದು ಗ್ರಾಹ್ಯ. ಒಂದೇ ವ್ಯಕ್ತಿ ಅತ್ರಿಮುನಿಯ ತಂದೆಯಾಗಿ ಬ್ರಹ್ಮ. ಹಾಗೆಯೇ ಅತ್ರಿಮುನಿಯ ಮಗನಾಗಿ ಚಂದ್ರ.
ಬ್ರಹ್ಮನ ಮುಖದಿಂದ ದೇವತೆಗಳು, ವಕ್ಷದಿಂದ ಪಿತೃಗಳು, ಬೆನ್ನು ಭಾಗದಿಂದ ರಾಕ್ಷಸರು ಮತ್ತು ಸಾಧ್ಯರು, ಕೆಳಗಿನ ಇಂದ್ರಿಯದಿಂದ ಮಾನವರು ಜನಿಸಿದರು.
ಬ್ರಹ್ಮನು ತಾನೇ ಸೃಷ್ಟಿಸಿದ ಸರಸ್ವತಿಯನ್ನು ಕಾಮದಿಂದ ನೋಡಿದ.

No comments:

Post a Comment

Note: only a member of this blog may post a comment.